
ಸೂರ್ಯನ ಬಿಸಿಲು ಪ್ರಬಲವಾಗಿದ್ದರಿಂದ ಸೀರೆಯ ಸೆರಗನ್ನು ತಲೆಯ ಮೇಲೆ ಹಾಕಿಕೊಂಡು, ನಾನೊಬ್ಬಳೇ ಕಟ್ಟೆಯ ಮೇಲೆ ಕುಳಿತಿದ್ದೆ. “ನಿಮ್ದು ಎಷ್ಟನೇ ನಂಬರ್ ಟೋಕನ್ ಆಂಟಿ?” ಅಂತ ಯಾವುದೋ ಗಂಡಸಿನ ಧ್ವನಿ. ಕಣ್ಣೆತ್ತಿ ನೋಡಿದೆ, ನನಗಿಂತ ಒಂದೆರೆಡು ವರ್ಷ ದೊಡ್ಡವನಿರಬಹುದಷ್ಟೆ. ಬೇರೆ ಸಮಯದಲ್ಲಾಗಿದ್ದರೆ ಆಂಟಿ ಅಂದಿದ್ದಕ್ಕೆ ಕ್ಲಾಸ್ ತೊಗೊಳ್ತಾ ಇದ್ದೆ, ಆದರೆ ಈಗ ಅದಕ್ಕೆಲ್ಲ ಸಮಯ ಇರಲಿಲ್ಲ. “ಕ್ಷಮಿಸಿ, ದೂರದಿಂದ ನೋಡಿ ನಿಮ್ಮನ್ನು ಯಾರೋ ಹಿರಿಯರೆಂದುಕೊಂಡೆ, ಮಿಸ್ ನಿಮ್ಮದು ಎಷ್ಟನೇ ನಂಬರ್ ಟೋಕನ್”. “ನನ್ನದು ಒಂಬತ್ತನೇ ನಂಬರ್, ನಿಮ್ದು” ಎಂದು ನಾನು ಕೇಳಿದ ತಕ್ಷಣ “ನನ್ನದು ಎಂಟನೇ ನಂಬರ್” ಅಂತಾ ಹೇಳುತ್ತಾ ಅನುಮತಿಯನ್ನು ಕೇಳದೆಯೇ ಪಕ್ಕದಲ್ಲಿ ಬಂದು ಕುಳಿತೇ ಬಿಟ್ಟ.
“ಇನ್ನೂ ಕನಿಷ್ಠ ಮೂರು ಗಂಟೆ ಆಗುತ್ತಂತೆ. ಅದುವರೆವಿಗೂ ಕಾಯಲೇಬೇಕು” ಅಂತಾ ಹೇಳ್ತಾ ತನ್ನ ಬ್ಯಾಗಿನಿಂದ ಒಂದು ಪುಸ್ತಕ ತೆಗೆದು ಓದಲು ಪ್ರಾರಂಭಿಸಿದ. ವಿಚಿತ್ರ ಅನ್ನಿಸಿತು ಈ ವ್ಯಕ್ತಿಯನ್ನ ನೋಡಿ. ಅಲ್ಲ, ಇದು ಪುಸ್ತಕ ಓದೋ ಜಾಗಾನಾ, ಯಾರೋ ಹುಚ್ಚನೇ ಇರಬೇಕು ಅಂದುಕೊಂಡೆ. “ನೀವೂ ಪುಸ್ತಕ ಓದುತ್ತೀರಾ, ಇನ್ನೂ ನನ್ನ ಬ್ಯಾಗಿನಲ್ಲಿ ಸಾಕಷ್ಟು ಪುಸ್ತಕ ಇದೆ” ಎಂದ. ನನಗೆ ಎಲ್ಲಿಲ್ಲದ ಕೋಪ, ಅದು ನನ್ನ ಕಣ್ಣಿನಲ್ಲಿ ವ್ಯಕ್ತವಾಗಿದ್ದನ್ನು ಅವನು ಗಮನಿಸಿ ಪುಸ್ತಕ ಓದಲು ಪ್ರಾರಂಭಿಸಿದ.
ನನಗೋ ನನ್ನವರೊಂದಿಗೆ ಈ ನಾಲ್ಕು ವರ್ಷ ಕಳೆದ ಹಳೆಯ ನೆನಪುಗಳು ಕಾಡತೊಡಗಿದವು. ಆಳಬೇಕೆಂದರೆ ಕಣ್ಣೀರೇ ಬರುತ್ತಿಲ್ಲ, ಕಣ್ಣೀರು ಬಂದಿದ್ದರೆ ಸ್ವಲ್ಪ ದುಃಖ ಕಡಿಮೆಯಾಗುತ್ತಿತ್ತೇನೋ. “ಯಾರನ್ನು ಕರೆತಂದಿದ್ದೀರಿ?” ಅಂತ ಪಕ್ಕದವನ ಮತ್ತೊಂದು ಪ್ರಶ್ನೆ ನನ್ನ ನೆನಪುಗಳ ಅಲೆಗಳಿಗೆ ಅಡ್ಡವಾಗಿ ಬಂತು. ಇನ್ನೂ ಮೂರು ಗಂಟೆ ಕಳೆಯಬೇಕೆಲ್ಲ ಎಂಬುದು ಯೋಚಿಸಿ, ಉತ್ತರ ಕೊಡದಿದ್ದರೆ ಚೆನ್ನಾಗಿರೋಲ್ಲ ಅಂತ ಅಂದುಕೊಂಡು, “ನನ್ನ ಗಂಡನನ್ನ” ಅಂದೆ. “ಓ ಸಾರಿ, ನಾನು ನನ್ನ ಹೆಂಡತಿಯನ್ನ ಕರೆತಂದಿರುವುದು” ಅಂದ. ಛೇ ದುಃಖದಲ್ಲಿ ನಾವಿಬ್ಬರೂ ಸಮಾನರೇ, ಸ್ವಲ್ಪ ಹೆಚ್ಚು ಮಾತನಾಡಿದರೆ ಮನಸ್ಸು ಹಗುರವಾಗಬಹುದು ಎಂದು ನನಗನಿಸಿತು.
“ಮೇಡಮ್ ನಾಲ್ಕನೇ ಟೋಕನ್‌ನ ಕೋವಿಡ್ ಹೆಣ ಈಗ ಚಿತಾಗಾರದ ಒಳಗೆ ಸುಡುತ್ತಿದೆ. ಇನ್ನೆರೆಡು ಗಂಟೆಯಲ್ಲಿ ನಿಮ್ಮ ಟೋಕನ್ ನಂಬರ್ ಬರುತ್ತೆ, ಸಿದ್ದವಾಗಿರಿ” ಎಂದ ಚಿತಾಗಾರದ ನೌಕರ. ಈಗ ಅಳು ತಡೆಯಲಾಗಲಿಲ್ಲ. ಕಟ್ಟೆಯಿಂದ ಎದ್ದು ಜೋರಾಗಿ ಕೂಗುತ್ತಾ ಅಳಲು ಪ್ರಾರಂಭಿಸಿದೆ. ಪಕ್ಕದಲ್ಲಿದ್ದವ ತನ್ನ ಬ್ಯಾಗಿನಿಂದ ನೀರಿನ ಬಾಟಲ್ ತೆಗೆದು “ನೀರು ಕುಡೀರಿ ಮೇಡಮ್, ಇದೆಲ್ಲಾ ಹೀಗೆ ಅಂತ ಬರೆದಿದ್ದರೆ ನಾವು ಏನು ತಾನೆ ಮಾಡಲಿಕ್ಕಾಗುತ್ತೆ” ಎಂದು ನನ್ನ ಭುಜಗಳನ್ನು ಹಿಡಿದು ಸಮಾಧಾನಪಡಿಸಿ ಕಟ್ಟೆಯ ಮೇಲೆ ಕೂಡಿಸಿದ. “ಅಲ್ಲಾ, ನಿಮ್ಮ ಕಡೆಯವರು ಯಾರಾನ್ನಾದರೂ ಕರೆದುಕೊಂಡು ಬರುವುದಲ್ಲವೇ” ಎಂದು ಅವನು ಕೇಳಿದಾಗ ಮತ್ತೆ ಮನಸ್ಸು ಹಳೆಯ ನೆನಪುಗಳಲ್ಲಿ ಮುಳುಗಿತು.
