ಗುರುರಾಜ
ಶಾಸ್ತ್ರಿ
ಮೊದಲ ಸಲ ಬಣ್ಣ ಹಚ್ಚಿಕೊಂಡಾಗ
06-02-2026
ಈಗಾಗಲೇ 8 ನಾಟಕಗಳಲ್ಲಿ ಅಭಿನಯಿಸಿದ್ದೆ, ಆದರೆ ಯಾವುದರಲ್ಲೂ ಮೇಕಪ್‌ ಇರಲಿಲ್ಲ. ವೈದ್ಯ, ಬ್ಯಾಂಕ್‌ ಮ್ಯಾನೇಜರ್‌, ಐದಾರು ಮಾವಿನ ಹಣ್ಣುಗಳನ್ನು ರಂಗದ ಮೇಲೆ ಉಂಡೆ ಉಂಡೆಯಾಗಿ ತಿನ್ನುವ ತರಲೆ ಬಾಲಕ, ಕಾಮಣ್ಣ ಮಕ್ಕಳೇ ಎಂದು ಅರಚಿ ಕಿರುಚುವ ಪುಂಡ ಪೋಕರಿ, ಪೋಲೀಸ್‌ ಪ್ಯಾದೆ ಹೀಗೆ ನಾನು ಅಭಿನಯಿಸಿದ್ದ ಪಾತ್ರಗಳು, ಮತ್ತು ಇವೆಲ್ಲದಕ್ಕೂ ಎಂದೂ ಬಣ್ಣ ಹಚ್ಚಿಕೊಂಡಿರಲಿಲ್ಲ. ಸಹಜವಾಗಿತ್ತು ನನ್ನ ವೇಶ. ಹಿಂದು ಸಮಾಜೋತ್ಸವದ ಹಿಂದಿನ ದಿನ ಅಂದರೆ 31ನೇ ಜನವರಿ 2026ರಂದು ನಮ್ಮ ಯೋಗಬಂಧು ಆರತಿ ಅಕ್ಕನವರು ಕರೆ ಮಾಡಿ ಮರುದಿನ ಸಮಾಜೋತ್ಸವದಲ್ಲಿ ಒಂದು ನಾಟಕ ಪ್ರಸ್ತುತಿ ಮಾಡುವುದಿದೆ. ಇದರಲ್ಲಿ ಎಲ್ಲರ ಧ್ವನಿ ಮುಂಚಿತವಾಗಿಯೇ ಮುದ್ರಣವಾಗಿರುತ್ತದೆ. ವೇದಿಕೆಯ ಮೇಲೆ ಕೇವಲ ನಟಿಸಿದರಾಯಿತು, ಅದಕ್ಕಾಗಿ ಸಂಭಾಷಣೆ ಮತ್ತು ಹಾಡುಗಳನ್ನು ಒಟ್ಟಾರೆ ಒಂದು ಕಡೆ ಜೋಡಿಸಿಕೊಡಲು ಸಾಧ್ಯವೇ ಎಂದು ಕೇಳಿದರು. ಈ ರೀತಿಯ ತಾಂತ್ರಿಕ ಕೆಲಸ ಬಹಳ ಸಲ ಯೋಗಶ್ರೀಗಾಗಿ ಮಾಡಿದ್ದ ಅನುಭವವಿದ್ದದ್ದರಿಂದ ಒಪ್ಪಿಕೊಂಡೆ. ನನ್ನ ಕೆಲಸವೇನಿದ್ದರೂ ಧ್ವನಿ ಮುದ್ರಣದ ಒಂದು ಫೈಲ್‌ ಕೊಡುವುದಷ್ಟೇ ಆಗಿತ್ತು. ರಾತ್ರಿ 10.30ಕ್ಕೆ ಧ್ವನಿಮುದ್ರಣ ತಯಾರಾಗಿತ್ತು, ಆಗ ಆರತಿ ಅಕ್ಕನವರು "ಕಿತ್ತೂರು ರಾಣಿ ಚೆನ್ನಮ್ಮನ ನಾಟಕದಲ್ಲಿ ಆಸ್ಥಾನ ನಿರ್ವಾಹಕನ ಒಂದು ಪಾತ್ರಕ್ಕೆ ಯಾರೂ ಸಿಗುತ್ತಿಲ್ಲ, ನಿಮಗೆ ನಾಟಕಗಳಲ್ಲಿ ನಟಿಸಿದ ಅನುಭವ ಇದೆ, ನೀವೇ ಆ ಪಾತ್ರ ಮಾಡಬೇಕು" ಎಂದು ಹೇಳಿದರು. ನಾಟಕದ ತಾಲೀಮು ಒಂದು ಬಾರಿಯೂ ನಡೆಸದೆ ವೇದಿಕೆ ಹತ್ತುವುದು ನನಗಂತೂ ಇಷ್ಟವಿರಲಿಲ್ಲ, ಆದರ ಇದು ಯೋಗಶ್ರೀಯ ಕೆಲಸ, ಹಾಗಾಗಿ ಒಪ್ಪಿಕೊಳ್ಳಬೇಕಾಯಿತು. ಹಿಂದೆಂದೋ ಈ ನಾಟಕ ಪ್ರಸ್ತುತಿಯಾದಾಗ ಚಿತ್ರೀಕರಣಮಾಡಿದ್ದ ವೀಡಿಯೋದಲ್ಲಿದ್ದ ನನ್ನ ಪಾತ್ರದ ತುಣುಕನ್ನು ಕಳಿಸಿಕೊಟ್ಟರು. ಎದೆ ಧಡಕ್‌ ಎಂದಿತು. ನಾಟಕ ಆರಂಭವಾಗುವುದೇ ನನ್ನ ಸಂಭಾಷಣೆಯಿಂದ. ಸಂತೋಷದ ವಿಷಯವೆಂದರೆ ನಾಟಕದ ಮೊದಲ ಒಂದು ನಿಮಿಷದಲ್ಲೇ ನನ್ನ ಪಾತ್ರ ಆರಂಭವಾಗಿ ಕೇವಲ 45 ಸೆಕೆಂಡ್‌ಗಳಲ್ಲಿ ನನ್ನ ಪಾತ್ರವೂ ಮುಗಿದುಹೋಗುತ್ತದೆ. ಧೈರ್ಯ ಮಾಡಿ ಒಪ್ಪಿಕೊಂಡಿದ್ದಾಯಿತು. ಹಿಂದು ಸಮಾಜೋತ್ಸವದ ದಿನ ಸಂಜೆ ಗಿರಿನಗರದ ಯೋಗಶ್ರೀಯಿಂದ ಹೊಸಕೇರೆಹಳ್ಳಿಯ ಪುಷ್ಪಾಂಜಲಿ ಪಾರ್ಕ್‌ ವರೆಗೆ ವೀರಗಾಸೆ, ಡೊಳ್ಳುಕುಣಿತದವರ ಜೊತೆ ನಮ್ಮ ನಡಿಗೆ. ನಡಿಗೆಯೊಂದಿಗೆ ಯೋಗಶ್ರೀಯ ಸುಮಾರು 50 ಯೋಗ ಬಂಧುಗಳಿಂದ ಶಂಖನಾದವೂ ಸೇರಿದ್ದು ನಡಿಗೆಗೆ ವಿಶೇಷ ಮೆರಗನ್ನು ತಂದಿತ್ತು. ನಡಿಗೆ ಅರ್ಧದಲ್ಲೇ ಮೊಟುಕುಗೊಳಿಸಿ, ನಾನು ನಾಟಕಕ್ಕಾಗಿ ವೇಷಭೂಷಣ ತೊಡಲು ಹೋದೆ. ಅಲ್ಲಿ ನನಗಾಗಿ ಆರತಿ ಅಕ್ಕ ಕರೆತಂದಿದ್ದ ಒಬ್ಬ ವ್ಯಕ್ತಿ ಬ್ರಿಟೀಷರ ವೇಷ ಹಾಕಿಕೊಂಡು ನಿಂತಿದ್ದ. ನಾನು ಹೋದೊಡನೇ "ಗುರು ಸಾರ್‌, ಬನ್ನಿ ನಿಮಗೆ ಕಾಯ್ತಾ ಇದ್ದೆ, ನಿಮ್ಮನ್ನು ತಯಾರಿ ಮಾಡಬೇಕು" ಎಂದ. ಈತ ಯಾರು, ನನ್ನನ್ನು ಇಷ್ಟು ಹತ್ತಿರದ ಪರಿಚಯದವರಂತೆ ಮಾತನಾಡಿಸುತ್ತಿದ್ದಾನೆಲ್ಲಾ ಎಂದು ಆಶ್ಚರ್ಯವಾಯಿತು. ಒಂದು ಕೈಚೀಲ ನನಗೆ ಕೊಟ್ಟು ಇದರಲ್ಲಿರುವ ವೇಷಭೂಷಣಗಳನ್ನು ಹಾಕಿಕೊಳ್ಳಿ ಎಂದ. ಬಣ್ಣ ಬಣ್ಣದ ಕಚ್ಚೆ, ಮೇಲುಡುಗೆ, ಆಭರಣ, ಕತ್ತಿ, ಪೇಟ ಅಯ್ಯಪ್ಪ ಏನೂ ಹೆಚ್ಚು ಮಾತನಾಡದೆ ಎಲ್ಲವನ್ನೂ ಧರಿಸಿದೆ. "ಈ ಕಡೆ ಬನ್ನಿ ಸರ್‌ ಈಗ ನಿಮಗೆ ಮೇಕಪ್‌ ಮಾಡುತ್ತೇನೆʼ ಎಂದ ಆ ವ್ಯಕ್ತಿ. ಯಾರೋ ಬಂದು ಆತನ ಹೆಸರು ಕೇಳಿದರು. ಹೆಸರು ತಿಲಕ್‌ರಾಜ್‌ ಎಂದು ಉತ್ತರಿಸಿದ. ಅಯ್ಯೋ ಇವ ನನಗೆ ಕಳೆದ ಹತ್ತು ವರ್ಷಗಳಿಂದ ಪರಿಚಯವಿರುವ ಗೆಳೆಯ, ನಾನೇ ಗುರುತಿಸಲಾಗಲಿಲ್ಲವೆಲ್ಲಾ ಎಂದು ಬೇಜಾರಾಯಿತು. ಆ ನಂತರ ಅವನನ್ನು ಆಪ್ತತೆಯಿಂದ ಮಾತನಾಡಲಾರಂಭಿಸಿದೆ. ಈ ಗೆಳೆತನ ನನಗೆ ಹೆಚ್ಚು ಮೇಕಪ್‌ ಮಾಡಲು ಅವನಿಗೆ ಪ್ರೇರಣೆ ಕೊಟ್ಟಿತ್ತು. ಯಾವುದೇ ಪೌಡರ್‌, ಸ್ನೋ ನನ್ನ ಜೀವನದಲ್ಲೇ ನಾನು ಬಳಸಿಲ್ಲ, ಆದರೆ ಇವ ಅದೇನೇನೋ ನನ್ನ ಮುಖಕೆ ಬಳಿದ. ಮೀಸೆ, ಲಿಪ್‌ಸ್ಟಿಕ್‌ ಎಲ್ಲವೂ ಸೇರಿಕೊಂಡಿತು. ಮಿಕ್ಕ ನಟರು "ಅಣ್ಣ ನಿಮ್ಮನು ಗುರುತಿಸಲೇ ಆಗುತ್ತಿಲ್ಲ" ಎಂದಾಗ, ನಾಟಕ ಮುಗಿಯುವವರೆಗೆ ನಾನು ಕನ್ನಡಿಯಲ್ಲಾಗಲಿ, ಮೊಬೈಲಿನಲ್ಲಾಗಲಿ ನನ್ನ ಮುಖವನ್ನು ನೋಡಿಕೊಳ್ಳಬಾರದೆಂದು ನಿರ್ಧರಿಸಿದೆ. ಸಹನಟರು ನನ್ನ ಜೊತೆ ಫೋಟೋಗಳನ್ನು ತೆಗೆಸಿಕೊಂಡರು, ನಾನು ಮಾತ್ರ ಪೋಟೋ ತೋರಿಸಿ ಎಂದು ಕೇಳಲಿಲ್ಲ. ಒಂದಂತು ನಿಜ, ಕಿತ್ತೂರು ರಾಣಿ ಚೆನ್ನಮ್ಮನಿಗಿಂತ ನನ್ನ ವೇಷಭೂಷಣವೇ ಹೆಚ್ಚು ಮೆರಗು ನೀಡುತ್ತಿದೆಯೇನೋ ಎಂಬ ಅನುಮಾನವಂತೂ ಕಾಡಿತ್ತು. ಸುಮಾರು ಸಂಜೆ ಐದು ಗಂಟೆಗೆ ಎಲ್ಲಾ ಪಾತ್ರಧಾರಿಗಳು ಪುಷ್ಪಾಂಜಲಿ ಪಾರ್ಕಿನೊಳಗೆ ಪ್ರವೇಶಿಸಿದೆವು. ನಮ್ಮ ನಾಟಕ ಆರು ಗಂಟೆಗೆ ಆರಂಭ ಎಂದು ತಿಳಿಸಿದ್ದರು. ಪಾರ್ಕಿನ ಒಳಗೆ ಹೋಗುವಾಗ ನನ್ನ ತಂದೆಯ ತಮ್ಮ ಚಿಕ್ಕಪ್ಪ ಅಲ್ಲೇ ಕುಳಿತು ಎಲ್ಲಾ ಪಾತ್ರಧಾರಿಗಳನ್ನು ನೋಡುತ್ತಿದ್ದರು. ನಾನು ಅವರನ್ನು ನೋಡಿ ನಕ್ಕೆ ಆದರೆ ಅವರಿಗೆ ಗುರುತು ಸಿಗಲಿಲ್ಲ ಎಂಬುದು ನನಗೆ ತಿಳಿಯಿತು. ಎಲ್ಲರೂ ವೇದಿಕೆಯ ಹಿಂದಿದ್ದ ಆಸನಗಳಲ್ಲಿ ಕುಳಿತೆವು, ನಮ್ಮ ನಾಟಕದ ಕರೆಗೆ ಕಾದು ಕುಳಿತೆವು. ನಾನು ತಿಲಕ್‌ರಾಜ್ ಅಕ್ಕಪಕ್ಕದಲ್ಲೇ ಕುಳಿತಿದ್ದೇವೆ, ನಾನು ‌ಪ್ರತಿದಿನ ಭೇಟಿಯಾಗುವ ನನ್ನ ಬಾಲ್ಯ ಸ್ನೇಹಿತನೊಬ್ಬ ಅಲ್ಲಿಗೆ ಬಂದ. ಅವನ ಮೂಲಕವೇ ತಿಲಕ್‌ ರಾಜ್‌ ನನಗೆ ಪರಿಚಯವಾಗಿದ್ದದ್ದು. "ಗುರು ಎಲ್ಲಿ? ಅವನು ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ ಎಂದಿದ್ದ" ಎಂದು ಅವನು ತಿಲಕ್‌ ರಾಜ್‌ನನ್ನು ಕೇಳಿದ. ಪಕ್ಕದಲ್ಲೇ ಇದ್ದ ನನ್ನನ್ನು ಅವನು ಗುರುತು ಹಿಡಿದೇ ಇರಲಿಲ್ಲ. ಹೀಗೆ ನಮ್ಮ ಸರದಿಗೆ ಕಾಯುತ್ತಿದ್ದಾಗ ಕೆನ್ನೆಯ ಮೇಲೆ ನವೆಯಾಗಿ ಯಾವುದೋ ಸಮಯದಲ್ಲಿ ತಿಳಿಯದೇ ಕೆರೆದುಕೊಂಡಿದ್ದು, ಮೀಸೆಯ ಆಕಾರವನ್ನೇ ಬದಲಿಸಿತ್ತು. ಇದನ್ನು ಗಮನಿಸಿದ ತಿಲಿಕ್‌ರಾಜ್, ಸ್ವಲ್ಪ ಬೇಜಾರು ಮಾಡಿಕೊಂಡು, ಅಲ್ಲಿಗೇ ಮೇಕಪ್‌ ಕಿಟ್‌ ತರಿಸಿ‌ ಕಷ್ಟ ಪಟ್ಟು ಮೀಸೆ ಸರಿ ಮಾಡಿದ. ಯಾವುದೇ ಕಾರಣಕ್ಕೂ ಏನೇ ನವೆಯಾದರೂ ಕೆರೆದುಕೊಳ್ಳಬಾರದೆಂದು ನಿರ್ಧರಿಸಿ ಕೈಗಳನ್ನು ಬಿಗಿಯಾಗಿ ಕಟ್ಟಿ ಕುಳಿತೆ. ಆರು ಗಂಟೆಗೆ ಆರಂಭವಾಗಬೇಕಿದ್ದ ನಮ್ಮ ನಾಟಕ ರಾತ್ರಿ 8.30ಕ್ಕೆ ಆರಂಭವಾಯಿತು. ಗೆಳೆಯನೊಬ್ಬನಿಗೆ ನಾಟಕದ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲು ತಿಳಿಸಿದ್ದೆ. ನಾಟಕ ಆರಂಭವಾದ ತಕ್ಷಣ ಅವನು ಬ್ಯಾಗಿನಿಂದ ಮೊಬೈಲ್‌ ತೆಗೆದು, ಐಡಿ ಹಾಕಿ ಕ್ಯಾಮೆರಾ ಓಪನ್‌ ಮಾಡುವ ಹೊತ್ತಿಗೆ ನನ್ನ ಪಾತ್ರ ಹಾಗೂ ಸಂಭಾಷಣೆ ಮುಗಿದುಹೋಗಿತ್ತು ಎಂದು ಗೆಳೆಯ ತಿಳಿಸಿದ. ಮೂವತ್ತು ನಿಮಿಷದ ಮೇಕಪ್‌, ಸುಮಾರು ನಾಲ್ಕು ಗಂಟೆ ವೇಷ ಭೂಷಣದ ಜೊತೆ ವೇದಿಕೆ ಹಿಂದೆ ಕಾದಿದ್ದು ಮತ್ತು ವೇದಿಕೆಯ ಮೇಲೆ ಮೂವತ್ತು ಸೆಕೆಂಡ್‌ಗಳ ಪಾತ್ರ. ಆಹಾ! ಹೀಗಿರಬೇಕಲ್ಲವೇ, ಮೊದಲ ಸಲ ಬಣ್ಣ ಹಚ್ಚಿದ ಅನುಭವ. ನೀವೇನಂತೀರಿ?
ಅನಿಸಿಕೆಗಳು