ಹೇಗೆ ಆರಂಭಿಸಲಿ ಈ ಪ್ರವಾಸ ಕಥನ ಎಂಬುವ ಗೊಂದಲದಲ್ಲೇ ಐದು ದಿನ ಕಳೆಯಿತು. ಇನ್ನೂ ತಡವಾದರೆ, ನೋಡಿದ್ದನ್ನು ಹೇಳಬೇಕೆಂದು ಮನಸ್ಸಿನಲ್ಲಿ ಮನನ ಮಾಡಿಕೊಂಡಿದ್ದ ಬಹಳಷ್ಟು ವಿಷಯಗಳು ಮರೆತುಹೋಗಬಹುದಲ್ಲವೇ, ಹಾಗಾಗಿ ಇಂದು 01/02/2023 ಬರೆಯಲಾರಂಭಿಸಿದೆ ಈ ಕಥನ.
ಅದೊಂದು ಜನಾಂಗ, ಅವರ ರೀತಿ ನೀತಿಗಳು ಅವರ ಚಿತ್ರ ವಿಚಿತ್ರ ಗೋಡೆಯ ಬರಹಗಳಿಂದಲೇ ಅರಿಯಬೇಕು. ಈ ಜನಾಂಗಕ್ಕೆ ಯಾವುದೇ ಧರ್ಮದ ಹೆಸರಿರಲಿಲ್ಲ. ಸಾಮಾನ್ಯ ಜನರಿಗೆ ಅರ್ಥವಾಗದ ಚಿತ್ರಗಳು ತಿಳಿಸುವ ಕಥೆಗಳನ್ನು, ಭಾಷೆಯ ಪದ ವಾಕ್ಯಗಳಿಂದ ಅರ್ಥೈಸುವ ಪರಿಣಿತರಿಂದಲೇ ತಿಳಿಯಬೇಕಾಗಿದೆ ಈ ಜನಾಂಗದ ವಿಷಯಗಳು. ದುರಾದೃಷ್ಟವೆಂದರೆ "ನಾವು ಅಥವಾ ನಮ್ಮ ಪೂರ್ವಜರು ಈ ಜನಾಂಗಕ್ಕೆ ಸೇರಿದವರು" ಎಂದು ಹೆಮ್ಮೆಯಿಂದ ಹೇಳುವ ಒಬ್ಬ ವ್ಯಕ್ತಿಯೂ ಈಗ ಭೂಮಿಯ ಮೇಲಿಲ್ಲ. ಯಾವ ಜನಾಂಗ ಶಾಸ್ತ್ರಿಗಳೇ ಅಂತ ಕೇಳ್ತಿದ್ದೀರಾ. ಅದೇ ಸುಮಾರು 3500 ವರ್ಷಗಳ ಹಿಂದೆ ಈಜಿಪ್ಟ್ ದೇಶದಲ್ಲಿ ನೆಲೆಸಿದ್ದ ಜನರ ಸಮೂಹ.
ಸರಿ ಇನ್ನೇಕೆ ತಡ, ಬನ್ನಿ ಹೋಗಿ ಬರೋಣ, 4500 ವರ್ಷಗಳ ಹಿಂದಕ್ಕೆ. ಒಂದು ವಿಷಯ ಮರೆತಿದ್ದೆ, ಈ ನನ್ನ ಪಯಣದಲ್ಲಿ ಜೊತೆಗೆ ಬರಲು ಕೆಲವರಿಗೆ ಅರ್ಹತೆ ಇಲ್ಲ, ಅವರು ಯಾರೆಂದರೆ,
1. ಈಜಿಪ್ಟ್ ದೇಶದಲ್ಲಿ ನೋಡುವ ಪ್ರತಿಯೊಂದು ದೇವಸ್ಥಾನಕ್ಕೂ ನಮ್ಮ ಭಾರತದಲ್ಲಿರುವ ದೇವಸ್ಥಾನಗಳಿಗೆ ಹೋಲಿಸಿ, ನಮ್ಮದೇ ಹೆಚ್ಚು ಎನ್ನುವವರು
2. ಮೋಜು ಮಸ್ತಿಗಾಗಿ ಮಾತ್ರ ವಿದೇಶ ಪ್ರಯಾಣ ಮಾಡಲು ಬಯಸುವವರು
3. ಭಾರತೀಯ ರೀತಿಯ ಊಟ ಸಿಗದಿದ್ದರೇ ನಮಗೆ 10 ದಿನ ಬದುಕಲಾಗುವುದಿಲ್ಲ ಎನ್ನುವವರು
4. ವಿದೇಶದಲ್ಲಿ ಒಳ್ಳೆ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕೆನ್ನುವವರು
5. ಇಲ್ಲಿನ ಗೋಡೆಯ ಮೇಲಿನ ಚಿತ್ರಗಳನ್ನು ನೋಡುತ್ತಾ ನಮ್ಮ ಅಜಂತಾ ಎಲ್ಲೋರದಲ್ಲಿ ಹೇಗಿದೆ ಗೊತ್ತಾ ಎಂದು ರಾಗ ಎಳೆಯುವವರು
6. ಬೆಳಿಗ್ಗೆ 3 ಗಂಟೆಗೆ ಅಥವಾ 4 ಗಂಟೆಗೆ ನಿದ್ದೆಯಿಂದ ಎದ್ದು ಪ್ರಯಾಣ ಮುಂದುವರೆಸಲು ನಮಗೆ ಸಾಧ್ಯವಿಲ್ಲ ಎನ್ನುವವರು
ಇದೇನು, ನಾನು ಹಾಕಿದ ನಿಯಮಗಳನ್ನು ಕೇಳಿ 100 ಜನರಿದ್ದ ಪ್ರಯಾಣಿಕರ ಗುಂಪು ಒಮ್ಮೆಗೆ 10ಕ್ಕೆ ಇಳಿದುಹೋಯಿತು, ಇರಲಿ ಬಿಡಿ 10 ಜನರೇ ಸಾಕು ನಮ್ಮ ಈ ಪಯಣ ಮುಂದುವರೆಸಲು. ಆದರೂ ನಿಮಗೆ ಕುತೂಹಲವಿದೆ ಅಲ್ಲವೇ, ನಿಜವಾಗಲೂ ನಾವೇಕೆ ಈಜಿಪ್ಟ್ ದೇಶಕ್ಕೆ ಹೋಗಬೇಕೆಂದು. ಹಾಗಾದರೆ ನೀವು ನನ್ನೊಡನೆ ಬರಲು ನಿಶ್ಚಯಿಸಿದ್ದೀರೆಲ್ಲಾ ಅಷ್ಟೇ ಸಾಕು, ನಿಮ್ಮ ನಿರ್ಧಾರಕ್ಕೆ ನೀವೇ ಖುಷಿ ಪಡುವುದಂತು ಖಂಡಿತ.
ನನ್ನ ಈಜಿಪ್ಟ್ ಪ್ರವಾಸ ಹೇಗೆ ಆರಂಭವಾಯಿತು ಎಂಬ ಒಂದೆರೆಡು ವಿಷಯಗಳನ್ನು ತಿಳಿಸುತ್ತಾ ನಂತರ ನಿಮ್ಮೊಂದಿಗೆ ಈ ಕಥನದ ಪ್ರವಾಸವನ್ನು ಮುಂದುವರೆಸುತ್ತೇನೆ.
ನವೆಂಬರ್ 2022 ಮೊದಲನೇ ವಾರದಲ್ಲಿ ಗೆಳೆಯ ವಿಜಯಕುಮಾರ್ ಫೋನ್ ಮಾಡಿ ಸುಮಾರು 7 ಜನ ಈಜಿಪ್ಟ್ ಪ್ರವಾಸ ಮಾಡಲು ನಿರ್ಧರಿಸಿದ್ದೇವೆ, ಇಬ್ಬರ ಗುಂಪನ್ನು ಒಂದು ಫ್ಯಾಮಿಲಿ ಎಂದು ಪರಿಗಣಿಸುವ ಟೂರ್ ಆಪರೇಟರ್‌ಗಳು ಕಡೆಯಲ್ಲಿ ಉಳಿಯುವ ನನಗೊಬ್ಬನಿಗೇ ಹೆಚ್ಚು ಹಣ ಕೇಳುತ್ತಾರೆ, ಹಾಗಾಗಿ ನೀನು ಬರುವುದಾದರೆ ನಮ್ಮದೊಂದ ಫ್ಯಾಮಿಲಿಯಂತಾಗುತ್ತೆ ಎಂದರು. ಯಾರೊಂದಿಗೆ ನೀವು ಹೋಗುತ್ತಿದ್ದೀರಿ, ಟೂರ್ ಆಪರೇಟರ್ ಯಾರು, ಹಣವೆಷ್ಟು ಖರ್ಚಾಗಬಹುದು ಯಾವುದನ್ನು ವಿಚಾರಿಸಿದೇ ನನ್ನ ಒಪ್ಪಿಗೆಯನ್ನು ಕೊಟ್ಟೇಬಿಟ್ಟೆ.
ಆಮೇಲೆ ತಿಳಿದದ್ದು ನಾವು ಕೇಸರಿ ಟೂರ್ಸ್ (ಮುಂದೆಲ್ಲಾ ಕೇಸರಿ ಎಂದು ಬಳಸುತ್ತೇನೆ) ಮೂಲಕ ಹೋಗುವುದೆಂದು. ಒಂದು ವಾರದಲ್ಲಿ ನಮ್ಮ ಬೆಂಗಳೂರಿನ ಗುಂಪು 16ಕ್ಕೇರಿತ್ತು. ಪ್ರವಾಸದ ಪೂರ್ಣ ಹಣ 1ಲಕ್ಷ 86 ಸಾವಿರ ರೂಪಾಯಿ ಒಬ್ಬೊಬ್ಬರು ಪಾವತಿ ಮಾಡಿ ಪ್ರವಾಸ ಖಾತ್ರಿಪಡಿಸಿದೆವು. ಜನವರಿ 16, 2023 ನಮ್ಮ ಪಯಣದ ದಿನಾಂಕ ಎಂದು ನಿರ್ಧಾರವಾಯಿತು. ಇದಕ್ಕಾಗಿಯೇ ಒಂದು ಪ್ರತ್ಯೇಕ ವಾಟ್ಸಾಪ್ ಗುಂಪು, ಮತ್ತು ಅದರಲ್ಲಿ ನಮಗೆ ತಿಳಿದಿದ್ದ ಕೆಲವು ಈಜಿಪ್ಟ್ ವಿಷಯಗಳು, ಪ್ರವಾಸಿಗರ ಪರಿಚಯ ಇನ್ನೂ ಹಲವು ವಿಷಯಗಳು ಹಂಚಿಕೆಯಾದವು.
ನನ್ನ ಅಣ್ಣನ ಸಲಹೆಯಂತೆ ಪ್ರವಾಸಕ್ಕೆ ಪೂರ್ವತಯಾರಿಯಂತೆ ಆ ಕಾಲದ ಈಜಿಪ್ಟ್ ಸಂಸ್ಕೃತಿ ಬಗ್ಗೆ ಹಲವು ಸಾಕ್ಷಚಿತ್ರಗಳನ್ನು ಯೂಟ್ಯೂಬ್‌ನಲ್ಲಿ ನೋಡಿ ಅರಿತುಕೊಂಡೆ.
ಜನವರಿ 16ಕ್ಕೆ ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡಿ ರಾತ್ರಿ 8 ಗಂಟೆಗೆ ಮುಂಬೈ ತಲುಪಿದೆವು. ಮುಂಬೈನಿಂದ ಈಜಿಪ್ಟ್ ರಾಜಧಾನಿ ಕೈರೋಗೆ ಸುಮಾರು 6 ಗಂಟೆಗಳ ವಿಮಾನ ಪ್ರಯಾಣ. ಕೇಸರಿ ಇಂದ ಪ್ರಮೋದ್ ಹೆಸರಿನ ಗೈಡ್ ನಮ್ಮನ್ನು ಮುಂಬೈಯಲ್ಲಿ ಸ್ವಾಗತಿಸಿದರು. ರಾತ್ರಿ 3 ಗಂಟೆಗೆ ಈಜಿಪ್ಟ್ ಏರ್ ಮೂಲಕ ನಮ್ಮ ಪ್ರಯಾಣ. ಕೈರೋ ನಾವು ತಲುಪಿದಾಗ ಕೈರೋ ಸಮಯ ಬೆಳಿಗ್ಗೆ 5.30. ಭಾರತಕ್ಕೂ ಹಾಗೂ ಈಜಿಪ್ಟ್‌ಗೆ ಸುಮಾರು 4 ಗಂಟೆಗಳ ವ್ಯತ್ಯಾಸವಿದೆ. ವಿಮಾನದಲ್ಲಿ ಊಟಕ್ಕೆ ನೀಡಿದ ಪಿಟ್ಟಾ ಬ್ರೆಡ್ ನಮ್ಮ ಉತ್ತರ ಕರ್ನಾಟಕದ ಖಡಕ್ ರೋಟಿ ಮತ್ತು ಸಾದಾ ರೋಟಿಯ ಮಧ್ಯದ್ದು ಎಂದು ಹೇಳಬಹುದು ಮತ್ತು ಸಸ್ಯಾಹಾರಿಗಳಾದ ನಮಗೆ ಇನ್ನು ಮುಂದಿನ ಹತ್ತು ದಿನ ಈ ರೀತಿಯ ಬ್ರೆಡ್ ಮತ್ತು ಬೇಯಿಸಿದ ತರಕಾರಿಯೇ ಊಟವಾಗಿರುತ್ತದೆ ಎಂಬುದು ತಿಳಿದಿತ್ತು.
ವಿಮಾನ ನಿಲ್ದಾಣದಲ್ಲೇ ಪ್ರಾತಃ ಕರ್ಮಗಳನ್ನು ಮುಗಿಸಿದೆವು. ಈ ದಿನ ನಮಗೆ ಬೆಳಗಿನ ಸ್ನಾನವಿಲ್ಲ. ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಕೇಸರಿ ಲಾಂಚನ ಇಟ್ಟುಕೊಂಡಿದ್ದ ಸಮೇ ಎಂಬ ಈಜಿಪ್ಟ್‌ನ ಸ್ಥಳೀಯ ಗೈಡ್ ನಮ್ಮನ್ನು ಸ್ವಾಗತಿಸಿದರು. ಪೂರ್ತಿ ಪ್ರವಾಸದಲ್ಲಿ ಭಾರತದಿಂದ ಬಂದಿದ್ದ ಗೈಡ್ ಪ್ರಮೋದ್ ಹಾಗೂ ಈಜಿಪ್ಟ್ ಗೈಡ್ ಸಮೇ ಜೊತೆಯಲ್ಲೇ ಇರುವುದಾಗಿ ತಿಳಿಸಿದರು. ಈಜಿಪ್ಟ್ ಇತಿಹಾಸದ ವಿಷಯದಲ್ಲಿ 4 ವರ್ಷದ ಸ್ನಾತಕೋತ್ತರ ಪದವಿ ಪಡೆದಿರುವ ಆಂಗ್ಲ ಭಾಷೆಯಲ್ಲಿ ಸರಾಗವಾಗಿ ಮಾತನಾಡಬಲ್ಲ ಗೈಡ್ ಸಮೇ ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟವೇ ಸರಿ. ಸಮೇ ನಮಗೆಲ್ಲರಿಗೂ ಬೆಳಗಿನ ಉಪಹಾರವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ತಂದಿದ್ದರು. ಅವರು ತಿಂಡಿಗೆಂದು ನಮಗೆ ತಂದಿದ್ದೆ ಬ್ರೆಡ್, ಬನ್, ಅದೇ ರೀತಿಯ ಬೇರೆ ಆಕಾರದಲ್ಲಿ ಇದ್ದ ಪದಾರ್ಥಗಳು, ಬೆಣ್ಣೆ, ಜೇನು ತುಪ್ಪ, ಜ್ಯಾಮ್ ಮತ್ತು ಕಿತ್ತಳೆ ರಸ ಇವೆಲ್ಲವೂ ನಮಗೆ ಒಂದು ದಿನಕ್ಕೆ ಆಗುವಷ್ಟಿತ್ತು. ಕೈರೋ ವಿಮಾನ ನಿಲ್ದಾಣದಿಂದ ಸುಮಾರು 200 ಕಿಲೋಮೀಟರ್ ದೂರವಿರುವ ಅಲೆಕ್ಸಾಂಡ್ರಿಯ ಊರಿಗೆ ನಮ್ಮ ಬಸ್ ಪ್ರಯಾಣ ಆರಂಭವಾಯಿತು.
ಭಾಗ 2
ಕಾಲು ಚಾಚಿ ಕುಳಿತುಕೊಂಡು ಆರಾಮವಾಗಿ ಪ್ರಯಾಣಿಸಬಲ್ಲ ಹವಾನಿಯಂತ್ರಿತ ಮರ್ಸಿಡೆಸ್ ಬಸ್ ನಮಗಾಗಿ ಕೈರೋ ವಿಮಾನ ನಿಲ್ದಾಣದ ಹೊರಗೆ ಕಾದಿತ್ತು. ರಾತ್ರಿಯೆಲ್ಲಾ ವಿಮಾನ ಪ್ರಯಾಣ ಮಾಡಿದ್ದ ನಾವು ಬಸ್‌ನಲ್ಲಿ ಅತಿ ಬೇಗೆ ನಿದ್ರೆಗೆ ಜಾರುತ್ತೇವೆ ಎಂಬುದು ಗೈಡ್‌ಗೆ ಗೊತ್ತಿತ್ತು. ಹಾಗಾಗಿ ಪ್ರಯಾಣದ ಆರಂಭದಲ್ಲೇ ಹೇಳಲೇಬೇಕಾದ ಕೆಲವು ವಿಷಯಗಳನ್ನು ಹೇಳಿ ಮುಗಿಸಿದರು ಗೈಡ್. ಅವು ಏನೆಂದರೆ,
ಪ್ರವಾಸದುದ್ದಕ್ಕೂ ಬಸ್‌ನಲ್ಲಿ ಒಬ್ಬರು ಬಂದೂಕುದಾರಿ ಪೋಲೀಸ್ ನಮ್ಮ ಜೊತೆ ಇರುತ್ತಾರೆ. ಸುಮಾರು 10 ವರ್ಷಗಳ ಹಿಂದೆ ಪ್ರವಾಸಿಗರ ಮೇಲೆ ಆದ ಭಯೋತ್ಪಾದಕರ ದಾಳಿಯಿಂದ ಎಚ್ಚೆತ್ತೆ ಈಜಿಪ್ಟ್ ಸರ್ಕಾರ ಪ್ರತಿ ಪ್ರವಾಸಿಗರ ಬಸ್ಸಿಗೆ ಈ ರೀತಿ ವ್ಯವಸ್ಥೆ ಮಾಡಿದೆ. ಆದರೆ ಕಳೆದ 10 ವರ್ಷಗಳಲ್ಲಿ ಯಾವುದೇ ಈ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಹಾಗಾಗಿ ಈಗ ಪ್ರವಾಸಿಗರು ಹೆದರುವ ಅವಶ್ಯಕತೆ ಇಲ್ಲ.
ಪ್ರವಾಸದ ಸಮಯದಲ್ಲಿ ಸಾರ್ವಜನಿಕ ಶೌಚಾಲಯ ಬಳಸುವುದಾದರೆ 5 ಈಜಿಪ್ಷಿಯನ್ ಪೌಂಡ್ ನೀಡಲೇಬೇಕು. ಅದು ಇಲ್ಲಿನ ನಿಯಮ. 1 ಪೌಂಡ್ ಭಾರತದ 3 ರೂಪಾಯಿಗೆ ಸಮ. ಹಾಗಾಗಿ ನಮಗೆಲ್ಲರಿಗೂ ಕನಿಷ್ಟ 100 ಅಮೇರಿಕಾದ ಡಾಲರ್‌ಗಳನ್ನು ಪೌಂಡ್‌ಗೆ ಬದಲಾಯಿಸಿಕೊಳ್ಳಲು ತಿಳಿಸಿದರು. ಈ ಹಣ ನಮ್ಮ ಶಾಪಿಂಗ್ ಹಾಗೂ ಶೌಚಾಲಯ ಬಳಕೆಗೆ ಸಾಕೆಂಬುದು ಗೈಡ್‌ನ ನಂಬಿಕೆ. ಈ ವಿನಿಮಯ ಈಜಿಪ್ಟ್ ಗೈಡ್ ಸಮೆ ಹತ್ತಿರ ಮಾಡಬಹುದೆಂದು ತಿಳಿಸಲಾಯಿತು.
ನಾವು ತಂಗುವ ಹೋಟಲ್‌ಗಳಲ್ಲಿ ವೈಫೈ ಇದ್ದರೂ ಕೂಡಾ, ಸಾಕಷ್ಟು ಸಮಯ ನಾವು ಪ್ರಯಾಣಿಸುತ್ತಿರುವುದರಿಂದ ಯಾರಿಗಾದರು ಸ್ಥಳೀಯ ಸಿಮ್‌ಕಾರ್ಡ್ ಬೇಕೆಂದರೆ ಅದನ್ನು ಸಮೆ ಹತ್ತಿರ ಕೊಂಡುಕೊಳ್ಳಬಹುದು. ಇದರ ಬೆಲೆ 10 ಅಮೇರಿಕಾದ ಡಾಲರ್. ಇದು ಮುಂದಿನ ಹತ್ತು ದಿನಕ್ಕೆ ಸಾಕಾಗುತ್ತದೆ. ಈಜಿಪ್ಟ್‌ನಲ್ಲಿ ವಾಟ್ಸಾಪ್ ಸಂದೇಶ ಕಳಿಸಬಹುದಷ್ಟೆ, ಕರೆ ಮಾಡಲಾಗುವುದಿಲ್ಲ. ಫೇಸ್‌ಬುಕ್ ಮೆಸೆಂಜರ್, ಗೂಗಲ್ ಮೀಟ್ ಬಳಸಿ ಕರೆ ಮಾಡಬಹುದು.
ನಮ್ಮ ಗುಂಪಿನ ಫೋಟೋ ಅಥವಾ ನಮ್ಮದೇ ಫೋಟೋ ಮೊಬೈಲಿನಲ್ಲಿ ತೆಗೆಸಿಕೊಳ್ಳಬೇಕೆಂದರೆ, ನಮ್ಮ ಗುಂಪಿನವರನ್ನೇ ಅಥವಾ ನಮ್ಮ ಗೈಡನ್ನೇ ಕೇಳಬೇಕು. ಸ್ಥಳೀಯರಿಗೆ ನಮ್ಮ ಮೊಬೈಲ್ ಕೊಟ್ಟು ಫೋಟೋ ತೆಗೆಯಲು ಹೇಳಿದರೆ ಅವರು 5ರಿಂದ 15 ಪೌಂಡ್ ಟಿಪ್ಸ್ ನೀವು ಕೊಡುವ ತನಕ ನಿಮ್ಮ ಮೊಬೈಲ್ ನಿಮಗೆ ವಾಪಸ್ ಕೊಡುವುದಿಲ್ಲ. ಈ ವಿಷಯದಲ್ಲಿ ಹಿಂದೆ ಸಾಕಷ್ಟು ಗಲಾಟೆಗಳಾಗಿವೆ ಎಂದು ಎಚ್ಚರಿಕೆ ನೀಡಲಾಯಿತು.
ದಿನವೂ ಪ್ರತಿಯೊಬ್ಬರಿಗೂ 1.5 ಲೀಟರ್ ಕುಡಯುವ ನೀರಿನ ಬಾಟಲ್ ಕೊಡಲಾಗುತ್ತದೆ. ನಾವು ಭಾರತದಿಂದ ತಂದಿರುವ ಚಿಕ್ಕ ಬಾಟಲ್‌ಗೆ ಈ ನೀರನ್ನು ಹಾಕಿ ನಮ್ಮ ಬ್ಯಾಗ್‌ನಲ್ಲಿ ಇಟ್ಟು ಕೊಂಡಿರಬೇಕು. ಊಟಕ್ಕೆ ಹೋಗುವ ಹೋಟಲ್‌ಗಳಲ್ಲೂ ಕೂಡಾ ಇದೇ ನೀರನ್ನು ಬಳಸಬೇಕು. ದೊಡ್ಡ ಬಾಟಲ್ ಹೋಟಲ್‌ಗೆ ತರಬಾರದು. ಹೋಟಲ್‌ನಲ್ಲೇ ನೀರು ಕೊಂಡುಕೊಳ್ಳುವುದಾದರೆ ಒಂದು ಬಾಟಲ್ ನೀರಿಗೆ 5 ಅಮೇರಿಕಾ ಡಾಲರ್ ಆಗುತ್ತದೆ. ಅಂದರೆ 1 ಲೀಟರ್ ನೀರಿಗೆ ಸುಮಾರು 400 ರೂಪಾಯಿಗಳು.
ಇಷ್ಟು ವಿಷಯಗಳು ಹೇಳುವ ಹೊತ್ತಿಗೆ ಹೆದ್ದಾರಿ ಮಧ್ಯದ ಒಂದು ಹೋಟಲ್ ತಲುಪಿದ್ದೆವು. ಅಲ್ಲಿ ಎಲ್ಲರಿಗೂ ಇಳಿಯಲು ಹೇಳಿ ಅಲ್ಲಿ ಕಾಫಿ ಅಥವಾ ಟೀ ಕುಡಿಯಲು ಮತ್ತು ಶೌಚಾಲಯ ಬಳಕೆಗೆ ಸಮೆ ತಾವೇ ಹಣವನ್ನು ನೀಡಿದರು. ವಾಪಸ್ ಬಂದ ಮೇಲೆ, ನಮ್ಮ ಭಾರತೀಯ ಗೈಡ್ ಪ್ರಮೋದ್ ನಾವು ಕೇಸರಿಗೆ ನೀಡಿರುವ ಹಣದಿಂದಾಗೆ ಈ ಪ್ರವಾಸದಲ್ಲಿ ಕಾಫಿ, ಟೀ, ಊಟ, ತಿಂಡಿಗೆ ನಾವು ಯಾವುದೇ ಹಣ ಖರ್ಚು ಮಾಡಬೇಕಿಲ್ಲ ಎಂದು ಹೇಳಿ, ಇನ್ನೂ ಎರಡು ಗಂಟೆಗಳ ಪ್ರಯಾಣವಿದೆ, ಎಲ್ಲರೂ ನಿದ್ರಿಸಬಹುದೆಂದು ತಿಳಿಸಿದರು. ಮುಂದಿನ ಎರಡು ಗಂಟೆಗಳು ಏನಾಯಿತೆಂಬುದು ಯಾರಿಗೂ ಗೊತ್ತಿಲ್ಲ.
"ಇದೋ ನೋಡಿ ನಾವು ಈಗ ಅಲಕ್ಸಾಂಡ್ರಿಯಾ ನೂತನ ನಗರಕ್ಕೆ ಬಂದಿದ್ದೇವೆ" ಎಂದು ಸಮೆ ಮಾತು ಆರಂಭಿಸಿದಾಗಲೇ ಎಲ್ಲರಿಗೂ ಎಚ್ಚರಿಕೆಯಾದದ್ದು. ಈ ಊರಿನ ವಿಶೇಷತೆ ಅವರು ತಿಳಿಸಿ ಇನ್ನೈದು ನಿಮಿಷದಲ್ಲಿ ನಾವು ಭೇಟಿಕೊಡುವ ʼಕೋಂಬ್ ಎಲ್ ಸಮಾಧಿ ಅಥವಾ ಕಟಾಕೋಂಬ್" ಬಗ್ಗೆ ತಿಳಿಸಿದರು.
*ಕೋಂಬ್ ಎಲ್ ಸಮಾಧಿ ಅಥವಾ ಕಟಾಕೋಂಬ್*
ಅದು ಇಸವಿ 1892, ಕತ್ತೆಯೊಂದು ನಡೆದು ಹೋಗುತ್ತಾ ದೊಡ್ಡ ಕಂದಕದಲ್ಲಿ ಬಿದ್ದುಬಿಟ್ಟಿತು. ಕತ್ತೆಯನ್ನು ಎತ್ತಲು ಹೋದವರಿಗೆ ಕಂದಕದಲ್ಲಿ ಏನೋ ಒಂದೆರೆಡು ಮೆಟ್ಟಲುಗಳು ಕಾಣಿಸಿ, ಸರ್ಕಾರಕ್ಕೆ ಈ ವಿಷಯ ತಿಳಿಸಿದಾಗ ಈ ಜಾಗದಲ್ಲಿ ಭೂಮಿ ತೋಡುವ ಕೆಲಸ ಆರಂಭವಾಗಿ ಕಡೆಗೆ ದೊರೆತಿದ್ದೇ ಈ ಕಟಾಕೊಂಬ್ ಸಮಾಧಿ. ಹಾಗಾಗಿ "ಕತ್ತೆ ಹುಡುಕಿದ ಸಮಾಧಿ" ಎಂದು ಜನರು ಆಡಿಕೊಳ್ಳುವುದು ರೂಡಿಯಲ್ಲಿದೆ.
ಈ ಕಟಾಕೋಂಬ್ ಸುಮಾರು ಮೂರು ಮಹಡಿಗಳಷ್ಟು ನೆಲದಿಂದ ಕೆಳಗೆ ಇದೆ. ಮಧ್ಯದಲ್ಲಿ ಒಂದು ದೊಡ್ಡ ಭಾವಿಯಂತಿದ್ದು ಅದರ ಸುತ್ತ ಸುಮಾರು 4 ಅಡಿ ಎತ್ತರದ ಸುರುಳಿ ಮೆಟ್ಟಲುಗಳನ್ನು ಬಳಸಿಕೊಂಡು ಕೆಳಗೆ ಹೋಗಬೇಕು. ಶವಗಳನ್ನು ಈ ಭಾವಿಯ ಮೂಲಕ ಮೂರನೇ ತಳಮಹಡಿಗೆ ಇಳಿಸುತ್ತಿದ್ದರೆಂದು ತಿಳಿದುಬಂದಿದೆ. ಒಳಗೆ, ಹೆಸರೇ ಇಲ್ಲದ ಇದರ ಮಾಲೀಕ ಮತ್ತು ಅವನ ಹೆಂಡತಿಯ ಕಲ್ಲಿನ ಕೆತ್ತನೆಗಳಿವೆ. ಅಷ್ಟೇ ಅಲ್ಲದೆ ಸುಮಾರು 300 ಶವಗಳ ಪ್ರತ್ಯೇಕ ಗೂಡುಗಳು ಇದೆ. ಕ್ರಿ ಶ 205ನೇ ಇಸವಿಯಲ್ಲಿ ಹೊರಗಡೆಯಿಂದ ಬಂದ ರಾಜನೊಬ್ಬನು ಅಲೆಕ್ಸಾಂಡ್ರಿಯಾದ ಸುಮಾರು 300 ಸೈನಿಕರನ್ನು ಅವರ ಕುದುರೆ ಸಮೇತ ಕೊಂದು ಕುದುರೆಗಳ ಜೊತೆಗೆ ಅವರ ಶವಗಳನ್ನು ಈ ಗೂಡುಗಳಲ್ಲಿ ಇರಿಸಿದನೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಮನುಷ್ಯರ ಯಾವುದೇ ದೇಹದ ಭಾಗ ಉಳಿದಿಲ್ಲ, ಆದರೆ ಕುದುರೆಗಳ ಮೂಳೆಗಳನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ಶೇಖರಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇಲ್ಲಿ ಒಳಗಿರುವ ಕೆತ್ತನೆಗಳಲ್ಲಿ ಮನಷ್ಯನ ಶವದಿಂದ ಮಮ್ಮಿ ಮಾಡುವ ವಿಧಾನವನ್ನು ತಿಳಿಸಲಾಗಿದೆ. ಅಷ್ಟೇ ಅಲ್ಲದ ಕಲ್ಲಿನ ಶವಪೆಟ್ಟಿಗೆ, ನೀರಿನ ಕಾರಂಜಿ ಇನ್ನೂ ಅನೇಕ ವಸ್ತುಗಳನ್ನು ಸಮಾಧಿಯಿಂದ ತೆಗೆದು ಹೊರಗಡೆಯೇ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇನ್ನೂ ಹೆಚ್ಚೆನ ವಿವರಕ್ಕೆ ಗೂಗಲ್‌ನಲ್ಲಿ "catacombs of egypt" ಎಂದು ನೀವು ಹುಡುಕಬಹುದು.
ಅಲ್ಲಿಂದ ಮುಂದೆ ನಮ್ಮ ಪಯಣ ಅಲೆಗ್ಸಾಂಡ್ರಿಯಾ ಗ್ರಂಥಾಲಯಕ್ಕೆ.
*ಅಲೆಗ್ಸಾಂಡ್ರಿಯಾ ಗ್ರಂಥಾಲಯ ಹಾಗೂ ಭಾರತದ ನಳಂದ ವಿಶ್ವವಿದ್ಯಾಲಯ - ಎರಡರದೂ ಒಂದೇ ದುರಂತ ಕತೆ*
ಕ್ರಿ. ಪೂ. 283ರಲ್ಲಿ ಅಲೆಕ್ಸಾಂಡರ್‌ನ ಅನುಯಾಯಿ *ಟೋಲೆಮಿ ಇ ಸುತರ್* ಸ್ಥಾಪಿಸಿದ ಗ್ರಂಥಾಲಯವಿದು. ಭಾರತ, ಗ್ರೀಸ್, ಪರ್ಶಿಯ, ಈಜಿಪ್ಟಿನ ಸುಮಾರ 5 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿದ್ದು ಸುಮಾರು 100 ಜನ ವಿದ್ವಾಂಸರು ಉಳಿದುಕೊಂಡಿದ್ದ ಜಾಗವಿದಾಗಿತ್ತು. ಕ್ರಿ ಪೂ 48ರಲ್ಲಿ ಈಜಿಪ್ಟಿನ ಜನ ಜೂಲಿಯಸ್ ಸೀಸರ್‌ನ್ ವಿಜಯ ಯಾತ್ರೆಗೆ ತಡೆ ಒಡ್ಡುತ್ತಾರೆ. ಆ ಕೋಪಕ್ಕೆ ಈ ಗ್ರಂಥಾಲಯದ ಒಂದು ಭಾಗವನ್ನು ಸುಟ್ಟು ಹಾಕಲು ಸೀಸರ್ ಆಜ್ಞೆ ಮಾಡುತ್ತಾನೆ. ಇಲ್ಲಿಂದ ಆರಂಭವಾಯಿತು ಗ್ರಂಥಾಲಯದ ಪಥನ.
ಕ್ರಿ ಶ 381ರಲ್ಲಿ ಕ್ರಿಶ್ಚಿಯನ್ನರು ಈ ಜಾಗದಲ್ಲಿ ಚರ್ಚ್ ಕಟ್ಟಬೇಕೆಂದು ಗ್ರಂಥಾಲಯದ ಸ್ವಲ್ಪ ಭಾಗವನ್ನು ಕೆಡವುತ್ತಾರೆ. ಕಡೆಗೆ ಕ್ರ ಶ 640ನೇ ಇಸವಿಯಲ್ಲಿ ಈಜಿಪ್ಟ್ ಇಸ್ಲಾಮ್ ರಾಜರ ಅಧೀನಕ್ಕೆ ಬರುತ್ತದೆ. ಆಗ ಅಲ್ಲಿನ ಮುಸ್ಲಿಮ್ ರಾಜ ಕಲೀಫಾ ಒಮರ್, ಈ ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕ ಹಾಗೂ ಕಾಗದಗಳು ಕುರಾನ್ ಹೇಳಿಕೆಗೆ ವಿರುದ್ದವಾಗಿದೆ, ಹಾಗಾಗಿ ಇದನ್ನೆಲ್ಲಾ ಸುಟ್ಟು ಹಾಕಿ ಎಂದಾಗ, ಈ ಗ್ರಂಥಾಲಯದ ಎಲ್ಲಾ ಪುಸ್ತಕ ಮತ್ತು ಕಾಗದಗಳನ್ನು ಊರಿನಲ್ಲಿದ್ದ ಬಚ್ಚಲು ಮನೆಗಳಲ್ಲಿ ಬಿಸಿ ನೀರು ಕಾಯಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ.
ಈಗ ಈ ಜಾಗದಲ್ಲಿ ಆಧುನಿಕ ಗ್ರಂಥಾಲಯ ಕಟ್ಟಲಾಗಿದೆ. 11 ಮಹಡಿಯ 33 ಮೀಟರ್ ಎತ್ತರದ ಆಧುನಿಕ ಕಟ್ಟಡ ಇದಾಗಿದೆ. ಇದರ ವಿನ್ಯಾಸಕ್ಕಾಗಿ 1988ರಲ್ಲಿ ಯುನೆಸ್ಕೋ ಪ್ರಪಂಚದ ಹಲವು ಕಟ್ಟಡ ವಿನ್ಯಾಸಕರಿಗೆ ಸ್ಪರ್ಧೆ ನಡೆಸಿ ಕಡೆಗೆ ಸ್ಪರ್ಧೆಯಲ್ಲಿ ಗೆದ್ದ ನಾರ್‌ವೇ ದೇಶದ ವಿನ್ಯಾಸಕ ಕಂಪನಿ ನೀಡಿದ ವಿನ್ಯಾಸ ಇದಾಗಿದೆ. ಕಟ್ಟಡ ಕಟ್ಟಲು ತಗುಲಿದ ಖರ್ಚು 220 ದಶಲಕ್ಷ ಅಮೇರಿಕಾ ಡಾಲರ್. ಸುಮಾರು 80 ಲಕ್ಷ ಪುಸ್ತಕಗಳು ಇಲ್ಲಿದ್ದು, ಕಟ್ಟಡ ಕಟ್ಟಲು ಭೂಮಿ ತೋಡುತ್ತಿದ್ದಾಗ ಸಿಕ್ಕಂತಹ ಹಲವು ಹಳೆಯ ಗ್ರಂಥಾಲಯದ ವಸ್ತುಗಳನ್ನು ಹಾಗೂ ಕಾಗದಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 1995ರಲ್ಲಿ ಕಟ್ಟಡ ಕಟ್ಟಲು ಆರಂಭಿಸಿದ್ದು 2002ರಲ್ಲಿ ಇದರ ಉದ್ಘಾಟನೆಯಾಯಿತು. ಒಮ್ಮೆಗೇ ಸುಮಾರು 3000ಕ್ಕೂ ಹೆಚ್ಚು ಜನ ಇಲ್ಲಿ ಓದಲು ಕುಳಿತುಕೊಳ್ಳಬಹುದು. ಈ ಗ್ರಂಥಾಲಯದ ಮುಂದಿನ ದೊಡ್ಡ ಗೋಡೆಯ ಮೇಲೆ ಜಗತ್ತಿನ 120 ಭಾಷೆಗಳ ಅಕ್ಷರಗಳಿದ್ದು, ಕನ್ನಡದ "ಗ" "ನ" ಅಕ್ಷರಗಳಿರುವುದು ನಮಗಂತೂ ಹೆಮ್ಮೆ ಎನಿಸಿತು. ಇದಕ್ಕೆ ಅಂಟಿಕೊಂಡಂತೆ ಒಂದು ಪ್ಲಾನೆಟೋರಿಯಮ್ ಅಂದರೆ ಅಂತರಿಕ್ಷ ವೀಕ್ಷಣಾಲಯವೂ ಇದೆ.
ಅಲ್ಲಿಂದ ನೇರ ಹೋಟಲ್ ಗೆ ಹೋಗಿ ಊಟ ಮಾಡಿ, ನಮಗಾಗಿ ಅಂದು ತಂಗಲು ಕಾದಿರಿಸಿದ್ದ ಚೆರಿ ಮೆರಿಸ್ಕಿ ಎಂಬ ಹೋಟಲ್ ತಲುಪಿದಾಗ ಸುಮಾರು 3 ಗಂಟೆ. ಆ ದಿನದ ಪ್ರವಾಸ ಅಲ್ಲಿಗೆ ಮುಕ್ತಾಯವಾಗಿತ್ತು. ಹೋಟಲ್‌ಗೆ ಬಂದ ತಕ್ಷಣ ಬಿಸಿನೀರಿನ ಸ್ನಾನ ಮಾಡಿ ಮಲಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ಸಂಜೆ ನಾನು ಮತ್ತು ವಿಜಯ ಕುಮಾರ್ ಮೆಡಿಟರೇನಿಯನ್ ಸಮುದ್ರದ ದಡದಲ್ಲಿನ ದೊಡ್ಡ ದಾರಿಯಲ್ಲಿ ಸುಮಾರು 2 ಕಿಲೋಮೀಟರ್ ನಡೆದು, ಅಲಕ್ಸಾಂಡ್ರಿಯಾ ಊರಿನ ಪೇಟೆ ಬೀದಿಗಳಲ್ಲಿ ವಿಂಡೋ ಶಾಪಿಂಗ್ ಮಾಡಿ ಮತ್ತೆ ಮಧ್ಯಾಹ್ನ ಊಟ ಮಾಡಿದ್ದ ಹೋಟಲ್‌ಗೆ ರಾತ್ರಿ ಊಟಕ್ಕೆ ಎಲ್ಲರೂ ಹೋಗಿ ವಾಪಸ್ ಬಂದು ಚೆರಿ ಮೆರಿಸ್ಕಿ ಹೋಟಲನಲ್ಲಿ ನಿದ್ರಿಸಿದೆವು.
ಈ ಲೇಖನದಲ್ಲಿನ ಸುಮಾರು ವಿಷಯಗಳು ನಾನು ಗೈಡ್ ಸಮೆ ಯೊಂದಿಗೆ ಚರ್ಚಿಸಿದಾಗ ಮತ್ತು ಗೂಗಲ್‌ನಿಂದ ನಾನು ತಿಳಿದುಕೊಂಡಿದ್ದಾಗಿರುತ್ತದೆ.
ಹಲವರು ತಿಳಿಸಿದಂತೆ ಈ ಲೇಖನಕ್ಕೆ ಸಂಬಂಧಿಸಿದ ನಾನು ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮುಂದುವರೆಯುತ್ತದೆ............
ಭಾಗ 3
ಭಾರತ, ಈಜಿಪ್ಟ್, ಜೋರ್ಡಾನ್ ಈ ರೀತಿಯ ಚಿಕ್ಕ ದೇಶಗಳ ಇತಿಹಾಸವೇ ಹೀಗೆ. ತಿಳಿದದ್ದು ಪೂರ್ತಿಯಾಗಿ ವಿವರಿಸೋಣ ಅಂದುಕೊಂಡರೆ, ಓದುಗರಾದ ನೀವು ಇದೇನಪ್ಪ ಶಾಸ್ತ್ರಿಗಳು ಪುರಾಣ ಹೇಳ್ತಾ ಇದ್ದಾರೆ ಅಂತೀರೇನೋ ಅನ್ನೋ ಭಯ, ಕಮ್ಮಿ ಹೇಳಿ ಮುಗಿಸೋಣ ಅಂದುಕೊಂಡರೆ ನನ್ನ ಮನಸ್ಸಾಕ್ಷಿ ಅದನ್ನು ಒಪ್ಪುತ್ತಿಲ್ಲ. ಏನೇ ಇರಲಿ, ಈಜಿಪ್ಟ್ ದೇಶದ 4500 ವರ್ಷಗಳ ಇತಿಹಾಸದಲ್ಲಿ ನಾನು ತಿಳಿದುಕೊಂಡಿರುವುದು ಕೇವಲ ಶೇಕಡ 10ರಷ್ಟು ಅಷ್ಟೆ, ಅದರಲ್ಲಿ ನಾನು ಇಲ್ಲಿ ವಿವರಣೆ ನೀಡುತ್ತಿರುವುದು ಶೇಕಡ 1ರಷ್ಟು. ಈ ನನ್ನ ಲೇಖನವನ್ನು ಓದಿದ ಮೇಲೆ, ಈಜಿಪ್ಟ್ ದೇಶ ನೋಡಲೇಬೇಕೆಂದು ನಿಮಗನಿಸಿದರೆ, ನನ್ನ ಗುರಿ ನಾನು ಮುಟ್ಟಿದಂತೆ.
ಈಜಿಪ್ಟ್‌ನ ಪಿರಮಿಡ್, ಸಮಾಧಿ ಮತ್ತು ದೇವಸ್ಥಾನಗಳಲ್ಲಿ ಇರುವ ಕೆತ್ತನೆಗಳು ಹಾಗೂ ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದಾದರೆ, ಶೇಕಡ 90ರಷ್ಟು ಚಿತ್ರಗಳಲ್ಲಿ ನಾವು ಕಾಣುವುದು ಒಬ್ಬ ರಾಜ, ಆ ರಾಜನು ನಂಬಿರುವ ಒಂದು ದೇವತೆ ಮತ್ತು ಕೆಲವೊಂದು ಕಡೆ ಆ ದೇವತೆಯ ಹೆಂಡತಿ. ಈಜಿಪ್ಟ್ ರಾಜರಿಗೆ ಮರಣದ ನಂತರದ ಜೀವನವಿರುವ ಬಗ್ಗೆ ಬಹಳ ನಂಬಿಕೆ ಇತ್ತು. ಹಾಗಾಗಿ ಅವನು ರಾಜನಾದ ತಕ್ಷಣ ಅವನು ಮರಣದ ಮುಂದಿನ ಪಯಣಕ್ಕೆ ಸಿದ್ದಮಾಡಿಕೊಳ್ಳುತ್ತಿದ್ದ. ತನ್ನ ಸಮಾಧಿ ಎಲ್ಲಿರಬೇಕು ಮತ್ತು ಹೇಗಿರಬೇಕು, ತನಗೆ ಇಷ್ಟವಾದ ಪ್ರಾಣಿಗಳು, ಆಹಾರ ಮತ್ತು ವಸ್ತುಗಳು ಯಾವುವು ಅಲ್ಲಿರಬೇಕು ಇವೆಲ್ಲವೂ ರಾಜನ ನಿರ್ಧಾರವಾಗಿರುತ್ತಿತ್ತು. ಈ ಸಮಾಧಿಗಳನ್ನು ಕಟ್ಟಲು ಜನರಿಗೆ ಹಣವನ್ನೇನು ನೀಡುತ್ತಿರಲಿಲ್ಲ. ಕೇವಲ ಅವರಿಗೆ ಎರಡು ಹೊತ್ತಿನ ಊಟವಷ್ಟೆ. ಇನ್ನು ಇಲ್ಲಿನ ಕೆತ್ತನೆ ಅಥವಾ ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದಾದರೆ, ರಾಜನು ದೇವತೆಗೆ ಏನಾದರೊಂದು ಕೈಚಾಚಿ ಕೊಡುತ್ತಿರುತ್ತಾನೆ. ದಾನ್ಯಗಳು, ಕೋಳಿ, ಮೀನು, ಆಭರಣ, ಹುಲ್ಲು, ಸುಗಂಧ ದ್ರವ್ಯಗಳು, ಅಸ್ತ್ರಗಳು ಹೀಗೆ ಏನಾದರೊಂದು ದೇವರಿಗೆ ಅರ್ಪಣೆಯಾಗುತ್ತಿರುತ್ತದೆ. ಈ ಅರ್ಪಣೆಯ ಮೂಲ ಉದ್ದೇಶ ಆ ದೇವನು ಈ ರಾಜನ ಮರಣದ ನಂತರದ 12 ದಿನಗಳ ಪಯಣ ಸುಗಮ ಮಾಡಲೆಂದಾಗಿರುತ್ತದೆ. ಸಾಕಷ್ಟು ಚಿತ್ರಗಳಲ್ಲಿ ಎರಡು ಕೈಗಳನ್ನು ಮೇಲೆ ಮಾಡಿ ಹಾರುತ್ತಿರುವಂತಹ ಕೋತಿಗಳ ಚಿತ್ರ ಬಹುಷಃ ನಾವು ನೋಡಿದ ಎಲ್ಲಾ ಕಟ್ಟಡಗಳಲ್ಲೂ ಇದೆ. ಕೋತಿಗಳ ಚಿತ್ರ ಏಕೆಂದು ಮುಂದಿನ ಕಂತಿನಲ್ಲಿ ತಿಳಿಸುತ್ತೇನೆ, ಈಗ ನಮ್ಮ ಪಯಣ ಮುಂದುವರಿಸೋಣ.
ನಮ್ಮ ಮೂರನೇ ದಿನದ ಪ್ರವಾಸದಲ್ಲಿ ಮೊದಲು ನಾವು ಭೇಟಿಕೊಡಬೇಕಾದ್ದು ಪ್ರಾಚೀನ ಕಾಲದ ಆಂಫಿ ಥಿಯೇಟರ್ ಅಥವಾ ಬಯಲು ರಂಗಮಂದಿರ ಹಾಗೂ ಕೈರೋ ನಗರಕ್ಕೆ ಅಂಟಿಕೊಂಡಿರುವ ಗೀಜಾ ಪ್ರದೇಶದಲ್ಲಿನ ಪಿರಮಿಡ್‌ಗಳು. ನಾವು ತಂಗಿದ್ದ ಹೋಟಲ್ಲಿನಲ್ಲಿಯೇ ಉಚಿತವಾಗಿ ಬೆಳಗಿನ ತಿಂಡಿಯ ವ್ಯವಸ್ಥೆ ಇದ್ದು ನಾವು ಅಲ್ಲಿಯೇ ತಿಂಡಿ ಮುಗಿಸಿ ಬೆಳಿಗ್ಗೆ 8ಕ್ಕೆ ಆ ದಿನದ ಪ್ರವಾಸ ಆರಂಭಿಸಿದೆವು..
*ಆಂಫಿ ತಿಯೇಟರ್ - ಬಯಲು ರಂಗಮಂದಿರ*
1960ರಲ್ಲಿ ಅಲೆಗ್ಸಾಂಡ್ರಿಯಾ ಊರಿನ ಕೋಮ್ ಎಲ್ ಡೆಕ್ಕಾ ಎಂಬ ಜಾಗದಲ್ಲಿ ಈಜಿಪ್ಟ್ ಸರ್ಕಾರ ಕಟ್ಟಡವನ್ನು ನಿರ್ಮಿಸಲು ಹೋದಾಗ, ಒಬ್ಬ ಕೂಲಿ ಆಳು ನೆಲದಡಿಯಲ್ಲಿ ಒಂದು ಕಲ್ಲಿನ ಕಂಬವನ್ನು ನೋಡುತ್ತಾನೆ. ಅಲ್ಲಿಂದ ಆರಂಭವಾಯಿತು ಈ ಜಾಗದ ಉತ್ಖನನ (excavation). ಕ್ರಿ ಪೂ 31ರಲ್ಲಿ ಈಜಿಪ್ಟ್ ದೇಶ ರೋಮನ್ನರ ಅಧೀನಕ್ಕೆ ಬರುತ್ತದೆ. ರೋಮನ್ನರು ಕಟ್ಟಿದ ರಂಗಮಂದಿರ ಇದಾಗಿದೆ ಎಂದು ಇದರ ಶೈಲಿಯಿಂದ ತಿಳಿದುಬರುತ್ತದೆ. ಆದರೂ ರೋಮನ್ ಆಳ್ವಿಕೆ ಇದ್ದ ಬೇರೆ ದೇಶಗಳಲ್ಲಿರುವ ರಂಗಮಂದಿರಗಳನ್ನು ನೋಡಿದರೆ ಇದು ಬಹಳ ಚಿಕ್ಕದಾಗಿದ್ದು, ಜೊತೆಗೆ ಇದಕ್ಕೆ ಅಂಟಿಕೊಂಡಿರುವಂತಿರುವ ಸುಮಾರು 20 ಕೊಠಡಿಗಳನ್ನು ಗಮನಿಸದರೆ ಇಲ್ಲಿ ವಿದ್ಯಾಲಯವಿತ್ತೆಂದು ಮತ್ತು ನಾವು ರಂಗಮಂದಿರ ಎಂದು ಯಾವುದನ್ನು ಅಂದುಕೊಂಡಿದ್ದೇವೋ ಅದು ಪ್ರವಚನ, ಭಾಷಣಗಳನ್ನು ಮಾಡುವ ಜಾಗವಿರಬಹುದೆಂಬ ಅನುಮಾನವೂ ಬರುತ್ತದೆ. ಈ ರಂಗಮಂದಿರ ಅರ್ಧಚಂದ್ರಾಕೃತಿಯಲ್ಲಿದ್ದು ಸುಮಾರು 13 ಸಾಲುಗಳಲ್ಲಿ ವೀಕ್ಷಕರಿಗೆ ಕುಳಿತುಕೊಳ್ಳಲು ಅವಕಾಶವಿದೆ. ಪ್ರತಿಯೊಂದು ಸಾಲಿನಲ್ಲೂ ಈಗಿನ ಸಿನಿಮಾ ಮಂದಿರದಂತೆ ಆಸನದ ಸಂಖ್ಯೆ ಬರೆದಿರುವುದನ್ನು ನಾವು ನೋಡಬಹುದು. ಈ ಆಸನಗಳಿಗೆ ಬಳಸಿರುವ ಮಾರ್ಬಲ್ ಕಲ್ಲು ಅತ್ಯುತ್ತಮ ಗುಣಮಟ್ಟದ್ದಾಗಿದೆ ಮತ್ತು ನೆಲಕ್ಕೆ ಬಳಸಿದ್ದ ಟೈಲ್ಸ್ ಕೂಡ ಕೆಲವೊಂದು ಕಡೆ ಉಳಿದುಕೊಂಡಿದ್ದು ಈಗಲೂ ನಾವು ಕಾಣಬಹುದು. ರಂಗಮಂದಿರ ಮತ್ತು ಶಾಲಾ ಕೊಠಡಿಗಳ ಮಧ್ಯದಲ್ಲಿ ಅಗಲವಾದ ರಸ್ತೆಯೊಂದಿದ್ದು ಅದರ ಒಂದು ಪಕ್ಕದಲ್ಲು ದೊಡ್ಡ ದೊಡ್ಡ ಕಲ್ಲಿನ ಕಂಬಗಳನ್ನು ನಿಲ್ಲಿಸದ್ದಾರೆ. ಶೇಕಡ 90ರಷ್ಟು ಹಾನಿಯಾಗಿರುವ ಕೊಠಿಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕಲ್ಲಿನ ಕುರ್ಚಿ ಮತ್ತು ಮೇಜುಗಳಿರುವುದು ತಿಳಿದುಬರುತ್ತದೆ.
*ಈಜಿಪ್ಟಿನ ಯಾವುದೇ ಕಟ್ಟಡಕ್ಕೆ ಹೋದರೂ ಸುಮಾರು 3000ದಿಂದ 5000 ವರ್ಷಕ್ಕೆ ಮುಂಚೆ ನಾವೇ ಅಲ್ಲಿ ನೆಲೆಸಿದ್ದೆವು ಮತ್ತು ಆ ಕಟ್ಟಡ ನಿರ್ಮಾಣದಲ್ಲಿ ನಮ್ಮದೂ ಯಾವುದೋ ಒಂದು ಪಾತ್ರವಿದೆ ಎಂದು ಊಹಿಸಿಕೊಂಡಾಗ ಮಾತ್ರ ಆ ಜಾಗದ ಪಾವಿತ್ರ್ಯತೆ ಮತ್ತು ವಿಶೇಷತೆಯನ್ನು ಅನುಭವಿಸಲು ಸಾಧ್ಯ.* ಮೊದಲನೇ ದಿನ ಕಾಟಾಕೋಂಬ್ ಸಮಾಧಿಗೆ ಹೋದಾಗಲೇ ನಾನು ನನ್ನ ಸಹಪ್ರವಾಸಿಗರಿಗೆ ಈ ವಿಷಯ ಹೇಳಿದ್ದೆ ಮತ್ತು ಗೈಡ್ ಸಮೆಯೂ ಸೇರಿ ಎಲ್ಲರೂ ನನ್ನ ಮಾತನ್ನು ಒಪ್ಪಿದ್ದರು.
ಈ ರಂಗಮಂದಿರದಲ್ಲಿ ಕೂಡ ನಾಟಕ ಮಾಡುತ್ತಿರುವ ರೀತಿ ನಿಂತುಕೊಳ್ಳಲು ಸಹಪ್ರವಾಸಿ ಪಿ.ವಿ.ಚಂದ್ರಶೇಖರ್ ಅವರ ಮಡದಿ ನಿರ್ಮಲಾ ಅವರಿಗೆ ಹೇಳಿ ನಾನು ಕ್ಲಿಕ್ಕಿಸಿದ ಫೋಟೋ ಸಹಪ್ರವಾಸಿಗರಲ್ಲಿ ಅತ್ಯಂತ ಪ್ರಶಂಸೆಗೆ ಒಳಪಟ್ಟಿತು. ಹಾಗೆ ನಾನು ಕೂಡಾ ನನ್ನ ಬಾಹುಬಲವನ್ನು ತೋರಿಸಿ ತೆಗೆಸಿಕೊಂಡ ಫೋಟೋ ಗೆಳೆಯ ವಿಜಯಕುಮಾರ್ ಅವರು ಮೊಬೈಲಿನಲ್ಲಿ ಕ್ಲಿಕ್ಕಿಸಿದರು.
ಸುಮಾರು 1 ಗಂಟೆಗಳ ಕಾಲ ಈ ರಂಗಮಂದಿರದಲ್ಲಿ ಸಮಯ ಕಳೆದಮೇಲೆ ನಮ್ಮ ಪ್ರಯಾಣ ನಮ್ಮ ಈಜಿಪ್ಟ್ ಪ್ರವಾಸದ ಕೇಂದ್ರಬಿಂದು ಗೀಜ಼ಾದಲ್ಲಿರುವ ಪಿರಮಿಡ್ ಕಡೆಗೆ.
*ಗೀಜ಼ಾದಲ್ಲಿರುವ ಪಿರಮಿಡ್‌ಗಳು*
3ಗಂಟೆ ಬಸ್ ಪ್ರಯಾಣದ ನಂತರ, ಬಸ್ಸಿನ ಕಿಟಕಿಯಿಂದಲೇ ನಮಗೆ ಪಿರಮಿಡ್‌ನ ಮೊದಲ ದರ್ಶನವಾಯಿತು. ಪಿರಮಿಡ್ ಎಂದರೆ ಶಾಲೆ ಪಠ್ಯಪುಸ್ತಕಗಳಲ್ಲಿ ನೋಡಿದ ಚಿತ್ರವಷ್ಟೇ ನೆನಪಿದ್ದು, ಸುಮಾರು 20ರಿಂದ 25 ಅಡಿ ಎತ್ತರವಿರುತ್ತದೆ ಎಂಬ ನನ್ನ ಕಲ್ಪನೆ ತಪ್ಪೆಂಬುದು ಅಲ್ಲಿ ಅರಿವಾಗಿತ್ತು. ಈಗಾಗಲೇ ಮಧ್ಯಾಹ್ನ 12ಗಂಟೆಯಾಗಿದ್ದರಿಂದ ಮೊದಲು ಊಟ ಮುಗಿಸಿ ನಂತರ ಪಿರಮಿಡ್ ನೋಡುವುದಾಗಿ ಗೈಡ್ ತಿಳಿಸಿದರು. ಅಲ್ಲಿಯೇ ಹತ್ತಿರದಲ್ಲಿ ಇದ್ದ ಮವ್ಲಾನಾ ಎಂಬ ಹೋಟಲ್ಲಿನಲ್ಲಿ ಊಟ ಮಾಡಿದೆವು. *ಅಲ್ಲಿ ಸಿಕ್ಕ ಸಸ್ಯಾಹಾರಿ ಊಟದ ಬಗ್ಗೆ ಯಾವುದೇ ಕಾಮೆಂಟ್ ಮಾಡದೇ, ಸಹ ಪ್ರವಾಸಿಗರಾದ ಪ್ರಭಾಕರ್ ಅವರ ಮಡದಿ ಸುಜಾತಾ ಅವರು ಊಟಮಾಡುತ್ತಿದ್ದದ್ದನ್ನು ನೋಡಿ, ಪೂರ್ತಿ ಪ್ರವಾಸದಲ್ಲಿ ಊಟದ ವಿಷಯದಲ್ಲಿ ನಾನೂ ಹಾಗೇ ಇರಬೇಕೆಂದು ನಿರ್ಧರಿಸಿದ್ದು ಮುಂದಿನ 10 ದಿನಗಳು ಆಹಾರ ಸೇವನೆ ಸುಲಭವಾಗಿತ್ತು.*
ಪ್ರವಾಸಿಗರಿಂದ ಸದಾ ಕಿಕ್ಕಿರಿದು ತುಂಬಿರುವ ಈ ಪಿರಮಿಡ್‌ಗಳಿರುವ ಸ್ಥಳದಲ್ಲಿ ನಾವು ಕಳೆದು ಹೋಗುವ ಸಾಧ್ಯತೆಗಳು ಹೆಚ್ಚು, ಹಾಗಾಗಿ ನಮ್ಮ ಗೈಡ್‌ಗಳಿಂದ ಪದೇ ಪದೇ ಎಚ್ಚರಿಕೆಯ ಸಂದೇಶಗಳು ಬರುತ್ತಿತ್ತು. ಭಾರತದ ರೋಟಿ, ದಾಲ್ ಸಿಗದಿದ್ದರೂ, ಬಟಾಣಿ ಪಲ್ಯ ಹಾಗೂ ಟೊಮೇಟೋ ಗೊಜ್ಜುಗಳು ನಮ್ಮ ಊಟದ ರುಚಿಗೆ ಹತ್ತಿರಕ್ಕೆ ಇತ್ತು. ಜೊತೆಗೆ ತರಕಾರಿ ಸಲಾಡ್ ಮತ್ತು ಹಣ್ಣುಗಳು ಪಿರಮಿಡ್ ಸುತ್ತ ಓಡಾಡಲು ಬೇಕಿದ್ದ ಶಕ್ತಿಯನ್ನು ಸಮರ್ಪಕವಾಗಿ ನೀಡಿತ್ತು.
ಮೂರು ದೊಡ್ಡ ಪಿರಮಿಡ್‌ಗಳು ಹಾಗೂ 3 ಸಣ್ಣ ಪಿರಮಿಡ್‌ಗಳು ಅಲ್ಲಿದ್ದವು. ಒಂದು ಪಿರಮಿಡ್‌ನಿಂದ ಮತ್ತೊಂದರ ಹತ್ತಿರ ಹೋಗಲು ಬಸ್ ಅವಶ್ಯಕತೆ ಇತ್ತು. ಓಡಾಡಲು ಕುದುರೆ ಒಂಟೇ ಬೇಕೆ, ನಿಮ್ಮ ಫೋಟೋ ತೆಗೆಯಬೇಕೆ ಎಂದು ಹಿಂದೆ ಬೀಳುತ್ತಿದ್ದ ಸ್ಥಳೀಯರು ಬಹಳ ಇದ್ದರು. ಈ ಪಿರಮಿಡ್‌ಗಳಲ್ಲಿ 146 ಮೀಟರ್ ಎತ್ತರದ ಅತಿ ದೊಡ್ಡ ಪಿರಮಿಡ್ *ಕ್ರಿ ಪೂ 2600 ಇಸವಿಯಲ್ಲಿ* ಕಟ್ಟಿದ ಫಾರೋ ಖುಫು ಎಂಬುವವನ ಸಮಾಧಿ. ಆದರೆ ಪಿರಮಿಡ್‌ಗಳ ಒಳಗೆ ಈಗೇನು ಇಲ್ಲ. ಕೇವಲ ಮೆಟ್ಟಲುಗಳಿರುವ ಗುಹೆ ಹಾಗೂ ಕಲ್ಲಿನ ಶವಪೆಟ್ಟಿಗೆ ಇದೆ ಅಷ್ಟೆ. ಒಳಗೆ ಹೋಗಲು ಎರಡನೇ ಪಿರಮಿಡ್‌ನಲ್ಲಿ ಮಾತ್ರ ಅವಕಾಶವಿತ್ತು. ಇದು ಸುಮಾರು 138 ಮೀಟರ್ ಎತ್ತರದ್ದು. ಸುಮಾರು 3 ಅಡಿ ಎತ್ತರದ ಗುಹೆಯೊಳಗೆ ಸುಸಜ್ಜಿತ ಮೆಟ್ಟಲುಗಳಿವೆ. 4 ನೆಲಮಹಡಿಗಳನ್ನು ಇಳಿದು ಹತ್ತುವಷ್ಟಿದೆ ಈ ಗುಹೆ. ಗುಹೆಯ ಕೊನೆಯಲ್ಲಿ ಮುಖ್ಯ ಕೋಣೆ ಮತ್ತು ಅಲ್ಲಿ ಖಾಲಿ ಇರುವ ಕಲ್ಲಿನ ಶವ ಪೆಟ್ಟಿಗೆ.
ಈ ದೊಡ್ಡ ಪಿರಮಿಡ್ ಯಾವುದೇ ಕೆತ್ತನೆಗಳಿಲ್ಲದ, ಈ ಗೀಜ಼ಾದಲ್ಲಿರುವ ಸುಣ್ಣದ ಕಲ್ಲಿನ ಬೆಟ್ಟವನ್ನು ಕಡಿದು ಹೆಚ್ಚೇನು ಸಮತಟ್ಟಿಲ್ಲದ 23 ಲಕ್ಷ ಕಲ್ಲುಗಳಿಂದ ಕಟ್ಟಲಾಗಿದೆ. ಒಳಗಿರುವ ಶವಪೆಟ್ಟಿಗೆ ಗ್ರಾನೈಟದ್ದಾಗಿದೆ. ಸುಮಾರು 3800 ವರ್ಷಗಳ ಕಾಲ ಪ್ರಪಂಚದ ಅತಿ ಎತ್ತರದ ಕಟ್ಟಡವಾಗಿತ್ತು ಈ ಮುಖ್ಯ ಪಿರಮಿಡ್. ತಂದೆ ಮಗ ಮತ್ತು ಮೊಮ್ಮಗನ ಸಮಾಧಿಗಳು ಈ ಮೂರು ಪಿರಮಿಡ್‌ಗಳು ಮತ್ತು ಸುಮಾರು 40 ಅಡಿ ಎತ್ತರದ ಮೂರು ಪಿರಮಿಡ್ ಇವರ ಹೆಂಡತಿಯರದು. ಎಷ್ಟು ಫೋಟೋ ತೆಗೆದುಕೊಂಡರೂ, ತೆಗೆಸಿಕೊಂಡರೂ ಇನ್ನೂ ಬೇಕು ಬೇಕು ಎನ್ನುವ ನಮ್ಮ ಜಪ ನಿಲ್ಲುವುದೇ ಇಲ್ಲ. ಹಾಗಾದರೆ ಈ ಪಿರಮಿಡ್‌ನಲ್ಲಿದ್ದ ವಸ್ತುಗಳು ಮಮ್ಮಿಗಳು ಏನಾದವು ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಗೈಡ್ ಸಮೆ ಇಂದ. ಕ್ರಿ ಪೂ 829ರಲ್ಲಿ ಈಜಿಪ್ಟ್ ಆಳುತ್ತಿದ್ದ ರಾಜರು ತಮ್ಮ ಸಮಾಧಿಗಳಿಗಾಗಿ ಈ ಪಿರಮಿಡ್‌ಗಳಲ್ಲಿದ್ದ ವಸ್ತುಗಳನ್ನು ಸಾಗಿಸಿದ್ದರು.
ಈ ಪಿರಮಿಡ್‌ಗಳ ಪಕ್ಕದಲ್ಲೇ ಸ್ಫಿನ್ಕ್ಸ್ ಪ್ರತಿಮೆ ಇದೆ. ಇದರೆ ವಿಶೇಷತೆ ಎಂದರೆ, ಈ ಪ್ರತಿಮೆಯಲ್ಲಿ ತಲೆ ಮನುಷ್ಯನದಿದ್ದು ದೇಹ ಸಿಂಹದ್ದಾಗಿದೆ. ನೇರ ಬಿಸಿಲು ಈ ಪ್ರತಿಮೆಯ ಹಿಂದೆ ಬರುತ್ತಿದ್ದದ್ದರಿಂದ ಇದರ ಒಳ್ಳೆಯ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ.
ಅಂದು ಸಂಜೆ ಇದೇ ಪಿರಮಿಡ್ ಬಳಿ ದೀಪ ಮತ್ತು ಶಬ್ದದ ಪ್ರದರ್ಶನ (light and sound show) ರದ್ದಾಗಿದ್ದು ನಾವು ಮಾರನೇ ದಿನ ಸಂಜೆ ಆ ಪ್ರದರ್ಶನ ನೋಡಲು ಇಲ್ಲಿಗೆ ಮತ್ತೇ ಬರಬೇಕೆಂದು ಗೈಡ್ ತಿಳಿಸಿದಾಗ ಮನದಲ್ಲೇನೋ ಸಂತೋಷ. ಅಲ್ಲಿಂದ ನೇರ ಕೈರೋಗೆ ಹೋಗಿ ಒಂದೆರೆಡು ಸರ್ಕಾರಕ್ಕೆ ಸೇರಿದ ಮಳಿಗೆಗಳಿಗೆ ಭೇಟಿಕೊಟ್ಟು ರಾತ್ರಿ ಊಟ ರೆಡ್ ಎಲಿಫೆಂಟ್ ಎಂಬ ಹೋಟಲ್ಲಿನಲ್ಲಿ ಮುಗಿಸಿ, ತಂಗಲು ಪಂಚತಾರ ಹೋಟೆಲ್ ಲೇ ಪಾಸಾಜ್ ಸೇರಿಕೊಂಡೆವು.
ಭಾಗ 4
ಈ ಪಿರಮಿಡ್ ಎಂಬ ಹೆಸರು ಕಟ್ಟಡಗಳಿಂದ ಆಕಾರಕ್ಕೆ ಬಂತೆ, ಅಥವಾ ಆಕಾರದಿಂದ ಕಟ್ಟಡಕ್ಕೆ ಬಂತೆ, ನಮ್ಮ ಸಾಮಾನ್ಯ ಜ್ಞಾನಕ್ಕೆ ಮೀರಿದ್ದು. ಆದರೆ ಈಜಿಪ್ಟಿನ ರಾಜರು ಇದೇ ಆಕಾರವನ್ನು ಏಕೆ ಬಳಸಿದರು ಎಂಬುದಕ್ಕೆ ಅವರುಗಳ ಮನದಲ್ಲಿದ್ದ ಒಂದು ನಂಬಿಕೆ ಇದೆ. ರಾಜನು ಸತ್ತ ನಂತರ ಅವನಿಗೆ 12 ದಿನ ಪ್ರಯಾಣ ಇರುತ್ತದೆ. ಈ ಪ್ರಯಾಣದಲ್ಲಿ ಕ್ಷುದ್ರ ಶಕ್ತಿಗಳು ಅವನನ್ನು ಆಕ್ರಮಣ ಮಾಡಬಹುದು. ಹಾಗಾಗಿ ರಾಜನಾದವನು ಇವಗಳನ್ನು ಗೆಲ್ಲುವ ಪರಿಯನ್ನು ಬದುಕಿದ್ದಾಗಲೇ ಕಲಿಯುತ್ತಾನೆ. ಅದಕ್ಕಾಗಿ ಅವನು ನಾಲ್ಕು ಗ್ರಂಥಗಳನ್ನು ಓದಿಕೊಂಡಿರಬೇಕು. ಈ ವಿಷಯ ನಮ್ಮ ಗೈಡ್ ಸಮೆ ಹೇಳಿದಾಗ ನನಗೆ ನೆನಪಿಗೆ ಬಂದದ್ದು ನಮ್ಮ ಗರುಡ ಪುರಾಣ. ಪಿರಮಿಡ್ ಆಕಾರದಿಂದ ಇನ್ನೆಲ್ಲಿಗೋ ಹೋಯಿತು ನನ್ನ ಮಾತು. ಇಲ್ಲ ಮಾತು ದಾರಿ ತಪ್ಪಿಲ್ಲ ಅನಿಸುತ್ತೆ. 12 ದಿನದ ರಾಜನ ಪ್ರಯಾಣದ ಹಾದಿಯೇ ಈ ಪಿರಮಿಡ್ ಆಕಾರ. ಆ ಪಿರಮಿಡ್ ತುದಿಯಲ್ಲಿಯೇ ಈ ರಾಜನು ತನ್ನ ದೈವ ಸೂರ್ಯನನ್ನು ಭೇಟಿಮಾಡುವುದು. ಅಲ್ಲಿಂದ ಅವನಿಗೆ ಮೋಕ್ಷ. ಈ ಪಿರಮಿಡ್ ಒಂದು ಬಾಣವೆಂದು ಊಹಿಸಿಕೊಂಡರೆ, ಆ ಸೂರ್ಯನೇ ಅದರ ಗುರಿ.
ಮೇಲಕ್ಕೆ ಕೈ ಎತ್ತಿರುವ ಮಂಗಗಳ ಚಿತ್ರಗಳನ್ನು ಹಲವೆಡೆ ಬಹುಷಃ ಎಲ್ಲಾ ದೇವಸ್ಥಾನ, ಸಮಾಧಿಗಳಲ್ಲೂ ನಾವು ಕಾಣಬಹುದು ಎಂದು ನಾನು ಹಿಂದಿನ ಭಾಗದಲ್ಲಿ ತಿಳಿಸಿದ್ದೆ. ಬೆಳಗಿನ ಸೂರ್ಯೋದಯದ ಹೊತ್ತಿನಲ್ಲಿ ಮಂಗಗಳು ಎರಡು ಕೈ ಎತ್ತಿ ತಮ್ಮ ಆರಾಧ್ಯ ದೈವ ಸೂರ್ಯನೆಡೆಗೆ ಹಾರುವಂತೆ ಕುಣಿಯುವುದು ನಮಗೆ ಪ್ರಕೃತಿ ಕಲಿಸುತ್ತಿರುವ ಭಕ್ತಿಯ ಪಾಠ ಎಂದು ಈಜಿಪ್ಟ್ ಜನರು ನಂಬಿದ್ದರು. ಹಾಗಾಗಿಯೇ ಮಂಗಗಳಿಗೆ ಒಂದು ವಿಶೇಷ ಸ್ಥಾನ.
19ನೇ ಜನವರಿ 2023 ಅಂದರೆ ನಮ್ಮ ಈಜಿಪ್ಟ್ ಪ್ರವಾಸದ ಮೂರನೇ ದಿನ. ಬೆಳಿಗ್ಗೆಯ ತಿಂಡಿ ಮುಗಿಸಿ ನಾವು ಹೊರಟಿದ್ದು ಕೈರೋ ಟವರ್ ಎಂಬ ಬಹು ಮಹಡಿ ಕಟ್ಟಡಕ್ಕೆ. 1961ರಲ್ಲಿ ಕಟ್ಟಿದ 67 ಅಂತಸ್ತಿನ ಈ ಕಟ್ಟಡದ ಎತ್ತರ 187 ಮೀಟರ್. ಇದರ ಮೇಲಿನ ಮಾಳಿಗೆಯಲ್ಲಿ ಪೂರ್ತಿ ಕೈರೋ ನಗರವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಂದ ನೈಲ್ ನದಿ, ಹಳೇ ಕೈರೋ ನಗರ, ಹೊಸ ಕೈರೋ ನಗರ ಎಲ್ಲವನ್ನೂ ಕಾಣಬಹುದು. ಎಲ್ಲರೂ ಲಿಫ್ಟಿನಲ್ಲಿ ಮೇಲೆ ಹೋಗಿ ಕೆಳಗೆ ಬರಲು ಸುಮಾರು 1 ಗಂಟೆ ಬೇಕಾಯಿತು.
*ಈಜಿಪ್ಶಿಯನ್ ಮ್ಯೂಸಿಯಮ್ - ಸಂಗ್ರಹಾಲಯ*
ಯಾವ ಸಮಾಧಿಗಳಲ್ಲಿದ್ದ ಹೆಚ್ಚು ಮೌಲ್ಯದ ವಸ್ತುಗಳನ್ನು ವಿದೇಶೀಯರು ಕೊಳ್ಳೆ ಹೊಡೆದು ಬೇಡದ್ದನ್ನು ಬಿಟ್ಟು ಹೋಗಿದ್ದರೋ, ಆ ವಸ್ತುಗಳನ್ನು ಕೂಡಿಟ್ಟಿರುವ ಈಜಿಪ್ಟಿನ ಮ್ಯೂಸಿಯಮ್‌ಗೆ ಮುಂದೆ ನಮ್ಮ ಭೇಟಿ. ಅಷ್ಟೇ ಅಲ್ಲ ಏನೂ ಹಾನಿಯಾಗದ 1922ರಲ್ಲಿ ದೊರೆತ ಸುಮಾರು 3500 ವರ್ಷ ಹಳೆಯ ಟುಟಾಂಕಮೂನ್ ಸಮಾಧಿಯಲ್ಲಿ ಸಿಕ್ಕ ಚಿನ್ನದಿಂದ ಮಾಡಿರುವ ಶವಪೆಟ್ಟಿಗೆ, ರಾಜನ ಚಿನ್ನದ ಖುರ್ಚಿ ಮತ್ತು ಆ ಸಮಯದಲ್ಲಿ ಉಪಯೋಗಿಸುತ್ತಿದ್ದ ಕಲ್ಲಿನ ಪಾತ್ರೆಗಳು, ಚಾಕು, ಚೂರಿ ಇನ್ನೂ ಹಲವು ವಸ್ತುಗಳು ಎಲ್ಲವೂ ಈ ಮ್ಯೂಸಿಯಂನಲ್ಲಿ ಭದ್ರವಾಗಿಟ್ಟಿದ್ದಾರೆ. ಮುಂದೆ ಟುಟಾಂಕಮೂನ್ ಬಗ್ಗೆ ಅವನ ಶವ ಅಂದರೆ ಮಮ್ಮಿಯನ್ನು ನೋಡುವ ದಿನದ ಲೇಖನದಲ್ಲಿ ಬರೆಯುತ್ತೇನೆ. ಸದ್ಯಕ್ಕೆ ನಮಗೆ ತಿಳಿಯಬೇಕಾದ ವಿಷಯವೆಂದರೆ, ಯಾರೂ ಕೊಳ್ಳೆಹೊಡೆಯದೆ, ಭದ್ರವಾಗಿ ಸಮಾಧಿಯಲ್ಲಿ ದೊರೆತ ಅತಿ ಮೌಲ್ಯ ವಸ್ತುಗಳನ್ನು ಕೂಡಾ ಈ ಮ್ಯೂಸಿಯಂನಲ್ಲಿ ನೋಡಬಹುದು.
ಪ್ರವಾಸಕ್ಕೆ ಮುಂಗಡವಾಗಿ ಈಜಿಪ್ಟಿನ ಇತಿಹಾಸ ಸ್ವಲ್ಪ ತಿಳಿದುಕೊಂಡಿದ್ದರೆ ಈ ಸಂಗ್ರಹಾಲಯ ನೋಡಲು ಕನಿಷ್ಠ ಎರಡು ದಿನ ಬೇಕಾಗುತ್ತದೆ. ಏನೂ ಗೊತ್ತಿಲ್ಲದಿದ್ದರೆ ಒಂದೆರೆಡು ಗಂಟೆಗಳಲ್ಲಿ ಪೂರ್ತಿ ಸಂಗ್ರಹಾಲಯ ಸುತ್ತಾಡಬಹುದು. ಅಷ್ಟೇ ಅಲ್ಲ, ಯಾವುದೇ ಟೂರಿಸ್ಟ್ ಕಂಪನಿಯವರು ಗರಿಷ್ಠವೆಂದರೆ 5 ಗಂಟೆಗಳು ಮಾತ್ರ ನಮಗೆ ಸಮಯ ನೀಡುತ್ತಾರೆ. ಇದಕ್ಕೆ ಕೇಸರಿಯು ಹೊರತೇನಲ್ಲ. ಟುಟಾಂಕಮೂನ್‌ನ ಚಿನ್ನದ ಶವ ಪೆಟ್ಟಿಗೆ ಮತ್ತು ಇತರ ವಸ್ತುಗಳನ್ನು ಒಳಾಂಗಣದ ಒಂದು ಕೋಣೆಯಲ್ಲಿ ಇರಿಸಿ, ವೀಕ್ಷಿಸಲು ಮಾತ್ರ ಅವಕಾಶ ನೀಡಿ ಛಾಯಾಗ್ರಹಣ ನಿಷೇಧಿಸಿದ್ದಾರೆ. ಬೇರೆ ಎಲ್ಲಾ ಕಡೆ, ಫೋಟೋಗಳನ್ನು ತೆಗೆಯಬಹುದು.
ಒಂದು ಶವವನ್ನು ಮಮ್ಮಿಯಾಗಿ ಪರಿವರ್ತಿಸುವ ಮುನ್ನ ಅದರಲ್ಲಿನ ನಾಲ್ಕು ಅಂಗಗಳನ್ನು ಅಂದರೆ ಹೊಟ್ಟೆ, ಕರುಳು, ಯಕೃತ್ತು(liver) ಮತ್ತು ಶ್ವಾಸಕೋಶ (lungs) ಇವುಗಳನ್ನು ತೆಗೆದು ಒಂದೊಂದು ಪ್ರತ್ಯೇಕ ಬಟ್ಟಲುಗಳಲ್ಲಿ ಅಥವಾ ಕಲ್ಲಿನಿಂದ ಮಾಡಿದ ಡಬ್ಬಿಗಳಲ್ಲಿ ಶೇಖರಿಸಿಡುತ್ತಾರೆ. 3500 ವರ್ಷಗಳ ಹಿಂದೆ ಟುಟಾಂಕಮೂನ್‌ನ ದೇಹದ ಈ ನಾಲ್ಕು ಅಂಗಗಳನ್ನಿಟ್ಟ ಡಬ್ಬಿಗಳನ್ನು ಇಲ್ಲಿ ವೀಕ್ಷಿಸಬಹುದು. ಮತ್ತು ಆ ಡಬ್ಬಿಗಳನ್ನು ಇಟ್ಟಿರುವ ಬೃಂದಾವನದ ರೀತಿಯಲ್ಲಿರುವ ಪೆಟ್ಟಿಗೆಯೂ ಇಲ್ಲಿ ವೀಕ್ಷಣೆಗೆ ಇದೆ. ಇಲ್ಲಿ ನಾವು ಪ್ರಾಣಿಗಳ ಮಮ್ಮಿಗಳನ್ನು ನೋಡಬಹುದು. ನಾಯಿ, ಮೊಸಳೆ, ಕೋಳಿ ಅಷ್ಟೇ ಏಕೆ 6 ತಿಂಗಳು ವಯಸ್ಸಿನ ರಾಜಮನೆತನದ ಒಂದು ಮಗುವಿನ ಮಮ್ಮಿಯೂ ಇಲ್ಲಿದೆ. ಈಜಿಪ್ಟಿನ ಸುತ್ತಮುತ್ತ ಆಗಾಗ ಸಿಕ್ಕೆ ಹಲವು ಬಹು ಎತ್ತರದ ಕಲ್ಲಿನ ಮೂರ್ತಿಗಳು, ಆಗಿನ ಕಾಲದ ದಿನಬಳಕೆಯ ವಸ್ತುಗಳು ಎಲ್ಲವೂ ಇಲ್ಲಿ ನೋಡಿದೆವು. ಸುಮಾರು 2 ಗಂಟೆಗಳಲ್ಲಿ ಆ ಸಂಗ್ರಹಾಲಯದಲ್ಲಿ ನೋಡಲೇಬೇಕಾದ ಮುಖ್ಯ ವಸ್ತುಗಳ ಬಗ್ಗೆ ನಮ್ಮ ಗೈಡ್ ಸಮೆ ತಿಳಿಸಿ ಅದನ್ನು ನಮಗೆ ತೋರಿಸಿ, ಇನ್ನೊಂದು ಗಂಟೆ ಇಲ್ಲೇ ಒಳಗೆ ಸುತ್ತಾಡಬಹುದು ಎಂದರು. ಆದರೆ ನಮ್ಮ ಗುಂಪಿನವರು ಈಗಾಗಲೇ ಎರಡು ಗಂಟೆ ಸುತ್ತಾಡಿದ್ದರಿಂದ ಹೊರಗೆ ಹೋಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ನಾನು ಮತ್ತು ಇನ್ನೂ ನಾಲ್ಕು ಜನ ಮಾತ್ರ ಗೈಡ್ ತೋರಿಸದ ಬೇರೆ ಜಾಗಗಳಿಗೂ ಹೋಗಲು ನಿರ್ಧರಿಸಿದೆವು. ಸುಮಾರು 15 ಅಡಿ ಉದ್ದ ಮತ್ತು 10 ಅಡಿ ಎತ್ತರದ ಕಲ್ಲಿನ ಶವ ಪೆಟ್ಟಿಗೆಗಳು, ಮರದ ಶವಪೆಟ್ಟಿಗೆಗಳು, 40ರಿಂದ 50 ಅಡಿ ಎತ್ತರದ ಕಲ್ಲಿನ ಮೂರ್ತಿಗಳು ಇನ್ನೂ ಹಲವು ವಸ್ತುಗಳನ್ನು ನಾವು ಈ ಒಂದು ಗಂಟೆಯಲ್ಲಿ ನೋಡಿದವು. ಅಲ್ಲಿದ್ದ ಒಂದು ಗಂಡು ಹೆಣ್ಣಿನ ಬೊಂಬೆಯ ಜೋಡಿ ಅದೇಕೋ ತುಂಬ ಆಕರ್ಷಿಸಿತು. ಆ ಬೊಂಬೆಗಳ ಕಣ್ಣಂತೂ, ಮನುಷ್ಯನ ನಿಜವಾದ ಕಣ್ಣುಗಳನ್ನೇ ಕಿತ್ತಿಟ್ಟಿದ್ದಾರೇನೋ ಎಂಬಂತಿತ್ತು.
ನಾನು ಸುಮಾರು 100 ಫೋಟೋಗಳನ್ನು ಇಲ್ಲಿ ತೆಗೆದಿದ್ದೇನೆ. ಈ ಲೇಖನದ ಜೊತೆಗೆ ನಿಮ್ಮೊಂದಿಗೆ ಆ ಫೋಟೋಗಳನ್ನು ಬಳಸಿ ಮಾಡಿರುವ ವೀಡಿಯೋವನ್ನು ಹಂಚಿಕೊಳ್ಳುತ್ತೇನೆ.
ಅಲ್ಲಿಂದ ನೇರ ಕೈರೋದ ಖಾನ-ಎಲ್-ಖಲೀಲಿ ಮಾರುಕಟ್ಟೆಗೆ ಹೋದೆವು. ಬಹಳ ದೊಡ್ಡ ಜಾಗದಲ್ಲಿರುವ ಸಾವಿರಾರು ಅಂಗಡಿಗಳಿರುವ ಈ ಮಾರುಕಟ್ಟೆಯಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ. ದಿನಸಿ, ಡ್ರೈ ಫ್ರೂಟ್ಸ್, ಬಟ್ಟೆಗಳು, ಪಠಾಕಿ, ಕಂಪ್ಯೂಟರ್ ಎಲ್ಲವೂ ಸಿಗುತ್ತದೆ. ಆದರೆ ಯಾವುದರ ಗುಣಮಟ್ಟವೂ ನನಗೇಕೋ ಇಷ್ಟವಾಗಲಿಲ್ಲ. ಮಾರುಕಟ್ಟೆಯಲ್ಲಿ ಸುಮಾರು 1 ಗಂಟೆ ಕಳೆದು ಅಲ್ಲಿಂದ ಪಿರಮಿಡ್ ಬಳಿ ಹೋಗಿ ದೀಪ ಮತ್ತು ಧ್ವನಿ (Light and Sound) ಪ್ರದರ್ಶನ ನೋಡಿದೆವು. ಪಿರಮಿಡ್‌ಗಳ ಬಣ್ಣ ಆಗಾಗ ಬದಲಾಗುತ್ತಿದ್ದದ್ದು ಆಕರ್ಷಕವಾಗಿತ್ತು. ನಾನು ಬೆಳಿಗ್ಗೆ ಸಂಗ್ರಹಾಲಯದಲ್ಲಿ ಗಂಡು-ಹೆಣ್ಣಿನ ಬೊಂಬೆಗಳ ಫೋಟೋ ತೆಗೆದಿದ್ದೆ, ಅದರ ಕಥೆ ಈ ಪ್ರದರ್ಶನದಲ್ಲಿ ತಿಳಿಯಿತು. 3500 ವರ್ಷಗಳ ಮುಂಚೆ ಆ ವ್ಯಕ್ತಿ ತನ್ನ ಪತ್ನಿಗೆ ಬರೆದಿದ್ದ ಪ್ರೇಮ ಪತ್ರವು ಇತ್ತೀಚೆಗೆ ಸಂಶೋಧಕರಿಗೆ ಸಕ್ಕಿತು, ಗಂಡಸರನ್ನು ನಂಬಬೇಡ, ಮನೆಯಲ್ಲಿಯೇ ಇರು, ಹೊರಗೆಲ್ಲೂ ಹೋಗಬೇಡ. ನಾನು ಆದಷ್ಟು ಬೇಗ ಊರಿಗೆ ಹಿಂದಿರುಗುತ್ತೇನೆ" ಎಂಬುದು ಈ ಪತ್ರದಲ್ಲಿ ಬರೆದಿದೆ ಎಂದು ಸಂಶೋಧಕರು ತಿಳಿಸುತ್ತಾರೆ.
ರಾತ್ರಿ ರೆಡ್ ಎಲಿಫೆಂಟ್ ಹೋಟಲ್ಲಿನಲ್ಲಿ ಊಟ ಮಾಡಿ ಮತ್ತೆ ಲಾ ಪಸಾಜ್ ಹೋಟಲ್‌ಕಡೆಗೆ ಪ್ರಯಾಣ ಬೆಳೆಸಿದಾಗ ಆ ದಿನದ ಪ್ರವಾಸ ಮುಗಿದಿತ್ತು.
ಮುಂದುವರೆಯುತ್ತದೆ……
ಭಾಗ 5
ಪರಿಚಯವಿರುವ ನಾವು ಹದಿನಾರು ಜನ ಈಜಿಪ್ಟ್ ಪ್ರವಾಸಕ್ಕೆ ಬೆಂಗಳೂರಿನಿಂದ ಹೊರಟಿದ್ದು. ಭಾರತದ ಬೇರೆ ಬೇರೆ ಊರುಗಳಿಂದ ಇನ್ನೂ 13 ಜನ ನಮ್ಮೊಡನೆ ಸೇರಿಕೊಂಡರು. ಗೈಡ್‌ಗಳಿಬ್ಬರು ಸೇರಿ ಒಟ್ಟು 31 ಜನರ ಪ್ರವಾಸಿ ತಂಡ ನಮ್ಮದಾಗಿತ್ತು. ಪ್ರವಾಸದ ನಾಲ್ಕನೆಯ ದಿನದ ಹೊತ್ತಿಗೆ 31 ಜನರೂ ಒಂದೇ ಕುಟುಂಬದಂತೆ ಹತ್ತಿರವಾಗಿದ್ದೆವು. ಊಟ ಮಾಡುವ ಸಮಯದಲ್ಲಿ ಮಾತ್ರ ನಾವು 16 ಜನ ಸಸ್ಯಾಹಾರಿಗಳಿಗೆ ಪ್ರತ್ಯೇಕ ಮೇಜು ಕಾದಿರಿಸಲಾಗುತ್ತಿತ್ತು. ನಾಲ್ಕು ಪ್ರವಾಸಿಗರು ಬಿಟ್ಟರೆ ಮಿಕ್ಕೆಲ್ಲರೂ 50ರಿಂದ 75 ವರ್ಷ ವಯೋಮಿತಿಯವರು. ಹಾಗಾಗಿ ಜನರೇಶನ್ ಗ್ಯಾಪ್ ಸಮಸ್ಯೆ ಹೆಚ್ಚೇನು ಉದ್ಬವಿಸಲಿಲ್ಲ ಮತ್ತು ಮೊದಲೆರೆಡು ದಿನ "ನಾವು ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ, ಈ ರೀತಿ ವಿದೇಶ ಪ್ರವಾಸಗಳಲ್ಲಿ ನಮ್ಮ ನಡವಳಿಕೆ ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತರುವಂತಿರಬೇಕು" ಎಂದು ಗೈಡ್ ಪ್ರಮೋದ್ ಹೇಳುತ್ತಿದ್ದರು, ಆದರೆ ಕ್ರಮೇಣ ಅವರಿಗೇ ತಿಳಿದಿತ್ತು, ನಮಗೆ ಆ ರೀತಿಯ ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ ಎಂದು.
ಈಜಿಪ್ಟಿನ ಒಟ್ಟು ಜನಸಂಖ್ಯೆ ಹತ್ತು ಕೋಟಿ. ಅದರಲ್ಲಿ ಸುಮಾರು ಒಂದು ಕೋಟಿ ರಾಜಧಾನಿ ಕೈರೋದಲ್ಲಿ ನೆಲೆಸಿದ್ದಾರೆ. ರಸ್ತೆ ಮೇಲೆ ಬಿಕ್ಷೆ ಬೇಡುವ ಸಾವಿರಾರು ಜನರು ಒಂದು ಕಡೆಯಾದರೆ, ಬೀದಿ ವ್ಯಾಪರಿಗಳು ಇನ್ನೊಂದು ಕಡೆ. ಒಂದೊಂದು ಅಪಾರ್ಟ್‌ಮೆಂಟ್‌ಗಳಲ್ಲಿ ಭಾರತೀಯ ಲೆಕ್ಕದ ಪ್ರಕಾರ ನಾವು ಊಹಿಸಿದ್ದು ಸುಮಾರು 30 ಮನೆಗಳಿರಬಹುದೆಂದು. ಆದರೆ ಅವುಗಳ ಛಾವಣಿಯಲ್ಲಿದ್ದ ಟಿವಿ ಡಿಶ್‌ಗಳ ಸಂಖ್ಯೆಗಳನ್ನು ನೋಡಿದರೆ ಒಂದೊಂದು ಅಪಾರ್ಟ್‌ಮೆಂಟಿನಲ್ಲಿ ಕನಿಷ್ಠ 100 ಮನೆಗಳಿವೆ. ಸೀಳು ಬಿಟ್ಟಿರುವ ಗೋಡೆಗಳಿಗೆ ತ್ಯಾಪೇ ಹಾಕದೇ ಬಿಟ್ಟಿರುವುದು, ಕಿಟಕಿ ಗಾಜುಗಳು ಒಡೆದಿದ್ದರೂ ಅದನ್ನು ಬದಲಾಯಿಸದೇ ಇರುವುದು, ಮಾಸಿರುವ ಪೈಂಟ್, ಪ್ಲಾಸ್ಟಿಂಗ್ ಮಡದೇ ಇಟ್ಟಿಗೆಗಳು ಕಾಣಿಸುತ್ತಿರುವ ಗೋಡೆಗಳು, ಇವೆಲ್ಲವೂ ಆ ದೇಶದಲ್ಲಿನ ಜನರ ಬಡತನವನ್ನು ತೋರಿಸುತ್ತಿತ್ತು. ಭಾರತದಲ್ಲಿ ಇರುವಂತೆ ಮಧ್ಯಮ ವರ್ಗದ ಜನರು ಇಲ್ಲಿ ಹೆಚ್ಚು ಇಲ್ಲ ಎಂಬುದು ನನ್ನ ಅನಿಸಿಕೆ. ಇದರಿಂದಾಗಿಯೇ ಇಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಬಹಳ ಕಡಿಮೆ. ಐ ಷಾರಾಮಿ ಕಾರ್‌ಗಳು ಒಂದು ಕಡೆಯಾದರೆ ರಸ್ತೆ ಮೇಲೆ ನಡೆದು ಹೋಗುತ್ತಿರುವವರು ಇನ್ನೊಂದು ಕಡೆ.
ಆದರೆ ಒಂದಂತು ನಿಜ, ಕಳೆದ ಸಾವಿರಾರು ವರ್ಷಗಳಿಂದ ಈಜಿಪ್ಟಿನಿಂದ ವಿದೇಶಿಯರು ಕೊಳ್ಳೆ ಹೊಡೆದಿರುವ ಚಿನ್ನವನ್ನೆಲ್ಲಾ ಈಜಿಪ್ಟ್ ಸರ್ಕಾರವೇನಾದರೂ ವಾಪಸ್ ತರಲು ಸಾಧ್ಯವಾದರೆ, ಬಹುಷಃ ಪ್ರಪಂಚದಲ್ಲೇ ಅತಿ ಶ್ರೀಮಂತ ರಾಷ್ಟ್ರ ಈಜಿಪ್ಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪ್ರವಾಸ ಕಥನ ಮುಂದುವರೆಸಿ ಶಾಸ್ತ್ರಿಗಳೇ ಅಂದ್ರೇನು, ಸರಿ, ಇಗೋ ಆರಂಭಿಸಿದೆ.
20ನೇ ಜನವರಿ 2023 ನಮ್ಮ ಈಜಿಪ್ಟ್ ಪ್ರವಾಸದ 4ನೇ ದಿನ. ಅಂದು ಮುಂಜಾನೆ 7 ಗಂಟೆಗೆ ನಮ್ಮ ವಿಮಾನ ಪ್ರಯಾಣ ಅಸ್ವಾನ್ ಎಂಬ ಊರಿಗೆ. ಈ ವಿಮಾನ ಪ್ರಯಾಣ ಕೇವಲು 90 ನಿಮಿಷದ್ದಷ್ಟೆ. ಬೆಳಿಗ್ಗೆ 4 ಗಂಟೆಗೇ ಉಪಹಾರ ತಯಾರಿದ್ದರು, ಅದೇಕೋ ಅಷ್ಟು ಹೊತ್ತಿಗೆ ಉಪಹಾರ ಮಾಡಲು ಮನಸ್ಸಾಗಲಿಲ್ಲ. ಹಾಗಾಗಿ ಅಂದು ನಾನು ಅಡುಕಲೆ ಅಂಗಡಿಯಿಂದ ಖರೀದಿಸಿದ್ದ ಗೊಜ್ಜವಲಕ್ಕಿ ಅಸ್ವಾನ್ ವಿಮಾನ ನಿಲ್ದಾಣದಲ್ಲಿ ತಿಂದು ಮುಗಿಸಿದೆ. ಒಣಗಿದ ಗೊಜ್ಜವಲಕ್ಕಿ ಪುಡಿಗೆ ಬಿಸಿ ನೀರು ಹಾಕಿ ಐದು ನಿಮಿಷ ಹಾಗೇ ಬಿಟ್ಟರೆ ಸಾಕು ಘಮಘಮ ವಾಸನೆಯ, ರುಚಿಯಾದ ಗೊಜ್ಜವಲಕ್ಕಿ ತಯಾರು. ಹೀಗೇ ಒಂದು ದಿನ ಅವಲಕ್ಕಿ ಪುಡಿಯಿಂದ ಮಾಡಿದ ಅಡುಕಲೆಯವರ ಉಪ್ಪಿಟ್ಟನ್ನು ತಿಂದೆ, ಯಾವ ದಿನವೆಂಬುದು ಮರೆತುಹೋಗಿದೆ.
ಅಸ್ವಾನ್ ನಗರ ನಮ್ಮ ಕರ್ನಾಟಕದ ಕೆಜಿಎಫ್ ಇದ್ದಂತೆ. ಈ ಊರನ್ನು ಈಜಿಪ್ಟಿನ ಚಿನ್ನದ ಗಣಿ ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲ ನಾನು ಹಿಂದಿನ ಲೇಖನಗಳಲ್ಲಿ ಹೇಳಿದ ರಾಜರ ಸಮಾಧಿಗಳಲ್ಲಿ ಬಳಸಲಾದ ಗ್ರಾನೈಟ್ ಕಲ್ಲುಗಳು ಇಲ್ಲೇ ದೊರೆಯುತ್ತಿದ್ದದ್ದು. ನಮ್ಮ ಪ್ರವಾಸದ ಮಧ್ಯದ ಈ ದಿನ ಒಂದು ರೀತಿ ನಮ್ಮ ೫ ದಿನದ ಕ್ರಿಕೆಟ್ ಟೆಸ್ಟ್ ಮ್ಯಾಚಿನಲ್ಲಿ ಮಧ್ಯದ ಒಂದು ದಿನ ವಿಶ್ರಾಂತಿ ದಿನ ಕೊಟ್ಟಂತೆ. ಈ ದಿನ ನಮಗೆ ಹೆಚ್ಚೇನು ನಡೆಯುವುದಾಗಲಿ, ನೋಡುವುದಾಗಲಿ ಇರಲಿಲ್ಲ.
*ಹೈಡ್ಯಾಮ್ - ಜಲಾಶಯ*
ವಿಮಾನ ನಿಲ್ದಾಣದಿಂದ ನಾವು ನೇರ ಹೊರಟಿದ್ದು ನೈಲ್ ನದಿಗೆ ಕಟ್ಟಲಾಗುತ್ತಿರುವ ಹೈ ಡ್ಯಾಮ್ ನೋಡಲು. ದಕ್ಷಿಣ ಆಫ್ರಿಕಾದಲ್ಲೇ ಅತಿ ದೊಡ್ಡ ಜಲಾಶಯ ಇದಾಗುತ್ತಿದೆ. ಇದನ್ನು ರಷ್ಯ ದೇಶದ ಸಹಯೋಗದೊಂದಿಗೆ ಕಟ್ಟಲಾಗುತ್ತಿದ್ದು, ಕೃಷಿಗೆ ಸಹಾಯವಾಗುವುದು ಇದರ ಒಂದು ಉಪಯೋಗವಾದರೆ, ವಿದ್ಯುಚ್ಛಕ್ತಿ ತಯಾರಿಸುವುದು ಇನ್ನೊಂದು ಉದ್ದೇಶ. ತಮ್ಮ ದೇಶದ ಅತ್ಯುತ್ತಮ ಸಾಧನೆ ಇದಾಗಿದೆ ಎಂದು ಗೈಡ್ ಸಮೆ ಹೆಮ್ಮೆಯಿಂದ ಹೇಳುತ್ತಿದ್ದಾಗ, "ವಾವ್" ಎನ್ನಲು ನಾವು ಹಿಂಜರಿಯಲಿಲ್ಲ. ದೊಡ್ಡ ದೊಡ್ಡ ಶ್ರೀಮಂತ ರಾಷ್ಟ್ರಗಳು ಈ ರೀತಿಯ ಜಲಾಶಯಗಳನ್ನು ಕಟ್ಟುವುದರಲ್ಲಿ ಆಶ್ಚರ್ಯವೇನಿಲ್ಲ, ಆದರೆ ಈಜಿಪ್ಟಿನಲ್ಲಿ ಇದಾಗುತ್ತಿರುವುದು ಹೆಮ್ಮೆಯ ವಿಷಯವೇ ಸರಿ. ಅಲ್ಲೇ ಇದ್ದ ಒಂದು ಚಿಕ್ಕ ಅಂಗಡಿಯಲ್ಲಿ ಕಾಫಿ ಕುಡಿದು, ಡ್ಯಾಮಿನ ಹತ್ತಿರದಲ್ಲಿ ಒಂದೆರೆಡು ಫೋಟೋ ಕ್ಲಿಕ್ಕಿಸಿ ಸುಮಾರು ಅರ್ಧ ಗಂಟೆ ಅಲ್ಲಿ ಕಳೆದು ನಾವು ಹೊರಟಿದ್ದು ಫಿಲೇ ದೇವಸ್ಥಾನಕ್ಕೆ.
*ಫಿಲೇ ದೇವಸ್ಥಾನ*
ನೈಲ್ ನದಿಯ ಒಂದು ಪುಟ್ಟ ದ್ವೀಪದ ಹೆಸರೇ ಫಿಲೇ ಮತ್ತು ಅಲ್ಲಿರುವ ದೇವಸ್ಥಾನವೇ ಫಿಲೇ ದೇವಸ್ಥಾನ. ಓರಿಸಿಸ್ ಎಂಬ ಪ್ರಖ್ಯಾತ ರಾಜನ ಸಮಾಧಿ ಹಿಂದೆ ಇಲ್ಲಿ ಇದ್ದರಿಂದ ಈಜಿಪ್ಟ್ ಜನರಿಗೆ ಈ ಜಾಗವು ಒಂದು ಪವಿತ್ರ ಕ್ಷೇತ್ರವಾಗಿತ್ತು. ಇಲಿಗೆ ಬರುತ್ತಿದ್ದ ಸಾಮಾನ್ಯ ಜನರ ಜನಸಾಗರವನ್ನು ಮುಖ್ಯ ಕೋಣೆಯಿಂದ ದೂರವಿಡಬೇಕೆಂದು ಯೋಚಿಸಿ, ಮುಖ್ಯ ಕೋಣೆ ಪ್ರವೇಶಿಸಲು ರಾಜ ಮತ್ತು ರಾಜ ಪುರೋಹಿತರಿಗೆ ಮಾತ್ರ ಅವಕಾಶವಿತ್ತು. ಆದರೆ ಹೊರಗಡೆಗೆ ಸುಮಾರು ಸಾವಿರ ಜನ ಒಮ್ಮೆಗೇ ಸೇರಬಹುದಾದ ಒಂದು ದೊಡ್ಡ ಬಯಲು ಮಂಟಪವಿದ್ದು ಇಲ್ಲಿಂದ ಸಾಮಾನ್ಯ ಜನರಿಗೆ ಪೂಜೆ ಮಾಡಲು ಅವಕಾಶ ಕೊಡಲಾಗಿತ್ತು. ಹೀಗೆ ಈ ಬಯಲಿನ ಮಂಟಪದಲ್ಲಿ ಪೂಜಿಸುತ್ತಿದ್ದವರ ಹಲವು ಕೆತ್ತನೆಗಳನ್ನು ಮತ್ತು ಚಿತ್ರ ಬಿಡಿಸಿರುವುದನ್ನು ಬಹಳಷ್ಟು ಕಡೆ ನಾವು ನೋಡಿದೆವು.
ನೈಲ್ ನದಿಗೆ ಜಲಾಶಯ ಕಟ್ಟಿದಾಗ ಅದರ ಹಿನ್ನೀರಿನಿಂದ ಮತ್ತು ನೈಲ್ ನದಿಯ ಪ್ರವಾಹದಿಂದ ಈ ಫಿಲೇ ದೇವಸ್ಥಾನ ಆಗಾಗ ನೀರಿನಲ್ಲಿ ಮುಳುಗಿಹೋಗುತ್ತಿತ್ತು. ಈ ಕಾರಣಕ್ಕಾಗಿಯೇ, ಪೂರ್ತಿ ದೇವಸ್ಥಾನವನ್ನು ಹಿಂದೆ ಹೇಗಿತ್ತೋ ಹಾಗೆಯೇ, ಎತ್ತರದ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಸುಮ್ಮನೆ ನೋಡುವವರಿಗೆ ಹೀಗೆ ಮಾಡಿರುವುದು ತಿಳಿಯುವುದಿಲ್ಲ, ನಮಗೂ ಕೂಡಾ ಗೈಡ್ ಸಮೆ ಹೇಳಿದಾಗಲೇ ತಿಳಿದದ್ದು. ವ್ಯಕ್ತಿ ಛಾಯಾಗ್ರಹಣಕ್ಕೆ ಒಂದು ಅತ್ಯುತ್ತಮವಾದ ದೇವಸ್ಥಾನ ಅಥವಾ ಸಂಕೀರ್ಣ ಇದಾಗಿದೆ. ಹಾಗಾಗಿ ಈ ಲೇಖನದ ಜೊತೆ ಕಳಿಸುವ ಫೋಟೋಗಳಲ್ಲಿ ಪ್ರವಾಸಿಗರೇ ಹೆಚ್ಚಿರುವುದನ್ನು ನೀವು ಗಮನಿಸಬಹುದು.
ಕ್ರಿಶ್ಚಿಯನ್ನರು ಈ ದೇವಸ್ಥಾನವನ್ನು ಚರ್ಚ್ ಆಗಿ ಪರಿವರ್ತಿಸಿ, ಇಲ್ಲಿನ ಗೋಡೆಯ ಮೇಲಿದ್ದ ಸಾಕಷ್ಟು ಕೆತ್ತನೆಗಳನ್ನು ಸುತ್ತಿಗೆಯಿಂದ ಹೊಡೆದಿರುವುದನ್ನು ಗೈಡ್ ಸಮೆ ತೋರಿಸಿದಾಗ ಮನಸ್ಸಿಗಾದ ನೋವು ಅಷ್ಟಿಷ್ಟಲ್ಲ. ಆದರೂ "ನನ್ನ ಧರ್ಮವೇ ಶ್ರೇಷ್ಠ" ಎಂಬುವ ಕಲ್ಪನೆ ಮನುಷ್ಯನಿಗೆ ಬರದಿದ್ದರೆ, ಪ್ರಪಂಚದಲ್ಲಿ ಪಿರಮಿಡ್ ತರಹದ ಇನ್ನೂ ಎಷ್ಟೋ ಸಾವಿರಾರು ವರ್ಷಗಳ ಹಳೆಯ ಕಟ್ಟಡಗಳನ್ನು ನಾವು ಈಗಲೂ ನೋಡಬಹುದಿತ್ತು ಅಲ್ಲವೇ.
*ಒಬೆಲಿಸ್ಕ್*
ಅನ್‌ಫಿನಿಷ್ಡ್ ಒಬೆಲಿಸ್ಕ್ (unfinished obelisk) ಈಗ ಮುಂದೆ ನಾವು ನೋಡಲಿದ್ದೇವೆ ಎಂದು ಗೈಡ್ ಸಮೆ ಹೇಳಿದಾಗ, ಅದರ ಕಲ್ಪನೆಯೇ ನನಗಿರಲಿಲ್ಲ. ಒಂದು ದೊಡ್ಡ ಬೆಟ್ಟದ ಹತ್ತಿರ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿಂದ ಸುಲಭವಾದ ಮೆಟ್ಟಲುಗಳ ಮೇಲೆ ಸುಮಾರು ಅರ್ಧ ಕಿಲೋಮೀಟರ್ ಅಷ್ಟು ಬೆಟ್ಟ ಹತ್ತಿದರೆ ಒಂದು ಇಳಿ ಜಾರು ಬಂಡೆ ಕಾಣಿಸಿತು. ಇದೆ ಒಬೆಲಿಸ್ಕ್. ಇದನ್ನು ಕೆತ್ತುವಾಗ ಕಡೆಯ ಹಂತದಲ್ಲಿ ಬಿರುಕು ಕಾಣಿಸಿದ್ದರಿಂದ ಹಾಗೆಯೇ ಬೆಟ್ಟದಲ್ಲಿಯೇ ಬಿಟ್ಟಿದ್ದಾರೆ ಎಂದು ಗೈಡ್ ಹೇಳಿದರು. ಈಗ ನಾನು ಹೇಳಿದ್ದು ನಿಮಗೆ ಎಷ್ಟು ಅರ್ಥವಾಯಿತೋ, ನನಗೂ ಕೂಡ ಗೈಡ್ ಹೇಳಿದ್ದು ಅಷ್ಟೇ ಅರ್ಥವಾಗಿದ್ದು. ತಕ್ಷಣ ಅಂತರ್ಜಾಲದಲ್ಲಿ ಒಬೆಲಿಸ್ಕ್ ಎಂದರೇನೆಂದು ಗೂಗಲ್ ಭಗಿನಿಯನ್ನು ಕೇಳಿದೆ. ಅಬ್ಬಾ, ಒಂದು ವಿಸ್ಮಯ ವಿಷಯವೇ ತೆರೆದುಕೊಂಡಿತು.
ಒಬೆಲಿಸ್ಕ್ ಸುಮಾರು 80ರಿಂದ 110 ಅಡಿ ಎತ್ತರದ ಗ್ರಾನೈಟಿನ ಏಕ ಶಿಲೆ. ಇದರ ನಾಲ್ಕು ಕಡೆ ಕೆತ್ತನೆಗಳು, ಚಿತ್ರಗಳು ಹಾಗೂ ಕೆಲವೊಮ್ಮೆ ಶಾಸನಗಳು ಇರುತ್ತದೆ. ಇದರ ತುದಿಯಲ್ಲಿ ಪಿರಮಿಡ್ ರೀತಿ ಆಕಾರ ನೀಡಿರುತ್ತಾರೆ. ಗ್ರಾನೈಟ್ ಕಲ್ಲಿರುವ ಬೆಟ್ಟಗಳನ್ನು ಹುಡುಕಿ, ಅದರಲ್ಲಿ ಜಾರಬಂಡೆಯ ರೀತಿ ಸ್ವಲ್ಪ ಸ್ವಲ್ಪವೇ ಬಿಡಿಸಿಕೊಂಡು ಒಂದು ಏಕ ಶಿಲೆ ಗ್ರಾನೈಟ್ ಕಲ್ಲನ್ನು ಮೇಲಕ್ಕೆತ್ತುತ್ತಾರೆ. ಈ ಕಲ್ಲಿನ ತೂಕ ಕಡಿಮೆ ಎಂದರೂ 1ಲಕ್ಷ 60ಸಾವಿರ ಕಿಲೋಗ್ರಾಮ್ ಆಗಿರುತ್ತದೆ. ಇವುಗಳನ್ನು ಈಜಿಪ್ಷಿಯನ್ನರು ದೇವಸ್ಥಾನ, ಸಮಾಧಿಗಳ ಪ್ರವೇಶದ್ವಾರದಲ್ಲಿ ನಿಲ್ಲಿಸುತ್ತಿದ್ದರು.
ಚಿನ್ನವನ್ನು ಬಿಟ್ಟರೆ, ಈಜಿಪ್ಟ್ ದೇಶದಿಂದ ಹೆಚ್ಚು ಕೊಳ್ಳೆ ಹೊಡೆದಿರುವ ವಸ್ತುವೆಂದರೆ ಈ ಒಬೆಲಿಸ್ಕ್. ಇಷ್ಟು ತೂಕದ ಒಬೆಲಿಸ್ಕ್‌ನ್ನು ಹಡಗುಗಳಲ್ಲಿ ತಮ್ಮ ದೇಶಕ್ಕೆ ಸಾಗಿಸದವರು ಫ್ರೆಂಚರು, ಆಂಗ್ಲರು, ರಷ್ಯನ್ನರು ಎಲ್ಲರೂ. ಯಾರೂ ಕದ್ದೆವೆಂದು ಹೇಳುವುದಿಲ್ಲ, ನಾವು ಈಜಿಪ್ಟಿಗೆ ಧನ ಸಹಾಯ ಮಾಡಿದೆವು, ಆಹಾರ ಧಾನ್ಯ ನೀಡಿದೆವು, ದೇಶ ರಕ್ಷಣೆಗೆ ಬಂದೂಕುಗಳನ್ನು ನೀಡಿದೆವು, ಅದಕ್ಕಾಗಿ ಆಗಿನ ಮುಸ್ಲಿಮ್ ದೊರೆಗಳು ತಮಗೆ ಉಡುಗೊರೆಯಾಗಿ ಒಬೆಲಿಸ್ಕ್ ನೀಡಿದರು ಎಂದು ಹೇಳಿಕೊಳ್ಳುತ್ತಾರೆ. ಅದೇನೋ "ಅತ್ತೆ ದುಡ್ಡು ಅಳಿಯ ದಾನ ಮಾಡಿದʼ ಅಂತಾರೆಲ್ಲಾ ಹಾಗೆ. ಈಗಲೂ ಪ್ಯಾರಿಸ್, ರೋಮ್, ವ್ಯಾಟಿಕನ್ ದೇಶಗಳಲ್ಲಿ ಈಜಿಪ್ಟಿನ ಒಬೆಲಿಸ್ಕ್‌ಗಳನ್ನು ನೋಡಬಹುದು. ಫ್ರೆಂಚರು ಈ ಒಬೆಲಿಸ್ಕ್‌ನ್ನು ಒಂದು ಗಡಿಯಾರದ ಗೋಪುರಕ್ಕೆ (clock tower) ವಿನಿಮಯ ಮಾಡಿಕೊಂಡರು. ಆದರೆ ಆ ಗಡಿಯಾರವು ಅಂದಿನಿಂದ ಇಂದಿನವರೆಗೂ ಓಡಲೇ ಇಲ್ಲ. ಪ್ಯಾರಿಸ್‌ನಿಂದ ತರುವಾಗ ಮಾರ್ಗ ಮಧ್ಯದಲ್ಲೆ ಕೆಟ್ಟು ಹೋಯಿತು.
ಮುಂದಿನ ದಿನಗಳಲ್ಲಿ ಒಂದು ದೇವಸ್ಥಾನದಲ್ಲಿ ಪೂರ್ತಿಯಾಗಿ ಕೆತ್ತನೆ ಇದ್ದು ನೇರ ನಿಂತಿರುವ ಒಂದು ಒಬಲಿಸ್ಕನ್ನು ನಾವು ನೋಡಿದೆವು. ಆಗ ಇದರ ಬಗ್ಗೆ ಹೆಚ್ಚು ಅರಿವು ಬಂತು.
ಆ ದಿನದ ಪ್ರವಾಸ ಅಲ್ಲಿಗೇ ಮುಗಿದು, ರಾತ್ರಿ ತಂಗಲು ದೊಡ್ಡ ಹಡಗಿಗೆ ಹೋದೆವು. ಇನ್ನೂ ಮೂರು ದಿನ ನಮ್ಮ ವಾಸ ಹಡಗಿನಲ್ಲಿ. ಅತ್ಯುತ್ತಮವಾದ ಕೊಠಡಿಗಳು ನಮ್ಮನ್ನು ಸ್ವಾಗತಿಸಿತು. ಹಡಗಿನ ವಿಶಾಲವಾದ ಮೇಲ್ಛಾವಣಿಗೆ ಹೋದರೆ ಪೂರ್ತಿ ನೈಲ್ ನದಿಯನ್ನು ನೋಡಬಹುದು. ಅಲ್ಲೇ ಒಂದು ಅಡುಗೆ ಮನೆ ಮತ್ತು ಮಲಗಿ ಮೈ ಕಾಯಿಸಿಕೊಳ್ಳಲು ಮಂಚ ಮತ್ತು ಹಾಸಿಗೆಗಳು.
ಆದರೆ ಮೊದಲ ದಿನ, ಹಡಗು ಎಲ್ಲಿಗೂ ಹೋಗುವುದಿಲ್ಲ, ಏಕೆಂದರೆ ಆ ರಾತ್ರಿಯವರೆಗೂ ಹಡಗಿನಲ್ಲಿ ಪ್ರವಾಸ ಬಯಸುವವರು (cruise) ಬರುತ್ತಲೇ ಇರುತ್ತಾರೆ. ಎರಡನೇ ದಿನದಿಂದ ಮಾತ್ರ ಹಡಗು ಪ್ರಯಾಣ ಆರಂಭ. ಆ ಸಂಜೆ ನೈಲ್ ಹಡಗಿನ ಮೇಲ್ಛಾವಣಿಯಿಂದ ತೆಗೆದೆ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ರಾತ್ರಿ ಹಡಗಿನಲ್ಲೇ ಊಟ ಮಾಡಿ ಮಲಗಿದೆವು ಎಂಬಲ್ಲಿಗೆ ನಮ್ಮ ನಾಲ್ಕನೇ ದಿನದ ಪ್ರವಾಸ ಮುಗಿಯಿತು.
ಮುಂದುವರೆಯುತ್ತದೆ.............
