ಗೆಳೆಯ ಸುರೇಶ ಭಾರತಕ್ಕೆ ವಾಪಸ್ ಬಂದು ಎರಡು ತಿಂಗಳಾಗಿತ್ತು. ಸುಮಾರು ಏಳು ವರ್ಷ ಅಮೇರಿಕಾದಲ್ಲಿದ್ದ ಅವನು, ಏನೂ ಮುನ್ಸೂಚನೆ ನೀಡದೆ ಭಾರತಕ್ಕೆ ವಾಪಸಾದದ್ದು ಹಲವರಿಗೆ ಏನೇನೋ ಅನುಮಾನ ಬಂದಿತ್ತು. ಕೆಲವರು ಅವನು ಕೆಲಸ ಕಳೆದು ಕೊಂಡಿದ್ದಾನೆ ಎಂದರೆ ಮತ್ತೆ ಕೆಲವರು ಅವನು ವಯಸ್ಸಾದ ತಂದೆಯನ್ನು ನೋಡಿಕೊಳ್ಳಲು ಬಂದಿದ್ದಾನೆ ಎನ್ನುತ್ತಿದ್ದರು. ಮತ್ತೆ ಕೆಲವರು, ಭಾರತದಲ್ಲಿ ತನ್ನದೇ ಸ್ವಂತ ಕಂಪನಿ ತೆಗೆಯಲು ಬಂದಿದ್ದಾನೆ ಎಂದು ಹೇಳಿದರೆ, ಅಮೇರಿಕದವಳೇ ಆದ ಅವನ ಹೆಂಡತಿಯಿಂದ ಏನೋ ತೊಂದರೆಯಾಗಿರಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದರು.
ಹೈಸ್ಕೂಲಿನಿಂದ ಕಾಲೇಜಿನವರೆಗೆ ನಾನೂ ಅವನು ಒಟ್ಟಿಗೆ ಓದುತ್ತಿದ್ದೆವು. ನನಗೆ ಬಹಳಷ್ಟು ಗೆಳೆಯರಿದ್ದರೂ, ಅವನಿಗೆ ನಾನೊಬ್ಬನೇ ಗೆಳೆಯ. ನಂತರ ಉನ್ನತ ವ್ಯಾಸಂಗಕ್ಕೆ ಅಮೇರಿಕಾಗೆ ಹೋದ ಸುರೇಶ ಅಲ್ಲೇ ಕೆಲಸಕ್ಕೆ ಸೇರಿದ. ಮದುವೆಯೂ ಅಲ್ಲೇ ಆಗಿತ್ತು.
ಭಾರತಕ್ಕೆ ಬಂದದ್ದು ಗೊತ್ತಾಗಿ ಅವನ ಮನೆಯ ಲ್ಯಾಂಡ್‌ಲೈನ್‌ಗೆ ಮೂರು ಬಾರಿ ಫೋನ್‌ಮಾಡಿದ್ದೆ, ಆದರೆ ಅವನು ಸಿಕ್ಕಿರಲಿಲ್ಲ.
ಅಂದು ಶುಕ್ರವಾರ, ರಾತ್ರಿ ಹತ್ತು ಗಂಟೆ. ಸುರೇಶನಿಂದ ಫೋನ್ ಬಂತು. “ನಾಳೆ ಶನಿವಾರ, ಬೆಳಗ್ಗೆ ಲಾಲ್‌ಬಾಗ್‌ಗೆ ವಾಕಿಂಗ್ ಹೋಗೋಣವೇ” ಎಂದ. ನಾನು “ಹೂ” ಅಂದೆ. “ನಿನ್ನ ಹತ್ತಿರ ಬಹಳಷ್ಟು ಮಾತೋಡೋದು ಇದೆ ಕಣೋ. ಬರೋದು ಲೇಟಾಗುತ್ತೆ ಅಂತ ಮನೆಯಲ್ಲಿ ಹೇಳಿ ಬಾ” ಎಂದ. “ನಾನೇ ಕಾರ್ ನಿಮ್ಮ ಮನೆ ಹತ್ತಿರ ತರುತ್ತೇನೆ. ಒಟ್ಟಿಗೆ ಹೋಗೋಣ” ಎಂದೆ. ಅವನು ಒಪ್ಪಿದ.
ಕಾಲೇಜು ಮುಗಿಸಿ ಅವನು ಅಮೇರಿಕಾಕ್ಕೆ ಹೋಗುವ ಮುನ್ನ ಪ್ರತಿ ದಿನ ಬೆಳಿಗ್ಗೆ ನಾವಿಬ್ಬರೂ ಲಾಲಬಾಗ್‌ಗೆ ವಾಕಿಂಗ್ ಹೋಗುತ್ತಿದ್ದೆವು. ನಾನು ನನ್ನ ಸೈಕಲ್ ತೆಗೆದುಕೊಂಡು ಅವನ ಮನೆಗೆ ಹೋಗುತ್ತಿದ್ದೆ. ಅವನಿಗೆ ಸೈಕಲ್ ಹೊಡೆಯಲು ಬರುತ್ತಿರಲಿಲ್ಲ. ನನಗೆ, ಸೀಟಿನ ಹಿಂದೆ ಕ್ಯಾರಿಯರ್ ಮೇಲೆ ಕೂಡಿಸಿಕೊಂಡು ಡಬಲ್ಸ್ ಹೊಡೆಯಲು ಬರುತ್ತಿರಲಿಲ್ಲ. ಹಾಗಾಗಿ ಸುರೇಶ ನನ್ನ ಸೈಕಲ್‌ನ ಮುಂದಿನ ಬಾರ್ ಮೇಲೆ ಕುಳಿತುಕೊಂಡರೆ ನಾನು ಸೈಕಲ್ ಹೊಡೆಯುತ್ತಿದ್ದೆ. ಒಂದು ರೀತಿ ನಮ್ಮಿಬ್ಬರ ಸ್ನೇಹಕ್ಕೆ ಊರಿನವರ ದೃಷ್ಟಿ ತಗುಲಿತೋ ಏನೋ, ಅದಕ್ಕೆ ಏಳು ವರ್ಷ ಒಬ್ಬರನ್ನೊಬ್ಬರು ನೋಡದೇ ಇರುವ ಹಾಗೆ ವಿಧಿ ನಮ್ಮನ್ನು ದೂರ ಮಾಡಿತ್ತು.
ಶನಿವಾರ ಬೆಳಗ್ಗೆ ಆರು ಗಂಟೆಗೆ ನನ್ನ ಕಾರು ಸುರೇಶನ ಮನೆ ಮುಂದೆ ನಿಲ್ಲಿಸಿದೆ. ಸುರೇಶನ ಅಪ್ಪ, “ಏನೋ ರಮೇಶ ಕಾರ್ ಮುಂದೆ ಬಾರ್ ಇಲ್ಲ, ಸುರೇಶ ಎಲ್ಲಿ ಕುಳಿತುಕೊಳ್ಳಬೇಕೋ” ಎಂದರು. ನಾನು, “ಹಾಗೇನಿಲ್ಲ ಅಂಕಲ್, ಸೈಕಲ್ಲೇ ತರೋಣ ಅಂದುಕೊಂಡೆ, ಆದರೆ ಲಾಲ್‌ಬಾಗ್‌ಗೆ ನೀವು ಬರ್ತೀನಿ ಅಂತ ಹಠ ಮಾಡಬಹುದು ಅಂತ ಕಾರ್ ತಂದೆ” ಎಂದೆ. ಅವರು ನಗುತ್ತಾ “ನಾವು ಲಾಲಬಾಗ್ ಸುತ್ತಾಡಿ ಆಟವಾಡಿದ್ದೆಲ್ಲಾ ಈಗ ಇತಿಹಾಸ. ಬಹಳ ದಿನದ ಮೇಲೆ ಒಬ್ಬರಿಗೊಬ್ಬರು ಸಿಕ್ಕದ್ದೀರ, ಹೋಗಿ ಬನ್ನಿ, ಎನೇನ್ ಮಾತೋಡೋದಿರುತ್ತೋ ಯಾರಿಗೆ ಗೊತ್ತು. ಹಾಗೆ ಬರುತ್ತಾ ನನಗೆ ವಿದ್ಯಾರ್ಥಿ ಭವನ್ ದೋಸೆ ತರೋದನ್ನು ಮರೆಯಬೇಡಿ ಅಷ್ಟೇ, ಕಾಸು ಕೊಡಲೇ” ಅಂದರು. ಹಿಂದೆ ದಿನಾ ನಾವು ಲಾಲಬಾಗ್‌ಗೆ ಹೋಗುತ್ತಿದ್ದಾಗ ಇವರೇ ಕಾಸು ಕೊಡುತ್ತಿದ್ದದ್ದು. ನಾನು ಅದಕ್ಕೆ, “ನಿಮ್ಮ ಮಗ ಈಗ ವಿದ್ಯಾರ್ಥಿ ಭವನ್ ಕೊಂಡುಕೊಳ್ಳುವಷ್ಟು ಸಾಹುಕಾರನಾಗಿದ್ದಾನೆ, ನಮಗೆ ನಿಮ್ಮ ದುಡ್ಡು ಬೇಡ” ಅಂದೆ.
ಅಲ್ಲಿ ಲಾಲ್‌ಬಾಗ್‌ನಲ್ಲಿ ನಮಗೆ ಮುಂಚಿನಿಂದ ಇಷ್ಟವಾದ ಒಂದು ದೊಡ್ಡ ಮರದ ಬುಡದಲ್ಲಿ ಕುಳಿತು ಮಾತು ಪ್ರಾರಂಭಿಸಿದೆವು.
ವಿದೇಶದಲ್ಲಿ ಮಕ್ಕಳ ಮನೆಗೆ ಹೋಗಿ ಬಂದ ನಮ್ಮ ಹಿರಿಯ ನಾಗರೀಕರಂತೆ ಇವನು ಪ್ರಾರಂಭ ಮಾಡಿದ ವಿದೇಶದ ಗುಣಗಾನ. ಅಲ್ಲಿ ಹಾಗೆ, ಇದು ಹೀಗೆ, ನಮ್ಮ ಭಾರತ ಇನ್ನೂ ಆ ಮಟ್ಟಕ್ಕೆ ಬರಲು ಇನ್ನೂ ಎಷ್ಟು ವರ್ಷ ಬೇಕೋ ಅಂತೆಲ್ಲಾ ಪ್ರಾರಂಭಿಸಿದ. ನಾನು ಅವನಿಗೆ “ಸಾಕೋ, ಇದನ್ನೆಲ್ಲಾ ಹೇಳೋಕ್ಕಾ ನೀನು ನನ್ನನ್ನ ವಾಕಿಂಗ್ ಕರೆದೆಯಾ” ಎಂದು ಕೇಳಿದೆ. ಅವನಿಗೆ ಅರ್ಥವಾಯಿತು. ಬೇರೆ ವಿಷಯ ಪ್ರಾರಂಭಿಸಿದ.
“ರಮೇಶ ನಿನಗೀಗ ಗೊತ್ತಿರಬೇಕು, ನನಗೆ ಇಬ್ಬರು ಮಕ್ಕಳು” ಎಂದ. ಎಲ್ಲಾ ಗೊತ್ತಿದ್ದರೂ ನಾನು ತಮಾಷೆಗೆ “ನಿನಗೆ ಮದುವೆ ಯಾವಾಗ ಆಯಿತೋ” ಎಂದು ಕೇಳಿದೆ. ಸುರೇಶ ನಗುತ್ತಾ “ಮದುವೆಗೆ ಕರೆಯಲಿಲ್ಲ ಎಂಬುದನ್ನು ಆಡಿಕೊಳ್ಳುತ್ತಿರುವೆ ಅಲ್ವ” ಎಂದ. “ಹಾಗೇನಿಲ್ಲ ನಿನ್ನ ಕಾಲೆಳೆಯಬೇಕೆನಿಸಿತು, ಅದಕ್ಕೆ ಹಾಗೆ ಮಾತನಾಡಿದೆ ಅಷ್ಟೆ” ಎಂದು ಹೇಳಿದೆ. “ನನ್ನ ಹೆಂಡತಿ ಮಾರ್ಟಿನಾಳನ್ನು ನಾನು ಮೊದಲು ನೋಡಿದ್ದು ಅಮೇರಿಕಾದ ಇಸ್ಕಾನ್ ದೇವಸ್ಥಾನದಲ್ಲಿ. ಕಾಲೇಜಿನಲ್ಲಿ ಯಾರೋ ಗೆಳೆಯರು ಕೊಟ್ಟ ಕೃಷ್ಣನ ಕಥೆ ಪುಸ್ತಕವನ್ನು ಓದಿ, ಅವಳೂ ಕೃಷ್ಣನ ಭಕ್ತಳಾಗಿ ಇಸ್ಕಾನ್‌ಗೆ ಬರಲಾರಂಬಿಸಿದ್ದಳು. ಹೇಗೋ ನಮ್ಮಿಬ್ಬರಿಗೆ ಸ್ನೇಹವಾಗಿ ಮದುವೆ ಮಾಡಿಕೊಂಡೆವು. ನೋಡು ರಮೇಶ, ಸುಮಾರು ಎರಡು ಪೀಳಿಗೆಗೆ ಆಗುವಷ್ಟು ನಾನು ಅಮೇರಿಕಾದಲ್ಲಿ ಹಣ ಗಳಿಸಿದ್ದೇನೆ. ಇನ್ನು ನನ್ನ ಹೆಂಡತಿ ಅವಳ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಟ್ಟಿದ್ದಾಳೋ ನನಗೆ ಗೊತ್ತಿಲ್ಲ. ನಮ್ಮ ವಿದ್ಯೆಗೆ ಅಮೇರಿಕಾ ಜನ ಎಷ್ಟೇ ಮರ್ಯಾದೆ ಗೌರವ ಕೊಟ್ಟರೂ, ಅದೇಕೋ ನನ್ನ ಮಕ್ಕಳನ್ನು ಆ ಸಂಸ್ಕೃತಿಯಲ್ಲಿ ಬೆಳೆಸಲು ಇಷ್ಟವಾಗುತ್ತಿಲ್ಲ. ಹಾಗಾಗಿ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಮಕ್ಕಳನ್ನು ನಾವು ಬೆಳೆದಂತೆ ಭಾರತದಲ್ಲೇ ಬೆಳೆಸೋಣ ಅಂತ. ಅವು ಇನ್ನು ಚಿಕ್ಕವು, ಸ್ವಲ್ಪ ದೊಡ್ಡವರಾದರೆ ಭಾರತಕ್ಕೆ ಬರಲು ಒಪ್ಪುವುದಿಲ್ಲ. ನಿನಗೇನನಿಸುತ್ತೆ, ನನ್ನ ನಿರ್ಧಾರ” ಎಂದು ಕೇಳಿದ.
“ನನ್ನ ನಿರ್ಧಾರಾ ಬಿಡೋ, ಇದಕ್ಕೆ ನಿನ್ನ ಹೆಂಡತಿ ಅಭಿಪ್ರಾಯವೇನು” ಎಂದೆ. “ಆ ವಿಷಯದಲ್ಲಿ ನಾನು ಅದೃಷ್ಟವಂತ ಕಣೋ. ಅವಳಿಗೂ ನಮ್ಮ ದೇಶ ಎಂದರೆ ಇಷ್ಟ. ಅವಳೂ ಒಪ್ಪಿದ್ದಾಳೆ. ಆದರೆ ಸದ್ಯಕ್ಕೆ ಇನ್ನೂ ಮೂರು ವರ್ಷ ಅವಳು ತಾನು ಕೆಲಸ ಮಾಡುತ್ತಿರುವ ಕಂಪನಿಯನ್ನು ಬಿಡುವಂತಿಲ್ಲ, ಆದರೆ ಮಕ್ಕಳನ್ನು ಕೂಡಲೇ ಭಾರತಕ್ಕೆ ಕಳಿಸಲು ಅವಳದೇನು ಅಭ್ಯಂತರವಿಲ್ಲ” ಎಂದ.
“ಸರಿ ಹಾಗಾದರೆ, ಕರೆದುಕೊಂಡು ಬಂದು ಬಿಡು” ಎಂದೆ. “ಅಲ್ಲೇ ಸಮಸ್ಯೆ ಆಗಿರೋದು. ಅಮ್ಮ ಸತ್ತು ಏಳು ವರ್ಷವಾಯಿತು. ಅಪ್ಪ ಹೇಗೋ ತಮಗೆ ಬೇಕಾದ ಅಡುಗೆ ಮಾಡಿಕೊಂಡು ಜೀವನ ನಡೆಸುತಿದ್ದಾರೆ. ಈಗ ಅವರ ಮೇಲೆ ನಾನು ಮತ್ತು ನನ್ನ ಎರಡು ಮಕ್ಕಳ ಭಾರ ಬೇರೆ” ಅಂದ. “ಹಾಗೆಲ್ಲ ಅಂದುಕೊಳ್ಳಬೇಡ. ಅಂಕಲ್‌ಗೆ ನೀನು ಬಂದಿರೋದೆ ಹೊಸ ಖುಶಿ ತಂದಿದೆ, ಇನ್ನು ನಿನ್ನ ಮಕ್ಕಳೂ ಬಂದುಬಿಟ್ಟರೆ, ಅಂಕಲ್ ಸಂತೋಷಕ್ಕೆ ಮಿತಿಯೇ ಇರಲ್ಲ. ಈಗ ಬೆಂಗಳೂರಿನಲ್ಲಿ ಹಣ ಕೊಟ್ಟರೆ ಮನೆಯಲ್ಲಿ ದಿನಾ ಅಡುಗೆ ಮಾಡಲು ಮತ್ತು ಅವಶ್ಯಕವಿದ್ದರೆ ಮನೆಯಲ್ಲೇ ಬೆಳಗಿನಿಂದ ಸಂಜೆಯವರೆಗೂ ಇರಲು ಒಪ್ಪುವ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾ ಮನೆಕೆಲಸಗಳನ್ನೂ ಮಾಡುವ ಜನರು ಸಿಗುತ್ತಾರೆ. ಅಂಕಲ್‌ಗೆ ಹೇಳಿ ಮನವರಿಕೆ ಮಾಡಿದರಾಯಿತು” ಎಂದೆ.
ಅವನು “ನಾನು ಹಾಗೆ ಮನೆಯಲ್ಲಿ ಸುಮ್ಮನೆ ಕೂರೋ ಹಾಗಿಲ್ಲ. ನನ್ನ ಟ್ಯಾಲೆಂಟ್ ಅವಶ್ಯಕತೆ ಈ ಬೆಂಗಳೂರಿನಲ್ಲಿ ಬಹಳಷ್ಟಿದೆ” ಎಂದ. “ಓ ಮೂರನೇ ಪೀಳಿಗೆಗೂ ದುಡ್ಡು ಮಾಡಿ ಉಳಿಸುವ ಹಾದಿಯಲ್ಲಿ” ಎಂದೆ. “ದುಡ್ಡಿಗಾಗಿ ಅಲ್ಲ, ಆದರೆ ಸಮಾಜ ಸುಮ್ಮನೆ ಕೂರುವ ಗಂಡಸನ್ನು ನೋಡುವ ರೀತಿಯೇ ಬೇರೆ ಕಣೋ” ಅಂದ ಸುರೇಶ. ಸರಿ ಹಾಗಾದರೆ “ ಹೆಚ್ಚು ಸಂಪಾದನೆಗೆ ಅಲ್ಲ ಅನ್ನೋದಾದ್ರೆ ನನ್ನ ಕಂಪನಿಗೆ ಸೇರಿಕೋ. ಪಾರ್ಟನರ್ ಆಗಿ ಸೇರಿಕೊಂಡರೆ, ನನಗೆ ಖುಶಿ, ಆದರೆ ನಿನಗೆ ಸಂಸಾರದ ಕಡೆ ಗಮನ ಹರಿಸೋದು ಕಷ್ಟ ಆಗುತ್ತೆ, ಅದಕ್ಕೆ ಒಳ್ಳೆಯ ಹುದ್ದೆ ಕೊಡುತ್ತೇನೆ, ನಿನಗೆ ಸಮಯದ ಯಾವುದೇ ನಿರ್ಬಂಧನೆಗಳಿರುವುದಿಲ್ಲ” ಎಂದೆ. ಅವನ ಮುಖದಲ್ಲಿ ಸಂತೋಷ ತುಂಬಿ ಬಂದಿತ್ತು.
ಈಗ ಎರಡನೇ ಸಮಸ್ಯೆ. “ನನ್ನ ಹೆಂಡತಿಗೆ ಭಾರತದ ಬಗ್ಗೆ ಗೌರವವಿದ್ದರೂ, ಇಲ್ಲಿನ ರೀತಿ ರಿವಾಜುಗಳು ಅವಳಿಗೆ ಗೊತ್ತಿಲ್ಲ. ಅವಳು ಬಂದರೆ ಹೇಗೆ ಹೊಂದಿಕೊಳ್ಳುತ್ತಾಳೆಂಬ ಭಯ ನನ್ನನ್ನು ಕಾಡುತ್ತಿದೆ” ಎಂದ ಸುರೇಶ. “ಈ ಪ್ರಶ್ನೆ ನಾನು ಊಹಿಸಿದ್ದೆ, ಹಾಗೆ ಉತ್ತರವು ಸಿದ್ದವಾಗಿತ್ತು. ನೋಡೋ ಈ ಸಮಸ್ಯೆಗೆ ನನ್ನ ಹತ್ತಿರ ಒಂದು ಪರಿಹಾರವಿದೆ, ಆದರೆ ಅದರಲ್ಲಿ ನನ್ನದೊಂದು ಸ್ವಾರ್ಥವೂ ಇದೆ, ಆಗುತ್ತೆ ಆಗೋಲ್ಲ ಎನ್ನುವ ಹಕ್ಕು ನಿನಗಿದೆ. ನಿನ್ನ ಯಾವುದೇ ಉತ್ತರದಿಂದ ನನಗೆ ಬೇಸರವಾಗುವುದಿಲ್ಲ” ಎಂದೆ.
“ಸರಿ ಮೊದಲು ಪರಿಹಾರ ಹೇಳು, ನಂತರ ಮಿಕ್ಕಿದ್ದೆಲ್ಲಾ” ಎಂದ ಸುರೇಶ. “ನನ್ನ ಹೆಂಡತಿಗೆ ಅವರ ಕಂಪನಿಯವರು ಎರಡು ವರ್ಷ ಅಮೇರಿಕಾಕ್ಕೆ ಹೋಗಲು ಮೂರು ವರ್ಷದಿಂದ ಒತ್ತಡ ಹಾಕುತ್ತಿದ್ದಾರೆ. ಇವಳೋ ಮಡಿವಂತರ ಕುಟುಂಬದಲ್ಲಿ ಹುಟ್ಟಿರುವ ಸಂಪ್ರದಾಯಸ್ತೆ. ಏನೋ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾಳೆ. ಈಗ ನೀನು ಒಪ್ಪುವುದಾದರೆ, ಅವಳನ್ನು ನಿನ್ನ ಹೆಂಡತಿಯ ಜೊತೆ ನಿಮ್ಮ ಅಮೇರಿಕಾದಲ್ಲಿ ಇರಲು ನಾನು ತಿಳಿಸುತ್ತೇನೆ. ಕಂಪನಿಯ ಒತ್ತಡ ಹೆಚ್ಚಾಗಿರುವುದರಿಂದ ಅವಳೂ ಒಪ್ಪುತ್ತಾಳೆ. ಎರಡು ವರ್ಷದಲ್ಲಿ ನಿನ್ನ ಹೆಂಡತಿಯು ನನ್ನವಳಿಂದ ಸ್ವಲ್ಪ ನಮ್ಮ ಅಡುಗೆ, ಆಚಾರ, ಪದ್ದತಿಗಳು, ಸಂಸ್ಕೃತಿಯನ್ನು ಕಲಿಯುತ್ತಾಳೆ. ಇನ್ನು ನನ್ನ ಒಬ್ಬನೇ ಮಗ, ಅವನಿಗಿನ್ನೂ ಎರಡು ವರ್ಷ, ಅಮ್ಮನಿಗಿಂತ ಹೆಚ್ಚಾಗಿ ಅಜ್ಜಿಯ ಜೊತೆಯೇ ಬೆಳೆದಿದ್ದಾನೆ. ಹಾಗಾಗಿ ನನ್ನ ಅಮ್ಮ ಅವನನ್ನು ಎರಡು ವರ್ಷ ನೋಡಿಕೊಳ್ಳಲು ಒಪ್ಪುತ್ತಾರೆ” ಎಂದೆ. “ಆದರೆ ಈ ವಿಷಯದಲ್ಲಿ ನಿನ್ನ ಹೆಂಡತಿಯು ಅವರ ಒಪ್ಪಿಗೆಯನ್ನು ನನಗೆ ನೇರವಾಗಿ ತಿಳಿಸಬೇಕು” ಎಂದೆ.
ತಕ್ಷಣ ತನ್ನ ಫೋನ್ ತೆಗೆದು ಹೆಂಡತಿಗೆ ಫೋನ್ ಮಾಡಿದ. ಅದಲ್ಲೋ ಅಲ್ಲೇ ಸ್ವಲ್ಪ ಪಕ್ಕಕ್ಕೆ ಹೋಗಿ ಹತ್ತು ನಿಮಿಷ ಮಾತನಾಡಿದ. ನಂತರ ಫೋನ್ ಕಟ್‌ಮಾಡಿ, ವೀಡಿಯೋ ಕಾಲ್ ಮಾಡಿ ನನ್ನ ಮುಂದೆ ಫೋನ್ ಇಟ್ಟ. ಫೋನ್ ತುಂಬಾ ತುಂಬಿಕೊಂಡಿದ್ದ ಅವನ ಹೆಂಡತಿಯ ಮುಖದ ಮೇಲಿದ್ದ ಸಂತೋಷ, ನಮ್ಮ ಪರಿಹಾರಕ್ಕೆ ಒಪ್ಪಿಗೆಯನ್ನು ಕೊಟ್ಟಿರುವುದು ಸೂಚಿಸಿತ್ತು. ಅವರು ಅಮೇರಿಕನ್ ಇಂಗ್ಲೀಷಿನಲ್ಲಿ “ನಾನು ನಿಮ್ಮ ಹೆಂಡತಿ ಅಮೇರಿಕಾಕ್ಕೆ ಬರುವುದನ್ನು ಎದುರು ನೋಡುತ್ತಿರುತ್ತೇನೆ” ಎಂದರು. ಸರಿ, ನಾನು, ನಗುತ್ತಾ ಇಂಗ್ಲೀಷಿನಲ್ಲಿ “ಅತಿ ಶೀಘ್ರದಲ್ಲೆ ಅದು ಸಾದ್ಯವಾಗುತ್ತದೆ” ಎಂದೆ. ಪೋನ್‌ಕಟ್‌ಮಾಡಿದೆ.
ನಂತರ ವಿದ್ಯಾರ್ಥಿ ಭವನ್‌ಗೆ ಹೋದೆವು. ಅಲ್ಲಿ ಮುಂದೆ ಇದ್ದ ಉದ್ದವಾದ ಕ್ಯೂ ನೋಡಿ, ಮನೆಯಲ್ಲೇ ದೋಸೆ ತಿನ್ನೋಣ ಎಂದು ನಿರ್ಧರಿಸಿ ಮೂರು ದೋಸೆಗೆ ಪಾರ್ಸಲ್ ಹೇಳಿದೆವು. ಹೋಟಲ್ ಮಾಲೀಕರು, ಪಾರ್ಸಲ್ ಬರಲು ಇನ್ನೂ ಮುವತ್ತು ನಿಮಿಷ ಆಗುತ್ತೆ ಎಂದರು.
“ಲೋ, ಸಮಯ ವೇಶ್ಟ್ ಮಾಡಬಾರದು. ಅದು ಭಾರತೀಯರಿಗೆ ಸ್ವಲ್ಪ ಗೊತ್ತಿರುವುದಿಲ್ಲ. ಈ ಅರ್ಧ ಗಂಟೆಯಲ್ಲಿ ಆ ಮೂಲೇ ಹೋಟಲ್‌ಗೆ ಹೋಗಿ, ಕ್ಯಾರೆಟ್ ಹಲ್ವ ತಿನ್ನೋಣ, ಅಷ್ಟರಲ್ಲಿ ಪಾರ್ಸಲ್ ರೆಡಿಯಾಗಿರುತ್ತೆ” ಎಂದ ಸುರೇಶ. “ಸರಿ, ಆದರೆ ನನ್ನದೊಂದು ಷರತ್ತು, ನೀನು ವಿದೇಶದಿಂದ ಬಂದವನು, ಆ ದೇಶವನ್ನು ಹೊಗಳುತ್ತಾ ಭಾರತವನ್ನು ಹೇಗೆ ಬೇಕಾದರು ಹಿಯಾಳಿಸಬಹುದು ಎಂಬುದನ್ನು ಮನಸ್ಸಿನಿಂದ ತೆಗೆದುಹಾಕಬೇಕು” ಎಂದೆ. “ಸರಿನಪ್ಪ ದೇಶಪ್ರೇಮಿ” ಎಂದ.
ಕ್ಯಾರೆಟ್ ಹಲ್ವ ತಿನ್ನಲು ಮೂಲೇ ಹೋಟಲ್‌ಗೆ ಹೋದೆವು. ಅಲ್ಲಿ ಕುರ್ಚಿಯಲ್ಲಿ ಕುಳಿತೆವು. ಟೇಬಲ್‌ಗೆ ಕ್ಯಾರೆಟ್‌ಹಲ್ವ ಬಂತು. ಅಲ್ಲಿದ್ದ ಮಾಣಿ “ಸಾರ್ ಫ್ಯಾನ್ ಹಾಕಲೇ” ಅಂದ. ಅದಕ್ಕೆ ಸುರೇಶ “ಬೇಡ, ಆ ಫ್ಯಾನಿನ ಮೇಲಿರೋ ಧೂಳೆಲ್ಲಾ ಹಲ್ವಕ್ಕೆ ಬೀಳುತ್ತೆ” ಅಂದ. ಬೆಳ್ಳಂಬೆಳಗ್ಗೆ ಮಾಣಿಗೆ ಕೋಪ ಮತ್ತು ಬೇಸರ ಬಂದಿತ್ತು. ತಕ್ಷಣ ನನ್ನ ಕಡೆ ನೋಡುತ್ತಾ ಸುರೇಶ “ಸಾರಿ ಕಣೋ, ಹಾಳಾದ್ದು, ಆ ವಿದೇಶಿ ಹುಚ್ಚು, ಕಣ್ಣಿನ ದೃಷ್ಟಿ ಎಲ್ಲಾ ಕಡೆಗೂ ಹೋಗುತ್ತೆ” ಎಂದ ಮತ್ತು ಮಾಣಿಗೂ ಸಾರಿ ಕೇಳಿದ. ಇಪ್ಪತ್ತು ರೂಪಾಯಿ ಟಿಪ್ಸ್ ಮಾಣಿಯ ಮುಖದಲ್ಲಿ ಉತ್ಸಾಹ ವಾಪಸ್ ತಂದಿತ್ತು.
