ನಮ್ಮ ಎದುರು ಮನೆಯ ಆಂಟಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವರನ್ನು ಐಸಿಯು ವಾರ್ಡ್ ನಲ್ಲಿ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ 24 ಗಂಟೆಗಳು ರೋಗಿಯ ಕಡೆಯ ಒಬ್ಬರು ಇರಲೇಬೇಕೆಂದು ಆಸ್ಪತ್ರೆಯವರು ತಿಳಿಸಿದರು. ಹೀಗಾಗಿ ಬೆಳಗಿನ ಹೊತ್ತು ಆಸ್ಪತ್ರೆಯಲ್ಲಿ ಆಂಟಿಯವರ ಅಕ್ಕ, ಬಾವ ಮತ್ತು ಅವರ ಮಕ್ಕಳು ನೋಡಿಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ಉಳಿದುಕೊಳ್ಳುವ ಜವಾಬ್ದಾರಿಯನ್ನು ನಾನು ವಹಿಸಿಕೊಂಡು. ಇದಕ್ಕೆ ಕಾರಣ ನನಗೆ ಆಸ್ಪತ್ರೆಯಲ್ಲಿ ಬರುವಷ್ಟು ಚೆನ್ನಾಗಿ ಬೇರೆ ಎಲ್ಲೂ ನಿದ್ದೆ ಬರುವುದಿಲ್ಲ ಮತ್ತು ಬೆಳಗಿನ ಹೊತ್ತು ನಾನು ಬೇರೆ ಕೆಲಸಗಳಲ್ಲಿ ವ್ಯಸ್ತವಾಗಿರುತ್ತಿದ್ದೆ.
ರಾತ್ರಿ 9:30 ಕ್ಕೆ ನಾನು ಆಸ್ಪತ್ರೆಗೆ ಹೋದೆ. ಬೆಳಗಿನಿಂದ ಉಳಿದುಕೊಂಡಿದ್ದ ಆಂಟಿ ಅವರ ಭಾವ ಮತ್ತು ಅವರ ಮಗಳನ್ನು ಬಿಡುವು ಮಾಡಿದೆ. ಅಲ್ಲಿ ನಾವು ಬೆಳಗಿನ ಹೊತ್ತು ಕುಳಿತುಕೊಳ್ಳುವ ಜಾಗದಲ್ಲಿ ರಾತ್ರಿ 11 ಗಂಟೆಯ ನಂತರ ಫ್ಯಾನು ದೀಪ ಎಲ್ಲಾ ಆಫ್ ಮಾಡುತ್ತಾರೆ. ಹೀಗಾಗಿ ನಮಗಾಗಿ ಕಾಯ್ದಿರಿಸಿರುವ ನಾಲ್ಕನೇ ಮಹಡಿಯಲ್ಲಿರುವ ಹಾಸಿಗೆಗಳಲ್ಲಿ ನಾವು ಮಲಗಬೇಕು. ಆದರೆ ಆ ಹಾಸಿಗೆಗಳಲ್ಲಿ ಆಗಲೇ ಜನರು ಮಲಗಿದ್ದರಿಂದ, ನಾನು ಬೇರೆ ಜಾಗವನ್ನು ನೋಡಿಕೊಳ್ಳಬೇಕಾಗಿತ್ತು. ಮೊದಲನೇ ಮಹಡಿಯಲ್ಲಿ ದೊರಕಿದ ಜಾಗದಲ್ಲಿ ಸ್ವಲ್ಪ ಹೊತ್ತು ಆಧ್ಯಾತ್ಮದ ಪುಸ್ತಕವನ್ನು ಓದಿಕೊಂಡು ನಂತರ ಮಲಗಿಕೊಂಡೆ.
ಬೆಳಗ್ಗೆ ನಾಲ್ಕು ಗಂಟೆಯ ಹೊತ್ತಿಗೆ ಯಾರೋ ಮಿಲಿಟರಿಯವರು ನನ್ನ ಪಕ್ಕ ಮಾರ್ಚ್ ಫಾಸ್ಟ್ ಮಾಡುತ್ತಿರುವಂತೆ ಅನಿಸಿತು. ಸ್ವಲ್ಪ ಹೊತ್ತಿನ ನಂತರ "ಅಮ್ಮ ಆಗಲ್ಲ ನನ್ನನ್ನು ಬಿಟ್ಟು ಬಿಡಿ ಅಂತ ಯಾರೋ ಕಿರುಚುವ ರೋಧನೆ" ಮತ್ತು "ನೀನು ಹೀಗೆ ಮಾಡಿದರೆ ಕೈಕಾಲು ಕಟ್ಟಿ ಬಿಡುತ್ತೇವೆ ಕಾಲು ಅಗಲಮಾಡು ಎಂದು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿಲ್ಲವಾ " ಎಂಬ ಮಾತುಗಳು ಕೇಳಿಸುತ್ತಿತ್ತು.