ಭಾಗ 6
ಈಜಿಪ್ಟ್ ದೇಶದ ಈಗಿನ ಸಂಸ್ಕೃತಿ ಇಸ್ಲಾಮ್ ಧರ್ಮಕ್ಕೇ ಸಂಪೂರ್ಣವಾಗಿ ಸೇರಿಕೊಂಡಿದ್ದರೂ, ಅದೇಕೋ ಇಲ್ಲಿನ ಜನರು ಇತರರಿಗಿಂತ ಸ್ವಲ್ಪ ಭಿನ್ನವೆನಿಸಿತು. ಉಡುಗೆ ತೊಡುಗೆಗಳಲ್ಲಿ ಸ್ಥಳೀಯರಿಗೆ ಯಾವುದೇ ಕಟ್ಟು ನಿಟ್ಟಿನ ನಿರ್ಬಂಧ ಇರುವುದು ನನಗೆ ಕಾಣಲಿಲ್ಲ, ನಾವು ಅಲ್ಲಿದ್ದ ಹತ್ತು ದಿನದಲ್ಲಿ ಯಾವುದೇ ಬೀದಿಗಳಲ್ಲಿ ಜನ ಜಗಳವಾಡುತ್ತಿರುವುದನ್ನು ನೋಡಲೇ ಇಲ್ಲ. ಸಾಕಷ್ಟು ಜನ ಅವರ ಪಾಡಿಗೆ ಅವರು ಅವರವರ ಕೆಲಸ ಮುಗಿಸಿಕೊಂಡು ಹೋಗುತ್ತಿರುತ್ತಾರೆ.
ಮಹಿಳೆಯರಲ್ಲಿ ಸಾಕಷ್ಟು ಜನ ಹಿಜಾಬ್ ಮತ್ತು ಬುರ್ಖಾ ತೊಟ್ಟಿದ್ದರೂ ನನಗೆ ಆಕರ್ಷಿಸಿದ್ದು ಕೆಲವು ಗಂಡಸರ ಉಡುಗೆ. ದಪ್ಪವಾದ ಬಟ್ಟೆಯಲ್ಲಿ ಕುತ್ತಿಗೆಯಿಂದ ಪಾದದ ತನಕ ಒಂದೇ ಬಟ್ಟೆಯಲ್ಲಿ ಹೊಲೆದ ಅಂಗಿ. ಇದನ್ನು ಇವರ ಭಾಷೆಯಲ್ಲಿ *ಗಲ್ಲಾಬಿಯಾ* ಎಂದು ಕರೆಯುತ್ತಾರೆ. ಶೇಕಡ 90 ರಷ್ಟು ಗಂಡಸರು ಸಿಗರೇಟ್ ಸೇದುತ್ತಿರುತ್ತಾರೆ. ವಿಮಾನ ನಿಲ್ದಾಣದಲ್ಲೂ ಕೂಡಾ ಸಿಗರೇಟ್ ಸೇದುವುದಕ್ಕೆ ಅನುಮತಿ ಇದೆ. ಇರಲಿ ಬಿಡಿ ಶಾಸ್ತ್ರಿಗಳೇ ಅವರ ಶೋಕಿ ಅವರದು, ನಿಮಗೇಕೆ ಚಿಂತೆ ಅಂದ್ರೇನು, ಅದು ಹಾಗಲ್ಲ, ಪೂರ್ತಿ ಈಜಿಪ್ಟ್ ಪ್ರವಾಸದಲ್ಲಿ ನಾವಂತೂ ಐದರಿಂದ ಹತ್ತು ಸಿಗರೇಟ್‌ಗಳ ಹೊಗೆ ಪರೋಕ್ಷವಾಗಿ ಒಳಗೆ ತೆಗೆದುಕೊಂಡಿರುತ್ತೇವೆ ಎಂಬುದು ನನ್ನ ಅನಿಸಿಕೆ. ಅದಕ್ಕೆ ನಿಮ್ಮನ್ನು ತಯಾರು ಮಾಡಬೇಕಲ್ಲವೇ. ಪಾಪ ನಮ್ಮ ಬಸ್ಸಿನಲ್ಲಿದ್ದ ಡ್ರೈವರ್ ಮತ್ತು ನಮ್ಮ ಗೈಡ್ ಸಮೆ ಮಾತ್ರ ಎಂದೂ ಬಸ್ ಒಳಗೆ ಸಿಗರೇಟ್ ಸೇದಲೇ ಇಲ್ಲ.
ದಿನಾಂಕ 21 ಜನವರಿ 2023 ನಮ್ಮ ಈಜಿಪ್ಟ್‌ಪ್ರವಾಸದ 5 ನೇ ದಿನ. ಅಂದು ಬೆಳೆಗ್ಗೆ 6ಗಂಟೆಗೇ ಕ್ರೂಸಿನಿಂದ ಹೊರಗೆ ಹೋಗಿ ಆಬುಸಿಂಬಲ್ ಎಂಬ ಜಾಗವನ್ನು ಬಸ್‌ನಲ್ಲಿ ನೋಡಿ ಬರುವುದಿತ್ತು. ಹಾಗಾಗಿ ಅಂದು ಬೆಳಿಗ್ಗೆ 4 ಗಂಟೆಗೇ ಕ್ರೂಸಿನಲ್ಲೇ ಉಪಹಾರ. ಆಹಾ, ಏನದ್ಭುತ ಎನ್ನುತ್ತೀರಿ, ಕನಿಷ್ಠ 50 ರೀತಿಯ ಉಪಹಾರ ಅಲ್ಲಿತ್ತು. ನಮ್ಮ ಗೈಡ್ ಪ್ರಮೋದ್ ಮೊದಲೇ ಅಲ್ಲಿ ಬಂದು ನಮಗೆಲ್ಲರಿಗೂ ಇದು ಪೂರ್ಣ ಸಸ್ಯಾಹಾರಿ, ಇದರಲ್ಲಿ ಮೊಟ್ಟೆ ಇದೆ, ಇದು ಮಾಂಸಾಹಾರಿ ಎಂದು ಹೇಳುತ್ತಿದ್ದ. ಪೂರ್ತಿ ಪ್ರವಾಸದಲ್ಲಿ ಗೈಡ್ ಪ್ರಮೋದನದು ಇದೊಂದು ಮುಖ್ಯ ಕೆಲಸವಾಗಿತ್ತು.
*ಅಬು ಸಿಂಬಲ್"
ಸಂಪೂರ್ಣ ಮರುಭೂಮಿಯಲ್ಲಿ ಸುಡಾನ್ ದೇಶದ ಕಡೆಗೆ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ನೇರ ರಸ್ತೆಯಲ್ಲಿ 4 ಗಂಟೆಗಳ ಬಸ್ ಪ್ರಯಾಣ ಮಾಡಿದರೆ ಈಜಿಪ್ಟ್ ಗಡಿಯಲ್ಲಿ ಅಬು ಸಿಂಬಲ್ ಊರು ಇದೆ. ಇಲ್ಲಿ ಎತ್ತರೆತ್ತರದ ಗುಡ್ಡದಲ್ಲೇ ಕೆತ್ತಿರುವ ಎರಡು ದೇವಸ್ಥಾನಗಳಿವೆ. ಇದನ್ನು ಕಟ್ಟಿಸಿದವರು ರಾಜ 2ನೇ ರಮೇಸಸ್. ಈತನಿಗೆ 78 ಜನ ಹೆಂಡತಿಯರು ಹಾಗೂ 105 ಜನ ಮಕ್ಕಳು. ಈ ದೇವಸ್ಥಾನಗಳಲ್ಲಿ ಒಂದು, ಅವನ ಪತ್ನಿಯರಲ್ಲಿ ಪ್ರಿಯಳಾದ ನೆಫರ್ತಿರಿಗಾಗಿ ಕಟ್ಟಿಸದ್ದಾನೆ. ಇದನ್ನು ಕಟ್ಟಲು ಆರಂಭಿಸಿದ್ದು ಕ್ರಿ.ಪೂ.1264 ಮತ್ತು ಕಟ್ಟಲು ತೆಗೆದುಕೊಂಡ ಸಮಯ ಸುಮಾರು 20 ವರ್ಷ. ಅಂದರೆ ಸುಮಾರು 3500 ವರ್ಷಗಳ ಹಳೆಯ ದೇವಸ್ಥಾನ ಇದಾಗಿದೆ.
ನಂತರ ಕಿ.ಪೂ 6ನೇ ಶನಮಾನದ ಹೊತ್ತಿಗೆ ಈ ದೇವಸ್ಥಾನವು ಮರಳುಗಾಡಿನ ಮಣ್ಣಿನಲ್ಲಿ ಮುಚ್ಚಿಹೋಯಿತು. 1813ರೆಲ್ಲಿ ಸ್ವಿಟ್ಸರ್‌ಲ್ಯಾಂಡಿನ ಸಂಶೋಧಕನು ಈ ಜಾಗಕ್ಕೆ ಬರುತ್ತಾನೆ, ಅಲ್ಲಿ ಒಬ್ಬ ಹುಡುಗ ತಾನು ಮರಳುಗಾಡಿನಲ್ಲಿರುವ ಒಂದು ದೇವಸ್ಥಾನವನ್ನು ತೋರಿಸುತ್ತೇನೆ ಎಂದು ದೇವಸ್ಥಾನದ ಸ್ವಲ್ಪವೇ ಮೇಲ್ಭಾಗ ಕಾಣಿಸುತ್ತಿದ್ದದ್ದನ್ನು ಅವರಿಗೆ ತೋರಿಸುತ್ತಾನೆ. ಆ ಹುಡುಗನ ಹೆಸರು ಅಬು ಸಿಂಬಲ್, ಹಾಗಾಗಿ ಆ ದೇವಸ್ಥಾನವಿರುವ ಊರಿಗೆ ಅಬು ಸಿಂಬಲ್ ಎಂದು ಸಂಶೋಧಕ ಹೆಸರಿಡುತ್ತಾನೆ.
ನೈಲ್ ನದಿಗೆ ಅಣೆಕಟ್ಟು ಕಟ್ಟಿದಾಗ, ಅಣೆಕಟ್ಟಿನ ಹಿನ್ನೀರು ನಾಸೆರ್ ಎಂಬ ದೊಡ್ಡ ಕೆರೆಯಾಗಿ ಈ ದೇವಸ್ಥಾನದ ಹತ್ತಿರ ತುಂಬಿಕೊಳ್ಳುತ್ತದೆ. 1968ರಲ್ಲಿ ಈ ದೇವಸ್ಥಾನಗಳನ್ನು ಯುನಿಸ್ಕೋ ಸಹಾಯದಿಂದ ಸಂಪೂರ್ಣವಾಗಿ ಅಲ್ಲೇ ಪಕ್ಕದ ಎತ್ತರದ ಜಾಗಕ್ಕೆ ಸ್ಥಳಾಂತರಿಸುತ್ತಾರೆ. ಸ್ಥಳಾಂತರಿಸಿರುವ ಕೌಶಲ್ಯ ಎಷ್ಟು ಚೆನ್ನಾಗಿದೆ ಎಂದರೆ ಇದು ಹಿಂದೆ ಬೇರೆ ಕಡೆ ಇತ್ತು ಎಂದು ನಂಬಲು ಅಸಾಧ್ಯ. ದೇವಸ್ಥಾನದ ಮುಂದೆ ಇರುವ ರಮೇಸಸ್‌ನ ನಾಲ್ಕು ಎತ್ತರದ ವಿಗ್ರಹಗಳಲ್ಲಿ ಒಂದರ ತಲೆ ಇವರು ನದಿಯ ಅಡಿಯಲ್ಲಿ ನೋಡಿದಾಗಲೇ ಬಿದ್ದುಹೋಗಿತ್ತಂತೆ. ಸ್ಥಳಾಂತರಿಸುವಾಗ ಈ ಬಿದ್ದಿರುವ ತಲೆಯನ್ನು ಮತ್ತೆ ಜೋಡಿಸಿಲ್ಲ, ಅದು ಹೇಗಿತ್ತೋ ಹಾಗೇ ದೇಹದ ಮುಂದೆ ಬಿದ್ದಿದೆ. ಅದ್ಭುತವಾದ ಕೆತ್ತನೆಗಳನ್ನು ಹೊಂದಿರುವ ಈ ಒಂದು ದೇವಸ್ಥಾನವನ್ನು ನೋಡಲು ಹಾಗೂ ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಲು ಕನಿಷ್ಠ 2 ದಿನ ಬೇಕು. ಹೆಚ್ಚು ಏನೂ ಅರಿಯಾಲಗದೇ ಪೂರ್ತಿ ದೇವಸ್ಥಾನದ ಒಳಾಂಗಣವನ್ನು ನಾನು ವಿಡಿಯೋ ಚಿತ್ರೀಕರಿಸಿದೆ. ವೇಗವಾಗಿ ಚಿತ್ರೀಕರಿಸಿದರೂ ನನಗೆ ಸುಮಾರು 12 ನಿಮಿಷ ತೆಗೆದುಕೊಂಡಿತು. ವೀಡಿಯೋದ ಯೂಟ್ಯೂಬ್ ಕೊಂಡಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ವೀಡಿಯೋ ಹಿಡಿಯುತ್ತಿದ್ದರಿಂದ ನಾನು ಗುಂಪಿನಲ್ಲಿ ಹಿಂದೆ ಬಿದ್ದು ಗೈಡ್ ಪ್ರಮೋದ್ ನನಗಾಗಿ ಹೊರಗೆ ಕಾಯುತ್ತಿದ್ದ. ರಾಣಿಗಾಗಿ ಕಟ್ಟಿದ್ದ ಎರೆಡನೇ ದೇವಸ್ಥಾನ ನಾನು ನೋಡಲು ಒಳಗೆ ಹೋಗುವ ಹೊತ್ತಿಗೆ ನನ್ನ ಗುಂಪಿನವರು ಆ ದೇವಸ್ಥಾನದಿಂದ ಆಚೆ ಬರುತ್ತಿದ್ದರು. ಹಾಗಾಗಿ ಈ ಚಿಕ್ಕ ದೇವಸ್ಥಾನವನ್ನು ನಾನು ನೋಡಿಕೊಂಡು ಬಂದೆ ಅಷ್ಟೇ, ಯಾವುದೇ ಫೋಟೋ ಅಥವಾ ವೀಡಿಯೋ ತೆಗೆಯಲಾಗಲಿಲ್ಲ.
ಅಲ್ಲಿಂದ ನಾವು ಒಂದು ಭಾರತೀಯ ಮೂಲದ ಹೋಟಲ್‌ಗೆ ಊಟಕ್ಕೆ ಹೋದೆವು. ಪ್ರವಾಸದಲ್ಲಿ ಮೊದಲ ಬಾರಿಗೆ ಶುದ್ಧ ಭಾರತೀಯ ರೋಟಿ, ದಾಲ್ ಮತ್ತು ಅನ್ನವನ್ನು ನೋಡಿದ್ದು. ಆದರೆ ಆ ದಿನ ಅಬು ಸಿಂಬಲ್ ನೋಡಲು ಬಂದಿದ್ದ 4 ಭಾರತೀಯ ಪ್ರವಾಸಿಗರ ತಂಡ ಅಂದರೆ ಸುಮಾರು 100 ಜನ ಇದೇ ಹೋಟಲ್‌ಗೆ ಬಂದಿದ್ದರು. ನಮ್ಮ ಗೈಡ್ ಪ್ರಮೋದ್ ಅಲ್ಲಿದ್ದ ಹೋಟಲ್ ಸಿಬ್ಬಂದಿಗೆ ಸಹಾಯ ಮಾಡುತ್ತಾ ನಮ್ಮ ಊಟ ಬೇಗ ದೊರೆಯುವಂತೆ ಮತ್ತು ಮುಗಿಸುವಂತೆ ಮಾಡಿದರು. ಅಬು ಸಿಂಬಲ್‌ನಲ್ಲಿ ಸ್ವಲ್ಪ ಹೆಚ್ಚಗೆ ನಡೆದದ್ದು ಮತ್ತು ಭರ್ಜರಿ ಊಟ ಮಾಡಿದ್ದು ಬಸ್ ಒಳಗೆ ಕುಳಿತ ತಕ್ಷಣ ಎಲ್ಲರೂ ನಿದ್ರಾದೇವಿಗೆ ಶರಣಾದೆವು. ಸ್ವಲ್ಪ ಸಮಯದ ನಂತರ ನಮ್ಮ ಕ್ರೂಸ್‌ಗೆ ಮತ್ತೆ ನಾವು ಸೇರಿಕೊಂಡೆವು ಮತ್ತು ಹಡಗು ತನ್ನ ಪ್ರಯಾಣ ಮುಂದುವರೆಸಿತು.
*ಕೋಮ್ ಓಂಬೋ*
ಹಡಗು ಸುಮಾರು 2 ಗಂಟೆಗಳ ಪ್ರಯಾಣ ಮಾಡಿದ ಮೇಲೆ ನಾವು ತಲುಪಿದ್ದು ಕೋಮ್ ಓಂಬೋ ಎಂಬ ಜಾಗಕ್ಕೆ. ಇಲ್ಲಿ ಕೋಮ್ ಓಂಬೋ ದೇವಸ್ಥಾನವಿದೆ.
"ಅಯ್ಯೋ ಮತ್ತೆ ಇನ್ನೊಂದು ದೇವಸ್ಥಾನ ಮತ್ತು ಅದರ ವರ್ಣನೆಯೇ, ಸಾಕಾಯಿತು ಶಾಸ್ತ್ರಿಗಳೇ, ಬೇರೆ ಏನಾದರು ಇದ್ದರೆ ಹೇಳಿ" ಅಂತ ನೀವು ಹೇಳುತ್ತಿರುವುದು ನನಗೆ ಕೇಳಿಸಿತು. ಆದರೆ ಈ ಲೇಖನ ಪೂರ್ಣವಾಗಿರಬೇಕೆಂದರೆ ನಾನು ನೋಡಿದ ಸ್ಥಳಗಳನ್ನು ಪೂರ್ತಿಯಾಗಿ ಹೇಳಲೇಬೇಕಲ್ಲವೇ. ಸರಿ ನಿಮ್ಮ ಕೋರಿಕೆಯ ಮೇರೆಗೆ ಸ್ವಲ್ಪ ವಿವರಣೆ ಕಡಿಮೆ ಮಾಡುತ್ತೇನೆ.
ಕ್ರಿ ಪೂ 187 ರಿಂದ ಕ್ರಿ ಪೂ 47ರ ವರೆಗೆ ಸುಮಾರು ಮೂರು ಪೀಳಿಗೆಯ ರಾಜರು ಈ ದೇವಸ್ಥಾನವನ್ನು ಕಟ್ಟಿದ್ದಾರೆ. ದೇವಸ್ಥಾನವು ಹೆಚ್ಚಾಗಿ ರೋಮನ್ ಶೈಲಿಯಲ್ಲಿದೆ. *ಕಲ್ಲಿನ ಕಂಬಗಳು ಮೇಲ್ಛಾವಣಿಯನ್ನು ಮುಟ್ಟುವಾಗ ಅದು ನೇರವಾಗಿದ್ದು ಸರ್ಪದ ಚಿತ್ರವಿದ್ದರೆ ಅದು ಈಜಿಪ್ಟ್ ಶೈಲಿ, ತುದಿಯಲ್ಲಿ ಅರಳಿದ ಕಮಲವಿದ್ದರೆ ಅದು ಗ್ರೀಕ್ ಅಥವಾ ರೋಮನ್ ಶೈಲಿ.* ಇನ್ನೇನು ಸೂರ್ಯ ಮುಳುಗುವ ಹೊತ್ತಿಗೆ ನಾವು ದೇವಸ್ಥಾನದ ಆವರಣ ಪ್ರವೇಶಿಸಿದೆವು. ಫೋಟೋ ಕ್ಲಿಕ್ಕಿಸುವುದೇ ಅಥವಾ ಗೈಡ್ ಸಮೆ ಹೇಳುವ ದೇವಸ್ಥಾನದ ವಿವರಣೆ ಕೇಳುವುದೇ ಎಂಬ ಗೊಂದಲ ಉಂಟಾಯಿತು. ನಾನಂತು ಮೊದಲನೆಯದನ್ನೇ ಆಯ್ದುಕೊಂಡೆ, ದೇವಸ್ಥಾನದ ವಿವರಣೆ ಆಮೇಲೆ ಗೂಗಲ್ ಭಗಿನಿಯನ್ನು ಕೇಳಿದರೂ ಹೇಳುತ್ತಾಳೆ, ಆದರೆ ಫೋಟೋ ತೆಗೆಯಲು ನಾನು ಮತ್ತೆ ಇಲ್ಲಿಗೆ ಬರವುದಿಲ್ಲವೆಲ್ಲ, ಅದಕ್ಕೆ.
ದೇವಸ್ಥಾನದ ದಕ್ಷಿಣ ಭಾಗವು ಮೊಸಳೆಯ ಅವತಾರದ ದೇವರು *ಸೊಬೆಕ್‌ಗೆ* ಮೀಸಲಾಗಿದ್ದರೆ, ಉತ್ತರ ಭಾಗವು ಫಾಲ್ಕನ್ ಪಕ್ಷಿಯ ಅವತಾರದ *ಹರೋಇರಿಸ್* ದೇವತೆಗೆ ಮೀಸಲಾಗಿದೆ. ನೈಲ್ ನದಿಯ ಪ್ರವಾಹದಿಂದ, ಭೂಕಂಪಗಳಿಂದ ದೇವಸ್ಥಾನದ ಸಾಕಷ್ಟು ಭಾಗಗಳು ಹಾನಿಗೊಳಗಾಗಿದೆ. ಅಷ್ಟೇ ಅಲ್ಲದೆ ಕ್ರಶ್ಚಿಯನ್ನರು ಈ ದೇವಸ್ಥಾನದ ಮುಖ್ಯ ಕೋಣೆಯನ್ನು ಚರ್ಚ್ ಆಗಿ ಪರಿವರ್ತಿಸಿಕೊಂಡು ಇಲ್ಲಿದ್ದ ಗೋಡೆಗಳ ಮೇಲಿನ ಚಿತ್ರ ಹಾಗೂ ಕೆತ್ತನೆಗಳನ್ನು ಸೀಮೆಂಟಿನ ತರಹದ ಮಿಶ್ರಣದಿಂದ ಮುಚ್ಚಿರುವುದು ಇಲ್ಲಿ ಕಾಣಬಹುದು. ಹಾಗೆ ಮುಚ್ಚಿದ ಮಿಶ್ರಣ ಕಳಚಿಬಿದ್ದು ಈಗ ಹಳೆಯ ಚಿತ್ರವಿರುವ ಗೋಡೆಗಳನ್ನು ಕೆಲವೆಡೆ ನೋಡಬಹುದು.
ಈ ದೇವಸ್ಥಾತನದ ಇನ್ನೊಂದು ವಿಶೇಷತೆಯೆಂದರೆ ಇದರ ಸಮರೂಪತೆ(symmetry)̤ ಯಾವ ಭಕ್ತರು ಯಾವ ದಿನ ಈ ದೇವಸ್ಥಾನಕ್ಕೆ ಏನನ್ನು ಅರ್ಪಿಸಬೇಕೆಂಬ ಒಂದು ಪಟ್ಟಿಯನ್ನು ಇಲ್ಲ ಗೋಡೆಯ ಮೇಲೆ ನೋಡಬಹುದು. ಅಷ್ಟೇ ಅಲ್ಲದೆ ನೈಲ್ ನದಿಯ ಹರಿವು ಎಷ್ಟಿದೆ ಎಂದು ಅಳಿಯಲು ದೇವಸ್ಥಾನದ ಆವರಣದಲ್ಲೇ ಒಂದು ಬಾವಿಯೂ ಇದೆ. ಇದರಲ್ಲಿ ಬಂದ ಅಳತೆಯಿಂದ ಆ ವರ್ಷ ರೈತರಿಗೆ ಎಷ್ಟು ತೆರಿಗೆ ಹಾಕಬೇಕೆಂದು ರಾಜರು ನಿರ್ಧರಿಸುತ್ತಿದ್ದರಂತೆ. ದೇವಸ್ಥಾನದ ಪಕ್ಕದಲ್ಲಿ ಮೊಸಳೆಗಳ ಮಮ್ಮಿಗಳಿರುವ ಸಂಗ್ರಹಾಲಯ ಅಂದರೆ ಮ್ಯೂಸಿಯಂ ಕೂಡ ನೋಡಿದೆವು
ಅಂದು ರಾತ್ರಿ ಕ್ರೂಸಿನಲ್ಲೇ ಊಟ. ದೊಡ್ಡದೊಂದು ಟರ್ಕಿ ಕೋಳಿಯ ಚರ್ಮ ಬಿಡಿಸಿ ಅದರ ಆಕಾರ ಹಾಗೇ ಉಳಿಸಕೊಂಡೇ ಪೂರ್ತಿ ಬೇಯಿಸಿದ ದೇಹವು ಡೈನಿಂಗ್ ಹಾಲಿನ ಬಾಗಿಲಲ್ಲೇ ನಮಗೆ ಸ್ವಾಗತ ಕೋರುತ್ತಿತ್ತು. ಹಾಗಿದ್ದರೆ ಅಂದು ಸಸ್ಯಹಾರಿಗಳಾದ ನಮ್ಮ ಊಟ ಹೇಗಿರಬಹುದೆಂಬುದರ ವರ್ಣನೆ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ.
ಸರಿ ಇಷ್ಟಕ್ಕೆ ಮುಗಿಸುತ್ತೇನೆ ನನ್ನ ಈ ದಿನದ ಈಜಿಪ್ಟ್ ಪ್ರವಾಸ. ಮುಂದಿನ ಭಾಗದಲ್ಲಿ ಮತ್ತೊಂದು ದೇವಸ್ಥಾನಕ್ಕೆ ನಾವೆಲ್ಲಾ ಹೋಗಬೇಕಿದೆ. ಹೆದರಬೇಡಿ, ಇದು ಈ ಪ್ರವಾಸದ ಕಡೆಯ ದೇವಸ್ಥಾನವಾಗಿರುತ್ತದೆ. ಐದು ಮಹಡಿಯಷ್ಟು ಎತ್ತರದ ಹಡಗಿನ ಮೇಳ್ಛಾವಣಿಯಲ್ಲಿ ಕುಳಿತು ಹರಿಯುತ್ತಿರುವ ನದಿಯಲ್ಲಿ ಬರುವ ಚಿಕ್ಕ ದೋಣಿಗಳಿಂದ ವ್ಯಾಪಾರ ಮಾಡುವುದರ ಬಗ್ಗೆ ಮುಂದಿನ ಭಾಗದಲ್ಲಿ ನಾನು ತಿಳಿಸಬೇಕಿದೆ. ಈಜಿಪ್ಟಿನ ಬೆಲ್ಲಿ ನೃತ್ಯಗಾತಿಯ ಜೊತೆ ನಾನು ನೃತ್ಯ ಮಾಡಿದ್ದರ ವಿಷಯ ಕೂಡಾ ಮುಂದಿನ ಸಂಚಿಕೆಯಲ್ಲಿ.
ಮುಂದುವರೆಯುತ್ತದೆ……….
ಭಾಗ 7
ಅಷ್ಟೋಂದು ದುಡ್ಡು ಖರ್ಚು ಮಾಡಿಕೊಂಡು ಮುಸ್ಲಿಮ್ ದೇಶ ಈಜಿಪ್ಟ್‌ಗೆ ಹೋಗುವ ಅವಶ್ಯಕತೆ ಏನು. ಅದು ಊಟಕ್ಕೆ ತೊಂದರೆ, ಆ ಬಿಸಿಲು, ಮರಳುಗಾಡು, ನಡೆಯೋದು ತುಂಬಾ ಇರುತ್ತೆ ಅಂತಾರೆ, ಎಂದು ಹಲವರು ಹೇಳಿದ್ದುಂಟು. ಅದಕ್ಕೆ ಉತ್ತರ, ಸುಮ್ಮನೆ ಒಂದು ಸಲ ಅವರನ್ನು ನೋಡಿ ನಕ್ಕುಬಿಡುವುದಷ್ಟೇ. ಇತ್ತೀಚೆಗೆ ಗುಬ್ಬಿಯಲ್ಲಿ 150 ವರ್ಷದ ಹಳೇ ಮನೆ ನೋಡಿದಾಗಲೇ ನನಗೆ ಎಷ್ಟು ಸಂತೋಷವಾಯಿತು, ಹಾಗಿದ್ದಾಗ ಮೂರು ನಾಲ್ಕು ಸಾವಿರ ವರ್ಷದ ಹಿಂದೆ ಕಟ್ಟಿದ ಕಟ್ಟಗಳನ್ನು ನೋಡುವಾಗ ಎಷ್ಟು ಸಂತೋಷವಾಗಿರಬೇಕಲ್ಲವೇ. ಪಿರಮಿಡ್‌ನ ಒಂದೊಂದು ಕಲ್ಲುಗಳನ್ನು ಮುಟ್ಟುವಾಗ, ಬಹುಷಃ ನನ್ನ ಹಳೆಯ ಒಂದು ಜನ್ಮದಲ್ಲಿ ನಾನು ಇಲ್ಲಿದ್ದೆನೇನೋ, ಈ ಕಲ್ಲನ್ನು ನಾನೇ ತಂದಿರಬೇಕು, ಅದಕ್ಕಾಗಿಯೇ ಮತ್ತೆ ಈ ಸಂಪರ್ಕ ಬಂದು, ನನ್ನನ್ನು ಈ ಜಾಗ ಕರೆದಿದೆ ಎಂದು ನನಗನಿಸುತ್ತಿತ್ತು. ಮೂರು ಸಾವರ ವರ್ಷದ ಹಳೆಯ ರಾಜನ ದೇಹವನ್ನು ನೋಡಿದಾಗ, ನಾನು ಆ ಮಲಗಿರುವ ರಾಜನಾಗದ್ದೆನೇ ಅಥವಾ ಆ ರಾಜನ ದೇಹವನ್ನು ಅಲ್ಲಿಗೆ ತಂದಿರಿಸಿದ ಸೇವಕರಲ್ಲೊಬ್ಬನಾಗಿದ್ದೆನೇ ಎಂದು ಯೋಚಿಸುತ್ತಿದ್ದರೆ, ಕಣ್ಣಿನ ಮುಂದೆ ಒಂದು ವೀಡಿಯೋದಂತೆ ಆ ದಿನಗಳ ಕಲ್ಪನೆ ನಡೆದು ಹೋಗುತ್ತದೆ.
ಇದೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಕಾಶಿ, ಉಜ್ಜಯಿನಿ, ರಾಮೇಶ್ವರ ಇವೆಲ್ಲವೂ ಇಷ್ಟೇ ವರ್ಷ ಹಳೆಯ ಊರುಗಳು. ಇವುಗಳನ್ನೂ ನಾವು ಈ ದೃಷ್ಠಿಯಿಂದ ನೋಡಿದಾಗ ಆಗುವ ಅನುಭವವೇ ಬೇರೆ. ಹೊಸ ಜನರ ಸಂಪರ್ಕವಾಗಲಿ, ಹೊಸ ಜಾಗಗಳಿಗೆ ನಾವು ಪ್ರವಾಸ ಮಾಡುವುದಾಗಲಿ, ಯಾವುದೋ ಒಂದು ಹಳೆಯ ಬೆಸುಗೆಯೇ ಇವೆಲ್ಲದ್ದಕ್ಕೆ ಕಾರಣವಾಗಿರುತ್ತದೆಂಬುದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ.
22ನೇ ಜನವರಿ 2023 ನಮ್ಮ ಈಜಿಪ್ಟ್ ಪ್ರವಾಸದ ಆರನೇ ದಿನ. ಅಂದು ಬೆಳಿಗ್ಗೆ ಐದು ಗಂಟೆಗೇ ನಮ್ಮ ಹಡಗಿನಿಂದ ಆಚೆ ಹೋಗಿ, ಕುದುರೆ ಗಾಡಿಗಳಲ್ಲಿ ಕುಳಿತುಕೊಂಡು ಸುಮಾರು 3 ಕಿಲೋಮೇಟರ್ ಹೋದಾಗ ಸಿಕ್ಕಿದ್ದೇ ಎಡಫು ದೇವಸ್ಥಾನ
*ಎಡಫು ದೇವಸ್ಥಾನ*
ಇದು ಫಾಲ್ಕನ್ ಪಕ್ಷಿಯ ಅವತಾರದ ಹೋರಸ್ ದೇವರ ದೇವಸ್ಥಾನ. ಇದನ್ನು ಕಟ್ಟಲು ಸುಮಾರು 180 ವರ್ಷ ತೆಗೆದುಕೊಂಡಿದ್ದಾರೆ. ಕ್ರಿ ಪೂ 257ರಲ್ಲಿ ಆರಂಭವಾಗಿ ಕ್ರಿ ಪೂ 57ರಲ್ಲಿ ಈ ದೇವಸ್ಥಾನ ಸಿದ್ದವಾಗುತ್ತದೆ. ಈ ವರೆಗೆ ಈಜಿಪ್ಟಿನಲ್ಲಿರುವ ದೇವಸ್ಥಾನಗಳಲ್ಲಿ ಸುಮಾರು ಶೇಕಡ 90ರಷ್ಟು ಯಥಾವತ್ತಾಗಿ ಉಳದುಕೊಂಡಿರುವ ದೇವಸ್ಥಾನ ಇದಾಗಿದೆ. ಇಲ್ಲಿರುವ ಕಲ್ಲಿನ ಕೆತ್ತನೆಗಳು ಮತ್ತು ಗೋಡೆಯ ಮೇಲೆ ಬಿಡಿಸಿರುವ ಚಿತ್ರಗಳು ಈಜಿಪ್ಟಿನ ದೇವಸ್ಥಾನಗಳ ಸಂಶೋಧನೆ ಮಾಡುವವರಿಗೆ ಒಳ್ಳೆಯ ಪರಿಪೂರ್ಣ ಮಾಹಿತಿಯನ್ನು ನೀಡುತ್ತದೆ. ರೋಮನ್ನರು ಕ್ರಿಶ್ಚಿಯನ್ನರಿಗೆ ಇಲ್ಲಿ ಚರ್ಚ್ ಮಾಡಿಕೊಳ್ಳಲು ಅವಕಾಶ ಕೊಡದಿದ್ದಾಗ, ಒಂದಷ್ಟು ಕೆತ್ತನೆಗಳ ಮೇಲೆ ಸುತ್ತಿಗೆಯಿಂದ ಹೊಡೆದು ಹಾಳು ಮಾಡಿರುವುದು ನಾವು ನೋಡಬಹುದು, ಮತ್ತು ಫೋಟೋಗಳನ್ನು ನಾನು ಹಂಚಿಕೊಳ್ಳುತ್ತೇನೆ. ಊಹಿಸಲೂ ಸಾಧ್ಯವಾಗದಷ್ಟು ದೇವಸ್ಥಾನದ ಆವರಣ ಮತ್ತು ಸೌಂದರ್ಯ. ಮುಖ್ಯದ್ವಾರದಲ್ಲೇ ನಮಗೆ ಸ್ವಾಗತಿಸುವ ಫಾಲ್ಕನ್ ಪಕ್ಷಿಯ ಮೂರ್ತಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಒಳ್ಳೆಯ ಜಾಗ. ದೊಡ್ಡ ದೊಡ್ಡ ಕಂಬಗಳಂತು ಬೆರಗುಗೊಳಿಸುತ್ತದೆ. ಹೆಚ್ಚಿನ್ನೇನು ಈ ದೇವಸ್ಥಾನದ ಬಗ್ಗೆ ಹೇಳಲಾರೆ.
ಬೆಳಿಗ್ಗೆ ಐದು ಗಂಟೆಗೇ ನಾವು ಹೋಗಿದ್ದಕ್ಕೆ ನಾವು ಬೇಗ ದೇವಸ್ಥಾನದ ಒಳಗೆ ಹೋಗಲು ಸಾಧ್ಯವಾಯಿತು, ಇಲ್ಲವಾದರೆ ಸಾಕಷ್ಟು ಸಮಯ ನಾವು ಹೊರಗೆ ಕ್ಯೂನಲ್ಲೇ ಕಾಯಬೇಕಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ತುಂಬಾ ಹೆಚ್ಚು.
ಮತ್ತೆ ನಾವು ಹಡಗಿಗೆ ವಾಪಸ್ ಹೋದೆವು . ಉಪಹಾರ ಮುಗಿಸಿದ ನಂತರ ಹಡಗಿನ ನೇರ ಮೇಲ್ಛಾವಣಿಗೆ ಎಲ್ಲರೂ ಹೋದೆವು. ನದಿ ದಡದಿಂದ ಸುಮಾರು 200 ಮೀಟರ್‌ಅಷ್ಟು ಅಕ್ಕ ಪಕ್ಕದ ಹಸಿರು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಅದರಿಂದ ಸ್ವಲ್ಪ ಆಚೆಗೇ ಕಾಣುತ್ತಿದ್ದ ವಿಶಾಲವಾದ ಮರುಭೂಮಿಯ ವಿಸ್ಮಯವನ್ನು ನೋಡುತ್ತಾ ಒಂದೆರೆಡು ಫೋಟೋ ಕ್ಲಕ್ಕಿಸಿದೆ. ಮಹಿಳಾ ಸಹಪ್ರವಾಸಿಗರು ಅಂತ್ಯಾಕ್ಷರಿ ಆಟ ಆಡುತ್ತಿದ್ದರೆ, ಗಂಡಸರ ಗುಂಪೊಂದು ಬ್ಯಾಂಕು, ದೇಶ, ರಾಜಕೀಯ ವಿಷಯಗಳನ್ನು ಮಾತನಾಡುತ್ತಾ ಕುಳಿತರು. ಅಲ್ಲೇ ನಾನು ಮೇಲ್ಛಾವಣಿಯಲ್ಲಿ ಹಾಸಿದ್ದ ಮಂಚದ ಮೇಲೆ ಮಲಗಿ ಮೈಯನ್ನು ಬಿಸಿಲಿಗೆ ಕಾಯಿಸಿಕೊಳ್ಳುತ್ತಾ ಮಲಗಿದೆ. ಮರುಭೂಮಿಯಿಂದ ಬರುತ್ತದ್ದ ಬಿಸಿ ಗಾಳಿಯು ನೈಲ್ ನದಿಯ ಮೇಲೆ ಸವರುತ್ತಾ ನನ್ನನ್ನು ತಲುಪುವ ಹೊತ್ತಿಗೆ ತಣ್ಣನೆಯ ತಂಗಾಳಿಯಾಗಿತ್ತು. ಅದರೊಂದಿಗೆ ಅಷ್ಟೇನು ಪ್ರಭಲವಲ್ಲದ ಸೂರ್ಯನ ಕಿರಣ. ದೇಹಕ್ಕೋ ತಂಪು ಮತ್ತು ಬಿಸಿಯ ಮಿಶ್ರಣದ ಅಭ್ಯಂಜನ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ, ಕನಿಷ್ಠ ಎರಡು ಗಂಟೆಗಳ ಕಾಲ ನಿದ್ದೆ ಮಾಡಿದ್ದೆ ಅನಿಸುತ್ತೆ.
*ನದಿಯಲ್ಲಿಯೇ ವ್ಯಾಪಾರ*
ಸುಮಾರು 5 ಅಂತಸ್ತಿನ ಕಟ್ಟಡದಷ್ಟು ಎತ್ತರ ನಮ್ಮ ಹಡಗು. ಈ ಹಡಗಿನ ಪಕ್ಕದಲ್ಲೇ ಚಿಕ್ಕ ದೋಣಿಯೊಂದರಲ್ಲಿ ಇಬ್ಬರು ಸವಾರರು. ಅದರಲ್ಲಿ ಒಬ್ಬ ತಾನು ತಂದಿದ್ದ ಬಣ್ಣದ ಮೆತ್ತನೆಯ ಕಾರ್ಪೆಟ್ ಪ್ರದರ್ಶಿಸುತ್ತಾನೆ. ಮೇಲಿಂದ ನಾವೆಲ್ಲಾ ನೋಡುತ್ತಿರುತ್ತೇವೆ. ಪ್ರದರ್ಶಿಸಿದ ನಂತರ ಅದರ ಬೆಲೆಯನ್ನು ಹೇಳುತ್ತಾನೆ, ಮೇಲಿನಿಂದ ನಮ್ಮ ಜನ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಕೇಳುತ್ತಾರೆ. ಇಲ್ಲೆಲ್ಲಾ ಮೂರಕ್ಕೆಷ್ಟು ನಾಲ್ಕಕ್ಕೆಷ್ಟು ಎಂದು ಮಾತುಕತೆಯಾಗುತ್ತದೆ. ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಆ ಒಂದೋ ಎರಡೋ ಮೂರೋ ಕಾರ್ಪೆಟ್‌ಗಳನ್ನು ಮಡಿಸಿಟ್ಟು ನಮ್ಮಲ್ಲಿಗೆ ತನ್ನ ಶಕ್ತಿಯನ್ನೆಲಾ ಉಪಯೋಗಿಸಿ ಎಸೆಯುತ್ತಾನೆ. ಗುಣಮಟ್ಟ ನೋಡಿ ಆಮೇಲೆ ಚೌಕಾಸಿ ಮಾಡಿ ಎಂದು ತಿಳಿಸುತ್ತಾನೆ. ಹೊರಗಡೆ ನೇರ ಮಾರುಕಟ್ಟೆಗಿಂತ ಶೇಕಡ 30ರಷ್ಟಾದರು ಇವನ ಬೆಲೆ ಕಡಿಮೆ ಇರುತ್ತದೆ. ಒಮ್ಮೆ ವ್ಯಾಪಾರ ಕುದುರಿತೆಂದರೆ, ಮತ್ತೊಂದು ಕವರ್‌ನಲ್ಲಿ ಒಂದು ಚಿಕ್ಕ ಟವಲ್ ಇಟ್ಟು ಎಸೆಯುತ್ತಾನೆ. ಆ ಕವರ್‌ನಲ್ಲಿ ನಾವು ಮಾತನಾಡಿದ ಹಣವನ್ನು ಇಟ್ಟು ಮತ್ತೆ ಅವನಲ್ಲಿಗೆ ಎಸೆಯಬೇಕು. ಸಾಮಾನ್ಯವಾಗಿ ಅದು ನದಿಯ ನೀರಿನಲ್ಲಿ ಬೀಳುತ್ತದೆ. ಅವನು ದೋಣಿಯನ್ನು ಅಲ್ಲಿಗೆ ಸಾಗಿಸಿ, ಹಣ ತೆಗೆದುಕೊಳೂತ್ತಾನೆ. ಹೀಗೆ ಟವಲ್, ಬೆಡ್‌ಶೀಟ್ ಎಲ್ಲದರ ವ್ಯಾಪಾರವೂ ನಡೆಯುತ್ತದೆ. ನನ್ನ ಪ್ರಕಾರ ಈ ರೀತಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿಗಳ ವ್ಯಾಪಾರ ಒಂದು ಗಂಟೆಗಳಲ್ಲಿ ಆಯಿತು ಅನಿಸುತ್ತೆ.
ದೊಡ್ಡ ಹಡಗಿನ ಪಕ್ಕದಲೇ ಚಿಕ್ಕ ದೋಣಿಯಲ್ಲಿ ಸಾಗಿ ಬರುವ ಅವನ ಧೈರ್ಯ, ತಾನು ಹಡಗಿನ ಮೇಲಕ್ಕೆಸೆದ ಎಲ್ಲಾ ಬಟ್ಟೆಗಳ ಹಣ ಬಂದೇ ಬರುತ್ತದೆ ಯಾರೂ ಮೋಸ ಮಾಡುವುದಿಲ್ಲ ಎಂಬುವ ಅವನ ನಂಬಿಕೆ ಪ್ರಶಂಸನೀಯ.
*ಎಸ್ನಾ ಲಾಕ್*
ನೈಲ್ ನದಿಯ ಮೇಲೆ ಎಸ್ನಾ ಊರನ್ನು ಆಸ್ವಾನ್ ನಗರದಿಂದ ಬೇರ್ಪಡಿಸುವ ಅಣೆಕಟ್ಟಿನ ಒಂದು ಭಾಗಕ್ಕೆ ಎಸ್ನಾ ಲಾಕ್ ಎಂದು ಕರೆಯುತ್ತಾರೆ. ಇಂದು ನಮ್ಮ ಹಡಗು ಎತ್ತರದ ಅಣೆಕಟ್ಟಿನಿಂದ ( High Dam) ತಳಮಟ್ಟದ ಅಣೆಕಟ್ಟಿಗೆ (Lower Dam) ಚಲಿಸಬೇಕಿತ್ತು. ಹಡಗುಗಳು ಹಾಗೇ ನೇರೆ ಹೋದರೆ, ಒಂದೆ ಸಲ ಪ್ರಪಾತಕ್ಕೆ ಬೀಳುವುದಂತು ನಿಜ, ಹಾಗಾಗಿ ಲಾಕ್ ಎಂಬುವ ತಂತ್ರಜ್ಞಾನವನ್ನು ಬಳಸಿ, ಹಡಗುಗಳನ್ನು ಅಣೆಕಟ್ಟಿನ ಒಂದು ಪ್ರತ್ಯೇಕ ಜಾಗದಲ್ಲಿ ಒಂದರ ಹಿಂದೆ ಒಂದರೆಂತೆ ದಾಟಿಸುತ್ತಾರೆ. ಮೊದಲು ಹಡಗನ್ನು ಒಂದು ನಿರ್ಧಿಷ್ಟವಾದ ಸಂಧಿಯಲ್ಲಿ ನಿಲ್ಲಿಸಿ, ಹಗ್ಗಗಳಿಂದ ಕಟ್ಟಿ, ನಿಧಾನವಾಗಿ ಆ ಸಂಧಿಯಲ್ಲಿ ನೀರಿನ ಮಟ್ಟ ಇಳಿಸಿ ಹಡಗು ಕೆಳಕ್ಕೆ ಹೋಗುವಂತೆ ಮಾಡಿ ಹಡಗನ್ನು ಅಣೆಕಟ್ಟಿನ ಇನ್ನೊಂದು ಬದಿಗೆ ದಾಟಿಸುತ್ತಾರೆ. ಈ ಸಮಯದಲ್ಲಿ ಹಡಗಿನಲ್ಲಿರುವ ಎಲ್ಲಾ ಪ್ರವಾಸಿಗರು ಮೇಲ್ಛಾವಣಿಗೆ ಬಂದು ಈ ಅದ್ಭುತ ತಂತ್ರಜ್ಞಾನವನ್ನು ವೀಕ್ಷಿಸುತ್ತಾರೆ. (ಇದರ ವೀಡಿಯೋ ಕೂಡಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ)
*ಕಾರ್ನಾಕ್ ದೇವಸ್ಥಾನ*
ಲುಕ್ಸಾರ್ ಊರಿನಲ್ಲಿ ನಮ್ಮ ಹಡಗು ನಿಂತಾಗ ನಾವು ಮೊದಲು ಹೋಗಿದ್ದು ಕಾರ್ನಾಕ್ ದೇವಸ್ಥಾನ. ಪೂರ್ತಿ ಪಾಳುಬಿದ್ದು ಹಾನಿಗೆ ಒಳಗಾಗಿರುವ ದೇವಸ್ಥಾನ ಇದಾಗಿದೆ ಎಂದು ಮಾತ್ರ ಸಧ್ಯಕ್ಕೆ ನಾನು ತಿಳಿಸಬಲ್ಲೆ. ನಾಲ್ಕು ಸಾವಿರ ವರ್ಷದ ದೇವಸ್ಥಾನವು ಇದಾಗಿದ್ದು ಫೋಟೋ ಕ್ಲಿಕ್ಕಿಸಿದ್ದು ಬಿಟ್ಟರೆ ಹೆಚ್ಚೇನು ಈ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಲು ಆಗಲಿಲ್ಲ.
*ಲುಕ್ಸಾರ್ ದೇವಸ್ಥಾನ*
ಸೂರ್ಯದೇವನನ್ನು ಈ ಜನರು ಅಮುನ್ ಎಂದು ಕರೆಯುತ್ತಿದ್ದರು. ಈ ಅಮುನ್ ಎಂಬ ದೇವರಿಗಾಗಿ ಕಟ್ಟಿರುವ ಈ ದೇವಸ್ಥಾನದಲ್ಲಂತೂ ಬರೀ ದೊಡ್ಡ ದೊಡ್ಡ ಕಲ್ಲಿನ ಕಂಬಗಳೇ ಇದೆ.
ಇಲ್ಲಿನ ಮುಖಂಡನ ತಂದೆ ರಾಜವಂಶಸ್ತನಲ್ಲದ್ದರಿಂದ, ಈ ಮುಖಂಡನನ್ನು ಜನರು ರಾಜನೆಂದು ಒಪ್ಪುವುದಿಲ್ಲ. ಆಗ ಈ ಮುಖಂಡನು "ಒಮ್ಮೆ ಸೂರ್ಯದೇವನು ತನ್ನ ತಾಯಿಯ ಸೌಂದರ್ಯವನ್ನು ಮೆಚ್ಚಿ ಅವಳೊಡನೆ ಒಂದು ರಾತ್ರಿ ಕಳೆದದ್ದರಿಂದ ನಾನು ಹುಟ್ಟಿದೆ, ಹಾಗಾಗಿ ತಾನು ಸೂರ್ಯ ದೇವನ ಪುತ್ರ" ಎಂದು ಕಥೆ ಕಟ್ಟುತ್ತಾನೆ ಮತ್ತು ಈ ಕಥೆಗೆ ಹೆಚ್ಚು ಬಲ ನೀಡಲು ಈ ಸೂರ್ಯದೇವನ ದೇವಸ್ಥಾನವನ್ನು ಕಟ್ಟಿಸುತ್ತಾನೆ. ಆಗ ಜನರು ಇವನು ದೇವರ ಮಗನೇ ಆದ್ದರಿಂದ ಇವನ್ನನು ರಾಜನೆಂದು ಒಪ್ಪುತ್ತಾರೆ.
ಆಗಿನ ಕಾಲದಲ್ಲಿ ಭಕ್ತಾದಿಗಳಿಗೆ ಗರ್ಭಗೃಹಕ್ಕೆ ಪ್ರವೇಶವಿಲ್ಲದ ಕಾರಣ ಹೊರಗಡೆಯಲ್ಲೇ ದೊಡ್ಡ ಆವರಣ ಮತ್ತು ಅಲ್ಲಿಂದ ದೂರದಲ್ಲಿರುವ ಗರ್ಭಗುಡಿಯ ದರ್ಶನಕ್ಕೆ ಕೂಡ ಅವಕಾಶವಿತ್ತು . ಬೇರೆ ದೇವಸ್ಥಾನಗಳಂತೆ ಇಲ್ಲಿಯೂ ಕೂಡಾ ಕೆತ್ತನೆಗಳು ಹಾಗೂ ಬಣ್ಣದ ಚಿತ್ರಗಳು ಆಕರ್ಷಿಸಿದವು. ಇಲ್ಲಿನ ಒಂದು ಕಥೆಯ ಪ್ರಕಾರ, ಈ ಅಮುನ್ ದೇವತೆಯನ್ನು ರಥೋತ್ಸವದಲ್ಲಿ ಎರಡು ಕಿಲೋಮೀಟರ್ ದೂರವಿರುವ ನೈಲ್ ನದಿಗೆ ಕರೆದುಕೊಂಡು ಹೋಗಿ ಅಲ್ಲಿಗೆ ಇನ್ನೊಂದು ದೇವಸ್ಥಾನದಿಂದ *ಅಮುನ್* ದೇವನ ಹೆಂಡತಿಯಾದ *ಮುಟ್* ಳನ್ನು ಕರೆದು ತಂದು ಅವರಿಬರಬರನ್ನು ಒಂದೆರೆಡು ದಿನ ಅಲ್ಲೇ ಇರಿಸಿ, ನಂತರ ವಾಪಸ್ ಅವರವರ ಸ್ಥಾನಕ್ಕೆ ತಂದಿಡುತ್ತಾರೆ. ಇದೊಂದು ರೀತಿ ನಮ್ಮ ಕಡೆಯ ಕಲ್ಯಾಣೋತ್ಸವ ಇದ್ದ ಹಾಗೆ.
ಈ ದೇವನು ನೈಲ್ ನದಿಗೆ ನಡೆದುಹೋಗುವ ಸುಮಾರು ಮೂರು ಕಿಲೋಮಿಟರ್ ಉದ್ದದ ದಾರಿಯಲ್ಲಿ ಅಕ್ಕಪಕ್ಕದಲ್ಲಿ ಸ್ಫಿನ್ಕ್ಸ್‌ಗಳನ್ನು (ಮನುಷ್ಯ ಮುಖ ಸಿಂಹದ ದೇಹವಿರುವ ಮೂರ್ತಿ) ಸ್ಥಾಪಿಸಿದ್ದರಂತೆ. ಈಗ ಸುಮಾರು ಅರ್ಧ ಕಿಲೋಮೀಟರ್ ಮಾತ್ರ ಇದ್ದು ಊರಿನ ಜನ ಮಿಕ್ಕ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ.
*ಬೆಲ್ಲಿ ಡ್ಯಾನ್ಸ್*
ಬೆಲ್ಲಿ ಡ್ಯಾನ್ ಅರೇಬಿಕ್ ದೇಶಗಳ ಒಂದು ಪ್ರಮುಖ ಆಕರ್ಷಣೀಯ ಹಾಗೂ ನೋಡಲೇಬೇಕಾದ ನೃತ್ಯ. ತನ್ನ ಹೊಟ್ಟೆಯನ್ನೇ ನೃತ್ಯಕ್ಕೆ ಕೇಂದ್ರಬಿಂದುವಾಗಿಸಿಕೊಂಡ ನೃತ್ಯಗಾತಿ, ದೇಹವನ್ನು ಹಾವಾಭಾದಿಂದ ಅಕ್ಕಪಕ್ಕಕೆ ತಿರುಗಿಸುವ ನೃತ್ಯ ಇದಾಗಿದೆ. ಯಾವುದೇ ನೃತ್ಯವಾದರೂ ಸರಿ, ಅದು ನಮ್ಮ ಮನಸ್ಸನು ಹಗುರಗೊಳಿಸಲು ಒಂದು ಸುಲಭವಾದ ಸಾಧನ ಎಂದು ನನ್ನ ಅಣ್ಣ ಹೇಳಿದ್ದು ನನಗೆ ಜ್ಞಾಪಕದಲ್ಲಿತ್ತು.
ಆಧ್ಯಾತ್ಮ ಎಂಬುದು ಕೇವಲ ಓದುವುದಕ್ಕಲ್ಲ, ಅದನ್ನು ಅನುಷ್ಠಾನಕ್ಕೆ ತರುವುದು, ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಅಧ್ವೈತಾಭ್ಯಾಸಿಯ ಕರ್ತವ್ಯ. ನಾನು ಎಂಬುವ ಈ ಆತ್ಮ ಬಿಟ್ಟು, ಬೇರೇನು ಈ ಪ್ರಪಂಚಲ್ಲಿ ಇಲ್ಲ, ಎಲ್ಲದರಲ್ಲೂ ಆತ್ಮಸ್ವರೂಪವಾದ ನಾನೇ ಇರುವುದು ಎಂದೆಲ್ಲಾ ನಾನು ಇಷ್ಟು ವರ್ಷಗಳು ಪ್ರವಚನಗಳನ್ನು ಕೇಳಿದ್ದುಂಟು ಮತ್ತು ಗ್ರಂಥಗಳಲ್ಲಿ ಓದಿದ್ದುಂಟು. ಹಾಗಾಗಿ ನನ್ನ ದೃಷ್ಟಿಯಲ್ಲಿ ಹಿಮಾಲಯದ ಬೆಟ್ಟದ ಮೇಲೆ ತಪಸ್ಸಿಗೆ ಕುಳಿತಿರುವ ಸಾಧುವೂ ಮತ್ತು ತನ್ನ ಜೀವನೋಪಾಯಕ್ಕಾಕಾಗಿ ನೃತ್ಯ ಮಾಡುವ ಬೆಲ್ಲಿ ನೃತ್ಯಗಾತಿ ಕೂಡಾ ಒಂದೇ. ಸಾಧುವಿನ ಹತ್ತಿರ ಅವರದೇ ಮಟ್ಟದಲ್ಲಿ ನಾನು ಧ್ಯಾನ ಮಾಡಬಲ್ಲೆ ಹಾಗೆಯೇ ನೃತ್ಯಗಾತಿಯ ಜೊತೆ ನನಗೆ ತಿಳಿದಿರುವಷ್ಟು ಹೆಜ್ಜೆಯನ್ನು ಹಾಕಬಲ್ಲೆ. ನನ್ನ ನಿಜ ಸ್ವರೂಪಕ್ಕೆ ಇದ್ಯಾವುದೂ ತನ್ನ ಪ್ರಭಾವವನ್ನು ಬೀರುವುದಿಲ್ಲ.
ಆದರೆ ಆಗಾಗ ಈ ಸಾಧನೆಯಲ್ಲಿ ನಾನು ಎಷ್ಟು ಮುಂದುವರೆದಿದ್ದೇನೆ ಎಂದು ಅರಿತುಕೊಳ್ಳಲು ದೇವನೇ ಪರೀಕ್ಷೆಗಳನ್ನು ನೀಡುತ್ತಾನೆ. ಅದರಲ್ಲಿ ಒಂದು ಪರೀಕ್ಷೆ ಈ ದಿನದ ರಾತ್ರಿ ನಮ್ಮ ಹಡಗಿನಲ್ಲಿ ಆಯೋಜನೆಯಾಗಿದ್ದ ಬೆಲ್ಲಿ ಡ್ಯಾನ್ಸ್. ಅಂದು ಬಹಳಷ್ಟು ನಡೆದು ಸಾಕಷ್ಟು ಸುಸ್ತಾಗಿದ್ದ ಕೆಲವು ಪ್ರವಾಸಿಗರು, ಮತ್ತು ಈ ರೀತಿಯ ನೃತ್ಯಕ್ಕೆ ತಾವು ಹೋಗಬಾರದೆಂಬ ಮಡಿವಂತ ಪ್ರವಾಸಿಗರನ್ನು ಬಿಟ್ಟರೆ ನಮ್ಮ ಗುಂಪಿನಿಂದ ನಾನು, ಗೈಡ್ ಪ್ರಮೋದ್, ರಮೇಶ್ ಎಂಬ ಸಹಪ್ರಾಸಿಗ ಮತ್ತು ಒಂದು ಗಂಡ ಹೆಂಡತಿ ಸೇರಿ ಕೇವಲ ಐದು ಜನ ಮಾತ್ರ ಈ ನೃತ್ಯಕ್ಕೆ ಹೋದೆವು. ಅದರಲ್ಲೂ ಆ ನೃತ್ಯಗಾತಿಯು ನೃತ್ಯ ಆರಂಭಿಸುತ್ತಿದ್ದಂತೆ ಆ ಗಂಡ ಹೆಂಡತಿ ಹೊರನಡೆದರು. ನೇರ ಕೀಬೋರ್ಡ್ ಹಾಗೂ ಡ್ರಮ್ಸ್‌ಗಳಿಂದ ಬರುತ್ತಿದ್ದ ಸಂಗೀತಕ್ಕೆ ಆಕೆ ನೃತ್ಯ ಮಾಡುತ್ತಿದ್ದದ್ದು ಅಮೋಘವಾಗಿತ್ತು. ನಮ್ಮಲ್ಲಿ ಮಡಿವಂತರು ಎಂದು ಹೇಳಿಕೊಳ್ಳುವ ಎಷ್ಟೋ ಮನೆಯ ಹೆಣ್ಣುಮಕ್ಕಳು ತೊಡುವ ಹರಿದು ಹೋಗಿರುವ ಅಂಗಿ ಪ್ಯಾಂಟ್‌ಗಳಿಗಿಂತ ಸ್ವಲ್ಪ ಜಾಸ್ತಿಯೇ ಇತ್ತು ಆ ನೃತ್ಯಗಾತಿ ತೊಟ್ಟಿದ್ದ ಉಡುಗೆ.
