ಗುರುರಾಜ
ಶಾಸ್ತ್ರಿ
ಪಾರ್ಕಿಂಗ್‌ ಪ್ರಸಂಗ
10-08-2021
ನಿನ್ನೆ ಅಂದರೆ ಹೋಳಿ ಹಬ್ಬದ ಮಾರನೇ ದಿನ ಸಹೋದ್ಯೋಗಿ ರಾಜನ್ ನನ್ನನ್ನು ಗಾಂಧಿಬಜಾರಿನ ಉಡುಪಿ ಕೃಷ್ಣ ಭವನದಲ್ಲಿ ಭೇಟಿಯಾಗುತ್ತೇನೆ ಎಂದು ಹೇಳಿದರು. ಸರಿ ಸಂಜೆ 6 ಗಂಟೆಗೆ ಗಾಂಧಿ ಬಜಾರಿಗೆ ಹೋದೆ. ಪಾರ್ಕಿಂಗ್ ಲಾಟ್ ನಲ್ಲಿ ನನ್ನ ಬೈಕ್ ಪಾರ್ಕ್ ಮಾಡಿ ರಾಜನ್ ಜೊತೆ ಹೋಟೆಲ್ಲಿಗೆ ಹೋಗಿ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿ ಹಾಗೆ ಜೊತೆಯಲ್ಲಿ ಮಸಾಲ ದೋಸೆ ಕಾಫಿಯನ್ನು ಸೇವಿಸಿದೆವು. ಇದಾದ ನಂತರ ರಾಜನ್ ಆಟೋ ಹತ್ತಿ ಮನೆ ಕಡೆ ಹೊರಟರು. ನಾನು ನನ್ನ ಬೈಕ್ ತೆಗೆಯಲಾಗದಂತೆ ಅಲ್ಲಿ ಅಡ್ಡವಾಗಿ ಒಂದು ಕಾರು ನಿಲ್ಲಿಸಿದ್ದರು.. ಕಾರಿನ ಚಾಲಕ ಇರಲಿಲ್ಲ. ಚಾಲಕನ ಪಕ್ಕದ ಸೀಟಿನಲ್ಲಿ ಒಬ್ಬ ಯುವಕ ಕುಳಿತಿದ್ದ. ಅವನು ನನ್ನನ್ನು ನೋಡಿ, ನನ್ನ ಗೆಳೆಯ ಈ ಕಾರಿನ ಮಾಲೀಕ, ವೆಂಕಟೇಶ್ವರ ಸ್ವೀಟ್ಸ್ ಸ್ಟಾಲಿನಲ್ಲಿ ಸ್ವೀಟ್ ತರಲು ಹೋಗಿದ್ದಾನೆ, ಐದು ನಿಮಿಷ ಆಗುತ್ತೆ ಪರವಾಗಿಲ್ವ ಎಂದು ಕೇಳಿದ. ನಾನು ಸರಿ ಏನ್ ಮಾಡೋಕಾಗುತ್ತೆ. ಕಾರ್ ಪಾರ್ಕಿಂಗ್ ಸಿಗದೆ ನನಗೂ ಎಷ್ಟೋ ಸಲ ಹೀಗೆ ಆಗಿದೆ, ಯೋಚನೆ ಮಾಡಬೇಡಿ ಕಾಯುತ್ತೇನೆ ಎಂದೆ. ತಕ್ಷಣ ಅವನು ತನ್ನ ಗೆಳೆಯನಿಗೆ ಬೇಗನೆ ಬಾ ಎಂದು ಹೇಳಲು ಫೋನ್ ಮಾಡಲು ಹೊರಟ. ನಾನು ಫೋನ್ ಮಾಡಬೇಡಿ. ಯಾವುದಾದರೂ ಸ್ವೀಟ್ ಕಮ್ಮಿ ತಂದು ಬಿಟ್ಟಾರು ಎಂದೆ. ಅವನು ನಕ್ಕು ಸುಮ್ಮನಾದ. ತಕ್ಷಣ ನನ್ನ ಬೈಕಿನ ಪಕ್ಕದಲ್ಲಿ ಆಕ್ಟಿವಾ ನಿಲ್ಲಿಸಿದ್ದ ಇನ್ನೊಬ್ಬ ವ್ಯಕ್ತಿ ತನ್ನ ಗಾಡಿಯನ್ನು ತೆಗೆಯೋದಕ್ಕೆ ಆಗದಿದ್ದರಿಂದ ಕಾರಿನಲ್ಲಿ ಕುಳಿತಿದ್ದ ಯುವಕನನ್ನು ಬಯ್ಯಲು ಪ್ರಾರಂಭಿಸಿದೆ. ಕಾಮನ್ ಸೆನ್ಸ್ ಇಲ್ವೇನ್ರೀ. ಹೀಗೆ ನಿಲ್ಲಿಸಿದ್ದೀರಿ ಕಾರನ್ನು ಅಂತ ಕೇಳುತಿದ್ದ. ನಾನು ತಕ್ಷಣ ಆ ವ್ಯಕ್ತಿಗೆ, ನೋಡಿ ನೀವು ಜಗಳ ಆಡಿದರೂ ಅಷ್ಟೇ ಅಥವಾ ಜಗಳವಾಡದಿದ್ದರೂ ಅಷ್ಟೇ ಈ ಕಾರಿನ ಚಾಲಕ ಬರುವುದಕ್ಕೆ ಐದು ನಿಮಿಷ ಆಗುತ್ತೆ, ಅಲ್ಲಿವರೆಗೂ ಕಾಯಬೇಕು. ಜಗಳವಾಡಿ ನಮ್ಮ ಮನಸ್ಸು ಯಾಕೆ ಕೆಡಿಸಿಕೊಳ್ಳಬೇಕು. ಅದು ದಿನದ ಕೊನೆಯಲ್ಲಿ ಮನಸ್ಸು ಕೆಟ್ಟರೆ ರಾತ್ರಿಯೆಲ್ಲಾ ನಿದ್ದೆ ಸರಿಯಾಗಿ ಬರುವುದಿಲ್ಲ ಎಂದೆ. ಅವನು ನಕ್ಕು ಸುಮ್ಮನಾದ. 5 ನಿಮಿಷದಲ್ಲಿ ಆ ಕಾರಿನ ಮಾಲೀಕ ಬಂದ. ಅವನಿಗೆ ಅಲ್ಲಿದ್ದ ಗೆಳೆಯ ನಡೆದುದನ್ನೆಲ್ಲ ತಿಳಿಸಿದ. ಅವನೂ ನಕ್ಕ . ಜೊತೆಗೆ ಐದು ನಿಮಿಷ ಕಾದ ನಮ್ಮಿಬ್ಬರಿಗೂ ಒಂದೊಂದು ಸ್ವೀಟನ್ನು ಕೊಟ್ಟು ಧನ್ಯವಾದಗಳನ್ನು ತಿಳಿಸಿದ. ಇಷ್ಟೇ ಅಲ್ಲವೇ, ನಮ್ಮ ಜೀವನದಲ್ಲಿ ಸದಾ ಹೀಗೆ ಕೋಪಿಸಿಕೊಳ್ಳುವ ಅಥವಾ ತಾಳ್ಮೆಯಿಂದ ಎದುರಿಸುವ ಸನ್ನಿವೇಶಗಳು ಬರುತ್ತಿರುತ್ತದೆ. ಹೇಗೆ ಸ್ಪಂದಿಸಬೇಕು ಎಂಬ ಆಯ್ಕೆ ನಮ್ಮದಾಗಿರುತ್ತದೆ.
ಅನಿಸಿಕೆಗಳು