ಗುರುರಾಜ
ಶಾಸ್ತ್ರಿ
ಗೋವಿಂದನ ದಯೆ
17-07-2021
ಏನೇ ಹೇಳಿ, ಮಕ್ಕಳಿಗೆ ಅಮೇರಿಕಾ ಸಂಸ್ಕೃತಿ ಅರ್ಥವಾಗುವುದಕ್ಕೆ ಮುಂಚೆ ನಾವು ಭಾರತಕ್ಕೆ ವಾಪಸ್‌ ಬಂದರೆ, ಸರಿಯಾದ ನಿರ್ಧಾರ ಆಗುತ್ತೆ. ಇಲ್ಲವಾದರೆ, ಭಾರತಕ್ಕೆ ಮರಳಿ ಬರುವುದು ಕನಸಷ್ಟೆ. ಇದರಲ್ಲಿ ಮಕ್ಕಳದ್ದಾಗಲಿ, ಅಮೇರಿಕಾ ದೇಶದ ಸಂಸ್ಕೃತಿಯದ್ದಾಗಲಿ ತಪ್ಪೇನಿಲ್ಲ. ನೀವೇ ನೋಡಿ, ಎಷ್ಟೊಂದು ಜನ ಬೆಂಗಳೂರಿನಲ್ಲಿ ನೆಲೆಸಿರುವವರು, ದೂರದ ಹಳ್ಳಿಗಳಿಂದ ವಲಸೆ ಬಂದವರೇ. ಕೆಲವರು ಇತ್ತೀಚೆಗೆ ಬಂದರೆ, ಮತ್ತೆ ಕೆಲವರು ಎಷ್ಟೋ ತಲೆಮಾರುಗಳಿಗೆ ಮುಂಚೆಯೇ ಬಂದು ನೆಲೆಸಿದರು. ಈಗ ಅವರಿಗೆ ಅವರ ಹಳ್ಳಿಗಳಿಗೆ ಹೋಗಿ ಎಂದರೆ ಹೋಗುತ್ತಾರಾ? ಹಾಗೆ ಅಮೇರಿಕಾ ನೋಡಿದ ಮಕ್ಕಳು ಬೆಂಗಳೂರನ್ನು ನೋಡುವುದು. ಓ ಇದೇನ್‌ ಯಾರ್‌ ಕತೆ ಹೇಳಲಿಕ್ಕೆ ಹೊರಟಿದ್ದೀನಿ ಅಂತ ಯೋಚಿಸ್ತಿದ್ದೀರಾ. ಬೇರೆ ಯಾರ ಕತೆಯೂ ಅಲ್ಲ, ನನ್ನದೇ ಕತೆ, ನಾನು ರಾಘವ ಶರ್ಮ. ಎಲ್ಲಿಂದ ಶುರು ಮಾಡಲಿ ನನ್ನ ಕತೆ, ಅಂತ ಯೋಚಿಸ್ತಿದ್ದೆ. ಮೊದಲು ನಾನು ಈಗ ಏನು ಮಾಡ್ತಾ ಇದೀನಿ ಅಂತ ತಿಳಿಸ್ತೀನಿ. ಸಧ್ಯಕ್ಕೆ ಗಂಟುಮೂಟೆ ಎಲ್ಲಾ ಕಟ್ಕೊಂಡು ಅಮೇರಿಕಾದಿಂದ ಬೆಂಗಳೂರಿಗೆ ಹೋಗಲು ವಿಮಾನಕ್ಕಾಗಿ ಕಾಯ್ತಾ ಇದ್ದೀನಿ. ಜೊತೆಗೆ ನನ್ನ ಹೆಂಡತಿ ವೈಶಾಲಿ ಹಾಗೂ ಇಬ್ಬರು ಗಂಡು ಮಕ್ಕಳು, ವೆಂಕಟೇಶನಿಗೆ ನಾಲ್ಕು ವರ್ಷ ಮತ್ತು ಶ್ರೀನಿವಾಸನಿಗೆ ಎರಡು ವರ್ಷ. ನಮ್ಮ ಜೊತೆ ಬರ್ತಾ ಇರೋ ಇನ್ನಿಬ್ಬರ ಬಗ್ಗೆ ಆಮೇಲೆ ಹೇಳ್ತೀನಿ. ಏನ್‌, ಎರಡೇ ವರ್ಷದ ಅಂತರದಲ್ಲಿ ಎರಡು ಮಕ್ಕಳೇ ಅಂದ್ರ. ಇಲ್ಲೇ ಮಕ್ಕಳು ಹುಟ್ಟುದ್ರೆ ಅವರಿಗೆ ಅಮೇರಿಕಾ ಪೌರತ್ವ ಸಿಗುತ್ತೆ, ಮುಂದೆ ಯಾವತ್ತಾದ್ರು ಅವರಿಗೆ ಉಪಯೋಗ ಆಗಬಹುದು ಅಂತ ನನ್ನ ಹೆಂಡತಿ ವೈಶಾಲಿಯ ಆಸೆ. ಆದ್ರೆ ಅವಳಿಗೂ ಈ ದೇಶ ಹಿಡಿಸಲಿಲ್ಲ. ಅಗ್ರಹಾರದಲ್ಲಿ ಹುಟ್ಟಿ ಬೆಳೆದೋವ್ಳು, ಅಕ್ಕ, ಪಕ್ಕ, ಜನ, ಜಾತ್ರೆ ಎಲ್ಲಾ ಅವಳಿಗೂ ಬೇಕು, ಅದಕ್ಕೆ ನನಗಿಂತ ಹೆಚ್ಚು ಸಂತೋಷ ಅವಳಿಗೇ ಆಗ್ತಾ ಇರೋದು ಇವತ್ತು. ಇಲ್ಲಿಂದ ವಾಪಸ್‌ ತೆಗೆದುಕೊಂಡುಹೋಗುವಂತ ಸಾಮನು ಏನೂ ಇಲ್ಲ ಬಿಡಿ. ಯಾಕಂದ್ರೆ ಇಲ್ಲಿ ನಮ್ಮದು ಅಂತಾ ಏನೂ ಇರಲಿಲ್ಲ. ಇಷ್ಟು ಸಾಕು ಕತೆ ಪ್ರಾರಂಭಿಸಲಿಕ್ಕೆ. ಸ್ವಲ್ಪ ನಂದೂ ಹಳೇ ಕತೆ ಶುರು ಮಾಡ್ತೀನಿ. ಕೇಳಿ, ಒಂಥರಾ ನನಗಂತೂ ನನ್ನ ಕತೆ ಹೇಳ್ಕೊಳಕ್ಕೆ ಮಜಾ ಅನಿಸುತ್ತೆ. ಪಂಡಿತಸ್ಯ ಪುತ್ರಃ ಶುದ್ಧ ಶುಂಟಿ ಅಂತಾರಲ್ಲ ಹಾಗೆ, ನನ್ನ ಅಪ್ಪ ಅಮ್ಮನ ದೊಡ್ಡ ಮಗನಾದ ನನಗೆ ಮಾತ್ರ ಈ ಗಾದೆ ಸರಿಹೊಂದಿದ್ದು. ಹೇಗೋ ಕಷ್ಟ ಪಟ್ಟು ನನ್ನ ಟೀಚರ್‌ಗಳೆಲ್ಲಾ ಏಳನೇ ಕ್ಲಾಸ್‌ ತನಕ ದಡ ಮುಟ್ಸುದ್ರು. ನನಗೆ ಮೂರನೇ ತರಗತಿ ಪಾಸ್‌ ಆಗೋ ಯೋಗ್ಯತೇನೇ ಇರಲಿಲ್ಲ ಅಂತ ನನಗೆ ಮತ್ತು ನಮ್ಮಪ್ಪನಿಗೆ ಚೆನ್ನಾಗಿ ಗೊತ್ತಿತ್ತು. ಸ್ಕೂಲ್‌ ಫೀಸ್‌ ಬೇರೆ ದಂಡ ಅಂತ ಹೇಳಿ, ನಮ್ಮಪ್ಪ ಅವರು ಪೂಜೆ ಮಾಡುತ್ತಿದ್ದ ವೆಂಕಟರಮಣನ ಗುಡಿಯಲ್ಲಿ ಮಂಗಳಾರತಿ, ತೀರ್ಥ, ಪ್ರಸಾದ ಕೊಡಲು ನನ್ನನ್ನು ಬಾಲಕಾರ್ಮಿಕನಾಗಿ ಕೆಲಸಕಿಟ್ಟುಕೊಂಡರು. ಬಾಲ ಕಾರ್ಮಿಕರಿಗಾದ್ರು ಏನೋ ಸ್ವಲ್ಪ ಹಣ ಸಿಗುತ್ತೆ; ನನಗೆ, ದೇವಸ್ಥಾನಕ್ಕೆ ಬಂದೋವ್ರ ಮುಂದೆ ಅಪ್ಪನ ಬೈಗುಳ ಅಷ್ಟೆ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂತಾರಲ್ಲ ಹಾಗೆ, ನಮ್ಮಪ್ಪನ ಮಂತ್ರವೆಲ್ಲಾ ದೇವರ ಕಡೆಗೆ, ಆದರೆ ಉಗುಳು ಮಾತ್ರ ನನ್ನ ಕಡೆ. ತನ್ನ ಮೂರನೇ ಹೆರಿಗೆಯಲ್ಲಿ, ಏನೋ ತೊಂದರೆಯಾಗಿ ಅಮ್ಮ ಸತ್ತಿದ್ದಳು. ಮನೆಯಲ್ಲಿ ಸದ್ಯಕ್ಕೆ ನಾನು, ಅಪ್ಪ, ನನ್ನ ತಮ್ಮ ರಾಜೇಶ ಮತ್ತು ತಂಗಿ ಲಲಿತ ಇದ್ದೀವಿ. ಅವರಿಬ್ಬರೂ ನನ್ನ ಹಾಗಲ್ಲ, ತುಂಬಾ ಬುದ್ದಿವಂತರು. ರಾಜೇಶನಂತೂ, ಬೆರಳು ತೋರಿಸಿದ್ರೆ ಹಸ್ತ ನುಂಗೋವ್ರು ಅಂತಾರಲ್ಲಾ ಹಾಗೆ, ಓದಿನಲ್ಲಿ ಪ್ರಚಂಡ. ನನಗಿಂತ ಮೂರು ವರ್ಷ ಚಿಕ್ಕೋವ್ನು, ಆದರೆ ಪರೀಕ್ಷೆಯಲ್ಲಿ ಸ್ಕೂಲಿಗೆ ಯಾವಾಗ್ಲೂ ಅವನೇ ಫಸ್ಟ್‌ ಬರ್ತಾ ಇದ್ದ. ಲಲಿತಾ ಅವನಷ್ಟು ಪ್ರಚಂಡಳಿಲ್ಲದಿದ್ದರೂ, ತಕ್ಕಮಟ್ಟಿಗೆ ಜಾಣೆಯೇ ಆಗಿದ್ದಳು. ಮೂರು ವರ್ಷ ದೇವಸ್ಥಾನದಲ್ಲಿ ಭಕ್ತರಿಗೆ ಮಂಗಳಾರತಿ ಕೊಡುತ್ತಾ ಕಳೆದೆ. ಆದರೆ ಈ ಗೋವಿಂದ ಇದಾನಲ್ಲ, ಅದೇ ನಾವು ಪೂಜೆ ಮಾಡೋ ನಮ್ಮ ವೆಂಕಟರಮಣಸ್ವಾಮಿ, ತನ್ನ ಸೇವೆ ಮಾಡೋ ಯಾರನ್ನೂ ಕೈ ಬಿಡಲ್ಲ. ಓ ಅದಕ್ಕೆ ಏನು ಪುರಾವೆ ಅಂತ ಕೇಳಿದ್ರಾ. ನಿಜರೂಪದಲ್ಲಿ ನಿಮ್ಮ ಮುಂದೆ ನಾನೇ ಇದ್ದೀನಲ್ಲ ಸ್ವಾಮಿ. ದಿನಾ ಅಪ್ಪ ಹೇಳುತ್ತಿದ್ದ ಮಂತ್ರಗಳು ನನಗೂ ಹಾಗೆ ಯಾವ ಪಾಠವೂ ಇಲ್ಲದೇ ಶ್ರವಣ ಮಾಡುತ್ತಲೇ ಮನನವಾಯಿತು. ಆಗಾಗ ಅಪ್ಪನಿಗೆ ಹುಷಾರಿಲ್ಲ ಅಂದ್ರೆ ನಾನೇ ನಿಭಾಯಿಸಿಬಿಡ್ತಾ ಇದ್ದೆ, ದೇವಸ್ಥಾನದ ಮುಖ್ಯ ಪೂಜಾರಿಯ ಕೆಲಸವನ್ನ. ದೇವಸ್ಥಾನದ ಟ್ರಸ್ಟಿನವರು ಸಂಜೆ ಹೊತ್ತು ವೇದ ಪಾಠ ಶುರು ಮಾಡಲಿಕ್ಕೆ ಆರಂಭಿಸಿದರು. ಅಲ್ಲಿ ವೇದ ಕಲಿಯಲು ಬರುವವರಿಗೆ ಕುಳಿತುಕೊಳ್ಳಲು ಚಾಪೆ ಹಾಸುವುದು, ದೀಪಗಳೆಲ್ಲಾ ಹಾಕೋದು, ಮೈಕ್‌ ಸರಿ ಮಾಡೋದು, ಇವೆಲ್ಲಾ ಕೆಲಸ ನನ್ನ ಪಾಲಿಗೆ ಬಂತು. ಪಕ್ಕದಲ್ಲಿದ್ದ ಆಶ್ರಮದಿಂದ ಸಂತೋಷಾನಂದ ಸ್ವಾಮೀಜಿ ಬಂದು ದಿನಾ ವೇದ ಪಾಠ ಮಾಡ್ತಾ ಇದ್ರು. ನಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ ಹೊತ್ತು ಮಾತ್ರ ನನಗೆ ಜಾಸ್ತಿ ಕೆಲಸ. ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದ ಕೆಲವರು ಸಂಜೆ ಹೊತ್ತು ದೇವಸ್ಥಾನದಲ್ಲಿ ಪೂಜೆ ಮಾಡಲು ಬರುತ್ತಿದ್ದರು. ಹಾಗಾಗಿ ನಾನು ವೇದ ಪಾಠಕ್ಕೆ ಪೂರ್ತಿ ಸಮಯ ಕೊಡುತ್ತಿದ್ದೆ. ಮೊದ ಮೊದಲು ಕೇವಲ ಲೈಟ್‌ ಆಫ್‌ ಮಾಡೋಕ್ಕೆ, ಚಾಪೆ ಹಾಸೋಕ್ಕೆ ಅಂತ ಹೋಗಿದ್ದು, ಆಮೇಲೆ ಗೋವಿಂದನ ದಯೆಯಿಂದ ಸ್ವಾಮೀಜಿಗಳಿಗೆ ಆಪ್ತ ಶಿಷ್ಯನಾದೆ. ಶಾಲೆಯ ಪಾಠ ತಲೆಗೆ ಹತ್ತದಿದ್ರೂ ಈ ವೇದಪಾಠ ನನಗೆ ಒಲಿದು ಬಿಡ್ತು ನೋಡಿ. ಮನೇಲಿ ಕಸ ಗುಡಿಸಬೇಕಾದ್ರೆ ಒಂದು ಸೂಕ್ತ, ಅಡುಗೆ ಮಾಡ್ಬೇಕಾದ್ರೆ ಒಂದು ಮಂತ್ರ, ನೆಲ ಒರಿಸಬೇಕಾದ್ರೆ ಒಂದು ಸೂಕ್ತ, ಮನೆಯಿಂದ ದೇವಸ್ಥಾನಕ್ಕೆ ನಡೆದುಕೊಂಡು ಹೋಗೋವಾಗ ಉಪನಿಷತ್ತುಗಳು ಹೀಗೆ ಹೇಳ್ತಾ ಹೇಳ್ತಾ ಎಲ್ಲಾ ಬಾಯ್ಪಾಟ ಆಯ್ತು. ಅದೇನೋ ಹಾಡ್ತಾ ಹಾಡ್ತಾ ರಾಗ ಅಂತಾರಲ್ಲ, ಹಾಗೆ ನನಗೆ ಹೇಳ್ತಾ ಹೇಳ್ತಾ ವೇದ, ಅಷ್ಟೆ. ಗೋವಿಂದನ ದಯೆ, ಸುಮಾರು ಎಂಟು ವರ್ಷ ವೇದಾಧ್ಯಯನ ಅಡಚಣೆಗಳಿಲ್ಲದೇನೇ ಸಾಗಿತು. ಜೊತೆಗೆ ಸ್ವಾಮೀಜಿಗಳಿಂದ ಸ್ವಲ್ಪ ಸಂಸ್ಕೃತವನ್ನು ಕಲಿತೆ. ಕೆಲವೊಮ್ಮೆ ಸ್ವಾಮೀಜಿ ಸಂಜೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗದಿದ್ದರೆ, ನಾನೇ ತರಗತಿ ತೆಗೆದುಕೊಳ್ತಾ ಇದ್ದೆ. ನನ್ನ ತಮ್ಮ ರಾಜೇಶ ಆ ವರ್ಷ ಇಂಜಿನಿಯರಿಂಗ್‌ ಮುಗಿಸಿದ್ದ. ಯೂನಿವರ್ಸಿಟಿಗೆ ಫಸ್ಟ್‌ ಬಂದಿದ್ದ. ಅಪ್ಪನಿಗೆ ಎಲ್ಲಿಲ್ಲದ ಖುಷಿ. ದೇವಸ್ಥಾನಕ್ಕೆ ಬಂದವರು ಯಾವುದೇ ವಿಷಯ ಮಾತನಾಡಲಿ, ಎಲ್ಲೋ ಒಂದು ಕಡೆ ತನ್ನ ಚಿಕ್ಕ ಮಗನ ಓದಿನ ಬಗ್ಗೆ ಮಾತಿನ ಮಧ್ಯೆ ಅವರಿಗೆ ತಿಳಿಸದಿದ್ರೆ ಅಪ್ಪನಿಗೆ ಸಮಾಧಾನಾನೇ ಇರ್ತಿರ್ಲಿಲ್ಲ. ಯಾವ ತಂದೆಗೆ ತಾನೆ ಖುಷಿಯಾಗಲ್ಲ ಹೇಳಿ. ಅಮೇರಿಕಾ ನಮ್ಮ ದೇಶದ ಬುದ್ಧವಂತರನೆಲ್ಲಾ ಕೈ ಚಾಚಿ ಕರೆಯುತ್ತಿದ್ದ ಕಾಲ ಅದು. ನಮ್ಮ ದೇಶದಿಂದ ಅಮೇರಿಕಾಗೆ ವಲಸೇ ಹೋಗುತ್ತಿದ್ದ ಬುದ್ಧಿವಂತರ ಗುಂಪಿನಲ್ಲಿ ರಾಜೇಶನೂ ಒಬ್ಬನಾದ. ಒಂದೆರೆಡು ತಿಂಗಳಲ್ಲಿ ಅಮೇರಿಕಾಗೆ ಕೆಲಸಕ್ಕೆ ಹೊರಟೇ ಬಿಟ್ಟ ರಾಜೇಶ. ಈಗ ಅಪ್ಪನ ಖುಷಿ ದುಪ್ಪಟ್ಟಾಯಿತು. ವಾರಕ್ಕೆ ಒಮ್ಮೆಯಾದರೂ ರಾತ್ರಿ ಹೊತ್ತು ಎಸ್.ಟಿ.ಡಿ. ಬೂತ್‌ನಿಂದ ಮಗನಿಗೆ ಐ ಎಸ್ ಡಿ ಕಾಲ್‌ ಮಾಡಿ ಮಗನೊಂದಿಗೆ ಮಾತನಾಡದಿದ್ದರೆ ಅವರಿಗೆ ಸಮಾಧಾನಾನೇ ಇಲ್ಲ. ಅವನಿಂದ ಅಮೇರಿಕಾದ ವಿಷಯ ಎಲ್ಲಾ ತಿಳಿದುಕೊಂಡರು ಅಪ್ಪ. ನೀವು ರಸ್ತೆ, ಊಟ, ಬಟ್ಟೆ, ಹಣ ಯಾವುದಾದರ ಬಗ್ಗೆಯಾದರೂ ಅಪ್ಪನ ಹತ್ತಿರ ಮಾತನಾಡಿ, ಅವರು ಅಮೇರಿಕಾ ವಿಷಯ ಪ್ರಸ್ತಾಪಿಸದೇ ಮಾತೇ ಮುಗಿಸುತ್ತಿರಲಿಲ್ಲ. ಕೆಲವೊಮ್ಮೆ ಅವರ ಅಮೇರಿಕಾ ಮಾತು ಪುನರಾವರ್ತನೆಯಾಗುತ್ತಿತ್ತು ಮತ್ತು ವಿಪರೀತವಾಗುತ್ತಿತ್ತು. ಸುತ್ತಲೂ ಇದ್ದವರಿಗೆ ಬೇಸರ ತಂದಿದ್ದರೂ ಆಶ್ಚರ್ಯವಿಲ್ಲ. ಹೀಗಿರುವಾಗ ಒಂದು ದಿನ ನನ್ನ ಗುರುಗಳು, ಅದೇ, ಸಂತೋಷಾನಂದರು, “ಯಾವುದಾದರೂ ಹುಡುಗಿಯನ್ನು ನೋಡಿ ಮದುವೆ ಮಾಡಿಕೋ” ಎಂದರು. ನಾನು ನಗುತ್ತಾ “ನನಗೆ ಯಾರು ಹುಡುಗಿಯನ್ನ ಕೊಡ್ತಾರೆ, ವಿದ್ಯೆ, ಸಂಪಾದನೆ ಏನೂ ಇಲ್ಲ” ಎಂದೆ. ಅದಕ್ಕೆ ಅವರು “ನೀನು ಹನುಮಂತನಿದ್ದ ಹಾಗೆ, ನಿನ್ನ ಶಕ್ತಿ ನಿನಗೆ ಗೊತ್ತಿಲ್ಲ ಅಷ್ಟೆ, ಅಂತ ಹೇಳಿ, ನಾನೇ ನಿಮ್ಮಪ್ಪನ ಹತ್ತಿರ ಮಾತಾಡ್ತೀನಿ” ಅಂದ್ರು. ನಾನು ತಮಾಷೆ ಮಾಡ್ತಾ ಇದ್ದಾರೆ ಅಂದುಕೊಂಡೆ. ಗುರುಗಳು ದೇವಸ್ಥಾನದ ಟ್ರಸ್ಟಿಗಳ ಹತ್ತಿರ ಮಾತನಾಡಿ. ನನಗೆ ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಸಂಬಳ ಬರುವ ಹಾಗೆ ಮಾಡಿದರು, ಹಾಗೆ ದೇವಸ್ಥಾನದ ಕಾಂಪೌಂಡಿನಲ್ಲಿದ್ದ ಗಣೇಶನ ಗುಡಿಗೆ ನನ್ನನ್ನೇ ಪೂರ್ಣ ಸಮಯ ಅರ್ಚಕನನ್ನಾಗಿ ಮಾಡಲು ಹೇಳಿದರು. ಆ ಗಣೇಶನ ಮಂಗಳಾರತಿಗೆ ಬರುವ ಕಾಸೆಲ್ಲಾ ಇನ್ನು ಮುಂದೆ ನಂದೆ. ಒಂದು ದಿನ ಅಪ್ಪನನ್ನು ಗುರುಗಳು ಕರೆದು “ಮೈಸೂರಿನಲ್ಲಿ ಆಂಜನೇಯ ಗುಡಿಯ ಪೂಜಾರಿಗಳು, ನನ್ನ ಪೂರ್ವಾಶ್ರಮದ ಗೆಳೆಯರು. ಅವರ ಮಗಳು ವೈಶಾಲಿಯನ್ನು ರಾಘವನಿಗೆ ಮದುವೆ ಮಾಡಿಕೊಟ್ಟರೆ ಇವರಿಬ್ಬರ ಜೀವನ ತುಂಬಾ ಸುಂದರವಾಗಿರುತ್ತೆ, ನಾನೇ ಇವರಿಬ್ಬರ ಜಾತಕ ನೋಡಿದ್ದೇನೆ” ಎಂದರು ಗುರುಗಳು. ಅವರ ಗೆಳೆಯ ಹಾಗೂ ನನ್ನಪ್ಪ ಇಬ್ಬರನ್ನು ಕರೆಸಿ ಮಾತನಾಡಿಸಿದರು. ಮದುವೆ ದೇವಸ್ಥಾನದಲ್ಲಿಯೇ ಸಾಧಾರಣವಾಗಿ ನಡೆಯಿತು. ವೈಶಾಲಿ ಅಷ್ಟೇನೂ ಓದಿರಲಿಲ್ಲ. ಆದರೆ ಅವಳಿಗೆ ಏನಾದರೂ ಮಾಡಿ ಹತ್ತನೇ ಕ್ಲಾಸ್‌ ಪಾಸಾಗಬೇಕೆಂಬ ಆಸೆ. ನಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ಭಕ್ತರು, ಹತ್ತನೇ ಕ್ಲಾಸ್ ಫೈಲ್‌ ಆದವರಿಗಾಗಿಯೇ ಪ್ರತ್ಯೇಕವಾಗಿ ಮನೆ ಪಾಠ ಮಾಡುತ್ತಿದ್ದರು. ಅವರಿಗೆ ವೈಶಾಲಿ ವಿಷಯ ತಿಳಿಸಿದಾಗ, “ಇಬ್ಬರೂ ಹತ್ತನೇ ಕ್ಲಾಸ್‌ಗೆ ಖಾಸಗಿಯಾಗಿ ಸೇರಿಕೊಂಡು ಬಿಡಿ, ಒಟ್ಟಿಗೇ ಪಾಠ ಹೇಳಿಕೊಡುತ್ತೇನೆ” ಎಂದರು. ನನಗೆ, ನನ್ನ ಪೆದ್ದುತನವನ್ನು ಅವರ ಮುಂದೆ ಪ್ರದರ್ಶನ ಮಾಡುವುದು ಇಷ್ಟವಿರಲಿಲ್ಲ, ಆದರೆ ವೈಶಾಲಿಯ ಬಲವಂತಕ್ಕೆ ನಾನು ಪಾಠಕ್ಕೆ ಸೇರಿದೆ. ಆಶ್ಚರ್ಯ, ಎಂಟು ವರ್ಷ ವೇದಾಧ್ಯಯನ ಮಾಡಿದ್ದ ಪ್ರಭಾವವೋ ಏನೋ, ನನ್ನ ಗ್ರಹಿಕೆಯ ಶಕ್ತಿ ಹಾಗೂ ಜ್ಙಾಪಕಶಕ್ತಿ ಹೆಚ್ಚಾಗಿತ್ತು ಮತ್ತು ನನಗೆ ಈಗ ಎಲ್ಲಾ ಪಾಠವೂ ಸುಲಭವಾಗಿ ಅರ್ಥವಾಗತೊಡಗಿತು. ರಾತ್ರಿಹೊತ್ತು ನಾವು ಜೊತೆಗೇ ಪಾಠಗಳನ್ನು ಓದಲು ಆರಂಭಿಸಿದೆವು. ಆದರೆ, ನನಗಿಂತ ದಡ್ಡರು ಪ್ರಪಂಚದಲ್ಲಿ ಇರುತ್ತಾರೆಂದು ನನಗೆ ತಿಳಿದದ್ದು ವೈಶಾಲಿಯನ್ನು ನೋಡಿದ ಮೇಲೆ. ಇಬ್ಬರೂ ಪಟ್ಟ ಶ್ರಮಕ್ಕೆ ಮತ್ತು ಗೋವಿಂದನ ದಯೆಯಿಂದ ನಾವು ಹತ್ತನೇ ತರಗತಿ ಮುಗಿಸೇ ಬಿಟ್ಟೆವು. ನನ್ನದು ಶೇಕಡ ಐವತ್ತು ಬಂದರೆ ವೈಶಾಲಿಯದು ಶೇಕಡ ಮೂವತ್ತೈದು. “ಓದುವುದನ್ನು ಮತ್ತೆ ಪ್ರಾರಂಭಿಸಿದ್ದೀಯಾ, ಹಾಗೆ ಆಗಮ ಪರೀಕ್ಷೆಯನ್ನು ತೆಗೆದುಕೋ, ನಾನು ನಿನಗೆ ಪಾಠ ಹೇಳಿಕೊಡುತ್ತೇನೆ” ಎಂದರು ಸಂತೋಷಾನಂದ ಸ್ವಾಮೀಜಿಗಳು. ಆಗಮ ಪರೀಕ್ಷೆ ಪೌರೋಹಿತ್ಯ ಮತ್ತು ವೇದಾಧ್ಯಯನ ಕಲಿತವರ ಜ್ಞಾನಕ್ಕೆ ಒಂದು ಮಾನದಂಡ ಇದ್ದ ಹಾಗೆ. ಜೊತೆಗೆ ಅಪ್ಪನೂ ಆಗಾಗ ಪಾಠ ಹೇಳಿಕೊಡಲು ಒಪ್ಪಿದರು, ಆದರೆ ಒಂದೆರಡು ಸಲ ಅಪ್ಪನಿಗೆ, ಅವರಿಗಿಂತ ನಾನೇ ಹೆಚ್ಚು ಕಲಿತಿದ್ದೇನೆ ಎಂದೆನಿಸಿ, ಪಾಠ ಹೇಳಿಕೊಡುವುದನ್ನು ನಿಲ್ಲಿಸಿದರು. ಈಚೀಚೆಗೆ, ಅವರಿಗೆ ನನ್ನ ಮತ್ತು ವೈಶಾಲಿಯ ಮೇಲೆ ಏನೋ ಒಂದು ರೀತಿಯ ಹೊಸ ಪ್ರೀತಿ ಮೂಡುತ್ತಿರುವುದು ಅವರ ಮಾತಿನಲ್ಲಿ ನನಗೆ ಗೊತ್ತಾಗುತ್ತಿತ್ತು. ಅದಲ್ಲದೇ ದೇವಸ್ಥಾನದಲ್ಲಿ ಬಂದ ಭಕ್ತರೊಡನೆ ನನ್ನ ಬಗ್ಗೆಯೂ, ಅಲ್ಲ ಅಲ್ಲ ನನ್ನ ಬಗ್ಗೆಯೇ, ಮಾತನಾಡಲು ಪ್ರಾರಂಭಿಸಿದ್ದರು. ಓದಿನ ಮೇಲೆ ಆಸಕ್ತಿ ಹೆಚ್ಚಾಗಿದ್ದರಿಂದ, ಸಂಸಾರ ವಿಸ್ತರಿಸಬೇಕೆಂಬ ಆಸೆಯನ್ನು ನಾವು ಸ್ವಲ್ಪ ಕಾಲ ಮುಂದೂಡಲು ನಿಶ್ಚಯಿಸಿದೆವು. ಆಗಮ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಪಾಸ್‌ ಆದೆ. ಎಲ್ಲಾ ಗೋವಿಂದನ ದಯೆ ಅನ್ನಿ. ವೈಶಾಲಿಯ ಅಣ್ಣ ಶ್ರೀನಾಥ, ಎರಡು ವರ್ಷ ಮುಂಚೆಯೇ ಆಗಮ ಪರೀಕ್ಷೆಯಲ್ಲಿ ಪಾಸಾಗಿದ್ದ. ಅವನ ಗೆಳೆಯನೊಬ್ಬ ಅಮೇರಿಕಾದ ವೆಂಕಟರಮಣಸ್ವಾಮಿ ಗುಡಿಯಲ್ಲಿ ಪೂಜೆ ಮಾಡುತ್ತಿದ್ದು ಶ್ರೀನಾಥನನ್ನು ಅಮೇರಿಕಾಗೆ ಕರೆಸಿಕೊಂಡ. ಅಮೇರಿಕಾಗೆ ಪೂಜಾರಿಯಾಗಿ ಹೋಗಲು ಆಗಮ ಪರೀಕ್ಷೆ ಅತ್ಯಗತ್ಯ. ವೈಶಾಲಿಗೆ, ನಾವೂ ಅಮೇರಿಕಾಗೆ ಹೋಗಬೇಕು ಎಂಬುವ ಮತ್ತೊಂದಾಸೆ ಶುರುವಾಯಿತು. “ರಾಜೇಶ ಹಾಗೂ ಶ್ರೀನಾಥ ಇಬ್ಬರೂ ಅಮೇರಿಕಾದಲ್ಲೇ ಇರುವುದರಿಂದ ನಾವು ಹೋಗಿ ಬರಬಹುದೇ” ಎಂದು ಸ್ವಾಮೀಜಿಯವರನ್ನು ಕೇಳಿದಳು ವೈಶಾಲಿ. ಸ್ವಾಮೀಜಿಯವರು, “ಇದು ನೀನು ಹೇಳುತ್ತಿರುವುದಲ್ಲ, ಆ ಗೋವಿಂದನು ನಿನ್ನ ಮೂಲಕ ಹೇಳಿಸುತ್ತಿದ್ದಾನೆ” ಎಂದು ಹೇಳಿ “ಹೋಗಿ ಬನ್ನಿ” ಎಂದು ಅನುಮತಿ ಕೊಟ್ಟರು. ಶ್ರೀನಾಥನಿಗೆ ಈ ಬಗ್ಗೆ ತಿಳಿಸಿದಾಗ “ಅಮೇರಿಕಾದಲ್ಲಿ ಇದ್ದ ಒಬ್ಬರು ಪೂಜಾರಿ ಇನ್ನೆರಡು ತಿಂಗಳಲ್ಲಿ ಭಾರತಕ್ಕೆ ಹಿಂದಿರುಗುತ್ತಿದ್ದಾರೆ, ಅವರ ಜಾಗಕ್ಕೆ ನೀನು ಬರುವಂತೆ ಶಿಫಾರಸ್ಸು ಮಾಡುತ್ತೇನೆ. ಆದರೆ ಭಾರತದಿಂದ ಇಲ್ಲಿಗೆ ಬರಲು ಪೂಜಾರಿಗಳು ವರ್ಷಗಳಿಂದ ಕಾಯುತ್ತಿದ್ದಾರೆ, ತುಂಬಾ ಡಿಮ್ಯಾಂಡ್‌ ಇದೆ, ಹಾಗಾಗಿ ಈ ವಿಷಯ ಬಹಳ ಜನಕ್ಕೆ ಗೊತ್ತಾಗುವುದು ಬೇಡ” ಎಂದ ಶ್ರೀನಾಥ. ಹಾಗಾಗಿ ರಾಜೇಶನಿಗೆ ನಾವು ತಿಳಿಸಲು ಹೋಗಲಿಲ್ಲ. ಅಪ್ಪನಿಗೆ ಈ ವಿಷಯ ತಿಳಿಸಿದೆ. ಆದರೆ ಅಪ್ಪನಿಗೆ ಅದೇಕೋ ಇಷ್ಟವಾಗಲಿಲ್ಲ. “ಚಿಕ್ಕ ಮಗ ಮೂರು ವರ್ಷಕ್ಕೆ ಮುಂಚೆ ಅಮೇರಿಕಾಗೆ ಹೋದೋವ್ನು ಈ ಕಡೆ ಬರಲೇ ಇಲ್ಲ, ಇನ್ನು ನೀನೂ ಅಲ್ಲಿಗೆ ಹೋಗಿಬಿಟ್ಟರೆ, ನಾನೇನು ಮಾಡಲಿ, ಲಲಿತಳ ಕತೆ ಏನು” ಎಂದು ಕೇಳಿದರು. ಆಗ ಸ್ವಾಮೀಜಿಗಳು “ಸದ್ಯಕ್ಕೆ ನಾಲ್ಕೈದು ವರ್ಷ ಅವನಿಗೆ ಜಾಗ ಬದಲಾವಣೆ ಇದೆ ಎಂದು ಅವನ ಜಾತಕ ಹೇಳುತ್ತಿದೆ. ಚಿಂತಿಸಬೇಡಿ, ಇವ ಮೂರ್ನಾಲ್ಕು ವರ್ಷ ಅಲ್ಲಿದ್ದು ಭಾರತಕ್ಕೆ ಬಂದೇ ಬರುತ್ತಾನೆ" ಎಂದರು. ಅಪ್ಪನಿಗೆ ಸ್ವಾಮೀಜಿಯ ಜ್ಯೋತಿಷ್ಯ ಜ್ಞಾನದ ಬಗ್ಗೆ ಅಪಾರವಾದ ನಂಬಿಕೆ ಇತ್ತು. ಹಾಗಾಗಿ ಒಪ್ಪಿದರು. “ಹೆಚ್ಚು ಜನರಿಗೆ ಈ ವಿಷಯ ತಿಳಿಯುವುದು ಬೇಡ ಎಂದಿದ್ದಾನೆ ಶ್ರೀನಾಥ” ಎಂದು ಅಪ್ಪನಿಗೆ ನಾನು ಹೇಳಿದೆ. ಇಲ್ಲವಾದರೆ, ದೇವಸ್ಥಾನದ ಭಕ್ತರಿಗೆಲ್ಲ ಒಂದೇ ದಿನನದಲ್ಲಿ ಅಪ್ಪ ತಿಳಿಸಿಬಿಡುತ್ತಿದ್ದರು. ಗೋವಿಂದ ನಮ್ಮ ಆಸೆಗೆ ಸಹಾಯ ಮಾಡುತ್ತಾನೆ ಎಂಬ ನಂಬಿಕೆ ನಮಗಿತ್ತು. ನಮ್ಮ ದೇವಸ್ಥಾನದ ಒಬ್ಬರು ಭಕ್ತರು ಪಾಸ್‌ಪೋರ್ಟ್‌ ಕಛೇರಿಯಲ್ಲಿ ಕೆಲಸ ಮಾಡುತ್ತಾರೆ. ಅವರೊಂದಿಗೆ ಅಪ್ಪ ಮಾತನಾಡಿದರು ಮತ್ತು ದೇವಸ್ಥಾನದ ಟ್ರಸ್ಟಿಯೊಬ್ಬರ ಮಗ ಐಎಎಸ್‌ ಆಫಿಸರ್‌ ಆಗಿದ್ದರು. ಇವರಿಬ್ಬರ ಸಹಾಯದಿಂದ ಒಂದೇ ವಾರದಲ್ಲಿ ತತ್ಕಾಲ್‌ ಮಾರ್ಗದಲ್ಲಿ ಪಾಸ್ಪೋರ್ಟ್‌ ಬಂತು. ವೀಸಾಕ್ಕಾಗಿ ಶ್ರೀನಾಥನೇ ಅವನಿಗೆ ವೀಸಾ ಪಡೆಯಲು ಸಹಾಯ ಮಾಡಿದ್ದ ಬೆಂಗಳೂರಿನಲ್ಲಿ ಇದ್ದ ವ್ಯಕ್ತಿಗೆ ಸಂಪರ್ಕಿಸಿ, ನಮ್ಮ ಕೆಲಸ ಸುಲಭ ಮಾಡಿದ. ನಾವು ಮದ್ರಾಸಿಗೆ ವೀಸಾ ಆಫೀಸಿಗೆ ಸಂದರ್ಶನಕ್ಕೆ ಹೋಗಿ ಬಂದದ್ದು ಅಷ್ಟೇ. ವೀಸಾ ಕೂಡಾ ಸಿಕ್ಕತು. ಮೂರು ತಿಂಗಳಲ್ಲಿ ನಾವು ವಿಮಾನ ಹತ್ತಿ ಹೊರಟೇ ಬಿಟ್ಟೆವು, ದೂರದ ಅಮೇರಿಕಾಗೆ. ಅಲ್ಲಿಯ ನಮ್ಮ ಜನರಿಗೆ ನಾವು ಮಾಡುವ ಎಲ್ಲಾ ವಿಧಿ ವಿಧಾನಗಳಿಗೆ ಅರ್ಥ ಬೇಕು , ಆ ವಿಷಯದಲ್ಲಿ ನನಗೆ ಸಂತೋಷಾನಂದರಿಂದ ಪಡೆದ ಜ್ಞಾನ ಅಗತ್ಯಕ್ಕಿಂತ ಹೆಚ್ಚೇ ಇತ್ತು. ಮೊದಮೊದಲು ಯಾರದರೂ ಏನಾದರೂ ಪೂಜಾ ವಿಧಾನದ ಅರ್ಥ ಕೇಳಿದರೆ ನಾನು ಕನ್ನಡದಲ್ಲಿ ಹೇಳುತ್ತಿದ್ದೆ, ಅದನ್ನು ಶ್ರೀನಾಥ ಇಂಗ್ಲೀಷಿನಲ್ಲಿ ಅವರಿಗೆ ತಿಳಿಸುತ್ತಿದ್ದ. ಆದರೆ ದಿನ ಕಳೆಯುತ್ತಾ ಸ್ವಲ್ಪ ಮಟ್ಟಿಗೆ ನಾನೇ ಇಂಗ್ಲೀಷಿನಲ್ಲಿ ಅರ್ಥ ಹೇಳುವುದನ್ನು ಕಲಿತೆ. ಅಮೇರಿಕಾಗೆ ಬಂದು ಈಗ ಎಲ್ಲದಕ್ಕೂ ಹೊಂದಿಕೊಳ್ಳುತ್ತಿದ್ದೇವೆ ಎಂದು ತಿಳಿಸಲು ಅಪ್ಪನಿಗೆ ಫೋನ್‌ ಮಾಡಿದೆ. ನನ್ನ ಜೊತೆ ಮತ್ತು ವೈಶಾಲಿಯ ಜೊತೆ ತುಂಬಾ ಸಂತೋಷದಿಂದ ಮಾತನಾಡಿದರು. ಮಾತಿನ ಕೊನೆಯಲ್ಲಿ, ಅದೇಕೋ ಗೊತ್ತಿಲ್ಲ “ನೀನು ಅಮೇರಿಕಾದಲ್ಲಿ ನೆಲೆಸಿರುವ ವಿಷಯ ರಾಜೇಶನಿಗೆ ಗೊತ್ತಾಗಕೂಡದು, ನೀನು ಅವನನ್ನು ಸಂಪರ್ಕಿಸಲೂ ಪ್ರಯತ್ನ ಮಾಡಕೂಡದು” ಎಂದು ಹೇಳಿದರು. ಅಪ್ಪ ಏಕೆ ಹೀಗೆ ಹೇಳಿರಬಹುದು??? ನನ್ನಿಂದ ಅವನಿಗೆ ತೊಂದರೆ ಏನಾದರು ಆಗಬಹುದು ಎಂಬುವ ಭಯ ಅಪ್ಪನಿಗಿರಬಹುದು ಅಂದುಕೊಂಡೆ. ಹೀಗಿರುವಾಗ ಒಮ್ಮೆ ನಮ್ಮ ಊರಿನವರು ಅಮೇರಿಕಾದ ದೇವಸ್ಥಾನಕ್ಕೆ ಬಂದರು. ಬೆಂಗಳೂರಿನಲ್ಲಿ ನಮ್ಮ ಗುಡಿಯಲ್ಲಿ ಅವರು ನನ್ನನ್ನು ನೋಡಿದ್ದರಂತೆ. ತುಂಬಾ ಹೊತ್ತು ಮಾತನಾಡಿ “ನಿನ್ನ ತಮ್ಮ ರಾಜೇಶ ನನ್ನ ಜೊತೆಯಲ್ಲೇ ಕೆಲಸ ಮಾಡುವುದು” ಎಂದು ಹೇಳಿ ಹೋದರು. ಒಂದು ವಾರದ ನಂತರ ರಾಜೇಶ ದೇವಸ್ಥಾನಕ್ಕೆ ಬಂದ. ಅವನಿಗೆ ನಾನಲ್ಲಿರುವುದು ಹೇಗೆ ಗೊತ್ತಾಯಿತು ಎಂದು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಅಂದುಕೊಳ್ತೀನಿ. ಅವನು ಈಗ ಹಿಂದಿನ ತರ ಇರಲಿಲ್ಲ. ದಪ್ಪಗೆ, ಕೆಂಪಗೆ ಗುಂಡುಗುಂಡಾಗಿದ್ದ. ಅದು ದೇವಸ್ಥಾನ ಮುಚ್ಚುವ ಸಮಯ, ಅವನನ್ನು ಸ್ವಲ್ಪ ಅಲ್ಲೇ ಕಾಯಲು ಹೇಳಿದೆ. ನಂತರ ದೇವಸ್ಥಾನದ ಕಾಂಪೌಡಿನಲ್ಲೇ ಇರುವ ನಮ್ಮ ಮನೆಗೆ ಅವನನ್ನು ಕರೆದುಕೊಂಡು ಹೋದೆ. ಅಲ್ಲಿ ಶ್ರೀನಾಥ ಹಾಗೂ ವೈಶಾಲಿಯನ್ನು ಪರಿಚಯ ಮಾಡಿಸಿದೆ. ಅವನು ಮಾತನಾಡುತ್ತಿದ್ದ ಕನ್ನಡದಲ್ಲಿ ಶೇಕಡ ಎಪ್ಪತ್ತರಷ್ಟು ಆಂಗ್ಲ ಪದಗಳೇ ಇದ್ದವು. ನಮಗೂ ತಕ್ಕ ಮಟ್ಟಿಗೆ ಅರ್ಥವಾಯಿತು. ನಮ್ಮ ಮನೆಯಲ್ಲೇ ಊಟ ಮಾಡಿದ. ವೈಶಾಲಿ ಆತ್ಮೀಯವಾಗಿ ಮಾತನಾಡಿಸುತ್ತಾ ಊಟ ಬಡಿಸುತ್ತಿದ್ದದ್ದನ್ನು ನೋಡಿ ಅವನ ಕಣ್ಣಂಚಿನಲ್ಲಿ ನೀರು ನಿಂತಿತ್ತು. ಪಾಪ, ಎಷ್ಟೋ ವರ್ಷಗಳಾಗಿತ್ತು ಅನಿಸುತ್ತೆ ಅವನು ಈ ಭಾರತೀಯರ ಪ್ರೀತಿ ವಿಶ್ವಾಸ ಎಲ್ಲಾ ನೋಡಿ. “ಮುಂದಿನ ವಾರ ನೀವು ಮೂವರು ನಮ್ಮ ಮನೆಗೆ ತಿಂಡಿ ಊಟಕ್ಕೆ ಬರಲೇಬೇಕು” ಎಂದು ಆಹ್ವಾನವಿಟ್ಟ. ನಾವು ಸರಿ ಎಂದೆವು. ಮನೆಯಿಂದ ಹೊರಡುವಾಗ “ಅಪ್ಪನಿಗೆ ನಾನು ಭೇಟಿಯಾಗಿದ್ದು ತಿಳಿಸಬೇಡ, ನಮ್ಮ ಮನೆಯಿಂದಲೇ ವೀಡಿಯೋ ಕಾಲ್‌ ಮಾಡಿ ಸರ್ಪ್ರೈಸ್ ಕೊಡೋಣ” ಎಂದ ರಾಜೇಶ. ನಾನು ಸರಿ ಎಂದೆ. ನಮ್ಮ ಸ್ಥಳದಿಂದ ನನ್ನ ತಮ್ಮನ ಮನೆ ಸುಮಾರು ೨೫೦ ಕಿಲೋಮೀಟರ್. ಶ್ರೀನಾಥನ ಕಾರಿನಲ್ಲೇ ನಾವೆಲ್ಲಾ ಅವನ ಮನೆಗೆ ಹೋದೆವು. ಅವನ ಮನೆಯಲ್ಲಿ ನಮಗೆ ಕಾದಿದ್ದ ಆಶ್ಚರ್ಯ ನಾವಂತೂ ಊಹಿಸೇ ಇರಲಿಲ್ಲ. ಮನೆ ತಲುಪಿ ನಾವು ಕಾರಿನಿಂದ ಇಳಿಯುತ್ತಿದ್ದಂತೆ, ನನಗಿಂತ ಹತ್ತು ವರ್ಷ ದೊಡ್ಡವಳಂತೆ ಕಾಣುವ, ಒಂದು ಅಮೇರಿಕಾದ ಹೆಂಗಸು ಬಂದು ಇಂಗ್ಲೀಷಿನಲ್ಲಿ ಮಾತನಾಡುತ್ತಾ ನಮ್ಮನ್ನು ಸ್ವಾಗತಿಸಿದಳು. ನಾನು “ಯಾರವರು?” ಎಂದು ರಾಜೇಶನಿಗೆ ಕೇಳಿದೆ. “ಅವಳು ಮರೀನ್‌, ನನ್ನ ಹೆಂಡತಿ” ಎಂದ ರಾಜೇಶ. ಒಂದು ಕ್ಷಣ ನಾವು ಮೂವರೂ ಶಾಕ್‌ ಹೊಡೆಸಿಕೊಂಡವರಂತೆ ಒಬ್ಬರನ್ನೊಬ್ಬರು ನೋಡುತ್ತಾ ನಿಂತೆವು. “ಅಮೇರಿಕಾದವರನ್ನು ಮದುವೆ ಮಾಡಿಕೊಂಡರೆ ನಮಗೆ ಇಲ್ಲಿನ ಪೌರತ್ವ ಸುಲಭವಾಗಿ ಸಿಗುತ್ತದೆ, ಹಾಗಾಗಿ ಮದುವೆ ಮಾಡಿಕೊಂಡೆ. ಅದಲ್ಲದೆ ನಮ್ಮ ಆಫೀಸಿನಲ್ಲಿ ಅವಳು ನನ್ನ ಬಾಸ್‌ ಕೂಡಾ. ನನ್ನನ್ನು ತುಂಬಾ ಪ್ರೀತಿಸುತ್ತಾಳೆ” ಎಂದ. ಅವಳ ಭಾಷೆ ನಮಗೆ ಅಷ್ಟಾಗಿ ಅರ್ಥವಾಗದಿದ್ದರೂ ಅವಳು ನಮಗೆ ಮುಗುಳ್ನಗೆಯ ಮುಖವನ್ನು ತೋರುತ್ತಾ ನಾವು ಬಂದಿರುವುದು ಅವಳಿಗೆ ಸಂತೋಷ ತಂದಿದೆ ಎಂಬ ಸೂಚನೆ ಕೊಡುತ್ತಿದ್ದಳು. “ಇಲ್ಲೇ ಭಾರತೀಯ ಮೂಲದ ಒಂದು ಹೋಟಲ್ಲಿನಿಂದ ತಿಂಡಿ ತರಿಸಿದ್ದೇನೆ, ಎಲ್ಲಾ ಕೂಡಿ ತಿಂಡಿ ತಿನ್ನುವ” ಎಂದು ಹೇಳಿದ ರಾಜೇಶ. ನಾನು ಒಮ್ಮೆ ಅಪ್ಪನನ್ನು ಜ್ಞಾಪಿಸಿಕೊಂಡೆ. ವಿದೇಶಿ ಹುಡುಗಿಯ ಜೊತೆ ಇವನು ಮದುವೆ ಆಗಿರುವುದನ್ನು ಕೇಳಿದರೆ ಅಪ್ಪ ಎದೆ ಬಡಿದುಕೊಂಡು ಸಾಯುವುದಂತು ನಿಶ್ಚಿತ. “ಏಕೆ ಹೀಗೆ ಮಾಡಿದೆ, ಅಪ್ಪನಿಗೆ ವಿಷಯ ತಿಳಿದರೆ ಏನಾಗುತ್ತೆ ಗೊತ್ತಾ” ಎಂದು ನಾನು ರಾಜೇಶನನ್ನು ಕೇಳಿದೆ. “ಈ ವಿಷಯ ಅಪ್ಪನಿಗೆ ಗೊತ್ತು. ಒಂದು ವರ್ಷಕ್ಕೆ ಮುಂಚೆ ಅಪ್ಪ ಫೋನ್‌ ಮಾಡಿದ್ದಾಗ, ನಾನೇ ಈ ವಿಷಯ ಅಪ್ಪನಿಗೆ ತಿಳಿಸಿದ್ದೆ” ಎಂದ. ಆಗಲೇ ನಮಗೆ ತಿಳಿದದ್ದು, ಅಪ್ಪ ಕಳೆದ ಒಂದು ವರ್ಷದಿಂದ ನನ್ನನ್ನೂ ವೈಶಾಲಿಯನ್ನು ಹೆಚ್ಚು ಪ್ರೀತಿಯಿಂದ ನೋಡುತ್ತಿರುವ ಗುಟ್ಟು. ಅಷ್ಟೇ ಅಲ್ಲ, ಆಗಾಗ ಒಬ್ಬರೇ ಕುಳಿತು ಏನೋ ಯೋಚನೆ ಮಾಡುತ್ತಿದ್ದದ್ದೂ ನೆನಪಿಗೆ ಬಂತು. ದೇವಸ್ಥಾನದಲ್ಲಿ ಯಾರಾದರು ರಾಜೇಶನ ಬಗ್ಗೆ ಕೇಳಿದರೆ, ಹೆಚ್ಚೇನೂ ಮಾತನಾಡುತ್ತಿರಲಿಲ್ಲ. ಗೋವಿಂದಾ! ಏನಪ್ಪ ನಿನ್ನ ಮಾಯೇ ಎಂದು ಒಮ್ಮೆ ಮನಸ್ಸಿನಲ್ಲೇ ಧ್ಯಾನಿಸಿದೆ. ದೇವರೇ!!! ಎಂದು ನನ್ನ ಮೌನದ ಧ್ಯಾನಕ್ಕೆ ವೈಶಾಲಿ ದನಿಗೂಡಿಸಿದಳು. ಮರೀನ್‌ ರಾಜೇಶನ ಕಿವಿಯಲ್ಲಿ ಏನೋ ಹೇಳಿದಳು. ಆಗ ರಾಜೇಶ “ಅವಳಿಗೆ ನಮ್ಮ ಊಟ, ತಿಂಡಿ ಸೇರುವುದಿಲ್ಲ ಮತ್ತು ಅವಳು ತಿನ್ನುವ ಆಹಾರವನ್ನು ನೀವು ನೋಡಿದರೆ ನಮ್ಮ ಮನೆಗೆ ಬರುವುದನ್ನೇ ಬಿಟ್ಟು ಬಿಡುತ್ತೀರಿ, ಹಾಗಾಗಿ ಮರೀನ್‌ ಅವಳ ಗೆಳೆತಿಯ ಮನೆಗೆ ಹೋಗುತ್ತಾಳಂತೆ” ಎಂದ ರಾಜೇಶ. ಮರೀನ್‌ ಮುಖದಲ್ಲಿ ಮತ್ತೆ ಅದೇ ಗಗನ ಸಖಿಯರ ನಗು. ಸುಮಾರು ಹನ್ನೆರಡು ವರ್ಷದ ಒಂದು ಹುಡುಗಿಯೂ ಒಳಗಿನಿಂದ ಮರೀನ್‌ ಜೊತೆ ಹೊರಗೆ ಹೋಗಲು ತಯಾರಾಗಿ ಬಂತು. ನಮ್ಮ ಮುಖದಲ್ಲಿ ಮೂಡಿದ ಪ್ರಶ್ನಾರ್ಥಕ ಚಿಹ್ನೆ ರಾಜೇಶ ಗಮನಿಸಿದ ಅನಿಸುತ್ತೆ. “ಅವಳು, ಮರೀನ್‌ಳ ಮಗಳು” ಎಂದ ರಾಜೇಶ. ನಮಗೆ ಎಲ್ಲಾ ಅರ್ಥವಾಗಿತ್ತು. ಸುಮ್ಮನೆ ಕುಳಿತೆವು. ಮಧ್ಯಾಹ್ನ ಅಲ್ಲೇ ಹತ್ತಿರದಲ್ಲಿದ್ದ ಒಂದು ಭಾರತೀಯ ಹೋಟಲ್‌ಗೆ ಹೋಗಿ ಊಟ ಮುಗಿಸಿ “ನಾವು ಇನ್ನು ಹೊರಡುತ್ತೇವೆ, ನಾವು ನಿಮ್ಮ ಮನೆಗೆ ಬಂದರೆ ನಿಮ್ಮೆಲ್ಲರಿಗೂ ಸುಮ್ಮನೆ ತೊಂದರೆ, ಹಾಗಾಗಿ ನೀನೇ ಸಾಧ್ಯವಾದಾಗ ನಮ್ಮ ಮನೆಗೆ ಬಾ” ಎಂದು ಹೇಳಿ ಹೊರಟೆವು. ರಾಜೇಶ ಕೊಟ್ಟ ಶಾಕ್‌ನಿಂದ ನಾವೇ ಇನ್ನೂ ಹೊರಗೆ ಬಂದಿರಲಿಲ್ಲ, ಹಾಗಾಗಿ, ಅಪ್ಪನಿಗೆ ವೀಡಿಯೋ ಕಾಲ್‌ ಮಾಡಿ ಸರ್ಪ್ರೈಸ್‌ ಕೊಡೋ ವಿಷಯ ಪ್ರಸ್ತಾಪವೇ ಆಗಲಿಲ್ಲ. ಅಮೇರಿಕಾ ತಲುಪಿದ ಮೊದಲನೇ ವರ್ಷದಲ್ಲಿ ನನ್ನ ದೊಡ್ಡ ಮಗ ವೆಂಕಟೇಶ ಹುಟ್ಟಿದ. ನಾವು, ದೇವಸ್ಥಾನದ ಬೇರೆ ಪೂಜಾರಿಗಳು ಮತ್ತು ಅವರುಗಳ ಸಂಸಾರ ಹಾಗೂ ರಾಜೇಶ ಎಲ್ಲರೂ ಸೇರಿ ಮಗುವಿನ ನಾಮಕರಣ ಮುಗಿಸಿದೆವು. ನನ್ನ ಮನದಲ್ಲಿದ್ದ ಹೆಸರು ಮತ್ತು ಸ್ವಾಮೀಜಿ ತಿಳಿಸದ ಹೆಸರು ಒಂದೇ ಆಗಿತ್ತು. ಆದರೆ ಸ್ವಾಮೀಜಿ ನನಗಿಂತ ತುಂಬಾ ಫಾಸ್ಟು, ಮುಂದೆ ಹುಟ್ಟುವ ಎರಡನೇ ಮಗನಿಗೆ ಏನು ಹೆಸರು ಇಡಬೇಕೆಂದೂ ಸೂಚಿಸಿದ್ದರು. ರಾಜೇಶನಂತು ವೆಂಕಟೇಶನನ್ನು ಕೈಗೆ ತೆಗೆದುಕೊಂಡವನು ಮತ್ತೆ ಯಾರ ಕೈಗೂ ಮಗುವನ್ನು ಕೊಡಲೇ ಇಲ್ಲ. ಅಮೇರಿಕಾದಲ್ಲಿ ಎಲ್ಲಾ ಡಾಲರ್‌ ಸಂಪಾದನೆ. ಅದರಲ್ಲೂ ನಾವು ಹೆಚ್ಚು ಮೌಲ್ಯಾಧಾರಿತ ವಿಷಯಗಳನ್ನು ಅವರಲ್ಲಿ ಹಂಚಿಕೊಂಡಾಗ ದಕ್ಷಿಣೆ ಜಾಸ್ತಿ. ಹೀಗಾಗಿ ನನ್ನ ಉಳಿತಾಯ ಸಾಕಷ್ಟು ಹೆಚ್ಚಾಗಿ, ಬೆಂಗಳೂರಿನಲ್ಲಿ ಹೊಸ ಮನೆಯೊಂದನ್ನು ಕೊಂಡುಕೊಳ್ಳಲು ಅಪ್ಪನಿಗೆ ಹಣ ಕಳಿಸಿದೆ. ಪ್ರತಿ ವಾರದ ಕೊನೆಗೂ ರಾಜೇಶ ನಮ್ಮ ಮನೆಗೆ ಬರುತ್ತಿದ್ದ. ಒಂದೆರೆಡು ಸಲ ಮರೀನ್‌ಳನ್ನೂ ಕರೆತಂದಿದ್ದ. ಎಲ್ಲಾ ಸಂತೋಷದಿಂದ್ದೆವು. ನಾನು ಒಂದು ಕಾರ್‌ ಖರೀದಿಸಿದೆ. ಅಮೇರಿಕಾದಲ್ಲಿ ಆಮ್ಲಜನಕ ಇಲ್ಲದೇ ಬದುಕಬಹುದೇನೋ, ಆದರೆ ಕಾರ್‌ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ. ವೈಶಾಲಿಯೂ ಕಾರ್‌ ಓಡಿಸುವುದನ್ನು ಕಲಿತಳು. ಈ ನಮ್ಮ ಖುಷಿ ಹೆಚ್ಚಾಗುವಂತೆ, ನನ್ನ ಎರಡನೇ ಮಗೆ ಶ್ರೀನಿವಾಸ ಹುಟ್ಟಿದ. ನಮ್ಮ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ವಾರಾಂತ್ಯಗಳಲ್ಲಿ ವೆಂಕಟೇಶ ಹಾಗೂ ಶ್ರೀನಿವಾಸನನ್ನು ಹೆಗಲುಗಳ ಮೇಲೆ ಕೂಡಿಸಿಕೊಂಡು ರಾಜೇಶ ಸುತ್ತಾಡುತ್ತಿದ್ದದ್ದನ್ನು ನೋಡುವುದೇ ಒಂದು ಸಂತೋಷ. ಅದು ಇಸವಿ ೨೦೦೮, ರಿಸೆಷನ್‌ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಹರಡಿತು. ದೇಶಗಳ ಆರ್ಥಿಕ ಪರಿಸ್ಥಿತಿ ಕುಸಿಯಿತು. ಸಾಕಷ್ಟು ಜನ ತಮ್ಮ ಕೆಲಸಗಳನ್ನು ಕಳೆದುಕೊಂಡರು. ಇದರ ಹೆಚ್ಚು ಪರಿಣಾಮ ಅಮೇರಿಕಾಕ್ಕೆ ಆದದ್ದು. ಅದರಲ್ಲೂ ಅಮೇರಿಕದಲ್ಲಿ ಇದ್ದ ಭಾರತೀಯರಿಗೆ. ಸಾವಿರಾರು ಡಾಲರ್‌ ಹಣ ಸಂಪಾದನೆ ಮಾಡಿದ್ದವರು, ಐಶಾರಾಮಿ ಜೀವನ ಶೈಲಿಗಾಗಿ ತಾವು ಮಾಡಿದ್ದ ಸಾಲಗಳಿಗೆ ತಮ್ಮ ಉಳಿತಾಯದ ಹಣವನ್ನೆಲ್ಲಾ ಕಟ್ಟಿ ಭಿಕಾರಿಗಳಾದರು. ದೊಡ್ಡ ದೊಡ್ಡ ಬಂಗಲೆಗಳಲ್ಲಿ ಇದ್ದವರು, ಈಗ ಒಂದು ಚಿಕ್ಕ ಕೊಠಡಿಯನ್ನು ಬಾಡಿಗೆಗೆ ಪಡೆದು