ಗುರುರಾಜ
ಶಾಸ್ತ್ರಿ
ಶನಿಕಾಟ
24-07-2021
ಅಂದು ಜೂನ್‌ 2017, ಗೆಳೆಯ ರಾಜು ಮನೆಗೆ ಹೋಗಿದ್ದೆ. ರಾಜು ತಂದೆ ಸೂರ್ಯನಾರಾಯಣರವರು ಒಳ್ಳೆಯ ಜಾತಕ ಪಂಡಿತರು. ಅವರದು ಮತ್ತೆ ನನ್ನದು ಒಂದೇ ನಕ್ಷತ್ರ ಮತ್ತು ಒಂದೇ ರಾಶಿ. ಆದರೆ ನನಗೆ ಈ ಭವಿಷ್ಯ, ಜ್ಯೋತಿಷ್ಯ ಇದರಲ್ಲಿ ನಂಬಿಕೆ ಇಲ್ಲವೇ ಇಲ್ಲ. ಅದು ಅವರಿಗೂ ಗೊತ್ತಿತ್ತು. ಆದರೂ ಅವರು ನನ್ನೊಂದಿಗೆ ನಮ್ಮ ಮುಂದಿನ ಆಗುಹೋಗುಗಳನ್ನು ಸದಾ ಚರ್ಚಿಸುತ್ತಿದ್ದರು. ಅಂದು ಅವರು, ಗುರು, ಇನ್ನು 15 ದಿನಕ್ಕೆ ನಮ್ಮಿಬ್ಬರಿಗೆ 7 ವರ್ಷದ ಶನಿ ಕಾಟ ಪ್ರಾರಂಭವಾಗುತ್ತದೆ. ಅದರಲ್ಲೂ ನಿನಗೆ ತುಂಬಾ ತೊಂದರೆಯಾಗುವ ಸಾಧ್ಯತೆ ಇದೆ ಎಂದರು. ಸಾಮಾನ್ಯವಾಗಿ ಎಲ್ಲವನ್ನೂ ತಮಾಷೆಗೆ ತೆಗೆದುಕೊಳ್ಳುವ ನಾನು, ಈ ಶನಿಕಾಟದಿದ ಏನೇನಾಗಬಹುದು ಎಂದೆ. ಆಗ ಅವರು ಮೊದಲು ನಿನಗೆ ವರ್ಗಾವಣೆಯಾಗುತ್ತದೆ, ತುಂಬಾ ಕೊಳಕು ಜಾಗಕ್ಕೆ ನಿನ್ನನ್ನು ಶನಿ ಹೋಗುವಂತೆ ಮಾಡುತ್ತಾನೆ, ನಂತರ ಪೋಲಿಸರಿಂದ ಅರೆಷ್ಟ್‌ ಆಗುತ್ತೀಯ, ಕೋರ್ಟ್‌ ಮೆಟ್ಟಲು ಹತ್ತುತ್ತೀಯ ಎಂದೆಲ್ಲ ಹೇಳಿದರು. ನಿನಗೆ ಎಷ್ಟು ತೊಂದರೆ ಕೊಡಬೇಕೋ ಅಷ್ಟೆಲ್ಲಾ ಕೊಟ್ಟು, ಕಡೆಯಲ್ಲಿ ಬಿಟ್ಟು ಹೋಗುವಾಗ ಈಗಿರುವ ಸ್ಥಿತಿಗಿಂತ ಉತ್ತಮ ಸ್ಥತಿಯಲ್ಲಿ ನಿನ್ನನ್ನು ಬಿಟ್ಟು ಹೋಗುತ್ತಾನೆ ಎಂದರು. ನಾನು ನಗುತ್ತಾ ಅವರಿಗೆ ತಿಳಿಸಿದೆ, ಈಗ 6 ತಿಂಗಳಿಗೆ ಮುಂಚೆ ಬ್ಯಾಂಕಿನ ಹೆಚ್ ಆರ್‌ ಎಂ ಎಸ್‌ ವಿಭಾಗಕ್ಕೆ ವೃತ್ತದ ಮೊದಲ ಅಧಿಕಾರಿಯಾಗಿ ನಾನು ನೇಮಕ ಗೊಂಡಿರುವೆ. ಹಾಗಾಗಿ ಇನ್ನೂ 5 ವರ್ಷ‌ ವರ್ಗಾವಣೆ ಇಲ್ಲವೆಂದು ಮ್ಯಾನೇಜ್‌ಮೆಂಟ್ ನನಗೆ ಹೇಳಿದ್ದಾರೆ. ಹಾಗಾಗಿ ವರ್ಗಾವಣೆ ಮಾತು ಮರೆತುಬಿಡಿ ಎಂದೆ. ನಾನು ಸಧ್ಯ ಮಾಡುತ್ತಿರುವ ಕೆಲಸ ಕೇವಲ ಮಾಹಿತಿ ಕಲೆಹಾಕುವುದಾದ್ದರಿಂದ, ಇಲ್ಲಿ ಪೋಲೀಸ್‌, ಕೋರ್ಟ ಯಾವುದೇ ಸಮಸ್ಯೆ ಬರುವುದಿಲ್ಲ ಎಂದೆ. ಮತ್ತೆ ಈಗಿರುವ ನನ್ನ ಹುದ್ದೆಗಿಂತ ಮಿಗಿಲಾದ್ದ ಯಾವುದೇ ಸ್ಥಿತಿಗೆ ನಾನು ಅರ್ಹನಲ್ಲ ಎಂದೆ. ನಾನು ನಗುತ್ತಲಿದ್ದೆ, ಅವರು ನಕ್ಕರು. ಅದಾದ ಒಂದು ವಾರಕ್ಕೆ, ಪ್ರೊಬೇಷನರಿ ಆಫೀಸರ್‌ ಪರೀಕ್ಷೆ ಬಂತು. ಅಂದು ಭಾನುವಾರ. ಹೆಚ್. ಆರ್. ವಿಭಾಗದ ಎಲ್ಲರಿಗೂ ಸ್ಥಳೀಯ ಪ್ರಧಾನ ಕಛೇರಿಯ ಕಂಟ್ರೋಲ್‌ ರೂಮಿನಲ್ಲಿ ಕೆಲಸ ಮಾಡಲು ಹೇಳಿದರು. ಮಧ್ಯಾಹ್ನ 1 ಗಂಟೆಗೆ ಕೆಲಸ ಮುಗಿಯಿತು. ಎಲ್ಲರೂ ಊಟಕ್ಕೆ ಹೋದೆವು. ಆಗ ಹೆಚ್. ಆರ್‌ ವಿಭಾಗದ ಮುಖ್ಯಸ್ಥರು ನನ್ನ ಬಳಿ ಬಂದು ಊಟ ಮಾಡುತ್ತಾ, ಗುರು, ನೀನು ಆಫಿಸರ್‌ ಆದಾಗಿನಿಂದ ಬೆಂಗಳೂರಿನಲ್ಲೇ ಇರುವುದು ಸಾಕಷ್ಟು ಜನರ ಕಣ್ಣು ಕೆಂಪು ಮಾಡಿದೆ. ಅಷ್ಟೇ ಅಲ್ಲದೆ ನಿನ್ನನ್ನೂ ನಮ್ಮಲ್ಲೇ ಇಟ್ಟುಕೊಂಡಿರುವುದು ನಮ್ಮ ವಿಭಾಗಕ್ಕೆ ಅಪವಾದ ಬಂದಿದೆ. ಮುಂದಿನ ವಾರ ನಿನ್ನನ್ನು ನಾವು ಉತ್ತರ ಕರ್ನಾಟಕಕ್ಕೆ ವರ್ಗಾವಣೆ ಮಾಡುತ್ತಿದ್ದೇವೆ ಎಂದರು. ತಕ್ಷಣ ಙ್ಯಾಪಕಕ್ಕೆ ಬಂದು ಸೂರ್ಯನಾರಾಯಣರ ಮಾತುಗಳು. ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು, ಯೋಚಿಸಬೇಡ, ಏನು ಆಗಬೇಕೆಂದಿದೆಯೋ ಅದು ಆಗಲೇ ಬೇಕು. ದಿನಾ ಹನುಮಾನ್‌ ಚಾಲೀಸಾ ಪಠಿಸುವುದು ಮರೆಯಬೇಡ ಎಂದರು. ವರ್ಗಾವಣೆ ಆಯಿತು. ಹುಬ್ಬಳ್ಳಿಗೆ ಹೋದರೆ ಅಲ್ಲಿ ಯಾವ ಶಾಖೆಗೆ ನಾನು ಹೋಗಬೇಕೆಂದು ನಿರ್ಧರಿಸುತ್ತಾರೆ ಎಂದರು. ಹುಬ್ಬಳ್ಳಿಯಲ್ಲಿ ನನಗೆ ಆರ ಎ ಸಿ ಪಿ ಸಿ ಬೆಳಗಾವಿಗೆ ವರ್ಗಾವಣೆ ಮಾಡಿದರು. ಬೆಳಗಾವಿಯಲ್ಲಿ ಗೆಳೆಯನ ಮನೆಯಲ್ಲೇ ಉಳಿದುಕೊಂಡೆ. ಗೆಳೆಯನು ಒಬ್ಬನೇ ಇದ್ದದ್ದರಿಂದ ಬ್ಯಾಂಕಿನಿಂದ ಕೊಟ್ಟ ಮನೆ ಇಬ್ಬರಗೆ ದೊಡ್ಡದೇ ಆಗಿತ್ತು. ವರ್ಗಾವಣೆಯಿಂದಾಗಿ ಶನಿ ಕಾಟದ ಮೇಲೆ ನನಗೆ ಸ್ವಲ್ಪ ನಂಬಿಕೆ ಬಂದಿತ್ತು. ಆದರೂ ಸೂರ್ಯನಾರಾಯಣರು ಹೇಳಿದ್ದು ಕೊಳಕು ಜಾಗಕ್ಕ ಹೋಗುತ್ತೇನೆ ಎಂದು, ಆದರೆ ಬೆಳಗಾವಿ ಬೆಂಗಳೂರಿಗಿಂತ ಸ್ವಚ್ಛವಾಗಿರುವ ನಗರ. ಎರಡು ತಿಂಗಳಲ್ಲಿ ಬೆಳಗಾವಿಯ ಆರ ಎ ಸಿ ಪಿ ಸಿ ಯಲ್ಲಿ ಒಳ್ಳೇ ಹೆಸರು ಮಾಡಿದೆ. ನನ್ನ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ವಿದ್ಯೆ ಮಿಕ್ಕೆಲ್ಲಾ ಅಧಿಕಾರಿಗಳಿಗೆ ಆಶ್ಚರ್ಯ ತಂದಿತ್ತು ಎಂದರೆ ಉತ್ಪ್ರೇಕ್ಷೆ ಏನಿಲ್ಲ. ಅದೊಂದು ಮಧ್ಯಾಹ್ನ ಆರ ಎ ಸಿ ಪಿ ಸಿ ಮುಖ್ಯಸ್ಥರು ನನ್ನನ್ನು ಕರೆದು ಹುಬ್ಬಳ್ಳಿ ಕಛೇರಿಯಿಂದ ಬಂದಿರುವ ಒಂದು ಫ್ಯಾಕ್ಸನ್ನು ತೋರಿಸಿದರು. ನನಗೆ ಲಖನಗಾಂ ಎಂಬ ಹಳ್ಳಿಗೆ ವರ್ಗಾವಣೆಯಾಗಿರುವ ವಿಷಯ ಆ ಪತ್ರದಲ್ಲಿತ್ತು ಮತ್ತು ಕೂಡಲೆ ವರ್ಗಾವಣೆ ಮಾಡಬೇಕೆಂದಿತ್ತು. ನಾನು ಅಧಿಕಾರಿ ಎಂಬುದನ್ನು ಮರೆತು ಅಳಲು ಪ್ರಾರಂಭಿಸಿದೆ. ಕಾರಣ, ನಾವೆಲ್ಲಾ ಹುಡುಗಾಟಕ್ಕೆ ಬೇರೆ ಅಧಿಕಾರಿಗಳಿಗೆ "ನೋಡಿ ಜಾಸ್ತಿ ಗಲಾಟೆ ಮಾಡಿದರೆ, ಲಖನಗಾಂ ಅಥವಾ ಲಾಡವಂತಿಗೆ ಶಾಖೆಗೆ ವರ್ಗಾವಣೆ ಮಾಡಿಬಿಡುತ್ತಾರೆ" ಅಂತ ತಮಾಷೆ ಮಾಡುತ್ತಿದ್ದೆವು. ಆದರೆ ಈಗ ನನಗೆ ನಿಜವಾಗಿಯೂ ವರ್ಗಾವಣೆ ಆಗಿತ್ತು. ಅಷ್ಟರಲ್ಲಿ ಚೆನ್ನೈನಲ್ಲಿ ಎಲ್ ಸಿ ಪಿ ಸಿ ಎಂಬ ಬ್ಯಾಂಕಿನ ಹೊಸ ವಿಭಾಗವು ಪ್ರಾರಂಭವಾಗಿದ್ದು, ಅಲ್ಲಿಗೆ ಹೋಗಲು ಇಚ್ಛಿಸುವ ಅಧಿಕಾರಿಗಳು ಅರ್ಜಿ ಹಾಕಬಹುದು ಎಂದರು. ಅಂದಿನ ಆರ ಎ ಸಿ ಪಿ ಸಿ ಮುಖ್ಯಸ್ತರು ಅರ್ಜಿ ಹಾಕಲು