ಗುರುರಾಜ
ಶಾಸ್ತ್ರಿ
ಬಯಸದೆ ಬಂದ ವಡೆ
15-09-2026
ಇಸವಿ 2025, ನನ್ನ ಯಾವ ಜನಿವಾರವೂ 25 ದಿನಕ್ಕೂ ಹೆಚ್ಚು ಮೈಯ ಮೇಲೆ ಉಳಿಯಲೇ ಇಲ್ಲ. ಕೆಲವರಿಗೆ ಈ ವಾಕ್ಯ ಅರ್ಥವಾಗದೇ ಇರಬಹುದು. ತುಂಬಾ ಸರಳ, ಆ ವರ್ಷ ನನ್ನ ಸುತ್ತಮುತ್ತಲಿನ ಬಂಧು ಬಳಗದಲ್ಲಿ ಸಾವು ನೋವು ಹೆಚ್ಚಾಗಿದ್ದು ಪ್ರತಿ ಧರ್ಮೋದಕ ಹಾಗೂ ಸ್ಮಶಾನ ಪ್ರವೇಶಕ್ಕೆ ಜನಿವಾರ ಬದಲಾಯಿಸಬೇಕಾಯಿತು. ನನಗೆ ತಿಳಿಯದೆಯೇ ನಮ್ಮ ಬಂಧು ಬಳಗದಲ್ಲಿ ನಾನು ಹಿರಿಯನಾಗಿಬಿಟ್ಟಿದ್ದೇನೆ. ಈ ಸಂದರ್ಭಗಳಲ್ಲಿ ಹಿರಿಯರ ಅನಿಸಿಕೆಗಳನ್ನು ಕೇಳುವುದಕ್ಕೆ ಜನ ನನ್ನ ಬಳಿ ಬರುವುದರಿಂದ ಇದು ತಿಳಿದುಬಂದಿದೆ. ಒಂದು ಕಡೆ ಹತ್ತಿರದ ಬಂಧುಬಳಗದವರನ್ನು ಕಳೆದುಕೊಳ್ಳುತ್ತಿರುವ ದುಃಖ, ಮತ್ತೊಂದು ಕಡೆ ನನ್ನ ಆ ತೆರೆಳುವ ದಿನ ಹೇಗರಿಬಹುದೆಂಬ ಕಲ್ಪನೆ. ಆ ಕಲ್ಪನೆಯ ಮೆರವಣಿಗೆಯಲ್ಲಿ ಕೆಲವೊಂದು ಸಲ ಹತ್ತೇ ಜನ ಕಂಡರೆ, ಕೆಲವೊಮ್ಮೆ ಹತ್ತು ಸಾವಿರ ಜನರನ್ನು ನೋಡಿ ಹೆಮ್ಮೆಪಟ್ಟಿಕೊಂಡಿದ್ದೇನೆ. ರಾಜನ ನಾಯಿ ಸತ್ತಾಗ ಬಂದದ್ದು ಸಾವಿರ ಮಂದಿ, ರಾಜ ಸಾವನ್ನಪ್ಪಿದಾಗ ಬಂದದ್ದು ನಾಲ್ಕೇ ಮಂದಿ ಎಂಬ ಗಾದೆಯ ಅರಿವೂ ನನಗಿದೆ. ಅದು ಹೇಗೇ ಇರಲಿ, ಆ ದಿನ ನಾನಂತೂ ಇವೆಲ್ಲ ನೋಡಲು ಇರುವುದಿಲ್ಲವೆಲ್ಲ ಎಂಬ ಸಾಂತ್ವನ ನನಗೆ ನಾನೇ ಹೇಳಿಕೊಳ್ಳುತ್ತೇನೆ. ಹಿರಿಯರನ್ನು ಮಾತನಾಡಿಸಿಕೊಂಡು ಬರಲು ಕೆಲವರ ಮನೆಗೆ ಹೋದ ಹದಿನೈದೇ ದಿನದಲ್ಲಿ ಆ ಹಿರಿಯರು ಶಿವನ ಪಾದವನ್ನು ಮತ್ತೆ ಕೆಲವರು ವಿಷ್ಣುವಿನ ಸಾನಿಧ್ಯವನ್ನು ಸೇರಿಕೊಂಡರು. ಇದನ್ನು ಗಮನಿಸಿದ ಪರಿಚಯದ ಹಾಗೂ ಪರಿಚಯವಿಲ್ಲದ ಹಲವಾರು ಜನರು ತಮ್ಮ ಮನೆಯಲ್ಲಿರುವ ಹಿರಿಯರನ್ನು ನೋಡಲು ನನಗೆ ಆಹ್ವಾನ ನೀಡುತ್ತಿರುವುದು ಸಂತೋಷದ ಸಂಗತಿಯೋ ಅಥವಾ ಚಾರಿತ್ರ್ಯ ವಧೆಯೋ ಗೊತ್ತಿಲ್ಲ. ಏನೋ ಹೋಗುವವರು ಹೋಗೇ ಹೋಗುತ್ತಾರೆ ಎಂಬುದು ಆ ಮನೆಯವರಿಗೆ ಗೊತ್ತು ಆದರೆ ಸ್ವಪ್ರಯತ್ನವೂ ಅದರಲ್ಲಿ ಇರಬೇಕೆಂದು ನನಗೆ ಆಹ್ವಾನ ನೀಡುತ್ತಿದ್ದಾರೆ ಅನಿಸುತ್ತೆ. ಸತ್ಯ ಹರಿಶ್ಚಂದ್ರ ಸಿನಿಮಾದ ಹಾಡು “ಶ್ರಾದ್ಧದೂಟ ಸುಮ್ಮನೆ ನೆನೆಸಿಕೊಂಡ್ರೆ ಜುಮ್ಮನೆ” ಬಹಳ ಜ್ಞಾಪಕಕ್ಕೆ ಬರುತ್ತಿತ್ತು. ಆದರೆ ತಿಂಗಳಿಗೆರೆಡು ಮೂರು ಶ್ರಾದ್ಧ ಬರುತ್ತಿದ್ದಾಗ ತಿಥಿ ಊಟ ನೋಡಿದರೆ ವಾಕರಿಕೆ ಬಂದಂತಾಗುತ್ತಿತ್ತು. ಸಿಹಿ ಭಕ್ಷ್ಯಗಳು ಹಲವು; ಕಜ್ಜಾಯ, ಸಜ್ಜಪ್ಪ, ರವೆವುಂಡೆ, ಪಾಯಸ, ಸುಗ್ಗಿನ ಉಂಡೆ ಹೀಗೆ, ಆದರೆ ವಡೆ ಮಾತ್ರ ಪ್ರತಿ ತಿಥಿಯಲ್ಲೂ ಒಂದೇ. ಅದರ ಜೊತೆಗೆ ಹಲಸಿನ ಕಾಯಿ ಅಥವಾ ಬೆಂಡೇ ಕಾಯಿ ಹುಳಿ, ಬಾಳೆಕಾಯಿ, ತೊಂಡೆಕಾಯಿ ಪಲ್ಯ, ಬಾಳೆ ದಿಂಡು ಮೊಸರುಬಜ್ಜಿ ಇವೆಲ್ಲಾ ಎಲ್ಲಾ ತಿಥಿಗಳಲ್ಲೂ ಖಾಯಮ್‌ ಅತಿಥಿಗಳು. ಹಾಗಾಗಿಯೇ ಶ್ರಾದ್ದದ ಊಟದಲ್ಲಷ್ಟೇ ಅಲ್ಲ ಹೋಟೆಲ್ಲುಗಳಲ್ಲಿ ಕಟ್ಟೆಯ ಮೇಲೆ ತಟ್ಟೆಯಲ್ಲಿ ಜೋಡಿಸಿಟ್ಟಿರುವ ವಡೆಯ ನೋಡಿದರೂ ನನಗೆ ಅಸಹ್ಯವಾಗುತ್ತಿತ್ತು. ಒಂದಾನೊಂದು