ಅದು ಲಾಕ್ ಡೌನ್ ಸಮಯ, ಆಶ್ರಮದಲ್ಲಿ ಸ್ವಾಮೀಜಿ ಒಬ್ಬರು ಬಿಟ್ಟರೆ ಅಡುಗೆ ಮಾಡಿ ಹಾಕುವ ಕಿಟ್ಟ ಅಷ್ಟೇ. ಸಮಯ ಕಳೆಯಲು ಆಶ್ರಮ ಹಿತೈಷಿಗಳೊಂದಿಗೆ ಆಗಾಗ ಸ್ವಾಮೀಜಿ ಫೋನಿನಲ್ಲಿ ಮಾತನಾಡುತ್ತಿದ್ದರು. ಒಂದು ವರ್ಷಕ್ಕೆ ಹಿಂದೆ ವಿದೇಶದಿಂದ ಹಿಂದಿರುಗಿ ಬಂದಿದ್ದ ರಾಜೀಶನಿಗೆ ಸ್ವಾಮೀಜಿ ಫೋನ್ ಮಾಡಿದಾಗ, ನಾನು ಕಾನ್ಫರೆನ್ಸ ಕಾಲ್ ನಲ್ಲಿ ಇದ್ದೇನೆ, ಆಮೇಲೆ ಮಾತನಾಡುತ್ತೇನೆ ಎಂದು ರಾಜೇಶ ವಾಟ್ಸಾಪ್ ಸಂದೇಶ ಕಳಿಸಿದ. ಈ ಸಂದೇಶ ನೋಡಿದೊಡನೆಯೇ ಸ್ವಾಮೀಜಿಗೆ ಒಂದು ಐಡಿಯಾ ಬಂತು. ನಾನು ಏಕೆ ನನ್ನ ಪ್ರವಚನವನ್ನು ಕಾನ್ಫರೆನ್ಸ ಕಾಲ್ ಉಪಯೋಗಿಸಿ ಮಾಡಬಾರದು ಅಂತ. ರಾಜೇಶನೇ ಇದಕ್ಕೆ ಸಹಾಯ ಮಾಡಲು ಸರಿಯಾದ ವ್ಯಕ್ತಿ ಎಂದು ಅವರಿಗನಿಸಿತು. ರಾಜೇಶನ ಫೋನಿಗಾಗಿ ಕಾಯುತ್ತಾ ಕುಳಿತರು.
ಅರ್ಧ ಗಂಟೆಯ ನಂತರ ರಾಜೇಶನ ಕಾಲ್ ಬಂತು. ಸ್ವಾಮೀಜಿ, ತಮ್ಮ ಆಸೆಯನ್ನು ರಾಜೇಶನ ಮುಂದಿಟ್ಟರು. ರಾಜೇಶ ಅದಕ್ಕೇನಂತೆ ಸ್ವಾಮೀಜಿ, ನಿಮ್ಮ ಫೋನಿನಿಂದಲೇ ನೀವು ಕಾನ್ಫರೆನ್ಸ ಕಾಲ್ ಮಾಡಬಹುದು, ಅದೂ ಈಗ ಬಿಟ್ಟಿಯಾಗಿ ಎಂದ. ನೀವು ಫ್ರೀ ಕಾನ್ಫರೆನ್ಸ್ ಕಾಲ್ ವೆಬಸೈಟಿಗೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಿ, ಎಲ್ಲಾ ನಿಮಗೆ ಅರ್ಥ ಆಗುತ್ತೆ ಅಂದ. ರಾಜೇಶ, ಸ್ವಾಮೀಜಿಗೆ ಹೊಸ ಕಾನ್ಫರೆನ್ಸ್ ಕಾಲ್ ಶುರು ಮಾಡುವುದು ಹೇಗೆ, ಬೇರೆ ಎಲ್ಲರ ಆಡಿಯೋ, ವೀಡಿಯೋ ಮ್ಯೂಟ್ ಮಾಡುವುದು ಹೇಗೆ, ಕಾನ್ಫರೆನ್ಸ್ ಕಾಲ್ ಗೆ ಬಕ್ತಾದಿಗಳನ್ನು ಆಹ್ವಾನಿಸುವುದು ಹೇಗೆ, ಹೀಗೆ ಅನೇಕ ವಿಷಯಗಳನ್ನು ಹೇಳಿಕೊಟ್ಟ. ೭೦ರ ದಶಕದಲ್ಲಿ ಇಂಜಿನಿಯರಿಂಗ್ ಮಾಡಿದ್ದ ಸ್ವಾಮೀಜಿಗೆ ಈ ಫ್ರೀ ಕಾನ್ಫರೆನ್ಸ್ ಕಾಲ್ ಅರ್ಥ ಮಾಡಿಕೊಳ್ಳುವುದು ಕಷ್ಟವೇನಾಗಲಿಲ್ಲ.
