“ರಾಜು ಎಲ್ಲಿದ್ಯಪ್ಪಾ” “ರಾಜು ಎಲ್ಲಿದ್ಯಪ್ಪಾ” ಎಂದು ವಿಶ್ವನಾಥ ಹೆದ್ದಾರಿಯಲ್ಲಿ ಜೋರಾಗಿ ಕಿರುಚುತ್ತಿದ್ದ. ಅದೇ ಸಮಯಕ್ಕೆ ಮುಖ್ಯಮಂತ್ರಿಗಳ ಕವಾಯತ್ತು ರಸ್ತೆಯಲ್ಲಿ ಹೋಗುತ್ತಿತ್ತು. ಎಲ್ಲಿದ್ದೀಯಪ್ಪ ಎಂಬ ಪದ ಕೇಳಿದ ತಕ್ಷಣ ಮುಖ್ಯಮಂತ್ರಿಗಳು “ನನ್ನನ್ನೇ ಅಣಕಿಸುತ್ತಾನೆ ಈ ಬದ್ಮಾಶ್. ಒದ್ದು ಒಳಗೆ ಹಾಕ್ರಿ” ಅಂತ ಪೊಲೀಸರಿಗೆ ಆದೇಶ ಕೊಟ್ಟರು. ತಕ್ಷಣ ಪೊಲೀಸರು ವಿಶ್ವನಾಥನ ಕೈಹಿಡಿದುಕೊಂಡು ಪೊಲೀಸ್ ಜೀಪನ್ನು ಹತ್ತಿಸಿದರು. ಅಕ್ಕ ಪಕ್ಕದಲ್ಲಿ ಇದ್ದಂತಹ ಜನ “ಅವನನ್ನು ಬಿಟ್ಟುಬಿಡಿ, ಅವನು ಒಬ್ಬ ಹುಚ್ಚ” ಎಂದು ಪೊಲೀಸರಿಗೆ ಹೇಳಿದರು. ಆದರೆ ಪೊಲೀಸರು ಅವರ ಮಾತನ್ನು ಕೇಳಲಿಲ್ಲ.
ಮುಖ್ಯಮಂತ್ರಿ ರಾಜು ಐಯ್ಯಂಗಾರ್ ಕರ್ನಾಟಕದಲ್ಲಿ ಪ್ರವಾಹದಿಂದ ತೊಂದರೆಯಾಗಿದ್ದ ಸಮಯದಲ್ಲಿ, ರಾಜ್ಯದ ಜನರ ತೊಂದರೆಗೆ ಸ್ಪಂದಿಸುವುದು ಬಿಟ್ಟು ಮೊಮ್ಮಗಳ ಗ್ರ್ಯಾಜುಯೇಶನ್ ಇದೆ ಎಂದು ಹೇಳಿ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಪ್ರವಾಹ ಪೀಡಿತರೆಲ್ಲ “ರಾಜು ಎಲ್ಲಿದ್ಯಪ್ಪಾ” ಎಂದು ಕೂಗುತ್ತಿರುವುದು ಎಲ್ಲಾ ಟಿವಿ ಚ್ಯಾನೆಲ್‌ಗಳಲ್ಲೂ ಪ್ರಸಾರವಾಗಿತ್ತು. ಈ “ರಾಜು ಎಲ್ಲಿದ್ಯಪ್ಪಾ” ಎಂಬ ಶೀರ್ಷಿಕೆ ವಸ್ತುವಾಗಿಟ್ಟುಕೊಂಡು ಎಷ್ಟೋ ಚಿಕ್ಕ ಚಿಕ್ಕ ವೀಡಿಯೋಗಳೂ ಬಂದಿದ್ದವು. ಹಾಗಾಗಿ ಮುಖ್ಯಮಂತ್ರಿಗಳು ಎಲ್ಲಿ ಹೋದರೂ ಅವರನ್ನು ಜನ “ರಾಜು ಎಲ್ಲಿದ್ಯಪ್ಪಾ” ಎಂದು ಕೂಗಿ ಗೇಲಿ ಮಾಡುತ್ತಿದ್ದರು. ಹೀಗಾಗಿಯೇ ಈಗ ವಿಶ್ವನಾಥ ಪೋಲೀಸರ ವಶದಲ್ಲಿರೋದು.
