ನಿನ್ನೆ ಬೆಳಗ್ಗೆ 8 ಗಂಟೆಗೆ ಯಾವುದೋ ಪುಸ್ತಕ ಓದುತ್ತ ಕುಳಿತಿದ್ದೆ, ಒಮ್ಮೆಲೇ ಎದುರು ಮನೆಯಿಂದ ಎಲ್ಲರೂ ಜೋರಾಗಿ "ಬಣ್ಣದ ಪಕ್ಷಿ, ಬಣ್ಣದ ಪಕ್ಷಿ" ಎಂದು ಕೂಗುತ್ತಿರುವುದು ಕೇಳಿಸಿತು. ನಾನು ನನ್ನ ಮೊಬೈಲ್ ತೆಗೆದುಕೊಂಡು ಎದುರುಮನೆ ಕಡೆ ಧಾವಿಸಿದೆ. ಆ ಬಣ್ಣದ ಪಕ್ಷಿಯೇ ನಾನು ಮೇಲೆ ಕಳಿಸಿರುವ ಫೋಟೋ. ಸಾಮಾನ್ಯವಾಗಿ ಪಕ್ಷಿಗಳ ಫೋಟೋ ತೆಗೆಯಲು ತಕ್ಷಣ ಧಾವಿಸಬೇಕು, ಅವು ಎಲ್ಲೂ ಜಾಸ್ತಿ ಹೊತ್ತು ಕೂರುವುದಿಲ್ಲ. ಆದರೆ ಆಶ್ಚರ್ಯ, ಈ ಪಕ್ಷಿ ಎದುರು ಮನೆಯ ಅಂಗಳದಲ್ಲೇ ಕುಳಿತಿತ್ತು. ಪಕ್ಷಿಗಳ ಬಗ್ಗೆ ಸ್ವಲ್ಪ ಮಾಹಿತಿ ಇರುವ ನನಗೆ ಈ ಪಕ್ಷಿಯು ನಮ್ಮ ದೇಶದ್ದಲ್ಲ ಮತ್ತು ಇದು ಅಂಗಡಿಗಳಲ್ಲಿ ಮಾರುವ ಮನೆಯಲ್ಲಿ ಸಾಕುವ ಪಕ್ಷಿ ಎಂದು ಗೊತ್ತಾಯಿತು. ಆದರೆ ಅದು ಒಂದೇ ಜಾಗದಲ್ಲಿ ಸುಮಾರು 5 ನಿಮಿಷಕ್ಕಿಂತ ಹೆಚ್ಚು ಇದ್ದದ್ದು ಅದಕ್ಕ ಏನೋ ತೊಂದರೆ ಇದೆ ಎಂಬುದು ಗೊತ್ತಾಯಿತು. ನಾವು ಅದರ ಫೋಟೋಗಳನ್ನು ತೆಗೆಯುತ್ತಿದ್ದ ಹಾಗೆ ಅದು ಹಾರಿ ನಮ್ಮ ಮನೆಯ ಮೆಟ್ಟಲುಗಳ ಮೇಲೆ ಬಂದು ಕುಳಿತಿತು. ಇಲ್ಲಿ ಅಣ್ಣ ಮತ್ತು ಅಣ್ಣನ ಮಕ್ಕಳು ಅದಕ್ಕೆ ಅಕ್ಕಿ ಕಾಳು ಹಾಕಿದರು, ಆದರೆ ಅದು ಕಾಳನ್ನು ತಿನ್ನಲಿಲ್ಲ. ಸ್ವಲ್ಪ ಹೊತ್ತಿಗೆ ಅದು ಇನ್ನೊಂದು ಮನೆಯ ಕಡೆ ಹಾರಿತು, ಹಾಗೆ ಹಾರುವಾಗ ಅಲ್ಲೇ ಕಾಯುತ್ತಿದ್ದ ಮೂರ್ನಾಲ್ಕು ಕಾಗೆಗಳು ಆ ಬಣ್ಣದ ಪಕ್ಷಿಯ ಮೇಲೆ ದಾಳಿ ಮಾಡಿತು. ಬಣ್ಣದ ಪಕ್ಷಿ ಕಥೆ ಮುಗಿಯಿತೆಂದುಕೊಂಡೆವು, ಆದರೆ ಅದು ಇನ್ನೊಂದು ಮನೆಯ ಗ್ರಿಲ್‌ನ ಒಳಗೆ ಹೋಗಿ, ಕಾಗೆಗಳು ದಾಳಿಮಾಡಲಾಗದ ಜಾಗದಲ್ಲಿ ಸುರಕ್ಷಿತವಾಗಿ ಸೇರಿತು. ಇದು ಸುತ್ತಲಿದ್ದ ಮರಗಳನ್ನು ಹುಡುಕಿಕೊಳ್ಳದೆ ಮನೆಗಳನ್ನೇ ಆಶ್ರಯಿಸುತ್ತಿರುವುದು ನೋಡಿದ ಮೇಲೆ ಇದು ಯಾರ ಮಾನೆಯಲ್ಲೋ ಸಾಕಿದ್ದ ಪಕ್ಷಿಯೇ ತಪ್ಪಿಸಿಕೊಂಡು ಬಂದಿದೆ ಎಂದು ಖಾತ್ರಿಯಾಯಿತು.
