ಬ್ಯಾಂಕಿಂಗ್ ಪದದ ಹಳೆಯ ಅರ್ಥ ಹಣ ಹೆಚ್ಚಾಗಿ ಇದ್ದವರಿಂದ ಬಡ್ಡಿ ಕೊಡಲು ಠೇವಣಿ ಪಡೆದು, ಹಣ ಇಲ್ಲದವರಿಗೆ ಹೆಚ್ಚಿನ ಬಡ್ಡಿಗೆ ಸಾಲ ನೀಡಿ, ಈ ಬಡ್ಡಿದರದ ಅಂತರದಲ್ಲಿ ಬ್ಯಾಂಕ್ ಲಾಭ ಮಾಡಿಕೊಳ್ಳುವುದು. 21ನೇ ಶತಮಾನ “ಬ್ಯಾಂಕಿಂಗ್” ಎಂಬ ಪದಕ್ಕೆ ಹೊಸ ಅರ್ಥ ಹುಟ್ಟಿಕೊಳ್ಳುತ್ತಿದ್ದ ಕಾಲ. ಬ್ಯಾಂಕಿಂಗ್ ಎಂದರೆ ಠೇವಣಿ ಇಡಲು ಬಂದವರಿಗೆ ದಾರಿತಪ್ಪಿಸಿ ಅಥವಾ ಅಧಿಕ ಬಡ್ಡಿಯ ಆಮಿಷವೊಡ್ಡಿ ಅವರ ಹಣವನ್ನು ಜೀವ ವಿಮೆ ಅಥವಾ ಮ್ಯೂಚುಯಲ್ ಫಂಡ್‍ನಲ್ಲಿ ತೊಡಗಿಸುವಂತೆ ಪುಸಲಾಯಿಸುವುದು; ತನ್ಮೂಲಕ ಬ್ಯಾಂಕ್ ಆಧಿಕಾರಿಗಳು ಇನ್ಸಂಟೀವ್ ಹಾಗೂ ವಿದೇಶ ಪ್ರವಾಸ ಗಿಟ್ಟಿಸಿಕೊಳ್ಳುವುದು. ಅಷ್ಟೇ ಅಲ್ಲ, ಸಾಲ ಕೇಳಲು ಬಂದ ಗ್ರಾಹಕರಿಗೆ ಕೂಡ, ಸಾಲ ಬೇಕೆಂದರೆ ಸಾಲದ ಸ್ವಲ್ಪ ಮೊತ್ತವನ್ನು ಜೀವ ವಿಮೆಯಲ್ಲಿ ಅಥವಾ ಮ್ಯೂಚುಯಲ್ ಫಂಡ್‍ನಲ್ಲಿ ಕಡ್ಡಾಯವಾಗಿ ಹಾಕಲೇಬೇಕೆಂದು ಒತ್ತಡ ಹೇರಿ ಇದರಿಂದಿ ಶಾಖೆಯ ಆಧಿಕಾರಿಗಳು ಹಾಗೂ ಹೆಡ್ ಆಫೀಸಿನಲ್ಲಿದ್ದ ಮೇಲಧಿಕಾರಿಗಳು ಇನ್ಸಂಟೀವ್ ಹಾಗೂ ವಿದೇಶ ಪ್ರವಾಸ ಗಿಟ್ಟಿಸಿಕೊಂಡ ಉದಾಹರಣೆಗಳು ಉಂಟು. ಇದು ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿದ್ದ ಬ್ಯಾಂಕುಗಳಲ್ಲೂ ಈ ಅವ್ಯವಹಾರ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಭಾರತ್ ಬ್ಯಾಂಕಿಗೆ ಪ್ರೊಬೇಶನರಿ ಅಧಿಕಾರಿಯಾಗಿ ಸೇರಿದವನೇ ನಮ್ಮ ಕಥಾನಾಯಕ ವಿಶಾಲ್. ಬ್ಯಾಂಕ್ ಸೇರಿದ ಮೊದಲು ಆರು ತಿಂಗಳು ವೈಯುಕ್ತಿಕ ಬ್ಯಾಂಕಿಂಗ್‍ನಲ್ಲಿ ತರಬೇತಿ ಪಡೆದು, ನಂತರ ವಿಶಾಲ್ ಕೈಗಾರಿಕೆ ಬ್ಯಾಂಕಿಂಗ್ ತರಬೇತಿ ಪಡೆಯಲು ಜಯನಗರ ಶಾಖೆಗೆ ಹೋದ.
