ಇಂದು ಬೆಳಿಗ್ಗೆ ೮ ಗಂಟೆಗೆ ಗೆಳೆಯನ ಫೋನ್ ಬಂತು; ಅವನ ತಂದೆ ಮರಣಹೊಂದಿದರೆಂದು ಅಳುತ್ತಾ ಹೇಳಿದ, ಎಲ್ಲಾ ಗೆಳೆಯರಿಗೂ ತಿಳಿಸು ಎಂದ. ಗೆಳೆಯರೆಲ್ಲಾ ಅವನ ಮನೆಗೆ ಹೋದೆವು, ಗೆಳೆಯನು ಸೇರಿ ಒಟ್ಟು ಅವನ ಅಣ್ಣ ತಮ್ಮಂದಿರು ನಾಲ್ಕು. ಆ ನಾಲ್ಕು ಜನರ ಹೆಂಡತಿಯರು ಮತ್ತು ಮಕ್ಕಳು. ಇಷ್ಟೆಲ್ಲ ಜನರ ಸಮ್ಮುಖದಲ್ಲಿ ಗೆಳೆಯನ ತಂದೆ ತಮ್ಮ 92ನೇ ವಯಸ್ಸಿನಲ್ಲಿ ಮರಣಹೊಂದಿದ್ದರು ಹೃದಯಾಘಾತದಿಂದ. ಗೆಳೆಯನ ತಾಯಿ ಪತಿಯ ಶವದ ಪಕ್ಕದಲ್ಲೇ ಕುಳಿತಿದ್ದರು.
ನಮಗೇನು ತೋಚುತ್ತಿಲ್ಲ ಇದೆಲ್ಲಾ ನಮಗೆ ಹೊಸದು ಎಂದು ಅಳುತ್ತಾ ಗೆಳೆಯ ಮತ್ತು ಅವನ ಅಣ್ಣ ತಮ್ಮಂದಿರು ನಮ್ಮನ್ನೆಲ್ಲಾ ವಿಚಾರಿಸಿಕೊಂಡರು. ನನ್ನ ಮನಸ್ಸು ಆಗ ನನ್ನ ಜೀವನದ ಆ ಕರಾಳ ರಾತ್ರಿಯನ್ನು ನೆನಪಿಸಿತು.
ಇಸವಿ 2011, ಆಗ ನಾನು ಚೆನ್ನೈನಲ್ಲಿ ಇದ್ದೆ. ಅಮ್ಮ ಸತ್ತು 8 ವರ್ಷವಾಗಿತ್ತು ಮತ್ತು ಅಪ್ಪ ಸ್ವಲ್ಪ ದಿನ ನನ್ನೊಡನೆ ಚೆನ್ನೈನಲ್ಲಿ ಇರಲು ಇಷ್ಟಪಟ್ಟರು. ತಮಗೆ ಒಂದು ನೂರು ಪೇಜಿನ ನೋಟ್ಬುಕ್ ಬೇಕು, ತಾವು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಅದರಲ್ಲಿ ಬರೆಯಲು ಇಚ್ಛಿಸುತ್ತೇನೆ ಎಂದು. ನಾನು ತಂದು ಕೊಟ್ಟೆ. ನಾನು ಮನೆಯಲ್ಲಿರುವಾಗಲೆಲ್ಲಾ ನನ್ನೊಂದಿಗೆ ಮಾತನಾಡಿಕೊಂಡು ಇರುತ್ತಿದ್ದರು, ನಾನು ಆಫೀಸಿಗೆ ಹೋದಾಗ ಪುಸ್ತಕ ಬರೆಯುತ್ತಿದ್ದರು. ಆ ದಿನಗಳಲ್ಲಿ ಅವರಿಗೆ ಎಂದೂ ಇಲ್ಲದ ಆಧ್ಯಾತ್ಮ ಚಿಂತನೆ ಜಾಸ್ತಿಯಾಗಿತ್ತು.
ಜೂನ 13 2011, ಅಂದು ಕೆಲಸ ಮುಗಿಸಿಕೊಂಡು ರಾತ್ರಿ ನಾನು ಮನೆಗೆ ಬಂದಾಗ 9 ಗಂಟೆ. ಅಪ್ಪ ಮೂಲಂಗಿ ಹುಳಿ ಮಾಡಿದ್ದರು. ಮೂಲಂಗಿ ಅಪ್ಪನಿಗೂ ಇಷ್ಟ ನನಗೂ ಇಷ್ಟ ಮತ್ತು ಮೂಲಂಗಿ ಹುಳಿ ಮಾಡುವುದರಲ್ಲಿ ಅಪ್ಪ ತಮ್ಮದೇ ಪರಿಣತಿ ಹೊಂದಿದ್ದರು. ಊಟ ಮಾಡಿದ ಮೇಲೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು. ಅವರಿಗೆ 6 ತಿಂಗಳು ಹಿಂದೆ ಹೃದಯದ ಆಪರೇಶನ್ ಆಗಿತ್ತು. ಹಾಗಾಗಿ ಹೆಚ್ಚು ಕೆಲಸ ಮಾಡಬೇಡ ಎಂದರೂ ಕೇಳುತ್ತಿರಲಿಲ್ಲ. ಅಂದು ರಾತ್ರಿ 10 ಗಂಟೆಗೆ ಒಮ್ಮೆಲೇ, ನನಗೆ ಹಿಂದೆ ಆದ ಹಾಗೆ ಎದೆ ನೋವು ಪ್ರಾರಂಭವಾಗಿದೆ, ನಾನು ಬದುಕುವುದಿಲ್ಲ, ಮಲಗುತ್ತೇನೆ ಎಂದು ಮಲಗಿದರು. ತಕ್ಷಣ ನಾನು ಆಂಬುಲೆನ್ಸ್‌ಗೆ ಫೋನ್ ಮಾಡಿದೆ. ಆದರೆ 10 ನಿಮಿಷದಲ್ಲಿ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿರುವುದು ನನಗೆ ಗೊತ್ತಾಯಿತು ಮತ್ತು ಅವರಿಗೆ ಜ್ಞಾನವೂ ಇರಲಿಲ್ಲ. ಆಂಬುಲೆನ್ಸಗಾಗಿ ಕಾದು ಕುಳಿತೆ. ತಕ್ಷಣ ಹೊಳೆದದ್ದು ಈಶಾವಾಸ್ಯ ಉಪನಿಷತ್ತಿನ "ಹಿರಣ್ಮಯೇಣ ಪಾತ್ರೇಣ" ಮಂತ್ರ, ಅದರ ಅರ್ಥವೂ ನನಗೆ ಗೊತ್ತಿತ್ತು ಮತ್ತು ಅದನ್ನು ಇನ್ನೇನು ಸಾವು ಸಂಭವಿಸಬಹುದು ಎನ್ನುವವರ ಕಿವಿಯಲ್ಲಿ ಹೇಳಬೇಕು ಎಂಬುದು ನಾನು ಕೇಳಿದ್ದೆ. ಅಪ್ಪನ ಕಿವಿಯಲ್ಲಿ ಆ ಮಂತ್ರ ಪಠಿಸಿದೆ.
ಉಸಿರಾಟ ನಿಂತಿತ್ತು, ಆದರೂ ಆಂಬುಲೆನ್ಸಗೆ ಕಾದು ಕುಳಿತೆ. ಸಹೋದ್ಯೋಗಿ ಮತ್ತು ಆತ್ಮೀಯ ಗೆಳೆಯ ಸ್ವಾಮಿಗೆ ಫೋನ್ ಮಾಡಿದೆ. ಅವರು ಮತ್ತು ಇನ್ನೊಬ್ಬರು ಸಹೋದ್ಯೋಗಿ ಶೀತಲಾ ತಕ್ಷಣ ನನ್ನ ಮನೆಗೆ ಬರುತ್ತಿರುವುದಾಗಿ ತಿಳಿಸಿದರು. ಆಂಬುಲೆನ್ಸನವನ ಫೋನ್ ಬಂತು, ನಾವು ಮೈನ್ ರೋಡಿನಲ್ಲಿ ಇದ್ದೇವೆ, ನಮಗೆ ದಾರಿ ತೋರಿಸಲು ಯಾರನ್ನಾದರು ಕಳಿಸಿ ಎಂದು. ಅಕ್ಕಪಕ್ಕದವರೆಲ್ಲಾ ಮಲಗಿದ್ದರು, ಏನು ಮಾಡಬೇಕು ತೋಚಲಿಲ್ಲ. ಆಚೆಕಡೆ ಬಾಲ್ಕನಿಗೆ ಬಂದೆ, ಎದುರು ಮನೆಗೆ ಒಬ್ಬ ಹುಡುಗ ಆಗ ತಾನೆ ತನ್ನ ಕೆಲಸ ಮುಗಿಸಿಕೊಂಡು ಬಂದು ಗಾಡಿ ನಿಲ್ಲಿಸುತ್ತಿದ್ದ. ಅವನ ಪರಿಚಯ ನನಗೆ ಇರಲಿಲ್ಲ. ಅವನೊಂದಿಗೆ ಬಾಲ್ಕನಿಯಿಂದಲೇ ಮಾತನಾಡಿ ವಿಷಯ ತಿಳಿಸಿ ಆಂಬುಲೆನ್ಸ ಕರೆದುಕೊಂಡುಬರಲು ಸಾಧ್ಯವೇ ಎಂದು ಕೇಳಿದೆ. ಅವನು ಇದೇನು ಹೀಗ ಕೇಳುತ್ತೀರಿ, ಈಗಲೇ ಹೊರಟೆ ಎಂದು ತನ್ನ ಗಾಡಿಯ ಮೇಲೇರಿ ಮೈನ್‌ರೋಡಿಗೆ ಹೋಗಿ ಆಂಬುಲೆನ್ಸನವರನ್ನು ಕರೆತಂದ ಮತ್ತು ಅವನೂ ಮನೆಗೆ ಬಂದ. ಆಂಬುಲೆನ್ಸನಲ್ಲಿ ಬಂದವರು ನನ್ನ ಅಪ್ಪನನ್ನು ಪರೀಕ್ಷಿಸಿ, ಪ್ರಾಣ ಹೋಗಿ ಆಗಲೇ 30 ನಿಮಿಷದ ಮೇಲಾಗಿದೆ, ನೀವು ಈಗ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಪೋಸ್ಟ್ ಮಾರ್ಟೆಮ್ ಎಲ್ಲಾ ಮಾಡ ಬೇಕು ಎಂದು ಹೇಳುತ್ತಾರೆ ಆದ್ದರಿಂದ ಸ್ಥಳೀಯ ವೈದರನ್ನು ಕರೆಸಿ ಡೆತ್ ಸರ್ಟಿಫಿಕೇಟ್ ತೆಗೆದುಕೊಳ್ಳಿ ಎಂದು ಸಲಹೆ ಕೊಟ್ಟು ಹೊರಟುಹೋದರು. ಆ ಎದುರು ಮನೆ ಹುಡುಗ ತನಗೆ ಗೊತ್ತಿರುವ ಒಬ್ಬರು ವೈದ್ಯರಿದ್ದಾರೆ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೊರಟ. ಮತ್ತೇ ಅಪ್ಪನೊಂದಿಗೆ ನಾನೊಬ್ಬನೇ. ಬೆಂಗಳೂರಿನಲ್ಲಿದ್ದ ಅಣ್ಣನಿಗೆ ಮತ್ತು ನನ್ನ ಭಾವನಿಗೆ ವಿಷಯ ತಿಳಿಸಿ ನಾನು ಸುಮ್ಮನೇ ಧ್ಯಾನಕ್ಕ ಕುಳಿತೆ.
30 ನಿಮಿಷದ ನಂತರ ಸ್ವಾಮಿ ಹಾಗೂ ಶೀತಲಾ ಬಂದರು. ನಮ್ಮ ತಕ್ಷಣದ ಕೆಲಸವೆಂದರೆ ಡೆತ್ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು ಮತ್ತು ತಂದೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು. ಜಸ್ಟ ಡೈಯಲ್‌ಗೆ ಫೋನ್ ಮಾಡಿ ಬೆಂಗಳೂರಿಗೆ ಕೊಂಡೊಯ್ಯುವ ಶವ ಪಟ್ಟಿಗೆ ಇರುವ ವಾಹನದ ಬಗ್ಗೆ ವಿಚಾರಿಸಿದೆವು. ಸುಮಾರು 10 ಫೋನ್ ಬಂದವು, ಅದರಲ್ಲಿ ಒಬ್ಬ 10 ಸಾವಿರ ರೂಪಾಯಿ ಕೊಡಿ ಸಾಕು ಎಂದ, ಅವನಿಗೆ ಬರಲು ಹೇಳಿದೆವು.
ಇತ್ತ ಎದುರು ಮನೆ ಹುಡುಗ ವೈದ್ಯರನ್ನು ಕರೆತಂದ, ಅವರು ನಾನು ಡೆತ್ ಸರ್ಟಿಫಿಕೇಟ್ ಕೊಡುತ್ತೇನೆ, ಆದರೆ ನನ್ನದೊಂದು ಷರತ್ತು, ನೀವು ನನ್ನ ಆಸ್ಪತ್ರೆಯ ವ್ಯಾನಿನಲ್ಲೇ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಮತ್ತು ಅದರ ಖರ್ಚು ಸುಮಾರು 15 ಸಾವಿರ ಎಂದರು. ಬೇರೆ ದಾರಿ ಇರಲಿಲ್ಲ ಒಪ್ಪಿದೆವು. ಮುಂಚೆ ತಿಳಿಸಿದ್ದ ವ್ಯಕ್ತಿಗೆ ಬೇರೆ ಏನೋ ಸಬೂಬು ಹೇಳಿ ಬರಬೇಡ ಎಂದೆವು.
