ಆಗ ಬ್ಯಾಂಕಿನ ಬೆಂಗಳೂರು ವೃತ್ತಕ್ಕೆ ಇದ್ದವರು ಮಹಿಳಾ ಸಿ.ಜಿ.ಎಮ್. ವೃತ್ತದ ಮೇಲಧಿಕಾರಿಗಳೆಲ್ಲ ನಮ್ಮ ಜಿಎಮ್ ಕ್ಯಾಬಿನ್ ನಲ್ಲಿ ಸೇರಿದ್ದರು. ಎಲಾ ಸೇರಿ ಸಿಜಿಎಮ್‌ಗೆ ದೊಡ್ಡದೊಂದು ಹೂವಿನ ಗೊಂಚಲು, ಒಂದು ಸ್ವೀಟ್ ಡಬ್ಬ ಹಾಗೂ ಒಂದು ಗಿಫ್ಟ್ ತಂದಿದ್ದರು. ಎರಡು ಜಿ.ಎಮ್‌ಗಳು ಒಬ್ಬರು ಸ್ವೀಟ್ ಡಬ್ಬ ಮತ್ತೊಬ್ಬರು ಗಿಫ್ಟ್ ಕೊಡುವುದಾಗಿ ನಿರ್ಧಾರವಾಯಿತು. ಈಗ ಹೂವಿನ ಗೊಂಚಲು, ಇದ್ದ ಆರು ಡಿಜಿಎಮ್‌ಗಳಲ್ಲಿ ಯಾವ ಡಿಜಿಎಮ್ ಕೊಡುವುದು ಎಂದು ನಿರ್ಧರಿಸಬೇಕಿತ್ತು. ಇಂತಹ ಸಮಯದಲ್ಲಿ ಆಪ್ತ ಕಾರ್ಯದರ್ಶಿಗಳನ್ನು ತಮಾಷೆಗಾಗಿ ಏನು ಮಾಡಬಹುದೆಂದು ಪ್ರಶ್ನಿಸುತ್ತಾರೆ. ಹಾಗೇ ನನ್ನನ್ನು ಕೇಳಿದರು. ನಮ್ಮ ಜಿ.ಎಮ್ ತಕ್ಷಣ ವಿಚಿತ್ರವಾದ ಸಲಹೆ ಗುರು ಕೊಡುವುದರಲ್ಲಿ ಅನುಮಾನವೇ ಇಲ್ಲ, ಕಾದು ನೋಡಿ ಎಂದರು.
ಇಂದು ಮಾರ್ಚ್ 8, ಬೆಳಗ್ಗೆ ಎದ್ದ ಕೂಡಲೇ ಯಾವ ಡಿ.ಜಿ.ಎಮ್ ಮೊದಲು ತಮ್ಮ ಹೆಂಡತಿಗೆ ಮಹಿಳಾ ದಿನಾಚರಣೆಗಾಗಿ ಶುಭ ಹಾರೈಸಿರುತ್ತಾರೋ ಅವರು ಸಿ.ಜಿ.ಎಮ್ ಗೆ ಹೂವಿನ ಗೊಂಚಲು ಕೊಡಲು ಅರ್ಹರು ಎಂದೆ, ತಕ್ಷಣ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರಲ್ಲಿ ಯಾರೂ ತಮ್ಮ ಹೆಂಡತಿಗೆ ಶುಭ ಹಾರೈಸಿರಲಿಲ್ಲ. ಅವರ ಕಷ್ಟ ಗೊತ್ತಾಗಿ ತಕ್ಷಣ ಇನ್ನೂ 5 ಹೂವಿನ ಗೊಂಚಲು ತರಿಸಿ ಎಲ್ಲರ ಕೈಲೂ ಒಂದೊಂದನ್ನು ಕೊಟ್ಟೆ. ಎಲ್ಲರೂ ಸಿಜಿಎಮ್‌ಗೆ ಒಂದೊಂದು ಹೂವಿನ ಗೋಂಚಲು ಕೊಟ್ಟರು.
ಎಲ್ಲರೂ ಸಿ.ಜಿ.ಎಮ್ ಬಳಿಗೆ ಹೋಗಿ ಬಂದ ಮೇಲೆ, ಜಿ.ಎಮ್ ನನ್ನನ್ನು ಕ್ಯಾಬಿನ್‌ಗೆ ಕರೆದು, ಕುಳಿತುಕೊಳ್ಳಲು ಹೇಳಿ, ತಮ್ಮ ಹೆಂಡತಿಗೆ ಫೋನ್ ಮಾಡಿ ಮಹಿಳಾ ದಿನಾಚರಣೆಗೆ ಶುಭ ಹಾರೈಸಿ, ಈಗ ಸಮಾಧಾನಾ ಆಯ್ತಾ ಎಂದು ನನ್ನನ್ನು ಕೇಳಿದರು. ನಾನು ನಕ್ಕು ಸುಮ್ಮನಾದೆ. ಈ ಘಟನೆಯಾದ ಸುಮಾರು ಮುಂದಿನ ಮೂರು ವರ್ಷ ಆ ಡಿಜಿಎಮ್‌ಗಳಲ್ಲಿ ಕೆಲವರೂ ಮಾರ್ಚ 8 ರಂದು ಮೊದಲು ತಮ್ಮ ಹೆಂಡತಿಗೆ ಶುಭ ಹಾರೈಸಿ ನನಗೆ ಮೊಬೈಲ್ ಸಂದೇಶ ಕಳಿಸಿ ಖಾತ್ರಿ ಪಡಿಸುತ್ತಿದ್ದರು. ಇತ್ತೀಚೆಗೆ ಸಂದೇಶ ಬರುತ್ತಿಲ್ಲ, ಆದರೆ ಅವರುಗಳು ತಮ್ಮ ತಮ್ಮ ಹೆಂಡತಿಯರಿಗೆ ಮೊದಲು ಶುಭ ಹಾರೈಸುವುದನ್ನು ಮರತಿರುವುದಿಲ್ಲ ಎಂಬ ಖಾತ್ರಿ ನನಗೆ ಇದೆ.