ಮೊದಲು ಅಲ್ಲೇ ಪ್ರೇಕ್ಷಕರಲ್ಲಿ ಇದ್ದ ಒಂದು ಚಿಕ್ಕ ಮುಗುವನ್ನು ವೇದಿಕೆಗೆ ಕರೆದು ಆಕೆ ನೃತ್ಯ ಮಾಡಿದಳು. ನಂತರದ ಹಾಡುಗಳಿಗೆ ಇತರ ಪ್ರೇಕ್ಷಕರನ್ನು ಆಹ್ವಾನಿಸಿದಳು. ನಾನು ಮತ್ತು ನನ್ನ ಸಹ ಪ್ರವಾಸಿಗ ರಮೇಶ್‌ಗೂ ಕೂಡಾ ಈ ಅವಕಾಶ ಸಿಕ್ಕಿತು. ನನಗೋ ನೃತ್ಯ ಮಾಡಲು ಬರುವುದಿಲ್ಲ, ಆದರೆ ಅವಳು ಬಿಡುತ್ತಿಲ್ಲ. ಕಷ್ಟ ಪಟ್ಟು ಆಕೆ ಸಮಕ್ಕಲದಲದಿದಿದ್ದರೂ ಸ್ವಲ್ಪ ಮಟ್ಟಿಗೆ ಕೈ ಕಾಲು ಹಾಗೂ ಆಗಾಗ ಒಂದೆರೆಡು ಸಲ ಸೊಂಟ ತಿರುಗಿಸಿದೆ. ಹೀಗೆ ಮುಂದುವರೆಸಿದರೆ ಸೊಂಟ ನೋವು ಬರುವುದೆಂದು ಹೆದರುತ್ತಿದ್ದಂತೆ ಹಾಡು ಮುಗಿಯಿತು, ನಾವು ನಮ್ಮ ಸ್ಥಳಕ್ಕೆ ಹೋಗಿ ಕುಳಿತೆವು. ನಂತರ ಇತರ ಪ್ರೇಕ್ಷಕರ ಸರದಿ. (ಈ ನೃತ್ಯದ ವೀಡಿಯೋ ತುಣುಕು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ). ನಾನು ನೃತ್ಯ ಮಾಡಿದ್ದನ್ನು ನಮ್ಮ ಗೈಡ್ ತನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದ ಮತ್ತು ಮಾರನೇ ದಿನಕ್ಕೆ ಶಾಸ್ತ್ರಿಗಳ ನೃತ್ಯ ಎಲ್ಲರ ಮಾತಿನ ಕೇಂದ್ರಬಿಂದುವಾಗುವುದೆಂದು ನನಗೆ ಗೊತ್ತಿತ್ತು. ಆದರು ತೊಂದರೆ ಇಲ್ಲ, ಕೊನೆಗೂ ನಾನು ನಾನಾಗಿಯೇ ಇದ್ದೆ ಎಂಬಲ್ಲಿಗೆ ಈ ಆರನೇ ದಿನದ ಪ್ರವಾಸ ಕಥನವನ್ನು ಮುಗಿಸುತ್ತಿದ್ದೇನೆ.
ಮುಂದುವರೆಯುತ್ತದೆ..........
ಭಾಗ 8
ಫೋಟೋಗಳಲ್ಲಿ ನೋಡಿದಾಗ ನಿಮಗೆ ನಾವು ಈಜಿಪ್ಟಿನಲ್ಲಿ ಬಹಳ ನಡೆದಿರಬೇಕು ಅನಿಸುತ್ತೆ. ಆದರೆ 10 ದಿನದ ಪ್ರವಾಸದಲ್ಲಿ ನಾವು ಒಟ್ಟು 3 ರಿಂದ 4 ಕಿಲೋಮೀಟರ್ ನಡೆದಿರಬಹುದಷ್ಟೆ. ಪ್ರವಾಸೋಧ್ಯಮವೇ ತಮ್ಮ ಆರ್ಥಿಕ ಬೆಳವಣಿಗೆಗೆ ಮುಖ್ಯವಾದ ಆದಾಯ ಎಂದು ಅರಿತಿರುವ ಈಜಿಪ್ಟ್ ಸರ್ಕಾರ, ಕೆಲವೆಡೇ ಬ್ಯಾಟರೀ ಕಾರ್‌ಗಳ ವ್ಯವಸ್ಥೆ ಮಾಡಿ ಪುರಾತನ ಕಟ್ಟಡಗಳ ಹತ್ತಿರ ನಮ್ಮನ್ನು ಕರೆದುಕೊಂಡು ಹೋದರೆ, ಮತ್ತಷ್ಟು ಕಡೆ ನೇರ ನಮ್ಮ ಪ್ರವಾಸದ ಬಸ್ ಕಟ್ಟಡಗಳ ಹತ್ತಿರ ಹೋಗಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಪೂರ್ತಿ ಪ್ರವಾಸದಲ್ಲಿ ಕಾಲ್ದಣಿವು ಕಮ್ಮಿ ಆದರೆ ಕಣ್ಣು ಮತ್ತು ಕಿವಿಯ ಕೆಲಸವಂತೂ ಬಹಳ.
ನಾವು ನಡೆದೂ ಸುಸ್ತಾಗಿಲ್ಲ ಆದರೆ ನಿಮಗೆಲ್ಲಾ ಕಥನ ಒದಿಸಿ ಓದಿಸಿ ಸುಸ್ತು ಮಾಡಿಸಿದ್ದೀನಿ. ಇನ್ನೇನು ಇದು ಮತ್ತು ಇನ್ನೊಂದು ಕಂತಿನಲ್ಲಿ ನಮ್ಮೆಲ್ಲರ ಈಜಿಪ್ಟ್ ಪ್ರವಾಸ ಮುಗಿಸಿಬಿಡೋಣ.
23/01/2023 ನಮ್ಮ ಈಜಿಪ್ಟ್ ಪ್ರವಾಸದ ಏಳನೇ ದಿನ. ಕ್ರೂಸ್ ಪ್ರಯಾಣ ಇಂದಿಗೆ ಮುಗಿದಿತ್ತು. ಕ್ರೂಸಿನಲ್ಲಿ ನೀಡಿದ್ದ ಐಶಾರಾಮಿ ಕೋಣೆಯನ್ನು ಖಾಲಿ ಮಾಡಿ, ಬಸ್ ಏರಿ ನೈಲ್ ನದಿಯ ಪಶ್ಚಿಮ ದಂಡೆಯ ವೀಕ್ಷಣೆಗೆ ಹೊರಟೆವು.
*ವ್ಯಾಲೀ ಆಫ್ ಕಿಂಗ್ಸ್ - Valley of Kings*
ನಾವೂ ಈ ವರೆಗೆ ನೋಡಿದ ಸಾಕಷ್ಟು ದೇವಸ್ಥಾನಗಳು, ಸಮಾಧಿಗಳು ಹಾಗೂ ಸ್ಮಾರಕಗಳು ನೈಲ್ ನದಿಯ ಅಕ್ಕಪಕ್ಕದಲ್ಲೇ ಇತ್ತು. *ನದಿಯ ಪಕ್ಕದಲ್ಲಿ ಸ್ಮಾರಕ ಮಾಡಿ ಪ್ರವಾಹಕ್ಕೆ ಅಂಜಿದೊಡೆ ಎಂತಯ್ಯ* ಎಂದು ಯಾರೋ ಆಗಿನ ರಾಜರಿಗೆ ಹೇಳಿರಬೇಕು. ಹಾಗಾಗಿ ಕ್ರಿ.ಪೂ 16ನೇ ಶತಮಾನದಿಂದ ಕ್ರಿ ಪೂ 11ನೇ ಶತಮಾನದವರೆಗಿನ ರಾಜರು ತಮ್ಮ ಸಮಾಧಿಯನ್ನು ನೈಲ್ ನದಿಯ ಪ್ರವಾಹದಿಂದ ಹಾನಿಯಾಗದಂತೆ ನೋಡಿಕೊಳ್ಳಲು 1000ಕ್ಕೂ ಹೆಚ್ಚು ಅಡಿ ಎತ್ತರದ ಸುಣ್ಣದ ಕಲ್ಲಿನ ಗುಡ್ಡಗಳಿರುವ ಜಾಗವನ್ನು ಆಯ್ದುಕೊಂಡರು. ಗುಡ್ಡಗಳ ಒಳಗೆ ಗುಹೆಯಂತೆ ದೊಡ್ಡ ದೊಡ್ಡ ನೆಲಮಾಳಿಗೆಯನ್ನು ಮಾಡಿ ತಮ್ಮ ಸಮಾಧಿಗಳನ್ನು ಕಟ್ಟಿಕೊಂಡರು. ಸಾಕಷ್ಟು ವರ್ಷ ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಈ ಗುಹೆಗಳು ಈಗ ಕಳೆದ ಇನ್ನೂರು ವರ್ಷಗಳಿಂದ ಸಂಶೋಧಕರ ಕಣ್ಣಿಗೆ ಬಿದ್ದಿವೆ. ಈ ವರೆಗೆ ಸುಮಾರು 63 ಈ ರೀತಿಯ ಗುಹೆಗಳನ್ನು ಇಲ್ಲಿ ಉತ್ಖನನ ಮಾಡಲಾಗಿದೆ ಮತ್ತು ಈಗಲೂ ಈಜಿಪ್ಟ್ ಸರ್ಕಾರ ಸಾವಿರಾರು ಕಾರ್ಮಿಕರನ್ನು ಸೇರಿಸಿ ಹೊಸ ಗುಹೆಗಳಿಗಾಗಿ ಹುಡುಕುತ್ತಲೇ ಇದೆ.
ಕೊಳ್ಳೆ ಹೊಡೆಯುವುದು ಎಂಬುದು ಎರಡು ಧರ್ಮಗಳ ಮಧ್ಯಯೇ ಇರಬೇಕಿಂದಿಲ್ಲ. ಒಬ್ಬ ರಾಜನು ತನ್ನ ಸಮಾಧಿಯನ್ನು ಕಟ್ಟಿಸಿ ತನಗೆ ಇಷ್ಟವಾಗುವಂತೆ ಅದರಲ್ಲಿ ವಸ್ತುಗಳನ್ನು ಇರಿಸಿ ಕಡೆಯಲ್ಲಿ ಅಂತಿಮ ಯಾತ್ರೆಯ ನಂತರ ಅವರ ಜನರು ಅವನನ್ನು ಅಲ್ಲಿಯೇ ಮಲಗಿಸುವಂತೆ ಮಾಡುತ್ತಾನೆ. ಹೀಗೆ ಸಮಾಧಿ ತಯಾರು ಮಾಡಲು ಸುಮಾರು ಹದಿನೈದರಿಂದ ಇಪ್ಪತ್ತು ವರ್ಷ ಬೇಕು. ಮುಂದೆ ಮತ್ತೊಬ್ಬ ರಾಜ ತನ್ನ ಸಮಾಧಿಯ ಗುಹೆಯನ್ನು ಮಾತ್ರ ನಿರ್ಮಾಣ ಮಾಡಿ ಅಲ್ಲಿಗೆ ಬೇಕಾದ ವಸ್ತುಗಳನ್ನು ಹಿಂದಿನ ರಾಜನ ಸಮಾಧಿಯಿಂದ ಕದ್ದು ತನ್ನ ಸಮಾಧಿಯಲ್ಲಿ ಇಟ್ಟುಕೊಳ್ಳುತ್ತಾನೆ. ಸಮಯದ ಅಭಾವವೋ ಅಥವಾ ಕಳ್ಳತನ ಮಾಡುವ ಮೋಜೋ ಗೊತ್ತಿಲ್ಲ. ಈ ಕಾರಣದಿಂದಾಗಿ ಈ ವ್ಯಾಲೀ ಆಫ್ ಕಿಂಗ್ಸ್‌ನಲ್ಲಿ ಈ ವರೆಗೆ ಸಿಕ್ಕಿರುವ ಸಾಕಷ್ಟು ಗುಹೆಗಳು ಖಾಲಿ ಖಾಲಿ. ಆದರೂ ಸುಣ್ಣದ ಕಲ್ಲಿನ ಗುಡ್ಡಗಳಲ್ಲಿ ನಿರ್ಮಿಸಿರುವ ಈ ಗುಹೆಗಳ ಒಳಭಾಗದಲ್ಲಿ ಬರೆಸಿರುವ ಚಿತ್ರಗಳಂತು ಶಾಶ್ವತವಾಗಿ ಉಳಿದಿದೆ. ಆಶ್ಚರ್ಯವೆಂದರೆ ಸುಮಾರು 3500 ವರ್ಷಗಳ ಹಿಂದೆ ಗೋಡೆಗಳ ಮತ್ತು ಮೇಲ್ಛಾವಣಿಯ ಮೇಲೆ ಈ ಚಿತ್ರಗಳನ್ನು ರಚಿಸಲು ಬಳಸಿದ ಬಣ್ಣಗಳು ಈಗಲೂ ಮಾಸಿಲ್ಲ. ಈ ಬಣ್ಣ ತಯಾರಿಸುವ ತಂತ್ರಜ್ಞಾನ ಈಗಿನವರಿಗೆ ಸಿಕ್ಕಿ ಬಿಟ್ಟರೆ, ಬಹಳಷ್ಟು ಪೈಂಟ್ ಕಂಪನಿಗಳು ಬಾಗಿಲು ಮುಚ್ಚಬೇಕಾಗುತ್ತದೆ.
ಸುಣ್ಣದ ಕಲ್ಲಿನ ಗುಡ್ಡಗಳಿಂದಲೇ ತುಂಬಿರುವ, ಮತ್ತು ದೊಡ್ಡ ದೊಡ್ಡ ಯಂತ್ರಗಳಿಂದ ಇನ್ನೂ ಉತ್ಖನನ ನಡೆಯುತ್ತಿರುವುದರಿಂದ ಈ ಜಾಗದ ಹತ್ತಿರಕ್ಕೆ ಸುರಕ್ಷತೆಯ ದೃಷ್ಠಿಯಿಂದ ನಮ್ಮ ವಾಹನಗಳನ್ನು ಬಿಡುವುದಿಲ್ಲ. ಸುಮಾರು 1 ಕಿಲೋಮೀಟರ್ ದೂರ ಹೋಗಲು ಈಜಿಪ್ಟ್ ಸರ್ಕಾರ ಎಲೆಕ್ಟ್ರಿಕ್ ವ್ಯಾನುಗಳ ವ್ಯವಸ್ಥೆ ಮಾಡಿದೆ. ನಾಲ್ಕರಿಂದ ಐದು ಗುಹೆಗಳನ್ನು ನೋಡಲು ನಮಗೆ ಅವಕಾಶವಿದೆ. ಒಂದು ಚಿಕ್ಕ ಬಾಗಿಲಿನ ಮೂಲಕ ಗುಹೆ ಪ್ರವೇಶಿಸಿದರೆ ಸುಮಾರು ಮುನ್ನೂರರಿಂದ ಐನೂರು ಮೆಟ್ಟಲುಗಳು ಒಳಗೆ ಇಳಿಯಬೇಕು. ಇಳಿಯುವಾಗ ಅಕ್ಕಪಕದ ಹಾಗೂ ಮೇಲಿನ ಗೋಡೆಗಳ ತುಂಬಾ ಚಿತ್ರ ವಿಚಿತ್ರ ಚಿತ್ರಕಲೆಗಳು. ಇಲ್ಲಿ ಒಳಗೆ ಗೈಡ್‌ಗಳು ಬಂದು ವಿವರಣೆ ನೀಡಲು ಅವಕಾಶವಿಲ್ಲ. ಏಕೆಂದರೆ, 10 ಜನರ ಗುಂಪು ಗೈಡ್ ಮಾತನ್ನು ಕೇಳುತ್ತಾ ಒಂದೆಡೆ ನಿಂತರೆ ಪೂರ್ತಿ ಗುಹೆಯ ಒಳಗಿನ ರಸ್ತೆಯೇ ಬಂದ್ ಆದಂತೆ, ಬೇರೆ ಯಾವ ಪ್ರವಾಸಿಗರಿಗೂ ಒಳಗೆ ಹೋಗಲು ಅಥವಾ ಹೊರಗೆ ಬರಲು ಅವಕಾಶವಿರುವುದಿಲ್ಲ. ಕೇವಲ ಈ ಚಿತ್ರಗಳ ಫೋಟೋ ಕ್ಲಿಕ್ಕಿಸಿ ಆಚೆ ಬಂದ ಮೇಲೆ ಗೈಡನ್ನು ಆ ಚಿತ್ರದ ಅರ್ಥ ಕೇಳಬಹುದು. ನಾವು ಒಳಗೆ ಹೋದ ಮೊದಲ ಗುಹೆಯಲ್ಲಿ ನಾನು ಕ್ಲಿಕ್ಕಸಿದ ಫೋಟೋ ಸಂಖ್ಯೆ ಸುಮಾರು ಒಂದು ನೂರು, ಅವುಗಳ ಅರ್ಥವನ್ನು ಗೈಡ್ ಬಳಿ ಕೇಳಲು ನನಗೆ ಸಂಯಮ ಮತ್ತು ಸಮಯ ಎರಡೂ ಇರಲಿಲ್ಲ.
ಅಲ್ಲೇ ಹತ್ತಿರದಲ್ಲೇ ಇದ್ದ ಇನ್ನೆರಡು ಗುಹೆಗಳು ಮೊದಲನೆಯ ಗುಹೆಯಂತೆಯೇ ಖಾಲಿ ಖಾಲಿ ಎಂದಾಗ ನಮಗೆ ಅವುಗಳ ಒಳಗೆ ಹೋಗಲು ಮನಸಾಗಲಿಲ್ಲ. ಮುಂದ ಪ್ರತ್ಯೇಕ ಹಣ ನೀಡಿ (ಕೇಸರಿಯವರೆ ಕೊಟ್ಟರು) ಅಂದರೆ ಸುಮಾರು 1200 ರೂಪಾಯಿ ಪ್ರವೇಶ ಶುಲ್ಕ ಇರುವ ಟುಟಾಂಕಮೂನ್ ಸಮಾಧಿಯ ಗುಹೆಗೆ ನಾವು ಹೋದೆವು. ಪೂರ್ತಿ ಈಜಿಪ್ಟಿನ ಪ್ರವಾಸದಲ್ಲಿ ನಾನು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತ್ತು.
*ಟುಟಾಂಕಮೂನ್ ಸಮಾಧಿ*
ಕ್ರಿ ಶ 1905ರಿಂದ ಈ ಕಣಿವೆಗಳಲ್ಲಿ ಉತ್ಖನನ ಆರಂಭವಾಯಿತು. ಹದಿನೇಳು ವರ್ಷಗಳಲ್ಲಿ ಸಾಕಷ್ಟು ಗುಹೆಗಳು ಪತ್ತೆಯಾದವು ಆದರೆ ಎಲ್ಲವು ಖಾಲಿ ಖಾಲಿ. ಕೆಲವೊಂದರಲ್ಲೇ ಮಮ್ಮಿಗಳೇ ಇರಲಿಲ್ಲ. ಹೀಗಿರುವಾಗ 1922ರಲ್ಲಿ ಪತ್ತೆಯಾದ ಸಮಾಧಿಯೇ *ಟುಟಾಂಕಮೂನ್* ಸಮಾಧಿ. ಈ ಗುಹೆಯು ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿರಲಿಲ್ಲ. ಚಿನ್ನದ ಶವ ಪೆಟ್ಟಿಗೆಗಳು, ಪಾತ್ರೆಗಳು ಹೀಗೆ ಅನೇಕ ವಸ್ತುಗಳು ಇಲ್ಲಿ ದೊರಕಿತು. ಈವರೆಗೆ ಪ್ರಪಂಚದಾದ್ಯಂತ ನಡೆದಿರುವ ಪುರಾತತ್ವ ಅನ್ವೇಷಣೆಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಸುರಕ್ಷತೆಯ ದೃಷ್ಠಿಯಿಂದ ಇಲ್ಲಿದ್ದ ಎಲ್ಲಾ ವಸ್ತುಗಳನ್ನು ಅಂದರೆ ಚಿನ್ನದ ಹಾಗೂ ಕಲ್ಲಿನ ಶವಪೆಟ್ಟಿಗೆಗಳು, ಚಿನ್ನದ ಕುರ್ಚಿ, ದಿನಬಳಕೆಯ ವಸ್ತುಗಳು ಎಲ್ಲವನ್ನೂ ಕೈರೋದ ಸಂಗ್ರಹಾಲಯಕ್ಕೆ ಸಾಗಿಸಿದ್ದಾರೆ ಮತ್ತು ಅದನ್ನು ನಾವೆಲ್ಲರೂ ನಮ್ಮ ಪ್ರವಾಸದ ಮೂರನೇ ಭಾಗದಲ್ಲಿ ನೋಡಿದ್ದೆವು.. ಹಾಗಾದರೆ ನಾವೇಕೆ ಒಳಗೆ ಹೋಗಬೇಕು ಎಂದು ಕೇಳಿದಿರೇನು. 3800 ವರ್ಷಗಳ ಹಿಂದೆ , ಟುಟಾಂಕಮೂನ್‌ನ ಮರಣದ ನಂತರ ಆತನ ಶವವನ್ನು ಮಮ್ಮಿಯಾಗಿ ಪರಿವರ್ತಿಸಿ ಸುರಕ್ಷಿತವಾಗಿ ಇಟ್ಟಿರುವ ದೇಹ ಇಲ್ಲಿದೆ. ಮೌನವಾಗಿ ಮಲಗಿರುವ ಆತನ ಕಪ್ಪಾಗಿರುವ ದೇಹ ನೋಡಿದರೆ ಮೈಯಲ್ಲೆಲ್ಲಾ ಏನೋ ರೋಮಾಂಚನ. ಈಗ ಹವಾ ನಿಯಂತ್ರಿತವಾಗಿ ಗುಹೆಯನ್ನು ಕಾಪಾಡಿ ದೇಹಕ್ಕೆ ಹಾನಿಯಾಗದಂತೆ ಸುರಕ್ಷಿತವಾಗಿಡಲಾಗಿದೆ. ಆ ಸಮಾಧಿಯ ಪಕ್ಕದ ಗೋಡೆಯ ಮೇಲಿನ ಬಣ್ಣದ ಚಿತ್ರಗಳಂತು ಅದ್ಭುತ.
ತನ್ನ ಒಂಬತ್ತನೇ ವಯಸ್ಸಿನಲ್ಲಿ ರಾಜನಾದ ಟುಟಾಂಕಮೂನ್ ಹತ್ತೊಂಬತ್ತನೇ ವಯಸ್ಸಿಗೆ ಸಾಯುತ್ತಾನೆ. ಈತನ ಜೀವನ ಹಾಗೂ ಸಾವಿನ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಇತ್ತೀಚಿನ ಡಿ.ಎನ್.ಎ ಸಂಶೋಧನೆ ಪ್ರಕಾರ ಈತ ತನ್ನ ಸ್ವಂತ ತಂಗಿಯನ್ನೇ ಮದುವೆಯಾಗಿದ್ದ, ಮತ್ತು ಇವನ ಸಮಾಧಿಯ ಪಕ್ಕದಲ್ಲೇ ಸಿಕ್ಕದ್ದ ಈತನ ತಂದೆತಾಯಿ ಕೂಡಾ ಅಣ್ಣ ತಂಗಿಯರಾಗಿದ್ದರು ಎಂದು ತಿಳಿದುಬಂದಿದೆ. ಬಹುಷಃ ಈ ರೀತಿಯ ವಿವಾಹದಿಂದಲೇ ಈ ರಾಜನು ಅಂಗವಿಕಲನಾಗಿದ್ದನು ಎಂದು ಸಂಶೋಧನೆ ತಿಳಿಸುತ್ತದೆ. ರಾಜಕೀಯವೇ ಹಾಗೇ ಅಲ್ಲವೇ, ಎಲ್ಲವೂ ತಮ್ಮ ಕುಟುಂಬದಲ್ಲೇ ಇರಬೇಕು ಎಂಬುದು ಸರ್ವಕಾಲಿಕ ಸತ್ಯ.
ಈ ವ್ಯಾಲಿ ಅಫ್ ಕಿಂಗ್ಸ್ ನೋಡಿದಮೇಲೆ ಪ್ರವಾಸಿಗರಿಗೆ ಸಾಕಪ್ಪ ಸಾಕು ಈ ದೇವಸ್ಥಾನಗಳ ಮತ್ತು ಸಮಾಧಿಗಳ ದರ್ಶನ ಎನಸಿದ್ದರೆ ಆಶ್ಚರ್ಯವೇನಿಲ್ಲ. ಇದನ್ನು ಅರಿತುಕೊಂಡ ಗೈಡ್‌ಗಳಿಬ್ಬರೂ, ನಮ್ಮ ಪಟ್ಟಿಯ ಪ್ರಕಾರ ಇನ್ನೂ ಮೂರು ದೇವಸ್ಥಾನಗಳನ್ನು ನೋಡಬೇಕಿದೆ, ನೀವೆಲ್ಲರು ಒಪ್ಪುವುದಾದರೆ ಅದರಲ್ಲಿ ಮುಖ್ಯವಾದ ಒಂದು ದೇವಸ್ಥಾನ ನೋಡೋಣ, ಏಕೆಂದರೆ ಆಮೇಲೆ ಸುಮಾರು ಎಂಟು ಗಂಟೆಗಳ ಬಸ್ ಪ್ರಯಾಣ ಮಾಡಬೇಕಿದೆ ಎಂದರು. ಎಲ್ಲಾ ಪ್ರವಾಸಿಗರು ಹಾಗೆಯೇ ಆಗಲಿ ಎಂದು ಒಪ್ಪಿದ ಮೇಲೆ ನಮ್ಮ ಬಸ್ *ಹಾತ್ಸೇಪ್‌ಸೂತ್* ದೇವಸ್ಥಾನದ ಕಡೆಗೆ ಚಲಿಸಿತು.
*ಹಾತ್ಸೇಪ್‌ಸೂತ್ ದೇವಸ್ಥಾನ*
ಕ್ರಿ ಪೂ 16ನೇ ಶತಮಾನದಲ್ಲಿ ಈಜಿಪ್ಟ್ ರಾಜ್ಯವನ್ನು ಆಳಿದ ರಾಣಿ ಹಾತ್ಸೇಪ್‌ಸೂತ್. ಗಂಡನ ಮರಣದ ನಂತರ, ತನ್ನ ಮಗನನ್ನು ಸುರಕ್ಷಿತವಾಗಿಡಲು ಅವನನ್ನು ಬೇರೆ ದೇಶಕ್ಕೆ ಕಳುಹಿಸಿ ರಾಜ್ಯವನ್ನು ತಾನೇ ಆಳುತ್ತಾಳೆ. ತನ್ನ ಆಳ್ವಿಕೆ ಸಮಯದಲ್ಲಿ ಕಟ್ಟಿಸಿದ ಈ ದೇವಸ್ಥಾನವು ಮೂರು ಅಂತಸ್ತುಗಳಂತಿದೆ. ಈ ವರೆಗಿನ ಎಲ್ಲಾ ಈಜಿಪ್ಟ್ ಕಟ್ಟಗಳಿಗೆ ಹೋಲಿಸಿರೆ ಇದನ್ನು ಅತ್ಯುತ್ತಮವಾದದ್ದೆಂದು ಹೇಳಬಹುದು. ಇದರ ಫೋಟೋ ನೋಡಿದಾಗ ನಿಮಗೇ ಹಾಗೆನಿಸಿದರೆ ಆಶ್ಚರ್ಯವಿಲ್ಲ. ಬೆಟ್ಟದ ಬುಡದಲ್ಲಿ ಕೊರೆದಿರುವ ಈ ದೇವಸ್ಥಾನದ ಸೌಂದರ್ಯವನ್ನು ಹಿಂದಿರುವ ಎತ್ತರದ ಬೆಟ್ಟವು ಹೆಚ್ಚಿಸಿದೆ .
ಆಗಲೂ ಲಿಂಗತಾರತಮ್ಯವಿತ್ತು ಎಂಬುದು ಇಲ್ಲಿ ಹಾಳಾಗಿರುವ ಕೆಲವು ಭಾಗಗಳಿಂದ ತಿಳಿಯುತ್ತದೆ. ಹಾತ್ಸೇಪ್‌ಸೂತ್ ರಾಣಿ ಸತ್ತ ಇಪ್ಪತ್ತು ವರ್ಷದ ನಂತರ ಬಂದಂತಹ ರಾಜ ತುಟ್‌ಮೋಸ್, ಈ ದೆವಸ್ಥಾನದಲ್ಲಿ ರಾಣಿಯ ಆಳ್ವಿಕೆಯ ಬಗ್ಗೆ ಹಾಗೂ ಅವಳು ಹೆಣ್ಣು ಎಂದು ಉಲ್ಲೇಖವಿರುವ ಎಲ್ಲಾ ಶಾಸನಗಳನ್ನು ಅಳಿಸಿಹಾಕುತ್ತನೆ. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಜನರು ಹಾತ್ಸೇಪ್‌ಸೂತ್ ಎಂದರೆ ಯಾರೋ ಗಂಡಸು ರಾಜನೇ ಇರಬೇಕು ಅಂದುಕೊಳ್ಳಬೇಕೆಂಬುದು ಅವನ ಉದ್ದೇಶವಾಗಿರುತ್ತದೆ. ಆದರೆ ಹೀಗೆ ಹಾಳುಮಾಡಲು ಹೊರಟ ಎರಡೇ ವರ್ಷದಲ್ಲಿ ಅವನು ಮತ್ತೊಬ್ಬ ರಾಜನಿಗೆ ಸೋತು, ಈ ದೇವಸ್ಥಾನ ಹಾಳು ಮಾಡುವ ಕೆಲಸ ಸ್ಥಗಿತವಾಗುತ್ತದೆ.
ಈ ದೇವಸ್ಥಾನವನ್ನು ನೋಡಿದಮೇಲೆ, ಮಧ್ಯಾಹ್ನದ ಊಟ ಮುಗಿಸಿ ಹವಾ ನಿಯಂತ್ರಿತ ಬಸ್‌ನಲ್ಲಿ ೮ ಗಂಟೆಗಳ ಪ್ರಯಾಣ ಹುರುಗಾದಾ ಎಂಬ ಊರಿಗೆ. ಪೂರ್ತಿ ಪ್ರಯಾಣದ ರಸ್ತೆ ನೈಲ್ ನದಿಯ ಪಕ್ಕದಲ್ಲೇ ಸಾಗಿತು. ರಸ್ತೆಯ ಒಂದು ಕಡೆ ನೈಲ್ ನದಿ, ಮತ್ತೊಂದು ಕಡೆ ನೋಟ ಹೋದಷ್ಟು ಮರುಭೂಮಿ, ಕೆಳಗೆ ಸುಖಕರವಾದ ಬಸ್ಸಿನ ಸೀಟು ಮತ್ತು ತಲೆಯ ಮೇಲೆ ತಣ್ಣನೆ ಬರುತ್ತಿದ್ದ ಬಸ್‌ನ ಏ.ಸಿ. ಗಾಳಿ. ಮುಂದಿನದು ನಾನು ಹಳಬೇಕಿಲ್ಲ, ನಿಮಗೇ ತಿಳಿದಿರುತ್ತದೆ. ಎಚ್ಚರವಾದಾಗ ಹುರಗಾದಾ ಊರು ಬಂದಿತ್ತು. ರಾತ್ರಿಯ ಊಟ ಮುಗಿಸಿ, ಅಲ್ಲಿ ನಮಗಾಗಿ ಕಾಯ್ದಿರಿಸಿದ್ದ ಹೋಟಲ್‌ಗೆ ಹೋಗಿ ಮಲಗಿದೆವು.