ಅದರಲ್ಲೇ ಮೂರ್ನಾಲ್ಕು ಜನ ವಾಸಿಸುತ್ತಿದ್ದರು. ಆದರೆ, ಈ ರಿಸೆಷನ್‌ ಪೂಜಾರಿಗಳಿಗೇನೂ ಅಷ್ಟು ತೊಂದರೆ ಕೊಡಲಿಲ್ಲ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ದೇವಸ್ಥಾನಕ್ಕೆ ಬರುವ ಭಕ್ತರೂ ಜಾಸ್ತಿಯೇ ಆದರು. ಒಳ್ಳೆಯ ದಿನಗಳು ಬರಲೆಂದು ಹಾಗೂ ಕಳೆದುಕೊಂಡ ಕೆಲಸ ಮತ್ತೆ ಸಿಗಲಿಕ್ಕಾಗಿ ಹೋಮ ಹವನಾದಿಗಳನ್ನು ಮಾಡಿಸಿದರು, ಅಲ್ಲಿದ್ದ ಭಾರತೀಯರು. ನಮಗೆ ಒಳ್ಳೆಯ ಆದಾಯವೇ ಆಯಿತು. ಹಾಗಂತ ನಾನು ಸುಮ್ಮನೆ ಹಣ ಮಾಡುವುದೇ ಗುರಿಯಾಗಿಟ್ಟುಕೊಂಡಿರಲಿಲ್ಲ. ಎಲ್ಲರಿಗೂ ಒಳ್ಳೆಯ ದಿನಗಳು ಮರುಕಳಿಸುವಂತೆ ಮಾಡಪ್ಪ ದೇವರೆ ಎಂದು ಪ್ರಾಮಾಣಿಕವಾಗಿಯೇ ಗೋವಿಂದನನ್ನು ಪ್ರಾರ್ಥಿಸುತ್ತಿದ್ದೆ. ಲೋಕ ಕಲ್ಯಾಣಕ್ಕಾಗಿ, ನನ್ನ ನಿತ್ಯ ಜಪದ ಸಂಖ್ಯೆಯನ್ನು ಹೆಚ್ಚಿಸಿದೆ. ಹೀಗಿರುವಾಗ, ರಾಜೇಶನ ಫೋನ್‌ ಬಂತು. ಅವನ ಮಾತಿನಲ್ಲಿ ಬೇಸರದ ಛಾಪು ಇತ್ತು. ತಾನು ಕೆಲಸ ಕಳೆದುಕೊಂಡಿರುವುದಾಗಿ ತಿಳಿಸಿದ. ಸದ್ಯಕ್ಕೆ ಗೆಳೆಯನ ಮನೆಯಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ. ನನಗೆ ಗೊತ್ತಿದ್ದ ಹಾಗೆ ಅವನು ಇದ್ದದ್ದು ಸ್ವಂತ ಮನೆ. ಹಾಗಿದ್ದಾಗ ಅದನ್ನೇಕೆ ಬಿಟ್ಟ ಎಂದು ಕೇಳಿದೆ. “ಇಲ್ಲ ಆ ಮನೆ ಮರೀನ್‌ಳದು. ಈಗ ಅವಳೂ ನನ್ನಿಂದ ದೂರವಾಗಿದ್ದಾಳೆ. ಕಂಪನಿಯು ನಮ್ಮಿಬ್ಬರಲ್ಲಿ ಒಬ್ಬರ ಕೆಲಸ ತೆಗೆಯಬೇಕೆಂದಾಗ, ತಾನು ಅಮೇರಿಕಾದವಳು, ಹಾಗಾಗಿ ತನ್ನ ಕೆಲಸವೇ ಉಳಿಸಕೊಳ್ಳಬೇಕೆಂದು ಹೇಳಿ, ನಾನು ಕೆಲಸ ಕಳೆದುಕೊಳ್ಳುವ ಹಾಗೆ ಮಾಡಿದಳು” ಎಂದ ರಾಜೇಶ. ನಾನಿದ್ದ ಪರಿಸ್ಥಿತಿಯಲ್ಲಿ ಅವನನ್ನು ಮನೆಗೆ ಕರೆಯುವ ಹಾಗಿರಲಿಲ್ಲ. ಅದು ನಮ್ಮ ದೇವಸ್ಥಾನದ ನಿಯಮ. ಅಷ್ಟರಲ್ಲಿ ನನಗೆ ಜ್ಞಾಪಕ ಬಂದದ್ದು, ನಮ್ಮ ದೇವಸ್ಥಾನದ ಹತ್ತಿರವೇ ಸ್ವಂತ ಮನೆಯಲ್ಲಿರುವ ಜೋಶಿಯವರು. ಅವರು ತಮ್ಮ ಮಗ ಮತ್ತು ಮಗಳಿಗೆ ವಧು ವರರನ್ನು ಹುಡುಕಿ ಮದುವೆ ಮಾಡುವುದಕ್ಕೆ ಭಾರತಕ್ಕೆ ಆರು ತಿಂಗಳು ಹೋಗುವುದಾಗಿ ತಿಳಿಸಿ, ಮನೆಯನ್ನು ಯಾರಾದರೂ ಆಗಾಗ ಶುಭ್ರಮಾಡುವವರು ಬೇಕಾಗಿದ್ದಾರೆ ಎಂದಿದ್ದರು. ಅಲ್ಲೇ ಉಳಿದುಕೊಂಡರೆ, ಇನ್ನೂ ಸಂತೋಷ, ಮುಖ್ಯ ವಸ್ತುಗಳನ್ನೆಲ್ಲಾ ಒಂದು ರೂಮಿನಲ್ಲಿ ಹಾಕಿ, ಆ ರೂಮಿಗೆ ಬೀಗ ಹಾಕಿದ್ದೇವೆ ಎಂದು ಹೇಳಿದ್ದರು. ನಾನು ರಾಜೇಶನಿಗೆ ಈ ವಿಷಯ ತಿಳಿಸಿದೆ. ಜೋಶಿಯವರಿಗೆ ಇದನ್ನು ಹೇಳಿದಾಗ, ಅವರೂ ಸಂತೋಷ ಪಟ್ಟರು. “ಸರಿ, ನಮ್ಮವರೇ ಇಲ್ಲಿ ಇರುವುದಾದರೇ ನಮಗೂ ಖುಷಿಯೇ” ಎಂದರು. ಹದಿನೈದು ದಿನದ ನಂತರ, ರಾಜೇಶ, ದೇವಸ್ಥಾನದ ಹತ್ತಿರದ ಜೋಶಿ ಅವರ ಮನೆಗೆ ಸೇರಿಕೊಂಡ. ದಿನಾ ನಮ್ಮ ಮನೆಯಲ್ಲೇ ಊಟ, ತಿಂಡಿ. ಆದರೆ ಈ ಯಾವ ವಿಷಯವೂ ಅಪ್ಪನಿಗೆ ತಿಳಿಯಬಾರದೆಂದು ನಾನೇ ರಾಜೇಶನಿಗೆ ಹೇಳಿದೆ. ಅದಲ್ಲದೆ, ರಾಜೇಶನನ್ನು ಅಮೇರಿಕಾದಲ್ಲಿ ನಾನು ಭೇಟಿಯಾಗಿರುವುದನ್ನು ನಾವೆಲ್ಲರೂ ಅಪ್ಪನಿಂದ ಗೌಪ್ಯವಾಗಿಯೇ ಇಟ್ಟಿದ್ದೆವು. ಎಷ್ಟೇ ಆದರೂ ಅವನ ಬುದ್ಧಿವಂತಿಕೆಯ ಮೇಲೆ ಅಪ್ಪನಿಗೆ ಅಪಾರ ಪ್ರೀತಿ ಇತ್ತು. ಆದರೆ, ಯಾವ ಮಗನು ಪೆದ್ದನೆಂದುಕೊಂಡಿದ್ದರೋ, ಅವನೇ ಇಂದು ಈ ಬುದ್ಧಿವಂತ ಮಗನಿಗೆ ಆಶ್ರಯ ಕೊಡುತ್ತಿದ್ದಾನೆ ಎಂದು ಅವರು ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ ಮತ್ತು ಅವರ ಮನಸ್ಸಿಗೆ ಅದು ಬೇಸರವನ್ನೂ ತರಬಹುದು ಎಂಬುದು ನನ್ನ ಅನಿಸಿಕೆ. “ಅಲ್ಲಾ, ನಿಮ್ಮ ತಮ್ಮ ಇಷ್ಟು ವರ್ಷದಿಂದ ಇಲ್ಲೇ ಇದ್ದಾರೆ, ಏನೂ ಹಣ ಉಳಿಸಿಲ್ಲವೇ” ಅಂತ ನನ್ನನ್ನು ವೈಶಾಲಿ ಕೇಳಿದಳು. ನನ್ನ ಮನಸ್ಸಿನಲ್ಲೂ ಆ ಪ್ರಶ್ನೆ ಬಂದಿತ್ತು, ಆದರೆ ರಾಜೇಶನಿದ್ದ ಪರಿಸ್ಥಿತಿಯಲ್ಲಿ ನಾನು ಅವನಲ್ಲಿ ಆ ಪ್ರಶ್ನೆ ಕೇಳುವುದಕ್ಕೆ ಧೈರ್ಯ ಮಾಡಲಿಲ್ಲ. ಆರು ತಿಂಗಳ ನಂತರ ಜೋಶಿಯವರ ಫೋನ್‌ ಬಂತು. “ಮಗ ಮತ್ತು ಮಗಳಿಗೆ ಮದುವೆ ಇನ್ನೂ ಸೆಟ್‌ ಆಗಿಲ್ಲ, ಇನ್ನೂ ಆರು ತಿಂಗಳು ಬೆಂಗಳೂರಿನಲ್ಲೇ ಇರುತ್ತೇವೆ” ಎಂದು ಹೇಳಿದರು. “ಸಾಧ್ಯವಾದರೆ ನಮ್ಮ ತಂದೆಯನ್ನು ಭೇಟಿ ಮಾಡಿ, ನಿಮಗೆ ಮದುವೆಯ ವಿಷಯದಲ್ಲಿ ಸಹಾಯ ಮಾಡುತ್ತಾರೆ” ಎಂದು ಹೇಳಿ ದೇವಸ್ಥಾನದ ವಿಳಾಸ ಕೊಟ್ಟೆ. . ಮುಂದೇನಾಗುತ್ತದೆ ಎಂದು ನನಗೆ ತಿಳಿದಿದ್ದರೆ, ನಾನು ಈ ಸಲಹೆಯನ್ನು ಖಂಡಿತಾ ಅವರಿಗೆ ಕೊಡುತ್ತಿರಲಿಲ್ಲ. ಸದ್ಯಕ್ಕಂತೂ ನಮ್ಮ ರಾಜೇಶನಿಗೆ ಬೇರೆ ಮನೆ ಹುಡುಕುವ ಕಷ್ಟ ತಪ್ಪಿತು. ರಾಜೇಶನು ಯಾವುದೋ ಚಿಕ್ಕ ಚಿಕ್ಕ ಕಂಪನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಪ್ರಾರಂಭಿಸಿದ್ದ. ನಾವು ಹಣ ತೆಗೆದುಕೊಳ್ಳುವುದಿಲ್ಲ ಎಂದು ತಿಳಿದಿದ್ದ ಅವನು, ವಾರಕ್ಕೊಂದು ಸಾರಿ, ದಿನಸಿ, ಹಣ್ಣು, ತರಕಾರಿ ಎಲ್ಲಾ ತರುತ್ತಿದ್ದ. ಬೆಂಗಳೂರಿನಲ್ಲಿ, ಜೋಶಿಯವರು ದೇವಸ್ಥಾನಕ್ಕೆ ಹೋಗಿ ಅಪ್ಪನನ್ನು ಭೇಟಿಯಾದರು. ಅಲ್ಲಿ ಅಪ್ಪನಿಗೆ ಜೋಶಿಯವರು ತಮ್ಮ ಪರಿಚಯ ಮಾಡಿಕೊಂಡು ಮಕ್ಕಳಿಗೆ ಮದುವೆಯಾಗದೇ ಇರುವ ಸಮಸ್ಯೆಯ ಬಗ್ಗೆ ವಿಚಾರಿಸದರು. ಅಪ್ಪ, ಅವರನ್ನು ನೇರ ಸ್ವಾಮೀಜಿಯಲ್ಲಿಗೆ ಕರೆದುಕೊಂಡು ಹೋದರು. ಸ್ವಾಮೀಜಿಯವರು “ನಿಮ್ಮ ಮಗಳಿಗೆ ರಾಜೇಶನನ್ನೇ ಏಕೆ ನೋಡಬಾರದು” ಎಂದರು. ತಕ್ಷಣ ಅಪ್ಪ “ಅದು ಸಾಧ್ಯವಿಲ್ಲ, ಬೇರೆ ಏನಾದರು ಉಪಾಯ ಅವರಿಗೆ ಹೇಳಿ” ಎಂದರು. ಆಗ ಜೋಶಿಯವರು “ರಾಜೇಶನನ್ನು ನಾನು ನೋಡಿದ್ದೇನೆ. ಈಗ ಸದ್ಯ ನಮ್ಮ ಮನೆಯಲ್ಲೇ ಅವನು ಉಳಿದುಕೊಂಡಿರುವುದು. ಅವನ ಕೆಲಸ ಹೋದ ಮೇಲೆ ನಿಮ್ಮ ದೊಡ್ಡ ಮಗ ರಾಘವನೇ ಅವನನ್ನು ನೋಡಿಕೊಳ್ಳುತ್ತಿದ್ದಾನೆ. ಇದರ ಮಧ್ಯೆ ಅವನ ಮದುವೆಯು ಮುರಿದದ್ದು ಕೇಳಿ ತುಂಬಾ ಬೇಸರವಾಯಿತು” ಎಂದರು. ರಾಜೇಶನ ಮದುವೆ ವಿಷಯ ಕೇಳಿ ಸ್ವಾಮೀಜಿಗೆ ಆಶ್ಚರ್ಯವಾದರೆ, ಮಿಕ್ಕೆಲ್ಲಾ ವಿಷಯ ಕೇಳಿ ಅಪ್ಪನಿಗೆ ಶಾಕ್‌ ಆಯಿತು. “ಅಮೇರಿಕಾದಲ್ಲಿ ಕೆಲಸವಿಲ್ಲವೆಂಬುದು ತಾತ್ಕಾಲಿಕವಷ್ಟೆ ಮತ್ತೆ ಡೈವೋರ್ಸ್‌ ಎಂಬುದು ಸರ್ವೇಸಾಮಾನ್ಯ. ನಿಮ್ಮ ಕಿರಿ ಮಗ ನನ್ನ ಮಗಳನ್ನು ಒಪ್ಪುವುದಾದರೆ ನಮಗೇನು ಅಭ್ಯಂತರವಿಲ್ಲ ಈ ಮದುವೆಗೆ” ಎಂದರು ಜೋಶಿ. ಆಗ ಅಪ್ಪ, “ನನ್ನ ಮಗಳು ಲಲಿತಾಗೆ ಮೊದಲು ಮದುವೆಯಾಗಬೇಕು, ಆ ನಂತರವೇ ನಾನು ನಿರ್ಧಾರ ಹೇಳಬಲ್ಲೆ” ಎಂದರು. ಜೋಶಿಯವರ ಮಗನಿಗೂ ಮತ್ತು ನನ್ನ ತಂಗಿ ಲಲಿತಾಳಿಗೂ ಸುಮಾರು 10 ವರ್ಷ ವ್ಯತ್ಯಾಸ, ಹಾಗಾಗಿ ಸ್ವಾಮೀಜಿಯವರು ಲಲಿತಾಳ ವಿಷಯ ಪ್ರಸ್ತಾಪಿಸಲಿಲ್ಲ. ನಂತರ ಜೋಶಿಯವರಿಗೆ ಯಾವುದೋ ಒಂದು ಹೋಮವನ್ನು ಮಾಡಲು ಹೇಳಿ, ಸ್ವಾಮೀಜಿ ಅಪ್ಪನ ಮುಖ ನೋಡುತ್ತಾ ಕುಳಿತರು. ಅಂದು ಸಂಜೆ ಅಪ್ಪ ನನಗೆ ಫೋನ್‌ ಮಾಡಿ, ನಡೆದುದ್ದನ್ನೆಲ್ಲಾ ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ನಾನೇನೂ ಮಾತನಾಡಲಿಲ್ಲ. “ನಾನು ನಿನ್ನನ್ನು ನನ್ನ ಮಗನಂತೆ ಎಂದಿಗೂ ನೋಡಲೇ ಇಲ್ಲ. ಚಿಕ್ಕ ವಯಸ್ಸಿನಿಂದ ನಿನ್ನನ್ನು ಅವನೊಂದಿಗೆ ಹೋಲಿಸುತ್ತಾ ಬಯ್ಯುತ್ತಲೇ ಬಂದೆ. ಆದರೆ ಕಷ್ಟ ಕಾಲದಲ್ಲಿ ಎಲ್ಲೋ ಒಂದು ದೂರದ ದೇಶದಲ್ಲಿ ರಾಜೇಶನಿಗೆ ನೀನು ಸಹಾಯವಾಗಿದ್ದೀಯ ಎಂದರೆ, ನಮ್ಮ ಪಾಲಿಗೆ ಆ ಗೋವಿಂದ ಬೇರೆಲ್ಲೂ ಇಲ್ಲ, ನೀನೇ ನಮ್ಮ ಬಾಳಿನ ಗೋವಿಂದ” ಎಂದರು. “ಹಾಗೆಲ್ಲಾ ಹೇಳಬೇಡಪ್ಪ, ಆ ಗೋವಿಂದನ ದಯೆ ನಮ್ಮ ಮೇಲೆ ಇದೆ, ಹಾಗಾಗಿಯೇ ಅವನು ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಸಹಾಯ ಮಾಡುತ್ತಿದ್ದಾನೆ” ಎಂದೆ ನಾನು. “ಸರಿ ಈ ವಿಷಯ ಬಿಟ್ಟುಬಿಡೋಣ, ನಾನು ಇಲ್ಲಿಗೆ ಬಂದು ನಾಲ್ಕು ವರ್ಷವಾಗುತ್ತಿದೆ. ನನಗೂ ವೈಶಾಲಿಗೂ ಭಾರತಕ್ಕೆ ವಾಪಸ್‌ ಬರುವ ಯೋಚನೆ ಇದೆ. ಮುಂದಿನ ವರ್ಷ ನಾವು ಖಾಯಂ ಆಗಿ ಭಾರತಕ್ಕೆ ಬರುತ್ತೇವೆ, ಆಮೇಲೆ, ಲಲಿತಾಳ ಮದುವೆ ವಿಚಾರ ಮಾಡೋಣ” ಎಂದೆ. ಹಾಗೆಯೇ, ನಾನು ಕಳಿಸಿದ್ದ ದುಡ್ಡಿನಲ್ಲಿ ಅಪ್ಪ ಎರಡು ಮನೆ ಖರೀದಿಸಿ ಬಾಡಿಗೆಗೆ ಕೊಟ್ಟಿದ್ದರು ಎಂದು ತಿಳಿಯಿತು. “ಸರಿ ಬೇಗ ಬಂದು ಬಿಡಿ” ಎಂದರು ಅಪ್ಪ. “ನಾಳೆ ರಾಜೇಶನಿಗೂ ನಿನಗೆ ಫೋನ್‌ ಮಾಡಲು ಹೇಳಲೇ” ಎಂದು ಹೇಳಿದ್ದಕ್ಕೆ ಅಪ್ಪ ಫೋನ್‌ ಕಟ್‌ ಮಾಡಿದರು. ಮಾರನೇ ದಿನ ರಾಜೇಶನಿಗೆ ಅಪ್ಪನೊಂದಿಗೆ ಮಾತನಾಡಿದ್ದನ್ನು ತಿಳಿಸಿದೆ ಹಾಗೂ ಹೊಸ ಮನೆ ಖರೀದಿಸಿದ್ದರ ಬಗ್ಗೆಯೂ ತಿಳಿಸಿದೆ. “ನೀನೇ ಅಧೃಷ್ಟವಂತ, ಅಪ್ಪನೊಂದಿಗೆ ಇನ್ನೂ ಸಂಪರ್ಕದಲ್ಲೀದ್ದೀಯ. ಅಪ್ಪ ನನ್ನ ಮೇಲೆ ಇಟ್ಟ ಪೂರ್ತಿ ನಂಬಿಕೆಯನ್ನು ನಾನು ಹಾಳುಮಾಡಿದ್ದೇನೆ. ಬೆಂಗಳೂರಿಗೆ ಹೋಗಿ ಅಪ್ಪನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕ್ಷಮೆ ಯಾಚಿಸಬೇಕು, ಆಗಲೇ ನನಗೆ ಸಮಾಧಾನ” ಎಂದ ರಾಜೇಶ. ಜೋಶಿಯವರ ಮಗಳ ಮದುವೆ ವಿಷಯ ಅವನಿಗೆ ತಿಳಿಸಿದೆ, ಜೋರಾಗಿ ನಕ್ಕು “ಇದೊಂದು ಬಾಕಿ ಇತ್ತು ನೋಡು” ಎಂದ. ರಿಸೆಷನ್ ಮುಗಿಯುತ್ತಾ ಬಂತು, ರಾಜೇಶನಿಗೆ ತಾನು ಮುಂಚೆ ಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ ಆಹ್ವಾನ ಬಂತು, ಆದರೆ ಇವ ಹೋಗಲು ಒಪ್ಪಲಿಲ್ಲ. ಮತ್ತೆ ಮರೀನ್‌ ಕೆಳಗೆ ಕೆಲಸ ಮಾಡುವುದು ಅವನಿಗೆ ಇಷ್ಟವಿರಲಿಲ್ಲ. ನಾವು ಬೆಂಗಳೂರಿಗೆ ವಾಪಸ್‌ ಹೋಗುತ್ತಿರುವ ವಿಷಯ ಅವನಿಗೆ ತಿಳಿಸಿದೆವು. ಶ್ರೀನಾಥ ಇನ್ನೂ ಐದು ವರ್ಷ ಅಲ್ಲೇ ಉಳಿದುಕೊಳ್ಳುವುದಾಗಿ ತಿಳಿಸಿದ. ನಮ್ಮ ಮನೆ ಊಟ, ತಿಂಡಿ, ವಾತಾವರಣ ಎಲ್ಲದಕ್ಕೂ ಒಗ್ಗಿ ಹೊಗಿದ್ದರು ರಾಜೇಶ ಮತ್ತು ಶ್ರೀನಾಥ. ಈಗ ಶ್ರೀನಾಥ ಮತ್ತು ರಾಜೇಶ ಮುಂದೆ ಹೇಗಿರುತ್ತಾರೆ ಎಂಬ ಆತಂಕ ವೈಶಾಲಿಗೆ. “ಬೆಂಗಳೂರಿಗೆ ಟಿಕೆಟ್‌ ಬುಕ್‌ ಮಾಡುವಾಗ, ನನಗೂ ಅದೇ ವಿಮಾನದಲ್ಲಿ ಟಿಕೇಟ್‌ ಬುಕ್‌ ಮಾಡು” ಎಂದು ರಾಜೇಶ ಹೇಳಿದಾಗ ನಮಗಾದ ಆಶ್ಚರ್ಯ ಹಾಗೂ ಸಂತೋಷಕ್ಕೆ ಮಿತಿಯೇ ಇರಲಿಲ್ಲ. “ಈ ರಿಸೆಷನ್‌ ನನಗೆ ಒಳ್ಳೇ ಪಾಠ ಕಲಿಸಿದೆ. ನಮ್ಮೂರಿನಲ್ಲೇ ಇದ್ದು, ಒಂದು ಚಿಕ್ಕ ಕಂಪನಿ ನಾನೇ ಶುರುಮಾಡುತ್ತೇನೆ” ಎಂದು ಹೇಳಿದ. “ಅದಕ್ಕೆ ಹೆಚ್ಚು ಹಣ ಬೇಕಾಗುತ್ತೆ ಅಲ್ವ” ಅಂದೆ ನಾನು. “ಏನೂ ತೊಂದರೆ ಇಲ್ಲ, ಬೆಂಗಳೂರಿನಲ್ಲಿರುವ ಮೂರು ಮನೆಗಳಲ್ಲಿ ಒಂದು ಮನೆ ಮಾರಿದರಾಯಿತು” ಎಂದ ರಾಜೇಶ. ವೈಶಾಲಿ ಆತಂಕದಿಂದ ನನ್ನ ಕಡೆ ನೋಡಿದಳು. “ಯೋಚಿಸಬೇಡಿ ಅತ್ತಿಗೆ, ಅಮ್ಮನ ಪ್ರೀತಿಯಂತು ನಾನು ಹೆಚ್ಚು ನೋಡಿಲ್ಲ. ಆದರೆ ಅಮ್ಮನ ಪ್ರೀತಿ ಹೇಗಿರುತ್ತೆಂದು ನಾನು ನಿಮ್ಮಲ್ಲಿ ಕಂಡೆ. ನಾನು ನಿಮಗೆ ಎಂದಿಗೂ ತೊಂದರೆ ಕೊಡುವವನಲ್ಲ. ಬೆಂಗಳೂರಿನ ಅಪ್ಪನ ಮನೆ ಮತ್ತು ನಿಮ್ಮ ಉಳಿತಾಯದ ಹಣದಿಂದ ಖರೀದಿಸಿರುವ ಎರಡು ಮನೆ ಎಲ್ಲವೂ ನಿಮ್ಮದೇ. ಅದರಲ್ಲಿ ಒಂದು ಅಂಗುಲ ಜಾಗ ಕೇಳುವದಕ್ಕೂ ನನಗೆ ಹಕ್ಕಿಲ್ಲ. ನಾನು ಮಾರುತ್ತಿರುವುದು ನಿಮ್ಮ ಮನೆಯನ್ನಲ್ಲ. ನನ್ನ ಉಳಿತಾಯದಿಂದ ಬೆಂಗಳೂರಿನಲ್ಲಿ ಎರಡು ಚಿಕ್ಕ ಮನೆಗಳನ್ನು ಖರೀದಿಸಿದ್ದೇನೆ ಮತ್ತು ಇನ್ನೊಂದು ದೊಡ್ಡ ಮನೆಯನ್ನು ಬ್ಯಾಂಕ್‌ ಲೋನ್‌ ತೆಗೆದುಕೊಂಡು ಖರೀದಿಸಿದ್ದೇನೆ. ಸದ್ಯಕ್ಕೆ ಮೂರರಿಂದಲೂ ಸೇರಿ ಒಂದು ಲಕ್ಷ ರೂಪಾಯಿ ಬಾಡಿಗೆ ಬರುತ್ತಿದ್ದು ಅದು ಬ್ಯಾಂಕ್‌ ಲೋನ್‌ ಗೆ ಹೋಗುತ್ತಿದೆ” ಎಂದ ರಾಜೇಶ. ಆಗಲೇ ನಮಗೆ ತಿಳಿದದ್ದು ಇವ ಬೆಂಗಳೂರಿಗೆ ಮೂರು ಸಲ ಮನೆ ರಿಜಿಸ್ಟ್ರೇಶನ್ ಸಲುವಾಗಿ ಬಂದಿದ್ದನೆಂಬುದು ಮತ್ತು ಅವನು ನಮ್ಮ ಮನೆಗೆ ಅಪ್ಪನನ್ನು ಭೇಟಿ ಮಾಡಲು ಬರಲಿಲ್ಲವೆಂಬುದು. ಬಹುಷಃ ಹಣದಿಂದಾಗುವ ಮನದ ಕುಣಿತವನ್ನು ಸರಿಪಡಿಸಲು ಆಗಾಗ ಈ ರಿಸೆಷನ್‌ ತರಹದ ಮಹಾಮಾರಿಗಳ ಅವಶ್ಯಕತೆ ಇದೆ ಎಂದು ಮನಸ್ಸಿನಲ್ಲಂದುಕೊಂಡೆ. “ಸದ್ಯ, ರಾಜೇಶ ತನ್ನ ಉಳಿತಾಯದ ಹಣ ಹಾಳು ಮಾಡಿಕೊಂಡಿಲ್ಲವಲ್ಲ” ಎಂದಳು ವೈಶಾಲಿ. ಎಂದೋ ಅವಳು ನನಗೆ ಕೇಳಿದ್ದ ಪ್ರಶ್ನೆಗೆ ಅವಳಿಗೆ ಇಂದು ರಾಜೇಶನಿಂದಲೇ ಉತ್ತರ ಸಿಕ್ಕಿತ್ತು. ವಾಪಸ್‌ ಹೋಗುವ ಮುನ್ನ ಅಮೇರಿಕಾ ಪೂರ್ತಿ ಒಮ್ಮೆ ಪ್ರವಾಸ ಮಾಡಬೇಕೆಂಬ ಆಸೆ ವೈಶಾಲಿಗೆ. ಎಲ್ಲಾ ವ್ಯವಸ್ಥೆಯೂ ರಾಜೇಶನೇ ಮಾಡಿದ. ನಮ್ಮ ಜೊತೆಗೆ ವೈಶಾಲಿಯ ತಮ್ಮ ಶ್ರೀನಾಥನೂ ಪ್ರವಾಸಕ್ಕೆ ಬಂದ. ನಯಾಗರಾ ಜಲಪಾತದ ಮುಂದೆ ನಿಂತು ದುಮ್ಮಿಕ್ಕುವ ಆ ನೀರನ್ನು ನೋಡುತ್ತಾ ಅದರ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಿರುವಾಗ “ಭಾವ, ನಿಮ್ಮದೇನೂ ಅಭ್ಯಂತರವಿಲ್ಲ ಎಂದರೆ ಲಲಿತೆಯನ್ನು ನಾನು ಮದುವೆ ಮಾಡಿಕೊಳ್ಳಲೇ” ಎಂದ ಶ್ರೀನಾಥ. “ಅವಳೋ ತ್ರಿಪುರ ಸುಂದರಿಯಂತಿದ್ದಾಳೆ ಮತ್ತು ತುಂಬಾ ಓದಿದ್ದಾಳೇ ಕೂಡ. ನಿನ್ನನ್ನು ಅವಳು ಒಪ್ಪಿದರೆ ನಮಗೇನೂ ತೊಂದರೆ ಇಲ್ಲ” ಎಂದೆ ನಾನು. ಅದಕ್ಕೆ ಅವನು “ಅವಳು ಇದನ್ನೇ ಹೇಳಿದಳು; ಅಣ್ಣ ಒಪ್ಪುವುದಾದರೆ ಅವಳೂ ಮದುವೆಗೆ ಸಿದ್ಧವಂತೆ” ಅಂದಾಗ, ನಮ್ಮ ಕಣ್ಣ ಹಿಂದೆ ಆ ಗೋವಿಂದ ಏನೆಲ್ಲಾ ಆಟ ಆಡಿಸುತ್ತಾನೆ ಎಂದು ತಿಳಿಯಿತು. ವೈಶಾಲಿ ನಯಾಗರಾ ನೋಡುವುದನ್ನು ಬಿಟ್ಟು ತನ್ನ ತಮ್ಮನ ಮುಖವನ್ನೇ ನೋಡುತ್ತಾ ನಿಂತಳು. ಶ್ರೀನಾಥ ನಾಚಿಕೆಯಿಂದ ತಲೆ ತಗ್ಗಿಸಿದ್ದ. “ಈಗ ಸುಮ್ಮನಿದ್ದು ಬಿಡು, ಬೆಂಗಳೂರಿಗೆ ಹೋದ ಮೇಲೆ, ನಾನೇ ಅಪ್ಪನೊಂದಿಗೆ ಈ ವಿಷಯ ಮಾತನಾಡಿ ನಿನಗೆ ತಿಳಿಸುತ್ತೇನೆ” ಎಂದೆ. “ಇಲ್ಲಿ ದೇವಸ್ಥಾನದಲ್ಲಿ ನಾನು ಎರಡು ತಿಂಗಳು ರಜೆ ಕೇಳಿದ್ದೇನೆ. ನಿಮ್ಮ ಜೊತೆ ನಾನೂ ಬೆಂಗಳೂರಿಗೆ ಬರುತ್ತಿದ್ದೇನೆ ಭಾವ, ನಿಮ್ಮ ಫ್ಲೈಟಿನಲ್ಲೇ ನಾನು ಟಿಕೇಟ್‌ ಕಾಯ್ದಿರಿಸಿದೆ ಮತ್ತು ಲಲಿತಾಗೂ ನಾನು ಬರುತ್ತೇನೆ ಅಂತ ಪ್ರಾಮಿಸ್ ಮಾಡಿದ್ದೀನಿ” ಎಂದ ಶ್ರೀನಾಥ. “ಮತ್ತೆ, ಮದುವೆ ದಿನಾಂಕ ಮತ್ತು ಯಾವ ಛತ್ರ ಅದೂ ನಿಶ್ಚಯ ಆಗಿದ್ರೆ ತಿಳಿಸಿಬಿಡು” ಎಂದಳು ವೈಶಾಲಿ. “ಹಾಗೇನಿಲ್ಲ ಸದ್ಯಕ್ಕೆ ವಿಷಯ ಇಷ್ಟಕ್ಕೇ ನಿಂತಿದೆ” ಎಂದ ಶ್ರೀನಾಥ. ಜೋಶಿಯವರೂ ಇತ್ತೀಚೆಗೆ ಸಿಕ್ಕಿ, ತಾವೂ ಕುಟುಂಬ ಸಮೇತ ಬೆಂಗಳೂರಿಗೆ ಸದ್ಯದಲೇ ಖಾಯಂ ಆಗಿ ಹಿಂದಿರುಗುತ್ತಿದ್ದೇವೆ ಎಂದು ಹೇಳಿ, ಇನ್ನೊಮ್ಮೆ ರಾಜೇಶನಿಗೆ ತಮ್ಮ ಮಗಳನ್ನು ಕೊಡುವ ವಿಚಾರ ಪ್ರಸ್ತಾಪಿಸಿದರು. ಅಂತೂ ಎರಡು ಮದುವೆಗೂ ಅಪ್ಪನನ್ನು ಒಪ್ಪಿಸೋ ಜವಾಬ್ಧಾರಿ ಈಗ ನನ್ನದಾಗಿದೆ. ಕಡೆಗೂ ಬೆಂಗಳೂರಿಗೆ ವಾಪಸ್ ಆಗುವ ದಿನ ಬಂತು. ಇಲ್ಲೇ ಉಳಿದುಕೊಂಡಿದ್ದರೆ ಸ್ವಲ್ಪ ವರ್ಷವಾದ ಮೇಲೆ ನಮಗೂ ಇಬ್ಬರು ಅಮೇರಿಕನ್‌ ಸೊಸೆಯರು ಸಿಗುತ್ತಿದ್ದರೇನೋ. ಎಲ್ಲಾ ಗೋವಿಂದನ ದಯೆ, ಸರಿಯಾದ ಸಮಯದಲ್ಲಿ ಭಾರತಕ್ಕೆ ವಾಪಸ್‌ ಆಗುವ ಬುದ್ದಿ ನನಗೆ ಕೊಟ್ಟ, ಜೊತೆಗೆ ನನ್ನ ನಿರ್ಧಾರವನ್ನು ಒಪ್ಪುವಂತ ಹೆಂಡತಿಯನ್ನೂ ನನಗೆ ಕೊಟ್ಟ. ಇಂದು ವಿಮಾನ ನಿಲ್ದಾಣದಲ್ಲಿ ನಾನು, ವೈಶಾಲಿ, ವೆಂಕಟೇಶ, ಶ್ರೀನಿವಾಸ, ರಾಜೇಶ ಹಾಗೂ ಶ್ರೀನಾಥ ಬೆಂಗಳೂರಿನ ವಿಮಾನಕ್ಕಾಗಿ ಕಾಯುತ್ತಿದ್ದೇವೆ. ವಿಮಾನ ಹೊರಡುವುದು ಆರು ಗಂಟೆ ತಡವಾಗಿದ್ದರಿಂದ ನಿಮ್ಮೊಂದಿಗೆ ನನ್ನ ಈ ಕತೆಯನ್ನು ಬರೆದು ಹಂಚಿಕೊಳ್ಳಲು ಸಾಧ್ಯವಾಯಿತು. ವಿಮಾನ ತಡವಾಗಿದ್ದೂ ಗೋವಿಂದನ ದಯೆಯೇ ಎಂಬುದು ನನ್ನ ನಂಬಿಕೆ. ಇಲ್ಲಾ ಅಂದ್ರೆ ನನ್ನ ಕತೆ ನಿಮ್ಮೊಂದಿಗೆ ಹೇಳೋಕ್ಕೆ ಸಮಯ ಎಲ್ಲಿ ಸಿಕ್ತಾ ಇತ್ತು ಹೇಳಿ. ಸರಿ ಹಾಗಾದ್ರೆ, ಮತ್ತೆ ಬೆಂಗಳೂರಿನಲ್ಲಿ ಸಿಗೋಣವೇ………..
ಅನಿಸಿಕೆಗಳು