ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿರುವ ಒಂದು ಕನ್ನಡಕದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ. ಕೌಂಟರ್‌ನಲ್ಲಿ ನಿಂತು ಬಂದ ಗ್ರಾಹಕರ ಇಚ್ಛಾನುಸಾರ ಕನ್ನಡಕಗಳನ್ನು ತೋರಿಸಿ, ಅವರಿಗೆ ಮೆಚ್ಚುಗೆಯಾಗುವಂತೆ ಮಾತನಾಡಿ ಕನ್ನಡಕ ಮಾರಬೇಕು. ಈ ಶಿವಣ್ಣನ ಸಂಬಳ ಎಷ್ಟೆಂದು ನೀವು ಊಹಿಸಿರುವಿರಾ. ಕೇಳದರೆ ಆಶ್ಚರ್ಯವಾಗುವುದಂತೂ ಖಂಡಿತ. ನೇರ ಸಂಬಳ ತಿಂಗಳಿಗೆ 6000 ರೂಪಾಯಿಗಳು. ಆದರೆ ಇನ್ಸೆಂಟಿವ್ ಸುಮಾರು 70 ಸಾವಿರದಿಂದ 1 ಲಕ್ಷ ರೂಪಾಯಿಗಳಂತೆ, ತಿಂಗಳಿಗೆ. ಈ ಇನ್ಸೆಂಟೀವ್ ಹೇಗೆ ಬರುತ್ತದೆ ಎಂಬ ಗುಟ್ಟು ಶಿವಣ್ಣ ನಿವೃತ್ತಿಯಾಗುವವರೆಗೆ ಯಾರಿಗೂ ತಿಳಿಸಿರಲಿಲ್ಲ.
ಒಂದು ದಿನ ಪಾರ್ಕಿನಲ್ಲಿ 3 ವರ್ಷದ ಮೊಮ್ಮಗಳ ಜೊತೆ ಕಾರಿನಲ್ಲಿ ಬಂದಿದ್ದ ಶಿವಣ್ಣ. ಅಕಸ್ಮಾತಾಗಿ ಹಳೆಯ ಗೆಳೆಯ ಗಿರೀಶನನ್ನು ಪಾರ್ಕಿನಲ್ಲಿ ಭೇಟಿ ಮಾಡಿದ. ಐಶಾರಾಮಿ ಕಾರು, ದೊಡ್ಡ ಬಂಗಲೆ ಇವೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ, ಶಿವಣ್ಣ ತನ್ನ ಇನ್ಸೆಂಟೀವ್ ಗುಟ್ಟನ್ನು ತಿಳಿಸಿದ.
ಕನ್ನಡಕದಂಗಡಿಯಲ್ಲಿರುವ ಎಲ್ಲ ಕನ್ನಡಕಗಳಿಗೂ ಒಂದು ಕನಿಷ್ಠ ಬೆಲೆ ನಿಗದಿಯಾಗಿರುತ್ತದೆ. ಸೇಲ್ಸಮೆನ್ ಅಂದರೆ ಕೌಂಟರ್ನಲ್ಲಿ ಕೆಲಸ ಮಾಡುವವರು, ಈ ಕನಿಷ್ಠ ಬೆಲೆಗಿಂತ ಕಮ್ಮಿ ಬೆಲೆಗೆ ಕನ್ನಡಕವನ್ನು ಮಾರುವ ಹಾಗಿಲ್ಲ. ಆದರೆ ಅದಕ್ಕಿಂತ ಹೆಚ್ಚು ಎಷ್ಟೇ ಬೆಲೆಗೆ ಮಾರಿದರೂ ಆ ಹೆಚ್ಚಿನ ಬೆಲೆಯ ಅರ್ಧದಷ್ಟು ಆ ಸೇಲ್ಸಮೆನ್‌ನ ಇನ್ಸಂಟೀವ್‌ಗೆ ಸೇರಿಕೊಳ್ಳುತ್ತದೆ.
