ಯಾರ ಅನ್ನದ ಋಣ ಎಲ್ಲಿರುತ್ತದೆ ಎಂಬುದು ತುಂಬಾ ನಿಗೂಢವಾದ ವಿಷಯ. ಹಾಗೇ ನಮ್ಮ ಮನೆ ಅನ್ನ ಮತ್ತು ಹಾಲಿನ ಋಣ ಈ ಸಿಂಬಕ್ಕೆ ಬರೆದಿತ್ತು ಅನಿಸುತ್ತೆ.
ಅದು ಜೂನ್ ತಿಂಗಳು 15ನೇ ತಾರೀಖು, ಮನೆಯ ಹೊರಗಡೆ ಯಾವುದೋ ಪ್ರಾಣಿ ಸತ್ತಿರುವ ವಾಸನೆ. ಎಲ್ಲಾ ಕಡೆ ಹುಡುಕುತ್ತಿರುವಾಗ ಪಕ್ಕದ ಮನೆಯವರು ಓಡಿ ಬಂದರು "ನಮ್ಮ ಮನೆಯ ಗ್ಯಾರೇಜಿನಲ್ಲಿ ಒಂದು ದೊಡ್ಡ ಬೆಕ್ಕು ಸತ್ತಿದೆ" ಎಂದರು. ಅಷ್ಟರಲ್ಲಿ ಅಣ್ಣನ ಮಗ ನಮ್ಮ ಮನೆಯ ಮೇಲಿನಿಂದ ಕೂಗಿ ಹೇಳಿದ "ಮಹಡಿಯ ಮೇಲೆ ಪುಟ್ಟ ಬೆಕ್ಕಿನ ಮರಿ ಇದೆ" ಎಂದು. ಆ ದಿನ ತಾಯಿ ಬೆಕ್ಕು ಮರಿಯನ್ನು ಹಾಕಿ ಪಕ್ಕದಮನೆಯ ಗ್ಯಾರೇಜಿನಲ್ಲಿ ಸತ್ತಿತ್ತು.
ನಮ್ಮದೋ ವೈದಿಕ ಕುಟುಂಬ. ಪ್ರಾಣಿಗಳನ್ನು ಸಾಕುವುದು ನಮ್ಮ ಹಣೆಯಲ್ಲೇ ಬರೆದಿಲ್ಲ. ಹೀಗಿರುವಾಗ ಈ ಬೆಕ್ಕಿನ ಮರಿಯನ್ನು ಉಳಿಸುವುದಾದರೂ ಹೇಗೆ. ಗೆಳೆಯರನ್ನೆಲ್ಲಾ ವಿಚಾರಿಸಿದೆ. ಕೆಲವರು ಎಲ್ಲಾದರೂ ದೂರದ ಮೋರಿಯಲ್ಲಿ ಬಿಟ್ಟುಬಿಡಲು ಹೇಳಿದರು, ಆದರೆ ಆ ಮರಿಯನ್ನು ನೋಡಿದರೆ ವ್ಯಾಘ್ರ ಮನಸ್ಸಿರುವವರು ಕೂಡ ಹಾಗೆ ಮಾಡಲು ಸಾಧ್ಯವಿರಲಿಲ್ಲ. ಮೊದಲೇ ಬೀದಿನಾಯಿಗಳ ಸಾಮ್ರಾಜ್ಯವಾಗಿರುವ ನಮ್ಮ ಶ್ರೀನಗರದಲ್ಲಿ ಈ ಬೆಕ್ಕಿನ ಮರಿ ಯಾವುದಾದರು ನಾಯಿಯ ಕೋರೆ ಹಲ್ಲಿಗೆ ಸಿಕ್ಕಿಹಾಕಿಕೊಳ್ಳುವುದಂತೂ ಸತ್ಯ.
