ನಿತ್ಯಾಶ್ರಮದ ಸ್ವಾಮೀಜಿಯಾದ ಸತ್ಯಾತ್ಮನಂದರು ಆಧ್ಯಾತ್ಮಿಕ ಪುಸ್ತಕ ತರುವುದಕ್ಕಾಗಿ ಚಾಮರಾಜಪೇಟೆಯ ವೇದಾಂತ ಬುಕ್ ಹೌಸ್ಗೆ ಹೊರಡಲು ತಯಾರಾಗಿದ್ದರು. ಆ ಸಮಯಕ್ಕೆ ಆಶ್ರಮಕ್ಕೆ 80 ವರ್ಷದ ಸಾವಿತ್ರಮ್ಮ ಬಂದರು. ಸಾವಿತ್ರಮ್ಮ ಆಶ್ರಮಕ್ಕೆ ಬಹಳಷ್ಟು ದೇಣಿಗೆ ನೀಡಿದ್ದಾರೆ. ಹೀಗಾಗಿ ಅವರಿಗೆ ಆಶ್ರಮದಲ್ಲಿ ಹೆಚ್ಚು ಗೌರವ. ಅಷ್ಟೇ ಅಲ್ಲ ಅವರು ಆಶ್ರಮದ ಹಿತೈಷಿಗಳಲ್ಲಿ ಮುಂಚೂಣಿಯಲ್ಲಿರುವವರು ಕೂಡ. ಎಲ್ಲೋ ಹೊರಡಲು ತಯಾರಾಗಿದ್ದ ಸ್ವಾಮೀಜಿಯನ್ನು ನೋಡಿ ಸಾವಿತ್ರಮ್ಮ ಸ್ವಾಮೀಜಿ ಎಲ್ಲಿ ಹೋಗುತ್ತಿದ್ದಾರೆ ಎಂದು ವಿಚಾರಿಸಿದರು. ನಂತರ ತಾವೇ ತಮ್ಮ ಕಾರಿನಲ್ಲಿ ಸ್ವಾಮೀಜಿಯನ್ನು ಕರೆದುಕೊಂಡು ಹೋಗುವುದಾಗಿ ಹೇಳಿದರು.
ಚಾಲಕನು ಕಾರನ್ನು ಓಡಿಸುತ್ತಿದ್ದರಿಂದ ಆಧ್ಯಾತ್ಮದ ವಿಚಾರಗಳು ವಿನಿಮಯ ಮಾಡಿಕೊಳ್ಳುತ್ತಾ ಕಾರಿನಲ್ಲಿ ಇಬ್ಬರೂ ಚಾಮರಾಜಪೇಟೆಯ ವೇದಾಂತ ಬುಕ್ ಹೌಸ್ಗೆ ಹೋದರು. ಪುಸ್ತಕ ಖರೀದಿ ಮಾಡುತ್ತಿದ್ದಾಗ ಸಾವಿತ್ರಮ್ಮ, ಸ್ವಾಮೀಜಿಗೆ ಹೀಗೆ ಹೇಳುತ್ತಾರೆ "ಸ್ವಾಮೀಜಿ ನಿಮಗೆ ಗೊತ್ತಲ್ಲ. ನಾನು ಡಯಾಬಿಟಿಸ್ ಪೇಷಂಟ್, ನಾನು ತಕ್ಷಣ ಶೌಚಾಲಯ ಬಳಸಬೇಕಿದೆ. ದಯವಿಟ್ಟು ಅಂಗಡಿವರನ್ನು ವಿಚಾರಿಸಿ ಇಲ್ಲಿ ಶೌಚಾಲಯ ಎಲ್ಲಿದೆ ಎಂದು"
ಇರುವ ವಿಷಯವನ್ನು ಅಂಗಡಿಯವರಿಗೆ ಹೇಳಿ ಸ್ವಾಮೀಜಿ ಹತ್ತಿರದ ಶೌಚಾಲಯ ಎಲ್ಲಿದೆ ಎಂದು ಕೇಳಿದರು ಅದಕ್ಕೆ ಅಂಗಡಿ ಕೆಲಸಗಾರರು ಎದುರಿನಲ್ಲಿರುವ ಉಮಾ ಟಾಕೀಸಿನಲ್ಲಿ ಇರುವ ಶೌಚಾಲಯವನ್ನೇ ನಾವು ಉಪಯೋಗಿಸುತ್ತೇವೆ ಎಂದರು.
ಸ್ವಾಮೀಜಿ ಸಾವಿತ್ರಮ್ಮರವರನ್ನು ಕರೆದುಕೊಂಡು ಉಮಾ ಟಾಕೀಸ್ ಕಡೆಗೆ ಹೊರಟರು. ಸಾವಿತ್ರಮ್ಮ ಶೌಚಾಲಯ ಉಪಯೋಗಿಸಲು ಟಾಕೀಸ್ ಒಳಗೆ ಹೋದರೆ, ಸ್ವಾಮೀಜಿ ಟಾಕೀಸಿನ ಆಚೆ ಬಾಗಿಲಲ್ಲಿ ಕಾಯುತ್ತಾ ನಿಂತರು. ಅಷ್ಟರಲ್ಲಿ ಒಳಗೆ ಪ್ರದರ್ಶನವಾಗುತ್ತಿದ್ದ ಚಲನಚಿತ್ರ ಮುಗಿದಿತ್ತು. ಜನರು ಟಾಕೀಸ್ನಿಂದ ಹೊರ ಬರಲು ಪ್ರಾರಂಭಿಸಿದರು. ಬಂದವರೆಲ್ಲ ಸ್ವಾಮೀಜಿಯನ್ನು ನೋಡುತ್ತಾ ಇದೇನು ಈ ಮನುಷ್ಯ ಇಂತಹ ಚಲನಚಿತ್ರಕ್ಕೆ ಬರುವುದೇ ಎಂದು ಹೇಳುತ್ತಿದ್ದರು. ಸ್ವಾಮೀಜಿಗೆ ಸ್ವಲ್ಪ ಮಟ್ಟಿಗೆ ವಿಷಯ ಅರ್ಥವಾಯಿತು. ಯಾವ ಚಿತ್ರ ಪ್ರದರ್ಶನವಾಗುತ್ತಿದೆ ಎಂದು ತಿಳಿದುಕೊಳ್ಳಲು ಅಲ್ಲಿ ಹಾಕಿದ್ದ ಬ್ಯಾನರ್ ನೋಡಿದರು ಅದು ಕಾಶಿನಾಥ್ ರವರ ಅನಂತನ ಅವಾಂತರ ಚಿತ್ರ. ಸತ್ಯಾತ್ಮನಂದರಿಗೆ ನಗುವುದೋ ಅಳುವುದೋ ಗೊತ್ತಾಗಲಿಲ್ಲ. ಹೊರಗೆ ಬಂದಂತಹ ಸಾವಿತ್ರಮ್ಮನವರನ್ನು ಕರೆದುಕೊಂಡು ತಕ್ಷಣ ಆಶ್ರಮದ ಮುಖ್ಯ ಕಚೇರಿಗೆ ಹೊರಟರು
ಅಲ್ಲಿದ್ದ ಅವರ ಮುಖ್ಯ ಗುರುಗಳನ್ನು ಭೇಟಿ ಮಾಡಿ ವಿಷಯ ತಿಳಿಸಿದರು ಈ ವಿಷಯವಾಗಿ ಯಾರಾದರೂ ನಿಮಗೆ ಫೋನ್ ಮಾಡಬಹುದು ಅದಕ್ಕಾಗಿ ಮುಂಚೆಯೇ ನಾನು ನಿಜಾಂಶ ಏನೆಂದು ತಿಳಿಸಬೇಕು ಎನಿಸಿತು ಅದಕ್ಕೆ ತಕ್ಷಣ ಓಡಿ ಬಂದೆ ಎಂದು ಸತ್ಯಾತ್ಮಾನಂದರು ತಮ್ಮ ಗುರುಗಳಿಗೆ ತಿಳಿಸಿದರು.
ಗುರುಗಳು ತಕ್ಷಣ ತಮ್ಮ ಮೊಬೈಲ್ ಇಂದ ಎಲ್ಲಾ ಟ್ರಸ್ಟಿಗಳಿಗೆ ವಿಷಯವನ್ನು ತಿಳಿಸಿ ಯಾರಾದರೂ ಈ ಬಗ್ಗೆ ಫೋನ್ ಮಾಡಿದರೆ ಅದನ್ನು ಅನ್ಯತಾ ಭಾವಿಸಬಾರದೆಂದು ಹೇಳಿದರು. ಸತ್ಯಾತ್ಮನಂದರ ನಿಂತು ಹೋಗಿದ್ದ ಹೃದಯದ ಬಡಿತ ಮತ್ತೆ ಪ್ರಾರಂಭವಾಯಿತು.