ಹೇಳಿದರು. ಅವರ ಉದ್ದೇಶ ಇಷ್ಟೇ, ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕಲಿತಿದ್ದ ನನ್ನ ವಿದ್ಯೆ ಯಾವುದೋ ಉತ್ತರ ಕರ್ನಾಟಕದ ಹಳ್ಳಿಯಲ್ಲಿ ನಿರುಪಯುಕ್ತವಾಗಬಾರದು ಎಂದು. ಆದರೆ ಚೆನ್ನೈ ವರ್ಗಾವಣೆ ಇನ್ನೂ ಹೆಚ್ಚು ದಿನವಾಗುವುದರಿಂದ, ನಾನು ಲಖನಗಾಂ ಗೆ ಹೋಗಬೇಕಾದ್ದು ನಿಶ್ಚಯಯವಾಯಿತು. ಸೂರ್ಯನಾರಾಯಣರು ನೆನಪು ಬಹಳವಾಯಿತು. ಲಖನ್‌ಗಾಂ ಒಂದು ಚಿಕ್ಕ ಹಳ್ಳಿ. ಅಲ್ಲಿನ ಬ್ಯಾಂಕ್ ಅಧಿಕಾರಿಗಳು 25 ಕಿ ಮೀ ದೂರದ ಭಾಲ್ಕಿಯಲ್ಲಿ ಉಳಿದುಕೊಳ್ಳಬೇಕಿತ್ತು. ನಾನು ಲಖನ್‌ಗಾಂ ಶಾಖಾ ವ್ಯವಸ್ಥಾಪಕರಾದ ನಾರಾಯಣಮೂರ್ತಿಯವರಿಗೆ ಫೋನ್‌ ಮಾಡಿದೆ. ಒಂದು ವಾರ ರಜೆ ತೆಗೆದುಕೊಂಡು ಮುಂದಿನ ಸೋಮವಾರ ಶಾಖೆಗೆ ಬರುತ್ತೇನೆ ಎಂದು ಹೇಳಿದೆ. ಅಷ್ಟರಲ್ಲಿ ಇನ್ಫೋಸಿಸ್‌ ಕಂಪನಿಯಲ್ಲಿ ಬ್ಯಾಂಕ್‌ ಅಧಿಕಾರಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಯಿತು. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನ ಮೂಲಕ ಅರ್ಜಿ ಹಾಕಿದೆ. ಸಂದರ್ಶನ ಚೆನ್ನಾಗಿಯೇ ಆಯಿತು. ಆದರೆ ಅವರು ಆ ಹುದ್ದೆಗೆ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳು ಬೇಕೆಂದು ನನ್ನ ಅರ್ಜಿಯನ್ನು ತಿರಸ್ಕರಿಸಿದರು. ಯಾರಿಗೂ ದೂಡುವ ಹಾಗಿರಲಿಲ್ಲ. ಕಾಣದ ಕೈ ಒಂದು ತನ್ನ ಆಟವನ್ನು ಆಡಿಸುತ್ತಿದ್ದೆ ಎಂಬುದು ಧೃಡವಾಗಿ ಮನದಟ್ಟಾಗಿತ್ತು. ಮುಂದಿನ ಸೋಮವಾರ ಭಾಲ್ಕಿಯಲ್ಲಿ ಇಳಿದೆ. ಬಸ್‌ ಸ್ಟಾಂಡ್‌ ಗೆ ನಾರಾಯಣ ಮೂರ್ತಿ ಬಂದಿದ್ದರು. ಅವರು ಒಂದು ರೂಮಿಗೆ ನನ್ನನ್ನು ಕರೆದುಕೊಂಡುಹೋದರು. ಆ ರೂಮಿನಲ್ಲಿ ಬ್ಯಾಂಕಿನ ಮೂರು ಜನ ಇದ್ದರು, ಈಗ ಒಬ್ಬರು ವರ್ಗಾವಣೆಯಾಗಿರುವುದರಿಂದ ಅವರ ಜಾಗಕ್ಕೆ ನಾನು ಬಂದಿರುವುದು ಎಂದು ತಿಳಿಸಿದರು. ಮತ್ತಿಬ್ಬರು, ಸೋಮವಾರವಾದ್ದರಿಂದ ಅವರ ಊರಿನಿಂದ ನೇರವಾಗೆ ಭಾಲ್ಕಿ ಶಾಖೆಗೆ ಹೋಗಿ ಸಂಜೆ ನಿಮಗೆ ಸಿಗುತ್ತಾರೆ ಎಂದರು. ರೂಮಿನ ಕೀಯನ್ನು ನನಗೆ ಕೊಟ್ಟು ಅರ್ಧ ಗಂಟೆಯಲ್ಲಿ ತಯಾರಾಗಲು ಹೇಳಿ, ಅವರ ಮನಗೆ ತಿಂಡಿಗೆ ಆಹ್ವಾನಿಸಿ ಅವರು ತೆರಳಿದರು. ರೂಮಿನ ಒಳಗೆ ಹೋದೆ. ಎಲ್ಲೆಲ್ಲೂ ಜೇಡ ಕಟ್ಟಿದೆ. ಎಷ್ಟೋ ವರ್ಷದ ತ್ಯಾವದಿಂದ ಗಪ್ಪೆನ್ನುವ ದುರ್ವಾಸನೆ. ಸ್ನಾನ ಮಾಡೋಣವೆಂದು ಬಚ್ಚಲುಮನೆಗೆ ಹೋದೆ. ಅಲ್ಲಿ ನನಗೆ ಕಂಡದ್ದು ಸುಮಾರು 50 ಟೂತ್ಬ್ರಷ್‌ಗಳು, 50 ಸೋಪ್‌ ಬಾಕ್ಸಗಳು ಉಪಯೋಗಿಸಿದ ಸೋಪ್‌ಗಳೊಂದಿಗೆ, ತಳ ಕಪ್ಪು ಹಿಡಿದಿದ್ದ ಬಕೆಟ್‌ ಹಾಗೂ ನೀರಿನ ಮಗ್. ಒಮ್ಮೆಲೇ ಜೋರಾಗಿ ಅತ್ತೆ. ಶನಿಕಾಟ ಎಷ್ಟು ಪ್ರಭಾವ ಬೀರುತ್ತದೆಂದು ನನಗೆ ಅರ್ಥವಾಯಿತು. ಸುಮಾರು 10 ವರ್ಷದಿಂದ ಇಲ್ಲಿ ತಂಗಿದ್ದ ಎಲ್ಲಾ ಅಧಿಕಾರಿಗಳ ಸೋಪ್‌, ಪಂಚೆ, ಟವಲ್‌, ಟೂತ್‌ಬ್ರಷ್‌ ಯಾವುದೂ ಜಾಗ ಬಿಟ್ಟು ಅಲ್ಲಾಡಿರಲಿಲ್ಲ. ಹೇಗೋ ಕಷ್ಟ ಪಟ್ಟು ಸ್ನಾನ ಮಾಡಿ, ನಾರಾಯಣ ಮೂರ್ತಿಯ ಮನೆಗೆ ಹೋಗಿ ತಿಂಡಿ ತಿಂದು ಅವರ ಗಾಡಿಯಲ್ಲೇ ಶಾಖೆಗೆ ಹೊರಟೆ. ಮನಸ್ಸಿನಲ್ಲಿ ಶನಿಕಾಟದ ಪೋಲಿಸ್‌ ಅರೆಷ್ಟ ಮತ್ತು ಕೋರ್ಟ ಮೆಟ್ಟಲೇರುವುದರ ಬಗ್ಗೆ ಙ್ಯಾಪಿಸಿಕೊಂಡು ಭಯಪಟ್ಟೆ. ಸಂಜೆ ಶಾಖೆಯಿಂದ ಬೇಗ ಬಂದು, ಒಂದು ಹೊಸ ಬಕೆಟ್‌, ಹೊಸ ಮಗ್‌, ಹೊಸ ಟ್ಯೂಬ್‌ ಲೈಟ ಎಲ್ಲಾ ತಂದೆ. ರಾತ್ತಿ ರೂಮಿನಲ್ಲಿ ತಂಗುವ ಇನ್ನಿಬ್ಬರು ಬಂದರು. ಅದರಲ್ಲಿ ಒಬ್ಬನು ಚೆನ್ನಾಗಿ ಹೆಂಡ ಸೇವನೆ ಮಾಡಿದ್ದ, ಮತ್ತೊಬ್ಬರು, ಸಿಗರೇಟ್‌ ಸೇದುತ್ತಲೇ ರೂಮಿನೊಳಗೆ ಬಂದರು. ನನಗೆ ಕೆಮ್ಮು ಬಂದದ್ದು ನೋಡಿ ಅವರು ಸಿಗರೇಟ್ ಹೊರಗೆಸೆದರು. ಎಲ್ಲರೂ ಪರಿಚಯ ಮಾಡಿಕೊಂಡೆವು. ಮಾರನೇ ದಿನ, ಯಾವುದೋ ಹಬ್ಬಕ್ಕೆ ರಜವಿತ್ತು. ಅಲ್ಲಿದ್ದ ಒಬ್ಬ ಧೋಭಿಯನ್ನು ಕರೆಸಿದೆವು. ನಮ್ಮ ರೂಮ್‌ ದೊಡ್ಡ ಮಹಡಿಯ ಒಂದು ಚಿಕ್ಕ ಮೂಲೆಯಲ್ಲಿತ್ತು. ಧೋಭಿಗೆ, ರೂಮಿನಲ್ಲಿರುವ ಎಲ್ಲವನ್ನೂ ಹೊರಗೆ ಹಾಕಲು ಹೇಳಿದೆವು. ಅದರಲ್ಲಿ ನಮಗೆ ಅವಶ್ಯಕವಾಗಿರುವದನ್ನು ಮಾತ್ರ ಒಳಗೆ ತೆಗೆದುಕೊಂಡು ಹೋಗೋಣ ಎಂದೆ. ಬೇರೆ ಎಲ್ಲವನ್ನು ಧೋಬಿಯೇ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ, ನಮಗೆ ಒಟ್ಟಾರೆ ನಮ್ಮದಲ್ಲದ್ದು ಸಿಕ್ಕಿದ್ದೆಂದರೆ ಸುಮಾರು 500 ಪ್ಲಾಸ್ಟಿಕ್‌ ನೀರಿನ ಬಾಟಲಿಗಳು, 50 ಬೆಡ್ ಶೀಟ್‌, 30 ಪಂಚೆ ಟವಲ್‌ಗಳು, ಪುಸ್ತಕಗಳು, ಕೆಜಿ ಗಟ್ಟಲೆ ಮ್ಯಾಗ್‌ಸೈನ್ಗ‌ಳು, ಹೀಗೆ ರೂಮಿನಿಂದ ಶೇಖಡ 98ರಷ್ಟು ಧೋಭಿಯ ಪಾಲಾಯಿತು. ಧೋಭಿಯೇ ರೂಮೆಲ್ಲಾ ಸ್ವಚ್ಛ ಮಾಡಿದ. ಸುಮಾರು 2 ವರ್ಷದಿಂದ ಆ ರೂಮಿನಲ್ಲಿದ್ದ ಅವರಿಬ್ಬರು, ಇದನ್ನಲ್ಲಾ ನೋಡಿ ನಾಚಿಕೆಪಟ್ಟರು. ಸರಿ ಅಂದು ಹತ್ತಿರದ ಸಂಗಮೇಶ್ವರ ಖಾನವಳಿಗೆ ಮೂವರು ಹೋಗಿ ಊಟ ಮಾಡಿದೆವು. ರೂಮನ್ನು ನೋಡಲು ನಾರಾಯಣಮೂರ್ತಿಯವರಿಗೆ ಆಹ್ವಾನಿಸಿದೆವು. ಅವರು ಒಮ್ಮೆ ನನ್ನನ್ನು ಸಂತೋಷದಿಂದ ಅಪ್ಪಿಕೊಂಡರು. ಮಿಕ್ಕವರ ಕಣ್ಣಲ್ಲೂ ಸಂತೋಷದ ನೀರು ಹರಿದಿತ್ತು. ಎರಡು ತಿಂಗಳಾಗುತ್ತಿದ್ದಂತೆ ನನಗೆ ಚೆನ್ನೈಗೆ ವರ್ಗಾವಣೆಯಾಯಿತು. ಎಲ್ಲರೊಂದಿಗೆ ಚಿನ್ನಾಗಿ ಬೆರೆತಿದ್ದ ನನಗೂ ಅವರನ್ನೆಲ್ಲಾ ಬಿಟ್ಟುಹೋಗಲು ಬೇಸರವಾಯಿತು. ಆದರೆ ಬೇರೆ ದಾರಿ ಇರಲಿಲ್ಲ. ಅಲ್ಲಿಗೆ ಶನಿ ಕಾಟದ ಕೊಳಕು ಜಾಗಕ್ಕೆ ವರ್ಗಾವಣೆ ಕಥೆ ಮುಗಿದಿತ್ತು. ಚೆನ್ನೈಗೆ ಹೋಗಿ ಬ್ಯಾಂಕಿನಿಂದ ಕೊಟ್ಟ ದೊಡ್ಡ ಮನೆಗೆ ಸೇರಿಕೊಂಡೆ.