ಅಷ್ಟರಲ್ಲಿ ನಮ್ಮ ಮನೆಯಲ್ಲಿ ಆಗುತ್ತಿರುವ ಮಾತುಗಳನ್ನು ಕೇಳಿ ಅಕ್ಕ ಪಕ್ಕದವರು ಎದ್ದು ಬಂದರು ಮತ್ತು ಅವರನ್ನು ನಿದ್ದೆಯಿಂದ ಏಳಿಸಲಿಲ್ಲವೆಂದು ನನಗೆ ಬೈದರು. ನಾನು ಸುಮ್ಮನಿದ್ದೆ. ರಾತ್ರಿ 12 ಗಂಟೆಗೆ ಚೆನ್ನೈನಿಂದ ಬೆಂಗಳೂರಿನ ಕಡೆಗೆ ಹೊರಟೆವು. ಮೊದಲು ಶೀತಲಾ ಅವರನ್ನು ಅವರ ಮನೆಗೆ ಬಿಟ್ಟು, ಸ್ವಾಮೀ ನನ್ನ ಜೊತೆ ಆಂಬುಲೆನ್ಸ್ ಹತ್ತಿದರು. 15 ನಿಮಿಷಕ್ಕೊಮ್ಮೆ ನನ್ನ ಅಣ್ಣನ ಮತ್ತು ಭಾವನ ಫೋನ್ ಬರುತ್ತಿತ್ತು. ಎಲ್ಲವೂ ಸರಿಯಾಗಿಯೇ ಆಗುತ್ತಿದೆ ಯೋಚಿಸಬೇಡಿ ಎಂದು ನಾನು ಹೇಳಿದರೂ ಅವರು ಕೇಳುತ್ತಿರಲಿಲ್ಲ. ತಮ್ಮ ಅಸಹಾಯತೆಯನ್ನು ತೋಡಿಕೊಳ್ಳುತ್ತಿದ್ದರು.
ಆಂಬುಲೆನ್ಸ ಚಾಲಕ ಈ ರೀತಿಯ ಸಂದರ್ಭಗಳಲ್ಲಿ ತಾನು ನಿಧಾನವಾಗಿಯೇ ಓಡಿಸುವುದು ಮತ್ತು ಬೆಂಗಳೂರು ಸುಮಾರು ಬೆಳಗ್ಗೆ 8 ಗಂಟೆಗೆ ನಾವು ತಲುಪುತ್ತೇವೆ ಎಂದ. ಅದನ್ನೇ ಅಣ್ಣ ಮತ್ತು ಭಾವನಿಗೆ ತಿಳಿಸಿದೆ. ವಾಹನದಲ್ಲಿ ಒಂದೆಡೆ ಏರ್ ಕಂಡೀಶನ್ ಶವ ಪೆಟ್ಟಿಗೆ ಇತ್ತು ಮತ್ತೊಂದು ಬದಿಯಲ್ಲಿ ಒಂದು ಹಾಸಿಗೆ. ಸ್ವಾಮಿಗೆ ಮಲಗಲು ಹೇಳಿದೆ, ಅದಕ್ಕೆ ಸ್ವಾಮಿ, ಇಲ್ಲ, ನಿನಗೆ ನಾಳೆ ಬಹಳ ಕೆಲಸವಿರುತ್ತದೆ ನೀನು ಮಲಗು ಎಂದರು. ಶವದಪೆಟ್ಟಿಗೆಯ ಮೇಲೂ ಒಂದು ಮೆತ್ತನೆಯ ಹಾಸಿಗೆ ಇತ್ತು, ಏಕೆ ಕೊಟ್ಟಿದ್ದರೋ ಗೊತ್ತಿಲ್ಲ, ನಾನು ಅದರ ಮೇಲೆ ಮಲಗಿದೆ ಸ್ವಾಮಿ ಪಕ್ಕದ ಹಾಸಿಗ ಮೇಲೆ ಮಲಗಿದರು. ಇಬ್ಬರಿಗೂ ಒಳ್ಳೇ ನಿದ್ದೆ. ಬೆಳಗಿನ ಜಾವ ಒಂದು ಜಾಗದಲ್ಲಿ ವಾಹನದ ಟೈರ್ ಪಂಚರ್ ಆಯಿತು. ಇದು ಹೀಗಾಗುತ್ತೆ ಅಂತ ನಮಗೆ ಗೊತ್ತು ಯೋಚಿಸಬೇಡಿ ಎಂದು ವಾಹನದ ಜೊತೆ ಬಂದಿದ್ದ ಇಬ್ಬರು ಚಾಲಕರು ಸೇರಿ ಟೈರ್ ಬದಲಾಯಿಸಿದರು. ಅಲ್ಲೇ ಇದ್ದ ಒಂದು ಟೀ ಅಂಗಡಿಯಲ್ಲಿ ಟೀ ಕುಡಿದು, ನಮ್ಮ ಪ್ರಯಾಣ ಮುಂದುವರೆಸಿದೆವು.