"ನೋಡಿ ಕಿರಣ್, ಮದುವೆ ಆದ ಮೇಲೆ ಒಂದು ದೊಡ್ಡ ಅಪಾರ್ಟ್ಮೆಂಟ್ ತೊಗೋಳೋಣ, ಇಬ್ಬರಿಗೂ ಈ ಸಾಫ್ಟ್‌ವೇರ್ ಕಂಪನಿಯಲ್ಲಿ ಒಳ್ಳೇ ಸಂಬಳ ಇದೆ, ಸುಲಭವಾಗಿ ಹೌಸಿಂಗ್ ಲೋನ್ ಸಿಗುತ್ತೆ. ನಾವಿಬ್ಬರೇ ಸಂತೋಷದಿಂದ ಇರಬೇಕು. ನನಗೆ ಬಂಧು ಬಳಗ ಬಂದು ಹೋಗೋದು ಅವೆಲ್ಲಾ ಇಷ್ಟಾ ಇಲ್ಲ. ನಮ್ಮ ಹತ್ರ ಹೆಚ್ಚು ದುಡ್ಡಿದೇ ಅಂತಾ ಇರುವೆ ತರ ಮುತ್ಕೊಳ್ತಾರೆ ಬಂಧುಗಳು" ನಾಲ್ಕು ವರ್ಷಕ್ಕೆ ಮುಂಚೆ ಆಫೀಸ್ ಕ್ಯಾಂಟೀನ್‌ನಲ್ಲಿ ಕಿರಣ್‌ಗೆ ಹೇಳಿದ ಮಾತುಗಳು. ಅವನಿಗೂ ಅದೇ ಬೇಕಿತ್ತು. ಇಬ್ಬರೂ ಹೆಚ್ಚು ಹೆಚ್ಚು ಸುತ್ತಾಡಬೇಕು, ಬೇರೆ ಬೇರೆ ದೇಶಗಳನ್ನು ನೋಡಬೇಕು ಅಂತ ಹೇಳ್ತಾನೆ ಇದ್ದ, ಹಾಗೆ, ಮದುವೆಯ ಮೊದಲ ಎರಡು ವರ್ಷ ನಾವು ಸುತ್ತಾಡಿರೋಷ್ಟು ಬೇರೆ ಯಾವ ಜೋಡಿಯೂ ಸುತ್ತಾಡಿಲ್ಲ ಬಿಡಿ.
“ಹಾ ಸಾರಿ, ಮನಸ್ಸು ಎಲ್ಲೋ ಹೋಯ್ತು. ಕೋವಿಡ್ ಮರಣವಾಗಿರೋದ್ರಿಂದ ಯಾರು ಬರಬೇಡಿ ಅಂತ ನಾನೇ ಎಲ್ಲರಿಗೂ ಹೇಳಿದೆ” ಅಂತ ಉತ್ತರ ಕೊಟ್ಟೆ. “ನಾನೇ ನಿಭಾಯಿಸ್ತೀನಿ ಅನ್ನೋ ಧೈರ್ಯ ಅವರೆಲ್ಲರಿಗೂ ಇದೆ”. “ನೀವೇ ಗ್ರೇಟ್ ನೋಡಿ, ನನಗೆ ಆ ಧೈರ್ಯವಿಲ್ಲ. ನನ್ನ ತಮ್ಮ ಜೊತೆಗೆ ಬರ್ತೀನಿ ಅಂದ, ಬೇಡ ಇದು ಕೋವಿಡ್ ಸಮಯ, ಜಾಸ್ತಿ ಜನ ಹೋಗೋದು ಬೇಡ, ನನ್ನ ಮಗನನ್ನು ನೀನು ನೋಡಿಕೋ, ನಾನೇ ಮುಗಿಸಿ ಬರ್ತೀನಿ ಅಂದೆ. ಆದರೆ ಅವನೊಂದಿಗೆ ಮಾತನಾಡುತ್ತಾ ಇದ್ದಾಗ ಇದ್ದ ಧೈರ್ಯ ಈಗ ಕುಗ್ಗಿದೆ” ಅಂದ ಪಕ್ಕದವ. ಅವನು ಆರಾಮವಾಗಿ ಪುಸ್ತಕ ಓದಿತ್ತುರುವುದನ್ನು ನೋಡಿದ ಮೇಲೂ ನಾನು ಇದನ್ನು ನಂಬಬೇಕೇ. “ನಿಮ್ಮ ಹೆಸರು ಏನಂತ ಹೇಳುದ್ರಿ” ಅಂತ ಕೇಳಿದ. “ನನ್ನ ಹೆಸರು ನಿಮಗೆ ನಾನು ಹೇಳಲೇ ಇಲ್ವಲ್ಲಾ” ಅಂತ ಹೇಳಿದೆ. “ನಾನು ಕಿಶೋರ್, ನನ್ನ ಹೆಂಡತಿ ರಮ್ಯಾ ಇಂದು ಹೋಗ್ಬುಟಿದ್ದು” ಎಂದು ಅವನು ಹೇಳುವಾಗ ಎಲ್ಲೋ ಅವನ ಕಣ್ಣಂಚಿನಲ್ಲಿ ನೀರು ಇನ್ನೇನು ಹೊರಬರಲು ಕಾಯುತ್ತಿರುವುದನ್ನು ನಾನು ಗಮನಿಸಿದೆ. ಅದು ಅವನಿಗೂ ಗೊತ್ತಾಯಿತು. ಮುಖ ಹಿಂದಕ್ಕೆ ಮಾಡಿ ನಿಂತ. “ನಾನು ಉಮಾ” ಅಂತ ಉತ್ತರಿಸಿದೆ. “ಸಾರಿ ಉಮಾ, ಕಣ್ಣಲ್ಲೇನೋ ದೂಳು ಬಿತ್ತು ಅನ್ಸುತ್ತೆ” ಎಂದಾಗ, “ಇರಲಿ, ಅತ್ತು ಬಿಡಿ, ಸುಮ್ಮನೆ ಒಳಗೆ ನೋವು ಅನುಭವಿಸಿದರೆ ದುಃಖ ದುಪ್ಪಟ್ಟಾಗುತ್ತದೆ, ನಾನು ಆಗಲೇ ಕಿರುಚಿಕೊಂಡನೆಲ್ಲಾ ನೀವು ಹಾಗೆ ಕರುಚಿಕೊಂಡುಬಿಡಿ” ಎಂದೆ. “ಗಂಡಸಿನ ಅಳು ಅಥವಾ ಕಿರುಚಾಟ ಯಾರು ನಂಬೋದಿಲ್ಲ ಬಿಡಿ” ಎಂದ. ನನಗೇಕೋ ಈತನಲ್ಲಿ ಇನ್ನೂ ಹೆಚ್ಚು ಮಾತನಾಡುವ ಆಸಕ್ತಿ ಹುಟ್ಟುತ್ತಿತ್ತು. ಮಾತು ಬದಲಿಸಲು “ನಿಮ್ಮ ಮಗನ ವಯಸ್ಸೆಷ್ಟು” ಅಂತ ಕೇಳಿದೆ, “ಈಗ ನಾಲ್ಕು ವರ್ಷ, ಹೌದು ನಿಮಗೆ ಮಕ್ಕಳೂ....” ಅಂತ ಅರ್ಧಕ್ಕೆ ಪ್ರಶ್ನೆ ನಿಲ್ಲಿಸಿದ. “ಒಬ್ಬಳು ಮಗಳು ಈಗ ಒಂದು ವರ್ಷ, ಅವಳು ಹುಟ್ಟಿದ ಮೇಲೆ ನಾನು ಕೆಲಸ ಬಿಟ್ಟಿದ್ದು” ನನ್ನ ಉತ್ತರ. ಯಾರೋ ಮೂರನೇ ವ್ಯಕ್ತಿಯೊಂದಿಗೆ ನಾನೆಂದೂ ವೈಯಕ್ತಿಕ ವಿಷಯಗಳನ್ನು ಕೇಳಿರಲಿಲ್ಲ ಹಾಗೂ ಮಾತನಾಡಿರಲಿಲ್ಲ, ಇದೇ ಮೊದಲ ಸಲ ಹಾಗಾಗಿದ್ದು.
“ಎಂಟನೇ ನಂಬರ್ ನಿಮ್ದೇ ತಾನೇ, ಬನ್ನಿ ಆಫೀಸ್‌ನಲ್ಲಿ ರಿಜಿಸ್ಟರ್‌ನಲ್ಲಿ ಸೈನ್ ಮಾಡಬೇಕು ನೀವು” ಎಂದು ಚಿತಾಗಾರದ ನೌಕರ ಕಿಶೋರ್‌ನ ಕರೆದ. ನಂದೂ ಮುಂದಿನದು ಅಂದರೆ ಒಂಬತ್ತನೆಯ ಟೋಕನ್ ತಾನೇ ಅಂತ ನಾನು ಎದ್ದೆ. “ನೀವಿಲ್ಲೇ ಇರಿ ಮೇಡಮ್ ಕರೀತೀನಿ” ಎಂದ ನೌಕರ. “ಇಲ್ಲ ಅವರು ನಮ್ಮ ಕಡೆಯವರೇ, ಮುಂದಿನ ಟೋಕನ್ನೇ ತಾನೇ, ಬರಲಿ ಬಿಡಿ” ಎಂದರು ಕಿಶೋರ್. “ಓ ಹೋಗಿರೋವ್ರು ಇಬ್ಬರೂ ಗಂಡ ಹೆಂಡ್ತೀನಾ. ನೋಡಿ ಎಂತಾ ಕಾಲ ಬಂತು, ಆ ಗಂಡ ಹೆಂಡ್ತೀನಾ ಕಳಿಸೋಕ್ಕೆ ನೀವ್ ಗಂಡ ಹೆಂಡತಿ ಬಂದಿದ್ದೀರಾ” ಎಂದ ನೌಕರ. ಅಳೋದೋ ನಗೋದೋ ಗೋತ್ತಾಗಲಿಲ್ಲ. “ಏಯ್, ಏನೇನೋ ಬಾಯಿಗೆ ಬಂದಂಗೆಲ್ಲಾ ಮಾತನಾಡಬೇಡ, ರಿಜಿಸ್ಟರ್‌ನಲ್ಲಿ ಸೈನ್ ಹಾಕ್ಬೇಕು ತಾನೆ ಹಾಕ್ತೀವಿ ನಡೆ” ಎಂದರು ಕಿಶೋರ್. “ನೀವೂ ಬನ್ನಿ, ನಾನು ಚಿತಾಗಾರದ ಆಫೀಸಿನಲ್ಲಿ ಮಾತಾಡ್ತೀನಿ, ಒಟ್ಟಿಗೆ ಹೋಗೋಣ” ಎಂದು ನನ್ನ ಕಡೆಗೆ ಕೈ ಚಾಚಿದರು. ನನಗೂ ಪರಿಚಯದವರೇ ಕರೆಯುತ್ತಿದ್ದಾರೆ ಎಂಬುವಂತೆ ಭಾಸವಾಗಿ ಬೇರೇನೂ ಯೋಚಿಸದೆ ನಡೆದೆ. ಮೊದಲು ರಮ್ಯಳ ದೇಹ ಚೆನ್ನಾಗಿ ಕಾದಿದ್ದ ಕಬ್ಬಿಣದ ಕಾಯಿಲ್‌ಗಳ ಮೇಲೆ ಅಗ್ನಿಗೆ ಆಹುತಿಯಾಯಿತು, ಅಲ್ಲೇ ಒಂದು ಮೂಲೆಯಲ್ಲಿ ಗೋಡೆ ಕಡೆಗೆ ಮುಖಮಾಡಿ ಅಳುತ್ತಿದ್ದ ಕಿಶೋರ್‌ನ ಕಂಡೆ. ಮತ್ತೆ ಕೀಶೋರ್ ನನ್ನ ಹತ್ತಿರ ಬಂದರು. ಇನ್ನು ಹತ್ತು ನಿಮಿಷಕ್ಕೆ ಕಿರಣ್ ದೇಹ ಬಂತು. ನನ್ನ ಎರಡು ಕೈಗಳನ್ನು ಮುಖದಮೇಲೆ ಇಟ್ಟುಕೊಂಡು ಜೋರಾಗಿ ಕಿರುಚಲಾರಂಬಿಸಿದೆ. ಕಿಶೋರ್ ತಕ್ಷಣ ನನ್ನ ಬುಜಗಳನ್ನು ಹಿಡಿದು ನನ್ನ ಮುಖವನ್ನು ಅವರ ಭುಜದ ಮೇಲೆ ಒರಗಿಸಿ ತಲೆಯ ಮೇಲೆ ನಿಧಾನವಾಗಿ ತಟ್ಟುತ್ತಾ ಸಮಾಧಾನ ಮಾಡಿದರು ಅನಿಸುತ್ತೆ. ನನಗೆ ಪ್ರಪಂಚವೇ ಶೂನ್ಯವಾಗಿ ಕಾಣುತ್ತಿತ್ತು.
“ನಾಳೆ ಬೆಳಗ್ಗೆ ಏಳು ಗಂಟೆಯ ಒಳಗೆ ಬಂದರೆ ಅಸ್ಥಿ ಸಿಗುತ್ತದೆ” ಎಂದು ಅಲ್ಲಿದ್ದ ವ್ಯಕ್ತಿ ಹೇಳಿದಾಗಲೇ ನಾನು ಮತ್ತೆ ಈ ಲೋಕಕ್ಕೆ ವಾಪಸ್ ಬಂದದ್ದು. ಕಿಶೋರ್ ಅವರಿಂದ ಸ್ವಲ್ಪ ದೂರ ಸರಿದೆ, “ಸಾರಿ” ಎಂದು ನಾನೇ ಹೇಳಿದೆ, ಯಾವುದಕ್ಕಾಗಿ ಸಾರಿ ಹೇಳಿದೆ ನನಗೆ ಗೊತ್ತಿಲ್ಲ. “ಸರಿ, ಹೊರಡೋಣ ಬನ್ನಿ, ನಾವು ಬಂದ ಕೆಲಸ ಮುಗಿಯಿತು. ನಾನೇ ಕಾರಿನಲ್ಲಿ ನಿಮ್ಮನ್ನು ಡ್ರಾಪ್ ಮಾಡುತ್ತೇನೆ” ಎಂದರು ಕಿಶೋರ್. “ಇಲ್ಲಾ ನಾನು ಆಟೋದಲ್ಲಿ ಹೋಗುತ್ತೇನೆ” ಎಂದು ಹೇಳುವುದರಲ್ಲಿದ್ದೆ, ಗಂಟಲಿಗೆ ಏನೋ ಅಡ್ಡ ಬಂದ ಹಾಗೆ ಆಗಿ, ಮುಂದೆ ಮಾತನಾಡದೆ “ಸರಿ” ಎಂದು ತಲೆ ತೂಗಿದೆ. ಚಿತಾಗಾರದಿಂದ ನನ್ನ ಮನೆಗೆ ಮೂವತ್ತು ನಿಮಿಷದ ಕಾರ್ ಪ್ರಯಾಣ. ಮೊದಲ ಹತ್ತು ನಿಮಿಷ ಮೌನ, ಆಮೇಲೆ ಸ್ಮಶಾಣ ವೈರಾಗ್ಯ ಮಾಯ, ಮತ್ತೆ ಮಾತು ಶುರು. “ನಾಳೆ ನಾನು ಕಾವೇರಿ ನದಿಗೆ ಅಸ್ಥಿಯನ್ನು ಬಿಡಲು ಕಾರಿನಲ್ಲೇ ಹೋಗುತ್ತೇನೆ, ಕಿರಣ್ ಅವರ ಅಸ್ಥಿಯನ್ನೂ ಕೊಡಿ, ಅದನ್ನೂ ಕಾವೇರಿ ನದಿಗೆ ಬಿಟ್ಟು ಬರುತ್ತೇನೆ” ಎಂದರು ಕಿಶೋರ್. “ನಾನೂ ನಿಮ್ಮೊಂದಿಗೆ ನಾಳೆ ಶ್ರೀರಂಗಪಟ್ಟಣಕ್ಕೆ ಬರಲೇ” ಎಂದು ಕೇಳಿದೆ. ಅವರು ಖಂಡಿತಾ. ʼನನಗೆ ಅಸ್ಥಿ ನದಿಯಲ್ಲಿ ಬಿಡುವುದು ಬಿಟ್ಟು ಮುಂದಿನ ಯಾವ ಧಾರ್ಮಿಕ ಕಾರ್ಯದಲ್ಲೂ ನಂಬಿಕೆ ಇಲ್ಲ, ಬದುಕಿದ್ದಾಗ ಚೆನ್ನಾಗಿ ನೋಡಿಕೊಂಡಿದ್ದರೆ ಸಾಕು ಎಂದು ರಮ್ಯ ಕೂಡಾ ಹೇಳ್ತಾ ಇದ್ದಳು, ಹಾಗಾಗಿ ನಾನು ಯಾವುದಾದರೊಂದು ವೇದ ಪಾಠಶಾಲೆಗೆ ಮೂರು ದಿನಕ್ಕೆ ರಮ್ಯಳ ಹೆಸರಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಊಟಕ್ಕೆ ಕೊಡುತ್ತಿದ್ದೇನೆ ಅಷ್ಟೆ” ಎಂದರು ಕಿಶೋರ್, ನಾನು ಈ ಬಗ್ಗೆ ಏನು ಯೋಚಿಸಿಲ್ಲ. ಮನೆಯಲ್ಲಿ ಅಪ್ಪನ ನಿರ್ಧಾರವೇ ಈ ವಿಷಯದಲ್ಲಿ ಮುಖ್ಯ ಎಂಬುದು ನನಗೆ ಗೊತ್ತಿತ್ತು. ಹೆತ್ತ ಕರುಳು ನನ್ನ ಹಳೆಯ ಮಾತುಗಳನ್ನೆಲ್ಲಾ ಮರೆತು ಆರೋಗ್ಯ ಸರಿಯಾಗಿಲ್ಲದಿದ್ದರೂ ಬಂದಿದ್ದರು ಅಪ್ಪ ಅಮ್ಮ. ಕೋವಿಡ್ ಬಗ್ಗೆ ಅವರಿಗೆ ಹೇಳಿ ಅಪ್ಪನನ್ನು ಚಿತಾಗಾರಕ್ಕೆ ಬರದಂತೆ ತಡೆದಿದ್ದೆ. ʼನನಗೆ, ನಾನು ಮತ್ತು ನನ್ನ ಗಂಡ ಅಷ್ಟೇ ಪ್ರಪಂಚ, ಬೇರೇ ಯಾರೂ ಬೇಕಾಗಿಲ್ಲ” ಎಂದು ನಾನು ಮೂರು ವರ್ಷಕ್ಕೆ ಮುಂಚೆ ಅವರ ಎದುರಿಗೆ ಹೇಳಿದ್ದ ವಾಕ್ಯಗಳು ಈಗ ನನ್ನ ಮನಸ್ಸಿಗೆ ಈಟಿ ತೆಗೆದುಕೊಂಡು ಚುಚ್ಚುತ್ತಿರುವಂತಿತ್ತು.