ಇಂತಹ ಅನಾಥ ಬೆಕ್ಕುಗಳನ್ನು ಸಾಕುವವರೇ ಇದ್ದಾರೆ, ಅಂತರ್ಜಾಲದಲ್ಲಿ ಅವರ ಮೊಬೈಲ್ ನಂಬರ್ ಹುಡುಕಿ ಫೋನ್ ಮಾಡಿ ಎಂದರು ಕೆಲವರು. ಹಾಗೇ ಹುಡುಕಿದಾಗ ನಮಗೇ ಬೆಕ್ಕನ್ನು ಸಾಕಲು ಅವರು ಒತ್ತಡ ಹಾಕಿದರು. ಬೇಕಾದರೆ ಇನ್ನೊಂದೆರೆಡು ಬೆಕ್ಕುಗಳನ್ನು ಜೊತೆಗೆ ಕೊಡುವುದಾಗಿ ತಿಳಿಸಿದರು. ಈ ಯೋಜನೆಯೂ ಫಲಕಾರಿಯಾಗುವುದಿಲ್ಲ ಅಂತ ನಮಗೆ ಖಾತ್ರಿಯಾಯಿತು. "ಒಂದೆರೆಡು ದಿನ ಹಾಲು ಹಾಕಿ ಬೆಳೆಸಿ, ಆಮೇಲೆ ತನಗೆ ಬೇಕಾದ ಇಲಿ ಹೆಗ್ಗಣ ಹುಡುಕಿಕೊಂಡು ಓಡಿಹೋಗುತ್ತದೆ" ಎಂದರು ಕೆಲವರು. ಇದು ಸರಿ ಅನಿಸಿತು ನಮಗೆಲ್ಲಾ. ಆದರೆ ಮನೆಯಲ್ಲಿರುವ ಮಕ್ಕಳು ಅದಕ್ಕೆ ಭಾವನಾತ್ಮಕವಾಗಿ ಹೊಂದಿಕೊಂಡುಬಿಟ್ಟರೆ, ಅದು ಓಡಿಹೋದಾಗ ಇವರನ್ನು ತಡೆಯೋದು ತುಂಬಾ ಕಷ್ಟ ಅಂತ ನನಗೆ ಗೊತ್ತಿತ್ತು. ನಾಯಿ ಸಾಕಿದ್ದ ನನ್ನ ಗೆಳೆಯರ ಮನೆಯಲ್ಲಿ ನಾಯಿ ಸತ್ತಾಗ ಅವರುಗಳು ನಡೆದುಕೊಂಡಿದ್ದ ರೀತಿ ನಾನು ನೋಡಿದ್ದೆ.
ಯಾವುದಕ್ಕೂ ಇರಲಿ ಎಂದು ಹಾಲು ಹಾಕಿ ಸಾಕಲು ಆರಂಭಿಸಿದರು ಅಣ್ಣನ ಮಕ್ಕಳು. ಅದಕ್ಕೆ "ಸಿಂಬ" ಎಂದು ನಾಮಕರಣವನ್ನೂ ಮಾಡಿದರು. ಯಾವುದೇ ಕಾರಣಕ್ಕೂ ಮನೆಯ ಮೇಲಿರುವ ಬೆಕ್ಕಿನ ಮರಿ ಮನೆ ಒಳಗೆ ಬರಬಾರದು ಎಂಬುದು ಅತ್ತಿಗೆಯ ಆಜ್ಞೆ. ನನ್ನದೂ ಅದೇ ನಿರ್ಣಯವಾಗಿತ್ತು. ದಿನ ಕಳೆಯುತ್ತಿದ್ದಂತೆ ಅಣ್ಣ ಮತ್ತು ಅಣ್ಣನ ಮಕ್ಕಳಿಗೆ ಬೆಕ್ಕಿನ ಮರಿಯ ಜೊತೆ ಒಡನಾಟ ಜಾಸ್ತಿಯಾಯಿತು.
ಸಾಮಾನ್ಯವಾಗಿ ಬೆಳೆಯುವಂತೆ ಮರಿ ಬೆಳೆಯುತ್ತಿಲ್ಲ ಎಂಬುದು ನಮಗೆ ಅದನ್ನು ನೋಡಿದರೆ ಗೊತ್ತಾಗುತ್ತಿತ್ತು. ಅಣ್ಣನ ಮಗ ಅಂಗಡಿಯಿಂದ ಬೆಕ್ಕಿನ ಊಟ ತಂದು ಅದಕ್ಕೆ ನೀಡಲಾರಂಭಿಸಿದಾಗ ಸ್ವಲ್ಪ ಬೆಳವಣಿಗೆಯಾಯಿತು. ನಾನು ಅದರ ಗೋಜಿಗೆ ಹೋಗಲಿಲ್ಲ. ಅದನ್ನು ಹಚ್ಚಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ .
ಈ ಮಧ್ಯೆ ಮನೆಯವರೆಲ್ಲಾ ಶೃಂಗೇರಿಗೆ ಹೊರಟಿದ್ದರು. ಸಿಂಬಕ್ಕೆ ಬೆಳಿಗ್ಗೆ ಮತ್ತು ರಾತ್ರಿ ಹಾಲು ಹಾಕು ಎಂಬ ಕಟ್ಟಾಜ್ಞೆ ಎಲ್ಲರದು ನನಗೆ. ಅದಲ್ಲದೆ ಅಲ್ಲಿ ಒಂದು ಪುಟ್ಟ ಪೈಂಟ್ ಬ್ರಶ್ ಇದೆ, ಅದರಲ್ಲಿ ಆ ಸಿಂಬನ ಮುಖ ಸ್ವಲ್ಪ ಮಾಲೀಷ್ ಮಾಡಬೇಕು ಎಂದ ಅಣ್ಣನ ಮಗ. ಹಾಲು ಬೇಕಾದರೆ ಹಾಕುತ್ತೇನೆ, ಮಾಲೀಷ್ ಪಾಲೀಷ್ ಎಲ್ಲಾ ಮಾಡುವುದಿಲ್ಲ ಎಂದೆ ನಾನು.
ಅಂದು ಬೆಳಿಗ್ಗೆ ಹೋಗಿ ಅದಕ್ಕೆ ಹಾಲು ಹಾಕಿದ ಮೇಲೆ, ಕುಡಿಯುತ್ತಾ ಅಂತ ಅಲ್ಲೇ ನೋಡುತ್ತಾ ನಿಂತೆ. ಸ್ವಲ್ಪ ಹಾಲು ಕುಡಿದು, ನಂತರ ಪೈಂಟ್ ಬ್ರಷ್ ಹತ್ತಿರ ಬಂದು ಕೈಲಿ ತನ್ನ ಮುಖವನ್ನು ಒರೆಸಿಕೊಳ್ಳುತ್ತಾ ನನಗೆ ಸೂಚನೆ ಕೊಡಲಾರಂಭಿಸಿತು, ಮುಖ ಮಾಲೀಷ್ ಮಾಡು ಎಂದು. ಅದರ ಸೌಂದರ‍್ಯ ಮತ್ತು ಮುಗ್ಧತೆಗೆ ಅಲ್ಲಿ ನಾನು ಸ್ವಲ್ಪ ಮಾರುಹೋದೆ. ಬ್ರಷ್ ತೆಗೆದು ಮುಖ ಮಾಲೀಷ್ ಮಾಡಿ, ಕೆಳಗೆ ಬಂದೆ. ಇದೇ ಕೆಲಸ ಎರಡು ದಿನ ನಡೆಯಿತು. ನಂತರ ಮನೆಯವರೆಲ್ಲಾ ಶೃಂಗೇರಿಯಿಂದ ವಾಪಸ್ ಆಗಿ ನನ್ನನ್ನು ಈ ಕೆಲಸದಿಂದ ಬಿಡುಗಡೆ ಮಾಡಿದರು. ಆದರೆ ನನ್ನ ಮನಸ್ಸಿನಲ್ಲೂ ಸಿಂಬ ಹತ್ತಿರವಾಗಿದ್ದ.