ತಕ್ಷಣ ನಿದ್ದೆಯಿಂದ ಎದ್ದು ಕುಳಿತೆ. ಆಗಲೇ ನನಗೆ ತಿಳಿದದ್ದು ನಾನು ರಾತ್ರಿ ಮಲಗಲು ಆಯ್ಕೆಮಾಡಿಕೊಂಡ ಜಾಗ ಆಸ್ಪತ್ರೆಯ ಲೇಬರ್ ವಾರ್ಡಿನ ಪಕ್ಕದಲ್ಲೇ ಇರುವುದು ಅಂತ.
ಅಜ್ಜಿ ಆಗುತ್ತೇನೆ ಎಂಬ ಖುಷಿಯಲ್ಲಿ ಇದ್ದಂತಹ ಹುಡುಗಿಯ ತಾಯಿ ಮತ್ತು ಮುತ್ತಜ್ಜಿ ಆಗುತ್ತೇನೆಂಬ ಖುಷಿಯಾಗಿದ್ದ ಹುಡುಗಿಯ ಅಜ್ಜಿ ಅವರ ಆ ದಿನಗಳ ಪ್ರಸೂತಿ ಕಾಲದ ದಿನಗಳನ್ನು ನೆನಪಿಸಿಕೊಳ್ಳುತ್ತಾ ವಿಷಯಗಳನ್ನು ಮೆಲಕು ಹಾಕುತ್ತಾ ಕುಳಿತಿದ್ದರು.
ಸದ್ಯದಲ್ಲೇ ಅಪ್ಪನೆಂದು ಎನಿಸಿಕೊಳ್ಳುವ ಹುಡುಗ ಸುಮಾರು 20 ಅಡಿ ಒಳಾಂಗಣದಲ್ಲಿ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆ ವಾಕಿಂಗ್ ಮಾಡುತ್ತಿದ್ದ. ಅದನ್ನೇ ನಾನು ನಿದ್ದೆಯಲ್ಲಿ ಮಾರ್ಚ್ ಫಾಸ್ಟ್ ಅಂತೆ ಭಾವಿಸಿದ್ದು.
ನಾನು ಆ ಮಹಾತಾಯಿಗೆ ಕಡಿಮೆ ನೋವು ಕೊಡು ದೇವರೇ ಎಂದು ಪ್ರಾರ್ಥಿಸುತ್ತಾ ಧ್ಯಾನದಲ್ಲಿ ಕುಳಿತೆ.
"ಡಾಕ್ಟರ್ ನನಗೆ ಆಗುತ್ತಿಲ್ಲ ಸಿಜರಿಯನ್ ಮಾಡಿಬಿಡಿ"' ಎಂದು ಹುಡುಗಿ ಕಿರುಚಿದರೆ, "ನಾನು ಹಾಗೆ ಮಾಡುವುದಿಲ್ಲ ನಾರ್ಮಲ್ ಡೆಲಿವರಿ ಆಗಬೇಕು" ಎಂದು ಅದೇ ಮೇರು ದ್ವನಿಯಲ್ಲಿ ಡಾಕ್ಟರ್ ಕಿರುಚುತ್ತಿದ್ದರು. ತಾಯಿ ಮತ್ತು ಅಜ್ಜಿಯ ಕಣ್ಗಳಲ್ಲಿ ಹೆಣ್ಣು ಮಗಳ ರೋಧನೆ ಕೇಳಿಸಿಕೊಂಡು ಧಾರಾಕಾರವಾಗಿ ಕಣ್ಣೀರು ಹರಿದಿತ್ತು .
ಸಮಾಧಾನವಾಗಿ ಇರಿ ಎಂದು ನಾನು ಅವರಿಗೆ ತಿಳಿಸಿ ಅವರೊಂದಿಗೆ ಮಾತಿಗೆ ಕುಳಿತೆ.
ಹುಡುಗಿಯ ರೋಧನೆ ಸ್ವರ್ಗಕ್ಕೆ ಕೇಳಿ ಮತ್ತು ಹುಡುಗನ 35 ನಿಮಿಷಗಳ 20 ಅಡಿಯ ಒಳಾಂಗಣ ಸುತ್ತಾಟ ಎರಡು ಕಿಲೋಮೀಟರ್ ದಾಟಿದಮೇಲೆ ಬೆಳಗಿನ ಜಾವ 04:35 ಕ್ಕೆ ಒಳಗಿನಿಂದ ಉಂಗಾ ಎಂದು ಅಳುತ್ತಿರುವ ಮಗುವಿನ ಅಳು ಕೇಳಿತು.
ಅಲ್ಲಿದ್ದ ಎಲ್ಲರ ಕಣ್ಣಲ್ಲೂ ಆನಂದಬಾಷ್ಪ. ನಾನು ಅದಕ್ಕೆ ಹೊರತಾಗಿರಲಿಲ್ಲ ತಕ್ಷಣ ನನಗೆ ಜ್ಞಾಪಕ ಬಂದಿದ್ದು ನನ್ನ ತಾಯಿ. ಅವಳು ಎಷ್ಟು ಕಷ್ಟಪಟ್ಟಿರ ಬೇಕಲ್ಲವೇ ಎಂದು ಮನಸ್ಸಿನಲ್ಲೇ ಅಂದುಕೊಂಡೆ.
ಒಳಗಿನಿಂದ ಆಸ್ಪತ್ರೆಯ ಆಯ ಆಚೆಕಡೆ ಬಂದು ಗಂಡು ಮಗುವಾಗಿದೆ, ಆದರೆ ಡಾಕ್ಟರ್ ಹೇಳುವ ತನಕ ಸುಮ್ಮನಿರಿ ನಾನು ಹೇಳಿದನೆಂದು ಹೇಳಬೇಡಿ ಎಂದು ಹೇಳಿದರು.
ಸ್ವಲ್ಪ ಸಮಯದ ನಂತರ ಡಾಕ್ಟರ್ ಆಚೆಬಂದು ಮಗುವಿನ ಅಪ್ಪನಿಗೆ ಶುಭಾಶಯಗಳನ್ನು ತಿಳಿಸಿ ಗಂಡು ಮಗು ಆಗಿದೆ ಎಂದು ಹೇಳಿದರು. ಮೊಬೈಲ್ನಲ್ಲಿ ಇಂದಿನ ಪಂಚಾಂಗ ನೋಡಿ ನಾನು ಮಗು ಹುಟ್ಟಿರುವುದು ಪುನರ್ವಸು ನಕ್ಷತ್ರ ಅದು ಶ್ರೀರಾಮನ ನಕ್ಷತ್ರ ಎಂದು ಅದರ ಮುತ್ತಜ್ಜಿ ಗೆ ತಿಳಿಸಿದೆ.
ಸುಮಾರು ಆರು ಗಂಟೆಗೆ ಮಗುವನ್ನು ಎಲ್ಲರಿಗೂ ತೋರಿಸಲು ಹೊರಗೆ ತಂದರು. ಒಳ್ಳೆ ಟೊಮೇಟೊ ಹಣ್ಣಿನಂತೆ ಇದ್ದ ಮಗುವನ್ನು ಅದರ ಮುತ್ತಜ್ಜಿ ಎತ್ತಿಕೊಂಡು ನನ್ನ ಕಡೆಗೆ ಬಂದು ನನಗೆ ತೋರಿಸಿದರು. ಆಗ ಹುಟ್ಟಿದ ಮಗುವನ್ನು ನೋಡಿದಾಗ ಏನಾದರೂ ಹಣ ಕೊಡಬೇಕೆಂಬುದು ನಮ್ಮ ಪದ್ಧತಿ ದಯವಿಟ್ಟು ನೂರು ರೂಪಾಯಿ ತೆಗೆದುಕೊಳ್ಳಿ ಎಂದು ಮುತ್ತಜ್ಜಿಯ ಕೈಯಲ್ಲಿ ನೂರು ರೂಪಾಯಿ ಇಟ್ಟು ಎಲ್ಲಾ ಒಳ್ಳೆಯದಾಗಲಿ ಎಂದು ಹೇಳಿದೆ.
ಕಾತರದಿಂದ ಆಸ್ಪತ್ರೆಯಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಳ್ಳಲು ಕುಳಿತಿರುವ ಆಂಟಿಯ ಅಕ್ಕನ ಮಗಳಿಗೆ ಎಲ್ಲಾ ವಿಷಯ ವಿವರವಾಗಿ ವಾಟ್ಸಪ್ ನಲ್ಲಿ ತಿಳಿಸಿದೆ. ಆದರೆ ಅದರಲ್ಲಿ ಐಸಿಯು ನಲ್ಲಿ ಇದ್ದ ಆಂಟಿಯ ವಿಷಯ ಇರಲಿಲ್ಲ.
ವಾಟ್ಸಪ್ ಸಂದೇಶ ಹೀಗಿತ್ತು
ಅಪ್ಪನ 2 ಕಿಲೋಮೀಟರ್ ನಡೆ ಮುಗಿದಿದೆ
ಅಮ್ಮನ ರೋಧನೆ ಸ್ವರ್ಗಕ್ಕೆ ಕೇಳಿಸಿದೆ
ಬೆಳಗ್ಗೆ 04:35ಕ್ಕೆ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಹುಟ್ಟಿದೆ
ಮತ್ತೊಂದು ತಾಯಿಯಿಂದ ಇನ್ನೊಂದು ಮಗು ಬೆಳಗ್ಗೆ 7.30ಕ್ಕೆಬರಲಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ.