ಗುರುರಾಜ
ಶಾಸ್ತ್ರಿ
ತಿರುವುಗಳು
10-08-2021
ನಾನು ತಿಪಟೂರಿನಲ್ಲಿ ೧೦ ನೇ ಕ್ಲಾಸ್‌ ಮೂರು ಸಲ ನಪಾಸಾಗಿ ಸಮಾನ ವಿದ್ಯೆಯಿದ್ದ ಹುಡುಗರೊಂದಿಗೆ ರಸ್ತೆ ಬೀದಿಗಳಲ್ಲಿ ಅಲೆದಾಡಿಕೊಂಡು ಇದ್ದೆ. ಮನೆ ನಡೆಯೋದಕ್ಕೇನೂ ತೊಂದರೆ ಇರಲಿಲ್ಲ. ಅಪ್ಪ ಸತ್ತ ನಂತರ ಅಮ್ಮನಿಗೆ ಸ್ವಲ್ಪ ಪ್ಯಾಮಿಲಿ ಪೆನ್ಶನ್‌ ಬರುತ್ತಿತ್ತು. ಅದೇನೋ ಗೊತ್ತಿಲ್ಲ, ನನ್ನ ಕಾಲ್ಮೇಲೆ ನಾನು ನಿಂತ್ಕೋಬೇಕು, ಹಣ ಸಂಪಾದನೆ ಮಾಡ್ಬೇಕು ಅಂತ ಮನಸ್ಸಿಗೆ ಬರಲೇ ಇಲ್ಲ. ಜೀವನ ಪೂರ್ತಿ ಹೀಗೇ ಗೋಡೆ ಶಂಕರನ ಹಾಗೆ ಕಳೆದುಬಿಡುವುದು ಅಂದುಕೊಂಡಿದ್ದೆ. ಅಣ್ಣನೋ ಐದನೇ ಸಲ ಪರೀಕ್ಷೆಗೆ ಕಟ್ಟಿ ಕಡೆಗೂ ಹತ್ತನೇ ಕ್ಲಾಸ್‌ ಪಾಸ್‌ ಮಾಡಿದ. ಅವನು ನನ್ನ ಹಾಗಿರಲಿಲ್ಲ. ಅವನಿಗೆ ದುಡಿಯಬೇಕು, ಮದುವೆ ಮಾಡಿಕೊಳ್ಳಬೇಕು, ಅವನದೂ ಅಂತ ಒಂದು ಸಂಸಾರ ಇರಬೇಕು ಎಂದಲ್ಲಾ ಆಸೆ ಇಟ್ಟುಕೊಂಡವ. ನನ್ನ ತಂದೆಯ ತಮ್ಮ, ‌ಅಂದರೆ ನನ್ನ ಚಿಕ್ಕಪ್ಪ ಬೆಂಗಳೂರಿನಲ್ಲಿ ಆಟೋ ಡ್ರೈವರ್. ಡ್ರೈವರ್‌ ಅಂತ ಲೆಕ್ಕಕ್ಕೆ, ಆದರೆ ಮೂರು ಆಟೋಗಳನ್ನ ಇಟ್ಟುಕೊಂಡಿದ್ರು. ಎರಡು ಆಟೋ ಬಾಡಿಗೆಗೆ ಬಿಟ್ಟು ಮತ್ತೊಂದು ಆಟೋ ತಾವೇ ಓಡಿಸುತ್ತಿದ್ದರು. ನನ್ನ ಅಪ್ಪನ ಜೊತೆ ಜಗಳವಾಡಿಕೊಂಡು ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋದವರು, ಈಗ ನಮ್ಮ ವಂಶದಲ್ಲೆಲ್ಲಾ ಸ್ವಲ್ಪ ಅನುಕೂಲವಾಗಿದ್ದವರೆಂದರೆ ಅವರೇ. ಅವರು ಊರನ್ನು ಬಿಟ್ಟಾಗ ನಾನಿನ್ನು ಹುಟ್ಟಿರಲಿಲ್ಲ. ಅಣ್ಣನನ್ನಂತೂ ಹೆಗಲ ಮೇಲೆ ಕೂಡಿಸಿಕೊಂಡು ಊರೆಲ್ಲಾ ಸುತ್ತುತ್ತಿದ್ದರಂತೆ. ಅವನನ್ನು ಕಂಡರೆ ‌ಈಗಲೂ ಚಿಕ್ಕಪ್ಪನಿಗೆ ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿ. ಅಣ್ಣ ಹತ್ತನೇ ಕ್ಲಾಸ್ ಪಾಸಾದ ಎಂದು ತಿಳಿದು, ಅವನನ್ನು ಬೆಂಗಳೂರಿಗೆ ಕರೆಸಿಕೊಂಡರು. “ಮುಂದೆ ಓದಲು ಇಷ್ಟವಿದ್ದರೆ ಹೇಳು ಓದಿಸುತ್ತೇನೆ” ಎಂದರು. “ಓದು ನನ್ನ ಹಣೆಯಲ್ಲಿ ಬ್ರಹ್ಮ ಬರೆದಿಲ್ಲ, ನೀವು ಓದಲು ನನಗೆ ಬಲವಂತ ಮಾಡಿದರೆ ನಾನು ಮತ್ತೆ ತಿಪಟೂರಿಗೆ ಓಡಿಹೋಗುತ್ತೇನೆಂದು ಹೆದರಿಸಿದ” ಅಣ್ಣ. “ಸರಿ ಹಾಗಾದರೆ, ಹೇಗಿದ್ದರೂ ಮೂರು ಆಟೋ ಇದೆ, ಒಂದು ನೀನು ಓಡಿಸು” ಎಂದು ಹೇಳಿ ಅವನಿಗೆ ಆಟೋ ಓಡಿಸಲು ಚಾಲನಾ ಲೈಸೆನ್ಸ್‌ ಕೊಡಿಸಿ ಅವನನ್ನೂ ಆಟೋ ಡ್ರೈವರ್‌ ಮಾಡಿದರು. ಅಣ್ಣನ ದುಡಿಮೆ ಚೆನ್ನಾಗಿಯೇ ಇತ್ತು. ಅಷ್ಟಲ್ಲದೆ ಬೆಂಗಳೂರನ್ನು "ಅವಕಾಶಗಳ ನಗರ" ಎನ್ನುತ್ತಾರೆಯೇ. ಎರಡು ವರ್ಷ ದುಡಿದ ಮೇಲೆ ಅಣ್ಣ ನನ್ನನ್ನೂ ಬೆಂಗಳೂರಿಗೆ ಕರೆತರವುದಾಗಿ ಚಿಕ್ಕಪ್ಪನಿಗೆ ಹೇಳಿದ. “ಅವನು ಈಗಾಗಲೇ ೧೦ನೇ ಕ್ಲಾಸ್‌ ಮೂರು ಸಲ ಫೈಲ್‌ ಆಗಿದ್ದಾನೆ, ಅವನು ಹತ್ತನೇ ಕ್ಲಾಸ್‌ ಪಾಸಾದರೆ ಮಾತ್ರ ಕರೆದುಕೊಂಡು ಬಾ” ಎಂದು ಷರತ್ತು ಹಾಕಿದರು ಚಿಕ್ಕಪ್ಪ. ಆಗ ನನಗೆ ಛಲ ಬಂತು. ಬೆಂಗಳೂರಿಗೆ ತಲುಪಲೇಬೇಕೆಂಬ ಆಸೆಯಿಂದ ಕಷ್ಟ ಪಟ್ಟು ಓದಲು ಪ್ರಾರಂಭಿಸಿದೆ. ೪ನೇ ಸಲದ ಪರೀಕ್ಷೆಯಲ್ಲಿ 40 ಅಂಕಗಳಿಂದ ಫೈಲ್‌ ಆದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಓದಿ ಐದನೇ ಸಲ ಪಾಸಾಗಿಯೇ ಬಿಟ್ಟೆ. ಬೆಂಗಳೂರಿಗೆ ಹೊರಡಲು ತಯಾರಾಗಿಯೇ ಬಿಟ್ಟೆ. ಆದರೆ ಅಮ್ಮ, ಅಮ್ಮನನ್ನು ಎಲ್ಲಿ ಬಿಡುವುದು. “ನೋಡು, ಇದು ನನ್ನ ಗಂಡನ ಸ್ವಂತ ಮನೆ. ಸೊಸೆಯಾಗಿ ಮನೆಗೆ ಬಂದೆ, ಬದುಕಿರುವವರೆವಿಗೂ ನಾನು ಇಲ್ಲೇ ಇರಬೇಕೆಂದಿದ್ದೇನೆ. ಅದೇ ನಿಮ್ಮಪ್ಪನ ಆಸೆ ಕೂಡ ಆಗಿತ್ತು. ಬೇಕಾದರೆ ನೀನು ಬೆಂಗಳೂರಿಗೆ ಹೋಗು” ಎಂದು ಅಮ್ಮ ಕಡ್ಡಿ ಮುರಿದಂತೆ ಹೇಳಿಬಿಟ್ಟಳು. ನಾನು ಅವಳನ್ನು ಬಿಟ್ಟು ಹೋಗುವುದರಿಂದ ಅವಳ ಮನಸ್ಸಿಗೆ ಬೇಸರವಾಗುವುದಿಲ್ಲ ಎಂಬುದು ಅವಳು ಮಾತನಾಡಿದ ರೀತಿಯಲ್ಲಿ ಸ್ಪಷ್ಟವಾಗಿತ್ತು. ಅವಳಿಗೂ ನಾನು ದುಡಿಯುವಂತವನಾಗಬೇಕು ಎಂಬ ಆಸೆ ಇತ್ತು. ಹೆಚ್ಚೇನು ಕನಸುಗಳನ್ನಿಟ್ಟುಕೊಳ್ಳದೆ ಬೆಂಗಳೂರಿಗೆ ಬಂದೆ. ಅಣ್ಣ ಬೆಂಗಳೂರಿಗೆ ಬಂದಾಗ ಚಿಕ್ಕಪ್ಪ ಕೇಳಿದ ಪ್ರಶ್ನೆಯನ್ನೇ ಈಗ ಅಣ್ಣ ನನಗೆ ಕೇಳಿದ. ಅಣ್ಣ ಚಿಕ್ಕಪ್ಪನಿಗೆ ಕೊಟ್ಟ ಉತ್ತರವನ್ನೇ ನಾನು ಅಣ್ಣನಿಗೆ ಕೊಟ್ಟೆ. ಸರಿ, ಮುಂದೆ ಓದುವುದಿಲ್ಲ ಎಂದ ಮೇಲೆ ಅವನು ತಾನೆ ಏನು ಮಾಡಿಯಾನು, ಇದ್ದೇ ಇತ್ತಲ್ಲ ಕುಲಕಸುಬಿನ ಹಾಗೆ, ಆಟೋ ಡ್ರೈವರ್‌ ಕೆಲಸ. ಅಣ್ಣ ತಾನು ಉಳಿತಾಯ ಮಾಡಿದ್ದ ಹಣದಲ್ಲಿ ಹೊಸ ಆಟೋ ಖರೀದಿಸಿದ ಹಾಗೂ ಚಿಕ್ಕಪ್ಪನ ಆಟೋ ಈಗ ನನ್ನ ಪಾಲಾಯಿತು. ಚಿಕ್ಕಪ್ಪನಿಗೆ ಅಣ್ಣ, ಆಟೋ ಬಾಡಿಗೆ ಅಂತ ದಿನಾ ಇನ್ನೂರು ರೂಪಾಯಿ ಕೊಡುತ್ತಿದ್ದ. ಇದನ್ನು ನಾನೂ ಮುಂದುವರೆಸಿದೆ. ಬೆಳಿಗ್ಗೆಯೆಲ್ಲಾ ನಗರವನ್ನೆಲ್ಲಾ ಸುತ್ತಾಡಿ ರಾತ್ರಿ ವೇಳೆಗೆ ಮನೆಯ ಮುಂದೆ ನಾಲ್ಕು