ವೈಶಾಲಿ ಬ್ಯಾಂಕಿಗೆ ಸೇರಿಕೊಂಡು ಒಂದು ವರ್ಷವಾಗಿತ್ತು. ಬ್ಯಾಂಕಿನ ದೊಡ್ಡಬಳ್ಳಾಪುರದ ಶಾಖೆಯಲ್ಲಿ ಅವಳ ಕೆಲಸ. ದಿನ ದೊಡ್ಡಬಳ್ಳಾಪುರಕ್ಕೆ ಹೋಗಿ ವಾಪಸ್ ಬನಶಂಕರಿಯಲ್ಲಿರುವ ಮನೆಗೆ ಬರುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ಮಡಿವಂತರ ಮನೆಯಲ್ಲಿ ಜನಿಸಿದ್ದ ವೈಶಾಲಿಗೆ ಬ್ಯಾಂಕಿನ ಕೆಲಸ ಒಂದು ಸ್ವಾತಂತ್ರ್ಯ ಜೀವನವನ್ನು ತೋರಿಸಿಕೊಟ್ಟಿತ್ತು. ಇವಳ ತಂದೆ ಭೀಮರಾವ್ ಸರ್ಕಾರಿ ಶಾಲೆಯ ಅಧ್ಯಾಪಕರು. ಇವರಿಗೆ ನಾಲ್ಕು ಜನ ಹೆಣ್ಣುಮಕ್ಕಳು, ಅದರಲ್ಲಿ ವೈಶಾಲಿ ಮೂರನೆಯವಳು.
ಬಹಳ ಬಡತನದಲ್ಲಿ ಇದ್ದರೂ, ಭೀಮರಾವ್ ಮಕ್ಕಳಿಗೆ ಮಾತ್ರ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು. ಮೊದಲ ಮೂರು ಮಕ್ಕಳೂ ಒಳ್ಳೆಯ ಹುದ್ದೆಗಳಲ್ಲಿ ಇದ್ದು ನಾಲ್ಕನೆಯವಳು ಈಗ ಇಂಜಿನಿಯರಿಂಗ್ ಓದುತ್ತಿದ್ದಳು. ದೊಡ್ಡವರಿಬ್ಬರಿಗೆ ಮದುವೆಯಾಗಿತ್ತು.
ಒಂದು ಶನಿವಾರ ಬೆಳಿಗ್ಗೆ ವೈಶಾಲಿ ತಂದೆಯೊಂದಿಗೆ ಮಾತನಾಡುತ್ತಾ, “ಅಪ್ಪ ನಾನು ಮದುವೆ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿರುವೆ” ಎಂದಾಗ, ಈಚೀಚೆಗೆ ಇವಳ ವರ್ತನೆಯನ್ನು ಅನುಮಾನಿಸುತ್ತಿದ್ದ ತಾಯಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು.
ಆದರೆ ತಂದೆ ಭೀಮರಾವ್, ಸ್ವಲ್ಪವೂ ವಿಚಿಲಿತಗೊಳ್ಳದೆ “ಸರಿ ಪುಟ್ಟಿ ನಾಳೆ ಹೋಗಿ ಮಠದಲ್ಲಿ ಹೆಸರು ಬರಿಸಿ ಬರುತ್ತೇನೆ, ನೋಡೋಣ ಒಳ್ಳೆಯ ಗಂಡು ಸಿಗಬಹುದು” ಎಂದರು. ತಕ್ಷಣ ವೈಶಾಲಿ “ನಿಮಗೆ ಆ ಚಿಂತೆ ಬೇಡ ಅಪ್ಪ, ನಮ್ಮ ಆಫೀಸಿನಲ್ಲೇ ಇರುವ ಸತೀಶನನ್ನು ನಾನು ಪ್ರೀತಿಸುತ್ತಿದ್ದೇನೆ, ನಾನು ಅವನನ್ನೇ ಮದುವೆ ಮಾಡಿಕೊಳ್ಳುತ್ತೇನೆ” ಎಂದಳು.