ಬೆಂಗಳೂರಿನ ನಮ್ಮ ಮನೆ ಸೇರಿದಾಗ ಬೆಳಗ್ಗೆ 9 ಗಂಟೆ. ಮನೆಯ ಮುಂದೆ ಸುಮಾರು 200 ಜನ ಸೇರಿದ್ದರು, ಅಪ್ಪನಿಗಾಗಿ ಕಾಯುತ್ತಿದ್ದರು. ಗಾಡಿಯಿಂದ ಇಳಿದವನೇ ಚಾಲಕರಿಗೆ ಅವರ ಹಣ ಕೊಟ್ಟು ಸೀದಾ ಸ್ನಾನಗೃಹಕ್ಕೆ ಹೋಗಿ ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಿ ಬಂದೆ. ಮನೆಯ ಮುಂದೆ ಇನ್ನೂರಕ್ಕೂ ಹೆಚ್ಚು ಜನ ಜೋರಾಗಿ ಅಳುತ್ತಿರುವುದು ಕಂಡಾಗಲೇ ನಾನು ಒಮ್ಮೆಯೂ ಅಳಲೇ ಇಲ್ಲವೆಲ್ಲ ಎಂಬುದು ನನಗೆ ಗೊತ್ತಾಗಿದ್ದು. ಆ ಧೈರ್ಯ ಎಲ್ಲಿಂದ ಆ ಸಮಯದಲ್ಲಿ ಬಂತೋ ನಾನರಿಯೆ. ಸ್ವಾಮಿ ಒಂದು ರೀತಿ ನನಗೆ ಸಕಾರಾತ್ಮಕ ಶಕ್ತಿ, ಜೀವನದಲ್ಲಿ ಅವರಿಂದ ಬಹಳ ಪಾಠ ಕಲಿತಿದ್ದೇನೆ ಮತ್ತು ಅದರ ನಿಖರವಾದ ಪ್ರಯೋಗ ಈ ರಾತ್ರಿಯ ಪ್ರಯಾಣದಲ್ಲಿ ನಡೆದಿತ್ತು.
ಈಗಲೂ ಎಲ್ಲಾದರೂ ಸಾವಾದರೆ ಶವದ ಸುತ್ತ ಇರುವ ಜರು ತಮಗೆ ಏನು ಮಾಡಬೇಕು ಅಂತಾ ತೋಚುತ್ತಲೇ ಇಲ್ಲ ಎಂದಾಗ ನನಗೆ ಆ ಚೆನ್ನೈನ ರಾತ್ರಿ ನೆನಪಾಗಿ ಹಾಗೆ ಒಮ್ಮೆ ಯಾರಿಗೂ ತಿಳಿಯದಂತೆ ನಕ್ಕು ಸುಮ್ಮನಾಗಿ ಬಿಡುತ್ತೇನೆ.
ಓ ಒಂದು ವಿಷಯ ಮರೆತಿದ್ದೆ, ಅಪ್ಪ ಬರೆದ ಪುಸ್ತಕ ಇನ್ನೂ ಓದಿಲ್ಲ ಆದರೆ ಕಡೇ ಪುಟ ಮಾತ್ರ ನೋಡಿದ್ದೆ. ಅಪ್ಪ ಸಾಯುವ ಹಿಂದಿನ ದಿನ ತಮ್ಮ ನೋಟ್ ಪುಸ್ತಕದಲ್ಲಿ ಬರೆದ ಕಡಯ ಸಾಲುಗಳು, "ಇದು ನನ್ನ ಕತೆ, ಇಲ್ಲಿ ಮುಗಿಸುತ್ತೇನೆʼ ಅಂತ.