ಬಾಯಿತುಂಬಾ ಬೀಡ ಹಾಕಿಕೊಂಡಿದ್ದ ವ್ಯಕ್ತಿ ಮನೆ ಮುಂದೆ ಬಂದು ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದ. ನಾನು ಹರಿಯಾಣದಿಂದ ನಾಲ್ಕು ದಿನ ಮುಂಚೆಯಷ್ಟೇ ಒಂದು ಟ್ರಕ್ ನಲ್ಲಿ ಗ್ವಾಲಿಯರ್ ಪ್ಯಾಂಟ್ ಪೀಸ್ ಗಳನ್ನು ಬೆಂಗಳೂರಿನಲ್ಲಿ ಡೆಲಿವರಿ ಮಾಡಲು ಬಂದೆ . ಆದರೆ ಇಲ್ಲಿನ ಕಂಪನಿಯವರು ಅದನ್ನು ಸ್ವೀಕರಿಸಲಿಲ್ಲ. ಹಾಗಾಗಿ ನೀವೇ ಯಾವುದಾದರೂ ಒಂದು ಬೆಲೆಯನ್ನು ಹೇಳಿ ಕೆಲವು ಪ್ಯಾಂಟ್ ಪೀಸ್ ಗಳನ್ನು ಕೊಂಡುಕೊಳ್ಳಿ ಎಂದ.
ಏನೂ ಅರ್ಥವಾಗದವನಂತೆ ಅವನ ಮುಖವನ್ನೇ ನೋಡುತ್ತಿದ್ದೆ ಅವನು ಇಂಗ್ಲಿಷ್ನಲ್ಲಿ ನಿಮಗೆ ಹಿಂದಿ ಬರಲ್ವಾ ಅಂತ ಕೇಳಿದ. ನಾನು ಕನ್ನಡ ಕನ್ನಡ ಎಂಬುವ ಪದ ಬಿಟ್ಟು ಬೇರೆ ಮಾತನಾಡಲಿಲ್ಲ.
ಸ್ವಲ್ಪವಾದರೂ ಇಂಗ್ಲಿಷ್ ಭಾಷೆ ಅರ್ಥವಾಗುತ್ತಾ ಅಂತ ಇಂಗ್ಲಿಷ್ ನಲ್ಲಿ ಕೇಳಿದ . ನಾನು ಇಲ್ಲ ಎಂದು ತಲೆಯಾಡಿಸಿದೆ.
ಆಶ್ಚರ್ಯವೆಂಬಂತೆ ಕರ್ನಾಟಕದ ಮುಸ್ಲಿಮರು ಮಾತನಾಡುವ ಕನ್ನಡದಲ್ಲಿ ಮಾತನಾಡಲು ಶುರು ಮಾಡಿದ. ನಮ್ದುಕೆ ಒಂದು ಅಂಗಡಿ ಇತ್ತು. ಅದು ಈಗ ಮುಚ್ಚಿದೆ ಉಳಿದಿರೋ ಕೆಲವು ಪ್ಯಾಂಟ್ ಪೀಸ್ ಗಳನ್ನು ಕಮ್ಮಿ ಬೆಲೆಗೆ ನಾವು ಕೊಡ್ತಾಇದ್ದಾರೆ. ನಿಮ್ದು ಕೀ ಎಷ್ಟು ಹಣ ಹೇಳ್ತಿರೋ ಅಷ್ಟು ಹೇಳಿ ಅದನ್ನು ಕೊಂಡುಕೊಳ್ಳಿ ಅಂದ .
ನಾನಂದೆ, ಇನ್ನು ನಾಲ್ಕು ದಿನ ಆಯ್ತು ಅಂದೆ ಬೆಂಗಳೂರಿಗೆ ಬಂದು ಆಗಲೇ ಕನ್ನಡ ಕಲಿತು ಬಿಟ್ಟೆ. ಅವನು ಅದಕ್ಕೆ ನಮ್ದುಕೆ ಯಾವಾಗ ಹಾಗೆ ಹೇಳ್ತು ಎಂದ.
ನಮ್ದುಕೆ ಹಿಂದಿ ಬರ್ತದೆ. ನಿಮ್ದು ಹಿಂದಿ ಹೇಳಿದ್ದೆಲ್ಲಾ ನಮಗೆ ಅರ್ಥ ಆಯ್ತು, ಎಂದೆ.
ಆಸಾಮಿ ಮರುಮಾತನಾಡದೆ ಗಾಡಿ ಹತ್ತಿಕೊಂಡು ಹೊರಟೇಬಿಟ್ಟ.