ಹೇಗೆ ಹಚ್ಚಿಗೆ ಹಣಕ್ಕೆ ಮಾರಲು ಸಾಧ್ಯ ಅಂತ ಗಿರೀಶನ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ. ಶಿವಣ್ಣ ವಿವರಿಸಿದ್ದು ಹೀಗೆ.
ಅಂಗಡಿಗೆ ಬಹಳಷ್ಟು ಗ್ರಾಹಕರು ಬರುತ್ತಾರೆ. ಸೇಲ್ಸಮೆನ್‌ಗಳ ಮೊದಲ ಕೆಲಸ ಎಂದರೆ ಈ ಗ್ರಾಹಕರಲ್ಲಿ ನಿಜವಾಗಿಯೂ ಕನ್ನಡಕ ಕೊಂಡುಕೊಳ್ಳಲು ಬಂದಿರುವವರು ಯಾರೂ ಮತ್ತು ಕೇವಲ ಕಿಟಕಿ ವ್ಯಾಪಾರ ಅಂದರೆ ವಿಂಡೋ ಶಾಪಿಂಗ್ ಮಾಡಿ ಸಮಯ ವ್ಯಯ ಮಾಡಲು ಬಂದಿರುವವರು ಯಾರೂ ಎಂದು ತಿಳಿದುಕೊಳ್ಳಬೇಕು. ಇದೇನು ದೊಡ್ಡ ವಿದ್ಯೆ ಏನಲ್ಲ, ಅನುಭವದಿಂದ ಬಂದುಬಿಡುತ್ತದೆ.
ವಿಂಡೋ ಶಾಪಿಂಗ್‌ಗೆ ಬಂದ ಗಿರಾಕಿಗಳನ್ನು ಸುಂದರವಾಗಿರುವ ಸೇಲ್ಸ್ ವುಮೆನ್‌ಗಳು ಪ್ರೀತಿ ಆಧರದಿಂದ ಮಾತನಾಡಿಸಿ ಅವರಿಗೆ ಏನಾದರೂ ಕೊಂಡುಕೊಳ್ಳುವಂತೆ ಪ್ರಚೋದಿಸುತ್ತಾರೆ. ಸುಮಾರು ಶೇಕಡ 20 ರಷ್ಟು ಜನ ಸೇಲ್ಸ್ ವುಮೆನ್‌ಗಳು ಹಾಕಿದ ಬಲೆಗೆ ಬೀಳುತ್ತಾರೆ.
ಇನ್ನು ಖಂಡಿತವಾಗಿಯೂ ಕನ್ನಡಕವನ್ನು ಖರೀದಿಸಲೇ ಬಂದ ಗ್ರಾಹಕರನ್ನು ಶಿವಣ್ಣನಂತಹ ಸೇಲ್ಸಮೆನ್‌ಗಳು ನೋಡಿಕೊಳ್ಳುತ್ತಾರೆ. ಮೊದಲು ಅವರ ಅವಶ್ಯಕತೆಗಳನ್ನು ತಾಳ್ಮೆಯಿಂದ ಕೇಳುತ್ತಾರೆ. ನಂತರ ಒಂದು ಕನ್ನಡಕವನ್ನು ತೋರಿಸುತ್ತಾರೆ. ಅದರ ಬೆಲೆ ಎಷ್ಟೆಂದು ಗ್ರಾಹಕರು ಕೇಳಿದಾಗ ಕನಿಷ್ಠ ಬೆಲೆಗೆ ಶೇಕಡ 20 ಸೇರಿಸಿ ಹೇಳುತ್ತಾರೆ. ಇಲ್ಲಿಂದ ಪ್ರಾರಂಭವಾಗುತ್ತದೆ ಇನ್ಸೆಂಟೀವ್‌ಗಾಗಿ ಅವರ ಸೇಲ್ಸಮೆನ್‌ನ ಚಾಣಾಕ್ಷ್ಯತನ.