ಜಯನಗರ ಶಾಖೆ ಸುಮಾರು 200 ಕೈಗಾರಿಕಾ ಖಾತೆಗಳನ್ನು ಹೊಂದಿತ್ತು. ಸುಮಾರು 15 ವರ್ಷಗಳ ಅನುಭವವಿದ್ದ 5 ಹಿರಿಯ ರಿಲೇಶನ್‍ಶಿಪ್ ಮ್ಯಾನೇಜರ್‍ಗಳು ತಲಾ 40 ಖಾತೆಗಳನ್ನು ನೋಡಿಕೊಳ್ಳುತ್ತಿದ್ದರು. ಗ್ರಾಹಕ ಸೇವೆಗೆ ಒಂದು ಮಾದರಿಯಂತೆ ಇದ್ದ ಶಾಖೆ ಈ ಜಯನಗರ ಶಾಖೆ. ತರಬೇತಿಗೆಂದು ಬಂದ ಹೊಸ ಅಧಿಕಾರಿಗಳು ಒಂದು ರೀತಿ ಉಚಿತವಾಗಿ ಸಿಕ್ಕ ಹಣ್ಣಿನಂತೆ. ಎಲ್ಲರೂ ಹಂಚಿಕೊಂಡು ಸಾಕಷ್ಟು ಕೆಲಸವನ್ನು ಅವರಿಂದ ಮಾಡಿಸಿಕೊಳ್ಳುತ್ತಾರೆ. ಒಂದು ರೀತಿ ಕೆಲಸ ಕಲಿಯಲು ಹೊಸ ಅಧಿಕಾರಿಗಳಿಗೆ ಇದೊಂದು ಒಳ್ಳೆಯ ಅವಕಾಶ.
ಆ ವರ್ಷ ಬ್ಯಾಂಕ್ “ರೆಡಿ ಟು ಫ್ಲೈ” ಎಂಬ ಹೊಸ ಸ್ಕೀಮ್ ತಂದರು. ಇದರಲ್ಲಿ ಯಾವ ಅಧಿಕಾರಿ ಮೂರು ತಿಂಗಳ ಅವಧಿಯಲ್ಲಿ 5 ಲಕ್ಷ ಪ್ರೀಮಿಯಮ್ ಬರುವಷ್ಟು ಜೀವ ವಿಮೆ ಪಾಲಿಸಿ ಮಾರುತ್ತಾರೋ ಅವರಿಗೆ ಬ್ಯಾಂಕಾಕ್ ಪ್ರವಾಸ ಹಾಗೂ 50 ಸಾವಿರ ರೂಪಾಯಿ ಇನ್ಸಂಟಿವ್ ಪಡೆಯಬಹುದಿತ್ತು. ಜಯನಗರದ 5 ರಿಲೇಶನ್ ಶಿಪ್ ಮ್ಯಾನೇಜರ್‍ಗಳಾದ ಮಹೇಶ್, ರವಿ, ಸಂತೋಷ್, ಅರವಿಂದ ಹಾಗೂ ಮಾಧವಿ, 2 ತಿಂಗಳಲ್ಲಿ ತಲಾ 4 ಲಕ್ಷ ಪ್ರೀಮಿಯಂನ ಗುರಿ ತಲುಪಿದ್ದರು. ಕಡೆಯ ಒಂದು ತಿಂಗಳಲ್ಲಿ ಒಬ್ಬೊಬ್ಬರೂ ೧ ಲಕ್ಷ ಪ್ರೀಮಿಯಮ್ ಗುರಿ ತಲುಪಿದರೆ ಸಾಕಾಗಿತ್ತು.