ಮೊದಲು ಸ್ವಲ್ಪ ದಿನ ಪಿಂಚಣಿ ಸೆಲ್‌ನಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. ಪಿಂಚಣಿ ಸೆಲ್‌ಗೆ ಹೋಗಲು ನನ್ನ ಮನೆಯಿಂದ ಲೋಕಲ್‌ ರೈಲು ಇತ್ತು. ಅದರಲ್ಲಿ ಪ್ರಯಾಣ ಮಾಡುತ್ತಿದ್ದೆ. ರೈಲಿನ ಕಡೆಯ ಸ್ಟಾಪಿಗೆ ಮುಂಚೆ ಒಂದೆಡೆ ರೈಲು ನಿಧಾನವಾಗುತ್ತದೆ, ಅಲ್ಲಿ ಇಳಿದರೆ ಪಿಂಚಣಿ ಸೆಲ್‌ಗೆ ಹತ್ತಿರವಾಗುತ್ದೆಂದು ಸಹೋದ್ಯೋಗಿಯೊಬ್ಬರು ತಿಳಿಸಿದರು. ಮಾರನೆಯ ದಿನ, ರೈಲು ನಿಧಾನವಾಗುತ್ತಿದ್ದಂತೆ ಕೆಳಗೆ ಇಳಿದೆ. ಅಲ್ಲಿದ್ದ ರೈಲ್ವೇ ಪೋಲೀಸರು ನನ್ನನ್ನು ಹಿಡಿದುಕೊಂಡು, ಚಲಿಸುತ್ತಿರುವ ರೈಲಿನಿಂದ ಇಳಿದದ್ದು ಅಪರಾಧವೆಂದು ಹೇಳಿ ಠಾಣೆಗೆ ಕರೆದುಕೊಂಡು ಹೋದರು. ನಾನು, ಅವರು ನನ್ನನ್ನು ಬಿಟ್ಟುಬಡುತ್ತಾರೆಂದು ಆಂಗ್ಲ ಭಾಷೆಯಲ್ಲಿ ನಾನು ಎಸ್.ಬಿ.ಐ ಮ್ಯಾನೇಜರ್‌ ಎಂದು ಹೇಳಿದೆ. ಅವರು ನನ್ನನು ಸುಮ್ಮನೆ ಒಂದು ಕಡೆ ಕೂರಲು ಹೇಳಿದರು. ನನ್ನ ಹಾಗೆ ರೈಲಿನಿಂದ ಇಳಿದ ಹಲವರನ್ನು ಅಲ್ಲಿ ಕರೆ ತರುತ್ತಿದ್ದರು. ಎಲ್ಲರಿಗೂ, "ನೀನೇನ್‌ ಮಹಾ, ಎಸ್.ಬಿ.ಐ ಮ್ಯಾನೇಜರ್‌ನೇ ಕೂಡಿಸಿದ್ದೇವೆ" ಎಂದು ನನ್ನ ಕಡೆ ಕೈ ತೋರಿಸುತ್ತಿದ್ದರು. ನಾನು ಹಾಳಾಗುವುದಲ್ಲದೆ, ಬ್ಯಾಂಕಿನ ಹೆಸರು ಹಾಳು ಮಾಡಿದೆನೆಲ್ಲ ಎಂದು ನೊಂದುಕೊಂಡೆ. ಮಧ್ಯಾಹ್ನ ನಮ್ಮನೆಲ್ಲಾ ರೈಲ್ವೇ ಕೋರ್ಟಗೆ ಹಾಜರು ಪಡಿಸಿದರು. ಮತ್ತೆ ಇಂತಹ ತಪ್ಪು ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದು ಕೊಟ್ಟು 200 ರೂಪಾಯಿ ದಂಡ ಕಟ್ಟಿದ ಮೇಲೆ ಮನೆಗೆ ಹೋಗಲು ಬಿಟ್ಟರು. ಅಲ್ಲಿಗೆ ಶನಿ ಕಾಟದ ಪೋಲಿಸ್‌ ಅರಸ್ಟ್‌ ಮತ್ತು ಕೋರ್ಟ್‌ ಮೆಟ್ಟಲೇರುವುದು ಒಂದೇ ದಿನದಲ್ಲಿ ಮುಗಿದುಹೋಯಿತು. ಸೂರ್ಯನಾರಾಯಣರಿಗೆ ಫೋನ್‌ ಮಾಡಿದೆ, ಇಷ್ಟು ಸುಲಭವಾಗಿ ಕಷ್ಟ ಕಳೆದದ್ದರಿಂದ ಅವರು ನಿರಾಳರಾದರು. ಮುಂದೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಇಲ್ಲಿ ಹೊಸ ಎಲ.ಸಿ.ಪಿ.ಸಿ ನಾವೇ ಶುರುಮಾಡಿದೆವು. ಎರಡು ವರ್ಷ ನನ್ನದೇ ರಾಜ್ಯಭಾರವೆನ್ನುವಂತಿತ್ತು. ಸೂರ್ಯನಾರಾಯಣರ ಫೋನ್‌ ಬಂತು. ಇನ್ನೊಂದು ವಾರದಲ್ಲಿ ಶನಿ ಕಾಟ ಮುಗಿಯುತ್ತದೆ. ಸಂತೋಷದ ಸುದ್ದಿಗಾಗಿ ಕಾಯುತ್ತಿರು ಎಂದರು. ಶನಿ ಕಾಟದ ಸಂಪೂರ್ಣ ನಂಬಿಕೆಯಿಂದ ನಗುತ್ತಾ ಕುಳಿತೆ. ಒಂದು ವಾರದಲ್ಲಿ ಬೆಂಗಳೂರಿನ ಎಲ್ಲಾ ಶಾಖೆಗಳಿಗೆ ಮುಖ್ಯಸ್ತರಾಗಿದ್ದ ಪ್ರಧಾನ ವ್ಯವಸ್ಥಾಪಕರಿಗೆ ಆಪ್ತ ಕಾರ್ಯದರ್ಶಿಯಾಗಿ ನನಗೆ ವರ್ಗಾವಣೆಯಾಯಿತು. ನನ್ನ ಸ್ಕೇಲ್ನಲ್ಲಿ ನಾನು ತಲುಪಬಹುದಾದ ಅತ್ಯುನ್ನತ ಹುದ್ದೆ ಇದಾಗಿತ್ತು. ಮತ್ತೆ 30 ವರ್ಷದ ಬಳಿಕ ಶನಿಕಾಟ ನನಗೆ ಬರುತ್ತದಂತೆ. ಆದರೆ ಇಷ್ಟು ಕಠೋರವಾಗಿ ಇರುವುದಿಲ್ಲವೆಂದು ಸೂರ್ಯನಾರಾಯಣರು ಹೇಳಿದ್ದಾರೆ. ಆಧುನಿಕ ತಾಂತ್ರಿಕ ಯುಗದಲ್ಲಿ ಹಳೆಯ ಪುರಾಣಗಳನ್ನು ಉಡಾಫೆಯಾಗಿ ನೋಡುತ್ತಿದ್ದ ನನಗೆ ಈ ಏಳು ವರ್ಷದ ಶನಿ ಕಾಟ ಒಳ್ಳೆಯ ಪಾಠವನ್ನೇ ಕಲಿಸಿತು.
ಅನಿಸಿಕೆಗಳು




ಮೈ ನ ನಾಗರಾಜ
16-08-2021
ನೈಜ ಕಥೆಯ ಸರಳ ಸುಂದರ ನಿರೂಪಣೆ. ಒಂದಿಷ್ಟೂ ಬೇಸರವಾಗದಂತೆ ಸುಲಭವಾಗಿ ಓದಿಸಿಕೊಂಡು ಹೋಗುವಷ್ಟು ಆಕರ್ಷಕವಾಗಿದೆ ಕಥಾ ಹಂದರ. ಇಷ್ಟು ದಿನ ಇಲ್ಲದಿರದಿದ್ದ ಶನಿ ಕಾಟದ ಭಯ ಇದೀಗ ನನ್ನನ್ನೂ ಕಾಡಹತ್ತ್ತಿದೆ!!
‌ಪ್ರತಿಕ್ರಿಯೆಗೆ ಧನ್ಯವಾದಗಳು ಸಾರ್