ಗುರುರಾಜ
ಶಾಸ್ತ್ರಿ
ಭಾಷೆ ಮೇಲಿನ ಪ್ರೀತಿ - ಅಸೋಸಿಯೇಶನ್‌ ಹುದ್ದೆ
10-08-2021
ಇಸವಿ 2006 - 2007, ನಾನು ನಮ್ಮ ಬ್ಯಾಂಕಿನ ಸ್ಥಳೀಯ ಪ್ರಧಾನ ಕಛೇರಿಯಲ್ಲಿನ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಕ್ಲರಿಕಲ್‌ ಸಿಬ್ಭಂದಿಯ ದೊಡ್ಡ ಮುಷ್ಕರವೇ ನಡೆದಿತ್ತು. ದಿನಾ ಮದ್ಯಾಹ್ನ ಊಟದ ಸಮಯಕ್ಕೆ ಸ್ಥಳೀಯ ಪ್ರಧಾನ ಕಛೇರಿಯ ಕಾಂಪೌಂಡಿನಲ್ಲಿದ್ದ ಮತ್ತು ಸುತ್ತಮುತ್ತ ಇದ್ದ ಇತರ ನಮ್ಮ ಬ್ಯಾಂಕಿನ ಶಾಖೆಗಳಿಂದ ಕ್ಲರಿಕಲ್‌ ಸಿಬ್ಬಂದಿ ಬಂದು ಮ್ಯಾನೇಜಮೆಂಟ್‌ ವಿರುದ್ದ ಸುಮಾರು 20 ನಿಮಷಗಳ ಕಾಲ ಘೋಷಣೆಗಳನ್ನು ಕೂಗಿ ನಂತರ ತಮ್ಮ ಶಾಖೆಗಳಿಗೆ ಹಿಂದಿರುಗುತ್ತಿದ್ದರು. ಇದರಲ್ಲಿ ಅಧಿಕಾರಿಗಳ ಸಂಘ ಪಾಲ್ಗೊಂಡಿರಲಿಲ್ಲ ಆದರೆ ಅಂತರಾಳದಲ್ಲಿ ಅವರ ಬೆಂಬಲ ಕ್ಲರಿಕಲ್‌ ಸಿಬ್ಬಂದಿಗೆ ಇತ್ತು. ಈ ಘೋಷಣೆಗಳು ಯಾವುದೇ ಫಲ ನೀಡದಿದ್ದ ಕಾರಣ ಸ್ಟಾಫ್‌ ಯೂನಿಯನ್‌ ಒಂದು ಪೂರ್ಣ ದಿನ ಮುಷ್ಕರಕ್ಕೆ ಕರೆ ನೀಡಿತ್ತು. ಈ ಮುಷ್ಕರ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಅಧಿಕಾರಿಗಳ ಸಂಘ ತಾವು ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ ಆದರೆ ನಿಮಗೆ ನಮ್ಮ ಬಾಹ್ಯ ಬೆಂಬಲವಿರುತ್ತದೆ ಎಂದು ಹೇಳಿತ್ತು. ಅಧಿಕಾರಿಗಳ ಸಂಘದ ಈ ನಿರ್ಧಾರವನ್ನು ಉಪಯೋಗಿಸಿಕೊಂಡ ಬ್ಯಾಂಕ್‌ ಆಡಳಿತ ಮಂಡಲಿ ಒಂದು ಹೊಸ ಯೋಜನೆಗೆ ಕೈ ಹಾಕಿತ್ತು. ಮುಷ್ಕರದ ದಿನ ಬೆಂಗಳೂರಿನಲ್ಲಿ ಮುಖ್ಯವಾಗಿ ಕೆಲವೇ ಕೆಲವು ಶಾಖೆಗಳನ್ನು ತೆರೆದು ಬೇರೆ ಶಾಖೆಗಳ ಅಧಿಕಾರಿಗಳು ತಮ್ಮ ಶಾಖೆಗೆ ಹತ್ತಿರದ ನಿಗದಿತ ಶಾಖೆಗೆ ಹೋಗಿ ಗ್ರಾಹಕ ಸೇವೆ ಮಾಡಬೇಕೆಂದು ನಿರ್ಧರಿಸಿದರು. ಈ ನಿರ್ಧಾರವನ್ನು ಹಾಗೂ ಅಂದು ತೆರೆಯುವ ಶಾಖೆಗಳ ಹೆಸರನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ನಿರ್ಧರಿಸಿದರು. ಆಂಗ್ಲ ಭಾಷೆಯಲ್ಲಿ ಏನು ಪ್ರಕಟಿಸಬೇಕೆಂದು ನಿರ್ಧರಿಸಲಾಯಿತು ಮತ್ತು ಸಂದೇಶ ತಯಾರಾಯಿತು. ಆದರೆ ಅದನ್ನು ಕನಡಕ್ಕೆ ಅನುವಾದ ಮಾಡಲು ನನಗೆ ಹೇಳಿದರು. ನಾನು ಅನುವಾದ ಮಾಡಿದೆ. ಎಲ್ಲರೂ ಅನುವಾದವನ್ನು ಇಷ್ಟಪಟ್ಟರು. ಆದರೆ ಒಬ್ಬರು ಅಧಿಕಾರಿ ಮಾತ್ರ ಆ ಅನುವಾದದಲ್ಲಿ ಹಲವು ಬದಲಾವಣೆ ಮಾಡಿಸಿದರು. ಆ ಬದಲಾದ ಅನುವಾದ ಕೆಟ್ಟದಾಗಿತ್ತು. ನಂತರ ಆ ಅಧಿಕಾರಿ ಮತ್ತು ನಾನು ಅಧಿಕಾರಿಗಳ ಅಸೋಸಿಯೇಷನ್‌ ಕಛೇರಿಗೆ ಹೋದೆವು. ಅಲ್ಲಿ ರವೀಂದ್ರರವರು ಕುಳಿತಿದ್ದರು. ಮೊದಲನೇ ಸಲ ಅಂದರ 8 ವರ್ಷಕ್ಕೆ ಮುಂಚೆ ರಾಜ್ಯೋತ್ಸವದಲ್ಲಿ ರವೀಂದ್ರರನ್ನು ನೋಡಿದ್ದ ನಾನು ಅಂದೇ ಮತ್ತೇ ಅವರನ್ನು ಭೇಟಿಯಾಗಿದ್ದು. ಬದಲಾದ ಕನ್ನಡ ಅನುವಾದವನ್ನು ರವೀಂದ್ರರವರಿಗೆ ತೋರಿಸಿ ಅದನ್ನು ಅನುವಾದ ಮಾಡಿದ ನನ್ನನ್ನು ಪರಿಚಯ ಮಾಡಿದರು. ಅನುವಾದ ಕೆಟ್ಟದಾಗಿದೆ ಎಂಬುದು ರವೀಂದ್ರರವರ ಪ್ರತಿಕ್ರಿಯೆಯಲ್ಲಿ ತಿಳಿಯಿತು. ಆದರೆ ಅವರು ಕೋಪಗೊಂಡು ನಾವು ಈ ಮುಷ್ಕರಕ್ಕೆ ಬೆಂಬಲವಾಗಿ ನಿಂತಿದ್ದೇವೆ ಹಾಗಾಗಿ ನಾನು ಅನುವಾದ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನಿಮಗೆ ಈ ರೀತಿ ನನ್ನ ಕೈಲಿ ಅನುವಾದ ಮಾಡಿಸಲು ಹೇಗೆ ಮನಸ್ಸು ಬಂತು ಎಂದು ಸ್ವಲ್ಪ ಜೋರಾಗಿ ಮಾತನಾಡಿದರು. ಬೇರೆ ಸಂದರ್ಭಗಳಲ್ಲಿ ಕನ್ನಡ ಅನುವಾದಕ್ಕಾಗಿ ರವೀಂದ್ರರವರ ಸಹಾಯ ನಮಗೆ ದೊರೆಯುತ್ತಿತ್ತು. ನಾಳೆ ದಿನ ಪತ್ರಿಕೆಯಲ್ಲಿ ಈ ಕೆಟ್ಟದಾಗಿರುವ ಕನ್ನಡದ ಅನುವಾದ ನನಗೆ ಹಾಕಿಸಲು ಇಷ್ಟವಿಲ್ಲ, ಸಾಧ್ಯವಾದರೆ ಸಹಾಯ ಮಾಡು ಎಂದು ನನ್ನ ಜೊತೆ ಬಂದಿದ್ದ ಅಧಿಕಾರಿ ಹೇಳಿದರು. ಭಾಷೆ ಮೇಲಿನ ಪ್ರೀತಿ ಮತ್ತು ಅಸೋಸಿಯೇಶನ್‌ ನಲ್ಲಿನ ಅವರ ಹುದ್ದೆಯ ನಡುವೆ ಆಗುತ್ತಿದ್ದ ಗೊಂದಲವನ್ನು ಗಮನಿಸಬಹುದಾಗಿತ್ತು. ಸರಿ, ಇಲ್ಲೇ ಇರಲಿ, ಸಾಧ್ಯವಾದರೆ ಅನುವಾದ ಮಾಡುತ್ತೇನೆಂದು ಕೋಪದಿಂದ ರವೀಂದ್ರ ನುಡಿದರು. ನಂತರ ನಾನು ಮತ್ತು ಆ ಅಧಿಕಾರಿ ಕಾಫಿ ಕುಡಿಯಲು ಹೋಟಲ್‌ಗೆ ತೆರಳಿದೆವು. ಕಾಫಿ ಕುಡಿಯುತ್ತಿದ್ದಾಗ ಆ ಅಧಿಕಾರಿ, ನೋಡು ಗುರು, ನೀನು ಅನುವಾದ ಮಾಡಿದ್ದು ಸುಮಾರಾಗಿ ಸರಿಯಾಗಿಯೇ ಇತ್ತು. ಆದರೆ ನಾನು ಅನುವಾದ ಕೆಟ್ಟದಾಗಿ ಕಾಣುವಂತೆ ಬದಲಾಯಿಸಿದೆ. ಮುಷ್ಕರ ಎದುರಿಸಲು ನಾವು ತೆಗೆದುಕೊಂಡಿರುವ ನಿರ್ಧಾರ ಗೌಪ್ಯವೇನಲ್ಲ ಆದರೆ ರವೀಂದ್ರರವರು ಅದನ್ನು ಸರಿಯಾದ ಪದಗಳನ್ನು ಹಾಕಿ ಅನುವಾದ ಮಾಡಿದಾಗ ನಿನಗೇ ತಿಳಿಯುತ್ತದೆ ಯಾವುದು ಸರಿ ಯಾವುದು ತಪ್ಪೆಂದು. ನೀನು ಮೊದಲು ಮಾಡಿದ ಅನುವಾದವನ್ನೇ ನಾವು ತೋರಿಸಿದ್ದರೆ ಅವರು ಬದಲಾಯಿಸುವ ಗೋಜಿಗೆ ಹೋಗುತ್ತಿರಲಿಲ್ಲ ಆಗ ದಿನಪತ್ರಿಕೆಗೆ ಬೇಕಾದ ಗುಣಮಟ್ಟದ ಅನುವಾದ ಸಿಗುತ್ತಿರಲಿಲ್ಲ ಎಂದರು. ಆದರೆ ರವೀಂದ್ರರವರ ಕೋಪದ ಬಗ್ಗೆ ನಾನು ಕೇಳಿದಾಗ, ಭಾಷೆಯ ಮೇಲಿನ ಪ್ರೀತಿ, ಮತ್ತು ಅಸೋಸಿಯೇಶನ್‌ ಹುದ್ದೆ ಮದ್ಯೆ ಗೊಂದಲವಾದಾಗ ಭಾಷೆಯ ಮೇಲಿನ ಪ್ರೀತಿಯೇ ಗೆಲ್ಲುವುದು ಎಂದು ಅಧಿಕಾರಿ ತಿಳಿಸಿದರು. ಸಂಜೆ ಮತ್ತೆ ಹೋಗಿ ಮಾತನಾಡಿಸುವ, ಅನುವಾದ ತಯಾರಾಗಿರುತ್ತೆ ಎಂದರು ಅಧಿಕಾರಿ. ನಾನು ಆ ಅನುವಾದ ಹೇಗಿರಬಹುದೆಂಬ ಕುತೂಹಲದಲ್ಲೇ ಊಟದ ನಂತರದ ಸಮಯ ಕಳೆದೆ. ವಿಧಿಯ ಆಟವೇ ಬೇರೆ, ಸಂಜೆ 4 ಗಂಟೆಗೆ ಯೂನಿಯನ್ ಒಂದು ದಿನದ ಮುಷ್ಕರ ವಾಪಸ್‌ ಪಡೆದಿರುವುದಾಗಿ ಘೋಷಿಸಿತ್ತು. ರವೀಂದ್ರರವರು ಗೊಂದಲದಿಂದ ಪಾರಾಗಿದ್ದರು. ಆದರೆ ಕುತೂಹಲದಿಂದ ಕಾಯುತ್ತಿದ್ದ ನನಗೆ ಅನುವಾದ ಸಿಗಲೇ ಇಲ್ಲ.
ಅನಿಸಿಕೆಗಳು