ಮದ್ಯಾಹ್ನ ಊಟದ ಸಮಯದಲ್ಲಿ ಎಲ್ಲಾ ಮಾತನಾಡುತ್ತಾ “ಈ ಒಂದು ತಿಂಗಳಿನಲ್ಲಿ ತಾವು ಮಾರುವ ಪ್ರೀಮಿಯಂನಲ್ಲಿ ವಿಶಾಲ್‌ನ ಹೆಸರಿನಲ್ಲಿ ತಲಾ ಒಂದು ಲಕ್ಷ ಕೊಟ್ಟರೆ ಅವನನ್ನೂ ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು” ಎಂದು ನಿರ್ಧರಿಸಿದರು. ಆದರೆ ಇನ್ಸಂಟೀವ್ ಹಣ ಐವತ್ತು ಸಾವಿರವನ್ನು ವಿಶಾಲ್ ಐದೂ ಜನಕ್ಕೂ ಹಂಚಬೇಕು ಎಂದು ವಿಶಾಲ್‌ಗೆ ಹೇಳಿದರು. ಸಂತೋಷದಿಂದ ಅವನು ಒಪ್ಪಿಗೆ ಸೂಚಿಸಿದ.
ನಿರ್ಧರಿಸಿದಂತೆ ಆ ತಿಂಗಳು 5 ಜನ ರಿಲೇಶನ್ಶಿಪ್ ಮ್ಯಾನೇಜರ್‍ಗಳು ತಲಾ ಎರಡು ಲಕ್ಷ ಪ್ರೀಮಿಯಂ ಮಾರಿ, ಒಬ್ಬೊಬ್ಬರೂ ಒಂದೊಂದು ಲಕ್ಷದ ವ್ಯವಹಾರ ವಿಶಾಲ್‌ನ ಹೆಸರಿಗೆ ಬರುವಂತೆ ಮಾಡಿ ಒಟ್ಟು ಐದು ಲಕ್ಷ ವಿಶಾಲ್ ಮಾರಿದ ಹಾಗೆ ಮಾಡಿ ಅವನನ್ನೂ ವಿದೇಶ ಪ್ರವಾಸಕ್ಕೆ ಅರ್ಹನಾಗಿ ಮಾಡಿದರು. ಹೀಗೆ ಆರೂ ಜನರು ವಿದೇಶ ಪ್ರಯಾಣಕ್ಕೆ ಸಜ್ಜಾದರು.
ಈ ಪ್ರೀಮಿಯಮ್ ಹಂಚಿಕೊಂಡ ವಿಷಯಗಳೇನೂ ತಿಳಿಯದ ಹೆಡ್ ಆಫೀಸಿನಲ್ಲಿದ್ದ ಜನರಲ್ ಮ್ಯಾನೇಜರ್ ಮೂರ್ತಿ, ಆ ತಿಂಗಳ ಆಧಿಕಾರಿಗಳ ಪ್ರೀಮಿಯಂ ಮಾರಾಟದ ಮೊತ್ತಗಳನ್ನು ಪರಾಂಬರಿಸುವಾಗ ಅವರ ಕಣ್ಣಿಗೆ ಬಿದ್ದದ್ದು ವಿಶಾಲ್‌ನ ಹೆಸರು. ಕೇವಲ ಆರು ತಿಂಗಳ ಹಿಂದೆ ಬ್ಯಾಂಕ್ ಸೇರಿದ ಈ ಹುಡುಗ ಒಂದೇ ತಿಂಗಳಲ್ಲಿ 5 ಲಕ್ಷ ಪ್ರೀಮಿಯಂ ಮಾರಾಟ ಮಾಡಿದ್ದಾನೆ. ತಕ್ಷಣ ತಮ್ಮ ಆಪ್ತ ಕಾರ್ಯದರ್ಶಿ ಪ್ರಸಾದ್‌ನನ್ನು ಕರೆಸಿ “ಸಂಜೆ 4ಕ್ಕೆ ನನಗೆ ಆ ಶಾಖೆಯ ಐದೂ ರಿಲೇಶನ್‍ಶಿಪ್ ಮ್ಯಾನೇಜರ್‍ಗಳು ಹಾಗೂ ವಿಶಾಲ್‌ನನ್ನು ತಮ್ಮ ಕ್ಯಾಬಿನ್‍ಗೆ ಚಹಾ ಕುಡಿಯಲು ಬರಹೇಳಿ” ಎಂದರು. ಕ್ಯಾಬಿನ್ನಿನಲ್ಲಿ ಒಂದು ಕಡೆ ಐದು ಸಾಧಾರಣ ಕುರ್ಚಿಗಳನ್ನು ಮತ್ತೊಂದೆಡೆ ಒಂದು ದೊಡ್ಡ ಕುರ್ಚಿಯನ್ನು ಹಾಕಲು ಹೇಳಿದರು.