ನಮ್ಮ ರಸ್ತೆಯಲ್ಲೇ ಒಬ್ಬರು ಇಂತಹ ಐದಾರು ಪಕ್ಷಿಗಳನ್ನು ಸಾಕಿದ್ದಾರೆ, ಅವರನ್ನು ಈ ಪಕ್ಷಿಯನ್ನು ತೆಗೆದುಕೊಳ್ಳಲು ಕೇಳಿದೆ, ಆದರೆ ಅವರು ಜಾಗದ ಅಭಾವದಿಂದಾಗಿ ನಿರಾಕರಿಸಿದರು. ನಮ್ಮ ಪಕ್ಷಿವೀಕ್ಷಕರ ಗುಂಪಿನಲ್ಲಿ ಈ ಪಕ್ಷಿಯ ಫೋಟೋ ಹಾಕಿ, ಇದನ್ನು ಏನು ಮಾಡಬಹುದೆಂದು ಕೇಳಿದೆ, ಅದಕ್ಕೆ ಗೆಳೆಯರು, ಇದನ್ನು ನೋಡಿಕೊಳ್ಳುವ ವೆಟರ್‌ನರಿ ವೈದ್ಯರು ತ್ಯಾಗರಾಜನಗರದಲ್ಲಿದ್ದಾರೆ, ಅವರಿಗೆ ಇದನ್ನು ಕೊಟ್ಟು 150 ರೂಪಾಯಿ ಕೊಟ್ಟರೆ, ಅವರು ಇದಕ್ಕೆ ಶುಶ್ರೂಶೆ ಮಾಡಿ ಅದು ಸರಿಯಾದ ಮೇಲೆ ಮುಕ್ತವಾಗಿ ಹಾರಲು ಬಿಡುತ್ತಾರೆ ಎಂದರು. ಆದರೆ ಇವೆಲ್ಲ ಆಗುವುದಕ್ಕೆ ಮೊದಲು ಪಕ್ಷಿಯನ್ನು ಹಿಡಿಯಬೇಕಲ್ಲವೇ, ಅದು ಹೇಗೆ ಸಾಧ್ಯ. ಒಂದು ರೊಟ್ಟಿನ ಡಬ್ಬ ಪಕ್ಷಿಯ ಮುಂದೆ ಇಟ್ಟೆವು, ಅದು ಅದರ ಒಳಗೆ ಹೋಗಲೇ ಇಲ್ಲ. ತಕ್ಷಣ ಪಕ್ಕದ ಮನೆಯ ಒಬ್ಬ ಹುಡುಗ ಬಂದು ಅದನ್ನು ಹಿಡಿದು ದಬ್ಬದೊಳಗೆ ಹಾಕಿದ. ಡಬ್ಬಕ್ಕೆ ಒಂದೆರಡು ತೂತುಗಳಿದ್ದು ಪಕ್ಷಿ ಉಸಿರಾಡುವುದಕ್ಕೆ ಏನೂ ತೊಂದರೆಯಾಗದಂತೆ ನೋಡಿಕೊಂಡೆವು. ಅಷ್ಟರಲ್ಲಿ ನನ್ನ ಅಣ್ಣನ ಮಗ, ನಮ್ಮ ಪಕ್ಕದ ರಸ್ತೆಯಲ್ಲಿರುವ ನಮ್ಮ ಬ್ಯಾಂಕಿನವರೇ ಆದ ಕೇದಾರಿ ಅವರು ಪಕ್ಷಿಗಳನ್ನು ಸಾಕಿದ್ದಾರೆ, ಅವರನ್ನು ಒಮ್ಮೆ ಕೇಳೋಣ ಎಂದ. ಕೇದಾರಿಯವರ ಮನೆಗೆ ಹೋದೆವು. ಅವರ ಮನೆಗೆ ಇಂತಹ ಸಾಕಷ್ಟು ಪಕ್ಷಿಗಳಿದ್ದು ಅವರು ಈ ಪಕ್ಷಿಯನ್ನು ತೆಗೆದುಕೊಳ್ಳಲು ಒಪ್ಪಿದರು. ಪಕ್ಷಿಯನ್ನು ಅವರಲ್ಲಿ ಕೊಟ್ಟು ಮನೆಗೆ ವಾಪಸ್ ಬಂದೆವು. ಪಕ್ಷಿಯನ್ನು ನೋಡಿ ಆನಂದಿಸಿದ್ದ ನಮ್ಮ ರಸ್ತೆಯ ಎಲ್ಲರಿಗೂ ಪಕ್ಷಿ ಒಳ್ಳೆಯ ಮನೆ ಸೇರಿತೆಂಬ ಸಂತೋಷ.