ಪ್ರಿಯ ಓದುಗರೇ, ಈ ಈಜಿಪ್ಟಿನ ಪ್ರವಾಸ ಕಥನ ಒಂದೊಂದು ಭಾಗವನ್ನೂ ಬರೆಯುತ್ತಿದ್ದಾಗ ನೀವು ನೀಡಿದ ಸ್ಪಂದನೆ ಹಾಗೂ ಪ್ರೇರಣಾದಾಯಕಾ ನುಡಿಗಳು ಇನ್ನೂ ಹೆಚ್ಚು ಬರೆಯಲು ನನಗೆ ಆಸಕ್ತಿ ತಂದಿತು. ಸ್ಪಂದಿಸಿದ ಪ್ರತಿಯೊಬ್ಬರಿಗೂ ನಾನು ಪ್ರತ್ಯೇಕವಾಗಿ ಧನ್ಯವಾದಗಳನ್ನು ಕಡೆಯ ಭಾಗ ಅಂದರೆ ಮುಂದಿನ ಭಾಗವಾದ ಮೇಲೆ ತಿಳಿಸುತ್ತೇನೆ. ಈ ಲೇಖನದ ಮೂಲಕ ಒಂದೇ ತಿಂಗಳಲ್ಲಿ ಎರಡು ಈಜಿಪ್ಟ್ ಪ್ರವಾಸ ಮಾಡಿದ ಅನುಭವ ನನಗಾಗಿದೆ.
ಭಾಗ 9
ಪ್ರವಾಸಗಳೇ ಹೀಗೆ, ಯಾವಾಗ ಶುರುವಾಗುತ್ತೋ ಯಾವಾಗ ಮುಗಿಯುತ್ತೋ ಗೊತ್ತಾಗುವುದೇ ಇಲ್ಲ. ಅದರಲ್ಲೂ ನಿಮ್ಮ ಜೊತೆ ಮಾಡಿದ ಈ ಲೇಖನ ಪ್ರವಾಸದಲ್ಲಿ ಈಜಿಪ್ಟಿನ ಇತಿಹಾಸ ನಾನು ನೇರ ನೋಡಿದ್ದಕ್ಕಿಂತ ಹೆಚ್ಚು ತಿಳಿದುಕೊಳ್ಳಲು ಅವಕಾಶವಾಯಿತು. ನಿಮ್ಮಿಂದ ಬರುತ್ತಿದ್ದ ಸ್ಪಂದನೆಗಳು ಇನ್ನೂ ಹೆಚ್ಚು ವಿಷಯಗಳನ್ನು ನಿಮಗೆ ತಿಳಿಸಿಕೊಡಬೇಕೆಂಬ ಆಸಕ್ತಿ ನನ್ನಲ್ಲಿ ಮೂಡಿಸುತ್ತಿತ್ತು. ಗೈಡ್ ಸಮೆ ಹೇಳಿದ ವಿಷಯಗಳು, ಗೂಗಲ್ ಭಗಿನಿ ತಿಳಿಸಿಕೊಟ್ಟದ್ದು ಹಾಗೂ ಟಿವಿಯಲ್ಲಿ ಡಾಕ್ಯುಮೆಂಟರಿಗಳನ್ನು ನೋಡಿದ್ದು , ಅವುಗಳನ್ನು ನಿಮಗಿಷ್ಟವಾಗುವಂತೆ ನಾನು ಬರೆಯಲು ಪ್ರಯತ್ನಿಸಿದ್ದು, ಎಲ್ಲವೂ ಸೇರಿದೆ ಈ ಪ್ರವಾಸ ಕಥನದಲ್ಲಿ.
ಯಾವುದೇ ಪ್ರವಾಸಗಳಲ್ಲಿ, ನಿಗದಿಯಾಗಿರುವ ಒಂದೆರೆಡು ಊರು, ಒಂದೆರೆಡು ದೇವಸ್ಥಾನ ನೋಡದಿದ್ದರೂ ಪರವಾಗಿಲ್ಲ, ದಿನಾ ರಾತ್ರಿಗೆ ಉಳಿದುಕೊಳ್ಳಲು ಒಳ್ಳೆಯ ಕೊಠಡಿಗಳು, ತಿನ್ನಲು ರುಚಿಯಾದ ಊಟ ಸಿಕ್ಕರೆ, ಪ್ರವಾಸದ ದಿನಗಳು ಓಡಲು ಆರಂಭಿಸುತ್ತದೆ. 10ದಿನಗಳಿಂದ ನಮ್ಮ ಜೊತೆಗಿದ್ದ ಬೇರೆ ಊರಿನ ಸಹಪ್ರವಾಸಿಗರು ಮತ್ತೆ ನಮ್ಮ ಜೀವನದಲ್ಲಿ ಸಿಗುತ್ತಾರೆಂಬ ನಂಬಿಕೆಯೂ ಇರುವುದಿಲ್ಲ. ಯಾವ ಪ್ರವಾಸವು ಸಿಹಿ ನೆನಪುಗಳನ್ನು ಮನದಲ್ಲಿ ಶಾಶ್ವತವಾಗಿ ಉಳಿಸುವುದೋ ಅದೇ ಅತ್ಯುತ್ತಮ ಪ್ರವಾಸವಾಗಿರುತ್ತದೆ.
*ಹುರುಗಾದಾ*
ಈಗ ನಾವೆಲ್ಲಾ ಹುರುಗಾದಾ ಊರಿಗೆ ಬಂದಿದ್ದೇವೆ. ಇಂದು ನಮ್ಮ ಪ್ರವಾಸದ 8ನೇ ದಿನ ತಾರೀಖು 24/01/2023. ಇಷ್ಟು ದಿನ ಏನೇ ಮಾತನಾಡಿದರು "ಇದು 3000 ವರ್ಷ ಹಳೆಯದು, 4000 ವರ್ಷ ಹಳೆಯದು ಅಂತ ಹೇಳ್ತಾ ಇದ್ದೆವು. ಇದಕ್ಕೆ ವಿರುದ್ದವಾಗಿ ಈಗ ನಾವು ಬಂದಿಳಿದಿರುವ *ಹುರುಗಾದಾ* 40 ವರ್ಷದ ಯೌವ್ವನದಲ್ಲಿದೆ. ಅಂದರೆ ಕ್ರಿ.ಶ.1980ರಲ್ಲಿ ಪ್ರವಾಸಿ ತಾಣವಾಗಿ ಮರುವಿನ್ಯಾಸವಾಗಿದ್ದು ಈ ಊರು. ಅದಕ್ಕೆ ಮುಂಚೆ ಇದು ಮೀನುಗಾರರ ಒಂದು ಹಳ್ಳಿಯಾಗಿತ್ತಷ್ಟೆ.
ಕೆಂಪು ಸಮುದ್ರದ ದಂಡೆಯಲ್ಲಿರುವ ಈ ಊರು ನೋಡಲು ಯೂರೋಪ್ ಊರುಗಳಿದ್ದಹಾಗಿದೆ. ದೊಡ್ಡ ಹೋಟಲ್‌ಗಳು, ರೆಸಾರ್ಟ್‌ಗಳು, ಆಧುನಿಕ ಶಾಪಿಂಗ್ ಮಾಲ್‌ಗಳು ಮತ್ತು ಮಳಿಗೆಗಳು, ಅಗಲವಾದ ರಸ್ತೆ ಮತ್ತು ಪ್ರವಾಸಿಗರಿಗಾಗಿಯೇ ಪೂರ್ತಿಯಾಗಿ ಮೀಸಲಾಗಿರುವ ಊರು ಇದಾಗಿದೆ. ಪ್ರಪಂಚದ ಬೇರೆ ಬೇರೆ ಮೂಲೆಗಳಿಂದ ಇಲ್ಲಿಗೆ ರಜೆ ಕಳೆಯಲು ಬರುವವರು, ಮಧುಚಂದ್ರಕ್ಕೆ ಬರುವವರು, ಜಲಕ್ರೀಡೆಗಳಿಗಾಗಿ ಬರುವವರು ಹೀಗೆ ಮೋಜು ಮಸ್ತಿಗೆ ಹೆಸರುವಾಸಿ ಈ ಊರು. ಹಾಗಂತ ಗೋವಾದ ರೀತಿ ಜನ ಕಿಕ್ಕಿರಿದು ತುಂಬಿರುವುದಿಲ್ಲ, ಊರು ಪೂರ್ತಿ ಶಾಂತವಾಗಿರುತ್ತದೆ.
ಈಜಿಪ್ಟಿನಲ್ಲೇ ಜೀವನ ಮಾಡಲು ಅತಿ ದುಬಾರಿಯಾದ ಊರು ಇದಾಗಿದೆ. ಈಗೀಗ ಅಪಾರ್ಟ್‌ಮೆಂಟುಗಳು ಮೇಲೆದ್ದು ಇಲ್ಲಿ ಹೋಟಲ್ ಮತ್ತು ರೆಸಾರ್ಟ್‌ಗಳಲ್ಲಿ ಕೆಲಸ ಮಾಡುವ ಸ್ಥಳೀಯ ಜನ ನೆಲೆಸಲು ಆರಂಭಿಸಿದ್ದಾರೆ. ಹಿಂದಿನ ದಿನ ರಾತ್ರಿ ಊಟ ಮುಗಿಸಿ ನಾವು ಹೋಟಲ್ ರೆಜೀನಾಗೆ ಬಂದಾಗ ರಾತ್ರಿ 8 ಗಂಟೆ. ಹೋಟಲ್ ಬಾಗಿಲಿನಿಂದ ನಮ್ಮ ಕೊಠಡಿಗೆ ನಡೆದುಕೊಂಡು ಹೋಗಲು 10 ನಿಮಿಷ ಬೇಕು. ಈ ಮಧ್ಯೆ ರೂಮಿಗೆ ಹೋಗಿ ನಿಮ್ಮ ಬ್ಯಾಗೆಲ್ಲಾ ಇಟ್ಟು ವಾಪಸ್ ಬಂದು ನೀವು ರಾತ್ರಿಯೆಲ್ಲಾ ಇಲ್ಲಿನ ರಸ್ತೆಗಳಲ್ಲಿ ಸುತ್ತಾಡಬಹುದು ಎಂದು ಗೈಡ್ ತಿಳಿಸಿದರು. ಆದರೆ ರಸ್ತೆಗಳಲ್ಲಿ ತಿರುಗಾಡುವುದಿರಲಿ, ನಮ್ಮ ರೂಮಿನಿಂದ ಹೋಟಲ್‌ನ ಮುಂಭಾಗಕ್ಕೆ ಬರಲು ಕೂಡಾ ಯಾರಿಗೂ ಶಕ್ತಿ ಇರಲಿಲ್ಲ ಮತ್ತು ಆ ಸಮಯದಲ್ಲಿ ಊರು ನೋಡುವ ಆಸಕ್ತಿಯೂ ಇರಲಿಲ್ಲ. ಹಾಸಿಗೆ ಮೇಲೆ ಬಿದ್ದದ್ದೇ ನೆನಪು, ಎಚ್ಚರವಾದಾಗ ಬೆಳಿಗ್ಗೆ 6 ಗಂಟೆ. ಬಾಲ್ಕನಿಗೆ ಹೋದರೆ ನಮ್ಮ ಮುಂದೆ ವಿಶಾಲವಾದ ಕೆಂಪುಸಮುದ್ರ ಕಾಣುತ್ತಿದೆ ಮತ್ತು ಇನ್ನೇನು ಸೂರ್ಯೋದಯವೂ ಆಗುವುದರಲ್ಲಿತ್ತು. ಬಹುಷಃ ಬಹಳ ಸುಸ್ತಾಗಿದ್ದ ಮಿಕ್ಕ ಪ್ರವಾಸಿಗರು ಆ ಸಮಯಕ್ಕೆ ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ ಹಾಗಾಗಿ ಕೆಂಪು ಸಮುದ್ರದ ಮೇಲಿನ ಸೂರ್ಯೋದಯದ ಅದ್ಭುತವಾದ ದೃಶ್ಯ ಅಂದು ಅವರುಗಳು ನೋಡಿರಲಿಕ್ಕಿಲ್ಲ.
8 ಗಂಟೆಗೆ ಬೆಳಗಿನ ಉಪಹಾರ ಮುಗಿಸಿ ನಂತರ ನಮ್ಮ ರೂಮ್‌ಗಳನ್ನು ಖಾಲಿ ಮಾಡಿ ನಮ್ಮ ದೊಡ್ಡ ಬ್ಯಾಗುಗಳನ್ನು ಹೋಟಲ್ಲಿನ ಸ್ವಾಗತಕಕ್ಷೆಯಲ್ಲಿ ಇರಿಸಿದೆವು. ಅಲ್ಲಿಂದ ನಾವು ಎರಡು ಚಿಕ್ಕ ವ್ಯಾನುಗಳಲ್ಲಿ ಕೆಂಪು ಸಮುದ್ರದ ದಂಡೆಗೆ ಹೋದೆವು. ಅಲ್ಲಿ ನಮಗಾಗಿ ಒಂದು ರೈಲಿನ ಭೋಗಿಯಷ್ಟು ಉದ್ದವಿದ್ದ ಚಿಕ್ಕ ದೋಣಿ ಕಾದಿತ್ತು. ಆ ದೋಣಿಯಲ್ಲಿ ತಳ ಮಹಡಿಯೂ ಸೇರಿ ನಾಲ್ಕು ಮಹಡಿಗಳು. ಕೇವಲ ನಾವು 31 ಜನಕ್ಕಾಗಿಯೇ ಕಾದಿರಿಸಿದ್ದ ದೋಣಿ ಅದಾಗಿತ್ತು. ದೋಣಿಯ ಸಿಬ್ಬಂದಿ ನಮ್ಮನ್ನು ಸ್ವಾಗತಿಸಿ, ಕಾಫಿ, ಹಣ್ಣಿನ ರಸ, ಬಿಸ್ಕೆಟ್ ಎಲ್ಲಾ ನೀಡಿದರು. ನಂತರ ಆ ದೋಣಿ ಸಮುದ್ರದಲ್ಲಿ ಚಲಿಸಲು ಆರಂಭಿಸಿತು.
ಈ ಸಮುದ್ರದ ಪಕ್ಕದಲ್ಲಿ ಒಂದು ದೊಡ್ಡ ಕೆಂಪು ಗ್ರಾನೈಟ್ ಕಲ್ಲಿನ ಗುಡ್ಡವಿದ್ದು ಅದರ ಪ್ರತಿಬಿಂಬ ಸಮುದ್ರದಲ್ಲಿ ಕಾಣೀಸುತ್ತಿದ್ದಾಗ ಸಮುದ್ರದ ಬಣ್ಣ ಕೆಂಪಾಗಿ ಕಾಣಿಸುತ್ತಿತ್ತು, ಹಾಗಾಗಿ ಇದಕ್ಕೆ ಕೆಂಪು ಸಮುದ್ರ ಅಥವಾ ರೆಡ್ ಸೀ ಎಂದು ಕರೆಯುತ್ತಾರೆ ಎಂದು ನಮ್ಮ ಗೈಡ್ ನಮಗೆ ತಿಳಿಸಿದರು.
ಸುಮಾರು ಒಂದು ಗಂಟೆ ನೀರಿನಲ್ಲಿ ದೋಣಿ ಚಲಿಸಿದ ಮೇಲೆ, ಸಮುದ್ರದ ಮಧ್ಯದಲ್ಲಿ ಈಜುವ ಅವಕಾಶ ನಮಗೆ ಸಿಕ್ಕಿತು. ಇದಕ್ಕೆ ಸ್ನಾರ್ಕೆಲಿಂಗ್ (Snorkelling) ಎಂದು ಕರೆಯುತ್ತಾರೆ. ಬನಿಯನ್ ತರಹದ ಒಂದು ದಪ್ಪನೆಯ ಲೈಫ್ ಜ್ಯಾಕೆಟ್ ನಮಗೆ ತೊಡಿಸುತ್ತಾರೆ. ಇದರ ವಿಶೇಷವೆಂದರೆ ಈ ಜ್ಯಾಕೆಟ್ ತೊಟ್ಟು ಈಜು ಕಲಿತದವರೂ ಕೂಡ ಸಮುದ್ರದ ಮೇಲೆ ಎದೆ ಆಕಾಶದ ಕಡೆಗೆ ಮಾಡಿ ಮಲಗಬಹುದು. ಮುಳುಗುವ ಭಯವೇ ಇರವುದಿಲ್ಲ. ಸ್ವಲ್ಪ ಸಮತೋಲನ ಮಾಡುವುದನ್ನು ಕಲಿಯಬೇಕಷ್ಟೇ. ಈಜು ಕಲಿತಿರುವವರು ಈ ಜ್ಯಾಕೆಟ್ ತೊಟ್ಟು ಸಮುದ್ರದಲ್ಲಿ ಆರಾಮವಾಗಿ ಈಜಾಡಬಹುದು. ನನಗೆ ಈಜು ಗೊತ್ತಿದ್ದರಿಂದ ಸುಮಾರು 30 ನಿಮಿಷ ಸಮುದ್ರದ ಮಧ್ಯದಲ್ಲಿ ಈಜಾಡಿದೆ. ಇದೇ ಮೊದಲ ಬಾರಿಗೆ ಸಮುದ್ರದಲ್ಲಿ ಈಜಿದ್ದು. ಆಗಾಗ ಬೆನ್ನು ಮೇಲೆ ಮಾಡಿ ಮಲಗಿದರೆ, ಸಮುದ್ರದ ಒಳಗಿರುವ ಬಣ್ಣಬಣದ ಮೀನುಗಳು ಕಾಣಿಸುತ್ತಿತ್ತು. ನನಗಂತು ಇದು ಮರೆಯಲಾಗದ ಅನುಭವ. ನಮ್ಮ ಗುಂಪಿನಲ್ಲಿ ಕೆಲವರು ಧೈರ್ಯಮಾಡಿ ನೀರಿಗಿಳಿದು ಆರಾಮವಾಗಿ ಸ್ವಲ್ಪ ಹೊತ್ತು ಸಮುದ್ರದ ನೀರಿನ ಮೇಲೆ ಒಂದು ರಬ್ಬರ್ ಟ್ಯೂಬನ್ನು ಹಿಡಿದುಕೊಂಡು ಮಲಗಿದ್ದರು. ನೀರಿಗೆ ಇಳಿದ ಎಲ್ಲರಿಗೂ ಶುದ್ದವಾದ ಸಾಮಾನ್ಯ ನೀರಿನಲ್ಲಿ ಸ್ನಾನ ಮಾಡಲು ಶವರ್ ಸಮೇತದ ಬಾತ್‌ರೂಮ್ ದೋಣಿಯಲ್ಲಿತ್ತು.
ಮುಂದೆ ಬನಾನ ಬೋಟ್ ರೈಡ್ ಇತ್ತು. ಬಾಳೆಹಣ್ಣು ಆಕಾರದ ಸುಮಾರು 6 ಜನ ಒಬ್ಬರ ಹಿಂದೆ ಒಬ್ಬರು ಕುಳಿತುಕೊಳುವ ದೊಡ್ಡ ರಬ್ಬರ್ ಟ್ಯೂಬ್‌ಗೆ ಬನಾನಾ ಬೋಟ್ ಎನ್ನುತ್ತಾರೆ. ವೇಗವಾಗಿ ಚಲಿಸುವ ಇನ್ನೊಂದು ದೋಣಿಗೆ ಈ ಟ್ಯೂಬನ್ನು ದಪ್ಪದಾದ ಹಗ್ಗದಿಂದ ಕಟ್ಟುತ್ತಾರೆ. ಆ ದೋಣಿ ಈ ಟ್ಯೂಬ್ ಮೇಲಿರುವ ಜನರನ್ನು ಸಮುದ್ರದಲ್ಲಿ ಐದು ನಿಮಿಷಗಳ ಕಾಲ ಸುತ್ತಿಸುತ್ತದೆ. ಸಮುದ್ರವೆಂದರೆ ಭಯವಿರುವವರಿಗೆ ನೀರಿನ ಮಟ್ಟದಿಂದ ಸ್ವಲ್ಪ ಮೇಲೆ ವೇಗವಾಗಿ ಚಲಿಸುವ ಈ ಬನಾನ ಬೋಟ್ ರೈಡ್ ತುಂಬಾ ಆನಂದ ಕೊಡುತ್ತದೆ.
ನಮ್ಮೂರಲ್ಲಿ ಕಾಗೆ ಹಾರಿಸೋದು ಅಂತಾರೆಲ್ಲಾ, ಹಾಗೇ ಈ ಟೂರ್ ಕಂಪನಿಗಳು ಡಾಲ್ಫಿನ ಹಾರಿಸುತ್ತಾರೆ. ನಿಮ್ಮನ್ನು ಅತಿ ಹೆಚ್ಚು ಡಾಲ್ಫಿನ ಇರುವ ಜಾಗಕ್ಕೆ ಕರೆದುಕೊಂಡು ಹೋಗುತ್ತೇವೆ, ನೀವು ಅದರೊಂದಿಗೆ ಈಜ ಬಹುದು, ಅದರ ಆಟಗಳನ್ನು ನೋಡಬಹುದು ಎಂದೆಲ್ಲ ಪ್ರವಾಸದ ವಿವರಗಳಲ್ಲಿ ಕೊಟ್ಟಿರುತ್ತಾರೆ. ಆದರೆ ಇದು ಅದೃಷ್ಟದ ಮೇಲೆ ನಿಂತಿರುತ್ತದೆ. ನನಗೆ ತಿಳಿದ ಪ್ರಕಾರ ಶೇಕಡ 90ರಷ್ಟ ಪ್ರವಾಸಿಗರಿಗೆ ಈ ಡಾಲ್ಫಿನ್ ಪ್ರದರ್ಶನ ಸಿಗುವುದೇ ಇಲ್ಲ. ನಾವೂ ಅದರಲ್ಲಿ ಒಬ್ಬರು. "ಇಲ್ಲಾ ಸಾರ್, ಅದು ಸೀಸನ್‌ನಲ್ಲಿ ಮಾತ್ರ ಸಿಗುತ್ತೆ, ಅದು ಇದು" ಅಂತ ಸಬೂಬು ಹೇಳಿ ಸಮಾಧಾನ ಪಡಿಸುತ್ತಾರೆ.
ಇಷ್ಟೆಲ್ಲಾ ಜಲಕ್ರೀಡೆಯಾದ ಮೇಲೆ ದೋಣಿಯ ನೆಲಮಹಡಿಯಲ್ಲಿದ್ದ ಡೈನಿಂಗ್ ಹಾಲಿನಲ್ಲಿ ಎಲ್ಲರೂ ಊಟ ಮಾಡಿ ವಾಪಸ್ ನಮ್ಮ ಹೋಟಲ್ಲಿಗೆ ಬಂದೆವು. ಅಲ್ಲಿ ಸ್ವಾಗತಕಕ್ಷೆಯಲ್ಲಿ ಇಟ್ಟಿದ್ದ ನಮ್ಮ ಬ್ಯಾಗ್‌ಗಳನ್ನು ಬಸ್‌ಗೆ ಹಾಕಿ ಮತ್ತೆ ಕೈರೋದೆಡೆಗೆ 8 ಗಂಟೆಗಳ ಪ್ರಯಾಣ. ಈ ದಿನ ಪ್ರಯಾಣದ ರಸ್ತೆಯ ಬಲಗಡೆಗೆ ಕೆಂಪು ಸಮುದ್ರ ಹಾಗೂ ಮತ್ತೊಂದು ಕಡೆ ಮರಳುಗಾಡು. ನೀರಿನಲ್ಲಿ ಈಜುವುದೆಂದರೆ ಸುಮ್ಮನೆಯೇ, ನನಗಂತು ನಿದ್ರಾದೇವಿ ತಟ್ಟನೆ ಅವತರಿಸಿ ನನ್ನನ್ನು ನಿದ್ರಾಲೋಕಕ್ಕೆ ಕರೆದುಕೊಂಡು ಹೋದಳು.
ಕೈರೋ ತಲುಪಿದ್ದು ರಾತ್ರಿ 8 ಗಂಟೆಗೆ. ರಾತ್ರಿಯ ಊಟ ಮುಗಿಸಿ ಮತ್ತೆ ಇನ್ನೊಮ್ಮೆ ಬಿಸಿ ನೀರಿನಲ್ಲಿ ಸ್ನಾನ ಮಡಿ ಮಲಗಿದೆವು.
ಇಲ್ಲಿಗೇ ನಮ್ಮ ಈಜಿಪ್ಟ್ ಪ್ರವಾಸ ಮುಗಿದಿತ್ತು. ಉಳಿದದ್ದು ಮಾರನೆ ದಿನದ ತಿಂಡಿ, ಊಟ ಮತ್ತು ಕೈರೋದಿಂದ ಮುಂಬೈಗೆ ವಿಮಾನ ಪ್ರಯಾಣ ಹಾಗೂ ಮುಂಬೈನಿಂದ ಬೆಂಗಳೂರಿಗೆ ವಾಪಸ್.
ಮುಂಬೈ ವಿಮಾನ ನಿಲ್ದಾಣದಲ್ಲಿ ನಾನು ಹಾಗೂ ವಿಜಯಕುಮಾರ್ ವಾಂಗೋ ಹೋಟಲ್ಲಿಗೆ ಹೋಗಿ ಇಡ್ಲಿ ಸಾಂಬಾರ್ ಮತ್ತು ಕಾಫಿ ತೆಗೆದುಕೊಂಡು ತಿನ್ನಲು ಕುಳಿತೆವು. ಈ ಇಡ್ಲಿ ಸಾಂಬಾರ್ ಚಟ್ನಿಯನ್ನು ನೋಡುತ್ತಿದ್ದಂತೆ ಕಣ್ಣುಗಳಲ್ಲಿ ಧಾರಕಾರವಾಗಿ ಆನಂದಭಾಷ್ಪ. ಕಾರಣ ನಿಮಗೇ ಗೊತ್ತು, ನಾನೇನು ಹೇಳಬೇಕಿಲ್ಲ.
ಬೆಂಗಳೂರಿನಿಂದ ನನ್ನ ಜೊತೆ ಬಂದಿದ್ದವರು ಪ್ರಭಾಕರ್, ಸುಜಾತಾ, ಚಂದ್ರಶೇಖರ್, ನಿರ್ಮಲ, ವೆಂಕಟಸುಬ್ಬಯ್ಯ, ಗೌರಾಂಬ, ಶೈಲಜಾ, ಗಾಯತ್ರಿ, ರಂಗನಾಥನ್, ಇಂದಿರಾ, ಆರತಿ, ಮೋಹನ್, ರಾಜಣ್ಣ ಮತ್ತು ವಿಜಯಕುಮಾರ್. ಎಲ್ಲರೂ ಮನೆಯಿಂದ ತಂದಿದ್ದ ಚಟ್ಟಣಿ, ಉಪ್ಪಿನಕಾಯಿ ತೊಕ್ಕು ಎಲ್ಲವನ್ನೂ ಊಟದ ಸಮಯದಲ್ಲಿ ಹಂಚಿಕೊಂಡು ತಿಂದದ್ದು, ಒಂದೇ ಮನೆಯವರ ತರಹ ಎಲ್ಲರೂ ಪ್ರವಾಸದಲ್ಲಿ ನಡೆದುಕೊಂಡಿದ್ದು ಈ ಪ್ರವಾಸದ ಯಶಶ್ಸಿಗೆ ಇನ್ನೊಂದು ಮುಖ್ಯ ಕಾರಣ.
ನಾನಂತೂ ಮುಂಬರುವ ದಿನಗಳಲ್ಲಿ ಈ ರೀತಿಯ ಹೆಚ್ಚು ಪ್ರವಾಸಗಳನ್ನು ಮಾಡಲು ನಿರ್ಧರಿಸಿದ್ದೇನೆ. ನನ್ನ ಜೊತೆ ನೀವು ನೇರ ಪ್ರವಾಸಕ್ಕೆ ಬರುತ್ತೀರೋ ಅಥವಾ ಲೇಖನದ ಪ್ರವಾಸಕ್ಕೆ ಬರುತ್ತೀರೋ ನಿಮಗೆ ಬಿಟ್ಟಿದ್ದು.
ಹಿಂದೆ *ನಾನು ಪ್ರವಾಸಕ್ಕೆ ಹೋಗಿದ್ದರಿಂದ ಲೇಖನವನ್ನು ಬರೆಯುತ್ತಿದ್ದೆ* , ಆದರೆ ಈಗೀಗ ಓದುಗರಾದ ನೀವುಗಳು ತೋರಿಸಿದ ಪ್ರೀತಿ ಹಾಗೂ ನಿಮ್ಮ ಪ್ರೇರಣಾತ್ಮಕ ನುಡಿಗಳಿಂದಾಗಿ *ಲೇಖನ ಬರೆಯುವುದಕ್ಕಾಗಿ ಪ್ರವಾಸ ಮಾಡೋಣ* ಎಂದೆನಿಸುತ್ತಿದೆ.
ಮತ್ತೆ ಮುಂದಿನ ಲೇಖನದೊಂದಿಗೆ ಭೇಟಿಯಾಗೋಣ.
ಇಂತಿ ನಿಮ್ಮ ಪ್ರೀತಿಯ
ಗುರುರಾಜ ಶಾಸ್ತ್ರಿ