ಬೆಲೆ ತಿಳಿಸಿದ ತಕ್ಷಣ ಗ್ರಾಹಕರ ಮುಖದಿಂದ ಬರುವ ಪ್ರತಿಕ್ರಿಯೆಯನ್ನು ತಮ್ಮ ಅನುಭವದಿಂದ ಗಮನಿಸುತ್ತಾರೆ. ಗ್ರಾಹಕರ ಪ್ರತಿಕ್ರಿಯೆ “ಬೆಲೆ ತುಂಬಾ ಜಾಸ್ತಿ” ಎನ್ನುವಂತಿದ್ದರೆ, ಇದರ ಜೊತೆ ನಿಮಗೆ ಲೆನ್ಸ್ ಉಚಿತ ಎನ್ನುತ್ತಾರೆ. ಆಗಲೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಬರದಿದ್ದರೆ, ನೋಡಿ ಇದಕ್ಕೆ ಸನ್ ಕೋಟಿಂಗ್ ಉಚಿತವಾಗಿ ದೊರೆಯುತ್ತದೆ. ನೀವು ಬಿಸಿಲಿನಲ್ಲಿ ಕನ್ನಡಕ ಹಾಕಿ ಕೊಂಡು ಹೋದಾಗ, ನಿಮ್ಮ ಲೆನ್ಸ್ ಬಣ್ಣ ಕಪ್ಪಾಗಿ ನಿಮ್ಮ ಕಣ್ಣುಗಳಿಗೆ ತಂಪಾದ ಅನುಭವ ಕೊಡುತ್ತದೆ. ಈ ರೀತಿ “ಬೆಲೆ ಹೆಚ್ಚು” ಎಂದ ಶೇಕಡ 70ರಷ್ಟು ಗ್ರಾಹಕರು ಶಿವಣ್ಣನವರಂತ ಸೇಲ್ಸ ಮೆನ್ ಬೆಲೆಗೆ ಬೀಳುತ್ತಾರೆ.
ಆದರೆ ಮಾಲ್‌ನಂತ ಜಾಗಕ್ಕೆ ಬರುವ ಹೆಚ್ಚಿನ ಗ್ರಾಹಕರು ಐಟಿ ಯಲ್ಲಿ ಕೆಲಸ ಮಾಡುವವರಾಗಿದ್ದು ಹೆಚ್ಚು ಹಣ ಸಂಪಾದಿಸುವವರಾಗಿರುತ್ತಾರೆ. ಶಿವಣ್ಣ ಇಂತಹವರಿಗೆ ಮೊದಲು ಕನ್ನಡಕದ ಬೆಲೆಯನ್ನು ಹೇಳಿದಾಗ ಅವರ ಮುಖದಲ್ಲಿ ಪ್ರತಿಕ್ರಿಯೆ “ಬೆಲೆ ಇಷ್ಟೇನಾ” ಎಂಬಂತೆ ಇದ್ದರೆ, ತಕ್ಷಣ ಶಿವಣ್ಣ, ಈ ಬೆಲೆ ಕೇವಲ ಫ್ರೇಮ್‌ಗೆ, ಲೆನ್ಸ್ ಬೇರೆ ಕೊಂಡುಕೊಳ್ಳಬೇಕು ಎನ್ನುತ್ತಾರೆ.
ಲೆನ್ಸ್‌ನ ಬೆಲೆ ಅವರು ಕೇಳಿದಾಗ, ಅದಕ್ಕೆ 3 ಸಾವಿರ ರೂಪಾಯಿ ಎನ್ನುತ್ತಾರೆ. “ಅಷ್ಟೇನಾ” ಎಂಬಂತೆ ಪ್ರತಿಕ್ರಿಯೆ ಬಂದಾಗ, 3 ಸಾವಿರ ಒಂದು ಲೆನ್ಸ್‌ಗೆ, 2 ಲೆನ್ಸಗೆ 6 ಸಾವಿರ ಆಗುತ್ತೆ ಎನ್ನುತ್ತಾರೆ. ಗ್ರಾಹಕರು ಸರಿ ಎಂದ ತಕ್ಷಣ, ಇದಕ್ಕೆ ನಿಮಗೆ ಸನ್ ಕೋಟಿಂಗ್ ಬೇಕಾದರೆ ಎರಡು ಲೆನ್ಸ್ ಸೇರಿ 3 ಸಾವಿರ ಎನ್ನುತ್ತಾರೆ. ಸಾಮಾನ್ಯವಾಗಿ ಐಟಿಯಲ್ಲಿ ಕೆಲಸ ಮಾಡುತ್ತಿರುವ ಈಗಿನ ಹುಡುಗರು ಶೇಕಡ 90ರಷ್ಟು ಜನ ಶಿವಣ್ಣನ ಬಲೆಗೆ ಬೀಳುವುದು ಖಂಡಿತ.
ಇನ್ನು ಮೂರನೆಯ ರೀತಿಯ ಗ್ರಾಹಕರು ಇದ್ದಾರೆ, ಅವರು ಶಿವಣ್ಣನಿಗಿಂತಾ ಬುದ್ದಿವಂತರು. ಅವರು ಚೌಕಾಸಿ ಹೇಗೆ ಮಾಡುತ್ತಾರೆಂದರೆ ಕನಿಷ್ಠ ಬಲೆಗೆ ಅಥವಾ ಅದಕ್ಕಿಂತ ಕಡಿಮೆಗೆ ಕನ್ನಡಕ ಕೊಂಡುಹೋಗುತ್ತಾರೆ. ತಿಂಗಳಿಗೆ ಒಬ್ಬರೋ ಇಬ್ಬರೋ ಈ ರೀತಿಯ ಗ್ರಾಹಕರೂ ಸಿಗಬಹುದು.
ಅಲ್ಲಿಗೆ, ಉದಾಹರಣೆಯಾಗಿ ತೆಗೆದುಕೊಂಡರೆ, ಹತ್ತು ಸಾವಿರ ಬೆಲೆಯ ಒಂದು ಕನ್ನಡಕವನ್ನು ಒಬ್ಬರಿಗೋ ಇಬ್ಬರಿಗೋ 9000 ರೂಪಾಯಿಗೆ ಮಾರಿದರೆ, ಕೆಲವರಿಗೆ 12 ಸಾವಿರ ರೂಪಾಯಿಗೆ ಮಾರುತ್ತಾರೆ ಮತ್ತು ಹಲವರಿಗೆ ಹತ್ತೊಂಬತ್ತು ಸಾವಿರ ರೂಪಾಯಿಗೆ ಮಾರುತ್ತಾರೆ. ಹೆಚ್ಚಿನ ಬೆಲೆಯ ಅರ್ಧದಷ್ಟು ಹಣ ಶಿವಣ್ಣನಂತಹ ಸೇಲ್ಸ್‌ಮೆನ್‌ಗಳ ಇನ್ಸೆಂಟೀವ್ ಆಗುತ್ತದೆ.
ಮುಂದೆ ಯವುದೇ ಅಂಗಡಿಗೆ ಏನಾದರೂ ಖರೀದಿಸಲು ಹೋದಾಗ ಬಹು ಎಚ್ಚರದಿಂದ ನಿಮ್ಮ ಮುಖದಲ್ಲಿ ಪ್ರತಿಕ್ರಿಯೆ ನೀಡಿ. ಎಷ್ಟೇ ಆಗಲಿ ಶಿವ ಸರ್ವಾಂತರ್ಯಾಮಿಯಲ್ಲವೇ ಹಾಗೇ ಶಿವಣ್ಣನೂ ಕೂಡಾ ಎಲ್ಲಾ ಅಂಗಡಿಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಇರುತ್ತಾನೆ.