ಚೆನ್ನೈನ್ ನಮ್ಮ ಬ್ಯಾಂಕಿನ ಒಂದು ದೊಡ್ಡ ವಿಭಾಗಕ್ಕೆ ನನಗೆ ವರ್ಗಾವಣೆಯಾಗಿತ್ತು. ದೊಡ್ಡದೆಂದರೆ ಊಹಿಸಲೂ ಸಾಧ್ಯವಾಗದಷ್ಟು. ಪೂರ್ತಿ ದಕ್ಷಿಣ ಭಾರತದ ನಮ್ಮ ಬ್ಯಾಂಕ್ ಶಾಖೆಗಳಿಗೆ ಸೇವೆ ನೀಡುತ್ತಿದ್ದ ವಿಭಾಗವದು. ಹಾಗಾಗಿ ನಾಲ್ಕೂ ರಾಜ್ಯಗಳ ಅಧಿಕಾರಿಗಳು ಅಲ್ಲಿದ್ದೆವು. ಒಟ್ಟಾರೆ 120 ಅಧಿಕಾರಿಗಳು ಹಾಗೂ 250ಕ್ಕೂ ಹೆಚ್ಚು ಗುಮಾಸ್ತೆ ಹುದ್ದೆಯವರು. ಎರಡು ಶಿಫ್ಟ್‌ಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಮತ್ತು ಮಧ್ಯಾಹ್ನ 2ರಿಂದ ರಾತ್ರಿ 9 ಗಂಟೆವರೆಗೆ. ಮಧ್ಯಾಹ್ನ ಕೆಲಸಕ್ಕೆ ಬರುವವರಿಗೆ ಸಂಜೆಯ ತಿಂಡಿ ಬ್ಯಾಂಕ್ ಕಡೆಯಿಂದ ನೀಡಲಾಗುತ್ತಿತ್ತು. ಅಷ್ಟೇ ಅಲ್ಲ ಕಛೇರಿಯ ಕೆಲಸದ ವೇಳೆ ಸಾಮಾನ್ಯಕ್ಕಿಂತ ವಿಭಿನ್ನವಾಗಿದ್ದರಿಂದ ಪ್ರತಿಯೊಬ್ಬರಿಗೂ ದಿನಕ್ಕೆ 120 ರೂಪಾಯಿ ಹೆಚ್ಚಿನ ಭತ್ಯೆಯನ್ನು ಶಿಫ್ಟ್ ಭತ್ಯೆ ಎಂಬ ಹೆಸರಲ್ಲಿ ನೀಡುತ್ತಿದ್ದರು.
ಬ್ರಹ್ಮಚಾರಿಗಳಾದ ಶಾಸ್ತ್ರಿಗಳು ಮದುವೆಯ ಉಡುಗೊರೆ ಅಂತ ಶೀರ್ಷಿಕೆ ಕೊಟ್ಟು ಈಗಾಗಲೇ ನಮಗೆ ತಲೆ ಕೆಡಿಸಿದ್ದಾರೆ, ಮತ್ತು ಈಗ ನೋಡಿದರೆ ನಮಗೆ ಏನೂ ಸಂಬಂಧವಿಲ್ಲದ ಈ ಚೆನ್ನೈ ಕಛೇರಿಯ ವಿಷಯ ಯಾಕೆ ತಿಳಿಸುತ್ತಿದ್ದಾರೆಂದು ನೀವು ಯೋಚಿಸುತ್ತಿದ್ದೀರಿ ಅಲ್ಲವೇ. ಇರಲಿ ನಾನು ಮುಂದೆ ಬರೆಯುವ ವಿಷಯಕ್ಕೂ ಮತ್ತು ಈ ಮೇಲೆ ತಿಳಿಸಿದ ವಿಷಯಕ್ಕೂ ಸಾಕಷ್ಟು ಸಂಬಂಧವಿರುವುದು ನೀವೇ ಕಂಡುಕೊಳ್ಳುತ್ತೀರಿ.
