ಗುರುರಾಜ
ಶಾಸ್ತ್ರಿ
ಕಥೆ – ದೇಶಪ್ರೇಮ
30-12-2021
ಸುಜಾತ ಈಗಾಗಲೇ ಮೂರ್ನಾಲ್ಕು ಬಾರಿ ತನ್ನ ಕೈಯಲ್ಲಿದ್ದ ಚಿಕ್ಕ ಪುಸ್ತಕವನ್ನು ತೆಗೆದು ಮುಚ್ಚಿದ್ದಳು. ಪ್ರತಿಸಲ ಪುಸ್ತಕ ತೆಗೆದಾಗಲೂ ಅದರಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಲು ಹೋಗೋದು, ಒಂಬತ್ತು ಸಂಖ್ಯೆಗಳನ್ನು ಒತ್ತಿದ ಮೇಲೆ, ಹತ್ತನೇ ಸಂಖ್ಯೆ ಒತ್ತುವುದಕ್ಕೆ ಏನೋ ಹಿಂಜರಿತ. ತಕ್ಷಣ ಪುಸ್ತಕ ಮುಚ್ಚಿಡೋದು ಮೊಬೈಲನ್ನ ಹಾಸಿಗೆ ಮೇಲೆ ಕುಕ್ಕೋದು ಹೀಗೇ ಆಗ್ತಾ ಇತ್ತು. ಈ ಪುಸ್ತಕ ಕಳೆದ ವರ್ಷ ಅವಳು ವಿವೇಕಾನಂದ ಶಾಲೆಯ ಸುವರ್ಣಮಹೋತ್ಸವಕ್ಕೆ ತೆಗೆದುಕೊಂಡುಹೋಗಿದ್ದು. ಸುಮಾರು ಮೂವತ್ತು ವರ್ಷಕ್ಕೆ ಮುಂಚೆ ಅವಳ ತರಗತಿಯಲ್ಲಿ ಓದಿದ ಗೆಳತಿಯರೆಲ್ಲಾ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆಗಲೇ ಅವಳು ಭೇಟಿಯಾಗಿದ್ದು ಸಪ್ನಾ ಸೆಬಾಸ್ಟಿಯನ್ ಎಂಬ ‌ಹಳೆಯ ಗೆಳತಿಯನ್ನ. “ನಾನು ಈಗಾ ಸಮವಸ್ತ್ರವಿಲ್ಲದ ಸಬ್‌ಇನಸ್ಪೆಕ್ಟರ್‌” ಎಂದಳು ಸಪ್ನಾ. "ನನ್ನ ಗಂಡನ ಹೆಸರು ಸಲೀಮ್‌ ಖಾನ್‌" ಅಂತ ಸುಜಾತ ಹೇಳಿದಾಗ, "ಹಾಗಾದರೆ ನಿನ್ನ ಹೊಸ ಹೆಸರು ಏನು" ಅಂತ ಕೇಳಿದಳು. “ಮದುವೆ ಪೂರ್ವ ಒಪ್ಪಂದದ ಪ್ರಕಾರ ಇಬ್ಬರೂ ತಮ್ಮ ತಮ್ಮ ಧರ್ಮಗಳನ್ನೂ ಆಚರಿಸಿಕೊಂಡೇ ಮುನ್ನಡೆಯುವುದು. ಇನ್ನು ಮಕ್ಕಳಿಗೆ ಅವರಿಗೆ ಯಾವುದಿಷ್ಟವೋ ಆ ಧರ್ಮವನ್ನು ಆರಿಸಕೊಳ್ಳಲಿ” ಎಂದಳು ಸುಜಾತ. ಆ ಚಿಕ್ಕ ಪುಸ್ತಕದಲ್ಲಿ ಗೆಳತಿಯರ ವಿಳಾಸ ಮೊಬೈಲ್‌ ಸಂಖ್ಯೆ ಬರೆಸಿಕೊಳ್ಳುತ್ತಿದ್ದಾಗ, “ನಿನಗೆ ಏನಾದರೂ ತೊಂದರೆ ಆದರೆ ನನಗೆ ಫೋನ್‌ ಮಾಡು” ಅಂತ ಹೇಳಿ ಸಪ್ನಾ ಬರೆದುಕೊಟ್ಟ ಮೊಬೈಲ್‌ ಸಂಖ್ಯೆಗೆ ಈಗ ಸುಜಾತ ಫೋನ್‌ ಮಾಡಲು ಪ್ರಯತ್ನಿಸುತ್ತಿದ್ದದ್ದು. ಆ ದಿನ ಸಲೀಮ ಕಾರ್ಯಕ್ರಮ ಮುಗಿದ ಮೇಲೆ ಸುಜಾತಳನ್ನು ಕರೆದುಕೊಂಡು ಹೋಗಲು ಬಂದಾಗ, ಸಪ್ನಾ ಸಲೀಮನನ್ನು ಒಂದು ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದಾಗ, ಸುಜಾತ ಸಪ್ನಾಳನ್ನ ಹತ್ತಿರ ಕರೆದು ಸಲೀಮ್‌ನ ಪರಿಚಯ ಮಾಡಿಕೊಟ್ಟಿದ್ದಳು. "ಈಗ ನಾನು ಫೋನ್‌ ಮಾಡಲೇಬೇಕು, ಇದು ನನ್ನ ಮತ್ತು ನನ್ನ ಮೂರು ಹೆಣ್ಣು ಮಕ್ಕಳ ಭವಿಷ್ಯದ ಪ್ರಶ್ನೆ. ಆದರೆ ಇದರಿಂದ ತೊಂದರೆ ಇನ್ನೂ ಹೆಚ್ಚಾದರೆ" ಹೀಗೆ ಮನಸ್ಸಿನಲ್ಲಿ ಗೊಂದಲ ಮೂಡಿತ್ತು. “ಛೇ ಇವನು ಹೀಗಿರಲಿಲ್ಲ ಅಲ್ವಾ. ಮಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎಷ್ಟು ಚೆನ್ನಾಗಿ ನನ್ನೊಂದಿಗೆ ಮಾತನಾಡುತ್ತಾ ನನಗೆ ಎಲ್ಲಾ ವಿಷಯದಲ್ಲೂ ಸಹಾಯ ಮಾಡುತ್ತಿದ್ದ. ಅಪ್ಪ ಅಮ್ಮ ಎಲ್ಲರನ್ನೂ ಎದುರುಹಾಕಿಕೊಂಡು ಮದುವೆ ಮಾಡಿಕೊಂಡದ್ದು. ರಿಜಿಸ್ಟರ್‌ ಮದುವೆ ಮಾಡಿಕೊಂಡು ಮೊದಲ ಸಲ ಕೇರಳದ ಅವನ ಊರಿಗೆ ಹೋಗಿದ್ದಾಗ ಅವನ ಮನೆಯ ಇತರ ಗಂಡಸರು ನನ್ನ ಕಡೆ ನೋಡಿದ ರೀತಿಯನ್ನು ನೋಡಿ ತಕ್ಷಣ ಮಂಗಳೂರಿಗೆ ನನ್ನನ್ನು ಕರೆತಂದು ಇನ್ನೆಂದಿಗೂ ಆ ಮನೆ ಅಥವಾ ಊರಿನ ಕಡೆ ನಾವು ಹೋಗಬಾರದು ಎಂದು ಅವನೇ ನಿಶ್ಚಯಿಸಿದ್ದು. ಯಾವುದೋ ಅರ್ಜಿ ತುಂಬುವಾಗ ನಾನು ಪೂರ್ತಿ ಹೆಸರು ಅನ್ನೋ ಕಡೆ ಸುಜಾತಾ ಖಾನ್‌ ಅಂತ ಬರೆದಿದ್ದನ್ನು ನೋಡಿ ಕೋಪಗೊಂಡು ಅರ್ಜಿಯ ಫಾರ್ಮ್ ಹರಿದುಹಾಕಿದ್ದ. ನೀನು ಸುಜಾತ ಅಷ್ಟೇ, ಖಾನ್‌ ಎಂದಿಗೂ ಆಗಬಾರದು ಎಂದಿದ್ದ. ಮೊದಲ ಎರಡು ಮಕ್ಕಳಿಗೆ ಮಲ್ಲಿಗೆ, ಕಮಲ ಅಂತ ಹೆಸರು ಅವನೇ ಸೂಚಿಸಿದ್ದು. ನಾನೇ ಗಲಾಟೆ ಮಾಡಿ ಮೂರನೇ ಮಗುವಿಗೆ ಸಲ್ಮಾ ಅಂತ ಹೆಸರಿಟ್ಟೆ.” ಇಂತಹ ಹಳೆಯ ನೆನಪುಗಳೇ ಸುಜಾತಳಿಗೆ ಸಲೀಮನನ್ನು ಹೆಚ್ಚು ಪ್ರೀತಿಸುವುದಕ್ಕೆ ಕಾರಣವಾಗಿತ್ತು. ಆದರೆ ಈಗ ಒಂದು ವರ್ಷಕ್ಕೆ ಮುಂಚೆ ಅವನು ಕೆಲಸ ಬಿಟ್ಟು ದುಬೈಗೆ ಹೋಗುತ್ತೇನೆಂದಾಗ ಸುಜಾತಳಿಗೆ ಅಘಾತವಾಗಿತ್ತು. ಅಲ್ಲಿ ಏನು ಕೆಲಸ ಮಾಡ್ತೀಯಾ ಎಂದರೆ ಅದಕ್ಕೆ ಉತ್ತರವಿಲ್ಲ. ದುಬೈಗೇ ಹೋಗುವವರೆಗೂ ಯಾರ್ಯಾರೋ ಮನೆಗೆ ಬರಲು ಆರಂಭಿಸಿದರು. ಮೊದಲನೆ ಮಹಡಿಯ ರೂಮಿನಲ್ಲಿ ಇವರದು ಏನೋ ಗುಟ್ಟಿನ ಮಾತು. ಕುಟುಂಬ ಸಮೇತ ದುಬೈಗೆ ಹೋಗೋಣ ಎಂದರೆ ಅವನಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು.. ದುಬೈಗೆ ಹೋದ ಮೇಲೆ ನನ್ನ ಬ್ಯಾಂಕ್‌ ಖಾತೆಗಂತೂ ಅವನಿಂದ ಸಾಕಷ್ಟು ಹಣ ಬರುತ್ತಿತ್ತು. ಒಂದು ವರ್ಷದ ನಂತರ ಮನೆಗೆ ಬಂದ ಸಲೀಮನನ್ನು ನೋಡಿ ಸುಜಾತ ದಿಗ್ಭ್ರಮೆಗೊಂಡಳು. ಮೀಸೆ, ಗಡ್ಡ ತೆಗೆದು ಹಿಂದಿ ಚಲನಚಿತ್ರದ ನಾಯಕನಂತೆ ಇದ್ದ ಸಲೀಮ, ಈಗ ಮೀಸೆ ಇಲ್ಲದ ಉದ್ದವಾದ ಗಡ್ಡ ಬಿಟ್ಟಿದ್ದ. ಒಬ್ಬನೇ ಬಂದರೆ ಪರವಾಗಿಲ್ಲ, ಆದರೆ ಇವನ ರೀತಿಯೇ ಗಡ್ಡ ಬಿಟ್ಟಿದ್ದ ಇನ್ನೂ ಮೂವರು ಅಪರಿಚಿತರನ್ನೂ ಕರೆತಂದಿದ್ದ. ಆ ಅಪರಿಚಿತರು ಸುಜಾತಳನ್ನು ಮತ್ತು ಮಕ್ಕಳನ್ನು ನೋಡುತ್ತಿದ್ದ ರೀತಿ ಯಾವುದೋ ಹಸಿದ ಹುಲಿಗಳು ಭೇಟೆಗಾಗಿ ಕಾಯುತ್ತಿವೆಯೇನೋ ಅನಿಸುತ್ತಿತ್ತು ಸುಜಾತಳಿಗೆ. ಆ ಮೂವರು ಅಂದು ಅಲ್ಲೇ ಊಟ ಮುಗಿಸಿದರು ಮತ್ತು ಏನೋ ಕೆಲಸವಿದೆ ಎಂದು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದರು. ಸಲೀಮ್‌ ಸುಜಾತಳಿಗೆ “ಇನ್ನೆರಡು ದಿನದಲ್ಲಿ ಆ ಮೂವರು ವಾಪಸ್‌ ಬಂದು ನಮ್ಮ ಮನೆಯಲ್ಲೇ ಒಂದು ವಾರ ಇರುತ್ತಾರೆ” ಎಂದಾಗ ಏನು ನಡೆಯುತ್ತಿದೆ ಎಂಬ ಅರಿವು ಸುಜಾತಳ ಮನಸ್ಸಿನಲ್ಲಿ ಒಂದು ಆಕಾರ ತೆಗೆದುಕೊಳ್ಳಲು ಪ್ರಾರಂಭಿಸಿತು. ಆಗಲೇ ಅವಳು ನಿರ್ಧರಿಸಿದ್ದು ಶಾಲೆಯ ಗೆಳತಿ ಸಬ್‌ಇನಸ್ಪೆಕ್ಟರ್‌ ಸಪ್ನಾಗೆ ಫೋನ್‌ ಮಾಡಬೇಕೆಂದು. ಚಿಕ್ಕವಳಿದ್ದಾಗಿನಿಂದಲೂ ಚಿಕ್ಕಪ್ಪನ ಭುಜದ ಮೇಲೆ ಆಟವಾಡುತ್ತಲೇ ಇವಳು ಬೆಳೆದಿದ್ದು. ಆದರೆ ಸಲೀಮ್‌ನೊಂದಿಗಿನ ಮದುವೆಯ ಪ್ರಸ್ತಾಪ ಮನೆಯಲ್ಲಿ ಮೊದಲ ಸಲ ಮಾಡಿದಾಗ ಅಪ್ಪ ಅಮ್ಮ ಎಲ್ಲಾ “ನಿನ್ನ ಮುದ್ದೇ ಇವಳನ್ನ ಈ ಮಟ್ಟಕ್ಕೆ ತಂದಿದ್ದು” ಎಂದು ಚಿಕ್ಕಪ್ಪನನ್ನು ಬೈದಾಗ, ಚಿಕ್ಕಪ್ಪ ಒಂದು ಮೂಲೆಯಲ್ಲಿ ನಿಂತು ಅಳುತ್ತಿದ್ದದ್ದನ್ನು ಸುಜಾತ ನೋಡಿದ್ದಳು. “ನಿನ್ನ ಮತ್ತು ಈ ಮನೆಯ ಸಂಬಂಧ ಇಲ್ಲಿಗೆ ಮುಗಿಯಿತು, ಇನ್ನೆಂದಿಗೂ ನಿನ್ನ ಮುಖ ನಮಗೆ ತೋರಿಸಬೇಡ, ಮುಂದೊಂದು ದಿನ ನಿನಗೇ ನೀನು ಮಾಡಿದ ತಪ್ಪು ಅರಿವಾಗುತ್ತದೆ. ನಮ್ಮ ಪಾಲಿಗೆ ನೀನು ಸತ್ತ ಹಾಹೆ” ಎಂದು ಸುಜಾತಳನ್ನು ನೋಡದೆಯೇ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಹೋಗಿದ್ದ ಚಿಕ್ಕಪ್ಪ. ಇಂದು ಚಿಕ್ಕಪ್ಪ ಹಾಗೂ ಅವರು ಆ ದಿನ ಆಡಿದ ಮಾತುಗಳು ಸುಜಾತಳ ಮನದಲ್ಲಿ ಆವರಿಸಿಕೊಂಡಿತ್ತು. ಅತ್ತ ಗಂಡನ ಮನೆಯ ಕಡೆಯವರಾಗಲಿ ಅಥವಾ ಇವಳ ಅಮ್ಮನ ಕಡೆಯವರಾಗಲೀ ಯಾರೊಂದಿಗೂ ಸಂಪರ್ಕವೇ ಇಲ್ಲ. ಹಾಗಾಗಿ ದುಃಖ ತೋಡಿಕೊಳ್ಳಬೇಕೆಂದರೆ ಅಕ್ಕ ಪಕ್ಕದವರ ಹತ್ತಿರವಷ್ಟೇ. ಆದರೆ ಸಲೀಮ್‌ನ ಹೊಸ ಅವತಾರವನ್ನು ನೋಡಿದ ಅಕ್ಕಪಕ್ಕದವರು ಸುಜಾತಳ ಮನೆಗೆ ಬರುವುದನ್ನು ನಿಲ್ಲಿಸಿದ್ದರು. ಬೆಳಗ್ಗೆಯಿಂದ ಸಂಜೆವರೆವಿಗೂ ಸಲೀಮ್‌ ಮೊದಲನೇ ಮಹಡಿಯ ರೂಮಿನಲ್ಲೇ ಇರುತ್ತಿದ್ದ. ಕತ್ತಲಾದ ನಂತರ ಹೊರಗಡೆ ಬಂದು ವಾಕಿಂಗ್‌ ಹೋಗುತ್ತಿದ್ದ. ಎರಡು ದಿನದ ನಂತರ ಆ ಮೂವರು ರಾತ್ರಿ ಮನೆಗೆ ಬಂದು ಬೀಗ ಹಾಕಿದ್ದ ದೊಡ್ಡ ಪೆಟ್ಟಿಗೆಯನ್ನು ಮನೆಯಲ್ಲಿಟ್ಟು ಹೋದರು. “ನಾಳೆ ಮುಂಜಾನೆ ಇವರು ಬರುತ್ತಾರೆ, ಒಂದು ವಾರ ಮೇಲಿನ ರೂಮಿನಲ್ಲೇ ಇರುತ್ತಾರೆ, ಅವರ ಊಟ ತಿಂಡಿ ಅಲ್ಲೇ ರೂಮಿನಲ್ಲೇ”. ಹೀಗೆ ಇನ್ನೂ ಹಲವು ನಿಬಂಧನೆಗಳನ್ನು ಸಲೀಮ್‌ ತಿಳಿಸಿದ. ಭಾರವಾದ ಪೆಟ್ಟಿಗೆಯನ್ನು ಸಲೀಮ್‌ ಒಬ್ಬನೇ ಮೇಲಿನ ಕೋಣೆಗೆ ತೆಗೆದುಕೊಂಡುಹೋದ. ಏನೋ ಪ್ರಶ್ನೆ ಮಾಡಲು ಬಂದ ಸುಜಾತ ಸಲೀಮನ ಕೆಂಪಾದ ಕಣ್ಣುಗಳನ್ನು ನೋಡಿ ಹೆದರಿದಳು. “ಇನ್ನೊಂದು ವಾರದಲ್ಲಿ ನಾವೆಲ್ಲರೂ ಬೇರೆ ಊರಿಗೆ ಹೋಗಬೇಕಾಗಬಹುದು. ನಿನ್ನ ಮತ್ತು ಮಕ್ಕಳೆಲ್ಲರ ಅಗತ್ಯ ವಸ್ತುಗಳನ್ನು ಮಾತ್ರ ಒಂದೆರೆಡು ಪೆಟ್ಟಿಗೆಯಲ್ಲಿ ಇಟ್ಟು ಸಿದ್ದಮಾಡಿಕೊಂಡಿರು. ಎಲ್ಲವೂ ಸರಿಹೋಗುತ್ತದೆ, ಹೆಚ್ಚು ಯೋಚಿಸುವುದು ಬೇಡ. ಇಂದು ನಾನು ಮೇಲಿನ ರೂಮಿನಲ್ಲೇ ಮಲಗುತ್ತೇನೆ, ಆಗಾಗ ಫೋನ್‌ ಬರುತ್ತಾ ಇರುತ್ತದೆ, ನಿಮಗೆ ಅದರಿಂದ ತೊಂದರೆಯಾಗುತ್ತದೆ” ಎಂದು ಹೇಳಿ ಮೇಲಿನ ರೂಮಿಗೆ ಹೋದ. ಸುಜಾತ ಟಿವಿ ಆನ್‌ ಮಾಡಿ ಅಲ್ಲೇ ಸೋಫಾ ಮೇಲೆ ಕುಳಿತುಕೊಂಡಳು. ನಿದ್ರೆ ಯಾವಾಗ ಹತ್ತಿತೋ ಗೊತ್ತಿಲ್ಲ, ಎಚ್ಚರವಾಗಿದ್ದು ಬೆಳಗಿನ ಜಾವ ೪ ಗಂಟೆಗೆ ಮನೆಯ ಕಾಲಿಂಗ್‌ಬೆಲ್‌ ಆದಾಗ. ಸಲೀಮ ಮೇಲಿನ ರೂಮಿನಿಂದ ಓಡಿ ಬಂದು ಸುಜಾತಳನ್ನು ಒಳಗೆ ಹೋಗಲು ತಿಳಿಸಿ ಬಾಗಿಲು ತೆಗೆದ. ದೊಡ್ಡ ದೊಡ್ಡ ಪೆಟ್ಟಿಗೆಗಳು ಮನೆಯ ಒಳಗೆ ಬಂದದ್ದು ಶಬ್ದದಿಂದ ಸುಜಾತಳಿಗೆ ತಿಳಿಯಿತು. ಯಾವುದೋ ಒಂದು ಪೆಟ್ಟಿಗೆ ನೆಲಕ್ಕೆ ಬಿದ್ದ ಹಾಗೆ ಸದ್ದು ಕೇಳಿ ಸುಜಾತ ಹೊರಗೆ ಬಂದಳು, ನೋಡಿದರೆ ನೆಲದ ಮೇಲೆಲ್ಲಾ ಚಿಕ್ಕ ಚಿಕ್ಕ ಚೂಪಾದ ಕಬ್ಬಿಣದ ಮೊಳೆಗಳು. ಆ ಮೂವರು ಅಪರಿಚಿತರು ಸುಜಾತಳ ಕಡೆ ಕೋಪದಿಂದ ನೋಡಿದರು. ಸಲೀಮ ಸುಜಾತಳಿಗೆ “ಇಲ್ಲಿ ಬರಬೇಡ ಎಂದು ಹೇಳಲಿಲ್ಲವೇ, ಒಳಗೆ ಹೋಗುʼ ಎಂದು ಬೈದು ಕಳಿಸಿದ. ಪೊರಕೆ ತೆಗೆದುಕೊಂಡು ಆ ಮೊಳೆಗಳನ್ನೆಲ್ಲಾ ಗುಡಿಸುತ್ತಿರುವುದು ಸುಜಾತಳಿಗೆ ತಿಳಿಯಿತು. ಅಂದು ಬೆಳಿಗ್ಗೆ “ತರಕಾರಿ ಮತ್ತು ಅಡುಗೆ ಸಾಮಾನು ತೆಗೆದುಕೊಂಡು ಬರುತ್ತೇನೆ ಇಂದಿನಿಂದ ಅಡುಗೆ ಹೆಚ್ಚಿನ ಜನರಿಗೆ ಆಗಬೇಕೆಲ್ಲ“ ಅಂತ ಸುಜಾತ ಮಾರುಕಟ್ಟೆಗೆ ಹೋಗಲು ತಯಾರಾಗುತ್ತಿದ್ದಳು, ಆಗ ಸಲೀಮ್‌, ಈ ಮೂವರಿಗೆ ದಿನಾ ಮಧ್ಯಾಹ್ನ ಮಾಂಸದ ಅಡುಗೆ ಬೇಕಾಗುತ್ತದೆ, ಅದನ್ನು ನಾನು ಹೋಟಲ್ಲಿನಲ್ಲಿ ವ್ಯವಸ್ಥೆ ಮಾಡಿದ್ದೇನೆ, ರಾತ್ರಿಗೆ ಮಾತ್ರ ನಮ್ಮ ಮನೆಯ ಊಟ ಮಾಡುತ್ತಾರೆ” ಎಂದ, ಅದನ್ನು ಕೇಳಿ ಸುಜಾತಳಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಯಿತು. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅವರ ಮನೆಗೆ ಮೀನು ಬಿಟ್ಟು ಇನ್ಯಾವುದೇ ಮಾಂಸಾಹಾರಿ ಅಡುಗೆ ಮಾಡಿರಲಿಲ್ಲ. ಅದೂ ಸಲೀಮನಿಗೆ ಮಾತ್ರ, ಸುಜಾತ ಮತ್ತು ಮಕ್ಕಳು ಮೀನು ಸಹ ತಿನ್ನುತ್ತಿರಲಿಲ್ಲ.. ಮಾರುಕಟ್ಟೆಗೆ ಹೋಗುವ ತಯಾರಿ ಮಾಡಿಕೊಳ್ಳುತ್ತಿದ್ದಾಗಲೇ ಸುಜಾತ ಗೆಳತಿ ಸಪ್ನಾಗೆ ಫೋನ್‌ ಮಾಡಲು ಪ್ರಯತ್ತಿಸುತ್ತಿದ್ದದ್ದು. ಒಂದೆರೆಡು ಬ್ಯಾಗ್‌ ತೆಗೆದುಕೊಂಡು, ಸ್ವಲ್ಪ ಹೆಚ್ಚು ಹಣವನ್ನು ವೇನೈಟಿ ಬ್ಯಾಗಿನಲ್ಲಿ ತುರುಕಿ, ಆ ಫೋನ್‌ ನಂಬರ್‌ ಇದ್ದ ಚಿಕ್ಕ ಪುಸ್ತಕವನ್ನೂ ಅದರಲ್ಲೇ ಇಟ್ಟುಕೊಂಡು ಮಾರುಕಟ್ಟೆಗೆ ಹೊರಟಳು ಸುಜಾತ. ಅಪರಿಚಿತನಲ್ಲೊಬ್ಬ ಕೆಳಗೆ ಬಂದು ಸಲೀಮನ ಕಿವಿಯಲ್ಲಿ ಏನೋ ಹೇಳಿದ. ಅಪರಿಚಿತನ ಕೈಲಿ ಪೋಲೀಸಿನವರು ಉಪಯೋಗಿಸುವಂತಹ ಒಂದು ದೊಡ್ಡ ಫೋನ್‌ ಸುಜಾತ ನೋಡಿದಳು. ಇದನ್ನು ಗಮನಿಸಿದ ಅಪರಿಚಿತ ಅದನ್ನು ತನ್ನ ಜುಬ್ಬದ ಕಿಸೆಯಲ್ಲಿ ಸೇರಿಸಿದ. “ಮಕ್ಕಳು ಒಂದು ವಾರ ಶಾಲೆಗೆ ಹೋಗುವುದು ಬೇಡ, ಹಾಗೇ ಒಂದು ವಾರಕ್ಕೆ ಆಗುವಷ್ಟು ತರಕಾರಿ ಮತ್ತು ಅಡುಗೆ ಸಾಮಾನು ತಂದು ಬಿಡು, ನೀನೂ ನಾಳೆಯಿಂದ ಎಲ್ಲೂ ಹೊರಗೆ ಹೋಗಬಾರದು. ಯಾವುದೇ ಫೋನ್‌ ಬಂದರೆ ನಾನು ಮಾತ್ರ ಸ್ವೀಕರಿಸುತ್ತೇನೆ, ನೀವು ಯಾರೊಂದಿಗೂ ಫೋನಿನಲ್ಲಿ ಮಾತನಾಡಬಾರದು” ಎಂದು ಹೇಳಿದ ಸಲೀಮ್‌ ಅವಳ ಮತ್ತು ಮಕ್ಕಳ ಫೋನ್ ತೆಗೆದುಕೊಂಡು ಸ್ವಿಚ್‌ ಆಫ್‌ ಮಾಡಿ, ತನ್ನ ರೂಮಿನಲ್ಲಿ ಇಟ್ಟುಕೊಂಡ. ಸುಜಾತಳಿಗೆ ತನ್ನ ಮನೆ ಯಾವುದೋ ಭಯೋತ್ಪಾದನೆಯ ಕೃತ್ಯಕ್ಕೆ ಬಳಕೆಯಾಗುತ್ತಿದೆ ಎಂಬುದು ಖಾತ್ರಿಯಾಗಿತ್ತು. ಮಾರುಕಟ್ಟೆಯಿಂದ ಎಸ್‌ ಟಿ ಡಿ ಬೂತ್‌ನಿಂದ ಗೆಳತಿ ಸಪ್ನಾಗೆ ಫೋನ್‌ ಮಾಡುವುದಾಗಿ ನಿರ್ಧರಿಸಿದಳು, ಸುಜಾತ ಮಾರುಕಟ್ಟೆಗೆ ಹೋಗುತ್ತಿರುವಾಗ ಅವಳನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಅವಳಿಗೆ ಬಂದು, ಹಿಂದೆ ತಿರುಗಿ ನೋಡಿದಳು, ಯಾರೂ ಕಾಣಲಿಲ್ಲ. ನೇರವಾಗಿ ಫೋನ್‌ ಬೂತ್‌ಗೆ ಹೋಗಿ, ಆ ಫೋನ್‌ ಬೂತಿನ ಮಾಲೀಕನಿಗೆ ತಾನು ವೈದ್ಯರ ಬಳಿ ವೈಯಕ್ತಿಕ ವಿಚಾರಗಳನ್ನು ಮಾತನಾಡಬೇಕಿದೆ, ಯಾರೂ ಬೂತ್‌ನ ಒಳಗೆ ಬರದ ಹಾಗೇ ನೋಡಿಕೊಳ್ಳಿ ಎಂದು ವಿನಂತಿಸಿಕೊಂಡಳು. ಸರಿ ಎಂದ ಮಾಲೀಕ. ತನ್ನ ವೇನೈಟಿ ಬ್ಯಾಗಿನಲ್ಲಿ ಇದ್ದ ಚಿಕ್ಕ ಪುಸ್ತಕ ತೆಗೆದು ಕಡೆಗೂ ಸಪ್ನಾಳಿಗೆ ಫೋನ್‌ ಮಾಡಿಯೇ ಬಿಟ್ಟಳು. ಫೋನ್‌ ಸ್ವೀಕರಿಸಿದ ಸಪ್ನಾಳಿಗೆ “ತಾನು ಸುಜಾತ” ಎಂದು ಹೇಳಿದ ತಕ್ಷಣ ಸಪ್ನಾ “ ಏನ್‌ ಸಮಾಚಾರ ಹೇಳು ಸುಜಾತಾ ಸಲೀಮ್ ಖಾನ್” ಎಂದಾಗ ಸಪ್ನಾಳ ನೆನಪಿನ ಶಕ್ತಿಗೆ ಸುಜಾತ ಆಶ್ಚರ್ಯಪಟ್ಟಳು. ಅದು ಮನೆಯಲ್ಲಿ ಸಮಸ್ಯೆಯಾಗಿದೆ ಎಂದು ಸುಜಾತ ಮುಂದೆ ಮಾತನಾಡಲು ತಡವರಿಸುತ್ತಿದ್ದಾಗ ಸಪ್ನಾ, “ನೀನು ನಿನ್ನ ಮೊಬೈಲಿನಿಂದ ಫೋನ್‌ ಮಾಡದೇ ಬೇರೆ ಫೋನಿನಲ್ಲಿ ಮಾತನಾಡುತ್ತಿರುವಾಗಲೇ ಸಮಸ್ಯೆ ಇದೆ ಎಂದು ಗೊತ್ತಾಯಿತು, ಹೆದರಬೇಡ ಏನು ಸಹಾಯ ಬೇಕು ತಿಳಿಸು” ಎಂದು ಕೇಳಿದಳು. ಸುಜಾತ ನಡೆದ್ದದ್ದನೆಲ್ಲಾ ಸಪ್ನಾಳಿಗೆ ತಿಳಿಸಿದಳು. ಸುಜಾತ ಅಂದುಕೊಂಡಿದ್ದಂತೆ ಸಪ್ನಾಳಿಂದ ಆಶ್ಚರ್ಯದ ಪ್ರತಿಕ್ರಿಯೆ ಏನೂ ಬರಲಿಲ್ಲ. “ಗಣೇಶನ ಗುಡಿಯ ಪಕ್ಕದಲ್ಲಿ ಇರುವ ಪುಸ್ತಕದ ಅಂಗಡಿಗೆ ಹೋಗು. ಅಲ್ಲಿ ಜಯರಾಂ ಎಂಬ ವ್ಯಕ್ತಿ ನಿನಗೆ ಸಿಗುತ್ತಾರೆ, ಅವರಿಗೆ ನನ್ನ ಹೆಸರು ಹೇಳು, ನಾನು ಅವರಿಗೆ ಫೋನ್‌ ಮಾಡಿರುತ್ತೇನೆ, ಅವರು ಹೇಳಿದ ಹಾಗೆ ಮಾಡು. ನೀನೇನು ಹೆದರಬೇಡ, ನಿನಗೆ ಮತ್ತು ನಿನ್ನ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ” ಎಂದಳು ಸಪ್ನಾ. “ಹಾಗಾದರೆ ನನ್ನ ಗಂಡ ಸಲೀಮ್‌” ಎಂದಾಗ ಸಪ್ನಾ “ಇನ್ನು ಹೆಚ್ಚು ಮಾತು ಬೇಡ, ನಿನಗೇ ತೊಂದರೆ ಜಾಸ್ತಿ, ಈಗ ನೇರ ಹೋಗಿ ಜಯರಾಂ ಅವರನ್ನು ಭೇಟಿ ಮಾಡು” ಎಂದು ಹೇಳಿ ಫೋನ್‌ ಕಟ್‌ ಮಾಡಿದಳು. ಅಲ್ಲಿಂದ ಹತ್ತು ನಿಮಿಷದ ದಾರಿ ಗಣೇಶನ ದೇವಸ್ಥಾನ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ, ನೇರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದಳು ಸುಜಾತ. ಅಂಗಡಿಯ ಒಳಗೆ ಹಣೆಯ ಮೇಲೆ ಉದ್ದವಾಗಿ ನಾಮ ಹಾಕಿಕೊಂಡು, ಬಾಯಲ್ಲಿ ಅಡಕೆ ಜಿಗಿಯುತ್ತಿದ್ದ ವ್ಯಕ್ತಿ ಕಾಣಿಸಿದ. ಅವನ ಬಳಿ ಹೋಗಿ ಸಪ್ನಾ ಎಂದು ಹೇಳಿದ ತಕ್ಷಣ ಅವನು ಅಂಗಡಿಯ ಒಳಗೆ ಬರಲು ಹೇಳಿ, ಅಂಗಡಿಯ ಬಾಗಿಲು ಹಾಕಿ ಒಳಗಿದ್ದ ಅವನ ಮನೆಗೆ ಕರೆದುಕೊಂಡುಹೋದ. ಸಪ್ನಾ ಮೇಡಮ್ ಫೋನ್‌ ಮಾಡಿದ್ದರು. ನಿಮ್ಮ ವಿಳಾಸ , ವಿಷಯ ಏನೂ ಯಾವುದೂ ಕೇಳಬಾರದೆಂದು ಮೇಡಮ್‌ ಹೇಳಿದ್ದಾರೆ. ಈ ಉಪ್ಪಿನ ಪ್ಯಾಕೆಟ್‌ ನಿಮಗೆ ಕೊಡಲು ಹೇಳಿದ್ದಾರೆ, ನಾಳೆ ರಾತ್ರಿ ಊಟಕ್ಕೆ ಈ ಉಪ್ಪನ್ನು ಬಳಸಿ ನಿಮ್ಮ ಅತಿಥಿಗಳಿಗೆ ಆ ಅಡುಗೆಯನ್ನು ಬಡಿಸಬೇಕಂತೆ. ಆದಷ್ಟು ಬೇರೆ ಯಾರು ತಿನ್ನದ ಹಾಗೇ ನೋಡಿಕೊಳ್ಳಿ ಎಂದು ಹೇಳಿ ಕೈಯಲ್ಲಿದ್ದ ಉಪ್ಪಿನ ಪ್ಯಾಕೆಟ್ಟನ್ನು ಕೊಟ್ಟ. ನೋಡಲು ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನ ಪ್ಯಾಕೆಟ್‌ ಇದ್ದ ಹಾಗೆ ಇತ್ತು. “ಇದರಲ್ಲಿ ಮಾಡಿದ ಅಡುಗೆ ತಿಂದರೆ ಏನಾಗುತ್ತೆ” ಎಂದು ಸುಜಾತಾ ಕೇಳಿದ್ದಕ್ಕೆ “ಅವೆಲ್ಲ ಸಪ್ನಾ ಮೇಡಮ್‌ನೇ ನೀವು ಕೇಳಬೇಕು. ಹಾ, ಇನ್ನೊಂದು ವಿಷಯ, ನಿಮ್ಮ ಅತಿಥಿಗಳು ಈ ಊಟವನ್ನು ತಿಂದರು ಎಂದು ಖಾತ್ರಿಪಡಿಸಲು, ರಾತ್ರಿ ಊಟದ ನಂತರ ನಿಮ್ಮ ಮನೆಯ ಬಾಲ್ಕನಿಯಲ್ಲಿ ಒಂದು ಬಿಳಿ ಟವಲ್‌ ನೇತು ಹಾಕಿರಿ” ಎಂದರು ಜಯರಾಂ. “ಇದು ವಿಷವೇ, ಹಾಗೇನಾದರು ಆದರೆ, ಆ ಮೂವರಂತು ನನ್ನ ಗಂಡ ಊಟ ಮಾಡಿದಮೇಲೆ ಊಟ ಮಾಡುವುದು, ದೇಶಪ್ರೇಮಕ್ಕಾಗಿ ಸಲೀಮ್‌ನ ಬಲಿ ಕೊಟ್ಟು ನಾನು ವಿಧವೆಯಾಗಲೇ. ಹಾಗೆ ಮಾಡದಿದ್ದಲ್ಲಿ ನನ್ನ ಮೂರು ಅಮಾಯಕ ಹೆಣ್ಣುಮಕ್ಕಳ ಗತಿ ಏನು. ನನ್ನ ಗಂಡ ಮತ್ತು ಈ ಅಪರಿಚಿತರು ಎಷ್ಟು ಅಮಾಯಕರ ಪ್ರಾಣ ತೆಗೆಯಲು ಹೊಂಚುಹಾಕುತ್ತಿದ್ದಾರೋ. ಹಸಿದ ಹುಲಿಗಳಿಂತಿರುವ ಆ ಮೂವರಿಗೆ ಈ ನನ್ನ ಮಕ್ಕಳು ಬಲಿಪಶುಗಳಾಗುವುದರಲ್ಲಿ ಅನುಮಾನವೇ ಇಲ್ಲ. ಎಂತಹ ಪೇಚಾಟಕ್ಕೆ ಸಿಕ್ಕಿಸಿದೆ ದೇವರೇ”, ಎಂದು ಮನದಲ್ಲೇ ಯೋಚಿಸುತ್ತಾ ಹಾಗೂ ಅಳುತ್ತಾ, ತನ್ನ ಮದುವೆಯ ಸಮಯದಲ್ಲಿ ಅವಳ ಸೋದರಮಾವ ಹೇಳಿದ್ದ ಬುದ್ದಿಮಾತುಗಳು ಈಗ ಜ್ಯಾಪಕಕ್ಕೆ ಬರಲಾರಂಬಿಸಿತು. “ಪ್ರೀತಿ ಪ್ರೇಮ ಎಂಬ ವಯಸ್ಸಿನ ಹುಚ್ಚಾಟದಲ್ಲಿ ನಮ್ಮ ಸಂಬಂಧವನ್ನೆಲ್ಲಾ ಕಡಿದು ಬೇರೆ ಧರ್ಮದವನನ್ನು ಮದುವೆ ಮಾಡಿಕೊಳ್ಳುತ್ತಿದ್ದೀಯ, ಇದರ ಶಾಪ ನಿನಗೆ ತಟ್ಟದೆ ಇರುತ್ತದೆಯೇ, ಅನುಭವಿಸುತ್ತೀಯಾ ನೋಡು,” ಎಂದಿದ್ದ ಸೋದರ ಮಾವನ ಮಾತುಗಳು ಇಂದು ನಿಜವಾಗಿತ್ತು. ಅಳುತ್ತಲೇ ಮನೆಯ ಕಡೆ ಹೊರಟಳು ಸುಜಾತ. ಮನೆಗೆ ಅವಳು ಬಂದ ತಕ್ಷಣ ಒಬ್ಬ ಅಪರಿಚಿತ ಅವಳ ಬ್ಯಾಗನ್ನು ಪರಿಶೀಲಿಸಿ ಒಳಗೆ ತೆಗೆದುಕೊಂಡುಹೋಗಲು ತಿಳಿಸಿದ. ರಾತ್ರಿ ಊಟಕ್ಕೆ ಚಪಾತಿ ಮತ್ತು ಆಲೂಗಡ್ಡೆ ಪಲ್ಯ ಮಾಡಿದಳು. ಆ ಅಪರಿಚಿತು ಮೊದಲು ಸಲೀಮನಿಗೆ ತಿನ್ನಲು ಹೇಳಿದರು. ಅದಾದ ನಂತರ ಅವರುಗಳು ತಿಂಡಿ ತಿಂದರು. ಮಾರನೆ ದಿನ ಬೆಳಿಗ್ಗೆ ಸಲೀಮನನ್ನು ಕರೆದು ಒಂದು ಬಟ್ಟಲಿನಲ್ಲಿ ಉಪ್ಪಿಟ್ಟು ಹಾಕಿ ನಾಲ್ಕು ತಟ್ಟೆಗಳನ್ನು ಜೊತೆಗೆ ಕೊಟ್ಟಳು. ಮಧ್ಯಾಹ್ನದ ಊಟಕ್ಕೆ ಹೋಟಲ್ಲಿನಿಂದ ಬಿರಿಯಾನಿ ತರಿಸುತ್ತೇನೆ, ಮನೆಯಲ್ಲಿ ಅಡುಗೆ ಮಾಡುವುದು ಬೇಡ ಎಂದ ಸಲೀಮ. ಮದ್ಯಾಹ್ನ ಊಟಕ್ಕೆ ಯಾರೋ ಮತ್ತೊಬ್ಬ ಗಡ್ಡದಾರಿ ಹುಡುಗ ನಾಲ್ಕು ಪ್ಯಾಕೆಟ್ ಬಿರಿಯಾನಿ ತಂದುಕೊಟ್ಟ. ಏನೋ ಸೈರನ್‌ ಶಬ್ದ, ಪ್ಲಾಸ್ಟಿಕ್‌ ಕವರ್‌ಗಳ ಶಬ್ದ, ಕಬ್ಬಿಣದ ಮೊಳೆಗಳ ರಾಶಿಯನ್ನು ಯಾವುದೋ ಡಬ್ಬಕ್ಕೆ ತುಂಬುತ್ತಿರುವ ಶಬ್ದ ಹೀಗೆ ದಿನವೆಲ್ಲಾ ಒಂದೊಂದು ರೀತಿಯ ಶಬ್ದ ಮೇಲಿನ ರೂಮಿನಿಂದ ಬರುತ್ತಲೇ ಇತ್ತು. ನಿಮಗೆಲ್ಲರಿಗೂ ರಾತ್ರಿಗೆ ಮೀನಿನ ಅಡುಗೆ ಮಾಡುತ್ತೇನೆ, ಆದರೆ ನಾವ್ಯಾರು ತಿನ್ನುವುದಿಲ್ಲ ಎಂದಳು ಸುಜಾತ. ಆದಕ್ಕೆ ಆ ಮೂವರು ಹಾಗೆಲ್ಲಾ ಬೇಡ ರೋಟಿ ದಾಲ್‌ ಮಾಡಿ ಸಾಕು ನಾವು ನೀವು ಎಲ್ಲಾ ಅದನ್ನೇ ತಿನ್ನಬಹುದು ಎಂದರು. ಅರ್ಧ ಗಂಟೆಗೆ ಒಮ್ಮೆ, ಮೂವರು ಅಪರಿಚಿತರಲ್ಲಿ ಒಬ್ಬೊಬ್ಬರು ಸರದಿಯಂತೆ ಕೆಳಗೆ ಬಂದು ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಪರಿಶೀಲಿಸುತ್ತಿದ್ದರು. ಇಂದಿನ ರಾತ್ರಿಗೆ ಉಪ್ಪಿಲ್ಲದ ದಾಲ್‌ ತಯಾರಾಯಿತು. ಮಾಡಿದ ದಾಲ್‌ ಎರಡು ಬೇರೆ ಬೇರೆ ಗಾತ್ರದ ಪಾತ್ರೆಗಳಿಗೆ ಬಗ್ಗಿಸಿ ದೊಡ್ಡ ಪಾತ್ರೆಯಲ್ಲಿದ್ದ ದಾಲ್‌ಗೆ ಜಯರಾಂ ಕೊಟ್ಟ ಉಪ್ಪನ್ನು ಹಾಕಿ ಸಣ್ಣ ಪಾತ್ರೆಯದ್ದಕ್ಕೆ ತನ್ನ ಮನೆಯಲ್ಲಿದ್ದ ಉಪ್ಪನ್ನು ಹಾಕಿದಳು. ಬಿಸಿ ಬಿಸಿ ರೋಟಿ ತಯಾರಾಗುತ್ತಿದ್ದಂತೆ, ಆ ಅಪರಿಚಿತರು ಕೆಳಗೆ ಬಂದು, ಇಂದು ನಾವೂ, ಸಲೀಮ್‌ ಹಾಗೂ ನಿಮ್ಮ ಮಕ್ಕಳು ಎಲ್ಲರೂ ಒಟ್ಟಾಗಿ ಇಲ್ಲೇ ಡೈನಿಂಗ್‌ ಟೇಬಲ್‌ನಲ್ಲಿ ಕುಳಿತು ಊಟಮಾಡುತ್ತೇವೆ ಎಂದರು. ಸಲೀಮ್‌ ಮೂರು ಮಕ್ಕಳನ್ನೂ ಊಟಕ್ಕೆ ಕರೆದು ಏಳೂ ಜನ ರೋಟಿ ದಾಲ್‌ ಸವಿಯಲು ಸಿದ್ದರಾದರು. ಸುಜಾತಳ ಪ್ರಾಣ ಹೊರಟೇಹೋಯಿತೇನೋ ಎಂಬಂತಾಯಿತು. ಬೇರೆ ದಾರಿ ಇರಲಿಲ್ಲ, ಈಗ ಸಮಯ ಮೀರಿದೆ. ಅಡುಗೆ ಪಾತ್ರೆಗಳನ್ನೆಲ್ಲಾ ಡೈನಿಂಗ್‌ ಟೇಬಲ್ ಮೇಲೆ ಜೋಡಿಸಿ, ದಾಲ್‌ ಇದ್ದ ದೊಡ್ಡ ಪಾತ್ರೆಯನ್ನು ಆ ಅಪರಿಚಿತರ ಹತ್ತಿರ ಇಟ್ಟು, ಚಿಕ್ಕ ಪಾತ್ರೆಯನ್ನು ತನ್ನ ಮಕ್ಕಳ ಹತ್ತಿರ ಇಡಲು ಹೋದಳು. ಅಪರಿಚಿತರಲ್ಲೊಬ್ಬ “ ಸದ್ಯಕ್ಕೆ ಈ ದೊಡ್ಡ ಪಾತ್ರೆಯಲ್ಲಿರುವುದೇ ಎಲ್ಲರಿಗೂ ಸಾಕಾಗುತ್ತೆ, ನಾವೆಲ್ಲ ಇದನ್ನು ತಿಂದು ಮುಗಿಸೋ ಹೊತ್ತಿಗೆ ನೀವು ಈ ಚಿಕ್ಕ ಪಾತ್ರೆಯ ದಾಲ ಇನ್ನೂ ಸ್ವಲ್ಪ ಬಿಸಿ ಮಾಡಿ ತನ್ನಿ” ಎಂದು ಹೇಳಿ ದೊಡ್ಡ ಪಾತ್ರೆಯಲ್ಲಿದ್ದ ದಾಲನ್ನು ತಾನೇ ಎಲ್ಲರ ತಟ್ಟೆಗೆ ಬಡಿಸಿದ. ಸುಜಾತಳ ಮನಸ್ಸು ಯೋಚಿಸುವುದೇ ನಿಲ್ಲಿಸಿತ್ತು. ಚಿಕ್ಕ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಒಲೆಯ ಮೇಲೆ ಇಟ್ಟು ಬಿಸಿ ಮಾಡಿ ತಂದಳು. ಅಷ್ಟರಲ್ಲಿ ಅವರೆಲ್ಲಾ ಏಳೂ ಜನ ಸೇರಿ ದೊಡ್ಡ ಪಾತ್ರೆಯಲ್ಲಿದ್ದ ದಾಲ್‌ ಸಾಕಷ್ಟು ಮುಗಿಸಿದ್ದರು. ನೋಡಿ ಇದರಲ್ಲಿ ಮಿಕ್ಕಿರುವ ಸ್ವಲ್ಪ ದಾಲ್‌ ನಿಮ್ಮ ತಟ್ಟೆಗೆ ಹಾಕಿರುವೆ. ನೀವು ನಮ್ಮೊಂದಿಗೆ ಊಟ ಮಾಡಿ, ಆ ಬಿಸಿಯಾದ ದಾಲ್‌ ನಮಗೆ ಕೊಡಿ” ಎಂದ ಒಬ್ಬ ಅಪರಿಚಿತ. ಅಷ್ಟರಲ್ಲಿ ಮಗಳು ಸಲ್ಮಾ “ಅಮ್ಮ ನನಗೆ ತಣ್ಣಗಿರುವ ದಾಲ್‌ ಇಷ್ಟ ಎಂದು ಹೇಳಿ ಸುಜಾತಳ ತಟ್ಟೆಗೆ ಹಾಕಿದ್ದ ದಾಲ್‌ ತೆಗೆದುಕೊಂಡು ರೋಟಿ ಜೊತೆ ತಿಂದಳು. ಕಡೆಗೂ ಸುಜಾತಳಿಗೆ ಚಿಕ್ಕ ಪಾತ್ರೆಯ ದಾಲ್‌ ಸಿಕ್ಕಿತು. ಏನೂ ತೋಚದೆ ಊಟ ಮುಗಿಸಿ ಎಲ್ಲರೂ ಅವರವರ ಕೋಣೆಗೆ ಹೋದರು. ಜಯರಾಂ ಹೇಳಿದಂತೆ ಸುಜಾತ ಬಿಳಿಯ ಟವಲ್‌ ಒಂದನ್ನು ಬಾಲ್ಕನಿಯಲ್ಲಿ ನೇತುಹಾಕಿ ತನ್ನ ರೂಮಿನಲ್ಲಿ ೧೦ ನಿಮಿಷ ಇದ್ದು ನಂತರ ದೇವರ ಮುಂದೆ ಧ್ಯಾನಿಸುತ್ತಾ ಕುಳಿತಳು. “ಆ ಉಪ್ಪು ವಿಷವೇ ಆಗಿದ್ದರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಒಬ್ಬರಾದ ಮೇಲೆ ಒಬ್ಬರು ವಾಂತಿ ಮಾಡಿಕೊಳ್ಳುತ್ತಾ ಬರುತ್ತಾರೆಯೇ, ಅಥವಾ ನಿದ್ದೆಯಲ್ಲಿ ಹಾಗಿ ಸಾವನ್ನಪ್ಪುತ್ತಾರಾ. ಅಯ್ಯೋ ವಿಧಿಯೇ ಗಂಡ ಮತ್ತು ಮಕ್ಕಳನ್ನು ನನ್ನ ಕೈಯ್ಯಾರೆ ನಾನೇ ಕೊಂದುಹಾಕಿದೆನೇ” ಎಂದು ಬಿಕ್ಕಳಿಸಿ ಅಳುತ್ತಾ ಅಲ್ಲೇ ಮೂರ್ಚೆ ಹೋದವಳಂತೆ ನೆಲಕ್ಕೆ ಬಿದ್ದಳು. ಅವಳಿಗೆ ಎಚ್ಚರಿಕೆ ಆದದ್ದು ರಾತ್ರಿ 1 ಗಂಟೆಗೆ, ಅದು ಕಾಲಿಂಗ್‌ ಬೆಲ್‌ ಸದ್ದಿನಿಂದಾಗಿ. ಒಂದೇ ಸಮನೆ ಐದಾರು ಬಾರಿ ಕಾಲಿಂಗ್‌ ಬೆಲ್ಲ ಶಬ್ದ. ಆಶ್ಚರ್ಯವೆಂದರೆ ಅಷ್ಟು ಜೋರಾಗಿ ಶಬ್ದವಾಗುತ್ತಿದ್ದರೂ ಅಪರಿಚಿತರಿಗಾಗಲಿ, ಸಲೀಮನಿಗಾಗಲಿ ಅಥವಾ ಮಕ್ಕಳಿಗಾಗಲಿ ಎಚ್ಚರಿಕೆಯೇ ಆಗಿಲ್ಲ. ಸುಜಾತ ಬಂದು ಕಿಟಕಿಯಿಂದ ಯಾರು ಬಂದಿದ್ದಾರೆಂದು ನೋಡಿದರೆ, ಅಲ್ಲಿ ಸಪ್ನಾ, ಜಯರಾಂ ಮತ್ತು ಇನ್ನೂ ನಾಲ್ಕು ಜನ ಪೋಲೀಸರು. “ಹೇಳಿದ ಹಾಗೆ ಮಾಡಿದೆ ತಾನೆ, ಹಾಗಿದ್ದರೆ ಅವರು ಯಾರು ಏಳುವುದಿಲ್ಲ ಬಿಡು” ಎಂದಳು ಸಪ್ನಾ. ಅಳುತ್ತಾ “ಅಯ್ಯೋ ನಾನೇ ನನ್ನ ಕೈಯ್ಯಾರೆ ಗಂಡ ಮಕ್ಕಳನ್ನು ಕೊಂದುಬಿಟ್ಟೆನೇ” ಎಂದು ಸಪ್ನಾಳನ್ನು ತಬ್ಬಿಕೊಂಡು ಅತ್ತಳು ಸುಜಾತ. “ಮಕ್ಕಳಿಗೆ ಏಕೆ ಕೊಡಲು ಹೋದೆ, ಜಯರಾಂ ನೀವು ಇವಳಿಗೆ ಸರಿಯಾಗಿ ತಿಳಿಸಲಿಲ್ಲವೇ” ಎಂದು ಸಪ್ನ ಕೇಳಿದಾಗ, “ಇಲ್ಲ ಅವರು ಸರಿಯಾಗೇ ಹೇಳಿದ್ದರು, ಎಲ್ಲಾ ನನ್ನ ಕರ್ಮ ಅಷ್ಟೇ” ಎಂದಳು ಸುಜಾತ. ಎಲ್ಲಿದ್ದಾರೆ ಆ ಮೂವರು ಎಂದು ಕೇಳಿದಳು ಸಪ್ನ. ಸುಜಾತ ಮೇಲಿನ ಕೋಣೆಗೆ ಅವರನ್ನು ಕರೆದುಕೊಂಡು ಹೋದಳು. “ಇವರನ್ನಲ್ಲಾ ನಾನು ಕೇಳಿದ್ದು, ನಿನ್ನ ಮೂವರು ಮಕ್ಕಳೆಲ್ಲಿ ಅಂತ” ಎಂದು ಸಪ್ನ ಕೇಳಿದಾಗ, ಮಕ್ಕಳ ಕೋಣೆಗೆ ಸಪ್ನಾಳನ್ನು ಕರೆದುಕೊಂಡುಹೋದಳು. ಆ ಮಕ್ಕಳ ಮೂಗಿಗೆ ಅದೇನೋ ರಸ ಹಾಕಿದ ಸಪ್ನಾ, ಇನ್ನೈದು ನಿಮಿಷದಲ್ಲಿ ಇವರು ಏಳುತ್ತಾರೆ, ಏನೂ ಆಗಿಲ್ಲ, ಯೋಚಿಸಬೇಡ. ಜಯರಾಂ ಕೊಟ್ಟಿದ್ದ ಉಪ್ಪು, ನಿದ್ದೆ ಮಂಪರು ತರಿಸಲಷ್ಟೆ, ವಿಷವೇನಲ್ಲ ಎಂದಾಗ, ಸುಜಾತಳ ಹೋದ ಪ್ರಾಣ ಮತ್ತೆ ವಾಪಸ್‌ ಬಂದಿತ್ತು. “ಮತ್ತೆ ನನ್ನ ಗಂಡ ಸಲೀಮ್‌” ಎಂದಾಗ ಮೊದಲು ನಿಮ್ಮ ಅತಿಥಿಗಳನ್ನು ಪೋಲೀಸ್‌ ಠಾಣೆಗೆ ಸಾಗಿಸಿ ಹತ್ತು ನಿಮಿಷದಲ್ಲಿ ಬರುವೆ, ಆಮೇಲೆ ನಿನ್ನ ಗಂಡ ಸಲೀಮನನ್ನು ವಿಚಾರಿಸಿಕೊಳ್ಳೋಣ” ಎಂದು ಹೇಳಿ ಸಪ್ನ ಆ ಮೂವರನ್ನೂ ಹಗ್ಗದಲ್ಲಿ ಕಟ್ಟಿ ಅವರು ಮಲಗಿದ್ದ ಸ್ಥಿತಿಯಲ್ಲೇ ಜೀಪ್‌ಗೆ ಎತ್ತಿ ಹಾಕಿ ಜೀಪಿನಲ್ಲಿ ಹೊರಟಳು. ಐದು ನಿಮಿಷದಲ್ಲಿ ಮಕ್ಕಳು ನಿದ್ದೆಯಿಂದ ಎದ್ದರು, ಅತಿಯಾದ ನಿದ್ರೆಯಿಂದ ಎದ್ದ ಅವರಿಗೆ ಅಲ್ಲಿ ಏನಾಗುತ್ತಿದೆ ಎಂದು ತಿಳಿಯಲಿಲ್ಲ. “ನೀನು ನನ್ನ ಗೆಳತಿ, ಈ ಕಾರ್ಯಾಚರಣೆಯಲ್ಲಿ ನನ್ನ ಗಂಡನನ್ನು ಬಂದಿಸುವುದು ಬೇಡ, ನಾನು ಅವರಿಗ ಬುದ್ದಿ ಹೇಳಿ ಸರಿ ಮಾಡುತ್ತೇನೆʼ ಹೀಗೆಲ್ಲಾ ಸಪ್ನಾ ಬಂದಾಗ ತಿಳಿಸಬೇಕೆಂದು ತಯಾರಿ ನಡೆಸಿದಳು ಸುಜಾತ. ಹತ್ತು ನಿಮಿಷದಲ್ಲಿ ಸಪ್ನಾ ವಾಪಸ್‌ ಬಂದು ನೇರ ಸಲೀಮ್‌ ಇದ್ದ ಕೋಣೆಯ ಕಡೆಗೆ ಹೊರಟಳು. ಸುಜಾತ ಅವಳ ಹಿಂದೆಯೇ ಓಡಿದಳು. ಸಪ್ನಾ ತನ್ನ ಜೇಬಿನಿಂದ ಆ ರಸವನ್ನು ಸಲೀಮನ ಮೂಗಿಗೆ ಹಾಕಿ, ಅಲ್ಲೇ ಕುಳಿತಳು. ತಾನು ಹೇಳಬೇಕೆಂದಿದ್ದ ವಿಷಯವನ್ನು ಸುಜಾತ ಸಪ್ನಾಗೆ ಹೇಳಿದಾಗ, ʼಇನ್ನೈದು ನಿಮಿಷದಲ್ಲಿ ನಿನ್ನ ಸಲೀಮ ಏಳುತ್ತಾನೆ, ನಿನ್ನ ಅನಿಸಿಕೆಗೆ ಅವನ ಉತ್ತರ ಏನಿರುತ್ತೇ ಕಾದು ನೋಡೋಣ, ಸುಮ್ಮನೆ ನನ್ನ ಕೈಲಿ ದೇಶದ್ರೋಹವೆಸಗುವ ಕಾರ್ಯ ಮಾಡಿಸಬೇಡʼ ಎಂದಳು ಸಪ್ನಾ. ಐದು ನಿಮಿಷದಲ್ಲಿ ಸಲೀಮ ನಿದ್ದೆಯಿಂದ ಎದ್ದ. ಅಲ್ಲಿಗೇ ಒಂದು ಲೋಟದಲ್ಲಿ ನೀರು ತರಿಸಿ ಅವನ ಮುಖಕ್ಕೆ ನೀರು ಎರಚಿದಳು ಸಪ್ನಾ. ನಿದ್ದೆಯ ಮಂಪರಿನಿಂದ ಹೊರಬಂದ ಸಲೀಮ್‌ ಸಪ್ನಾಳನ್ನು ಕಂಡು ಎದ್ದು ನಿಂದು ಸೆಲ್ಯೂಟ್‌ ಮಾಡಿ “ನಮಸ್ಕಾರ ಮೇಡಮ್‌” ಎಂದ. ನೀನು ಕೈ ಕೆಳಗೆ ಇಳಿಸು, ನಾನು ನಿನಗೆ ಸೆಲ್ಯೂಟ್‌ ಮಾಡಬೇಕು ಹೀರೋ ಎಂದು ಸಪ್ನಾ ಹೇಳಿದಾಗ ಸುಜಾತ ಮತ್ತು ಮಕ್ಕಳು ಆಶ್ಚರ್ಯದಿಂದ ಏನು ನಡೆಯುತ್ತಿದೆ ಎಂದು ನೋಡುತ್ತಾ ನಿಂತರು. “ನಿನ್ನ ಗಂಡ ನಮ್ಮ ದೇಶದ ಗುಪ್ತಚರ ವಿಭಾಗದ ಅಧಿಕಾರಿ. ಇವನನ್ನು ತಯಾರಿ ಮಾಡಿ ಬೇರೆ ದೇಶಕ್ಕೆ ಕಳಿಸಿದ್ದು ನಾನೇ. ಇವರು ಕೆಲಸ ಬಿಟ್ಟ ಮೇಲೆ ನಿಮ್ಮ ಮನೆಗೆ ಬರುತ್ತಿದ್ದವರು ನಮ್ಮ ಕಛೇರಿಯವರೇ. ಆ ಮೂವರನ್ನಲ್ಲದೇ ಅವರ ಪೂರ್ತಿ ತಂಡವನ್ನು ಹಿಡಿಯಬೇಕಿತ್ತು, ಹಾಗಾಗಿ ನಿನಗೆ ಏನೂ ತಿಳಿಸಲಿಲ್ಲ. ಅಂದು ನಮ್ಮ ಶಾಲೆಯ ಕಾರ್ಯಕ್ರಮದಲ್ಲಿ ನೀನು ಸಲೀಮ್‌ ಅವರನ್ನು ಪರಿಚಯ ಮಾಡಿಕೊಡುವುದಕ್ಕೆ ಮುಂಚೆಯೇ ನಮ್ಮಿಬ್ಬರಿಗೂ ಪರಿಚಯವಿತ್ತು. ಆ ಭಯೋತ್ಪಾದಕರ ಗುಂಪಿನಲ್ಲೇ ಒಬ್ಬನಂತೆ ನಟಿಸಿ ಇವತ್ತು ನಿನ್ನ ಸಲೀಮ ಮಾಡಿದ ಸಾಧನೆಯಿಂದ ಸುಮಾರು ಐವತ್ತು ಬಯೋತ್ಪಾಧಕರಿರುವ ಜಾಲವೇ ನಮ್ಮ ಕೈವಶವಾಗಿದೆ. ನಾಳೆ ಬೆಳಿಗ್ಗೆ ನೀವೆಲ್ಲಾ ಮನೆ ಖಾಲಿ ಮಾಡಿಕೊಂಡು ದೆಹಲಿಗೆ ತೆರಳಲಿದ್ದೀರಿ. ನಿನ್ನ ಗಂಡನ ಕೆಲಸ ಈಗ ಕೇಂದ್ರ ಸರ್ಕಾರದ ಒಂದು ಕಛೇರಿಯಲ್ಲಿ. ನಿಮ್ಮ ಕುಟುಂಬದ ಗೌಪ್ಯತೆಯನ್ನು ಕಾಪಾಡವುದಕ್ಕಾಗಿ ಈ ಒಟ್ಟಾರೆ ಕಾರ್ಯಾಚರಣೆಯಲ್ಲಿ ನಿಮ್ಮ ಕುಟುಂಬದ ಹೆಸರು ಎಲ್ಲೂ ಬರುವುದಿಲ್ಲ” ಎಂದು ದೀರ್ಘ ಭಾಷಣ ಮುಗಿಸಿದಳು ಸಪ್ನಾ. “ಇಂತಹ ಅಪಾಯದ ಕೆಲಸಕ್ಕೆ ಸಲೀಮನೇ ಬೇಕಿತ್ತೆ ನಿನಗೆ “ ಎಂದು ಸುಜಾತ ಕೇಳಿದಳು. “ಅದು ಹಾಗಲ್ಲ, ತಮ್ಮ ಬಂಧುಬಳಗದಿಂದ ದೂರವಾಗಿ ಯಾರೊಂದಿಗೂ ಸಂಪರ್ಕವಿಲ್ಲದ ಕುಟುಂಬವನ್ನು ನಾವು ಹುಡುಕುತ್ತಿದ್ದೆವು, ಆಗ ನನ್ನ ಬಾಸ್‌ ವಿನಾಯಕ ಮೂರ್ತಿಯವರು ನಿಮ್ಮ ಕುಟುಂಬದ ಬಗ್ಗೆ ತಿಳಿಸಿದರು” ಎಂದಳು ಸಪ್ನಾ. ಸಪ್ನಾಳ ಈ ಮಾತು ಕೇಳಿ ಸುಜಾತ ಬಿಟ್ಟ ಬಾಯಿ ಮುಚ್ಚದೆಯೇ ಸಪ್ನಾಳನ್ನೇ ನೋಡುತ್ತಾ ನಿಂತಳು. “ಅಷ್ಟೇ ಅಲ್ಲ, ವಿನಾಯಕ ಮೂರ್ತಿ ಮತ್ತು ಅವರ ಕುಟುಂಬ ಈಗ ದೆಹಲಿಯಲ್ಲಿ ನೆಲೆಸಿದ್ದು, ನಿಮ್ಮ ವಸತಿ ವ್ಯವಸ್ಥೆ ಹಾಗೂ ಮುಂದಿನ ನಿಮ್ಮ ಸುಗಮ ಜೀವನಕ್ಕೆ ಸಹಾಯವಾಗುತ್ತಾರೆ, ನಿಮಗೂ ವಿನಾಯಕ ಮೂರ್ತಿ ಚೆನ್ನಾಗಿಯೇ ಗೊತ್ತಲ್ಲವೇ!!!” ಎಂದು ಸಪ್ನಾ ನಗುತ್ತಾ ಕೇಳಿದಳು. ತಕ್ಷಣ ಸಲೀಮ “ಯಾರು ಈ ವಿನಾಯಕ ಮೂರ್ತಿ, ನನಗೆ ಗೊತ್ತಿಲ್ಲವಲ್ಲ ಸಪ್ನಾ ಮೇಡಮ್” ಎಂದ. “ನನಗೇನು ಕೇಳುತ್ತೀರಿ, ನಿಮ್ಮ ಸುಜಾತ ಖಾನ್‌ ಅವರನ್ನು ಕೇಳಿ” ಎಂದಳು ಸಪ್ನಾ. ಸಲೀಮ ಸುಜಾತಳ ಹತ್ತಿರ ಹೋಗಿ “ಯಾರು ಈ ವಿನಾಯಕ ಮೂರ್ತಿ, ನಿನಗೆ ಗೊತ್ತಾ?” ಎಂದಾಗ ಸುಜಾತಳ ಕಣ್ಣಲ್ಲಿ ನೀರು ತುಂಬಿತ್ತು. “ವಿನಾಯಕ ಮೂರ್ತಿ ಮತ್ತಾರೂ ಅಲ್ಲ, ನಾನು ಚಿಕ್ಕವಳಿದ್ದಾಗ ತಮ್ಮ ಭುಜದ ಮೇಲೆ ಕೂಡಿಸಿಕೊಂಡು ಆಟವಾಡಿಸುತ್ತಿದ್ದ ಮತ್ತು ಡಿಗ್ರಿ ಓದಿ ಮುಗಿಸುವ ವರೆವಿಗೂ ನನ್ನ ಎಲ್ಲಾ ನಿರ್ಧಾರಗಳಿಗೂ ಸಲಹೆ ಸೂಚನೆ ಕೊಡುತ್ತಿದ್ದ ಮತ್ತು ನನ್ನನ್ನು ಅತಿ ಪ್ರೀತಿಯಿಂದ ಸಾಕಿದ ನನ್ನ ಚಿಕ್ಕಪ್ಪʼ ಎಂದಳು. ಕಡಿದು ಹೋದ ಕುಟುಂಬದ ಹಗ್ಗ ಮತ್ತೇ ಸೇರಿಕೊಳ್ಳುವ ಸಂದರ್ಭ ಬಂದಿದೆ ಎಂಬುದು ಸುಜಾತ ಮತ್ತು ಸಲೀಮರಿಗೆ ಅರಿವಾಗಿತ್ತು. ಸುಜಾತ ಸಲೀಮನ ಹತ್ತಿರ ಬಂದು “ ಅದೆಲ್ಲಾ ಬಿಡು, ಈ ವಿಷಯವನ್ನು ಮುಂಚೆಯೇ ಹಂಚಿಕೊಳ್ಳುವಷ್ಟೂ ನನ್ನಲ್ಲಿ ನಂಬಿಕೆ ಇರಲಿಲ್ಲವೇ ನಿನಗೆ, ಒಬ್ಬಳೇ ಎಷ್ಟು ಅತ್ತಿದ್ದೇನೆ ಎಂಬ ಅರಿವು ನಿನಗಿದೆಯೇ, ದಿನರಾತ್ರಿ ಆ ಹೆಬ್ಬುಲಿಗಳು ನನ್ನ ಮಕ್ಕಳನ್ನು ಏನು ಮಾಡಿಬಿಡುತ್ತಾರೋ ಎಂಬ ಆತಂಕ ” ಎಂದಳು. ಸಲೀಮ ನಕ್ಕು “ಅಂತು ದೇಶದ ಒಳಿತಿಗಾಗಿ ನನಗೇ ವಿಷ ಹಾಕಲೂ ತಯಾರಿದ್ದೆ ನೀನು, ನಿಜವಾಗಲೂ ನಾವೆಲ್ಲಾ ಸತ್ತಿದ್ದರೆ ಏನು ಮಾಡುತ್ತಿದ್ದೆ” ಎಂದು ಕೇಳಿದಾಗ, ತನ್ನ ರೂಮಿಗೆ ಅವನನ್ನು ಕರೆದುಕೊಂಡುಹೋಗಿ, ಮೇಲಿದ್ದ ಫ್ಯಾನಿಗೆ ಕಟ್ಟಿದ್ದ ಸೀರೆಯನ್ನು ತೋರಿಸಿದಳು ಸುಜಾತ.
ಅನಿಸಿಕೆಗಳು