ಸಂಜೆ ನಾಲ್ಕು ಗಂಟೆಗೆ ಎಲ್ಲಾ ಸಿದ್ಧವಾಗಿತ್ತು. ಒಳಗೆ ಬಂದ ಆರೂ ಜನರನ್ನು ಜನರಲ್ ಮ್ಯಾನೇಜರ್ ಮೂರ್ತಿ ಐದು ಕುರ್ಚಿಗಳಿದ್ದ ಜಾಗ ತೋರಿಸಿ ಕುಳಿತುಕೊಳ್ಳಲು ಹೇಳಿದರು. ಎಲ್ಲಾ ಸೀನಿಯರ್‌ಗಳು ಕುಳಿತುಕೊಂಡಾಗ, ಕುರ್ಚಿ ಇಲ್ಲದೆ ನಿಂತದ್ದು ಒಬ್ಬ ವ್ಯಕ್ತಿ ವಿಶಾಲ್. ತಕ್ಷಣ ಜನರಲ್ ಮ್ಯಾನೇಜರ್ ಅವನ ಕಡೆ ನೋಡುತ್ತಾ, “ ಓ ಹಾಗಾದರೆ ನೀನೇನ, ವಿಶಾಲ್, ಇಲ್ಲಿ ಕುಳಿತುಕೋ” ಎಂದು ತಮ್ಮ ಪಕ್ಕದಲ್ಲಿದ್ದ ದೊಡ್ಡ ಕುರ್ಚಿಯನ್ನು ತೋರಿಸಿದರು. ಮಿಕ್ಕ ಐದೂ ಜನ ಏನು ನಡೆಯುತ್ತಿದೆ ಎಂಬುದು ಅರ್ಥವಾಗದೆ ಮಂಕಾಗಿ ನೋಡುತ್ತಿದ್ದರು. ತಕ್ಷಣ ಮೂರ್ತಿಯವರು ಐದೂ ಜನರನ್ನು ಉದ್ದೇಶಿಸಿ “ನಾಚಿಕೆ ಆಗಬೇಕು ನಿಮಗೆ, ಹದಿನೈದು ವರ್ಷದ ಅನುಭವ ಪಡೆದು ಕೇವಲ ತಲಾ ಒಂದೊಂದು ಲಕ್ಷ ಪ್ರೀಮಿಯಂ ಮಾರಾಟ ಮಾಡಿದ್ದೀರಾ, ಈ ವಿಶಾಲ್‌ನನ್ನು ನೋಡಿ, ಬ್ಯಾಂಕಿಗೆ ಸೇರಿ ಆರು ತಿಂಗಳಾಗಿದೆ, ಆಗಲೇ ಒಂದೇ ತಿಂಗಳಲ್ಲಿ ಐದು ಲಕ್ಷ ಪ್ರೀಮಿಯಂ ಮಾರಾಟ ಮಾಡಿದ್ದಾನೆ” ಎಂದರು. ಅರವಿಂದ, ಮೂರ್ತಿಯವರಿಗೆ ಆ ಪ್ರೀಮಿಯಂ ಎಲ್ಲಾ ತಾವೇ ಮಾರಾಟ ಮಾಡಿದ್ದು, ಅವನಿಗೆ ಕೊಟ್ಟೆವು ಎಂದು ಹೇಳಲು ಹೋದ, ತಕ್ಷಣ ಮೂರ್ತಿಯವರು ಅವನನ್ನು ತಡೆದು “ನಾನು ಇವತ್ತು ನಿಮ್ಮ ಯಾರ ಮಾತು ಕೇಳೋಲ್ಲ, ಇವತ್ತು ಮಾತನಾಡೋದೇನೇ ಇದ್ದರೂ ಅದು ನಮ್ಮ ವಿಶಾಲ್ ಮಾತ್ರ” ಎಂದರು. “ಹೇಳು ವಿಶಾಲ್, ನಿನ್ನ ಈ ಸಾಧನೆಯ ಗುಟ್ಟು” ಎಂದರು.
ವಿಶಾಲ್ ಮಾತನಾಡಲು ಪ್ರಾರಂಭಿಸಿದ; “ಸಾರ್ ನಾನು ಓದಿರುವುದು ಮಾರ್ಕೆಟಿಂಗ್‍ನಲ್ಲಿ ಎಂ ಬಿ ಎ. ಹಾಗಾಗಿ ಗ್ರಾಹಕರಿಗೆ ಈ ಜೀವವಿಮೆಯ ಉಪಯೋಗಗಳ ಬಗ್ಗೆ ಹೇಗೆ ಮನವರಿಕೆ ಮಾಡಬೇಕೆಂಬುದನ್ನು ಕಲಿತಿದ್ದೇನೆ. ವಿದೇಶ ಪ್ರವಾಸಕ್ಕಲ್ಲವಾದರೂ ನನ್ನ ಓದಿನ ಉಪಯೋಗವನ್ನು ಪರೀಕ್ಷಿಸಲು ನಾನು ಈ ಐದು ಲಕ್ಷ ಗುರಿಯನ್ನು ಮಾಡಲೇಬೇಕೆಂದು ನಿರ್ಧರಿಸಿದೆ. ಅದರ ಪರಿಣಾಮವೇ ಇಂದು ನಾನು ನಿಮ್ಮಲ್ಲಿಗೆ ಬಂದು ಕುಳಿತು ನಿಮ್ಮ ಪ್ರಶಂಸೆಗೆ ಪಾತ್ರನಾಗಿರುವುದು” ಎಂದು ಹೇಳಿ, ಕೊಟ್ಟಿದ್ದ ಟೀ ಹೀರಲು ಪ್ರಾರಂಭಿಸಿದ.
ಐದೂ ಜನ ಹಿರಿಯ ರಿಲೇಶನ್‌ಶಿಪ್ ಮ್ಯಾನೇಜರ್‌ಗಳೂ ಟೀ ಮುಟ್ಟದೇ, ಸುಳ್ಳನ್ನು ನಿಜದ ತಲೆಯ ಮೇಲೆ ಹೊಡೆಯುವ ಹಾಗೆ ಮಾತನಾಡುತ್ತಿದ್ದ ವಿಶಾಲ್‌ನ ಮಖವನ್ನೇ ನೋಡುತ್ತಾ ಕುಳಿತಿದ್ದರು. ಜನರಲ್ ಮ್ಯಾನೇಜರ್ ಮೂರ್ತಿಯವರು ಗಮನಿಸಿ, “ನೀವೂ ಟೀ ತೆಗೆದುಕೊಳ್ಳಿ” ಎಂದಾಗ ಕೈಗೆ ಟೀ ಕಪ್ ತೆಗೆದುಕೊಂಡರು. ಮೂರ್ತಿ ಮತ್ತು ವಿಶಾಲ್‌ನ ಮಾತುಕತೆ ಮುಂದುವರೆದಿತ್ತು. ಈ ಐವರಿಗೆ ಪಾಯಸದಂತೆ ಇದ್ದ ಟೀ, ಶುಗರ್ ಲೆಸ್ ಎಂಬಂತೆ ಭಾಸವಾಗುತ್ತಿತ್ತು. ಸರಿ “ಇನ್ನು ನೀವು ಹೊರಡಬಹುದು”. ವಿಶಾಲ್ ಕಡೆ ತಿರುಗಿ, “ವಿಶಾಲ್, ಈ ತಿಂಗಳು ಬ್ಯಾಂಕಿನ ಚೇರ್‍ಮನ್ ಬೆಂಗಳೂರಿಗೆ ಬರುತ್ತಿದ್ದಾರೆ. ಅವರೊಂದಿಗೆ ಡಿನ್ನರ್‌ಗೆ ಹೋಗಲು ನಿನ್ನನ್ನು ಆಯ್ಕೆ ಮಾಡಿದ್ದೇನೆ” ಎಂದು ಹೇಳಿದರು. ಐದೂ ಜನ ರಿಲೇಶನ್ಶಿಪ್ ಮ್ಯಾನೇಜರ್‌ಗಳು ಏನೂ ಮಾತನಾಡಲಿಲ್ಲ.
