ಗುರುರಾಜ
ಶಾಸ್ತ್ರಿ
ಮೈಸೂರಿನ ಸೈಟು - ಕೋತಿಗಳ ವ್ಯಾಪಾರ
10-08-2021
ನಿಮಗೆ ಗೊತ್ತೇ, ಅರಮನೆಯ ಊರಾದ ಮೈಸೂರಿನ ಕೋತಿಗಳು ಬಹಳ ಚೆಂದ. ಇಂದು ಅದನ್ನು ಕೊಂಡು ಮುಂದೆ ಹೆಚ್ಚಿನ ಹಣಕ್ಕೆ ಮಾರಬಹುದು ಎಂದು ಪ್ರಚಾರ ಮಾಡಿತು ಸಹಕಾರಿ ಬ್ಯಾಂಕಿನ ನೌಕರರ ಪ್ರತಿನಿಧಿಗಳ ಸಂಘ. ಅರಮನೆಯ ಹತ್ತಿರ ಇರುವ ಕೋತಿಗಳೆಂದರೆ ರಾಜವಂಶದವರು ಬೆಳಸಿದ್ದೇ ಇರಬೇಕೆಂದು ಸಹಕಾರಿ ಬ್ಯಾಂಕಿನ ನೌಕರರು ಕೋತಿಗಳನ್ನು ನೋಡದೆಯೇ ಹಣ ಪಾವತಿ ಮಾಡಿದರು. ನಿಯಮದಂತೆ ವ್ಯಾಪಾರಿಯು ಆಗ ತಾನೇ ಹುಟ್ಟಿದ ಕೋತಿಗಳ ಪುರಾವೆ ಕೊಟ್ಟಾಗ ಶೇಕಡ ಇಪ್ಪತ್ತರಷ್ಟು ಹಣ, ನಂತರ ಆ ಕೋತಿಗೆ ಸ್ವಲ್ಪ ಬುದ್ದಿ ಬಂದ ಮೇಲೆ ಶೇಕಡ ಇಪ್ಪತ್ತರಷ್ಟು ಹಣ, ಹಾಗೆ ಪೂರ್ತಿ ಬೆಳೆದಿದ್ದ ಕೋತಿಗಳನ್ನು ತೋರಿಸಿದಾಗ ಮಿಕ್ಕ ಹಣ ಪ್ರತಿನಿಧಿಗಳ ಸಂಘ ನೀಡಬೇಕಿತ್ತು. ಆದರೆ ನೌಕರರಿಂದ ಮಾತ್ರ ಪೂರ್ತಿ ಹಣ ಮುಂಗಡವಾಗಿಯೇ ಪಡೆದಿತ್ತು ಸಂಘ. ವ್ಯಾಪಾರಸ್ಥನು ಆಗ ತಾನೆ ಮದುವೆಯಾಗಿದ್ದ ಕೋತಿಗಳನ್ನು ತೋರಿಸಿ, ಇವುಗಳಿಗೆ ಹುಟ್ಟುವ ಕೋತಿಗಳನ್ನು ಸದಸ್ಯರಿಗೆ ಮಾರುವುದಾಗಿ ತಿಳಿಸಿ ಮುಂಗಡ ಹಣ ಕೇಳಿದ. ಸಂಘದಲ್ಲಿ ಈ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಪ್ರತಿನಿಧಿಗಳಿಗೆ ಐದೋ ಹತ್ತೋ ಕೋತಿಗಳನ್ನು ಉಚಿತವಾಗಿ ನೀಡಿದ. ಉಚಿತವಾಗಿ ಬಂದ ಕೋತಿಗಳನ್ನು ನೋಡಿದ ಪ್ರತಿನಿಧಿಗಳು, ನೌಕರರು ನೀಡಿದ್ದ ಪೂರ್ತಿ ಹಣವನ್ನು ವ್ಯಾಪಾರಿಗೆ ನೀಡಿದರು. ಪೂರ್ತಿ ಹಣ ಕೈ ಸೇರಿದ ಖುಷಿಯಲ್ಲಿ ವ್ಯಾಪಾರಿ ಕೋತಿಗಳನ್ನು ನೋಡಿಕೊಳ್ಳುವುದನ್ನೇ ಬಿಟ್ಟ. ಕೋತಿ ಮರಿಗಳೇ ಹುಟ್ಟಿಲ್ಲದಿದ್ದರೂ ಅವಕ್ಕೆ ನಾಮಕರಣಮಾಡಿ ಹಲವರಿಗೆ ದತ್ತು ಪತ್ರವನ್ನು ನೀಡಿದ. ಹೀಗಾಗಿ ಸದಸ್ಯರು ಕೋತಿಗಳ ಹೆಸರನ್ನು ಪತ್ರದಲ್ಲಿ ನೋಡಿ, ಅರಮನೆಯ ಊರಿನ ಒಂದು ಕೋತಿ ನಮ್ಮ ಹತ್ತಿರವೂ ಇದೆ ಎಂದು ಸಂತೋಷಪಟ್ಟರು. ಸುಮಾರು 6 ವರ್ಷದ ನಂತರ ಸದಸ್ಯರು ಕೋತಿಗಳನ್ನು ನೋಡಲು ಅರಮನೆ ನಗರಿಗೆ ಹೋದರು. ಆಶ್ಚರ್ಯ, ಕೋತಿಗಳು ಇನ್ನೂ ಹುಟ್ಟೇ ಇರಲಿಲ್ಲ. ಕೋತಿಗಳು ಇದ್ದ ಸ್ಥಳಕ್ಕೂ ಹಾಗೂ ಅರಮನೆಗೂ ಬಹಳ ದೂರವಿದ್ದು ಅವುಗಳು ಅರಮನೆಗೆ ಯಾವುದೇ ಸಂಬಂಧ ಹೊಂದಿರಲಿಲ್ಲ. ಸದಸ್ಯರು ಪ್ರತಿನಿಧಿಗಳ ಹತ್ತಿರ ಬಂದು ಕೋತಿಗಳ ಬಗ್ಗೆ ವಿಚಾರಿಸಿದರು. ವ್ಯಾಪಾರಿಯ ಮೇಲೆ ಕೋರ್ಟಿನಲ್ಲಿ ಕೇಸ್‌ ಹಾಕೋಣ ಎಂದರು. ತಾವು ಪಡೆದಿದ್ದ ಉಚಿತ ಕೋತಿಗಳ ವಿಷಯ ಹೊರಗೆ ಬರಬಹುದೆಂದು ಹೆದರಿ, ಪ್ರತಿನಿಧಿಗಳು ಸದಸ್ಯರಿಂದ ದೂರ ನಡೆದರು. ಕೋರ್ಟಿಗೆ ಹೋದರೆ ಇನ್ನೂ ಹುಟ್ಟದ ಕೋತಿಗಳನ್ನು ಕೊಂಡ ನಮ್ಮನ್ನು ನೋಡಿ ಜನ ಶತಮೂರ್ಖರೆಂದು ಆಡಿಕೊಂಡು ನಗುತ್ತಾರೆ ಎಂದು ಸದಸ್ಯರಿಗೆ ಅರ್ಥವಾಯಿತು. ಆದರೂ ತಾವು ಹೋದ ಮೋಸಕ್ಕೆ ಪರಿಹಾರವಿಲ್ಲವೇ ಎಂದು ಯೋಚಿಸುತ್ತಿದ್ದರು. ಕೋತಿಯನ್ನು ಕೊಂಡಿದ್ದ ಒಬ್ಬ ನೌಕರನು, ಇದನ್ನು ಸರಿಪಡಿಸಲು ಮುಂದಾದನು. ಸದಸ್ಯರಿಗೆ ಅಘೋಷಿತ ಹೊಸ ನಾಯಕನಾದನು. ಅವನ ಸಹಾಯಕ್ಕೆ ಈ ಕೋತಿಗಳ ವ್ಯವಹಾರದಲ್ಲಿ ತಲೆ ಹಾಕದಿದ್ದ ಒಬ್ಬ ಪ್ರತಿನಿಧಿಯೂ ಸೇರಿಕೊಂಡನು. ತಮಗೆ ಗೊತ್ತಿದ್ದ ಸರ್ಕಾರದ ಅಧಿಕಾರಿಗಳು ಹಾಗೂ ಪೋಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಕೋತಿ ವ್ಯಾಪಾರಿಯನ್ನು ಮತ್ತೆ ಕರೆ ತಂದರು. ವ್ಯಾಪಾರಿ ಮತ್ತೆ ಆ ಮದುವೆ ಆಗಿದ್ದ ಕೋತಿಗಳನ್ನು ಹುಡುಕಿ ತಂದನು. ಯಾರದೋ ಸ್ವತ್ತಾಗಿದ್ದ ಆ ಕೋತಿಗಳನ್ನು ಮತ್ತೆ ತರಲು ಹರಸಾಹಸ ಪಡಬೇಕಾಯಿತು ಮತ್ತು ಹೆಚ್ಚು ಹಣ ಖರ್ಚಾಯಿತು. ಆದರೆ ವ್ಯಾಪಾರಿಗೆ ಬೇರೆ ದಾರಿ ಇರಲಿಲ್ಲ. ಹೀಗೆ ಮಾಡದಿದ್ದರೆ ಅವನು ಬಂಧನವಾಗುವುದ ನಿಶ್ಚಿತ ಎಂದು ಅವನಿಗೆ ಗೊತ್ತಿತ್ತು. ಕೋತಿ ಜೋಡಿಗೆ ಮಕ್ಕಳಾಗಿ, ಹಲವರಿಗೆ ಕೋತಿಗಳು ದೊರೆಯಿತು. ಮತ್ತೆ ಕೆಲವರಿಗೆ ತಮಗೆ ನಿಗದಿತವಾಗಿದ್ದ ಕೋತಿಗಳು ಹುಟ್ಟದ ಕಾರಣ ಬೇರೆ ಕೋತಿಗಳ ಮಕ್ಕಳನ್ನು ನೀಡಲಾಯಿತು. ಸರ್ಕಾರದ ಅಧಿಕಾರಿಗಳು ಸದಸ್ಯರ ಹೊಸ ನಾಯಕನನ್ನು ಹೊಗಳುತ್ತಾ, “ನಿಮ್ಮ ಅದೃಷ್ಟ, ವ್ಯಾಪಾರಿ 6 ವರ್ಷದ ನಂತರವೂ ನಿಮ್ಮ ಕೈಗೆ ಸಿಕ್ಕಿದ, ಇಲ್ಲಿ ಅರಮನೆ ನಗರಿಯಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಸಾವಿರ ಜನ ಕೋತಿಯ ವ್ಯಾಪಾರಿಗಳಿಗೆ ದುಡ್ಡು ಕೊಟ್ಟು ಮೋಸಹೋಗಿದ್ದಾರೆ” ಎಂದು ಹೇಳಿದರು. ಇಂದು ಅರಮನೆ ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೋತಿಗಳು ವ್ಯಾಪಾರಕ್ಕಿದ್ದು, ನಮ್ಮ ಕಥೆಯ 600 ಸದಸ್ಯರು ತಮ್ಮ ಕೋತಿಗಳಿಗೂ ಎಂದೋ ಒಳ್ಳೆ ಬೆಲೆ ಬರಬಹುದೆಂಬ ನಂಬಿಕೆಯಲ್ಲಿ ಕಾಯುತ್ತಾ ಕುಳಿತಿದ್ದಾರೆ. ಹಿಂದಿನ ಪ್ರತಿನಿಧಿಗಳು ತಮಗೆ ಉಚಿತವಾಗಿ ಬಂದ ಕೋತಿಗಳನ್ನು ಏನು ಮಾಡಿದರು ಎಂಬ ಬಗ್ಗೆ ಇನ್ನೂ ವಿಷಯ ಗೊತ್ತಾಗಿಲ್ಲ. ನೌಕರರು ಅವರನ್ನು ತೆಗಳುತ್ತಿರುವುದನ್ನೂ ಸಹಿಸಿಕೊಂಡು ನಗುತ್ತಾ ಜೀವನ ಸಾಗಿಸುತ್ತಿರುವುದು ಆಶ್ಚರ್ಯವೇ ಸರಿ. ಅಂದು ಎಲ್ಲರಲ್ಲಿ "ಅರಮನೆ ನಗರಿಯಲ್ಲಿ ನನ್ನದೂ ಒಂದು ಕೋತಿ ಇದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ನೌಕರರು", ಈಗ "ಕೋತಿಯನ್ನು ಕೊಂಡ ಮೂರ್ಖರಲ್ಲಿ ನಾನು ಒಬ್ಬ" ಎಂದು ವಿಷಾದ ವ್ಯಕ್ತ ಪಡಿಸುತ್ತಿದ್ದಾರೆ. (ಕ್ಷಮಿಸಿ, ಕಥೆ ಅರ್ಥವಾಗದಿದ್ದರೆ “ಕೋತಿ” ಎಂಬ ಪದವನ್ನು ತೆಗೆದು “ಸೈಟು” ಎಂದು ಬದಲಾಯಿಸಿ ಓದಿ)
ಅನಿಸಿಕೆಗಳು