“ಭೇಷ್ ಮಗಳೇ ನಿನ್ನೆಯ ತನಕ ನನ್ನ ಬುಜದ ಮೇಲೆ ಕುಳಿತುಕೊಂಡು ಆಡುತ್ತಿದ್ದ ಮಗು ಆಗಲೇ ತನ್ನ ಗಂಡನನ್ನು ಆರಿಸಿಕೊಳ್ಳುವಷ್ಟು ದೊಡ್ಡವಳಾಗಿದ್ದಾಳೆ. ಸರಿ ಬಿಡು ನನಗೆ ಹುಡುಗನನ್ನು ಹುಡುಕುವ ಒಂದು ಜವಾಬ್ದಾರಿ ಕಳೆಯಿತು” ಎಂದು ಭೀಮರಾವ್ ಹೇಳಿದರು.
“ಹುಡುಗನ ತಂದೆತಾಯಿಯನ್ನು ಮನೆಗೆ ಬರಲು ಹೇಳು ಮಾತುಕತೆಯಾಡಿ ಮುಗಿಸಿಬಿಡೋಣ” ಎಂದರು. ಪಕ್ಕದಲ್ಲೇ ಕುಳಿತಿದ್ದ ತಾಯಿಗೆ ಮಗಳ ಮೇಲೆ ಏಕೋ ಅನುಮಾನ. ಅವಳ ಮುಂದಿನ ವಾಕ್ಯ ಏನಿರಬಹುದು ಎಂಬ ಕುತೂಹಲ.
“ನಾನು ಸ್ವತಂತ್ರಳಾಗಿ ದುಡಿಯುತ್ತಿದ್ದೇನೆ, ನನ್ನ ಆಯ್ಕೆಯ ಹುಡುಗನನ್ನು ನೋಡಿಕೊಂಡು ಮದುವೆ ಮಾಡಿಕೊಳ್ಳುವುದು ತಪ್ಪೇನಿಲ್ಲ ಅಲ್ವಾ ಅಪ್ಪ” ಎಂದಳು ವೈಶಾಲಿ. “ನಿನಗೆ ತಪ್ಪು ಅನಿಸಿದರೆ ತಪ್ಪು ಅಷ್ಟೇ. ನಿನ್ನ ಮದುವೆಗಾಗಿ ಎಂದು ನಾನು ಸ್ವಲ್ಪ ಹಣ ಕೂಡಿಸಿಟ್ಟಿದ್ದೇನೆ. ಆ ಹಣವನ್ನು ಖರ್ಚು ಮಾಡಿ ಜೋರಾಗಿ ಮದುವೆ ಮಾಡಿಬಿಡೋಣ ಬಿಡು” ಎಂದರು ಭೀಮರಾವ್.
ತಕ್ಷಣ ವೈಶಾಲಿ “ಅಪ್ಪ ಇದರಲ್ಲೊಂದು ಸಮಸ್ಯೆ ಇದೆ. ಸತೀಶ ನಮ್ಮ ಜಾತಿಯವನಲ್ಲ” ಎಂದಳು. ಅವಳ ಅಮ್ಮನಿಗೆ ತಲೆಸುತ್ತು ಬಂದಂತಾಗಿ ಅಲ್ಲೇ ಕುಸಿದು ಕುಳಿತಳು.
ಆದರೆ ತಂದೆ ಭೀಮರಾವ್ ಹೆಚ್ಚು ಪ್ರತಿಕ್ರಿಯೆ ವ್ಯಕ್ತಪಡಿಸದೆ “ಯೋಚಿಸಬೇಡ ಪುಟ್ಟಿ, ಮದುವೆ ಮಾಡಿಕೊಳ್ಳುವ ಹುಡುಗ ನಿನ್ನ ಆಯ್ಕೆ, ಹಾಗೆ ಮದುವೆ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಬಂಧು ಬಳಗವನ್ನೆಲ್ಲಾ ಕರೆದು ಅದ್ದೂರಿಯಾಗಿ ಮದುವೆ ಮಾಡೋಣ ಬಿಡು” ಎಂದರು.
ಈ ರೀತಿ ಉತ್ತರವನ್ನು ನಿರೀಕ್ಷೆ ಮಾಡಿರದಿದ್ದ ವೈಶಾಲಿ, “ಅಪ್ಪ ಮದುವೆ ಮನೆಯಲ್ಲಿ ಎಲ್ಲರಿಗೂ ನಾನು ಬೇರೆ ಜಾತಿಯವನನ್ನು ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಗೊತ್ತಾಗುತ್ತದೆ, ನನಗೆ ಹಾಗೂ ನನ್ನ ನಿರ್ಣಯದಿಂದ ನಿಮಗೂ ದುಃಖವಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ನಾನು ಸಾಧಾರಣ ರೀತಿಯಲ್ಲಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳುತ್ತೇನೆ” ಎಂದಳು.
ಭೀಮರಾವ್ ನಗುತ್ತಾ “ಏಕೆ ಯೋಚಿಸುತ್ತೀಯ ಪುಟ್ಟಿ, ಸ್ವತಂತ್ರವಾಗಿ ದುಡಿಯುತ್ತಿರುವ ನಿನಗೆ ಪ್ರೇಮ ವಿವಾಹ ತಪ್ಪಲ್ಲ ಎಂಬುದು ಗೊತ್ತಿದೆ. ಈಗ ತಾನೆ ನೀನೇ ಹೇಳಿದೆಯಲ್ಲ. ನನ್ನ ಜವಾಬ್ದಾರಿಯನ್ನು ನನಗೆ ಮಾಡಲು ಬಿಡು” ಎಂದು ಹೇಳಿದರು.
“ಈರುಳ್ಳಿ ಬೆಳ್ಳುಳ್ಳಿಯ ವಾಸನೆಯೇ ಆಗದ ನಿನಗೆ ಆ ಹುಡುಗನ ಮನೆಯಲ್ಲಿ ಮಸಾಲೆ ಪದಾರ್ಥಗಳೊಂದಿಗೆ ಮಾಡುವ ಅಡುಗೆಯ ವಾಸನೆಯನ್ನು ತಡೆದುಕೊಳ್ಳಲು ಕಷ್ಟವಾಗುವುದಿಲ್ಲವೇ ವೈಶಾಲಿ” ಎಂದು ಅಪ್ಪ ಕೇಳಿದರು. “ಇಲ್ಲ ಅಪ್ಪ, ಮದುವೆಯ ನಂತರ ನಾವಿಬ್ಬರೇ ಬೇರೆ ಮನೆಯಲ್ಲಿ ಇರಬೇಕೆಂದು ಸತೀಶನಿಗೆ ಹೇಳುತ್ತೇನೆ” ಎಂದು ವೈಶಾಲಿ ಉತ್ತರಿಸಿದಳು.
“ಸರಿ, ಹಾಗಾದರೆ ನಾಳೆ ಭಾನುವಾರ, ಒಳ್ಳೆಯ ದಿನ. ಸತೀಶ ಮತ್ತು ಅವರ ತಂದೆತಾಯಿಯನ್ನು ಮನೆಗೆ ಬರಲು ಹೇಳು” ಎಂದು ಅಪ್ಪ ಹೇಳಿದರು. ವೈಶಾಲಿ, “ಸದ್ಯಕ್ಕೆ ಸತೀಶ್ ತನ್ನ ತಂದೆ ತಾಯಿಗೆ ನನ್ನ ವಿಷಯ ತಿಳಿಸಿಲ್ಲ, ಆದ್ದರಿಂದ ನಾಳೆ ಸತೀಶ್ ಒಬ್ಬರನ್ನೇ ಬರಲು ಹೇಳುತ್ತೇನೆ” ಎಂದಳು. ಭೀಮರಾವ್ “ಸರಿ ಪುಟ್ಟಿ, ಹಾಗೆ ಆಗಲಿʼ ಎಂದು ಹೇಳಿದರು
ಮಾರನೆಯ ದಿನ ಸತೀಶ ಮನೆಗೆ ಬಂದ. ಒಳ್ಳೆಯ ಬ್ಯಾಂಕ್ ಮ್ಯಾನೇಜರ್ ಹಾಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದ ರೂಪವಂತ ಸತೀಶ್. ಭೀಮರಾವ್ ಸತೀಶನನ್ನು ಅವನು ಬ್ಯಾಂಕ್‌ಗೆ ಸೇರಿದ್ದು, ಅವರ ಮನೆಯಲ್ಲಿ ಯಾರ್ಯಾರು ಇದ್ದಾರೆ, ಅವನ ಆಸಕ್ತಿಗಳೇನು ಎಲ್ಲವನ್ನೂ ಸಮಾಧಾನವಾಗಿ ವಿಚಾರಿಸಿದರು. ಹೀಗೆ ವಿಚಾರಿಸುವಾಗ ಅವರಿಗೆ ತಿಳಿದದ್ದು ಸತೀಶ್ ಅವನ ತಂದೆ ತಾಯಿಗೆ ಒಬ್ಬನೇ ಮಗ ಎಂದು. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಸಾಕಷ್ಟು ಹಣ ಗಳಿಸಿದ್ದರು. ತಂದೆಯ ಹಣ ತಂದೆಗೆ, ತಾನು ದುಡಿಯಬೇಕು ಎಂದು ಸತೀಶ್ ಬ್ಯಾಂಕಿಗೆ ಕೆಲಸಕ್ಕೆ ಸೇರಿದ್ದ. ಬುದ್ಧಿವಂತನಾಗಿದ್ದ ಸತೀಶ್ ಬ್ಯಾಂಕಿಗೆ ಸೇರಿದ ಎರಡು ವರ್ಷದಲ್ಲಿ ಆಫೀಸರ್ ಆಗಿದ್ದ.