ಚೆನ್ನೈ ಕಛೇರಿಗೆ ಸೇರಿ ನಾಲ್ಕು ದಿನವಾಗಿತ್ತು. ನನ್ನ ಸೀಟಿನ ಬಳಿ ಐದಾರು ಜನ ಬಂದರು, ಅದರಲ್ಲಿ ಒಂದಿಬ್ಬರು ನಮ್ಮ ವಿಭಾಗದವರೇ ಎಂದು ತಿಳಿಯಿತು. ಅವರಿಬ್ಬರೂ ಮೂರನೇ ವ್ಯಕ್ತಿಯೊಬ್ಬನನ್ನು ಪರಿಚಯಮಾಡಿಕೊಟ್ಟರು. *ಇವರು ಸ್ಥಳೀಯ ಪ್ರಧಾನ ಕಛೇರಿಯಲ್ಲಿ ಗುಮಾಸ್ತರಾಗಿದ್ದಾರೆ, ಇವರ ಮಗಳ ಮದುವೆ ಮುಂದಿನ ವಾರ ಇದೆ, ನಿಮ್ಮನ್ನು ಆಹ್ವಾನಿಸಲು ಬಂದಿದ್ದಾರೆ* ಎಂದು ತಿಳಿಸಿದರು. ಆಹಾ, ಎಂತಹ ಊರಪ್ಪ ಇದು, ಪರಿಚಯ ಇರುವವರನ್ನೇ ಕಾರ್ಯಕ್ರಮಗಳಿಗೆ ಕರೆಯದೇ ಇರುವ ಈ ಕಾಲದಲ್ಲಿ ಎಷ್ಟು ಆತ್ಮೀಯತೆ ಅಂತ ಬಹಳ ಸಂತೋಷಪಟ್ಟೆ. ಆ ಮೂರನೇ ವ್ಯಕ್ತಿ ನನ್ನ ಹೆಸರು ಕೇಳಿ ಮದುವೆ ಕರೆಯೋಲೆ ಮೇಲೆ ಹೆಸರು ಬರೆದು ಜೊತೆಗೆ ಅಕ್ಷತೆಯನ್ನು ಸೇರಿಸಿ ಕೊಟ್ಟರು. *ಒಂದು ಕರೆಯೋಲೆಗೆ ಕನಿಷ್ಟ 10 ರಿಂದ 15 ರೂಪಾಯಿ ಖರ್ಚು ಆಗುತ್ತದೆ, ಕಛೇರಿಯವರಿಗೆಲ್ಲಾ ಸೇರಿ ಒಂದೇ ಕರೆಯೋಲೆ ಕೊಟ್ಟಿದ್ದರೆ ಸಾಕಾಗಿತ್ತಲ್ಲವೇ* ಎಂದು ಹೇಳಿದೆ. *ಇಲ್ಲಾ ಸಾರ್ ಈ ಕಛೇರಿಗೆಂದೇ ಸುಮಾರು 400 ಕರೆಯೋಲೆಗಳನ್ನು ಮುದ್ರಿಸಿ ತಂದಿದ್ದೇನೆ* ಎಂದರು ಆ ಮೂರನೇ ವ್ಯಕ್ತಿ. ಯಾಕೋ ನನಗೆ ಇದು ಸರಿಯಲ್ಲ ಅನಿಸಿತು. ಮೊದಲೇ ಹೊಸ ಊರು, ನಮಗ್ಯಾಕೆ ಉಸಾಬರಿ ಅಂತ ಸುಮ್ಮನಾದೆ.