ಕಾಲದಲ್ಲಿ, ಅಂದರೆ ಈಗ ಒಂದೆರೆಡು ವರ್ಷಕ್ಕೆ ಮುಂಚೆ, ಹೋಟಲ್ಲಿನಲ್ಲಿ ಏನೇ ತಿಂಡಿ ತೆಗೆದುಕೊಂಡರೂ ಜೊತೆಗೆ ವಡೆ ಬೇಕೇ ಬೇಕು ಎಂದು ಹಠ ಮಾಡುತ್ತಿದ್ದವ ನಾನು. ನನ್ನ ಈ ಲೇಖನದ ಶೀರ್ಷಿಕೆಯ ಹತ್ತಿರಕ್ಕೆ ನನ್ನ ಮಾತುಗಳು ಸಾಗುತ್ತಿದೆ ಎಂಬ ಮನವರಿಕೆ ನಿಮಗಾಗುತ್ತಿದೆಯಲ್ಲವೇ, ಸರಿ ಪೀಠಿಕೆಗೆ ಈಗ ಮಂಗಳ ಹಾಡುತ್ತೇನೆ, ವಿಷಯಕ್ಕೆ ಬರೋಣ. ಅದು 2025ರ ಡಿಸೆಂಬರ್‌ ತಿಂಗಳು, ಬೆಂಗಳೂರು ಛಳಿಯಲ್ಲಿ ಬೆಳಗಿನ ಜಾವದಲ್ಲಿ ಯೋಗ ಮುಗಿಸಿ ಕಾಫಿ ಕುಡಿಯಲು ಓಡಿ ಹೋಗುತ್ತಿದ್ದ ಸಮಯ. ಹೋಟೆಲ್‌ ಪ್ರವೇಶಿಸುತ್ತಿದ್ದಂತೆ ಯಾರೋ ಒಬ್ಬರ ತಟ್ಟೆಯಲ್ಲಿನ ಸಾಂಬಾರಿನ ಪರಿಮಳ ನನ್ನ ಮೂಗಿಗೆ ತಟ್ಟುತ್ತಿತ್ತು. ಜೊತೆಗೆ ಅದರೊಳಗೆ ಮುಳುಗಿದ್ದ ಇಡ್ಲಿ ರಸಮಲೈನ ಹಾಗೆ ಕಾಣುತ್ತಿತ್ತು. ನಾನಂತೂ ವಡೆಯ ಕಡೆ ತಿರುಗಿಯೂ ನೋಡಲಿಲ್ಲ, ಕಾರಣ ನಿಮಗೇ ಗೊತ್ತು. ಮತ್ತೆ ಪೀಠಿಕೆಯಲ್ಲಿ ಹೇಳಿದ ವಿಷಯಗಳನ್ನು ಇಲ್ಲಿ ಪುನರ್‌ ಪ್ರವಚನ ಮಾಡಲು ನನಗೆ ಇಷ್ಟವಿಲ್ಲ. ನೇರ ಬಿಲ್ಲಿಂಗ್‌ ಕೌಂಟರಿಗೆ ಹೋದೆ, ಒಂದು ಪ್ಲೇಟ್‌ ಇಡ್ಲಿ ಕೊಡಿ ಎಂದೆ. ಸರ್‌ ವಡೆ ಈಗ ಮಾಡಿದ್ದು, ಬಿಸಿಯಾಗಿದೆ ಅದೂ ಒಂದು ಕೊಡಲೇ ಎಂದ ಹೋಟೆಲ್‌ ಮಾಲೀಕ. ಅಲ್ಲ ಬೆಳಿಗ್ಗೆ ಏಳು ಗಂಟೆ ಸಮಯ, ವಡೆ ಈಗ ಮಾಡಿದ್ದು ಎಂದರೆ ಏನರ್ಥ? ಬೇರೆ ತಿಂಡಿಗಳು ಯಾವಾಗ ಮಾಡಿದ್ದು? ಎಂದು ಕೇಳೋಣ ಅಂದುಕೊಂಡೆ, ಆದರೆ ಬೆಳ್ಳಂಬೆಳಿಗ್ಗೆಯೇ ಅವನಿಗೆ ತಲೆ ಕಡೆಸಿ ಅವನ ದಿನವನ್ನೆಲ್ಲಾ ಯಾಕೆ ಹಾಳುಮಾಡುವುದು ಎಂದು ಸುಮ್ಮನಾದೆ. ಪಾಪ ನನ್ನ ಕಷ್ಟ ಅವನಿಗೇನು ಗೊತ್ತು ಅಲ್ಲವೇ, ವಡೆ ಬೇಡವೆಂದೆ. ಸರದಿಯಲ್ಲಿ ಹಿಂದೆ ನಿಂತಿದ್ದವನು ಸುಮ್ಮನಿರಬೇಕಲ್ಲವೇ, “ಅವರು ಅಷ್ಟು ಬಲವಂತ ಮಾಡುತ್ತಿರುವುದು ಏಕೆಂದರೆ ಈ ಹೋಟಲ್‌ ವಡೆಗೇ ಫೇಮಸ್ಸು” ಎಂದ. ಹಾಗಾದರೆ ಹೋಟಲ್ಲಿನಲ್ಲಿ ಇನ್ನು ಮುಂದೆ ವಡೆ ಮಾತ್ರ ಮಾಡಲಿ ಮತ್ತು ಬೇರೆ ಎಲ್ಲಾ ತಿಂಡಿಗಳನ್ನು ಮಾಡುವುದು ನಿಲ್ಲಿಸಲಿ” ಎಂದೇ ನಾನು. ಅವನಿಂದ ಮರು ಉತ್ತರವಿಲ್ಲ. ಸಾಂಬಾರಿನಲ್ಲಿ ಮುಳುಗಿದ್ದ ಇಡ್ಲಿಯನ್ನು ತೆಗೆದುಕೊಂಡೆ. ಆ ಹೋಟಲ್ಲಿನಲ್ಲಿ ಕೂರಲು ಅವಕಾಶವಿಲ್ಲ. ಹಾಗಾಗಿ ತಟ್ಟೆಯನ್ನು ಟೇಬಲ್‌ ಮೇಲೆ ಇಟ್ಟುಕೊಂಡು ನಾನು ನಿಂತುಕೊಂಡು ಎರಡು ಚಮಚ ಹಿಡಿದು ಇಡ್ಲಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸುತ್ತಾ ಚಿಕ್ಕ ಇಡ್ಲಿ ತುಂಡಿಗೆ ಚಮಚದ ತುಂಬಾ ಸಾಂಬಾರ್‌ ಸೇರಿಸಿಕೊಂಡು ರುಚಿಯನ್ನು ಸವಿಯುತ್ತಿದ್ದೆ. ಪಕ್ಕದಲ್ಲಿ ಒಂದು ದಂಪತಿ ಬಂದರು. ನನ್ನ ಪಕ್ಕದಲ್ಲಿ ನಿಂತಿದ್ದ ಗಂಡ ನನ್ನ ಹಾಗೇ ಒಂದು ಪ್ಲೇಟ್‌ ಸಾಂಬಾರಿನಲ್ಲಿ ಮುಳುಗಿದ್ದ ಇಡ್ಲಿ ತೆಗೆದುಕೊಂಡಿದ್ದ. ಅವನ ಪಕ್ಕದಲ್ಲಿದ್ದ ಹೆಂಡತಿಯ ತಟ್ಟೆಯಲ್ಲಿ ಇಡ್ಲಿ ವಡೆ ಇತ್ತು, ಅದು ಸಾಂಬಾರ್‌ ಹಾಗೂ ಚಟ್ನಿ ಪ್ರತ್ಯೇಕವಾಗಿ ಬೇರೆ ಬೇರೆ ಬಟ್ಟಲುಗಳಲ್ಲಿ ತೆಗೆದುಕೊಂಡಿದ್ದರು. ಗಂಡನಿಗೆ ಚಟ್ನಿ ಬೇಕೆನಿಸಿತು ಅನಿಸುತ್ತೆ, ಅವ ಚಟ್ನಿ ತೆಗೆದುಕೊಳ್ಳಲು ತನ್ನ ಇಡ್ಲಿ ಪ್ಲೇಟಿನೊಂದಿಗೆ ಚಟ್ನಿ ಕೌಂಟರ್‌ ಬಳಿ ಹೋದ. ವಿರುದ್ಧ ದಿಕ್ಕಿನಲ್ಲಿ ತಿರುಗಿದ್ದ ಹೆಂಡತಿ, “ರೀ, ನನಗೆ ವಡೆ ಯಾಕೋ ಬೇಡಾ ಅನಿಸುತ್ತಿದೆ, ನೀವೇ ತಗೊಳ್ಳಿ” ಎಂದು ಪಕ್ಕದಲ್ಲಿ ಇದ್ದ ನನ್ನ ಇಡ್ಲಿ ತಟ್ಟೆಗೆ ವಡೆ ಹಾಕಿದಳು. ನಾನು “ಅಯ್ಯೋ” ಎಂದಾಗ ನನ್ನನ್ನೇ ನೋಡುತ್ತಾ ಬೆಪ್ಪಾಗಿ ನಿಂತಳು ಹೆಂಡತಿ. ಗಂಡ ನನ್ನ ಹತ್ತಿರ ಬಂದು “ಸಾರ್‌ ಸಾರಿ, ಅವಳಿಗೆ ಗೊತ್ತಾಗಲಿಲ್ಲ” ಎಂದ. “ತೊಂದರೆ ಇಲ್ಲ, ಆದರೆ ಈ ವಡೆ ನಾನು ಇಡ್ಲಿ ತಿನ್ನುತ್ತಿರುವ ತಟ್ಟೆಗೆ ಹಾಕಿದ್ದಾರೆ, ನಾನು ವಾಪಸ್‌ ಕೊಡಲಾಗುವುದಿಲ್ಲ ಎಂಜಲ್ಲಾಗಿದೆ, ಹಾಗಾಗಿ ನಾನು ಇನ್ನೊಂದು ವಡೆ ಖರೀದಿಸಿ ನಿಮಗೆ ಕೊಡುತ್ತೇನೆ” ಎಂದೆ. “ಬೇಡ ಸರ್‌ ಆ ವಡೆಯ ಮೇಲೆ ನಿಮ್ಮ ಹೆಸರು ಬರೆದಿದೆ ಅಷ್ಟೆ. ನಮಗೂ ಕಳೆದ ಎರಡು ತಿಂಗಳಿನಿಂದ ತಿಥಿಗಳಿಗೆ ಹೋಗುವುದು ಜಾಸ್ತಿಯಾಗಿ ವಡೆ ತಿಂದು ತಿಂದು ಸಾಕಾಗಿದೆ” ಎಂದ. ನಾನು ನನ್ನ ತಟ್ಟೆಯಲ್ಲಿದ್ದ ವಡೆಯನ್ನೇ ನೋಡುತ್ತಾ “ಅಯ್ಯೋ ವಡೆಯೇ, ಅಕ್ಕಿ ಮೇಲೆ ಹೆಸರು ಬರೆಯೋದನ್ನು ವಸ್ತು ಪ್ರದರ್ಶನಗಳಲ್ಲಿ ನೋಡಿದ್ದೆ, ಈಗ ನಿನ್ನ ಮೇಲೂ ನನ್ನ ಹೆಸರು ಬರೆದಿದೆಯೇ” ಎಂದು ಬಯಸದೇ ಬಂದ ವಡೆಯ ಮೇಲೆ ನನ್ನ ಹೆಸರನ್ನು ಹುಡುಕುತ್ತಾ ಚಮಚದಲ್ಲಿ ಅದನ್ನೂ ಕತ್ತರಿಸುತ್ತಾ ನಿಂತೆ.
ಅನಿಸಿಕೆಗಳು