ಅಲ್ಲೊಂದು ಸಾವಾಗಿತ್ತು, ಉಸಿರಿಲ್ಲದ ಶರೀರ ಎಷ್ಟು ಬೇಗ ಪಂಚಭೂತಗಳಿಗೆ ಆಹುತಿಯಾಗುತ್ತದೋ, ಅದು ಆ ಸತ್ತ ವ್ಯಕ್ತಿ ಎಷ್ಟು ಪುಣ್ಯ ಮಾಡಿದ್ದಾನೆ ಎಂದು ನಿರ್ಧರಿಸುತ್ತದೆ. ಇದು ನಾನು ಗ್ರಂಥಗಳಲ್ಲಿ ಓದಿಕೊಂಡಿದ್ದದ್ದು ಮತ್ತು ಹಿರಿಯರಿಂದ ತಿಳಿದುಕೊಂಡದ್ದು. ಆದರೆ ಇಲ್ಲಿ ದಹನ ಕಾರ್ಯ ಅಷ್ಟು ಸುಲಭವಿರಲಿಲ್ಲ. ಮರಣಿಸಿದ್ದ ವ್ಯಕ್ತಿಯ ಆತ್ಮಬಂಧು ವಿದೇಶದಿಂದ ಬರಬೇಕಿತ್ತು. ಗೆಳೆತನ ಬಿಟ್ಟು ಬೇರ್ಯಾವ ಸಂಬಂಧವೂ ಇಲ್ಲದ ಆ ವ್ಯಕ್ತಿಯ ಶೀಘ್ರ ಅಂತ್ಯಕ್ರಿಯೆಯ ಬಗ್ಗೆ ನಾನ್ಯಾಕೆ ತಲೆಕೆಡೆಸಿಕೊಳ್ಳಬೇಕು. ಆದರೆ ಆ ವಿದೇಶದಲ್ಲಿರುವ ಆತ್ಮಬಂಧು ಅವರನ್ನು ಇತ್ತೀಚೆಗಷ್ಟೆ ನೋಡಿದ್ದರೆಲ್ಲ. ಬದುಕಿದ್ದಾಗ ನೋಡಿದಮೇಲೆ ಕಡೆಯ ಮುಖದರ್ಶನದ ಅವಶ್ಯಕತೆಯಾದರೂ ಏನು ಎಂಬುವ ನನ್ನ ವಾದ ಮಾತಾಗಿ ಹೊರಬರದೇ ಮನದಲ್ಲೇ ಉಳಿದುಬಿಟ್ಟಿತು. ಆಸ್ಪತ್ರೆಯ ಫ್ರೀಜರ್‌ನಲ್ಲಿ ಎರಡು ದಿನಕ್ಕೆಂದು ಹೇಳಿ ಮಲಗಿಸಿ ಬಂದೆವು ಆ ಶರೀರವನ್ನು.
ಏನಾಶ್ಚರ್ಯ ಅಲ್ಲವೇ, ಒಂದು ಕಡೆ ಬದುಕಿರುವವರು ಹೇಗಿದ್ದಾರೆ ಎಂದು ವರ್ಷಾನುಗಟ್ಟಲೇ ವಿಚಾರಿಸದವರು ಕಡೆಯ ಮುಖದರ್ಶನ ಮಾಡಬೇಕು, ತಡವಾದರೂ ನಾವು ಬರುತ್ತೇವೆ, ನಮಗಾಗಿ ಕಾಯಿರಿ ಎಂದರೆ ಮತ್ತೊಂದು ಕಡೆ ಹಿಂದಿನ ದಿನವಷ್ಟೇ ಜೀವಂತವಾಗಿದ್ದ ವ್ಯಕ್ತಿಯನ್ನು ನೋಡಿದ್ದವರೂ ತಾವೂ ಕಡೆಯ ಮುಖದರ್ಶನ ಮಾಡಬೇಕೆಂದು ಸಂದೇಶಗಳನ್ನು ಕಳಿಸುತ್ತಾರೆ.