ಕ್ಯಾಬಿನ್ನಿಂದ ಆಚೆ ಬಂದ ತಕ್ಷಣ, ಐದೂ ಜನ ವಿಶಾಲ್‌ನನ್ನು ಬೈಯ್ಯಲು ಪ್ರಾರಂಭಿಸಿದರು. “ನಿಜವಾದ ವಿಷಯವನ್ನು ಏಕೆ ಮುಚ್ಚಿಟ್ಟಿದ್ದು” ಎಂದು ಕೇಳಿದರು. ಅದಕ್ಕೆ ವಿಶಾಲ್, “ನೀವು ಈಗ ನನಗೆ ಏನೂ ಮಾಡುವುದಕ್ಕಾಗೋಲ್ಲ. ಈ ಸಾಧನೆ ಈಗ ಎಲ್ಲರೂ ನನ್ನದೇ ಎಂದು ತಿಳಿದುಕೊಂಡಿದ್ದಾರೆ, ನಾನು ನಿಮಗೆ ಇನ್ಸಂಟಿವ್ ಹಣ ಕೂಡಾ ಕೊಡಲ್ಲ. ಹೆಚ್ಚು ಬೈದರೆ ಜನರಲ್ ಮ್ಯಾನೇಜರ್‌ಗೆ ಕಂಪ್ಲೇಂಟ್ ಕೊಡುತ್ತೇನೆ” ಎಂದು ಜನರಲ್ ಮ್ಯಾನೇಜರ್ ಕ್ಯಾಬಿನ್ ಕಡೆ ಹೊರಟ. ಹೊರಗಡೆ ನಡೆದದ್ದನ್ನೆಲ್ಲಾ ಗಮನಿಸಿದ ಆಪ್ತ ಕಾರ್ಯದರ್ಶಿ ಪ್ರಸಾದ್, ವಿಶಾಲ್‌ನನ್ನು ಒಳಗೆ ಹೋಗಲು ಬಿಡಲಿಲ್ಲ.
ಎಲ್ಲರೂ ಅಲ್ಲಿಂದ ಹೊರಟರು. ಐದು ಹಿರಿಯರಲ್ಲಿ, ಮ್ಯಾನೇಜರ್ ಅರವಿಂದ, ಪ್ರಸಾದ್‌ಗೆ ಆಪ್ತ ಗೆಳೆಯ. ಪ್ರಸಾದ್ ಅರವಿಂದನಿಗೆ ಕುಳಿತುಕೊಳ್ಳಲು ಹೇಳಿ, ಶಾಖೆಯಲ್ಲಿ ಹಾಗೂ ಜಿ. ಎಂ ಕ್ಯಾಬಿನ್ನಿನಲ್ಲಿ ನಡೆದ ಸಂಗತಿಗಳನ್ನು ತಿಳಿದುಕೊಂಡ. “ಇರಲಿ ನನಗೆ ಆಗುವಷ್ಟು ಸಹಾಯ ನಾನು ಮಾಡಲು ಪ್ರಯತ್ನಿಸುತ್ತೇನೆ” ಎಂದ ಪ್ರಸಾದ್ .
ಪ್ರಸಾದ್ ಜನರಲ್ ಮ್ಯಾನೇಜರ್ ಹತ್ತಿರ ಹೋಗಿ ಅರವಿಂದನು ಹೇಳಿದ ವಿಷಯವನ್ನು ಹಾಗೂ ಕ್ಯಾಬಿನ್ ಆಚೆ ಆದ ಮಾತುಕತೆಗಳನ್ನು ಮೂರ್ತಿಯವರಿಗೆ ತಿಳಿಸಿದ. ಮೂರ್ತಿಯವರಿಗೆ ತಮ್ಮ ಮೇಲೆ ತಮಗೇ ಅಸೂಯೆ ಬಂದಿತು. ಸರಿ “ಇದಕ್ಕೆ ಪರಿಹಾರ ಏನು” ಎಂದರು. ಅದಕ್ಕೆ ಪ್ರಸಾದ್ “ಸಾರ್ ನೀವು ಈಗ ವಿಶಾಲ್‌ಗೆ ಫೋನ್ ಮಾಡಿ, ಚೇರ್‍ಮನ್ ನಿನ್ನ ಜೊತೆಗೆ ಡಿನ್ನರ್ ಮಾಡುವಾಗ 5 ಲಕ್ಷ ಪ್ರೀಮಿಯಂ ಬಿಸಿನೆಸ್ ಕೊಟ್ಟ ಎಲ್ಲಾ ಗ್ರಾಹಕರನ್ನು ಭೇಟಿ ಮಾಡಲು ಇಷ್ಟಪಡುತ್ತಿದ್ದಾರೆ. ಅವರೆಲ್ಲರನ್ನೂ ಕರೆತರುವ ಜವಾಬ್ಧಾರಿ ನಿನ್ನದೇ ಎಂದು ಹೇಳಿ” ಎಂದ. ಜನರಲ್ ಮ್ಯಾನೇಜರ್ ಹಾಗೆ ಮಾಡಿದರು. ವಿಶಾಲ್‌ಗೆ ಭೂಕಂಪವಾದಂತಾಯಿತು. ನಾನು ಹೀಗೆ ಮಾಡುತ್ತಿದ್ದೇನೆ ಎಂದು ಪ್ರಸಾದ್ ಅರವಿಂದನಿಗೆ ಮುಂಚಿತವಾಗಿಯೇ ಹೇಳಿದ್ದ. ಗ್ರಾಹಕರನ್ನು ಕರೆಯುವುದಿರಲಿ, ಅವರ ಹೆಸರುಗಳೂ ಸಹ ವಿಶಾಲ್‌ಗೆ ಗೊತ್ತಿರಲಿಲ್ಲ.