ದೋಸೆ ಪಾರ್ಸಲ್ ತೆಗೆದುಕೊಂಡು ಸುರೇಶನ ಮನೆಗೆ ಹೋದೆವು. ಅಲ್ಲಿ ಅವನಪ್ಪ ಕಾಯುತ್ತಿದ್ದರು. ಮೂರು ಜನ, ಕಾಲೇಜಿನ ದಿನಗಳಲ್ಲಿ ಮಾಡುತ್ತಿದ್ದ ಹಾಗೆ, ಚಾಪೆ ಹಾಸಿ, ನೆಲದ ಮೇಲೆ ಕುಳಿತು ಪಾರ್ಸಲ್ ಪ್ಯಾಕೆಟ್ ತೆಗೆದೆವು. “ತುಂಬಾ ಶೆಕೆ, ಫ್ಯಾನ್ ಹಾಕ್ತೀನಿ” ಅಂದ ಸುರೇಶ. ಅದಕ್ಕೆ ನಾನು “ಬೇಡ ಕಣೋ ಫ್ಯಾನ್ ಮೇಲೆ ಇರೋ ಧೂಳೆಲ್ಲಾ ದೋಸೆಗೆ ಬೀಳುತ್ತೆ” ಎಂದೆ. ಫ್ಯಾನ್ ಕಡೆ ನೋಡಿ ಸುರೇಶ ಮನಸ್ಸಿನಲ್ಲೇ ನನ್ನನ್ನು ಬೈದುಕೊಳ್ಳುತ್ತಾ “ಅಪ್ಪಾ ನಾಳೆ ನಾನು ಮನೆಯೆಲ್ಲಾ ಕೆಲಸದವರಿಂದ ಕ್ಲೀನ್ ಮಾಡಿಸುತ್ತೇನೆ. ನಿನಗೆ ಧೂಳು ಅಂದರೆ ಆಗೊಲ್ಲ. ನೀನು ನಾಳೆ ಒಂದು ದಿನ ಅತ್ತೆಯ ಮನೆಗೆ ಹೋಗಿರು” ಎಂದ. ನಾನು ಸುರೇಶನಿಗೆ ಸಾರಿ ಎಂದೆ. ನಕ್ಕು ಸುಮ್ಮನಾದ.
“ಅಂಕಲ್ ನಾಳೆ ಎಲ್ಲೂ ಹೋಗುವುದು ಬೇಡ, ನನ್ನ ಮನೆಗೇ ಬರಲಿ, ಮತ್ತೆ ಮಧ್ಯಾಹ್ನ ಊಟಕ್ಕೆ ನೀನು ನಮ್ಮ ಮನೆಗೆ ಬಾ” ಎಂದೆ. ಅವನು ಮತ್ತು ಅಂಕಲ್ ಒಪ್ಪಿದರು.
ಮನೆಗೆ ಬಂದು, ನನ್ನ ಹೆಂಡತಿಗೆ ನಡೆದದ್ದೆಲ್ಲವನ್ನೂ ತಿಳಿಸಿದೆ. ಸಂತೋಷವಾದಳು. ಸರಿ “ನಾಳೆ ಅಂಕಲ್ ಮತ್ತು ಸುರೇಶ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದಾರೆ, ನೀನು ಏನು ಬೇಕೋ ತಯಾರಿ ಮಾಡಿಕೋ. ಹಾಗೆ ನನಗೆ ಆ ಪೊರಕೆ ಕೊಡು, ಸ್ವಲ್ಪ ಫ್ಯಾನ್‌ಗಳೆಲ್ಲವನ್ನೂ ಕ್ಲೀನ್ ಮಾಡಬೇಕು” ಎಂದೆ.