ರಾಜರಾಜೇಶ್ವರಿನಗರದಿಂದ ಅಲಸೂರು ಪೊಲೀಸ್ ಠಾಣೆಗೆ ವಿಶ್ವನಾಥನನ್ನು ಕರೆದುಕೊಂಡು ಹೋದರು. ಮಾರ್ಗಮಧ್ಯದಲ್ಲಿ ವಿಶ್ವನಾಥನು ಆಡುತ್ತಿದ್ದದ್ದು ಒಂದೇ ಮಾತು “ರಾಜು ಎಲ್ಲಿದ್ಯಪ್ಪಾ” “ರಾಜು ಎಲ್ಲಿದ್ಯಪ್ಪಾ”. ಆಗಲೇ ಪೊಲೀಸರಿಗೆ ವಿಶ್ವನಾಥ ಒಬ್ಬ ಹುಚ್ಚ ಎಂಬುವುದು ಮನವರಿಕೆಯಾಗಿತ್ತು. ಪೊಲೀಸ್ ಠಾಣೆಗೆ ವಿಶ್ವನಾಥನ ಅಣ್ಣ ಗೋಪಿನಾಥ ಬಂದ. “ನನ್ನ ತಮ್ಮ ಹುಚ್ಚ, ದಯವಿಟ್ಟು ಅವನನ್ನು ಬಿಟ್ಟು ಬಿಡಿ” ಎಂದು ನಮ್ರತೆಯಿಂದ ಕೇಳಿಕೊಂಡ.
ಪೊಲೀಸರು “ನಮಗೂ ಅದು ಗೊತ್ತಾಯ್ತು, ಆದರೆ ಮುಖ್ಯಮಂತ್ರಿಗಳು ಅರೆಸ್ಟ್ ಮಾಡಲಿಕ್ಕೆ ಹೇಳಿದ್ದಾರೆ. ಎಫ್ಐಆರ್ ಕೂಡಾ ಹಾಕಿದ್ದೇವೆ, ಏನು ಮಾಡಲಿಕ್ಕಾಗಲ್ಲ. ಒಂದು ರಾತ್ರಿಯಾದರೂ ಪೊಲೀಸ್ ಠಾಣೆಯಲ್ಲಿ ಕಳೆಯಲೇಬೇಕು. ಯೋಚನೆ ಮಾಡಬೇಡಿ, ನಿಮ್ಮ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.
ಅಲ್ಲೇ ಹತ್ತಿರ ನಿಂತಿದ್ದ ಕಾನ್ಸ್ಟೇಬಲ್ ಸಿದ್ದಯ್ಯ “ಯಾವಾಗಲಿಂದ ವಿಶ್ವನಾಥರಿಗೆ ಈ ಹುಚ್ಚು ಬಂತು” ಎಂದು ಗೋಪಿನಾಥನನ್ನು ಕೇಳಿದರು.
“ಆರು ತಿಂಗಳು ಆಯ್ತು ಸ್ವಾಮಿ. ನನ್ನ ತಮ್ಮ ಬ್ಯಾಂಕಿನಲ್ಲಿ ಅಧಿಕಾರಿ. ಮಕ್ಕಳೆಂದರೆ ತುಂಬಾ ಇಷ್ಟಪಡುತ್ತಿದ್ದ . ಒಮ್ಮೆ ನಮ್ಮ ಅಪಾರ್ಟ್ಮೆಂಟಿನ ಎಲ್ಲರೂ ರಾಮನಾಥಪುರಕ್ಕೆ ಪ್ರವಾಸಕ್ಕಾಗಿ ಹೊರಟೆವು. ನದಿಯ ದಡದಲ್ಲಿ ನಮ್ಮ ಅಪಾರ್ಟ್ಮೆಂಟಿನ ಮಕ್ಕಳೆಲ್ಲಾ ವಿಶ್ವನಾಥನ ಹತ್ತಿರ ಕುಳಿತು ಆಟವಾಡುತ್ತಿದ್ದರು. ಅದರಲ್ಲಿ ನಾಲ್ಕು ವರ್ಷದ ಒಬ್ಬ ಬಾಲಕ ರಾಜು ಮಕ್ಕಳ ಗುಂಪಿನಿಂದ ಹೊರಬಂದು ಅಲ್ಲಿದ್ದ ಒಂದು ಮುಳ್ಳಿನ ಪೊದೆಯೊಳಗೆ ಹೊರಟುಹೋದ. ತಕ್ಷಣ ಗಮನಿಸಿದ ನನ್ನ ತಮ್ಮ ಮುಳ್ಳಿನ ಪೂದೆಯ ಹತ್ತಿರ ಹೋಗಿ ಅಲ್ಲೇ ಕಾಯುತ್ತಾ ಕುಳಿತ. ಅವನು ಹೇಳುತ್ತಿದ್ದ ಒಂದು ಮಾತು ʼರಾಜು ಎಲ್ಲಿದ್ಯಪ್ಪಾʼ, ಅಷ್ಟೇ ನೋಡಿ ಆರು ತಿಂಗಳಿನಿಂದ ಅವನ ಬಾಯಲ್ಲಿ ಬಂದಿರುವುದು ಅದೆರಡೇ ಪದ” ಎಂದ ಗೋಪಿನಾಥ್.
ತಕ್ಷಣ ಕಾನ್ಸ್ಟೇಬಲ್ ಸಿದ್ದಯ್ಯ “ಮತ್ತೆ ಮಗು ರಾಜು ಏನಾದ” ಅಂತ ಕೇಳಿದ. ಅದಕ್ಕೆ ಗೋಪಿನಾಥ “ಮಗು ಪೊದೆಯ ಇನ್ನೊಂದು ಕಡೆಯಿಂದ ಹೊರಬಂದ. ಮೈಯೆಲ್ಲಾ ಗಾಯ ಆಗಿತ್ತು. ಯಾರೋ ಒಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅದಕ್ಕೆ ಔಷಧಿ ಹಚ್ಚಿಸಿ ಕರೆದುಕೊಂಡು ಬಂದರು. ನಂತರ ನನ್ನ ತಮ್ಮನಿಗೆ ಮಗುವನ್ನು ತೋರಿಸಿದರೂ ಅವನ ಮನಸ್ಸಿನಿಂದ ʼರಾಜು ಎಲ್ಲಿದ್ಯಪ್ಪಾʼ ಪದ ಹೋಗಲೇ ಇಲ್ಲ” ಎಂದರು.
“ಬ್ಯಾಂಕಿನವರು, ನನ್ನ ತಮ್ಮನನ್ನು ಕೆಲಸದಿಂದ ತೆಗೆದುಹಾಕಿ ಹುಚ್ಚು ಸರಿಯಾದ ನಂತರ ವೈದ್ಯರ ಸರ್ಟಿಫಿಕೇಟ್ ತಂದರೆ ಮತ್ತೆ ಕೆಲಸ ಕೊಡುತ್ತೇವೆ ಎಂದಿದ್ದಾರೆ” ಎಂದು ದುಃಖ ತೋಡಿಕೊಂಡ ಗೋಪಿನಾಥ.
ತಕ್ಷಣ ಕಾನ್ಸ್ಟೇಬಲ್ ಸಿದ್ದಯ್ಯ “ನನಗೆ ಒಂದು ಉಪಾಯ ಗೊತ್ತಿದೆ, ನಾವು ಹಿಡಿಯುವ ಕಳ್ಳರು ಸಾಮಾನ್ಯವಾಗಿ ಯಾವುದಾದರೂ ವಿಷಯ ತಿಳಿಸದಿದ್ದರೆ, ನಾವು ಅವರಿಗೆ ಮಂಪರು ಔಷಧಿ ಕೊಟ್ಟು ಹಳೆಯ ಸಂದರ್ಭಗಳನ್ನು ಮರುಸೃಷ್ಟಿಸುತ್ತೇವೆ. ಆಗ ಅವರು ಏನು ನಡೆಯಿತೆಂದು ಬಾಯಿ ಬಿಡುತ್ತಾರೆ. ಇದೇ ರೀತಿ ನಿಮ್ಮ ತಮ್ಮನಿಗೆ ಹುಚ್ಚು ಸರಿಪಡಿಸಬಹುದು ಎಂಬುದು ನನ್ನ ನಂಬಿಕೆ” ಎಂದರು.