ವಿಶಾಲ್ ತನ್ನ ಶಾಖಾ ವ್ಯವಸ್ಥಾಪಕರಾದ ಭಟ್ಟರಿಗೆ ಫೋನ್ ಮಾಡಿ “ಗ್ರಾಹಕರನ್ನು ಕರೆತರಲು ಸಹಾಯ ಮಾಡಬಹುದೇ” ಎಂದು ಕೇಳಿದ. “ಗ್ರಾಹಕರು ರಿಲೇಶನ್‌ಶಿಪ್ ಮ್ಯಾನೇಜರ್‌ಗಳ ಆಹ್ವಾನಕ್ಕೆಮಾತ್ರ ಬ್ಯಾಂಕಿನ ಕಾರ್ಯಕ್ರಮಗಳಿಗೆ ಬರಲು ಒಪ್ಪುತ್ತಾರೆ. ಅವರನ್ನೇ ವಿಚಾರಿಸು” ಎಂದು ಹೇಳಿದರು ಭಟ್ಟರು. ವಿಶಾಲ್, ಬೇರೆ ದಾರಿ ತೋರದೇ ನಡೆದ ವಿಷಯವನ್ನೇಲ್ಲಾ ಭಟ್ಟರಿಗೆ ತಿಳಿಸಿದ. ಭಟ್ಟರು, ಜನರಲ್ ಮ್ಯಾನೇಜರ್ ಆಪ್ತ ಕಾರ್ಯದರ್ಶಿ ಪ್ರಸಾದ್ ನನಗೆ ಪರಿಚಯದ ಹುಡುಗ, ಅವನಿಗೆ ನಾನು ತಿಳಿಸುತ್ತೇನೆ. ನೀನು ನೇರ ಹೋಗಿ ಪ್ರಸಾದ್‌ನನ್ನು ಭೇಟಿ ಮಾಡು ಎಂದರು. ಭಟ್ಟರು ಪ್ರಸಾದ್‌ಗೆ ಫೋನ್ ಮಾಡಿದರು. ತಕ್ಷಣ, ಪ್ರಸಾದ್ ಅಲ್ಲೇ ಹೆಡ್ ಆಫೀಸ್ ಕಾಂಪೌಡಿನಲ್ಲಿ ಇದ್ದ ಇತರ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಿಗೂ ಬರಲು ಹೇಳಿದ.
ಜನರಲ್ ಮ್ಯಾನೇಜರ್ ಮೂರ್ತಿ ಪ್ರಸಾದ್‌ನನ್ನು ಕರೆದು, ಆರು ಕುರ್ಚಿಗಳಲ್ಲಿ ಆ ದೊಡ್ಡ ಕುರ್ಚಿ ತಗೆದು ಆಚೆ ಇಡಲು ಹೇಳಿದರು. ಐದು ರಿಲೇಶನ್‌ಶಿಪ್ ಮ್ಯಾನೇಜರ್ ಮತ್ತು ವಿಶಾಲ್ ಕ್ಯಾಬಿನ್ ಒಳಗೆ ಬಂದ ಕೂಡಲೇ, ಜನರಲ್ ಮ್ಯಾನೇಜರ್ ಐದು ರಿಲೇಶನ್‌ಶಿಪ್ ಮ್ಯಾನೇಜರ್‌ಗಳಿಗೆ ಕ್ಷಮೆ ಯಾಚಿಸಿದರು. ಅವರಿಗೆ ಕುಳಿತುಕೊಳ್ಳಲು ಹೇಳಿದರು. ವಿಶಾಲ್ ಅಳುತ್ತಾ ತಲೆ ತಗ್ಗಿಸಿ ಒಂದು ಮೂಲೆಯಲ್ಲಿ ನಿಂತಿದ್ದ. “ಈಗ ಸ್ವಲ್ಪ ಹೊತ್ತಿಗೆ ನನ್ನ ಕ್ಯಾಬಿನ್ನಿನಲ್ಲಿ ನಡೆದ ಸಂಗತಿಗಳನ್ನು ಮರೆತು, ವಿಶಾಲ್‌ನನ್ನು ನಿಮ್ಮ ತಮ್ಮನೆಂದುಕೊಂಡು ಕ್ಷಮಿಸಿಬಿಡಿ. ನಾನು ವಿಶಾಲ್‌ನನ್ನು ಜಯನಗರ ಶಾಖೆಯಿಂದ ತೆಗೆದು ಬಳ್ಳಾರಿಗೆ ಟ್ರಾನ್ಸಫರ್ ಮಾಡಿದ್ದೇನೆ. ಮೂರ್ತಿಯವರ ಎದುರಿಗೆ ವಿಶಾಲ್ ಎಲ್ಲರ ಕ್ಷಮೆ ಯಾಚಿಸಿದ.
ಮೂರ್ತಿ ಪ್ರಸಾದ್‌ನನ್ನು ಕರೆದು “ಈ ವಿಷಯ ಹೊರಗಡೇ ಹೋಗೋಲ್ಲ ಎಂಬ ನಂಬಿಕೆ ನನಗೆ ಇದೆ. ಆದರೆ ಕಥೆಗಾರನಾದ ನಿನಗೆ ಈ ಅಪಾತ್ರ ದಾನದ ವಿಷಯವು ಕಥೆಗೆ ಒಳ್ಳೆಯ ವಸ್ತು. ಬೇಕಾದರೆ ಹೆಸರುಗಳನ್ನು ಬದಲಾಯಿಸಿ ನೀ ಕಥೆ ಬರೆದುಕೋ” ಎಂದರು. ಎಲ್ಲರೂ ಜೋರಾಗಿ ನಕ್ಕರು. ವಿಶಾಲ್ ಒಬ್ಬ ಬಿಟ್ಟು.
ಎಲ್ಲಾ ಹೊರಹೋದ ಮೇಲೆ “ವಿಶಾಲ್‌ನ ಮೇಲೆ ಅಷ್ಟು ದಯೆಯನ್ನು ತೋರಿದ್ದು ಏಕೆ” ಎಂದು ಪ್ರಸಾದ್ ಮೂರ್ತಿಯವರನ್ನು ಕೇಳಿದ. “ನಾನೂ ಒಬ್ಬ ಪ್ರೊಬೇಷನರಿ ಅಧಿಕಾರಿಯಾಗಿಯೇ ಬ್ಯಾಂಕಿಗೆ ಸೇರಿದ್ದು. ಈ ವಿಶಾಲ್‌ನ ರೀತಿ ಸಾಕಷ್ಟು ಅಧಿಕಾರಿಗಳು ಬೇರೆಯವರ ದುಡಿಮೆಯ ಫಲವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆದರೆ ತಪ್ಪನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ನೀಡುವುದು ನಮ್ಮ ಧರ್ಮ” ಎಂದರು. “ಅದಲ್ಲದೆ ಪ್ರಸಾದ್, ನಿನ್ನ ಕಥೆಯಲ್ಲಿ ನಾನು ಹೀರೋ ಆಗಬೇಕೆಂಬ ಆಸೆ ನನಗೆ” ಎಂದರು ಜನರಲ್ ಮ್ಯಾನೇಜರ್ ಮೂರ್ತಿ.
ಕ್ಯಾಬಿನ್‌ನಿಂದ ಆಚೆ ಬಂದ ಪ್ರಸಾದ್ ನಡೆದದ್ದನ್ನು ಮರೆಯುವ ಮುಂಚೆ ತನ್ನ ಕಂಪ್ಯೂಟರ್‍ನಲ್ಲಿ ಕಥೆ ಟೈಪ್ ಮಾಡಲು ಪ್ರಾರಂಭಿಸಿದ