ಇವರುಗಳ ಪ್ರಯಾಣದ ಖರ್ಚು ಎಷ್ಟು ಆಗಿದೆಯೋ ಅಷ್ಟನ್ನು ಮರು ಪ್ರಶ್ನೆ ಮಾಡದೇ ಪೂರ್ತಿ ಹಣ ಅವರಿಗೆ ಕೊಟ್ಟುಬಿಡಿ ಎಂದು ದೊರೆಸ್ವಾಮಿ ಸಾರ್ ನಿನ್ನೆ ಮೊನ್ನೆ ಹೇಳಿದಹಾಗಿದೆ.
ಇಸವಿ 1994. ಚೆನ್ನರಾಯಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಅಂತರ ಕಾಲೇಜು ಚರ್ಚಾ ಸ್ಪರ್ಧೆ ಮತ್ತು ಗಾಯನ ಸ್ಪರ್ಧೆ ಯೋಜನೆಯಾಗಿತ್ತು. ಹನುಮಂತನಗರದ ಪಿ.ಇ.ಎಸ್ ಕಾಲೇಜನ್ನು ಪ್ರತಿನಿಧಿಸಿ ನಾನು ಮತ್ತು ನನ್ನ ಸಹಪಾಠಿ ಗೆಳೆಯ ಸುಧೀಂದ್ರ ಚರ್ಚಾ ಸ್ಪರ್ಧೆಗೆ ಭಾಗವಹಿಸಿದ್ದೆವು. ಮತ್ತೊಬ್ಬ ಸಹಪಾಠಿ ಚೇತನ್ ಗಾಯನ ಸ್ಪರ್ಧೆಗೆ ನಮ್ಮ ಜೊತೆ ಸೇರಿಕೊಂಡಿದ್ದ.
ಪ್ರಯಾಣಕ್ಕೆ ತಗುಲಬಹುದಾದ ಅಂದಾಜು ವೆಚ್ಛ ಕಾಲೇಜಿನ ಪ್ರಾಂಶುಪಾಲರಾದ ದೊರೆಸ್ವಾಮಿ ನಾಯ್ಡು ಅವರ ಮುಂದಿಟ್ಟಾಗ, ಸ್ಪರ್ಧೆಗಳಲ್ಲಿ ಗೆದ್ದು ಬರುತ್ತೀರಾ ತಾನೇ ಎಂದು ಕೇಳಿದಾಗ, ತಲೆ ಜೋರಾಗಿ ತೂಗಿದ್ದಂತೂ ನಿಜ.
ಸ್ಪರ್ಧೆಗೆ ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿನಿಂದ ಚೆನ್ನರಾಯಪಟ್ಟಣಕ್ಕೆ ಹೊರಟು ಮತ್ತೊಬ್ಬ ಸಹಪಾಠಿ ಹಾಗೂ ಮೂಲ ಚೆನ್ನರಾಯಪಟ್ಟಣದವ ರಾಘವೇಂದ್ರ ಪ್ರಸಾದನ ಮನೆಯಲ್ಲಿ ಉಳಿದುಕೊಂಡೆವು.
ಮಾರನೇ ದಿನ ಚರ್ಚಾಸ್ಪರ್ಧೆಯ ಮೊದಲ ಪ್ರಶಸ್ತಿ ನಮ್ಮ ಕಾಲೇಜಿಗೆ. 4 ಅಡಿ ಎತ್ತರದ ಕಪ್ ನಮಗೆ ನೀಡಿದರು. ನಮಗೋ ಖುಷಿಯೋ ಖುಷಿ. ದಿನ ಪತ್ರಿಕೆಗಳಲ್ಲಿ ನಮ್ಮದೇ ಫೋಟೋ. ಅಂತರ್ಜಾಲವಿಲ್ಲದ ಆ ಯುಗದಲ್ಲೂ ವಿಷಯವಂತೂ ಪಿ.ಇ.ಎಸ್. ಕಾಲೇಜಿಗೆ ಶರವೇಗದಲ್ಲಿ ಮುಟ್ಟಿತ್ತು. ಆದರೆ ಮುಂದಿನ ಎರಡು ದಿನ ಅಲ್ಲೇ ಹಳೇಬೀಡು, ಬೇಲೂರು, ಶ್ರವಣಬೆಳಗೊಳ ನೋಡಿಕೊಂಡು ಬೆಂಗಳೂರಿಗೆ ಬಂದೆವು. ನನ್ನ ಮನೆಯಿಂದಲೇ ಕಪ್ ಕೈಯಲ್ಲಿಟ್ಟುಕೊಂಡು ನಾನು ಮತ್ತು ನನ್ನ ಗೆಳೆಯರು ಕಾಲೇಜಿಗೆ ಹೋಗಿದ್ದು. ಕಾಲೇಜಿನಲ್ಲಿ ಎಲ್ಲರ ಕಣ್ಣು ನಮ್ಮ ಮೇಲೆ. ನೇರ ದೊರೈಸ್ವಾಮಿಯವರ ಕೊಠಡಿಗೆ ಹೋದೆವು. ಕಪ್ ನೋಡಿ ನಿಮಗೆ ಅಭಿನಂದನೆಗಳನ್ನು ತಿಳಿಸಲು ಉತ್ಸುಕರಾಗಿದ್ದೆವು, ಎರಡು ದಿನ ತಡವೇಕಾಯಿತು ಎಂದು ಕೇಳಿದರು. ನಾವು ಬೇಲೂರು ಹಳೇಬೀಡು ಎಲ್ಲವನ್ನೂ ನೋಡಬೇಕೆನಿಸಿತು, ಹಾಗಾಗಿ ತಡವಾಯಿತು ಎಂದಾಗ, ಕಾಲೇಜಿನ ಆಡಳಿತಾಧಿಕಾರಿಯನ್ನು ಕರೆದು ಅವರು ನುಡಿದ ಮಾತಿ, ಈ ಲೇಖನದ ಮೊದಲ ಸಾಲು.
ಇವರುಗಳ ಪ್ರಯಾಣದ ಖರ್ಚು ಎಷ್ಟು ಆಗಿದೆಯೋ ಅಷ್ಟನ್ನು ಮರು ಪ್ರಶ್ನೆ ಮಾಡದೇ ಪೂರ್ತಿ ಹಣ ಅವರಿಗೆ ಕೊಟ್ಟುಬಿಡಿ.
6ನೇ ಮಾರ್ಚ್ 2025ರಂದು ದೊರೆಸ್ವಾಮಿಯರವರು ಇಹಲೋಕ ತ್ಯಜಿಸಿದರು ಎಂದಾಗ ನೆನಪಾಯಿತು ಈ ಘಟನೆ.