ನಾನು ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ಸಮಯ. ಶಾಖೆಗಳಲ್ಲಿ ನಿಮಗೆ ಯಾವುದೇ ತೊಂದರೆ ಇದ್ದರೆ ಈ ಸ್ಥಳೀಯ ಪ್ರಧಾನ ಕಚೇರಿಯ ನಂಬರ್ ಗೆ ಫೋನ್ ಮಾಡಿ ಎಂದು ಹಾಕಿದ್ದ ನಂಬರ್ ನನ್ನ ಸೀಟಿಗೆ ಜೋಡಿಸಿದ್ದ ಸ್ಥಿರ ದೂರವಾಣಿ ಸಂಖ್ಯೆ ಆಗಿತ್ತು.
ನವಂಬರ್ 2015 ರಲ್ಲಿ ಪಳನಿಯಪ್ಪನ್ ಎಂಬ ಒಬ್ಬ ಗ್ರಾಹಕರು ನನಗೆ ಫೋನ್ ಮಾಡಿದರು. ಸುಮಾರು ಹದಿನೈದು ವರ್ಷಗಳ ಹಿಂದೆ ಚೆನ್ನೈನಿಂದ ವಲಸೆ ಬಂದಿರುವಂತಹ ಹಲವರಲ್ಲಿ ತಾನು ಒಬ್ಬ ಎಂದು ಪರಿಚಯ ಮಾಡಿಕೊಂಡರು. ನಂತರ, 2016 ನೇ ಇಸವಿಯ ಕ್ಯಾಲೆಂಡರ್ ನೀವು ಯಾವ ಭಾಷೆಯಲ್ಲಿ ಮಾಡುತ್ತಿದ್ದೀರಿ ಎಂದು ಕೇಳಿದರು. ನಮ್ಮ ಬ್ಯಾಂಕಿನವರು ಕನ್ನಡದಲ್ಲಿ ಕ್ಯಾಲೆಂಡರ್ ಮುದ್ರಿಸುವುದು ಎಂದು ನಾನು ಹೇಳಿದೆ. ಆಗ ಆತ ಸುಮಾರು ಮೂರು ವರ್ಷಗಳಿಂದ ನಾನು ತಿಳಿಸುತ್ತಿದ್ದೇನೆ, ಬೆಂಗಳೂರಿನಲ್ಲಿ ಕೇವಲ ಶೇಕಡ 29 ಮಾತ್ರ ಕನ್ನಡಿಗರು ಇರುವುದು. ಹಾಗಿದ್ದಾಗ ನೀವು ಏಕೆ ಕನ್ನಡದಲ್ಲಿ ಕ್ಯಾಲೆಂಡರ್ ಮಾಡಿಸುತ್ತೀರಾ. ಈ ವರ್ಷ ನೀವು ಇಂಗ್ಲಿಷ್ನಲ್ಲಿ ಕ್ಯಾಲೆಂಡರ್ ಮಾಡಿಸಬೇಕು ಎಂದು ತಿಳಿಸಿದರು. ನಾನು ಸರಿ ಎಂದು ಸುಮ್ಮನಾದೆ.
ಮತ್ತೆ ಜನವರಿಯಲ್ಲಿ ಆ ಮನುಷ್ಯ ಫೋನ್ ಮಾಡಿದ. ಮತ್ತೆ ಕನ್ನಡದಲ್ಲೇ ನಿಮ್ಮ ಕ್ಯಾಲೆಂಡರ್ ಬಂದಿದೆ. ಗ್ರಾಹಕರಿಗೆ ಅವರು ಮಾಡಿದ ವಿನಂತಿಯನ್ನು ನೆರವೇರಿಸುವ ಜವಾಬ್ದಾರಿಯೇ ನಿಮಗಿಲ್ಲ ಎಂದು ತಿಳಿಸಿದ. ನಾನು ಏನು ಉತ್ತರ ಕೊಡಲಿಲ್ಲ. ಕೋಪದಿಂದ ಸುಮ್ಮನೆ ಫೋನ್ ಕಟ್ ಮಾಡಿದರು ಪಳನಿಯಪ್ಪನ್.