“ನೀವು ಅಪಾರ್ಟ್ಮೆಂಟಿನವರೆಲ್ಲರೂ ಮತ್ತೆ ರಾಮನಾಥಪುರಕ್ಕೆ ಹೋಗಿ, ಹಾಗೆಯೇ ಆ ಮಗು ರಾಜು ಮುಳ್ಳಿನ ಪೊದೆ ಇಂದ ಆಚೆ ಬರುವಂತೆ ಸಂದರ್ಭವನ್ನು ಸೃಷ್ಟಿಸಿ. ಆ ಸಮಯದಲ್ಲಿ ನಿಮ್ಮ ತಮ್ಮ ವಿಶ್ವನಾಥನನ್ನು ಅಲ್ಲಿ ಮುಳ್ಳಿನ ಪೊದೆಯ ಮುಂದೆ ಇರಲು ಬಿಡಿ. ಒಮ್ಮೆ ಪ್ರಯತ್ನಿಸಬಹುದು, ಉಪಯೋಗವಾದರೆ ಒಳ್ಳೆಯದು” ಎಂದು ಕಾನ್ಸ್ಟೇಬಲ್ ಸಿದ್ದಯ್ಯ ತನ್ನ ಅನಿಸಿಕೆಯನ್ನು ತಿಳಿಸಿದ.
ಗೋಪಿನಾಥನಿಗೆ ಸಿದ್ದಯ್ಯನ ಮಾತಿನಲ್ಲಿ ಅರ್ಥ ಇದೆ ಎಂದು ತಿಳಿಯಿತು. ಅಪಾರ್ಟ್ಮೆಂಟಿನ ಎಲ್ಲರಿಗೂ ತಿಳಿಸಿ ಮತ್ತೆ ರಾಮನಾಥಪುರಕ್ಕೆ ಹೊರಟರು. ಮಗು ರಾಜು ಮುಳ್ಳಿನ ಪೊದೆಯ ಒಳಗೆ ಕುಳಿತಿರುವಂತೆ ಮಾಡಿ ಆ ಸಮಯದಲ್ಲಿ ವಿಶ್ವನಾಥನನ್ನು ಮುಳ್ಳಿನ ಪೂದೆಯ ಮುಂದೆ ಕರೆದುಕೊಂಡು ಹೋದರು. ರಾಜು ಪೊದೆಯಿಂದ ಹೊರ ಬರುತ್ತಿರುವುದನ್ನು ನೋಡಿ, ವಿಶ್ವನಾಥ ಜೋರಾಗಿ “ರಾಜು ಬಂದ ರಾಜು ಬಂದ” ಎಂದು ಕುಣಿದಾಡಿದ. ತಕ್ಷಣ ಜೊತೆಯಲ್ಲಿದ್ದ ಒಬ್ಬರು ವೈದ್ಯರು ವಿಶ್ವನಾಥನಿಗೆ ನಿದ್ದೆ ಬರುವಂತೆ ಇಂಜೆಕ್ಷನ್ ನೀಡಿದರು. ಹೀಗೆ ಮಾಡಬೇಕೆಂಬುದು ಪೂರ್ವನಿಯೋಜಿತವಾಗಿತ್ತು.
ಮುಂದಿನ ಎರಡು ದಿನ ಹಂತಹಂತವಾಗಿ ವಿಶ್ವನಾಥನಿಗೆ ನಡೆದುದನ್ನೆಲ್ಲಾ ತಿಳಿಸಿದರು. ವಿಶ್ವನಾಥ ಹಿಂದಿನಂತೆ ಸರಿಯಾದ. ಗೋಪಿನಾಥ, ವಿಶ್ವನಾಥನನ್ನು ಅಲಸೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ; ಮಾರ್ಗಮಧ್ಯದಲ್ಲಿ ಅರ್ಧ ಕೆಜಿ ಮೈಸೂರು ಪಾಕ್ ತೆಗೆದುಕೊಂಡು ಹೋದರು.
ವಯಸ್ಸಿನಲ್ಲಿ ಹಿರಿಯನಾಗಿದ್ದ ಸಿದ್ಧಯ್ಯನಿಗೆ ವಿಶ್ವನಾಥ ನಮಸ್ಕಾರ ಮಾಡಿದ. ಪೊಲೀಸ್ ಠಾಣೆಯಲ್ಲಿ ಇದ್ದ ಎಲ್ಲರ ಕಣ್ಣಲ್ಲೂ ನೀರು ಹರಿದಿತ್ತು.