ಮದುವೆಯ ದಿನಕ್ಕೆ ಎರಡು ದಿನ ಮುಂಚೆ ಅಂದು ಗುಂಪಿನಲ್ಲಿ ಬಂದಿದ್ದ ನಮ್ಮ ಕಛೇರಿಯ ಇಬ್ಬರು ಸಿಬ್ಬಂದಿ ಒಂದು ನೋಟ್‌ಬುಕ್ ಕೈಯಲ್ಲಿ ಹಿಡದುಕೊಂಡು ನನ್ನ ಬಳಿಗೆ ಬಂದರು. ಆ ಪುಸ್ತಕದಲ್ಲಿ ಕಛೇರಿಯ ಎಲ್ಲಾ ಸಿಬ್ಬಂದಿ ಹೆಸರುಗಳು ಬರೆದಿತ್ತು. *ಸಾರ್ ಕಳೆದ ವಾರ ನಿಮಗೆ ಆಮಂತ್ರಣ ಬಂತೆಲ್ಲಾ, ಅದಕ್ಕಾಗಿ ಹುಡುಗಿಗೆ ಉಡುಗೊರೆ ಕೊಡಲು ಹಣ ಕಲೆಹಾಕುತ್ತಿದ್ದೇವೆ. ನೀವು ನೂರು ರೂಪಾಯಿ ಕೊಡಬೇಕು* ಎಂದರು. ಸರಿ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ನೂರು ರೂಪಾಯಿ ದೊಡ್ಡದೇನಲ್ಲ, ನಾನು ಕೊಟ್ಟೆ. ಆ ನಂತರ ತಿಳಿದದ್ದು ಈ ರೀತಿ ಮದುವೆ ಆಮಂತ್ರಣಕ್ಕೆ ಪ್ರತಿ ಅಧಿಕಾರಿ ನೂರು ರೂಪಾಯಿ ಕೊಡಬೇಕು ಮತ್ತು ಪ್ರತಿ ಗುಮಾಸ್ತರು 50 ರೂಪಾಯಿ ಕೊಡಬೇಕೆಂದು ಈ ಕಛೇರಿಯಲ್ಲಿ ಹಿಂದಿನಿಂದ ನಡೆದುಕೊಂಡುಬಂದಿದೆ ಎಂದು. ಸುಮಾರು 25 ಸಾವಿರ ರೂಪಾಯಿ ಒಟ್ಟು ಹಣ ಸೇರಿತ್ತು, ಅದಕ್ಕೆ ಒಂದು ದೊಡ್ಡ ಬೆಳ್ಳಿಯ ಪದಾರ್ಥ ಕೊಂಡುಕೊಂಡಿದ್ದನ್ನು ಮಾರನೇ ದಿನ ಕಛೇರಿಯಲ್ಲಿ ಎಲ್ಲರಿಗೂ ತೋರಿಸಿದರು. ಹುಚ್ಚಲ್ಲ ಬೆಪ್ಪಲ್ಲ ಶಿವಲೀಲೆ ಅಂದುಕೊಂಡು ನಾನು ನಕ್ಕು ಸುಮ್ಮನಾದೆ. ಆದರೆ ಹಿಂದಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮುಖದಲ್ಲಿ ಯಾವುದೇ ಸಂತೋಷವಂತು ನಾನು ಕಾಣಲಿಲ್ಲ. ಸುಮ್ಮನೆ ನೂರು ರೂಪಾಯಿ ಕೊಡಲು ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೆ ಅಂದುಕೊಂಡೆ.
ಇವೆಲ್ಲಾ ಪೀಠಿಕೆಯಾಯ್ತು, ನಿಜವಾದ ಕಥೆ ಆರಂಭವಾಗುವುದು ಈಗ. ನನಗೆ ಬಂದ ಮೊದಲ ಆಮಂತ್ರಣದ ಮದುವೆ ಮುಗಿದಿತ್ತು. ಆ ಮದುವೆಯ ಆರತಕ್ಷತೆಯಲ್ಲಿ ನಮ್ಮ ಸಿಬ್ಬಂದಿ ತಂದಿದ್ದ ಬೆಳ್ಳಿ ಬಿಂದಿಗೆಯನ್ನು ತಲೆ ಮೇಲೆ ಇಟ್ಟುಕೊಂಡು ಅಲ್ಲಿ ಮದುವೆ ಮನೆಯಲ್ಲಿ ನೆರೆದಿದ್ದ ಎಲ್ಲರಿಗೂ ಕೇಳುವಂತೆ ನಮ್ಮ ವಿಭಾಗದ ಹೆಸರನ್ನು ಜೋರಾಗಿ ಕೂಗಿ ಹೇಳಿದರಂತೆ.