ಮನೆ ತಲುಪಿದಾಗ ಮದ್ಯಾಹ್ನ ಮೂರಾಗಿತ್ತು. ಕಿಶೋರ್ ಅಪಾರ್ಟ್‌ಮೆಂಟ್ ಬಾಗಿಲಿನವರೆಗೂ ಬಂದರು. ಅಪ್ಪನಿಗೆ ಅವರ ಪರಿಚಯ ಮಾಡಿಕೊಟ್ಟು ನಾನು ಮನೆ ಒಳಗೆ ಹೋಗಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಅಳಲು ಪ್ರಾರಂಭಿಸಿದೆ. ಸ್ನಾನ ಮಾಡಿ, ಊಟ ಸೇರದಿದ್ದರೂ ಒಂದಷ್ಟು ತಿಂದು ಮಲಗಿದೆ. ತಲೆಯಲ್ಲಂತು ಪಠಾಕಿ ಸಿಡಿಯುವಂತೆ ತಲೆನೋವು ಬಾಧಿಸುತ್ತಿತ್ತು. ಕಿಶೋರ್ ಎಷ್ಟು ಹೊತ್ತಿಗೆ ಹೊರಟರೋ ಗೊತ್ತಿಲ್ಲ, ಆದರೆ ಸುಮಾರು ಹೊತ್ತು ಅಪ್ಪನೊಡನೆ ಮಾತನಾಡುತ್ತಿದ್ದರು ಎಂದು ಅಮ್ಮನಿಂದ ತಿಳಿಯಿತು.
ಮಾರನೇ ದಿನ ಬೆಳಗ್ಗೆ ಬೇಗ ಎದ್ದು ನಾನು ತಯಾರಾಗುತ್ತಿದ್ದರೆ, ಅಪ್ಪ ನನಗಿಂತ ಮುಂಚೆಯೇ ಸಿದ್ದವಾಗಿದ್ದರು. ಅವರು ಈಗಾಗಲೇ ಕಿಶೋರ್‌ಗೆ ತಾವೂ ಬರುವುದಾಗಿ ತಿಳಿಸಿದ್ದರು ಎಂದು ತಿಳಿಯಿತು. ಸರಿ ಎಲ್ಲರೂ ಚಿತಾಗಾರಕ್ಕೆ ಹೋಗಿ ಅಸ್ಥಿ ಸ್ವೀಕರಿಸಿ ಶ್ರೀರಂಗಪಟ್ಟಣದ ಕಡೆ ಪಯಣ ಬೆಳೆಸಿದೆವು. ಮುಂದಿನ ಹತ್ತು ದಿನದ ಕಾರ್ಯಕ್ರಮಗಳ ಮಹತ್ವವೇನು ಎಂದು ಅಪ್ಪ ದಾರಿ ಉದ್ದಕ್ಕೂ ಹೇಳುತ್ತಿದ್ದರು. ಈ ಮಾತುಗಳು ನನಗಿಂತ ಕೀಶೋರ್‌ಗೆ ಗುರಿಮಾಡುತ್ತಿದ್ದಂತಿತ್ತು. ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಕಿಶೋರ್ ನಗುತ್ತಾ ಗಾಡಿ ಓಡಿಸುತ್ತಿದ್ದರು. ಆದರೆ ಶ್ರೀರಂಗಪಟ್ಠಣ ತಲುಪುವಷ್ಟರಲ್ಲಿ ಅಪ್ಪನ ಮಾತುಗಳು ಕಿಶೋರ್ ಮೇಲೆ ಪರಿಣಾಮ ಬೀರಿತ್ತು. ಅವರು ಗಾಢ ಯೋಚನೆಯಲ್ಲಿ ಇದ್ದು, ಏನೋ ಲೆಕ್ಕಾಚಾರ ಮಾಡುತ್ತಿದ್ದುದ್ದರಿಂದ ನಾನು ಹಾಗೆ ಅಂದುಕೊಂಡೆ. “ನಾವಂತೂ ಎಂಟನೇ ದಿನಕ್ಕೆ ಶ್ರೀರಂಗಪಟ್ಟಣಕ್ಕೆ ಬಂದು ೩ ದಿನ ಕಾರ್ಯ ಮುಗಿಸಿ ಹೋಗುತ್ತೇವೆ, ಅದಕ್ಕೆ ಇಲ್ಲಿ ಅವಕಾಶವಿದೆ ಮತ್ತು ಆ ಸಮಯದಲ್ಲಿ ಇಲ್ಲೇ ಉಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ” ಎಂದರು ಅಪ್ಪ. ತಾವೇ ಅಳಿಯನ ಧಾರ್ಮಿಕ ಕಾರ್ಯಕ್ರಮವನ್ನು ಮಾಡುವುದಾಗಿ ಅಪ್ಪ ಹೇಳಿದಾಗ, ಕಿಶೋರ್ “ಸರಿ ಹಾಗಾದರೆ ಮೂರೇ ದಿನದಲ್ಲಿ ಕಾರ್ಯ ಮುಗಿಯುವುದಾದರೆ ನಾನು ಇಲ್ಲೇ ರಮ್ಯಳ ಕೆಲಸವನ್ನು ಮಾಡಿ ಮುಗಿಸುತ್ತೇನೆ” ಎಂದರು. ಈಗ ಅಪ್ಪ ನಗುತ್ತಾ, “ಪರಿಚಯವಿರುವ ಇಲ್ಲಿನ ಪುರೋಹಿತರೊಂದಿಗೆ ನಿನ್ನೆ ನಾನು ಮಾತನಾಡಿದ್ದೇನೆ, ನಿಮ್ಮ ವಿಷಯವನ್ನೂ ತಿಳಿಸುತ್ತೇನೆ” ಎಂದು ಹೇಳಿ, ನನ್ನನ್ನು ನದಿ ತೀರದಲ್ಲಿ ಬಿಟ್ಟು ಅವರು ಪುರೋಹಿತರ ಮನೆಗೆ ಹೋದರು. ನೀರಿನ ರಭಸ ಜೋರಾಗೇನಿರಲಿಲ್ಲ. ಕಿರಣ್ ಮತ್ತು ರಮ್ಯರ ಅಸ್ಥಿ ಸ್ವಲ್ಪ ಅಂತರದಲ್ಲಿ ನಾವು ನೀರಿನಲ್ಲಿ ಹಾಕಿದ್ದರೂ ಅದೇಕೋ ಅವೆರಡೂ ಸೇರಿಕೊಂಡು ಜೊತೆಜೊತೆಯಾಗಿ ಮುಂದೆ ಸಾಗುತ್ತಿದ್ದಂತೆ ನನಗೆ ಕಾಣಿಸಿತು.
ಮನಸ್ಸಿನಲ್ಲಿ ಬಂದ ಯಾವುದೋ ಯೋಚನೆ ನನ್ನ ಕಲ್ಪನೆಯ ದೃಷ್ಟಿಯಲ್ಲಿ ಸೇರಿಕೊಂಡಿರಬೇಕು ಅನಿಸುತ್ತೆ.
ಅಪ್ಪ ಬಂದು “ಪುರೋಹಿತರ ಮನೆಯಲ್ಲಿ ಇಂದಿನ ಊಟದ ವ್ಯವಸ್ಥೆಯಾಗಿದೆ, ಅಲ್ಲೇ ಊಟ ಮಾಡಿಕೊಂಡು ಹೋಗೋಣ” ಎಂದರು. ಸರಿ ಮೂವರು ಊಟ ಮಾಡಿ ಮತ್ತೆ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ನಾನು ಮತ್ತು ಅಪ್ಪ ಕಾರಿನ ಹಿಂದಿನ ಸೀಟಿನಲ್ಲಿ ನಿದ್ದೆಗೆ ಶರಣಾದೆವು. ಮಧ್ಯದಲ್ಲಿ ಗಾಡಿ ನಿಂತಾಗ ಎಚ್ಚರವಾಯಿತು. ಯಾವುದೋ ಹೋಟಲ್ ಮುಂದೆ ಗಾಡಿ ನಿಂತಿತ್ತು. “ಕಾಫಿ ಕುಡಿದು ಹೋಗೋಣವೇ, ಗಾಡಿ ಓಡಿಸಿ ಸ್ವಲ್ಪ ಸುಸ್ತಾಗಿದೆ” ಎಂದರು ಕಿಶೋರ್. ಕಾಫಿ ಕುಡಿದು ಹೊರಡುವಾಗ ಅಪ್ಪ ಮುಂದಿನ ಸೀಟಿಗೆ ಹೋದರು, ನಾನು ಹಿಂದಿನ ಪೂರ್ತಿ ಸೀಟಿನಲ್ಲಿ ಮಲಗಿಬಿಟ್ಟೆ. ಎಚ್ಚರಿಕೆಯಾದಾಗ ಬೆಂಗಳೂರಿನ ನಮ್ಮ ಅಪಾರ್ಟ್‌ಮೆಂಟ್ ಮುಂದೆ ಇದ್ದೆವು. ಕಿಶೋರ್‌ಗೆ ಥ್ಯಾಂಕ್ಸ್ ಹೇಳಿ ಹೊರಡುತ್ತಿದ್ದರೆ, ಅಪ್ಪ ಬಲವಂತ ಮಾಡಿ ಕಿಶೋರ್‌ನ ಮನೆಯ ಒಳಗೆ ಕರೆದುಕೊಂಡು ಬಂದರು. ಒಂದು ವರ್ಷದ ನನ್ನ ಮಗಳನ್ನು ಎತ್ತಿಕೊಂಡು ತಮ್ಮ ಕೈಗಳಲ್ಲಿ ಆಡಿಸುತ್ತಿದ್ದರು ಕಿಶೋರ್; ಅಷ್ಟರಲ್ಲಿ ಅಮ್ಮ ಕಾಫಿ ತಂದು ಕೊಟ್ಟರು. ಕಾಫಿ ಕುಡಿದು ಹೊರಡುವಾಗ, ಅಪ್ಪ “ನಾಳೆ ನಮ್ಮ ಮನೆಗೆ ಬನ್ನಿ, ನಿಮ್ಮ ಮಗ, ತಮ್ಮ ಮತ್ತು ತಮ್ಮನ ಹೆಂಡತಿಯನ್ನೂ ಕರೆತನ್ನಿ” ಎಂದರು. ಛೇ ಇವೆಲ್ಲಾ ನನಗೆ ಯಾಕೆ ಹೊಳೆಯೋಲ್ಲ ಎಂದು ಬೇಸರಗೊಂಡೆ. “ಸರಿ” ಎಂದು ಹೊರಟರು ಕಿಶೋರ್. ನಮ್ಮ ಮದುವೆಯ ಆಲ್ಬಮ್ ಕೈಗೆ ಸಿಕ್ಕತು, ಒಂದೊಂದೇ ಫೋಟೋವನ್ನು ನೋಡುತ್ತಾ ಒಂದು ಮೂಲೆಯಲ್ಲಿ ಸೋಫಾ ಮೇಲೆ ಕುಳಿತೆ.
“ಕಿಶೋರ್ ಕಂಪನಿಯಲ್ಲಿ ಅವರ ಹೆಂಡತಿ ರಮ್ಯಾಳ ಜಾಗ ಖಾಲಿ ಆಗಿದೆಯಂತೆ, ನೀನು ಇಷ್ಟ ಪಟ್ಟರೆ ನಿನಗೆ ಆ ಕೆಲಸ ಕೊಡಿಸುತ್ತೇನೆ “ಎಂದರು ಕಿಶೋರ್ ಎಂದು ಅಪ್ಪ ಹೇಳಿದರು. “ಯಾವಾಗ ಹೇಳಿದರು?” ಎಂದೆ. “ಕಾರಿನಲ್ಲಿ ನೀನು ಮಲಗಿದ್ದಾಗ ದಾರಿ ಉದ್ದಕ್ಕೂ ನಾವು ಮಾತನಾಡುತ್ತಲೇ ಬಂದೆವೆಲ್ಲ, ಆಗ ಹೇಳಿದರು. ಪಾಪ ಒಳ್ಳೆಯ ಹುಡುಗ, ಈ ಚಿಕ್ಕ ವಯಸ್ಸಿಗೆ ಹೆಂಡತಿ ಕಳೆದುಕೊಂಡಿದ್ದಾನೆ, ಮಗುವಿಗೆ ಅಮ್ಮನ ಪ್ರೀತಿ ಕಾಣೆಯಾಗಿದೆ, ನಾನೇ ಎರಡನೇ ಮದುವೆ ಮಾಡಿಕೊಳ್ಳೀ” ಎಂದು ಹೇಳಿದೆ ಎಂದರು ಅಪ್ಪ. ನನಗೆ ತುಂಬಾ ಕೋಪ ಬಂತು. ಇನ್ನೂ ಅವರ ಹೆಂಡತಿ ಸತ್ತು ಎರಡು ದಿನವೂ ಆಗಿಲ್ಲ ಮತ್ತೆ ಅವರ ಪರಿಚಯವು ಕೂಡ ಹೊಸದೇ, ನೀನು ಇದೆಲ್ಲಾ ಮಾತನಾಡಕೂಡದಿತ್ತು ಎಂದು ಅಪ್ಪನಿಗೆ ಬೈದೆ. ಆದರೂ ಕಿಶೋರ್ ಏನು ಉತ್ತರ ಕೊಟ್ಟಿರಬಹುದೆಂದು ನನ್ನ ಮನಸ್ಸು ಅಪ್ಪನಿಂದ ಆ ಉತ್ತರವನ್ನು ಬಯಸುತ್ತಿತ್ತ್ತು. ಆದರೆ ಅಪ್ಪ ಯಾಕೋ ನಾನು ಜೋರಾಗಿ ಬೈದಿದ್ದಕ್ಕೆ ಸುಮ್ಮನಾದರು, ಮುಂದೇನೂ ಮಾತನಾಡಲಿಲ್ಲ. “ಅವರು ಕೆಲಸ ಕೊಡಿಸಿದ್ರೆ ಹೋಗ್ತೀಯಾ” ಅಂತ ಅಮ್ಮ ಕೇಳಿದರು. “ನಾನು ಹೋಗಲೇ ಬೇಕಮ್ಮ, ಮುಂದಿನ ಜೀವನ ನಡೀಬೇಕೆಲ್ಲ” ಅಂದೆ. “ಮನೆ ಸಾಲ ಎಷ್ಟಿದೆ?” ಎಂದರು ಅಪ್ಪ. “ಅದರ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಸಾಲ ತೆಗೆದುಕೊಂಡಾಗ ಕಿರಣ್ ಹೋಮ್ ಲೋನ್ ಜೊತೆಗೆ ಬರುವ ಇನ್ಷುರೆನ್ಸ್ ತೆಗೆದುಕೊಂಡಿದ್ದರು, ಇನ್ಷುರೆನ್ಸ್‌ನವರು ಅದನ್ನು ತೀರಿಸಿಕೊಳ್ತಾರೆ. ನಾನೇನು ಕಟ್ಟೋ ಹಾಗಿಲ್ಲ” ಎಂದೆ. ಅಪ್ಪ ಅಮ್ಮನ ಮುಖದಲ್ಲಿ ಒಂದು ತರಹ ನಿರಾಳ ಭಾವನೆ ನಾನು ಕಂಡೆ. “ಸ್ವಲ್ಪ ದಿನ ಬೇಕಾದರೆ ಬೇರೆ ಮನೆಗೆ ಬಾಡಿಗೆಗೆ ಹೋಗು, ಇಲ್ಲೇ ಇದ್ದರೆ ಕಿರಣ್‌ನ ನೆನಪು ಆಗಾಗ ಬರುತ್ತಿರುತ್ತದೆ” ಎಂದರು ಅಪ್ಪ. “ಅವರ ನೆನಪು ಸದಾ ಇದ್ದರೆ ಮಾತ್ರ ನನಗೆ ಖುಷಿ, ನಾವಿಬ್ಬರೂ ಇಷ್ಟ ಪಟ್ಟು ಕೊಂಡ ಮನೆ ಇದು, ನಾನು ಇಲ್ಲೇ ಇರುತ್ತೇನೆ. ಸ್ವಲ್ಪ ದಿನ ಎಲ್ಲಾ ಸರಿಯಾಗುತ್ತೆ ಬಿಡಿ” ಎಂದೆ. ರಾತ್ರಿ ನಾನು ಸೋಫಾ ಮೇಲೆ ಮಲಗುತ್ತೇನೆ ಎಂದು ಮಲಗಿದೆ. ಅಪ್ಪ ಅಮ್ಮ ಮತ್ತು ನನ್ನ ಮಗಳು ರೂಮಿನಲ್ಲಿ ಮಲಗಿದರು. ರಾತ್ರಿ ಸುಮಾರು ಹೊತ್ತು ರೂಮಿನ ದೀಪ ಉರಿಯುತ್ತಿತ್ತು ಮತ್ತು ಅಪ್ಪ ಅಮ್ಮ ಏನೋ ಮಾತನಾಡುತ್ತಿರುವುದು ಗೊತ್ತಾಗುತ್ತಿತ್ತು, ಸ್ಪಷ್ಟವಾಗಿ ಕೇಳಿಸಲಿಲ್ಲ.
