ಗುರುರಾಜ
ಶಾಸ್ತ್ರಿ
ಎಲ್ಲಿಯ ಬೆಂಗಳೂರು, ಎಲ್ಲಿಯ ರಾಯಪುರ, ಎಲ್ಲಿಯ ಮುಂಗೇಲಿ
24-07-2021
ನಾನು ಆಗ ಎಲ್‌.ಸಿ.ಪಿ.ಸಿ ಎಂಬ ಬ್ಯಾಂಕಿನ ಹೊಸ ವಿಭಾಗದಲ್ಲಿದ್ದೆ. ಹೊಸದಾಗಿ ತರೆದ ಖಾತೆಗಳ ಫಾರಂಗಳನ್ನು ಎಲ್ಲಾ ಶಾಖೆಗಳು ಈ ವಿಭಾಗಕ್ಕೆ ಕಳಿಸುತ್ತಿದ್ದರು. ಸುಮಾರು 120 ಜನ ಕೆಲಸ ಮಾಡುತ್ತಿದ್ದೆವು. ಚೆನ್ನೈನಲ್ಲಿ ಮೊದಲು ಇದ್ದ ಈ ವಿಭಾಗದಲ್ಲಿ ಸುಮಾರು ನಾಲ್ಕು ವರ್ಷ ಕೆಲಸ ಮಾಡಿದ್ದ ಅನುಭವ ನನಗಿದ್ದಿದ್ದರಿಂದ ಬೆಂಗಳೂರಿನಲ್ಲಿ ಈ ವಿಭಾಗ ತೆರೆಯಬೇಕೆಂದು ಜೂನ್‌ 2011ರಲ್ಲಿ ನನ್ನನ್ನು ಮತ್ತು ಇನ್ನಿಬ್ಬರು ಗೆಳೆಯರನ್ನು ಚೆನ್ನೈನಿಂದ ವರ್ಗಾವಣೆ ಮಾಡಿಸಿ ಕರೆತಂದಿದ್ದರು. ಹಾಗಾಗಿ ಬೆಂಗಳೂರಿನಲ್ಲಿ ಮೊದಲನೇ ದಿನದಿಂದಲೇ ಈ ವಿಭಾಗದ ಜೊತೆ ನಾನು ಸೇರಿಕೊಂಡಿದ್ದೆ. ಈ ವಿಭಾಗದಲ್ಲಿ ಆಗುವ ಶೇಕಡ ನೂರರಷ್ಟು ಕೆಲಸ ನನ್ನ ಕಣ್ಣು ತಪ್ಪಿ ಹೋಗುತ್ತಿರಲಿಲ್ಲ. ಗ್ರಾಹಕರ ವಿವರಗಳನ್ನು ಅವರ ಖಾತೆ ಫಾರಂಗಳನ್ನು ನೋಡಿ ಕಂಪ್ಯೂಟರ್‌ನಲ್ಲಿ ತುಂಬುವುದು ಈ ವಿಭಾಗದ ಒಂದು ಕೆಲಸವಾದರೆ, ಮತ್ತೊಂದು ಕೆಲಸ ಕರ್ನಾಟಕ ರಾಜ್ಯದ ನಮ್ಮ ಎಲ್ಲಾ ಗ್ರಾಹಕರ ಚೆಕ್‌ ಬುಕ್‌ ನಮ್ಮ ಕಛೇರಿಯಲ್ಲೇ ಮುದ್ರಣವಾಗುತ್ತಿತ್ತು . ಹೀಗಾಗಿ ಕಛೇರಿಗೆ ದಿನದ 24 ಗಂಟೆಯೂ ಭದ್ರತೆಯಿತ್ತು ಮತ್ತು ಹೊರಗಿನವರು ನನ್ನ ಅಥವಾ ಬೇರೆ ಮೇಲಧಿಕಾರಿಗಳ ಅನುಮತಿ ಇಲ್ಲದೆ ಒಳಗೆ ಬರುವಂತಿರಲಿಲ್ಲ. ಜೂನ್‌ 2013ರಲ್ಲಿ ಒಂದು ದಿನ ಕಛೇರಿಯ ಸೆಕ್ಯೂರಿಟಿ ಗಾರ್ಡ್‌ ನನ್ನೆಡೆಗೆ ಓಡಿಬಂದ. ಬಂದವನೇ ಸಾರ್‌ ಪೋಲೀಸ್‌ ಬಂದಿದ್ದಾರೆ, ಒಳಗೆ ಕಳಿಸಲೇ ಎಂದು ಕೇಳಿದ. ನಾನೇ ಕಛೇರಿಯ ಮುಖ್ಯ ದ್ವಾರಕ್ಕೆ ಹೋದೆ. ೫ ಜನ ಪೂರ್ಣ ಸಮವಸ್ತ್ರದಲ್ಲಿ ಇದ್ದ ಪೋಲೀಸರು ನಿಂತಿದ್ದರು. ಅಲ್ಲೇ ಸೋಫಾ ಮೇಲೆ ಅವರನ್ನು ಕುಳಿತುಕೊಳ್ಳಲು ಹೇಳಿದೆ. ಅವರೊಂದಿಗೆ ಮಾತನಾಡಿದಾಗ ನನಗೆ ಗೊತ್ತಾಗಿದ್ದು ಅದರಲ್ಲಿ ೩ ಪೋಲೀಸರು ಛತ್ತೀಸ್ಘಡ್‌ನ ರಾಯಪುರದಿಂದ ಬಂದಿದ್ದಾರೆ ಎಂದು. ಇನ್ನಿಬ್ಬರು ಬೆಂಗಳೂರಿನವರೇ. ಸರಿ ಅವರಲ್ಲಿ ಮುಖ್ಯವಾದ ಇಬ್ಬರನ್ನು ಮಾತ್ರ ಕಛೇರಿಯ ಮುಖ್ಯಸ್ಥರ ಕ್ಯಾಬಿನ್ನಿಗೆ ಕರೆದುಕೊಂಡು ಹೋದೆ. ಹಿಂದಿಯಲ್ಲಿ ಅವರು ಬಂದ ವಿಷಯವನ್ನು ತಿಳಿಸಲು ಪ್ರಾರಂಭಿಸಿದರು. ರಾಯಪುರದಿಂದ ಸುಮಾರು 100 ಕಿಲೋಮೀಟರ್‌ ದೂರದಲ್ಲಿರುವ ಒಂದು ಚಿಕ್ಕ ಗ್ರಾಮ ಮುಂಗೇಲಿಯಲ್ಲಿ ನಡೆದ ಘಟನೆ ಇದು. ಮುಂಗೇಲಿಯಲ್ಲಿದ್ದ ರವೀಶನ ಮೊಬೈಲ್ಗೆ ಒಂದು ಕರೆ ಬಂತು. ಆ ಬದಿಯಿಂದ ಮಧುರ ಕಂಠದ ಒಂದು ಹುಡುಗಿ ನೀನು ಒಂದು ಲಾಟರಿ ಸ್ಕೀಮ್‌ ನಲ್ಲಿ 20 ಲಕ್ಷ ಹಣ ಗೆದ್ದಿದ್ದೀಯ, ಆದರೆ ಅದರಲ್ಲಿ ಶೇಕಡ 40 ಅಂದರೆ 8 ಲಕ್ಷ ರೂಪಾಯಿ ನೀನು ತೆರಿಗೆ ಕಟ್ಟಬೇಕು. ಮೊದಲು 1 ಲಕ್ಷ ತಾವು ನೀಡುವ ಸ್ಟೇಟ್‌ ಬ್ಯಾಂಕ್‌ ಖಾತೆಗೆ ಹಾಕು ಮಿಕ್ಕ ಹಣವನ್ನು ನೀನು 20 ಲಕ್ಷ ಕೈ ಸೇರಿದ ಮೇಲೆ ಕಟ್ಟಬಹುದು ಎಂದು ಹೇಳಿದ್ದರು. ಅದರಂತೆ ರವೀಶ ಖಾತೆಗೆ ಹಣ ತುಂಬಿದ್ದ. 15 ದಿನಗಳ ನಂತರ ಮತ್ತೇ ಆ ಮಧುರ ಕಂಠದ ಹುಡುಗಿ ಫೋನ್‌ ಮಾಡಿ ಖಾತೆಗೆ ಇನ್ನೂ ಒಂದು ಲಕ್ಷ ತುಂಬಬೇಕೆಂದು ಹೇಳಿದಳು. ಆಗ ರವೀಶನಿಗೆ ಅನುಮಾನ ಬಂದು ಪೋಲೀಸರ ನೆರವಿಗೆ ಹೋದ. ಪೋಲೀಸರು ಮೋಸಗಾರನನ್ನು ಹಿಡಿಯಲು ಒಂದು ತಂತ್ರ ಹೂಡಿದರು. ಅದರಂತೆ ಮತ್ತೆ ರವೀಶನಿಗೆ ಕರೆ ಬಂದಾಗ, ರವೀಶ ತನ್ನಲ್ಲಿರುವುದೆಲ್ಲಾ ಕಪ್ಪು ಹಣ ಈ ರೀತಿ ನಾನು ಬ್ಯಾಂಕ್‌ ಖಾತೆಗೆ ತುಂಬಿದರೆ ತೆರಿಗೆ ಅಧಿಕಾರಿಗಳು ನನ್ನ ಹಿಂದೆ ಬೀಳುತ್ತಾರೆ, ಹಾಗಾಗಿ ಖುದ್ದಾಗಿ ನೀವೆ ಬಂದರೆ ನಾನು ಹಣ ಕೊಡುತ್ತೇನೆ ಎಂದ. ಮಧುರ ಕಂಠದ ಹುಡುಗಿ ಅವನ ವಿಳಾಸವನ್ನು ತೆಗೆದುಕೊಂಡಳು ಮತ್ತು ತನ್ನ ಸಹಚರನೊಬ್ಬನನ್ನು ಹಣ ಸ್ವೀಕರಿಸಲು ಕಳಿಸುತ್ತೇನೆಂದು ಹೇಳಿದಳು. ಮೂರು ದಿನದ ನಂತರ ಮತ್ತೇ ರವೀಶನಿಗೆ ಕರೆ ಬಂತು. ಈ ಬಾರಿ ಒಬ್ಬ ಗಂಡಸಿನ ಧ್ವನಿ. ತಾನು ಮುಂಗೇಲಿಗೆ ಬಂದಿದ್ದೇನೆ, ಇನ್ನೊಂದು ಗಂಟೆಯೊಳಗೆ ನಿಮ್ಮ ಮನೆಗೆ ಬರುತ್ತೇನೆ ಎಂದ. ತಕ್ಷಣ ರವೀಶ ಪೋಲೀಸರಿಗೆ ಫೋನ್‌ ಮಾಡಿದ. ಅವನು ವಿಳಾಸ ಕೊಟ್ಟದ್ದು ಕೂಡ ಪೋಲೀಸ್‌ ಠಾಣೆಯ ಹತ್ತಿರದಲ್ಲೇ ಇದ್ದ ಒಂದು ಅಂಗಡಿಯದು. ಮುಫ್ತಿಯಲ್ಲಿ ಪೋಲೀಸರು ರವೀಶನ ಜೊತೆ ಬಂದು ರವೀಶನೊಬ್ಬನನ್ನೇ ಬಿಟ್ಟು ಅವರು ಅಲ್ಲೇ ಹತ್ತಿರದಲ್ಲಿ ಕಾಯುತ್ತಾ ನಿಂತರು. ರವೀಶನಲ್ಲಿಗೆ ಬಂದದ್ದು ಬಹು ಎತ್ತರಾ ಘಾತ್ರವಾದ ಒಬ್ಬ ಕಪ್ಪು ವಿದೇಶಿ ಪ್ರಜೆ. ಬಂದವನೇ ರವೀಶನ ಕೈಯಲ್ಲಿದ್ದ ಬ್ಯಾಗು ನೋಡಿ, ಹಣ ಕೊಡು ಎಷ್ಟಿದೆ ಎಂದ. ತಕ್ಷಣ ಪೋಲೀಸರು ಬಂದು ಆ ವಿದೇಶಿ ಪ್ರಜೆಯನ್ನು ಬಂಧಿಸಿದರು. ಹತ್ತಿರದಲ್ಲೇ ಇದ್ದ ಸ್ಟೇಟ್‌ ಬ್ಯಾಂಕಿಗೆ ಹೋಗಿ ಅವನು ನೀಡಿದ್ದ ಖಾತೆಯ ವಿವರ ಕೇಳಿದರು. ಖಾತೆಯಲ್ಲಿ ಉಳಿದಿದ್ದ ಮೊತ್ತ 100 ರೂಪಾಯಿ ಮಾತ್ರ ಮತ್ತು ಆ ಖಾತೆ ಈಗ ಮೂರು ತಿಂಗಳಿಗೆ ಮುಂಚೆ ಬೆಂಗಳೂರಿನ ಒಂದು ಶಾಖೆಯಲ್ಲಿ ತೆರೆಯಲಾಗಿದೆ ಎಂದು ತಿಳಿದುಬಂತು. ಆ ಖಾತೆ ಫಾರಂ ನಕಲು ಬೇಕೆಂದು ಪೋಲೀಸರು ನಮ್ಮ ಕಛೇರಿಗೆ ಬಂದಿದ್ದರು. ತಕ್ಷಣ ನಮ್ಮ ಮುಖ್ಯಸ್ಥರು ನನಗೆ ಆ ಖಾತೆ ಫಾರಂ ಮತ್ತು ಅದರ ಎರಡು ಜ಼ೆರಾಕ್ಷ ಕಾಪಿ ತರಲು ಹೇಳಿದರು. ನಾನು ತಂದೆ. ಪೋಲೀಸರು ನಕಲು ಕಾಪಿಯನ್ನು ತೆಗೆದುಕೊಂಡು ಅದರಲ್ಲಿ ನಮ್ಮ ಎಜಿಎಮ್‌ ಸಹಿ ಹಾಕಿಸಿ ಒರಿಜಿನಲ್‌ ನಮಗೆ ವಾಪಸ್‌ ಮಾಡಿ ಅದನ್ನು ಸುರಕ್ಷಿತವಾಗಿ ಇಡಬೇಕೆಂದು ಹೇಳಿದರು. ಇನ್ನೊಂದು ಜ಼ೆರಾಕ್ಸ ಕಾಪಿ ಮೇಲೆ ಅವರು ಸ್ವೀಕರಿಸಿರುವುದಾಗಿ ಸಹಿ ಹಾಕಿದರು. ಒಂದು ಬಿಳಿ ಹಾಳೆಯಲ್ಲಿ ಒರಿಜಿನಲ್‌ ಫಾರಂ ಕಛೇರಿಯ ಮುಖ್ಯಸ್ಥರಲ್ಲೇ ಕೊಟ್ಟಿರುವುದಾಗಿ ಬರೆದು ಕಛೇರಿಯ ಮುಖ್ಯಸ್ಥರಿಗೆ ಸಹಿ ಹಾಕಲು ಹೇಳಿದರು ಮತ್ತು ಅದಕ್ಕೆ ಸಾಕ್ಷಿಯಾಗಿ ನಾನು ಸಹಿ ಹಾಕಿದೆ. ಡಿಸೆಂಬರ್‌ 2013ರೆಲ್ಲಿ ಅಂದರೆ ೬ ತಿಂಗಳ ನಂತರ ನನಗೆ ಮತ್ತು ಕಛೇರಿಯ ಮುಖ್ಯಸ್ಥರಿಗೆ ಮುಂಗೇಲಿಯಿಂದ ಕೋರ್ಟ್‌ ನೋಟೀಸ್‌ ಬಂತು. ತಮ್ಮ ವಶದಲ್ಲಿರುವ ಖಾತಾ ಫಾರಂನ ನಕಲು ನಮ್ಮ ಒಂದು ಕೇಸ್‌ಗೆ ಪೋಲೀಸರು ಹಾಜರುಪಡಿಸಿದ್ದಾರೆ. ಅವರು ನೀಡಿರುವ ಫಾರಂ ಮತ್ತು ನಿಮ್ಮಲ್ಲಿರುವ ಒರಿಜಿನಲ್ ಫಾರಂ ಒಂದೇ ಎಂದು ದೃಢೀಕರಿಸಲು ಮುಂಗೇಲಿ ಕೋರ್ಟಗೆ ಹಾಜರಾಗಬೇಕೆಂದಿತ್ತು. ತಕ್ಷಣ ನಮ್ಮ ಸ್ಥಳೀಯ ಪ್ರಧಾನ ಕಛೇರಿಯ ಕಾನೂನು ವಿಭಾಗಕ್ಕೆ ಫೋನ್‌ ಮಾಡಿದೆ. ಅವರಿಗೆ ಈಗಾಗಲೇ ಈ ವಿಷಯ ನಮ್ಮ ಬ್ಯಾಂಕಿನ ಮುಂಗೇಲಿ ಶಾಖೆಯಿಂದ ತಿಳಿದಿತ್ತು ಮತ್ತು ನಮಗೆ ಅಲ್ಲಿನ ನಮ್ಮ ಬ್ಯಾಂಕಿನ ಪರವಾಗಿ ಇರುವ ಲಾಯರ್‌ ಶುಕ್ಲ ಅವರನ್ನು ಸಂಪರ್ಕಿಸಲು ಹೇಳಿ ಅವರ ಮೊಬೈಲ್‌ ನಂಬರ್‌ ಕೊಟ್ಟರು. ಬ್ಯಾಂಕ್‌ ಕೆಲಸಕ್ಕಾಗಿ ಕೋರ್ಟ ನೋಟೀಸ್‌ ಪಡೆದದ್ದು ನಾನು ಇದೇ ಮೊದಲು. ಸರಿ ಶುಕ್ಲ ಅವರಿಗೆ ಫೋನ್‌ ಮಾಡಿದೆ. ಸಮಾಧಾನದಿಂದ ಉತ್ತರಿಸಿದ ಶುಕ್ಲರವರ ಮಾತುಗಳಿಂದ ನಮಗೆ ಅರ್ಧ ಕೆಲಸವೇ ಮುಗಿಯಿತೇನೋ ಎಂಬಂತಾಯಿತು. ಸರಿ ರಾಯಪುರಕ್ಕೆ ಬಳಗ್ಗೆ 6 ಗಂಟೆಗೆ ಹೊರಡುವ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಒಂದು ದಿನ ಪೂರ್ತಿಗೆ ಟ್ಯಾಕ್ಸಿ ಬಾಡಿಗೆಗೆ ಪಡೆದು ಮುಂಗೇಲಿಗೆ ಹೋಗಿ ಬರುವುದೆಂದು ನಿರ್ಧರಿಸಿದೆವು. ಆದರೆ ಕೋರ್ಟಿನಲ್ಲಿ ನಮ್ಮ ಕೆಲಸ ಎಷ್ಟು ಹೊತ್ತಿಗೆ ಮುಗಿಯಬಹುದೆಂಬ ಅಂದಾಜು ನಮಗೆ ಇಲ್ಲದ್ದರಿಂದ ವಾಪಸ್‌ ಬರಲು ಮಾರನೇ ದಿನಕ್ಕೆ ವಿಮಾನ ಕಾಯ್ದಿರಿಸಿದೆವು. ರಾಯಪುರದ ಮೇಯರ್‌ ಕಿರಣ ದೀದಿ ನನ್ನೊಂದಿಗೆ 2010ನೆ ಇಸವಿಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಬಂದದ್ದು ನೆನಪಾಯಿತು. ಅವರಿಗೆ ಫೋನ್‌ ಮಾಡಿ ನನ್ನ ಪ್ರಯಾಣದ ವಿಚಾರ ತಿಳಿಸಿದೆ. ಅವರ ಮೂಲಕ ಸರ್ಕಾರದ ಒಂದು ಅತಿಥಿಗೃಹದಲ್ಲಿ ನಮಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಕೋರ್ಟ್‌ ಕೆಲಸ ಮುಗಿದ ಮೇಲೆ ಅವರೊಂದಿಗೆ ಅಂದು ರಾತ್ರಿ ಊಟಕ್ಕೆ ಬರುಲು ಆಹ್ವಾನವಿತ್ತರು. ಬೆಂಗಳೂರಿನಿಂದ ಮಾನಸ ಸರೋವರ ಯಾತ್ರೆಗೆ ನನ್ನ ಜೊತೆ ಬಂದಿದ್ದ ಮತ್ತೊಬ್ಬ ಬೆಂಗಳೂರು ಗೆಳೆಯ ಚಂದ್ರಮೋಹನ್‌ ತಾನೂ ಕಿರಣ್‌ ದೀದಿ ಅವರನ್ನು ಭೇಟಿ ಮಾಡಿಬೇಕು ಹಾಗಾಗಿ ತಾವು ಸ್ವಂತ ಖರ್ಚಿನಲ್ಲಿ ರಾಯಪುರಕ್ಕೆ ಬರುವುದಾಗಿ ತಿಳಿಸಿದರು. ಈ ಕೈಲಾಸ ಮಾನಸ ಸರೋವರದ ಯಾತ್ರೆಯೇ ಹಾಗೆ. ಭಾರತದ ಮೂಲೆಮೂಲೆಯಿಂದ ಬರುವ ಯಾತ್ರಿಗಳು ದೆಹಲಿಯಲ್ಲಿ ಸೇರಿ ನಂತರ ಪರಿಚಯವಾಗಿ ೩೩ ದಿನಗಳ 160 ಕಿಲೋಮೀಟರ್‌ ಚಾರಣ ಇರುವ ಯಾತ್ರೆ ಮುಗಿಸುತ್ತಾರೆ. ಯಾತ್ರೆಯ ಕೊನೆಗೆ ಒಂದು ಬ್ಯಾಚಿನ ಎಲ್ಲ 70 ಜನ ಒಂದೇ ಕುಟುಂಬದಂತೆ ಆಗಿರುತ್ತಾರೆ. ಹಾಗೆಯೇ ಪರಿಚಯವಾಗಿದ್ದವರು ರಾಯಪುರದ ಮೇಯರ್‌ ಶ್ರೀಮತಿ ಕಿರಣಮಯಿ. ಸರಿ ಮುಂಗೇಲಿ ಪ್ರಯಾಣದ ದಿನ ಬಂತು. ನಾನು ಮತ್ತು ನಮ್ಮ ಎ.ಜಿ.ಎಮ್‌ ಪೂರ್ವ ನೀಯೋಜಿತವಾದಂತೆ ರಾಯಪುರ ತಲುಪಿ ಮುಂಗೇಲಿಗೆ ಕಾರಿನಲ್ಲಿ ಹೊರಟೆವು. ಮುಂಗೇಲಿ ನಮ್ಮ ರಾಮನಗರದಂತೆ ಒಂದು ಚಿಕ್ಕ ಗ್ರಾಮ. ಅಲ್ಲಿ ಕೋರ್ಟ ಹತ್ತಿರ ಹೋಗುತ್ತಿದ್ದಂತೆ ಲಾಯರ್‌ ಶುಕ್ಲ ಅವರಿ ಫೋನ್‌ ಮಾಡಿದೆ. ಅವರು ನಮ್ಮ ಕಾರ್‌ ಮುಂದೆ ಬಂದರು. ಬಿಳಿ ಸಮವಸ್ತ್ರದಲ್ಲಿದ್ದು, ಸುಮಾರು 6೦ ವರ್ಷದವರಂತೆ ಕಾಣುತ್ತಿದ್ದು, ಒಳ್ಳೆ ಕಳೆಯಿದ್ದು, ಹಣೆಯ ಮೇಲಿನ ವಿಭೂತಿ ಕುಂಕುಮ ಗಮನಿಸಿದರೆ ಅವರು ಆಗ ತಾನೆ ದೇವರ ಪೂಜೆ ಮುಗಿಸಿಕೊಂಡು ಬಂದಿರುವುದು ತಿಳಿಯುತ್ತಿತ್ತು. ಮನೆಗೆ ಬಂದ ಆತ್ಮೀಯ ಬಂಧುಗಳಂತೆ ನಮ್ಮನ್ನು ವಿಚಾರಿಸಿಕೊಳ್ಳುತ್ತಾ ಕೋರ್ಟಿನ ಆವರಣದಲ್ಲಿದ್ದ ಚಿಕ್ಕ ಹೋಟಲ್‌ ಒಂದಕ್ಕೆ ಕರೆದುಕೊಂಡು ಹೋಗಿ ಕಾಫಿ ಹಾಗೂ ಉಪಹಾರ ಮಾಡಿಸಿದರು. ನಾವು ತಿಂದ ಉಪಹಾರಕ್ಕೆ ಹಣ ಕೊಡಲು ನಮಗೆ ಬಿಡಲಿಲ್ಲ. ಅಲ್ಲಿಂದ ನೇರ ಕೋರ್ಟಿನ ಆವರಣದಲ್ಲಿದ್ದ ಅವರ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಅವರ ಲಾಯರ್‌ ಶಿಷ್ಯನನ್ನು ಪರಿಚಯಮಾಡಿಕೊಟ್ಟು ಇವನೇ ನಿಮಗೆ ಪ್ರಶ್ನೆಗಳನ್ನು ಕೇಳುವುದು ಎಂದು ಹೇಳಿ ಇವರು ಬೆಂಗಳೂರಿಗೆ ವಾಪಸ್‌ ಹೋಗಬೇಕಿದೆ, ಬೇಗನೇ ಕೇಸ್‌ ಮುಗಿಸಿ ಕಳಿಸು ಎಂದು ಹೇಳಿದರು. ೧೨ ಗಂಟೆಗೆ ಕೇಸ್‌ ಪ್ರಾರಂಭವಾಯಿತು. ಮೊದಲು ನಮ್ಮ ಏ.ಜಿ.ಎಮ್‌ ರವರನ್ನು ಕಟಕಟೆಗೆ ಕರೆದರು, ಅವರಲ್ಲಿ ಆ ಲಾಯರ್‌ ಅಕೌಂಟ್‌ ಫಾರಂನ ನಕಲು ಕೊಟ್ಟು ಅದರಲ್ಲಿರುವ ಸಹಿ ಅವರದೇನಾ ಎಂದು ಕೇಳಿದರು. ಅದಕ್ಕೆ ಅವರು ಹೌದೆಂದರು. ನಂತರ ಇದು ನಿಮ್ಮ ಬ್ಯಾಂಕಿನಲ್ಲಿರುವ ಫಾರಂನ ನಕಲೇ ಎಂದು ದೃಢೀಕರಿಸುತ್ತೀರಾ ಎಂದರು. ಅವರು ನಾವು ಬೆಂಗಳೂರಿನಿಂದ ತೆಗೆದುಕೊಂಡು ಹೋಗಿದ್ದ ನಕಲನ್ನು ಅದರೊಂದಿಗೆ ಹೋಲಿಕೆ ಮಾಡಿ, ಹೌದು ಇದು ನಮ್ಮಲ್ಲಿರುವ ಫಾರಂನ ನಕಲೇ ಎಂದರು. ಸರಿ ನೀವು ಇನ್ನು ಹೋಗಬಹುದು ಎಂದರು. ನ್ಯಾಯಾಧೀಶರು ಲಾಯರ್ ಗೆ‌ ತಕ್ಷಣ ಇಷ್ಟು ಕೇಳಲು ನೀವು ಇವರನ್ನು ಬೆಂಗಳೂರಿನಿಂದ ಕರೆಸಿದಿರಾ ಎಂದರು. ಅವರು ಹೌದೆಂದಾಗ, ಅಲ್ಲ ನಿಮಗೆ ಬುದ್ದಿ ಇದೆಯೇ, ಈ ಚಿಕ್ಕ ಕೇಸಿಗೆ ನೀವು ಹೀಗೆ ಇಂತಹವರನ್ನು ಕರೆಸಿ ಬ್ಯಾಂಕಿಗೆ / ಸರ್ಕಾರಕ್ಕೆ ಹಣ ಕರ್ಚುಮಾಡಿಸಿದರೇ ರವೀಶ ಕಳೆದುಕೊಂಡಿರುವ ಒಂದು ಲಕ್ಷಕ್ಕಿಂತ ಈ ಕೇಸಿನ ವೆಚ್ಛವೇ ಜಾಸ್ತಿಯಾಗುತ್ತದೆ ಎಂದರು. ನಂತರ ನನ್ನ ಹೆಸರು ಕೂಗಿದರು. ತಕ್ಷಣ ನ್ಯಾಯಾಧೀಶರು ಇವರು ಯಾರು, ಏಕೆ ಕರೆಸಿದ್ದೀರಿ ಎಂದರು. ಅದಕ್ಕೆ ಲಾಯರ್‌ ಇವರು ಕಛೇರಿ ಮುಖ್ಯಸ್ಥರು ಹಾಕಿದ ಸಹಿಗೆ ಇವರು ಸಾಕ್ಷಿ ಎಂದರು. ನ್ಯಾಯಾಧೀಶರಿಗೆ ಕೋಪ ತಡೆಯಲಾಗಲಿಲ್ಲ. ಇವರಿಗೆ ಏನು ಪ್ರಶ್ನೆ ಮಾಡುವುದು ಬೇಡ, ನೀವು ಹೊರಡಿ ಎಂದರು ನನ್ನ ಕಡೆ ಕೈ ತೋರಿಸುತ್ತಾ. ನಾನು ಕಟಕಟೆಯಿಂದ ಇಳಿಯುತ್ತಿದ್ದಂತೆ ಬಿಕ್ಷುಕನಂತೆ ಕಾಣುತ್ತಿದ್ದ ಒಬ್ಬ ವಿದೇಶಿ ಪ್ರಜೆಯನ್ನು ಕೋರ್ಟಿಗೆ ಕರೆತಂದರು. ನ್ಯಾಯಾಧೀಶರು ನನ್ನ ಕಡೆ ನೋಡುತ್ತಾ, "ಎಲ್ಲಿಯ ಮುಂಗೇಲಿ ಎಲ್ಲಿಯ ಬೆಂಗಳೂರು"; ನಿಮಗೆ ಮುಂಗೇಲಿ ದರ್ಶನ ಮಾಡಿಸಿದ ಆ ವಿದೇಶಿ ಪ್ರಜೆಗೆ ಒಮ್ಮೆ ಕೈ ಕುಲುಕಿ ಹೋಗಿ ಎಂದು ನಕ್ಕರು. ಆ ವಿದೇಶಿ ಪ್ರಜೆಯೋ ನೋಡಿದವರಿಗೆಲ್ಲಾ ಸಿಟಿ ಮಾರ್ಕೆಟ್ಟಿನ ಬಿಕ್ಷುಕರಂತೆ ನಮಸ್ತೆ ನಮಸ್ತೆ ಎನ್ನುತ್ತಾ ಕೈ ಜೋಡಿಸಿ ನಮಸ್ಕಾರ ಮಾಡುತ್ತಿದ್ದ. ಅವನಿಗೆ ಕೈ ಕುಲುಕಿ ಹೊರಗೆ ಬಂದೆ. ನಮ್ಮ ಕಛೇರಿಗೆ ಬಂದಿದ್ದ ಪೋಲೀಸ್‌ ಅಲ್ಲಿದ್ದರು. ನಾನು ಅವರಿಗೆ, ಏನ ಸಾರ್‌ ಎತ್ತರ ಘಾತ್ರದ ವಿದೇಶಿ ಪ್ರಜೆ ಎಂದಿದ್ದಿರಿ , ಇವ ನೋಡಿದರೆ ಹೀಗಿದ್ದಾನೆ ಎಂದೆ. ಅದಕ್ಕೆ ಅವರು ಅವನಿಗೆ ಜೈಲಿನಲ್ಲಿ ೬ ತಿಂಗಳಿನಿಂದ ಕೊಟ್ಟ ಸಸ್ಯಾಹಾರ ಊಟದ ಪ್ರಭಾವ ಎಂದು ನಕ್ಕರು. ನಂತರ ಶುಕ್ಲಾರವರ ಕೊಠಡಿಗೆ ಹೋದೆವು. ಅವರಿಗೆ ಅಂದು 3 ಕೇಸುಗಳಿದ್ದವು. ಅದನ್ನು ಅವರು ತಿಳಿಸಿ ಇಂದು ನಾನು ನಿಮ್ಮನ್ನು ಊಟಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಕ್ಷಮಿಸಿ ಎಂದರು. ನಮ್ಮ ಕಡೆಯಿಂದ ಶುಕ್ಲ ರವರಿಗೆ ಎಷ್ಟು ಹಣ ನೀಡಬೇಕೆಂದು ಕೇಳಿದೆವು. ಅದಕ್ಕೆ ಅವರು ನಾನು ಬದುಕುತ್ತಿರುವುದೇ ಸ್ಟೇಟ್‌ ಬ್ಯಾಂಕಿನಿಂದಾಗಿ, ಸರಿಯಾಗಿ ನೋಡಿದರೆ ನಾನು ನಿಮ್ಮನ್ನು ನನ್ನ ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿ ಉಪಚರಿಸಬೇಕು, ಹಣ ಬೇಡವೆಂದು ನಿರಾಕರಿಸಿದರು. ನಾವು ತೊಂದರೆ ಇಲ್ಲ ಆದರೆ ದಾರಿಯಲ್ಲಿ ಯಾವುದಾದರೂ ಸಸ್ಯಾಹಾರಿ ಹೋಟಲ್‌ ಇದ್ದರೆ ತಿಳಿಸಿ ಎಂದೆವು. ಅವರು ಅಲ್ಲಿಂದ 30 ಕಿಲೋಮೀಟರ್‌ ದೂರದಲ್ಲಿರುವ ಪತಂಜಲಿ ಆಶ್ರಮದ ಭಕ್ತರು ನಡೆಸುವ ಹೋಟೆಲ್‌ ಬಗ್ಗೆ ನಮ್ಮ ಡ್ರೈವರ್‌ಗೆ ತಿಳಿಸಿದರು. ಒಟ್ಟು 45 ನಿಮಿಷದಲ್ಲಿ ನಮ್ಮ ಕೋರ್ಟ್‌ ಕೆಲಸ ಮುಗಿದಿತ್ತು. ರಾಯಪುರದ ಕಡೆಗೆ ನಮ್ಮ ಪ್ರಯಾಣ ಬೆಳಸಿ ದಾರಿ ಮಧ್ಯದಲ್ಲಿ ಶುಕ್ಲರವರು ಹೇಳಿದ ಹೋಟಲ್ಲಿನಲ್ಲಿ ಊಟ ಮಾಡಿದೆವು. ಸಂಜೆ 4 ಗಂಟೆಗೆ ರಾಯಪುರ ತಲುಪಿದೆವು. ನಾನು ಕಿರಣ್‌ ದೀದಿಗೆ ಫೋನ್‌ ಮಾಡಿದೆ. ೫ ನಿಮಿಷದಲ್ಲಿ, ನಮ್ಮನ್ನು ಮೇಯರ್‌ ಕಛೇರಿಗೆ ಕರೆದುಕೊಂಡು ಹೋಗಲು ಕಟ್ಟುಮಸ್ತಾಗಿದ್ದ ಐದಾರು ಜನ ಬಂದರು. ನಮ್ಮ ಎ.ಜಿ.ಎಮ್‌ ಗೆ ತಲೆನೋವಿದ್ದುದ್ದರಿಂದ ಅವರು ಅತಿಥಿಗೃಹದಲ್ಲೇ ಉಳಿದರು. ಹಾಗಾಗಿ ನಾನು ಮತ್ತು ಚಂದ್ರಮೋಹನ್‌ ಮಾತ್ರ ಕಾರಿಗೆ ಹತ್ತಿದೆವು. ಅಲ್ಲಿ ಮೇಯರ್‌ ಆಫೀಸಿನಲ್ಲಿ ಸಾಕಷ್ಟು ಜನ ಕಿರಣ ದೀದಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿರುವುದು ಕಂಡೆ. ನನ್ನನ್ನು ನೋಡಿದೊಡನೇ ಗುರು ಬಯ್‌ (ಸಹೋದರ) ಎನ್ನುತ್ತಾ ಬಂದು ಅಪ್ಪಿಕೊಂಡರು. ಸಾಮಾನ್ಯವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯ ನಂತರ ನಾವು ಯಾತ್ರಿಗಳು ಫೋನಿನಲ್ಲಿ ಮಾತನಾಡುತ್ತಿರುತ್ತೇವೆ ಆದರೆ ಮುಖಾಮುಖಿಯಾಗಿ ಯಾರು ಒಬ್ಬರನ್ನೊಬ್ಬರು ಭೇಟಿಯೇ ಆಗುವುದಿಲ್ಲ, ಭೇಟಿಯಾದರೂ ತುಂಬಾ ಕಡಿಮೆ. ನಮ್ಮಿಬ್ಬರ ಕಣ್ಗಳಲ್ಲಿ ಈ ಭೇಟಿಯಿಂದ ಆನಂದಭಾಷ್ಪ ಹರಿದಿತ್ತು. ಸುತ್ತಲೂ ಇದ್ದವರಿಗೆಲ್ಲಾ ಆಶ್ಚರ್ಯ. ಸಾಕಷ್ಟು ಜನರಿಗೆ ಏಕೆಂದು ಗೊತ್ತಿರಲಿಲ್ಲ. ರಾತ್ರಿ ಕಿರಣ್‌ ದೀದಿ ಮನೆಯಲ್ಲೇ ಶುದ್ದ ಸಸ್ಯಾಹಾರಿ ಭೋಜನ. ಅವರ ಮನೆಯವರೆಲ್ಲರ ಪರಿಚಯವಾಯಿತು. ಸುಮಾರು ಹನ್ನೊಂದು ಗಂಟೆಯ ತನಕ ಮಾತನಾಡಿ ನಂತರ ಹೊರಡುವುದಾಗಿ ಹೇಳಿದೆ. ಆಗ ಕಿರಣ್‌ ದೀದಿ ಬಾಯಲ್ಲಿ ಬಂದ ಮಾತು – "ಎಲ್ಲಿಯ ಬೆಂಗಳೂರು, ಎಲ್ಲಿಯ ರಾಯಪುರ, ಎಲ್ಲಿಯ ಮುಂಗೇಲಿ". ಅವರ ಮಾತಿಗೆ ನಾನು "ಎಲ್ಲಿಯ ಶುಕ್ಲ, ಎಲ್ಲಿಯ ರವೀಶ, ಎಲ್ಲಿಯ ಆ ವಿದೇಶಿ ಪ್ರಜೆ" ಎಂದು ಸೇರಿಸಿದೆ.
ಅನಿಸಿಕೆಗಳು




Pushpa Nataraj
13-09-2021
Chenngide