ಇನ್ನೆರೆಡು ದಿನಕ್ಕೆ ಮತ್ತೇ ಅದೇ ರೀತಿ ಗುಂಪು ಜನ ನನ್ನ ಬಳಿ ಬಂದರು, ಮತ್ತೇ ಅದೇ ಪೀಠಿಕೆ, ಅದೇ ರೀತಿಯ ವ್ಯಕ್ತಿಪರಿಚಯ, ಮತ್ತು ಅದೇ ರೀತಿಯ ಮದುವೆ ಆಮಂತ್ರಣ. ವ್ಯಕ್ತಿ ಮತ್ತು ಮದುವೆಯಾಗುತ್ತಿರುವ ಗಂಡು ಹೆಣ್ಣು ಮಾತ್ರ ಬೇರೆ. ಆಗ ನನ್ನ ಪಕ್ಕದಲಿದ್ದ ಅಲ್ಲಿನ ಸ್ಥಳೀಯ ಸಿಬ್ಬಂದಿಗೆ ನಾನು ವಿಚಾರಿಸಿದೆ. *ಈ ರೀತಿ ಎಷ್ಟು ಆಮಂತ್ರಣ ಬರುತ್ತದೆ, ಮತ್ತು ನಾವು ತಿಂಗಳಿಗೆ ಎಷ್ಟು ಜನರಿಗಾಗಿ ನೂರು ರೂಪಾಯಿಗಳನ್ನು ಕೊಡಬೇಕಾಗುತ್ತದೆ* ಎಂದು. *ಸಾರ್ ಒಳ್ಳೆಯ ಮದುವೆ ಸೀಸನ್‌ನಲ್ಲಿ ನಿಮಗೆ ಕನಿಷ್ಟವೆಂದರೂ 10ರಿಂದ 15 ಆಮಂತ್ರಣ ಬರುತ್ತದೆ. ನಮ್ಮ ಹೆಡ್ ಆಫೀಸ್ ಮತ್ತು ಜೋನಲ್ ಆಫೀಸ್ ಸಿಬ್ಬಂದಿಗೆ ಚೆನ್ನಾಗಿ ಗೊತ್ತಾಗಿಹೋಗಿದೆ, ಮಕ್ಕಳ ಮದುವೆ ಮಾಡುತ್ತಿರುವ ಎಲ್ಲರೂ ಮದುವೆಯ 400 ಕಾರ್ಡ್ ಮುದ್ರಿಸುತ್ತಾರೆ, ಇಲ್ಲಿ ತಂದು ಹಂಚುತ್ತಾರೆ. ಹೆಚ್ಚು ಮಾತನಾಡಲು ಹೋದರೆ, ನಿಮಗೆ ಶಿಫ್ಟ್ ಭತ್ಯೆ ಬರುತ್ತಿದೆಯಲ್ಲಾ, ಹಾಗಾಗಿ ಈ ಉಡುಗೊರೆಯ ದುಡ್ಡು ದೊಡ್ಡದೇನಲ್ಲ ಎನ್ನುತ್ತಾರೆ ಇಲ್ಲಿನ ಕೆಲವು ಹಿರಿಯ ಸಹೋದ್ಯೋಗಿಗಳು* ಎಂದರು ಆ ಸಿಬ್ಬಂದಿ.
ಈ ರೀತಿ ಆಮಂತ್ರಣಗಳಿಗೆ ಬೇರೆ ಸಿಬ್ಬಂದಿ ಯಾಕೆ ಮುಖ ಸಪ್ಪೆ ಮಾಡಿಕೊಳ್ಳುತ್ತಿದ್ದರೆಂದು ಆಗ ನನಗೆ ಅರಿವಾಯಿತು. ಈ ವಿಷಯ ಹೆಚ್ಚು ಹರಡುತ್ತಿದ್ದಂತೆ, ಇನ್ನು ಮುಂದೆ ಹೆಡ್ ಆಫೀಸೇ ಅಲ್ಲದೇ ಬೇರೆ ಶಾಖೆಗಳಲ್ಲಿ ಯಾರಾದರೂ ತಮ್ಮ ಮಕ್ಕಳಿಗೆ ಮದುವೆ ಮಾಡಿದರೆ, 400 ಕಾರ್ಡ್ ಮುದ್ರಿಸಿ ಆಹ್ವಾನಿಸಲು ಬರಬಹುದೆಂಬ ಅನುಮಾನವೂ ನಮ್ಮಲ್ಲೆಲ್ಲಾ ಹುಟ್ಟಿತು.
