ನನ್ನೊಂದಿಗೆ ಫೋಟೋದಲ್ಲಿ ಇರುವ ಈತನೇ ಗುವಾಹತಿಯಲ್ಲಿ ಇರುವಂತಹ ಕಾರ್ ಚಾಲಕ ಭೋಗಾರಾಮ್. ಇವನ ಬಗ್ಗೆ ಈ ವೇದಿಕೆಯಲ್ಲಿ ತಿಳಿಸಲು ಇಷ್ಟಪಡುತ್ತೇನೆ.
ಮಾರ್ಚ್ 30 2019 ರಂದು ಅರುಣಾಚಲ ಪ್ರದೇಶಕ್ಕೆ ಪಕ್ಷಿವೀಕ್ಷಣೆಗೆ ಎಂದು ಹೊರಟಿದ್ದೆವು. ನಾವು ಗುವಾಹಟಿಯಲ್ಲಿ ಒಂದು ದಿನ ತಂಗಿ ಅಲ್ಲಿರುವ ವೀಕ್ಷಣಾ ಸ್ಥಳಗಳನ್ನು ನೋಡಿ ನಂತರ ಅರುಣಾಚಲ ಪ್ರದೇಶಕ್ಕೆ ತೆರಳುವುದು ಎಂದು ನಿರ್ಧರಿಸಿದೆವು.ವಿಮಾನ ನಿಲ್ದಾಣದಲ್ಲಿ ನಾವು ಎಂಟು ಗಂಟೆ ಹಾಗೂ 80 ಕಿಲೋಮೀಟರ್ ಮಿತಿಯಲ್ಲಿ ದೊರೆಯುವ ಕಾರನ್ನು ಬುಕ್ ಮಾಡಿದೆವು. ಎಷ್ಟು ಹೊತ್ತಾದರೂ ಕಾರ್ ಚಾಲಕ ಬರಲೇ ಇಲ್ಲ. ನಾನು ನನ್ನ ಮೊಬೈಲ್ ನಿಂದ ಚಾಲಕನಿಗೆ ಫೋನ್ ಮಾಡಿದೆ. ನೀವು ನಗದು ಕೊಡುವುದಾದರೆ ನಾನು ಬರುತ್ತೇನೆ, ಬ್ಯಾಂಕ್ ಮೂಲಕ ನಗದು ವರ್ಗಾವಣೆ ಹಾಕಿದ್ದರೆ ನಾನು ಬರುವುದಿಲ್ಲ ಎಂದ. ನಾನು ಬುಕ್ ಮಾಡಿದ ಕಾರನ್ನು ಕ್ಯಾನ್ಸಲ್ ಮಾಡಿದೆ.
ನಂತರ ಆ ಕಾರ್ ಚಾಲಕನ ಫೋನ್ ನನಗೆ ಬಂತು ಆತ ನೀವು ಎಲ್ಲಿದ್ದೀರಾ ಅಲ್ಲೇ ಇರಿ ನಾನು ಬರುತ್ತೇನೆ ಎಂದ. ನಾನು ಆಗಲೇ ಓಲಾ ಕ್ಯಾಬ್ ಕ್ಯಾನ್ಸಲ್ ಮಾಡಿ ಆಗಿದೆ ಎಂದು ಹೇಳಿದೆ. ಅದಕ್ಕೆ ಅವನು ಪರವಾಗಿಲ್ಲ ಅದೇ ಬೆಲೆಯಲ್ಲಿ ತಾನು ಬರುತ್ತೇನೆ ಎಂದ. ಸರಿ ಅವನಿಗಾಗಿ ಕಾದೆವು. ಐದು ನಿಮಿಷದ ನಂತರ ಅವನು ನಾವಿದ್ದಲ್ಲಿಗೆ ಬಂದ. ಈ ಸಂಭಾಷಣೆಯಲ್ಲಿ ನಡೆದದ್ದು ಹಿಂದಿ ಭಾಷೆಯಲ್ಲಿ. ಅವನು ನಿರ್ಧಾರ ಬದಲಿಸಲು ಕಾರಣವೇನೆಂದು ನಾನು ಕೇಳಿದೆ. ಅದಕ್ಕೆ ಅವನು ಟ್ರೂಕಾಲರ್ ಅಲ್ಲಿ ನಿಮ್ಮ ಫೋನ್ ನಂಬರ್ ಬೆಂಗಳೂರಿನದ್ದು ಎಂದು ಬಂದಿತ್ತು, ಅದಕ್ಕಾಗಿ ನಾನು ಹುಡುಕಿಕೊಂಡು ಬಂದೆ ಎಂದ. ಅವನು ಬಂದೊಡನೆ ನಮಗೆ ಆಶ್ಚರ್ಯವಾಗುವಂತೆ ಶುದ್ಧ ಕನ್ನಡದಲ್ಲಿ ಮಾತನಾಡಲು ಪ್ರಾರಂಬಿಸಿದ. ಈ ಕಾರು ಚಾಲಕನ ಹೆಸರೇ ಭೋಗಾರಾಮ್.
ಮುಖ ಚಹರೆ ನೋಡಿದರೆ ಅವನು ಉತ್ತರ ಪೂರ್ವ ಭಾರತಕ್ಕೆ ಸೇರಿದವನೆಂದು ಗೊತ್ತಾಗುತ್ತಿತ್ತು. ಆದರೆ ಅವನ ಕನ್ನಡ ಭಾಷೆ ತುಂಬಾ ಸ್ಪಷ್ಟವಾಗಿತ್ತು. ಹೇಗೆ ಕನ್ನಡ ಮಾತನಾಡಲು ಕಲಿತೆ ಎಂದು ನಾನು ಕೇಳಿದಾಗ, ಅವನು ಎಂಟು ವರ್ಷ ಬೆಂಗಳೂರಿನಲ್ಲಿ 6 ಕನ್ನಡಿಗರ ಸಂಸಾರ ನೆಲೆಸಿದ್ದ ಅಪಾರ್ಟ್‍ಮೆಂಟಿನಲ್ಲಿ ವಾಚ್‍ಮ್ಯಾನ್ ಆಗಿ ಹಾಗೂ ಓಲಾ ಕಂಪನಿಯಲ್ಲಿ ಎರಡು ವರ್ಷ ಚಾಲಕನಾಗಿ ಕೆಲಸ ಮಾಡಿದ್ದನಂತೆ. ಆದರೆ ಅವನ ಕನ್ನಡ ಭಾಷೆಯ ಸ್ಪಷ್ಟತೆ ಕನ್ನಡಿಗರೆಂದು ಹೇಳಿಕೊಳ್ಳುವ ಬೆಂಗಳೂರಿನ ಹಲವರಿಗಿಂತಲೂ ಚೆನ್ನಾಗಿತ್ತು.
ಆರು ತಿಂಗಳಿಗೆ ಮುಂಚೆ ಬೆಂಗಳೂರಿನಿಂದ ಗುವಾಹತಿಗೆ ವಾಪಸ್ಸಾಗಿದ್ದಾನಂತೆ. ಮದುವೆ ಮಾಡಿಕೊಂಡು ಎರಡು ವರ್ಷದ ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಬರುತ್ತಾನಂತೆ.
ಆರು ತಿಂಗಳಾಗಿದೆ ನಾನು ಕನ್ನಡದಲ್ಲಿ ಮಾತನಾಡಿಲ್ಲ. ಆದ್ದರಿಂದ ದಯವಿಟ್ಟು ನೀವು ಕನ್ನಡದಲ್ಲೇ ಮಾತನಾಡಬೇಕು ಎಂದು ಹೇಳಿದ. ನಮಗೂ ಸಂತೋಷವಾಯಿತು. ಪ್ರತಿಯೊಂದು ವೀಕ್ಷಣಾ ಸ್ಥಳಕ್ಕೆ ಆಸಕ್ತಿಯಿಂದ ನಮ್ಮನ್ನು ಕರೆದುಕೊಂಡು ಹೋದ. ದಿನದ ಕೊನೆಯಲ್ಲಿ ಹಣ ಕೊಡಲು ಹೋದಾಗ ಮಾತನಾಡಿದ್ದಕ್ಕಿಂತ ಕಮ್ಮಿ ಹಣ ಕೊಡಿ ಪರವಾಗಿಲ್ಲ ಎಂದ. ಆದರೆ ನನಗೆ ಮನಸ್ಸು ಬರಲಿಲ್ಲ . ಅವನು ಹೇಳಿದ್ದ ಸಾವಿರದ ಆರುನೂರು ರೂಪಾಯಿಗೆ ಇನ್ನೂ ನೂರು ರೂಪಾಯಿ ಸೇರಿಸಿಕೊಟ್ಟೆ. ನೂರು ರೂಪಾಯಿ ಹೆಚ್ಚಿಗೆ ಏಕೆ ಕೊಟ್ಟದ್ದು ಎಂದು ಕೇಳಿದ. ಅದಕ್ಕೆ ನಾನು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಿ ನಮ್ಮನ್ನು ಸಂತೋಷ ಪಡಿಸಿದ್ದೀಯ. ಹಾಗಾಗಿ ಇದನ್ನು ಕೊಟ್ಟಿದ್ದೇನೆ ಎಂದೆ.
ನಂತರ ನಾವು ಅರುಣಾಚಲ ಪ್ರದೇಶಕ್ಕೆ ಹೋಗುತ್ತಿದ್ದೇವೆ. ವಾಪಸ್ ಆಗುವುದು ಮುಂದಿನ ಶನಿವಾರ. ಭಾನುವಾರ ಬೆಳಗ್ಗೆ ನನಗೆ ವಿಮಾನ ನಿಲ್ದಾಣಕ್ಕೆ ಹೋಗುವುದಕ್ಕಾಗಿ ಕಾರ್ ಬೇಕಾಗುತ್ತದೆ. ನಾನು ನಿನಗೆ ತಿಳಿಸುತ್ತೇನೆ. ಬರಬೇಕು ಎಂದೆ. ಸಂತೋಷದಿಂದ ಒಪ್ಪಿದ.
