ಕೋಳಿ ಮೊಟ್ಟೆ ಸಸ್ಯಹಾರವೇ ಮಾಂಸಾಹಾರವೇ? ಅಂತ ಗೆಳೆಯ ವೆಂಕಟೇಶ ನನ್ನನ್ನೊಮ್ಮೆ ಕೇಳಿದ. ಕೋಳಿ ಮೊಟ್ಟೆ ಎಂಬ ಶಬ್ಧ ಬಾಯಲ್ಲಿ ಬಂದರೆ ಸಾಕು, ಮೊದಲು ನೀರಿನಿಂದ ಬಾಯಿ ಮುಕ್ಕಳಿಸಿ ಅಪವಿತ್ರವಾಗಿರುವ ನಾಲಿಗೆಯನ್ನು ಶುಭ್ರಗೊಳಿಸಿಕೊಂಡು ಬಾ ಎಂದು ಬೈಯ್ಯುವ ಹಿರಿಯರಿದ್ದಾರೆ ನಮ್ಮ ಮನೆಯಲ್ಲಿ. ಹಾಗಿರುವಾಗ ಈ ವೆಂಕಟೇಶನದು ಇದೆಂತ ಅಸಂಬದ್ಧ ಪ್ರಶ್ನೆ. ಇರಲಿ ವಿಷಯ ಕೇವಲ ವಾಗ್ವಾದಕ್ಕೆ ತಾನೆ, ಮಾತುಕತೆಯ ನಂತರ ನಾನೇನು ಕೋಳಿ ಮೊಟ್ಟೆ ತಿನ್ನುವ ಹಾಗೇನಿಲ್ಲವಲ್ಲ ಎಂದು ನಿಶ್ಚಯಿಸಿ ಮಾತು ಮುಂದುವರೆಸಿದೆ.
ಹೌದು ಕೋಳಿ ಮೊಟ್ಟೆ ಮಾಂಸಹಾರವೇ ಎಂದೆ.
ಅದು ಹೇಗೆ ಹೇಳುತ್ತಿ ಎಂಬುದು ಅವನ ಮುರು ಪ್ರಶ್ನೆ.
ಕೋಳಿ ಮೊಟ್ಟೆ ತಿನ್ನದೇ ಹಾಗೇ ಬಿಟ್ಟರೆ ಅದು ಕೋಳಿಯಾಗುತ್ತಲ್ಲ. ಮುಂದೆ ಜೀವ ಪಡೆದುಕೊಳ್ಳುವ ಭ್ರೂಣವನ್ನು ನಾವು ಈಗಲೆ ತಿಂದರೆ, ಅದು ಮಾಂಸಹಾರವೇ ಅಲ್ಲವೇ ಎಂಬುದು ನನ್ನ ವಾದ.
ಒಂದು ಕೋಳಿ ಫಾರ್ಮ್‌ನಲ್ಲಿ ಸುಮಾರು ಐದು ಸಾವಿರ ಕೋಳಿಗಳಿರುತ್ತದೆ. ಹಾಗಾದರೆ ಅವರು ಎಷ್ಟು ಹುಂಜ ಸಾಕಿರುತ್ತಾರೆ ಎಂಬುದು ಅವನ ಪ್ರಶ್ನೆ.
ಹುಂಜ ಎಲ್ಲ ಇಲ್ಲ, ಈಗೆಲ್ಲ ವೈಜ್ಞಾನಿಕವಾದ ಕೃತಕ ವಿಧಾನವನ್ನು ಇದಕ್ಕೆಲ್ಲಾ ಬಳಸುತ್ತಿದ್ದಾರೆ ಎಂದೆ ನಾನು.
ಅದೇ ನಿನಗೆ ಗೊತ್ತಿಲ್ಲ, ನೀನು, ಕೋಳಿ ಮತ್ತು ಕೋಳಿಮೊಟ್ಟೆಯ ಬಗ್ಗೆ ಒಂದು ಸ್ವಲ್ಪವೂ ಸರಿಯಾಗಿ ತಿಳಿದುಕೊಂಡಿಲ್ಲ ಎಂಬುದು ಅವನ ವಾದ. ಒಂದು ಕೋಳಿ ಅದಕ್ಕೆ ವಯಸ್ಸು ಹದಿನೆಂಟು ವಾರಗಳು ಆಗುವ ಹೊತ್ತಿಗೆ ದಿನಕ್ಕೊಂದು ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಹೀಗೆ ಮೊಟ್ಟೆ ಇಡುವುದು ಅದಕ್ಕೆ ಸ್ವಾಭಾವಿಕ, ಯಾವುದೇ ಹುಂಜದ ಸಂಪರ್ಕ ಬೇಕಿಲ್ಲ. ಆ ಮೊಟ್ಟೆಗಳಲ್ಲಿ ಹೆಚ್ಚಿನ ಪ್ರೋಟೀನ್ ಇದ್ದು, ಅದು ದೇವರು ಮನಷ್ಯರಿಗಾಗಿಯೇ ಕೊಟ್ಟಿರುವ ಒಂದು ದಿವ್ಯೌಷಧ ಎಂದ ವೆಂಕಟೇಶ.
ನನಗೆ ಆಶ್ಚರ್ಯ, ಹೌದೇ ಎಂದೆ.