ನಂತರ ಸ್ವಾಮೀಜಿ ಆಶ್ರಮದ ಹಿತೈಷಿಗಳೆಲ್ಲರಿಗೂ ಫೋನ್ ಮಾಡಿ ತಮ್ಮ ಯೋಜನೆ ತಿಳಿಸಿದರು ಹಾಗೂ ಕಾನ್ಫರೆನ್ಸ್ ಕಾಲ್ ಲಿಂಕನ್ನು ವಾಟ್ಸಾಪ್ ಮೂಲಕ ಕಳಿಸಿಕೊಟ್ಟರು. ಸ್ವಾಮೀಜಿಯ ವಾಕ್ಯ ವೇದವಾಕ್ಯವಿದ್ದಂತೆ, ಎಲ್ಲರೂ ಒಪ್ಪಿದರು. ಮೊದಲು ಒಂದು ದಿನ ಇದರ ಟ್ರಯಲ್ ರನ್ ಮಾಡೋಣ ಎಂದು ಹೇಳಿ ಎಲ್ಲರನ್ನೂ ಸಂಜೆ ಆರು ಗಂಟೆಗೆ ಕಾನ್ಫರೆನ್ಸ್ ಕಾಲ್ ಗೆ ಬರಲು ತಿಳಿಸಿದರು. ಆನ್ ಲೈನ್ ಬಂದ ಒಬ್ಬರು ಭಕ್ತರು, ಸ್ವಾಮೀಜಿ ನಮ್ಮ ಮನೆಯಲ್ಲಿ ಮಕ್ಕಳ ಗಲಾಟೆ ಜಾಸ್ತಿ, ನಿಮ್ಮ ಪ್ರವಚನಕ್ಕೆ ತೊಂದರೆಯಾಗಬಹುದು ಎಂದರು. ಅದಕ್ಕೆ ಸ್ವಾಮೀಜಿ, ಯೋಚಿಸಬೇಡಿ ಅಮ್ಮ, ನಿಮ್ಮಲ್ಲರ ಮೊಬೈಲ್‌ನ ಮೈಕ್ ಮ್ಯೂಟಾಗಿರುತ್ತೆ. ನೀವು ನಾನು ಹೇಳಿದ್ದನ್ನು ಕೇಳಿಸಿಕೊಳ್ಳಬಹುದು ಅಷ್ಟೇ. ಹಾಗೇನಾದರು ಪ್ರವಚನದ ಮಧ್ಯದಲ್ಲಿ ನೀವೂ ಮಾತನಾಡಬೇಕೆಂದು ನನಗನಿಸಿದರೆ, ನಾನು ನಿಮ್ಮ ಮೊಬೈಲ್ ಮೈಕನ್ನು ಅನ್‌ಮ್ಯೂಟ್ ಮಾಡಿ, ಈ ಕಾನ್ಫರೆನ್ಸ್ ಕಾಲ್ ನಲ್ಲೇ ಇರುವ ಚಾಟ್ ಉಪಯೋಗಿಸಿ ನಿಮಗೆ ಸಂದೇಶ ಕಳಿಸುತ್ತೇನೆ. ನೀವು ನಂತರ ಮಾತನಾಡಬಹುದು ಎಂದರು.
ಸ್ವಾಮೀಜಿ, ನಾವು ಹೇಗೆ ಡ್ರೆಸ್ ಮಾಡಿಕೊಂಡಿರಬೇಕು ಎಂದು ಒಬ್ಬರು ಭಕ್ತರು ಕೇಳಿದರು. ಅದಕ್ಕ ಸ್ವಾಮೀಜಿ, ಇದು ನಿಮಗೆ ತೊಂದರೆಯೇ ಅಲ್ಲ, ನೀವು ಮನೆಯಲ್ಲಿ ಹೇಗಿರುತ್ತೀರೋ ಹಾಗೇ ಇರಿ., ಏಕೆಂದರೆ ನಾನು ನಿಮ್ಮಲ್ಲರ ಮೊಬೈಲ್‌ನ ವೀಡಿಯೋ ಆಫ್ ಮಾಡಿರುತ್ತೇನೆ. ನಿಮಗೆ ನಾನು ಕಾಣಿಸುತ್ತೇನೆ ಅಷ್ಟೇ, ಇನ್ಯಾರಿಗೂ ಇನ್ಯಾರೂ ಕಾಣಿಸುವುದಿಲ್ಲ ಎಂದರು.
ಸರಿ, ಮಾರನೇ ದಿನದಿಂದ ಪ್ರಾರಂಭವಾಯಿತು ಕಾನ್ಫರೆನ್ಸ್ ಕಾಲ್ ಪ್ರವಚನ. ಸುಮಾರು 60 ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಲಾಗಿನ್ ಆಗಿ, ಸ್ವಾಮಿಜಿಯ ಪ್ರವಚನ ಕೇಳಲು ಪ್ರಾರಂಭಿಸಿದರು. ಟಿವಿ ನ್ಯೂಸ್ ನಲ್ಲಿ, ನ್ಯೂಸ್ ಪೇಪರ್ ನಲ್ಲಿ ಎಲ್ಲ ಕಡೆ ಈ ಸ್ವಾಮೀಜಿಯ ನೂತನ ಆವಿಷ್ಕಾರ ಪ್ರಸಿದ್ದಿಯಾಯಿತು.
ಒಂದು ವಾರದ ನಂತರ ಒಂದು ದಿನ ಬೆಳಗ್ಗೆ, ಭಕ್ತರೊಬ್ಬರು "ಸ್ವಾಮೀಜಿ, ನೀವು ನಮಗೆ ವೀಡಿಯೋದಲ್ಲಿ ಸರಿಯಾಗಿ ಕಾಣಿಸುತ್ತಿಲ್ಲ, ನೀವು ಯಾವುದಾದರೂ ಪುಸ್ತಕದ ಮೇಲೋ ಅಥವಾ ಮೇಜಿನ ಮೇಲೋ ನಿಮ್ಮ ಮೊಬೈಲ್ ಇಡಿ" ಎಂದರು. ಅಂದು ಸಂಜೆ ಪ್ರವಚನದ ಮಧ್ಯದಲ್ಲಿ ಸ್ವಾಮೀಜಿಗೆ ಬೆಳಗ್ಗೆ ಭಕ್ತರೊಬ್ಬರು ವೀಡಿಯೋ ಬಗ್ಗೆ ಹೇಳಿದ್ದ ಮಾತು ನೆನಪಾಗಿ, ಮೊಬೈಲ್ ಸ್ವಲ್ಪ ಜರುಗಿಸಲು ಹೋದರು, ಮೊಬೈಲ್ ಕೆಳಗೆ ಬತ್ತು. ಆದರೆ ನೆಲದ ಮೇಲೆ ಮೆತ್ತನೆಯ ಕಾರ್ಪೆಟ್ ಇದ್ದದ್ದರಿಂದಿ ಫೋನಿಗೆ ಏನೂ ಆಗಲಿಲ್ಲ. ಈ ಮಧ್ಯೆ ಫೋನ್ ಬಿದ್ದ ರಭಸದಲ್ಲಿ ಕಾನ್ಫರೆನ್ಸ್ ಕಾಲ್ ನಲ್ಲಿ ಯಾವುದೋ ಬಟನ್ ತಾನಾಗಿಯೇ ಒತ್ತಿಕೊಂಡು ಎಲ್ಲರ ಮೈಕ್ ಅನ್‌ಮ್ಯೂಟ್ ಆಗಿತ್ತು.