ಮತ್ತೆ ನವಂಬರ್ 2016 ರಲ್ಲಿ ಫೋನ್ ಮಾಡಿದರು. ಮತ್ತದೇ ವಿಷಯ. ಈ ವರ್ಷವಾದರೂ ಆಂಗ್ಲ ಭಾಷೆಯಲ್ಲಿ ಕ್ಯಾಲೆಂಡರ್ ಮುದ್ರಿಸಿ ಎಂದು. ನಾನು ತಕ್ಷಣ ಅವರಿಗೆ ತಿಳಿಸಿದೆ. ನಿಮ್ಮ ವಿನಂತಿಯನ್ನು ಮ್ಯಾನೇಜ್ಮೆಂಟ್ ಇಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮಲ್ಲಿ ಮ್ಯಾನೇಜ್ಮೆಂಟ್ನಲ್ಲಿ ಇರುವವರು ಸಾಕಷ್ಟು ಜನ ಹೊರಗಿನವರೇ. ದಯವಿಟ್ಟು ನಿಮ್ಮ ವಿಳಾಸವನ್ನು ಕೊಡಿ ಎಂದೆ.
ಅವರು ನಿಮ್ಮ ಮ್ಯಾನೇಜ್ಮೆಂಟ್ ನಿರ್ಣಯ ನನಗೆ ಇಷ್ಟವಾಗಿದೆ. ಆದರೆ ನನ್ನ ವಿಳಾಸ ಏಕೆ ಬೇಕು ಎಂದು ಕೇಳಿದರು. ನಾನು ಹೇಳಿದೆ, ನಾವು ಆಂಗ್ಲ ಭಾಷೆಯ ಕ್ಯಾಲೆಂಡರ್ ಮಾಡುವುದಕ್ಕಾಗಿ ನಿರ್ಣಯ ತೆಗೆದುಕೊಂಡದ್ದು ಯಾವುದೋ ಕನ್ನಡ ರಕ್ಷಣಾ ವೇದಿಕೆಗೆ ಗೊತ್ತಾಗಿ ಅವರು ಬಂದು ಗಲಾಟೆ ಮಾಡುತ್ತಿದ್ದರು. ನಾವು, ನೀವು ಹೇಳಿದ ರೀತಿಯಲ್ಲೇ ಕೇವಲ ಶೇಕಡ 29 ಜನರು ಕನ್ನಡಿಗರು ಇರುವಂತಹ ಬೆಂಗಳೂರಿನಲ್ಲಿ ಕನ್ನಡದ ಕ್ಯಾಲೆಂಡರ್ ಏಕೆ ಎಂದು ಗ್ರಾಹಕರೊಬ್ಬರು ನಮಗೆ ತಿಳಿಸಿದ್ದಾರೆ ಎಂದು ಹೇಳಿದೆವು. ಆಗ ಅವರು ನಿಮ್ಮ ವಿಳಾಸವನ್ನು ಕೇಳಿದರು. ಹಾಗಾಗಿ ದಯವಿಟ್ಟು ನಿಮ್ಮ ವಿಳಾಸ ಕೊಡಿ ಎಂದು ತಿಳಿಸಿದೆ.
ತಕ್ಷಣ ಪಳನಿಯಪ್ಪನ್ ಅವರ ಭಾಷೆಯ ವೈಖರಿಯೇ ಬದಲಾಯಿತು. ಅಯ್ಯೋ ಇದು ನನ್ನ ವಿನಂತಿ ಮಾತ್ರ ಅಲ್ಲ. ಇದು ಬೆಂಗಳೂರಿನಲ್ಲಿ ಇರುವಂತಹ ಎಲ್ಲಾ ಅನ್ಯ ಭಾಷಿಗರ ವಿನಂತಿ. ನೀವು ನನ್ನ ಫೋನ್ ನಂಬರ್ ಅಥವಾ ನನ್ನ ವಿಳಾಸವನ್ನು ಯಾರಿಗೂ ಕೊಡಬೇಡಿ. ಇನ್ನು ಮುಂದೆ ನಿಮಗೆ ನಾನು ಫೋನ್ ಕೂಡ ಮಾಡುವುದಿಲ್ಲ ಎಂದು ಫೋನ್ ಕಟ್ ಮಾಡಿದರು.