ಆಟೋಗಳು ನಿಲ್ಲುತ್ತಿದ್ದವು. ಚಿಕ್ಕಪ್ಪನಿಗೆ ಈ ಆಟೋ ಡ್ರೈವರ್‌ ಕೆಲಸ ಚೆನ್ನಾಗಿ ಅದೃಷ್ಟ ತಂದಿತ್ತು. ಹಣ ಸಂಪಾದನೆಯಲ್ಲಷ್ಟೇ ಅಲ್ಲ, ಸಾಕಷ್ಟು ಜನರನ್ನೂ ಸಂಪಾದಿಸಿದ್ದ ಚಿಕ್ಕಪ್ಪ. ಚಿಕ್ಕಪ್ಪನ ಮತ್ತೊಂದು ಅದೃಷ್ಟ ಎಂದರೆ ಅವನನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ ಮತ್ತು ಬುದ್ದಿವಂತರಾಗಿದ್ದ ಇಬ್ಬರು ಹೆಣ್ಣು ಮಕ್ಕಳು. ಚಿಕ್ಕಮ್ಮನಂತೂ ನಮ್ಮನ್ನು ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಅಣ್ಣನ ಮದುವೆಯಾಯಿತು. ಅದೂ ಚಿಕ್ಕಮ್ಮನೇ ನೋಡಿದ ಸಂಬಂಧ. ಅವರ ದೂರದ ನೆಂಟರಂತೆ. “ನಮ್ಮ ಮನೆಗೆ ಹುಡುಗಿ ಸರಿಹೋಗುತ್ತಾಳೆ ಅನಿಸುತ್ತಿದೆ” ಎಂದು ಚಿಕ್ಕಮ್ಮನ ಬಾಯಲ್ಲಿ ಬಂದದ್ದೇ, ಹುಡುಗಿಯನ್ನು ನೋಡದೆಯೇ ಅಣ್ಣ ಮದುವೆಗೆ ಒಪ್ಪಿಕೊಂಡ. ಚಿಕ್ಕಮ್ಮನ ಮಾತಿನ ಮೇಲೆ ನಮಗೆ ಅಷ್ಟು ನಂಬಿಕೆ. ಮನೆಗೆ ಸೊಸೆಯಾಗಿ ಬಂದಳು ನನ್ನ ಅತ್ತಿಗೆ. ಆದರೆ ನನ್ನ ಜೀವನದಲ್ಲಿ ನನಗೆ ಮೂರನೇ ತಾಯಿಯಾಗಿ ಬಂದಳು. ಮೊದಲನೆಯವರು ತಿಪಟೂರಿನಲ್ಲಿರುವ ತಾಯಿ, ಎರಡನೇ ತಾಯಿ ನನ್ನ ಚಿಕ್ಕಮ್ಮ, ಮೂರನೆಯವಳು ನನ್ನ ಅತ್ತಿಗೆ. ಸಂಸಾರವೆಂದರೆ ಹೀಗಿರಬೇಕು ಎಂದು ಜನ ಮೆಚ್ಚಿ ಮಾತನಾಡಿಕೊಳ್ಳಬೇಕು ಹಾಗಿತ್ತು ನಮ್ಮ ಸಂಸಾರ. ಹೀಗಿರಲು ಚಿಕ್ಕಪ್ಪ ಒಂದು ಭಾನುವಾರ ಬೆಳಗ್ಗೆ ಅಣ್ಣನಿಗೆ, “ನೀನು ಬೇರೆ ಮನೆ ಮಾಡಿಕೊಂಡು ಹೋಗು” ಎಂದರು. ಅವನಿಗೋ ಪರಮಾಶ್ಚರ್ಯ. ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು ಅವನಿಗೆ. ಆಗ ಚಿಕ್ಕಪ್ಪ “ನೋಡು ನಾನು ಬೆಂಗಳೂರಿಗೆ ಬಂದ ಮೇಲೆ ನಿಮ್ಮಿಬ್ಬರನ್ನು ಸೇರಿಸಿ ಸುಮಾರು ಐದು ಜನಕ್ಕೆ ಜೀವನ ಸಾಗಿಸಲು ಅಣಿಮಾಡಿಕೊಟ್ಟಿರುವೆ. ನೀನು ನಿನ್ನ ಜೀವನದಲ್ಲಿ ನನ್ನ ಹಾಗೆ ಐದೋ ಹತ್ತೋ ಜನರಿಗೆ ಸಹಾಯ ಮಾಡಬೇಕು. ಅದು ಅಲ್ಲದೆ ನನ್ನ ಹೆಣ್ಣು ಮಕ್ಕಳು ಈಗೆ ಕಾಲೇಜ್‌ ಓದುತ್ತಿದ್ದಾರೆ. ಈ ಚಿಕ್ಕ ಮನೆ ಇಷ್ಟೊಂದು ಜನಕ್ಕೆ ಸಾಕಾಗುವುದಿಲ್ಲ” ಎಂದರು. ಆದರೂ ನಮಗೆ ಏನೋ ಅನುಮಾನ. ಯಾವುದೋ ಪ್ರಬಲವಾದ ಕಾರಣ ಇಲ್ಲದೆ ಚಿಕ್ಕಪ್ಪ ಹೀಗೆ ಮಾಡುವುದಿಲ್ಲವೆಂದುಕೊಂಡೆ. ಅಣ್ಣ ಮತ್ತು ಅತ್ತಿಗೆಯೊಂದಿಗೆ ಹೊರಡಲು ರಾಮಾಯಣದ ಲಕ್ಷ್ಮಣನಂತೆ ನಾನು ತಯಾರಾದೆ. ಚಿಕ್ಕಪ್ಪ, “ಸುಮ್ಮನೆ ನಮ್ಮ ಜೊತೆಯಲ್ಲೇ ಇರುವುದನ್ನು ಕಲಿ” ಎಂದು ಗದರಿದರು. ಅಂದು ಮಧ್ಯಾಹ್ನ ಎಲ್ಲರೂ ಊಟ ಮಾಡುವ ಮನಸ್ಸೇ ಇಲ್ಲದೆ ಏನೋ ಸ್ವಲ್ಪ ತಿಂದು ಎದ್ದೆವು. ಸಂಜೆಗೆ ಚಿಕ್ಕಪ್ಪ ನನ್ನನ್ನೂ ಅಣ್ಣನನ್ನು ಮಹಡಿಯ ಮೇಲೆ ಕರೆದರು. “ನೋಡು ನೀನು ಬೇರೆ ಮನೆ ಮಾಡುವುದು ನನಗೂ ಇಷ್ಟವಿಲ್ಲ, ಆದರೆ ಇದು ನಿನ್ನ ಚಿಕ್ಕಮ್ಮನ ಆಸೆ. ನೀನು ಮತ್ತು ನಿನ್ನ ಹೆಂಡತಿ ಹೊಸ ಸಂಸಾರ ಹೂಡಿ ಸಂತೋಷವಾಗಿರುವುದನ್ನು ಅವಳು ನೋಡಬೇಕಂತೆ. ಹೊಸದಾಗಿ ಮದುವೆಯಾಗಿರುವ ನಿಮಗೂ ಇದರ ಅನುಕೂಲತೆ ಆಮೇಲೆ ತಿಳಿಯುತ್ತದೆ” ಎಂದರು. “ಮತ್ತೆ ನಾನು” ಅಂದೆ. “ನೀನು ನಮ್ಮ ಜೊತೆಯಲ್ಲಿಯೇ ಇರು ಎಂದು ಹೇಳಿದ್ದು ಅರ್ಥವಾಗಲಿಲ್ವಾ. ಶಿವ ಪೂಜೆಯಲ್ಲಿ ಕರಡಿಯಂತೆ ನೀನ್ಯಾಕೆ ಅಲ್ಲಿ” ಎಂದರು. ಮರು ಮಾತನಾಡದೆ ಸುಮ್ಮನಾದೆ. “ಹೊಸ ಮನೆಗೆ ಹೋದ ನಂತರ ನಿನ್ನ ಹೆಂಡತಿಗೆ ಈ ವಿಷಯ ತಿಳಿಸು , ಆಗ ಅವಳೂ ಸಂತೋಷ ಪಡುತ್ತಾಳೆ” ಎಂದರು ಚಿಕ್ಕಪ್ಪ. ಕಡೆಗೂ ಅಣ್ಣನ ಸಂಸಾರ ನಮ್ಮಿಂದ ದೂರಾಯಿತು. ಅಣ್ಣ ಈಗ ಎರಡು ಆಟೋಗಳ ಒಡೆಯನಾಗಿದ್ದ. ಒಂದು ಆಟೋ ತಾನು ಓಡಿಸುತ್ತಿದ್ದ ಮತ್ತೊಂದು ನಮ್ಮ ಊರಿನ ಒಬ್ಬ ಹುಡುಗನನ್ನು ಬೆಂಗಳೂರಿಗೆ ಕರೆಸಿ ಅವನಿಗೆ ಆಟೋ ಬಾಡಿಗೆಗೆ ಕೊಟ್ಟಿದ್ದ. ಆಗಾಗ ನಮ್ಮ ಮನೆಗೆ ಅವರು, ಅವರ ಮನೆಗೆ ನಾವು ಬಂದು ಹೋಗುವುದಂತೂ ಇದ್ದೇ ಇತ್ತು, ಆದರೆ ನನಗೆ ಚಿಕ್ಕಪ್ಪ ಹೇಳಿದ್ದ ಶಿವಪೂಜೆ ಕರಡಿ ಗಾದೆ ಆಗಾಗ ನೆನಪಿಗೆ ಬರುತ್ತಿದ್ದರಿಂದ ಅಣ್ಣನ ಮನೆಗೆ ಹೋಗುವುದನ್ನು ಕಡಿಮೆ ಮಾಡಿದೆ. ಇದಾದ ಐದು ವರ್ಷದ ನಂತರ ನನಗೂ ಮದುವೆ. ಜೊತೆಗೆ ನನ್ನ ಚಿಕ್ಕಪ್ಪನ ದೊಡ್ಡ ಮಗಳಿಗೂ ಅದೇ ಸಮಯದಲ್ಲಿ ಮದುವೆಯಾಯಿತು. ಮತ್ತೆ ಅದೇ ರಾಗ ಅದೇ ಹಾಡು ಚಿಕ್ಕಪ್ಪನದು. “ಮಗಳು ಅಳಿಯ ಆಗಾಗ ಮನೆಗೆ ಬರುತ್ತಿರುತ್ತಾರೆ ಮನೆ ಜಾಗ ಸಾಕಾಗಲ್ಲ” ಎಂದು ಅವರು ರಾಗ ಎಳೆದಾಗಲೇ ನನಗೆ ಎಲ್ಲವೂ ಗೊತ್ತಾಗಿತ್ತು. ಅದು ಅಲ್ಲದೆ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಹೊಸದಾಗಿ ಮದುವೆಯಾದ ನನಗೂ ಬೇರೆ ಮನೆಗೆ ಹೋಗುವ ಆಸೆ ಇತ್ತು. ಸರಿ ಮರು ಮಾತಿಲ್ಲದೆ ಬೇರೆ ಮನೆ ಮಾಡಿಕೊಂಡು ಹೊರಟೇ ಬಿಟ್ಟೆವು. ನನ್ನ ಹೆಂಡತಿ, ತಿಪಟೂರಿನವಳು. ನನ್ನ ತಿಪಟೂರಿನ ಅಮ್ಮ ನನಗೆ ಆರಿಸಿದ್ದು. ನನ್ನದೇ ಸಂಸಾರ, ಮನೆ ಅಂತ ಒಂದು ಆದ ಮೇಲೆ ನನ್ನ ಹೆಣ್ಣು ಕೊಟ್ಟ ಮಾವ ಆಗಾಗ ಬಂದು ಹೋಗುವುದು ಜಾಸ್ತಿಯಾಯಿತು. ಅವರಿಗೂ ಮಗಳು ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿರುವುದನ್ನು ನೋಡುವಾಸೆ. ಅವರದು ತಿಪಟೂರಿನಲ್ಲಿ ತೆಂಗಿನಕಾಯಿ ವ್ಯಾಪಾರ. ಹಾಗಾಗಿ ಬೆಂಗಳೂರಿಗೆಲ್ಲಾ ಬಂದಾಗ ಐವತ್ತೋ ನೂರೋ ತೆಂಗಿನಕಾಯಿ ತರುತ್ತಿದ್ದರು. “ನಾವು ಇರುವುದೇ ಇಬ್ಬರು, ಇದು ಸುಮ್ಮನೆ ಕೊಳೆತು ಹಾಳಾಗುತ್ತೆ” ಎಂದು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. “ಹೆಚ್ಚಾಗಿದೆ ಅನಿಸಿದರೆ ಅಕ್ಕ ಪಕ್ಕದ ಮನೆಯವರಿಗೆ ಮಾರಿ, ಮಾರ್ಕೆಟ್‌ನಲ್ಲಿ ಸಿಗುವು ಬೆಲೆಗಿಂತ ಕಮ್ಮಿಗೆ ಮಾರಿ, ಕೊಂಡುಕೊಳ್ತಾರೆ”ಎಂದರು ಮಾವ. ಬೆಂಗಳೂರಿನಲ್ಲಿ ಬುದ್ದಿವಂತಿಕೆ ಇದ್ರೆ ಕಸ ಕೂಡ ಮಾರಬಹುದು ಅನ್ನೋದು ನನ್ನ ಮಾವನ ನಂಬಿಕೆ. ಸರಿ ಹಾಗೆ ಆಗಲಿ ಅಂತ ಪರಿಚಯದವರು ಕೆಲವರಿಗೆ ತಿಳಿಸಿದೆವು. ದಿನೇ ದಿನೇ ನಮ್ಮ ಮಾವ ತರುತ್ತಿದ್ದ ತೆಂಗಿನಕಾಯಿಗೆ ಡಿಮ್ಯಾಂಡ್‌ ಜಾಸ್ತಿಯಾಯ್ತು. ಮಾವನ ಹತ್ತಿರ ಉಚಿತವಾಗಿ ತೆಂಗಿನಕಾಯಿ ತೆಗೆದುಕೊಂಡು ನಾನು ದುಡ್ಡು ಮಾಡಿಕೊಳ್ಳುವುದು ಅದ್ಯಾಕೋ ಇಷ್ಟವಾಗಲಿಲ್ಲ. ಸರಿ ಮಾವನವರಿಗೆ “ನನಗೆ ತಿಂಗಳಿಗೆ ಎರಡು ಸಾವಿರ ತೆಂಗಿನಕಾಯಿ ಕೊಡಿ, ಒಂದಕ್ಕೆ ಇಪ್ಪತ್ತು ರೂಪಾಯಿಯ ಹಾಗೆ ನಾನು ಮಾರುತ್ತೇನೆ, ಹತ್ತು ರೂಪಾಯಿ ನಿಮಗೆ, ಹತ್ತು ರೂಪಾಯಿ ನನಗೆ” ಎಂದೆ. ಇಷ್ಟವಿಲ್ಲದೆಯೇ ಈ ನನ್ನ ಮಾತಿಗೆ ಮಾವ ಒಪ್ಪಿಕೊಂಡರು. ಆದರೆ ದಿನಗಳು ಕಳೆಯುತ್ತಿದ್ದಂತೆ, ನನ್ನ ಆಟೋ ಡ್ರೈವರ್‌ ಕೆಲಸ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ನಾನು ಓಡಿಸುತ್ತಿದ್ದ ಆಟೋ ಮತ್ತೊಬ್ಬನಿಗೆ ಬಾಡಿಗೆಗೆ ಕೊಟ್ಟು ತೆಂಗಿನ ಕಾಯಿ ವ್ಯಾಪಾರ ಮುಖ್ಯ ವೃತ್ತಿ ಮಾಡಿಕೊಂಡೆ. ಬೆಂಗಳೂರಿನ ಹಲವು ತೆಂಗಿನಕಾಯಿ ಅಂಗಡಿಗಳಿಗೆ ನಾನೇ ಸರಬರಾಜು ಮಾಡುವವನಾದೆ. ಒಂದು ದಿನ ಮಾವನವರಿಗೆ ತಿಪಟೂರಿನಲ್ಲಿ ಹೃದಯಘಾತ ಆಯಿತೆಂದು ತಿಳಿಯಿತು. ಇನ್ನು ಅವರಿಗೆ ಈ ತೆಂಗಿನಕಾಯಿ ವ್ಯಾಪಾರ ನಡೆಸಲಾಗುವುದಿಲ್ಲವೆಂದು ತಿಳಿಯಿತು. ಸರಿ ಮತ್ತೆ ಆಟೋ ಡ್ರೈವರ್‌ ಕೆಲಸ ಪುನರಾರಂಭ ಮಾಡೋಣ ಅಂದುಕೊಂಡೆ. ಆದರೆ ಈಗ ಮಾವನವರಿಗೂ ಒಂದು ಆಸರೆ ಬೇಕಿತ್ತು. ನನ್ನ ಮದುವೆಗೆ ಮುಂಚೆಯೇ ನನ್ನ ಅತ್ತೆ ತೀರಿಕೊಂಡಿದ್ದರು. ಹಾಗಾಗಿ ಏಕೆ ನಾನೇ ತಿಪಟೂರಿನಲ್ಲೇ ಸಂಸಾರ ಮಾಡಬಾರದು ಅನಿಸಿತು. ಇದರಲ್ಲಿ ಮೂರು ಉಪಯೋಗಗಳಿದ್ದವು. ಒಂದು, ಮತ್ತೆ ನಾನು ಹುಟ್ಟಿದ ಮನೆಗೆ ಹೋಗಿ ಅಮ್ಮನನ್ನು ನೋಡಿಕೊಂಡಹಾಗಾಗುತ್ತದೆ. ಅಲ್ಲದೇ ಅಮ್ಮನ ಮನೆಗೆ ಹತ್ತಿರದಲ್ಲೇ ಇರುವ ಮಾವನವರನ್ನೂ ಆಗಾಗ ವಿಚಾರಿಸಿಕೊಳ್ಳುತ್ತಿರಬಹುದು ಮತ್ತು ಮುಖ್ಯವಾಗಿ ತಿಪಟೂರಿನ ಮಾವನವರ ತೆಂಗಿನಕಾಯಿ ವ್ಯಾಪಾರ ಮುಂದುವರೆಸಿ ಬೆಂಗಳೂರಿಗೆ ತೆಂಗಿನಕಾಯಿ ಸರಬರಾಜು ಮಾಡಬಹುದು. ಹೀಗೆ ಮನಸ್ಸಿಗೆ ಬಂದ ತಕ್ಷಣ ಅಣ್ಣನನ್ನು ಕರೆದುಕೊಂಡು ಚಿಕ್ಕಪ್ಪನ ಮನೆಗೆ ಹೊರಟೆ. ಅಣ್ಣನಿಗೆ ಮತ್ತು ಚಿಕ್ಕಪ್ಪನಿಗೆ ತುಂಬಾ ಸಂತೋಷವಾಯಿತು. ಈ ತೆಂಗಿನಕಾಯಿ ವ್ಯಾಪಾರಕ್ಕೆ ಬೆಂಗಳೂರಿನಲ್ಲಿ ಮಾಡಬೇಕಾದ ಸಹಾಯ ನಾನು ಮಾಡುತ್ತೇನೆ ಎಂದು ಅಣ್ಣ ಹೇಳಿದ. ಮೂರು ವರ್ಷ ಕಳೆದ ಮೇಲೆ ಚಿಕ್ಕಪ್ಪನ ಎರಡನೇ ಮಗಳಿಗೂ ಮದುವೆಯಾಯಿತು. ಈ ಸಮಯಕ್ಕೆ ಚಿಕ್ಕಪ್ಪನ ಹತ್ತಿರ ಎಂಟು ಆಟೋ, ಅಣ್ಣನ ಹತ್ತಿರ ಮೂರು ಆಟೋ ಒಂದು ಟ್ಯಾಕ್ಸಿ ಕಾರ್ ಹಾಗೂ ನನ್ನ ಹತ್ತಿರ ಬೆಂಗಳೂರಿನಲ್ಲಿ ಬಾಡಿಗೆ ಬಿಟ್ಟಿದ್ದ ಎರಡು ಆಟೋ ಮತ್ತು ಜೊತೆಗೆ ತಿಪಟೂರಿನ ಬೃಹತ್‌ ತೆಂಗಿನಕಾಯಿ ವ್ಯಾಪಾರ. ಜೊತೆಗೆ ಅಣ್ಣನ ಎರಡು ಗಂಡು ಮಕ್ಕಳು ಹಾಗೂ ನನ್ನದೊಂದು ಹೆಣ್ಣು ಮಗು. ಆ ಪೂಜೆ ಈ ಪೂಜೆ ಅಂತ ಎಲ್ಲರೂ ಒಟ್ಟಾಗಿ ಸೇರಿದರೆ ಒಟ್ಟು ಸುಮಾರು ಹದಿನೈದರಿಂದ ಇಪ್ಪತ್ತು ಜನ. ಅದೇಕೋ, ನಾವೆಲ್ಲಾ ಹೊಂದಿಕೊಂಡಂತೆ, ಮನೆಯ ಇಬ್ಬರು ಸೊಸೆಯಂದಿರೂ ಪರಸ್ಪರ ಹೊಂದಿಕೊಳ್ಳಲೇ ಇಲ್ಲ. ಹಾಗಂತ ಜಗಳವೇನೂ ಆಡುತ್ತಿರಲಿಲ್ಲ, ಆದರೆ ಅದೇನೋ ಹೊಂದಾಣಿಕೆ ಇಲ್ಲದ್ದು ಎದ್ದು ಕಾಣುತ್ತಿತ್ತು. ಅದು ಸಹಜವೇ, ಒಬ್ಬರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು, ಮತ್ತೊಬ್ಬಳು ತಿಪಟೂರಿನವಳು. ಚಿಕ್ಕಪ್ಪನ ಗರಡಿಯಲ್ಲಿ ಬೆಳೆದ ನಮಗೆ ಸಂಸಾರದಲ್ಲಿ ತೊಂದರೆಯಾಗದಂತೆ ನಡೆಸಿಕೊಂಡುಹೋಗುವ ತಂತ್ರಗಳು ಚೆನ್ನಾಗಿ ಗೊತ್ತಿತ್ತು. ಆಗ ಪ್ರಾರಂಭವಾಯಿತು ಕೊರೋನದ ಮಹಾಮಾರಿ. ಎಲ್ಲಾ ವ್ಯವಹಾರ ವಹಿವಾಟುಗಳು ಸ್ಥಬ್ಧವಾದವು. ಲಾಕ್‌ ಡೌನ್‌ ಸಮಯದಲ್ಲಿ ಆಟೋಗಳನ್ನಂತೂ ರಸ್ತೆಗೆ ಇಳಿಸುವ ಹಾಗೆ ಇಲ್ಲ. ಲಾಕ್‌ ಡೌನ್‌ ಮುಗಿದ ಮೇಲೂ ಜನರ ನಿತ್ಯ ಓಡಾಟವೇ ಕಡಿಮೆಯಾಗಿ ಆಟೋ ಟ್ಯಾಕ್ಸಿ ಡ್ರೈವರ್‌ಗಳು ಕಂಗಾಲಾದರು. ಈ ಕೊರೋನದಿಂದ ಇದೊಂದೆ ವೃತ್ತಿಗಲ್ಲ ಪೆಟ್ಟು ಬಿದ್ದಿದ್ದು. ದಿನಗೂಲಿಯಂತೆ ದುಡಿಯುವ ಪ್ರತಿಯೊಬ್ಬರಿಗೂ ಈ ಕೊರೋನಾ ಮಹಾಮಾರಿಯಾಯಿತು. ಆಗ ಚಿಕ್ಕಪ್ಪನ ಫೋನ್‌ ಬಂತು. “ಹೆಣ್ಣು ಮಕ್ಕಳ ಮದುವೆ ಮಾಡಿ ಈಗ ಮನೆಯೆಲ್ಲಾ ಬಿಕೋ ಅನಿಸುತ್ತಿದ್ದೆ. ನನಗೂ ಮತ್ತು ನಿಮ್ಮ ಚಿಕ್ಕಮ್ಮ ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಾ ಬೇಸರವಾಗಿದೆ. ನೀವಿಬ್ಬರು ನಿಮ್ಮ ಸಂಸಾರದ ಸಮೇತ ನಮ್ಮ ಮನೆಗೆ ಏಕೆ ಬರಬಾರದು” ಎಂದರು. ಚಿಕ್ಕಪ್ಪ ಈಗಾಗಲೆ ಎರಡು ಮನೆ ಕಟ್ಟಿ ಅದನ್ನು ಬಾಡಿಗೆಗೆ ಕೊಟ್ಟಿದ್ದರು. ಹಾಗಾಗಿ ಸಂಸಾರ ನಡೆಸಲು ಅವರಿಗೆ ಬಾಡಿಗೆ ಹಣ ಸಾಕಷ್ಟು ಬರುತ್ತಿತ್ತು. ಅಣ್ಣನೂ ತಾನು ಉಳಿತಾಯ ಮಾಡಿ ಖರೀದಿಸಿದ್ದ ಸೈಟನ್ನು ಮಾರಲು ತಯಾರಾಗಿದ್ದ, ಆದರೆ ಕೊರೋನಾ ಸಮಯ ಜನರು ಸೈಟನ್ನು ಅಣ್ಣ ಕೊಂಡಿದ್ದಕ್ಕಿಂತ ಅರ್ಧ ಬೆಲೆಗೆ ಕೇಳುತ್ತಿದ್ದರು. ಅದಲ್ಲದೆ ಚಿಕ್ಕಪ್ಪನಿಗೂ ಅಣ್ಣ ಸೈಟ್‌ ಮಾರುವುದು ಇಷ್ಟವಿರಲಿಲ್ಲ. ನಾನು ತಿಪಟೂರಿನಲ್ಲೇ ಉಳಿದುಕೊಂಡೆ. ಅಣ್ಣನ ಸಂಸಾರ ಚಿಕ್ಕಪ್ಪನ ಮನೆ ಸೇರಿತು. ಎಲ್ಲವೂ ಸರಿಹೋಗುತ್ತದೆ ಮತ್ತೆ ಹಳೆಯ ದುಡಿಯುವ ದಿನಗಳು ಬಂದೇ ಬರುತ್ತದೆ ಎಂಬುದು ಚಿಕ್ಕಪ್ಪನ ನಂಬಿಕೆ. ಲಾಕ್ ಡೌನ ನನ್ನ ತೆಂಗಿನಕಾಯಿ ವ್ಯಾಪಾರಕ್ಕೆ ಅಷ್ಟೇನೂ ತೊಂದರೆ ಕೊಡಲಿಲ್ಲ. ಹೇಳಬೇಕೆಂದರೆ, ಈ ಸಮಯದಲ್ಲಿ ವ್ಯಾಪಾರ ಜಾಸ್ತಿಯೇ ಆಯಿತು. ಕೊರೋನಾ ಶುರುವಾಗಿ ಒಂದು ವರ್ಷವಾಯಿತು. ಮತ್ತೆ ಕೊರೋನಾದ ಎರಡನೇ ಅಲೆಯೂ ಬಂದು ಯಾರೂ ಮನೆಯಿಂದ ಹೊರಗೆ ಹೋಗದ ಹಾಗೆ ಮಾಡಿತು. ಚಿಕ್ಕಪ್ಪನ ಮನೆಗೆ ಬಾಡಿಗೆಗೆ ಇದ್ದವರು ಬಿಟ್ಟು ಹೋಗಿ ತಿಂಗಳ ಬಾಡಿಗೆ ಬರುವುದೂ ನಿಂತಿತ್ತು. ಚಿಕ್ಕಪ್ಪ ಮತ್ತು ಅಣ್ಣನ ಋಣವನ್ನು ಸ್ವಲ್ಪಮಟ್ಟಿಗೆ ತೀರಿಸಲು ನನಗೆ ಇದ್ದಕ್ಕಿಂತ ಒಳ್ಳೆಯ ಸಮಯ ಬೇರೆ ಇರಲಿಲ್ಲ. ಆದರೆ ನನ್ನಿಂದ ಅವರು ಹಣ ಸ್ವೀಕರಿಸುವುದಿಲ್ಲ ಎಂಬುದು ನನಗೆ ಗೊತ್ತಿತ್ತು. ಚಿಕ್ಕಪ್ಪನ ಮನೆಗೆ ನೇರವಾಗಿ ಹೋದೆ, ನನ್ನ ತೆಂಗಿನಕಾಯಿ ಮಂಡಿಯ ವ್ಯಾಪಾರ ವಹಿವಾಟುಗಳನ್ನು ಚಿಕ್ಕಪ್ಪನಿಗೆ ತಿಳಿಸಿ, “ನಾನೊಬ್ಬನೇ ಮಂಡಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮಂಡಿಯಲ್ಲಿ ಕುಳಿತುಕೊಂಡು ವಹಿವಾಟು ನೋಡಿಕೊಳ್ಳುವ ನಂಬಿಕಸ್ಥರು ನನಗೆ ಬೇಕಾಗಿದ್ದಾರೆ, ನೀವು ಬರಲು ಸಾಧ್ಯವೇ” ಎಂದು ಕೇಳಿದೆ. ಚಿಕ್ಕಪ್ಪನಿಗೆ ನನ್ನ ಮಾತು ಅರ್ಥವಾಗಿತ್ತು, ಆದರೂ ಮನದಲ್ಲೇ ನಕ್ಕು ತಿಪಟೂರಿಗೆ ಬರಲು ಒಪ್ಪಿಕೊಂಡರು. ಚಿಕ್ಕಪ್ಪ ಚಿಕ್ಕಮ್ಮ ನಮ್ಮ ಮನೆಯಲ್ಲೇ ಇರಬೇಕೆಂಬುದು ನನ್ನ ಅಮ್ಮನ ಷರತ್ತು. ಅಣ್ಣನಿಗೂ, ಚಿಕ್ಕಪ್ಪನಿಗೆ ಹೇಳಿದ ಮಾತೇ ಹೇಳಿದೆ. ಆದರೆ ಮಕ್ಕಳ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ಆಗಬೇಕೆಂಬುದು ಅತ್ತಿಗೆಯ ಆಸೆ. ತಪ್ಪೇನಿಲ್ಲ ಅಲ್ಲವೆ. ಬೆಂಗಳೂರಿನಲ್ಲಿ ಇರುವ ವಿದ್ಯಾಭ್ಯಾಸದ ಗುಣಮಟ್ಟಕ್ಕೆ ತಿಪಟೂರನ್ನು ಹೋಲಿಸಲಾದೀತೇ. ಹಾಗಾಗಿ ಅಣ್ಣ ಒಂದು ಉಪಾಯ ಹೇಳಿದ. ನನ್ನ ಬೆಂಗಳೂರಿನಲ್ಲಿರುವ ತೆಂಗಿನಕಾಯಿಯ ವಹಿವಾಟನ್ನೆಲ್ಲಾ ಅವನು ಪೂರ್ಣಸಮಯ ವಹಿಸಿಕೊಳ್ಳುವುದಾಗಿ ತಿಳಿಸಿದ ಮತ್ತು ಅದಕ್ಕೆ ಲಾಭದಲ್ಲಿ ಸ್ವಲ್ಪ ಅವನಿಗೆ ಕೊಡಬೇಕೆಂದು ಹೇಳಿದ. ನನಗೂ ಇದೇ ಸರಿ ಎನಿಸಿತು. “ಆದರೆ ಇದರಿಂದ ನಿಮಗೇನು ಪ್ರಯೋಜನ, ನಿಮ್ಮ ಅಣ್ಣನಿಗೆ ಸಹಾಯ ಮಾಡಲು ಹೋಗಿ ನಿಮ್ಮ ಲಾಭ ಕಮ್ಮಿಯಾಗುವುದಿಲ್ಲವೇ” ಎಂದರು ಅತ್ತಿಗೆ. ಏನು ಉತ್ತರ ಕೊಡಬೇಕೋ ಗೊತ್ತಾಗಲಿಲ್ಲ. “ಇದಕ್ಕೆ ಪರಿಹಾರವೆಂದರೆ ನಿಮ್ಮ ಮಗಳನ್ನು ನಮ್ಮ ಮನೆಗೇ ಕಳಿಸಿ, ಅವಳು ನಮ್ಮ ಮಕ್ಕಳಲ್ಲಿ ಒಬ್ಬಳಾಗಿ ಬೆಂಗಳೂರಿನಲ್ಲೇ ಓದಲಿ” ಎಂದರು. “ಅವಳು ಕಾಲೇಜು ಸೇರುವಾಗ ನಿಮ್ಮ ಈ ಷರತ್ತನ್ನು ಖಂಡಿತಾ ನಾನು ಪೂರೈಸುತ್ತೇನೆ” ಎಂದು ಹೇಳಿದೆ. ನನ್ನ ಪ್ರಕಾರ ತಿಪಟೂರು ವಿದ್ಯಾಭ್ಯಾಸಕ್ಕೆ ಒಳ್ಳೆಯ ಊರೇ ಆಗಿತ್ತು. ಆ ಸಮಯಕ್ಕೆ ಹೀಗೇ ಹೇಳದೆ, ಬೇರೆ ವಿಧಿಯಿರಲಿಲ್ಲ. ಒಂದೊಂದು ತಿರುವಿಗೂ ಒಬ್ಬೊಬ್ಬರು ಕಾರಣಕರ್ತರು. ಆ ತಿರುವುಗಳು ಹೊಸ ಜೀವನ ವಿಧಾನವನ್ನು ತಿಳಿಸಿಕೊಡುತ್ತದೆ. ಆದರೆ ಆ ಸಕಾರಾತ್ಮಕ ತಿರುವುಗಳನ್ನು ನಮ್ಮ ಬಾಳಿನಲ್ಲಿ ತಂದವರಿಗೆ ಅವರ ಋಣ ತೀರಿಸಲು ನಮಗೆ ಅವಕಾಶ ದೊರೆತು ನಾವು ಅದಕ್ಕೆ ಸ್ಪಂದಿಸಿದರೆ, ಅದು, ಈ ನಮ್ಮ ಜನ್ಮದ ಚಿತ್ರಗುಪ್ತನ ಪಾಪ ಪುಣ್ಯದ ತಕ್ಕಡಿಯ ಎರಡು ತಟ್ಟೆಯೂ ಸಮತೂಕವಾದಂತೆ.
ಅನಿಸಿಕೆಗಳು




ರಾಜನ್
16-08-2021
ಮನಸ್ಸಿಗೆ ತಟ್ಟುವ ಕಥೆ. ಸುಂದರವಾಗಿ ಬಂದಿದೆ. ಕಷ್ಟದಲ್ಲಿ ಸಹಾಯ ಮಾಡಿದವರನ್ನು ಎಂದೂ ಮರೆಯ ಬಾರದು