ಸ್ವಾಮೀಜಿ ಗಾಭರಿಯಲ್ಲಿ ಫೋನ್ ಏನೂ ಆಗಿಲ್ಲ ತಾನೆ ಎಂದು ನೋಡುತ್ತಿದ್ದ ಹಾಗೆ, ಕೆಲವು ಭಕ್ತಾದಿಗಳ ಮಾತುಗಳು ಕೇಳಿಸಲು ಪ್ರಾರಂಭವಾಯಿತು: ಮಾತುಗಳು ಹೀಗಿದ್ದವು:
೧. ಇನ್ನು ಎಷ್ಟೊತ್ತಂತೆ ಆ ಸ್ವಾಮೀಜಿ ಪ್ರವಚನ
೨. ಅದೇನೋ, ವದರಿದ್ದೇ ವದರ್ತಿರ್ತಾರೆ, ಹೊಸ ವಿಷಯ ಏನೂ ಹೇಳೋದಿಲ್ಲ.
೩. ಸುಮ್ಮನೆ ದೇಶಕ್ಕೆ ಒಳ್ಳೇದಾಗ್ಲಿ ಅಂತ ಜಪ ಮಾಡೋದ ಬಿಟ್ಟು ಇವರಿಗೆ ಯಾಕೆ ಬೇಕಿತ್ತು ಈ ಉಸಾಬರಿ ಎಲ್ಲಾ
೪. ಲೇ ಪಾನಿಪುರಿ ಮಾಡ್ತೀನಿ ಅಂದೋಳು, ಇದೇನೋ ಕೆಲಸ್ಸಕ್ ಬಾರದೇ ಇರೋ ಪ್ರವಚನ ಕೇಳ್ತಾ ಇದೆಯಲ್ಲಾ
5. ಆಶ್ರಮಕ್ಕೆ ಟ್ರಸ್ಟೀ ಆಗಿರೋದ್ರಿಂದ ಸ್ವಾಮೀಜಿ ಮಾತು ತೆಗೆದುಹಾಕೋ ಹಾಗಿಲ್ಲ, ಏನೇ ಆದ್ರೂ ಅನುಭವಿಸಬೇಕೂ ಈ ಕೊರೆತಾನಾ
6. ದಿನಾ ಸಂಜೆ ಪ್ರವಚನ ಅಲ್ದೇ, ಅದೇನೋ ಮುಂದಿನ ವಾರದಿಂದ ಬೆಳಗ್ಗೆ ಭಜನೆ ಬೇರೆ ಶುರು ಮಾಡ್ತಾರಂತೆ, ನಾನು ತಪ್ಪಿಸಿಕೊಳ್ಳೋಕೆ ಏನು ಕಾರಣ ಕೊಡ್ಲೀ ಅಂತ ಯೋಚಿಸ್ತಿದೀನಿ ರೀ ......................................
ಸ್ವಾಮೀಜಿ, ಮತ್ತೆ ಎಲ್ಲರನ್ನೂ ಮ್ಯೂಟ್ ಮಾಡಿ ತಾವು ಏನೂ ಕೆಳಿಸಿಕೊಂಡಿಲ್ಲ ಎನ್ನುವಂತೆ ನಟನೆ ಮಾಡಿ, "ನನ್ನ ಮೊಬೈಲ್ ಕೆಳಗೆ ಬಿದ್ದು, ಯಾಕೋ ಆಡಿಯೋ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸಧ್ಯಕ್ಕೆ ಪ್ರವಚನ ನಿಲ್ಲಿಸಿರೋಣ, ಫೋನ್ ಸರಿಯಾದ ಮೇಲೆ ನಿಮಗೆ ತಿಳಿಸುತ್ತೇನೆ" ಎಂದು ಎಲ್ಲರಿಗೂ ವಾಟ್ಸಾಪ್ ಸಂದೇಶ ಕಳಿಸಿದರು.