ಶನಿವಾರ ನಾವು ಗುವಾಹತಿಗೆ ಬಂದಿದ್ದೆವು ನಾನು ಫೋನ್ ಮಾಡಿದ ತಕ್ಷಣ ಭೋಗಾರಾಮ್ ಕನ್ನಡದಲ್ಲಿ ಮಾತನಾಡುತ್ತಾ ಪ್ರಯಾಣ ಹೇಗಾಯಿತು ಎಂದು ವಿಚಾರಿಸಿದ. ಎಲ್ಲಾ ಚೆನ್ನಾಗಿ ಆಯಿತು ಎಂದೆ. ಮಾರನೇ ದಿನ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಹೋಗಲು ಕಾರ್ ತೆಗೆದುಕೊಂಡು ಬರಲು ತಿಳಿಸಿದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಸ್ಟೇಟ್ ಬ್ಯಾಂಕ್ ಹಾಲಿಡೇ ಹೋಮ್ ಹತ್ತಿರ ಬಂದಿದ್ದ ಭೋಗಾರಾಮ್. ಕನ್ನಡದಲ್ಲಿ ಮಾತನಾಡಿಕೊಂಡು ವಿಮಾನ ನಿಲ್ದಾಣಕ್ಕೆ ಹೊರಟೆವು. ವಿಮಾನ ನಿಲ್ದಾಣ ತಲುಪಿದಾಗ ಎಷ್ಟು ಹಣ ಕೊಡಬೇಕು ಎಂದು ಕೇಳಿದೆ. ನನಗೆ ನಿಮ್ಮೊಂದಿಗೆ ಕನ್ನಡ ಮಾತನಾಡಿ ಬಹಳ ಸಂತೋಷವಾಗಿದೆ, ನನಗೆ ಹಣವೇನೂ ಬೇಡ ಎಂದ. ನಾನು ಒಪ್ಪಲಿಲ್ಲ. ನಾನು ಬಲವಂತ ಮಾಡಿದಾಗ ಅವನು 600 ರೂಪಾಯಿ ಕೊಡಿ ಎಂದ. ಹಣ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೂ ಅವನು ಸ್ವೀಕರಿಸುವಂತೆ ನಾನು ಬಲವಂತ ಮಾಡಿದ್ದೆ.
ಮುಂದಿನ ಸಲ ನೀವು ಗುವಾಹತಿಗೆ ಬಂದರೆ ಗೆಸ್ಟ್ ಹೌಸ್ ಗೆ ಹೋಗಬೇಡಿ. ನನ್ನ ಮನೆಯಲ್ಲಿ ನಾನು ಮತ್ತೆ ನನ್ನ ಅಮ್ಮ ಇಬ್ಬರೇ ಇರುವುದು. ನಮ್ಮ ಮನೆಗೆ ಬಂದಿರಬಹುದು ಎಂದ. ಬಹುಷಃ ಕನ್ನಡ ಭಾಷೆಯ ಜೊತೆಗೆ ಕನ್ನಡಿಗರ ಉಪಚಾರವನ್ನು ಕಲಿತುಕೊಂಡಿದ್ದಾನೆ ಎಂದು ನನಗೆ ಆಗ ಅರ್ಥವಾಯಿತು.
ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳವರೆಗೆ ಬೆಂಗಳೂರಿನಲ್ಲೇ ಇದ್ದು ಎಷ್ಟೋ ಜನ ಕೇವಲ ಒಂದು ಪದ ಕನ್ನಡವನ್ನು ಕಲಿತಿರುವುದಿಲ್ಲ. ಹಾಗಿದ್ದಾಗ ಹತ್ತು ವರ್ಷದಲ್ಲಿ ಕನ್ನಡ ಭಾಷೆಯನ್ನು ಕಲಿತು ಕನ್ನಡ ಭಾಷೆ ಸುಲಭ ಅದನ್ನು ನನಗೆ ಮಾತನಾಡಲು ತುಂಬಾ ಇಷ್ಟ ಎಂದು ಹೇಳಿದ ಈ ಭೋಗಾರಾಮ್ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ವ್ಯಕ್ತಿ.
ನಿಮ್ಮಲ್ಲಿ ಯಾರಾದರೂ ಗುವಹಾತಿಗೆ ಹೋದರೆ ದಯವಿಟ್ಟು ಕಾರ್ ಸೇವೆಗಾಗಿ ಭೋಗಾರಾಮನನ್ನು ಸಂಪರ್ಕಿಸುವುದು ಮರೆಯಬೇಡಿ. ಭೋಗಾರಾಮ್ ಮೊಬೈಲ್ ಸಂಖ್ಯೆಗಾಗಿ ನನ್ನನ್ನು ಸಂಪರ್ಕಿಸಬಹುದು.