ಕೋಳಿ ಫಾರ್ಮ್‌ಗಳಲ್ಲಿ ಇರುವ ಕೋಳಿಗಳು ಹೀಗೆ ದಿನಕ್ಕೊಂದು ಮೊಟ್ಟೆ ಇಡುತ್ತದೆ. ವಯಸ್ಸಾಗುತ್ತಿದ್ದಂತೆ ಅದರ ಜಾತಿಗೆ ತಕ್ಕಂತೆ ಎಂದೋ ಒಂದು ದಿನ ಆ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತದೆ. ಆಗ ಆ ಕೋಳಿಗಳನ್ನು ಮಾಂಸಕ್ಕಾಗಿ ಉಪಯೋಗಿಸಲಾಗುತ್ತದೆ ಮತ್ತು ಹೊಸ ಕೋಳಿಗಳನ್ನು ತರಿಸುತ್ತಾರೆ ಎಂದ ವೆಂಕಟೇಶ.
ಮತ್ತೇ, ಕೋಳಿಗಳು ಹುಟ್ಟುವುದು ಮೊಟ್ಟೆಯಿಂದಲೇ ಎಂದು ನಾನು ಕೇಳಿದ್ದೇನೆಲ್ಲ, ಅಂದೆ ನಾನು.
ಹೌದು, ಯಾವ ಕೋಳಿಯು ಹುಂಜದ ಸಂಪರ್ಕವಾದ ಮೇಲೆ ಮೊಟ್ಟೆ ಇಡುತ್ತದೆಯೋ, ಆ ಮೊಟೆಯನ್ನು ಬಳಕಿನ ಮುಂದಿಟ್ಟುಕೊಂಡು ನೋಡಿದರೆ ಒಂದು ಕಪ್ಪು ಚುಕ್ಕೆ ಕಾಣುತ್ತದೆ. ಆ ಕಪ್ಪು ಚುಕ್ಕೆ ಇರುವ ಮೊಟ್ಟೆಗಳು ಮಾತ್ರ ಮುಂದೆ ಕೋಳಿಯಾಗಬಲ್ಲವು.
ಇದು ನನಗೆ ತಿಳಿದಿರಲಿಲ್ಲ. ನೀನು ತಿಳಿಸಿದ್ದು ಒಳ್ಳೆಯದೇ ಆಯಿತು ಎಂದೆ ನಾನು.
ಕಪ್ಪು ಚುಕ್ಕೆ ಇರುವ ಕೋಳಿಮೊಟ್ಟೆ ಮಾರುವ ಹಾಗಿಲ್ಲ. ಹಾಗೇನಾದರೂ ಕಪ್ಪು ಚುಕ್ಕೆ ಇರುವ ಒಂದು ಕೋಳಿಮೊಟ್ಟೆ ಕೋಳಿ ಫಾರ್ಮ್‌ನಿಂದ ವ್ಯಾಪಾರಕ್ಕೆ ಬಂದರೂ, ಸರ್ಕಾರ ಆ ಕೋಳಿ ಫಾರ್ಮ್‌ನ ಪರವಾನಿಗಿ ರದ್ದು ಮಾಡುತ್ತಾರೆ ಎಂದ ವೆಂಕಟೇಶ. ಈಗ ಹೇಳು, ಕೋಳಿ ಮೊಟ್ಟೆ ಸಸ್ಯಾಹಾರವೇ ಅಥವಾ ಮಾಂಸಹಾರವೇ ಎಂದು ಕೇಳಿದೆ.
ಈಗ ಪೀಕಲಾಟಕ್ಕೆ ಸಿಕ್ಕಿ ಹಾಕಿಕೊಂಡೆ ನಾನು. ಅವನ ಮಾತಿನಲ್ಲಿ ನನಗೆ ಸಂಪೂರ್ಣ ನಂಬಿಕೆ ಇತ್ತು. ಯಾವುದೇ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡ ನಂತರವೇ ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ತೂಕದ ವ್ಯಕ್ತಿ ವೆಂಕಟೇಶ. ಇಷ್ಟೆಲ್ಲಾ ಕತೆ ಕೇಳಿದ ಮೇಲೆ, ನಾನು, ಮೊಟ್ಟೆ ಮಾಂಸಹಾರ ಎನ್ನುವ ಹಾಗಿಲ್ಲ; ಹಾಗಂತ ಸಸ್ಯಹಾರ ಎಂದರೆ, ಸರಿ ಮೊಟ್ಟೆ ತಿನ್ನೋಣ ಬಾ ಎನ್ನುತ್ತಾನೆ ವೆಂಕಟೇಶ.
ನನಗೆ ನೀನು ಹೇಳಿದ್ದರಲ್ಲಿ ನಂಬಿಕೆ ಇಲ್ಲ, ನಾನು ಅಂತರ್ಜಾಲದಲ್ಲಿ ಇದರ ಬಗ್ಗೆ ತಿಳಿದು. ನೀನು ಹೇಳಿದ್ದು ಸರಿ ಎಂದು ಖಾತ್ರಿ ಮಾಡಿಕೊಂಡು ಆಮೇಲೆ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಹೇಳಿ ಬಂದೆ. ಅದಾದ ಮೇಲೆ ಎಲೆಲ್ಲೂ ಕೋರೋನಾ ಶುರುವಾಗಿ ಯಾರು ಯಾರನ್ನೂ ಭೇಟಿಯಾಗದಂತೆ ಮಾಡಿತು. ಈಗ ಕೊರೋನಾ ಮುಗಿದರೆ ಮತ್ತೆ ವೆಂಕಟೇಶನನ್ನು ಭೇಟಿಯಾಗಲೇ ಬೇಕಾಗುತ್ತದೆ. ಮತ್ತೇ ಅವನು ಅದೇ ಪ್ರಶ್ನೆ ಮಾಡುತ್ತಾನೆ. ಏನು ಉತ್ತರ ಕೊಡುವುದು, ದೊಡ್ಡ ಸಮಸ್ಯೆಯಾಗಿದೆ, ನೀವೆನಂತೀರಿ.