ಆಗಸ್ಟ್ ತಿಂಗಳು ಬರುತ್ತಿದ್ದಂತೆ ಆ ಬೆಕ್ಕು ವಾಟರ್ ಟ್ಯಾಂಕ್ ಇರುವ ಟಾರ‍್ಸಿ ಮೇಲೆ ಹೋಗುತ್ತಿತ್ತು. ಅಕ್ಕ ಪಕ್ಕದ ಮನೆಗಳು ನಮ್ಮ ಮನೆಗೆ ಕೂಡಿಕೊಂಡಿದ್ದರೂ ನಮ್ಮ ಮನೆಯ ಮಿತಿ ಬಿಟ್ಟು ಎಲ್ಲೂ ಹೋಗಲೇ ಇಲ್ಲ ಸಿಂಬ. ಇದು ನನಗೆ ಯೋಚನೆಗೀಡುಮಾಡಿತ್ತು. ಇಲಿಯನ್ನು ಹುಡುಕಿಕೊಂಡು ಹೋಗುವುದರ ಬದಲು ಅದು ಬಟ್ಟೆ ಒಣಗಿಸಲು ಹಾಕುವ ಕ್ಲಿಪ್ಪು, ದಸವಾಳದ ಹೂವು ಇವುಗಳ ಜೊತೆ ಆಟವಾಡಲು ಆರಂಭಿಸಿತು. ವೈದಿಕ ಮನೆಯ ಬೆಕ್ಕಿನಂತೆ ಬೆಳೆದು ಇರುವೆಯನ್ನು ಕಂಡರು ಹೆದರುತ್ತಿತ್ತು. ಯಾವುದೇ ಪ್ರಾಣಿಯನ್ನು ಅದರ ನೈಜ ಜೀವನಶೈಲಿಯ ವಿರುದ್ಧವಾಗಿ ಬೆಳೆಸಬಾರದು ಎಂಬುದು ನನ್ನ ವಾದ
ಇದ್ದಕ್ಕಿದ್ದಂತೆ ಒಂದು ದಿನ ಅದು ಮಹಡಿಯ ಮೇಲೆ ಕಾಣಲೇ ಇಲ್ಲ. ಹಿಂದಿನ ರಾತ್ರಿ ಭಯಂಕರ ಮಳೆ ಬೇರೆ ಸುರಿದಿತ್ತು. ಅಣ್ಣನ ಮಕ್ಕಳ ಮುಖ ಬಾಡಿತ್ತು. ಸದ್ಯ "ಅದಕ್ಕೆ ಬ್ರಾಹ್ಮಣರ ಮನೆಯಿಂದ ಬಿಡುಗಡೆಯಾಯಿತು ಬಿಡು" ಎಂದು ನಾನು ಹೇಳಿದರೆ, ನನ್ನಣ್ಣ "ಯಾವುದಾದರೂ ಹದ್ದು ಅದನ್ನು ಕಚ್ಚಿಕೊಂಡು ಹೋಗಿರಬಹುದು" ಎಂದು ಹೇಳಿ ನೊಂದಿದ್ದ ಮಕ್ಕಳಿಗೆ ಇನ್ನಷ್ಟು ಮನ ನೋಯಿಸಿದ್ದ. ಅಂದು ಮಧ್ಯಾಹ್ನ ಅದರ ಬಗ್ಗೆಯೇ ಮಾತನಾಡುತ್ತಾ ಊಟ ಮಾಡುತ್ತಿದ್ದಾಗ, ಎಲ್ಲಿಂದಲೋ "ಮಿಯಾವ್ʼ ಎಂಬ ಶಬ್ಧ. ಒಮ್ಮೆಲೇ ಶಾಕ್ ಹೊಡೆದವರಂತೆ ಅಣ್ಣನ ಮಕ್ಕಳು ಮತ್ತು ಅಣ್ಣ ಮಹಡಿಗೆ ಓಡಿದರು. ಆದರೆ ಶಬ್ದ ಬರುತ್ತಿದ್ದದ್ದು ನಮ್ಮ ನೆಲಮಹಡಿಯಲ್ಲಿ ಎಂಬುದನ್ನು ತಿಳಿದುಕೊಳ್ಳುವ ಸಂಯಮವೂ ಅವರಿಗಿರಲಿಲ್ಲ. ನಾನು ಮನೆಯ ಕೆಳಗೆ ಬಂದರೆ, ಪಕ್ಕದ ಮನೆಯ ಓಣಿಯಿಂದ ನಮ್ಮ ಮನೆ ಕಡೆ ಬರುತ್ತಿದೆ ಸಿಂಬ. ಎರಡು ಮಹಡಿ ಅದು ಹೇಗೆ ಇಳಿಯಿತೋ, ನಿಗೂಢ. ಎಲ್ಲರನ್ನೂ ಕೆಳಗೆ ಬರಲು ಹೇಳಿದೆ. ಅಣ್ಣನ ಮಗನ ಮುಖ ನೋಡಿದ ಸಿಂಬಾ ಸಂತೋಷಗೊಂಡ, ಹಾಗೇ ಅಣ್ಣನ ಮಗ ಕೂಡ. ಇಷ್ಟಾಗಿ ಮನೆಯಲ್ಲಿ ಯಾರೂ ಅದನ್ನು ಇದುವರೆವಿಗೂ ನೇರವಾಗಿ ಮುಟ್ಟಿರಲಿಲ್ಲ.