ಒಬ್ಬ ವ್ಯಕ್ತಿ ನಮ್ಮ ಮನದಲ್ಲಿ ಹೇಗೆ ಉಳಿಯಬೇಕೆಂದರೆ, ಅವನೊಂದಿಗೆ ನಾವು ನಕ್ಕು ನಲಿದಿದ್ದ ದಿನಗಳು ನಮ್ಮ ಮನದಲ್ಲಿ ಅಚ್ಚಾಗಿರಬೇಕು, ಇದು ಸಾಕಷ್ಟು ವರ್ಷಗಳಿಂದ ನನ್ನ ವಾದ. ಆ ವಿಷಯ ಇರಲಿ, ಈಗ ಆ ವಿದೇಶದ ಆತ್ಮಬಂಧು ಬಂದಿದ್ದಾಯಿತು. ಅಂತ್ಯಕ್ರಿಯೆಯೂ ಮುಗಿಯಿತು. "ನಿಮ್ಮೊಬ್ಬರಿಗಾಗಿ ಎರಡು ದಿನ ನಾವು ಅಂತ್ಯಕ್ರಿಯೆ ಮುಂದೂಡಬೇಕಾದ ಅವಶ್ಯಕತೆಯಾದರೂ ಇತ್ತೆ?" ಎಂದು ನಾನು ಕೇಳಿದೆ.
ಆ ಪ್ರಶ್ನೆಗೆ ಆ ಆತ್ಮಬಂಧು ಕೊಟ್ಟ ಉತ್ತರ ನನ್ನ ವಾದಕ್ಕೆ ಮತ್ತೊಂದು ದೃಷ್ಠಿಕೋನ ಕೊಟ್ಟು, ನನ್ನ ಇಷ್ಟು ವರ್ಷಗಳ ನಂಬಿಕೆಯನ್ನು ಸಾಕಷ್ಟು ಮಟ್ಟಿಗೆ ನೆಲಸಮ ಮಾಡಿಬಿಟ್ಟಿತು.
"ಸತ್ತವರು ನನ್ನ ಆತ್ಮೀಯ ಬಂಧು, ಅವರ ಜೀವನ ನನ್ನ ಮನಸ್ಸಿನಲ್ಲಿ ಕೊನೆಯಾಗಬೇಕೆಂದರೆ ಅವರ ಅಂತ್ಯಕ್ರಿಯೆ ನಾನು ನೋಡಲೇಬೇಕು. ಇಲ್ಲವಾದರೆ ಪ್ರತಿಸಲ ಅವರನ್ನು ನಾನು ಜ್ಞಾಪಿಸಿಕೊಂಡಾಗ ಅವರು ಬದುಕಿದ್ದಾರೆ ಎಂಬ ನಂಬಿಕೆ ಮನದಲ್ಲಿ ಬಂದು ಅವರು ನಮ್ಮನ್ನು ಭೇಟಿಯಾಗಬಹುದು ಎಂಬ ಭಾವನೆ ಬರುತ್ತದೆ. ಇಂದು ನಾನು ಅವರ ಅಂತ್ಯಕ್ರಿಯೆ ನೋಡಿದ್ದೇನೆ, ಇನ್ನು ಅವರ ಜೀವನದ ಚ್ಯಾಪ್ಟರ್ ನನ್ನ ಮನಸ್ಸಿನಲ್ಲಿ ಅಂತ್ಯಕಂಡಿದೆ".
"ಅಷ್ಟೇ ಅಲ್ಲ, ಅಕಸ್ಮಾತಾಗಿ ಮರಣಹೊಂದಿದವರೂ ನರಳಿ ಸತ್ತಿದ್ದರೂ, ಅಪಘಾತದಲ್ಲಿ ಸತ್ತಿದ್ದರೂ, ನಮ್ಮ ಮನದಲ್ಲಿ ಅವರ ಜೀವನ ನಕ್ಕು ನಲಿದ ದಿನಗಳಿಂದ ಆರಂಭವಾಗಿ ಅಂತ್ಯದ ಆ ಘೋರ ದೃಶ್ಯವನ್ನು ತೋರಿಸಿ, ನೆನಪನ್ನು ಪೂರ್ಣಗೊಳಿಸುತ್ತದೆ" ಇದು ಆ ಆತ್ಮಬಂಧುವಿನ ಉತ್ತರ.
ಹೌದು, ಸಧ್ಯ ನಾನು ನನ್ನ ಹಳೆಯ ವಾದವನ್ನು ಪೂರ್ಣ ತಪ್ಪೆನ್ನುವುದಿಲ್ಲ ಮತ್ತು ಈಗ ಸಿಕ್ಕಿರುವ ಈ ಹೊಸವಾದವನ್ನು ಪೂರ್ಣ ಸರಿ ಎಂದೂ ಹೇಳುವುದಿಲ್ಲ. ಈ ಎರಡು ವಾದಗಳ ತುಲನೆ ನಾನು ಮಾಡಬೇಕಿದೆ.