ಅದೇ ಸಮಯಕ್ಕೆ ಮುಖ್ಯಮಂತ್ರಿಗಳ ಫೋನ್ ಬಂತು. “ತಮ್ಮನ್ನು ಗೇಲಿ ಮಾಡಿದ ಆ ವ್ಯಕ್ತಿಗೆ ಏನು ಮಾಡಿದಿರಿ” ಎಂದು ಕೇಳಿದರು. ಠಾಣೆ ಇನ್ಸ್‌ಪೆಕ್ಟರ್ ನಡೆದಿದ್ದೆಲ್ಲ ಮುಖ್ಯಮಂತ್ರಿಗಳಿಗೆ ತಿಳಿಸಿದರು. ಮುಖ್ಯಮಂತ್ರಿಗಳು “ಪಾಪ ಒಳ್ಳೆಯ ವ್ಯಕ್ತಿ, ಎಲ್ಲಾ ಸರಿ ಹೋಯಿತಲ್ಲಾ” ಎಂದು ಸಂತೋಷಪಟ್ಟರು.
ನಂತರ ವಿಶ್ವನಾಥನೊಂದಿಗೆ ಮುಖ್ಯಮಂತ್ರಿಗಳು ಮಾತನಾಡಿ “ನಮ್ಮ ಕಚೇರಿಗೆ ಡಾಕ್ಟರ್ ಕೊಟ್ಟಿರುವ ಮೆಡಿಕಲ್ ಸರ್ಟಿಫಿಕೇಟ್ ಜೊತೆ ಬಂದರೆ, ಬ್ಯಾಂಕಿನವರು ಬೇರೇನೂ ತಕರಾರು ಮಾಡದಂತೆ ನಿನ್ನನ್ನು ತಕ್ಷಣ ಕೆಲಸಕ್ಕೆ ಸೇರಿಸಿಕೊಳ್ಳಲು ಶಿಫಾರಸ್ಸು ಪತ್ರವನ್ನು ಕೊಡುತ್ತೇನೆ” ಎಂದು ತಿಳಿಸಿದರು.
ಮಾರನೇ ದಿನ ವಿಶ್ವನಾಥ ಮತ್ತು ಗೋಪಿನಾಥ ಮುಖ್ಯಮಂತ್ರಿಗಳ ಕಚೇರಿಗೆ ಹೋದರು. ಮುಖ್ಯಮಂತ್ರಿಗಳು ಐದು ನಿಮಿಷ ಮಾತನಾಡಿಸಿ ಶಿಫಾರಸು ಪತ್ರ ನೀಡಿ ಕಳಿಸಿದರು
ಅವರು ಹೊರಟ ನಂತರ ಮುಖ್ಯಮಂತ್ರಿಗಳು ಅವರ ಮಗನಿಗೆ ಫೋನ್ ಮಾಡಿ “ಕುಮಾರ ಎಲ್ಲಿದ್ಯಪ್ಪ, ನಿನ್ನ ಮುಂದಿನ ಚಿತ್ರಕ್ಕೆ ಒಂದು ಹೊಸ ಕಥೆ ಸಿಕ್ಕಿದೆ” ಎಂದು ಹೇಳಿದರು. ಕುಮಾರ, ಕಥೆ ಹೆಸರು ಏನೆಂದು ಕೇಳಿದಾಗ, ಮುಖ್ಯಮಂತ್ರಿಗಳು ಜೋರಾಗಿ, ಕಥೆಯ ಹೆಸರು “ರಾಜು ಎಲ್ಲಿದ್ಯಪ್ಪಾ” ಎಂದರು.
ಕಚೇರಿಯಲ್ಲಿದ್ದ ಎಲ್ಲರಿಗೂ ನಗು ಬಂತು ಆದರೆ ಯಾರೂ ನಗಲಿಲ್ಲ. ಮುಖ್ಯಮಂತ್ರಿಗಳು ಮಾತ್ರ ಚಹಾ ಕುಡಿಯುತ್ತಾ ಮನಸ್ಸಿನಲ್ಲಿ “ರಾಜು ಎಲ್ಲಿದ್ಯಪ್ಪಾ” “ರಾಜು ಎಲ್ಲಿದ್ಯಪ್ಪಾ” ಅಂತ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದ್ದರು.