ಮಾರನೇ ದಿನ ಕಿಶೋರ್ ಮತ್ತು ಅವರ ಮನೆಯವರೆಲ್ಲಾ ಬಂದರು. ಅವರ ಮಗ ನನ್ನ ಮಗಳನ್ನು ಆಟ ಆಡಿಸುತ್ತಾ ತುಂಬಾ ಸಂತೋಷದಿಂದಿದ್ದ. “ಎರಡು ದಿನದಿಂದ ಅವನು ನಕ್ಕಿದ್ದೇ ನೋಡಿರಲಿಲ್ಲ. ಅಂತು ಇಂದು ನಿಮ್ಮ ಮನೆಗೆ ಅವನನ್ನು ಕರೆದುಕೊಂಡು ಬಂದದ್ದು ಒಳ್ಳೆಯದೇ ಆಯಿತು” ಎಂದರು ಕಿಶೋರ್. ಇಬ್ಬರ ಮನೆಯ ವಿಷಯಗಳನ್ನೆಲ್ಲಾ ಮಾತನಾಡುತ್ತಾ ಸಂಜೆ ಆಗಿದ್ದೇ ಗೊತ್ತಾಗಲಿಲ್ಲ. ಎಲ್ಲರೂ ಹೊರಡಲು ತಯಾರಾದರೆ, ಕಿಶೋರ್‌ನ ಮಗ ನಾನು ಪಾಪೂನ ಬಿಟ್ಟು ಬರೋಲ್ಲ ಇಲ್ಲೇ ಉಳಿಯುವುದಾಗಿ ಗಲಾಟೆ ಮಾಡಿದ, ಕಿಶೋರ್ ಬೈದು ಕರೆದುಕೊಂಡುಹೋಗಲು ಪ್ರಯತ್ನಿಸಿದರು. ನಾನೇ, ಇರಲಿ ಬಿಡಿ ಎಂದು ತಡೆದೆ. ಮಾರನೆಯ ದಿನ ಬೆಳಿಗ್ಗೆಯೇ ಬಂದು ಮಗನನ್ನು ಕರೆದುಕೊಂಡು ಹೋದರು ಕಿಶೋರ್. ಅವರಿಗೆ ಅವನನ್ನು ಬಿಟ್ಟಿರಲು ಕಷ್ಟವಾಗಿತ್ತು ಅನಿಸುತ್ತೆ. ಹೀಗೆ ಚಿತಾಗಾರದಲ್ಲಿ ಪರಿಚಯವಾದ ಕಿಶೋರ್ ನಮ್ಮ ಮನೆಗೆ ಹತ್ತಿರವಾಗುತ್ತಿದ್ದಂತೆ ಹತ್ತು ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಕಡೆಯ ಮೂರೇ ದಿನದಲ್ಲಿ ಮುಗಿಸಲು ಶ್ರೀರಂಗಪಟ್ಟಣ ತಲುಪಿದೆವು. ನಮ್ಮ ಮನೆಯಿಂದ ಮೂರು ಜನ ಹಾಗೂ ಕಿಶೋರ್ ಮನೆಯಿಂದ ಮೂರು ಜನ, ಜೊತೆಗೆ ಇಬ್ಬರು ಮಕ್ಕಳು. ಶ್ರೀರಂಗಪಟ್ಟಣ ತಲುಪುತ್ತಿದ್ದಂತೆ ನನಗೊಂದು ಆಶ್ಚರ್ಯ ಕಾದಿತ್ತು. ಅಲ್ಲಿ ಕಿರಣ್‌ನ ತಂದೆ ತಾಯಿ ಬಂದಿದ್ದರು.
ಸಾವು ಹೇಗೆ ಒಬ್ಬರನ್ನು ಮಾತ್ರ ನಮ್ಮಿಂದ ದೂರ ಮಾಡುತ್ತದೆಯೋ ಹಾಗೆಯೇ ಹಲವರನ್ನು ಹತ್ತಿರವೂ ತರುತ್ತದೆ ಎಂಬುದು ನನಗೆ ಮನದಟ್ಟಾಯಿತು.
ಅಪ್ಪ ಅವರ ಮನೆಗೆ ಹೋಗಿ ಕರೆದಿದ್ದರಂತೆ. “ಈಗ ನಮ್ಮ ಮತ್ತು ನಿಮ್ಮ ವಂಶದ ಏಕೈಕ ಕುಡಿ ನಮ್ಮ ಮನೆಯಲ್ಲಿದೆ, ಹಾಗಾಗಿ ನಾವೆಲ್ಲರೂ ಹಳೆಯದನ್ನೆಲ್ಲಾ ಮರೆತು ಒಂದಾಗಬೇಕು” ಎಂದು ಹೇಳಿದಾಗ, ನನ್ನ ಮಾವನವರು “ವಂಶದ ಒಂದೇ ಕುಡಿಯಲ್ಲ, ಎರಡು ಕುಡಿ ನಿಮ್ಮ ಮನೆಯಲ್ಲಿದೆ; ಒಂದು ನನ್ನ ಸೊಸೆ, ಮತ್ತೊಂದು ನನ್ನ ಮೊಮ್ಮಗಳು” ಅಂದರಂತೆ. “ಇಂದಿನಿಂದ ಅವಳು ನನ್ನ ಸೊಸೆಯಲ್ಲ, ಮಗಳು” ಎಂದರಂತೆ ನಮ್ಮತ್ತೆ. ಆಶ್ಚರ್ಯದಿಂದ ಅವರು ಬಂದದ್ದನ್ನು ನೋಡಿದಾಗ ಅಮ್ಮ ಹೇಳಿದ ಮಾತುಗಳಿದು. ಕಾರಿನಿಂದ ಇಳಿಯುತ್ತಲೇ ಅತ್ತೆಯವರ ಬಳಿ ಓಡಿಹೋದೆ, ತಬ್ಬಿಕೊಂಡು ಅವರು ನನ್ನೊಡನೆ ಅತ್ತರು. ಪುತ್ರ ಶೋಕ ಹಾಗೂ ಪತಿ ಶೋಕಗಳ ಕಟ್ಟೆ ಒಂದೆಡೆ ಒಡೆದಿತ್ತು. ಕಾಡಿನ ವಾತಾವರಣವಿರುವ ನದಿಯ ತೀರದಲ್ಲಿ ಮೂರು ದಿನ ಕಳೆದದ್ದೇ ಗೊತ್ತಾಗಲಿಲ್ಲ. ಅಪ್ಪನಿಗಂತೂ ಅದೇನೋ ಒಂದು ಕರ್ತವ್ಯ ಮುಗಿಯಿತೆಂಬ ಸಮಾಧಾನ. ಅಷ್ಟೇ ಅಲ್ಲದೆ ತಮ್ಮ ಉಪದೇಶವನ್ನು ಕಿಶೋರ್ ಕೂಡಾ ಪಾಲಿಸಿದರು ಎಂಬ ಸಮಾಧಾನ ಕೂಡ. ಬೆಂಗಳೂರಿಗೆ ಎಲ್ಲರೂ ಸುರಕ್ಷಿತವಾಗಿ ವಾಪಸ್ ಬಂದೆವು. ಅತ್ತೆ ಮಾವ ಮತ್ತೆ ಬೆಂಗಳೂರಿಗೆ ಬಂದು ಮಾತನಾಡುತ್ತೇವೆ ಎಂದು ಹೇಳಿ ನೇರ ಮಂಗಳೂರಿಗೆ ಹೊರಟರು.
ಈ ಮಧ್ಯದಲ್ಲಿ ನನ್ನ ಕೆಲಸವು ಕಿಶೋರ್ ಅವರ ಕಂಪನಿಯಲ್ಲೇ ಖಾತ್ರಿಯಾಗಿತ್ತು. ಕಂಪನಿಗೆ ಸೇರಿಕೊಳ್ಳಲು ಒಂದು ತಿಂಗಳು ಸಮಯವಿತ್ತು. “ಬಂದ ಕೆಲಸ ಮುಗಿದಿದೆ, ನಾವು ನಾಳೆ ಊರಿಗೆ ಹೊರಡುತ್ತೇವೆ” ಎಂದು ಅಪ್ಪ ಹೇಳಿದಾಗ, ನನಗೆ ಎಲ್ಲಿಲ್ಲದ ಅಳು ಬಂದು ಜೋರಾಗಿ ಅತ್ತುಬಿಟ್ಟೆ. “ನನಗೆ ನಿನ್ನ ಕಷ್ಟ ಗೊತ್ತು ಪುಟ್ಟಿ. ಇರಲಿ ಬಿಡು, ಅಮ್ಮ ನಿನ್ನೊಂದಿಗೆ ಒಂದೆರೆಡು ತಿಂಗಳು ಇರ್ತಾರೆ. ನೀನು ಹೊಸ ಜೀವನಕ್ಕೆ ಹೊಂದಿಕೊಳ್ಳಬೇಕಲ್ಲ. ಆದರೆ ನಿನ್ನೊಂದಿಗೆ ನಾನು ಕೆಲವು ವಿಷಯಗಳನ್ನು ಮಾತನಾಡಬೇಕು” ಎಂದು ಹೇಳಿ ಅಮ್ಮನನ್ನೂ ಬರಲು ಹೇಳಿದರು. “ಇನ್ನೂ ಚಿಕ್ಕ ವಯಸ್ಸು ನಿನಗೆ, ಮಗು ಕೂಡಾ ಚಿಕ್ಕದು. ಬೆಂಗಳೂರಿನಂತಹ ಬೃಹತ್ ಊರಿನಲ್ಲಿ ಒಂಟಿಯಾಗಿ ಜೀವನ ಮಾಡುವುದು ಸುಲಭವಲ್ಲ, ಅದಕ್ಕೆ, ಮತ್ತೊಂದು ಮದುವೆ ಮಾಡಿಕೊಳ್ಳುವುದರ ಬಗ್ಗೆ ಯೋಚಿಸು” ಎಂದರು ಅಮ್ಮ. ನಾನು ಅಮ್ಮನಿಂದ ಈ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಸ್ವಲ್ಪ ಹೊತ್ತು ಮೌನವಾಗಿದ್ದು, “ನನಗೆ ಇದರ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಬೇಕು” ಎಂದೆ. “ಸರಿ ಹಾಗೆ ಆಗಲಿ” ಎಂದು ಹೇಳಿದರು ಅಪ್ಪ.
ಅಪ್ಪ ಊರಿಗೆ ಹೊರಟರು, ಅಮ್ಮ ನನ್ನ ಸಹಾಯಕ್ಕೆ ಉಳಿದುಕೊಂಡರು. ಕೆಲಸಕ್ಕೂ ಸೇರಿಕೊಂಡೆ. ದಿನಾ ಕೀಶೋರ್ ಕಾರಿನಲ್ಲೇ ಕೆಲಸಕ್ಕೆ ಹೋಗುತ್ತಿದ್ದೆ. ಬೆಳಗ್ಗೆ ಬರುವಾಗ ಅವರ ಮಗನನ್ನು ನಮ್ಮ ಮನೆಯಲ್ಲಿ ಬಿಟ್ಟು, ನನ್ನನ್ನು ಆಫೀಸಿಗೆ ಕರೆದುಕೊಂಡು ಹೋಗುತ್ತಿದ್ದರು. ಅದೇನೋ ʼಕಾರ್ ಪೂಲಿಂಗ್ʼ ಅಂತ ಮಾಡಿಕೊಂಡಿದ್ದರು, ಹಾಗಾಗಿ ನಮ್ಮ ಕಂಪನಿಯ ಇನ್ನೂ ಇಬ್ಬರು ಸಹೋದ್ಯೋಗಿಗಳು ನಮ್ಮ ಜೊತೆ ಬರುತ್ತಿದ್ದರು. ಹಣ ಉಳಿಸುವುದಕ್ಕಿಂತ ಪರಿಸರ ಕಾಳಜಿ ಇರುವವರು ಕಡಿಮೆ ಇಂಧನ ಬಳಸಿ ಪರಿಸರ ರಕ್ಷಿಸಲು ಮಾಡಿಕೊಂಡಿರುವ ಹೊಸ ಉಪಾಯ ʼಕಾರ್ ಪೂಲಿಂಗ್ʼ. ನಾಲ್ಕು ಜನ ನಾಲ್ಕು ಕಾರಿನಲ್ಲಿ ಹೋಗುವ ಬದಲು ಒಂದೇ ಕಾರಿನಲ್ಲಿ ನಾಲ್ಕು ಜನ ಹೋದರೆ ಹಣವೂ ಉಳಿತಾಯ ಹಾಗೂ ಪರಿಸರ ಪ್ರಿಯ ಕೂಡ. ಆಫೀಸಿನಲ್ಲಿ ನಾನು ಮತ್ತು ಕಿಶೋರ್ ಜಾಸ್ತಿ ಮಾತನಾಡಲು ಆಗುತ್ತಿರಲಿಲ್ಲ. ಇಬ್ಬರದೂ ಬೇರೆ ಬೇರೆ ಪ್ರಾಜೆಕ್ಟ್. ಈ ಮಧ್ಯೆ ಅಪ್ಪ ಮತ್ತು ನನ್ನ ಅತ್ತೆ ಮಾವ ಆಗಾಗ ಮನೆಗೆ ಬಂದು ಹೋಗುತ್ತಿದ್ದರು ಹಾಗೂ ಶನಿವಾರ ನಮ್ಮ ಮನೆಗೆ ಕಿಶೋರ್ ಹಾಗೂ ಅವರ ಮಗ ಊಟಕ್ಕೆ ಬಂದರೆ, ಭಾನುವಾರದಂದು ಕೀಶೋರ್ ಮನೆಗೆ ನಾನು, ಅಮ್ಮ ಮತ್ತು ನನ್ನ ಮಗಳು ಹೋಗುತ್ತಿದ್ದೆವು. ಕಿಶೋರ್‌ನ ಮನೆಯಲ್ಲೂ ಕೂಡಾ ಭಾನುವಾರದಂದು ಅಮ್ಮನದೇ ಅಡುಗೆ ಕೆಲಸ. ಹಿರಿಯವಳು ನಾನಿದ್ದಾಗ, ಹೀಗೆ ಗಂಡಸಿಗೆ ಅಡುಗೆ ಮಾಡಲು ನಾನು ಬಿಡುವುದು ಸರಿಯಲ್ಲ ಎಂಬುದು ಅಮ್ಮನ ವಾದ. ಒಂದು ಶನಿವಾರ ಅತ್ತೆ ಮಾವ ಬಂದಿದ್ದರು. ಆ ದಿನ ಕಿಶೋರ್ ಮತ್ತು ಅವರ ಮಗ ಬಂದಿದ್ದರು. ಶ್ರೀರಂಗಪಟ್ಟಣದಲ್ಲಿ ಆಗ ಕಳೆದ ಮೂರುದಿನಗಳಿಂದಾಗಿ ಅತ್ತೆ ಮಾವನಿಗೆ ಕಿಶೋರ್ ಹತ್ತಿರವಾಗಿದ್ದರು. “ನಾಳೆ ನೀವೇ ಮತ್ತೆ ಬನ್ನಿ, ನಾವು ಬರಲು ಸಾಧ್ಯವಿಲ್ಲ” ಅಂದೆ ನಾನು. ಅದಕ್ಕೆ “ಸರಿ ಹಾಗಾದರೆ ನಾನು ಬೆಳಿಗ್ಗೆ ಕಾರ್ ತಂದು , ನಿಮ್ಮ ಅತ್ತೆ ಮಾವರನ್ನು ನಮ್ಮ ಮನೆಗೆ ಕರೆದುಕೊಂಡುಹೋಗುತ್ತೇನೆ. ನನಗೆ ಭಾನುವಾರದ ಹೊತ್ತು ಅಡುಗೆ ಮಾಡುವುದೇ ಮರೆತುಹೋಗಿದೆ, ಹಾಗಾಗಿ ನಿಮ್ಮ ಅಮ್ಮಾನೂ ನನ್ನೊಂದಿಗೆ ಬರುತ್ತಾರೆ” ಎಂದರು ಕಿಶೋರ್. ಏನೋ ಹೇಳಲು ಹೋಗಿ ಇನ್ನೆಲ್ಲೋ ಸಿಕ್ಕಿ ಹಾಕಿಕೊಂಡಂತಾಗಿ ನಾನು “ಸರಿ ಪ್ರತಿ ಭಾನುವಾರದಂತೆಯೇ ಆಗಲಿ” ಎಂದು ಸುಮ್ಮನಾದೆ.
ಎರಡು ತಿಂಗಳು ಕಳೆದ ಮೇಲೆ ಅಪ್ಪ ಬಂದು, ಅಮ್ಮನನ್ನು ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದರು. ನನಗೆ ಮತ್ತೆ ದುಃಖ ಉಕ್ಕಿ ಬಂತು. “ನಾವು ಹೇಳಿದ ವಿಷಯ ಏನಾದರು ಯಾಚಿಸಿದ್ಯಾ?” ಎಂದರು ಅಪ್ಪ. “ಯಾವ ವಿಷಯ” ಅಂತ ಕೇಳಿದೆ. “ಅದೇ ನೀನು ಮತ್ತೆ ಮದುವೆಯಾಗುವುದು” ಎಂದರು ಅಪ್ಪ. ನನಗೆ ಅವರು ಮದುವೆಯ ಪ್ರಸ್ತಾಪ ಮಾಡಿದ್ದ ವಿಷಯವೇ ಮರೆತುಹೋಗಿತ್ತು. “ನನಗೆ ಇನ್ನೂ ಸಮಯ ಬೇಕು” ಅಂದೆ. “ಆದರೆ ಕಿಶೋರ್, ತಮ್ಮ ಮಗ, ತಾಯಿಯ ಪ್ರೀತಿಯಿಂದ ವಂಚಿತನಾಗಬಾರದು, ಹಾಗಾಗಿ ಆದಷ್ಟು ಬೇಗನೇ ಎರಡನೇ ಮದುವೆ ಆಗುವುದಾಗಿ ತಿಳಿಸಿದ್ದರು” ಎಂದರು ಅಪ್ಪ. ನನ್ನ ಮುಖದಲ್ಲಿನ ಪ್ರತಿಕ್ರಿಯೆಯನ್ನು ಅಪ್ಪ ಅಮ್ಮ ನಿರೀಕ್ಷಿಸುತ್ತಿರುವಂತೆ ನನ್ನ ಮುಖವನ್ನೇ ನೋಡುತ್ತಿದ್ದರು. “ಹಾಗೆ ಯಾವಾಗ ಹೇಳಿದರು” ಎಂದು ಕೇಳಿದೆ. “ಅವತ್ತು ಅಸ್ಥಿ ಕಾವೇರಿಯಲ್ಲಿ ಬಿಟ್ಟು ಶ್ರೀರಂಗಪಟ್ಟಣದಿಂದ ಬರುವಾಗ” ಎಂದರು ಅಪ್ಪ. “ಮತ್ತೆ ಅವತ್ತೇ ಈ ವಿಷಯ ನನಗೆ ಹೇಳಲಿಲ್ಲ ನೀವುʼ ಅಂದೆ. “ಹೇಳೋಣ ಅಂದುಕೊಂಡೆ, ಆದರೆ ನೀನು ನನಗೆ ಬೈದು ನನ್ನನ್ನು ಸುಮ್ಮನಾಗಿಸಿಬಿಟ್ಟೆಯೆಲ್ಲಾ” ಎಂದರು ಅಪ್ಪ. “ಅದೇನಾದರೂ ಆಗಲಿ ಅವರ ವಿಷಯ ನಮಗೇಕೆ, ಬಿಟ್ಟು ಬಿಡಿ” ಎಂದು ಗೋಡೆಯ ಕಡೆ ಮುಖಮಾಡಿ ನಿಂತೆ.
“ನೋಡು ಪುಟ್ಟಿ ನೀನು ಕಿಶೋರ್‌ನ ಮದುವೆಯಾಗುವುದಾದರೇ ನಮ್ಮದೇನು ಅಭ್ಯಂತರವಿಲ್ಲ. ಅವರೂ, ನಿನ್ನನ್ನು ಮದುವೆಯಾದರೆ ಅವರ ಮಗನಿಗೂ ಒಳ್ಳೆಯ ಅಮ್ಮ ಸಿಕ್ಕಂತೆ ಆಗುತ್ತದೆ ಎಂದರಂತೆ” ಎಂದು ಹೇಳಿದರು ಅಮ್ಮ. “ನಿನಗ್ಯಾರು ಇದೆಲ್ಲಾ ಹೇಳಿದ್ದು” ಎಂದು ಅಮ್ಮನ ಮೇಲೆ ರೇಗಿದೆ. “ಅದೇ ಅವತ್ತು ಅಸ್ಥಿ ಕಾವೇರಿಯಲ್ಲಿ ಬಿಟ್ಟು ಬರುವಾಗ ಅಪ್ಪನಿಗೆ ಕಿಶೋರ್ ಹೇಳಿದರಂತೆ. ಆದರೆ ನಿಮ್ಮಿಬ್ಬರ ಮದುವೆ ವಿಷಯ ನಿಮ್ಮಪ್ಪಾನೇ ಮೊದಲು ಮಾತನಾಡಿದ್ದಂತೆ, ಪಾಪ ಆ ಹುಡಗನೇದು ತಪ್ಪಿಲ್ಲ ಇದರಲ್ಲಿ” ಎಂದರು ಅಮ್ಮ. ಎರಡು ತಿಂಗಳಿನಿಂದ ಅಪ್ಪ ಅಮ್ಮ ತಮ್ಮ ಮನಸ್ಸಿನಲ್ಲೇ ಇಂತಹ ವಿಷಯಗಳನ್ನು ಹೇಗೆ ಇಟ್ಕೊಳ್ತಾರೇ ಎಂಬುದೇ ನನಗೆ ಆಶ್ಚರ್ಯ. ಅವರು ಹೋಗಲಿ, ಕಿಶೋರ್ ಕೂಡಾ ಈ ವಿಷಯ ನನಗೆ ತಿಳಿಸಿಲ್ಲ. ಈ ಎರಡು ತಿಂಗಳಿನಲ್ಲಿ ಅವರು ಎಂದೂ ನನ್ನ ಕಡೆ ಆ ರೀತಿಯಾಗಿ ನೋಡೂ ಇರಲಿಲ್ಲ. “ನೋಡೋಣ, ಅತ್ತೆ ಮಾವಂದಿರು ಏನು ಹೇಳುತ್ತಾರೆ ಕೇಳೋಣ” ಎಂದೆ. “ಅವರಿಗೆ ಇದು ಪೂರ್ತಿ ಸಮ್ಮತಿಯಿದೆ. ನಾನಗಲೇ ಈ ವಿಷಯ ಅವರೊಂದಿಗೆ ಹಂಚಿಕೊಂಡಿದ್ದೇನೆ” ಎಂದರು ಅಪ್ಪ. “ಈ ಮದುವೆಗೆ ಅವರೇ ನಿನ್ನನ್ನು ಧಾರೆ ಎರೆದು ಕೊಡುತ್ತಾರಂತೆ. ಕನ್ಯಾದಾನದ ಫಲವೂ ಅವರಿಗೂ ಬೇಕಂತೆ” ಎಂದರು ಅಪ್ಪ. ಅಪ್ಪನಿಗೆ ಏನೂ ಉತ್ತರ ಕೊಡಲು ತಿಳಿಯದೇ ಕಿರಣ್‌ನ ಫೋಟೋ ಕಡೆ ನೋಡಿದೆ. ನಾನು ಅಸ್ಥಿಯಾಗಿ ಜೊತೆಜೊತೆಯಾಗಿ ಮತ್ತ್ಯಾರೊಂದಿಗೋ ನದಿಯಲ್ಲಿ ಹರಿದಿದ್ದಾಯಿತು, ಇನ್ನು ಬದುಕಿರುವ ನೀನು. ನಿನ್ನ ಜೊತೆಜೊತೆಯಲ್ಲಿ ನಡೆಯುವ ಹೊಸ ಸಂಗಾತಿಯನ್ನು ಸೇರುವುದರಲ್ಲಿ ನನಗೇನು ಅಭ್ಯಂತರವಿಲ್ಲ ಎಂಬಂತೆ ಫೋಟೋದಲ್ಲಿ ಕಿರಣ್ ಮುಖದ ಮೇಲಿನ ನಗು ಹೇಳುತ್ತಿತ್ತು.
ಕೆಲವೊಮ್ಮೆ ನಮ್ಮ ಮನದಾಸೆಯನ್ನು ಫೋಟೋಗಳೇ ಹೇಳುತ್ತಿದೆಯೇನೋ ಎಂಬುವ ಕಲ್ಪನೆ ಮಾಡಿಕೊಳ್ಳುವುದು ಅನುಕೂಲವಾಗುತ್ತದೆ ಅಲ್ಲವೇ.
ಸರಿ ಈಗ ಇವೆಲ್ಲಾ ಆಗಿ ಮೂರು ವರ್ಷವಾಯಿತು ಬಿಡಿ. ಜೊತೆಗೆ ನನ್ನ ಕಿಶೋರ್‌ನ ಮದುವೆಯಾಗಿಯೂ ಕೂಡ. ನಮ್ಮ ಮಕ್ಕಳಿಗೆ ಇನ್ನೊಂದು ತಮ್ಮನೋ ತಂಗಿಯೋ ಬರುವ ಸಮಯ ಬಂದಿದೆ. “ಆಂಟಿ, ನಿಮ್ಮ ಟೋಕನ್ ನಂಬರ್ ಎಷ್ಟು” ಎಂದು ಹೆರಿಗೆ ಆಸ್ಪತ್ರೆ ವಾರ್ಡ್ ಬಾಯ್ ಕೇಳಿದಾಗ, ನಾನು ಮತ್ತು ಕಿಶೋರ್ ಒಬ್ಬರ ಮುಖ ಒಬ್ಬರು ನೋಡಿ ನಕ್ಕೆವು.