ಆ ಮಧ್ಯಾಹ್ನ ಅದಕ್ಕೆ ನಮ್ಮ ಗ್ಯಾರೇಜಿನಲ್ಲೇ ಹಾಲು ಹಾಕಿ ಮುಂದೇನು ಎಂದು ಯೋಚಿಸುತ್ತಿದ್ದೆವು. ಮತ್ತೆ ಅದನ್ನು ಮಹಡಿಗೆ ತೆಗೆದುಕೊಂಡು ಹೋಗಲು ನನಗೂ ಮತ್ತು ಅತ್ತಿಗೆಗೆ ಒಪ್ಪಿಗೆ ಇರಲಿಲ್ಲ. ಇಷ್ಟರಲ್ಲಿ ಬೀದಿಯಲ್ಲಿದ್ದ ಒಂದೆರೆಡು ದೊಡ್ಡ ಬೆಕ್ಕುಗಳು ಬಂದು ಅದನ್ನು ಹೆದರಿಸಿ ಹೋಯಿತು. ನಾನು ಸಮಯಕ್ಕ ಹೊರ ಬಂದಿದ್ದಕ್ಕೆ ಬಹುಷಃ ಸಿಂಬಾ ಉಳಿದುಕೊಂಡ. ಆಗಲೇ ನಿರ್ಧರಿಸಿದೆ, ಇದನ್ನು ಬೆಕ್ಕನ್ನು ಸಾಕುವ ಜನರಿಗೆ ಕೊಟ್ಟುಬಿಡಬೇಕೆಂದು. ಸದ್ಯಕ್ಕೆ ಉಳಿಸಲು ಕೆಳಗೆ ನಾನಿದ್ದ ಮನೆಯ ಒಳಗೆ ಅದನ್ನು ಬರಲು ಬಿಟ್ಟೆ. ಅದು ನನ್ನ ಸುತ್ತಲೂ ಒಡಾಡುತ್ತಾ ನನ್ನ ಕಾಲಿನ ಬೆರಳುಗಳ ಜೊತೆ ಆಟವಾಡುತ್ತಿತ್ತು. ಆಗಾಗ ನನ್ನ ಕಣ್ಣುಗಳು ಮತ್ತು ಅದರು ಕಣ್ಣು ಒಂದಾಗುತ್ತಿತ್ತು. ʼಎಲ್ಲಿಯ ಋಣ ಮಾರಾಯ ನಿಂದು, ಬ್ರಾಹ್ಮಣರ ಮನೆಯ ಹಾಲು ಕುಡಿದು ಬೆಳೆಯೋ ಆಸೆ ನಿನಗೇಕಾಯ್ತುʼ ಎಂದು ಅದನ್ನು ನೋಡುತ್ತಾ ಮನದಲ್ಲೇ ಅಂದುಕೊಂಡೆ.