ಹಾಗಾದರೆ ಶೀರ್ಷಿಕೆಯಲ್ಲಿ ಚಿತ್ರಗುಪ್ತನ ಲೆಕ್ಕ ಎಂದು ಏಕೆ ಬರೆದಿರುವೆ ಎಂದು ನೀವು ಯೋಚಿಸುತ್ತಿರಬಹುದು. ಹೌದು, ಪಕ್ಷಿ ಕೊಟ್ಟು ಬಂದ ಮೇಲೆ ನನ್ನ ಮನಸ್ಸು ಯೋಚಿಸಿದ್ದು ಹೀಗೆ; ನನ್ನ ಈ ದಿನದ ಜೀವನದನುಭವ ಚಿತ್ರಗುಪ್ತನ ಲೆಕ್ಕ ಪುಸ್ತಕಗಳಲ್ಲಿ ಪುಣ್ಯವಾಗಿ ಸೇರುತ್ತದೆಯೋ ಅಥವಾ ಪಾಪವಾಗಿ ಸೇರಿಕೊಳ್ಳುತ್ತದೆಯೋ ಎಂದು.
ಮೊದಲನೆಯದಾಗಿ, ಈ ಪ್ರಕೃತಿಯಲ್ಲಿ ನಡೆಯುತ್ತಿರುವುದೆಲ್ಲಾ ಒಂದು ನಾಟಕದ ಹಾಗೆ, ನಾವು ವೀಕ್ಷಕರಷ್ಟೇ ಎನ್ನುವ ಪ್ರಕೃತಿ ಪ್ರಿಯರ ಮಾತುಗಳನ್ನು ನಂಬುವುದಾದರೆ, ನಾನು ಇಂದು ಕಾಗೆಗಳಿಂದ ಅದರ ಊಟವನ್ನು ಕಸಿದುಕೊಂಡಿದ್ದೇನೆ, ಹಾಗಾಗಿ ಲೆಕ್ಕಕ್ಕೆ ಪಾಪವೇ ಸೇರಿಕೊಳ್ಳುತ್ತದೆ.
ಎರಡನೆಯದಾಗಿ, ಗೆಳೆಯರು ಹೇಳಿದ ಹಾಗಿ ತ್ಯಾಗರಾಜನಗರದ ವೆಟರ್‌ನರಿ ವೈದ್ಯರಿಗೆ ಇದನ್ನು ಕೊಟ್ಟಿದ್ದರೆ, ಅವರು ಅದಕ್ಕೆ ಶುಶ್ರೂಶೆ ಮಾಡಿ ಮುಕ್ತವಾಗಿ ಹಾರಲು ಬಿಡುತ್ತಿದ್ದರು. ಆದರೆ ಅದು ಮುಕ್ತವಾಗಿರುವ ಅವಕಾಶವನ್ನು ನಾನು ತಪ್ಪಿಸಿದೆ. ಹಾಗಾಗಿ ಮತ್ತೇ ಚಿತ್ರಗುಪ್ತನ ಲೆಕ್ಕಕ್ಕೇ ಪಾಪವೇ ಸೇರಿಕೊಳ್ಳುತ್ತದೆ.
ಮೂರನೆಯದಾಗಿ, ಕಾಗೆಗಳ ದಾಳಿಗೆ ಹೆದರಿ ಜೀವ ಭಿಕ್ಷೆ ಬೇಡಿ ಬಂದ ಪಕ್ಷಿಗೆ ನಾನು ಅದಕ್ಕೆ ಅನುಕೂಲವಾಗುವಂತಹ ಯಾವುದೇ ಜೀವ ಬೆದರಿಕೆಯೂ ಇಲ್ಲದಂತಹ ಸ್ಥಳಕ್ಕೆ ಸೇರಿಸಿದ್ದೇನೆ. ಹಾಗಾಗಿ ಈ ವಿಷಯದಲ್ಲಿ ಪುಣ್ಯವೇ ಲೆಕ್ಕಕ್ಕೆ ಸೇರುತ್ತದೆ.
ಕಡೆಗೆ ನಾನು ಯೋಚಿಸಿದ್ದು ಪಾಪ, ಪುಣ್ಯ ಇದರ ಲೆಕ್ಕ ಒಂದುಕಡೆಯಾದರೆ, ಆ ಸಮಯಕ್ಕೆ ನಾನು ಏನು ಮಾಡಬೇಕೆಂಬುದು ಕೂಡ ದೇವರು ನಿಶ್ಚಯಿಸಿದ್ದೇ ಅಲ್ಲವೇ. ಹಾಗಾಗಿ ನಾನು ಏನು ಮಾಡಿದೆನೋ ಅದನ್ನು ದೇವರೇ ಮಾಡಿಸಿದ್ದೆಂದು ತೀರ್ಮಾನ ಮಾಡಿ ನನ್ನ ಚಿತ್ರಗುಪ್ತನ ಲೆಕ್ಕದ ಚಿಂತನೆಗೆ ಪೂರ್ಣವಿರಾಮ ಹಾಕಿದೆ.
ಇನ್ನೊಂದು ವಿಷಯ ಹೇಳೋದು ಮರೆತಿದ್ದೆ, ಈ ಪಕ್ಷಿಯ ಹೆಸರು ಬಡ್‌ಜರಿಗರ್.