ಏನೇ ಹೇಳಿ, ಹಣ ಹೋದರೂ ಪರವಾಗಿಲ್ಲ ಸಮಾಧಾನವಾಗಿರಲು ಬಿಟ್ಟರೆ ಸಾಕು ಎಂಬುವರು ನಮ್ಮ ಕನ್ನಡಿಗರಷ್ಟೇ . ಆದರೆ ಕರ್ನಾಟಕದಿಂದ ಹೋದ 18 ಅಧಿಕಾರಿಗಳ ಜೊತೆ, ಆಂಧ್ರ ಪ್ರದೇಶದಿಂದ ಬಂದ 40 ಅಧಿಕಾರಿಗಳೂ ಅಲ್ಲಿ ಇದ್ದರು. ಅವರುಗಳಿಗೆ ಇದೇಕೋ ಸರಿ ಬರಲಿಲ, ಜೊತೆಗೆ ಅವರ ಮುಂದಾಳತ್ವದಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಲು ಅವರ ಧ್ವನಿಗೆ ನಾವೂ ತಾಳ ಹಾಕಿದೆವು. ಬೇರೆ ಬಾರೆ ವೇದಿಕೆಗಳಲ್ಲಿ ಇದರ ಬಗ್ಗೆ ಚರ್ಚೆಯಾಯಿತು. ಇಷ್ಟೋಂದು ದುಬಾರಿ ಉಡುಗೊರೆಗಳನ್ನು ಕೊಡುವುದರಲ್ಲಿ ಅರ್ಥವಿಲ್ಲ, ಅದರಲ್ಲೂ ಪರಿಚಯವೇ ಇಲ್ಲದವರಿಗೆ ಆಮಂತ್ರಣ ನೀಡಿ 400 ಕಾರ್ಡ್‌ಗಳನ್ನು ಬೇರೆ ವೇಸ್ಟ್ ಮಾಡುತ್ತಿದ್ದಾರೆ, ಇವೆಲ್ಲವನ್ನೂ ನಿಲ್ಲಿಸಬೇಕೆಂದು ನಿಶ್ಚಯವಾಯಿತು. ಕಡೆಗೆ, ಯಾವುದೇ ಈ ರೀತಿಯ ಪ್ರತಿ ಆಮಂತ್ರಣಕ್ಕೆ ಅಧಿಕಾರಿಗಳು 20 ರುಪಾಯಿ ಮತ್ತು ಬೇರೆ ಸಿಬ್ಬಂದಿ 10 ರೂಪಾಯಿ ಕೊಡಬೇಕೆಂದು ಆಂಧ್ರದ ಅಧಿಕಾರಿಗಳು ಶಿಫಾರಸ್ಸು ಮಾಡಿದರು, ನಾವು ಅದಕ್ಕೆ ಅನುಮೋದನೆ ನೀಡಿದೆವು. ಇದನ್ನು ಎಲ್ಲರೂ ಒಪ್ಪಿದರು.
ಈ ರೀತಿ ನಿಶ್ಚಯವಾಗಿದ್ದು ಅದೆಷ್ಟು ಬೇಗೆ ಹೊರಗಿನವರಿಗೆ ತಿಳಿಯಿತೋ ಗೊತ್ತಿಲ್ಲ, ಮಾರನೇ ದಿನದಿಂದಲೇ ಆಮಂತ್ರಣಗಳು ಬರುವುದು ನಿಂತುಹೋಯಿತು.
ಪಾಪ ಎರಡು ಮೂರು ದಿನಕ್ಕೊಮ್ಮೆ 400 ಕಾರ್ಡ್ ಮುದ್ರಿಸುತ್ತಿದ್ದ ಆ ಪ್ರಿಂಟಿಂಗ್ ಪ್ರೆಸ್‌ನವನು ನಮ್ಮನ್ನು ಅದೆಷ್ಟು ಬೈದುಕೊಂಡನೋ ಗೊತ್ತಿಲ್ಲ.