ಬೆಕ್ಕು ಸಾಕುವುದು ತಿಳಿಯದ ನಾವು ಇದನ್ನು ನಮ್ಮಲ್ಲೇ ಉಳಿಸಿಕೊಂಡರೆ ನಾವು ಎದುರಿಸಬೇಕಾದ ಸವಾಲುಗಳನ್ನು ಮನಯವರಿಗೆಲ್ಲಾ ಸಂಕ್ಷಿಪ್ತವಾಗಿ ತಿಳಿಸಿ ಅದನ್ನು ಸುರಕ್ಷಿತವಾದ ಜಾಗಕ್ಕೆ ಕಳಿಸುವುದಕ್ಕೆ ಒಪ್ಪಿಸಿದೆ. ಹತ್ತಾರು ಕಡೆ ಫೋನ್ ಮಾಡಿದ ಮೇಲೆ ಪಶುವೈದ್ಯ ಕ್ಲಿನಿಕ್‌ನವರು ಒಂದು ಮೊಬೈಲ್ ನಂಬರ್ ಕೊಟ್ಟು ಸಂಪರ್ಕಿಸಲು ತಿಳಿಸಿದರು. ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ "ಸಾರ್ ಈಗಾಗಲೇ ನಮ್ಮಲ್ಲಿ ನೂರಾರು ಬೆಕ್ಕುಗಳಿವೆ, ಸಾಕೋದು ತುಂಬಾ ಕಷ್ಟ ಸಾರ್. ಅದಲ್ಲದೆ ಸಾರ್ವಜನಿಕರು ಬೆಕ್ಕುಗಳನ್ನು ಕೊಳ್ಳುವುದು ಮತ್ತು ಸಾಕುವುದು ತುಂಬಾ ಕಡಿಮೆ" ಎಂದರು. " ನಮಗೆ ನೀವು ಈಗ ಹೇಗೆ ಸಹಾಯ ಮಾಡಲು ಸಾಧ್ಯ" ಎಂದಾಗ, "ಸಾರ್ ನೀವು ಸ್ವಲ್ಪ ಡೊನೇಶನ್ ಕೊಟ್ಟರೆ ನಾನು ಬೆಕ್ಕನ್ನು ತೆಗೆದುಕೊಂಡುಹೋಗುವ ವ್ಯವಸ್ಥೆ ಮಾಡುತ್ತೇನೆʼ ಎಂದರು. ಅವರು ಕೇಳಿದ ಹಣ ಸ್ವಲ್ಪ ಜಾಸ್ತಿಯಾದರೂ ಸಿಂಬಾ ಸರಿಯಾದ ಜಾಗಕ್ಕೆ ಸೇರುತ್ತಾನೆಂಬ ನಂಬಿಕೆ ನನಗಾಯಿತು, ಒಪ್ಪಿಕೊಂಡೆ. ಇನ್ನೆರೆಡು ಗಂಟೆಗಳಲ್ಲಿ ನಾವು ಬರುತ್ತೇವೆ ಎಂದು ಹೇಳಿ ಫೋನ್ ಇಟ್ಟರು. ಆ ಎರಡು ಗಂಟೆ ಅಣ್ಣನ ಮಗ ತನ್ನ ಆಫೀಸ್ ಮೀಟಿಂಗ್‌ಗಳನ್ನು ಮುಂದಕ್ಕೆ ಹಾಕಿ ಸಿಂಬನ ಜೊತೆ ಆಟವಾಡುತ್ತಾ ಕುಳಿತ.
ಸಂಜೆ ಆರು ಗಂಟೆಗೆ ಅದನ್ನು ಕೊಂಡಯ್ಯುವವರು ಬಂದರು. ಒಂದು ಬುಟ್ಟಿಯಲ್ಲಿ ಅದನ್ನು ಕೂಡಿಸಿಕೊಂಡು ಹೊರಟೇಹೋದರು. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿತ್ತು. ಒಳಗಡೆ ಅದಕ್ಕಿಂತ ರಭಸವಾಗಿತ್ತು ಮನೆಯವರೆಲ್ಲರ ಕಣ್ಣಿನಲ್ಲಿ ಸುರಿಯುತ್ತಿದ್ದ ನೀರು.
ಈಗ ಸಿಂಬ ಒಂದು ಸುರಕ್ಷಿತ ಜಾಗದಲ್ಲಿ ಸರಿಯಾಗಿ ಬೆಳೆಯುತ್ತಿದ್ದಾನೆ ಎಂಬ ನಂಬಿಕೆ. ಒಂದೆರೆಡು ದಿನ ಧ್ಯಾನಕ್ಕೆ ಕುಳಿತರೆ ಸಿಂಬನ ಮುಗ್ಧ ಕಣ್ಣುಗಳು ನನ್ನ ಮುಂದೆ ಬಂದು " ನಾನೊಬ್ಬ ಚಿಕ್ಕ ಬೆಕ್ಕು ನಿಮಗೆ ಭಾರವಾದೆನೇ?" ಎಂದು ಕೇಳುತ್ತಿದ್ದ ಹಾಗೆ ಆಗುತ್ತಿತ್ತು. ಈಗ ಒಂದೆರೆಡು ವಾರದ ನಂತರ ಎಲ್ಲರೂ ಸ್ವಲ್ಪ ಸುಧಾರಿಸಿಕೊಂಡಿದ್ದೇವೆ.