ಭಾವಿ ಮಾವ ಏನು ಪ್ರಶ್ನೆ ಕೇಳುತ್ತಾರೋ, ವೈಶಾಲಿ ಮನೆಯಲ್ಲಿ ನನ್ನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಬಹಳಷ್ಟು ಯೋಚನೆಗಳಿಂದ ಬಂದಿದ್ದ ಸತೀಶನಿಗೆ ಭಾವಿ ಮಾವನ ಸಮಾಧಾನಕರವಾದ ಮಾತುಗಳು ಸಂತೋಷ ತಂದಿತ್ತು.
“ಸತೀಶ್, ನಿಮ್ಮ ತಂದೆ-ತಾಯಿಯನ್ನು ಕರೆದುಕೊಂಡು ಬನ್ನಿ, ಅವರನ್ನೂ ಒಮ್ಮೆ ನೋಡಿದ ಹಾಗೆ ಆಗುತ್ತದೆ. ಹಾಗೆಯೇ ಮದುವೆಯ ನಂತರ ನೀವಿಬ್ಬರೂ ಎಲ್ಲಿ ಮನೆ ಮಾಡಲು ಇಚ್ಚಿಸುತ್ತೀರಿ” ಎಂದು ಕೇಳಿದರು ಭೀಮರಾವ್.
“ನಾನು ನಮ್ಮ ತಂದೆ ತಾಯಿಗೆ ಒಬ್ಬನೇ ಮಗ. ಅವರನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ನಮ್ಮ ಮನೆಗೆ ಬಂಧುಬಳಗ ಬರುವುದು ಹೆಚ್ಚು . ಹಾಗಾಗಿ ವಯಸ್ಸಾದ ಅಮ್ಮನಿಗೆ ವೈಶಾಲಿಯ ಸಹಾಯ ಸಿಕ್ಕರೆ ಇನ್ನೂ ಅನುಕೂಲವಾಗುತ್ತದೆ. ಹಾಗಾಗಿ ಮದುವೆಯ ನಂತರವೂ ನಾನು ಮತ್ತು ವೈಶಾಲಿ ಅವರೊಟ್ಟಿಗೇ ಇರುತ್ತೇವೆ. ಇದಕ್ಕೆ ವೈಶಾಲಿಯ ಒಪ್ಪಿಗೆಯೂ ಸಿಗುತ್ತದೆ ಎಂಬುದು ನನ್ನ ನಂಬಿಕೆ” ಎಂದನು ಸತೀಶ. ಭಾವಿ ಅಳಿಯನಿಗೆ ಅವನ ತಂದೆ ತಾಯಿಯ ಮೇಲಿದ್ದ ಪ್ರೀತಿ ಭೀಮರಾವ್‌ಗೆ ಬಹಳ ಸಂತೋಷ ತಂದಿತ್ತು.
ಸತೀಶನ ಮಾತುಗಳನ್ನು ಕೇಳಿದ ವೈಶಾಲಿ ಏನೋ ಹೇಳಲು ಹೋದಾಗ, ಭೀಮರಾವ್ ಅವಳನ್ನು ತಡೆದು “ನೋಡಿ ಸತೀಶ್, ನನಗೆ ಕೇವಲ ನನ್ನ ಮಗಳ ಖುಷಿ ಅಷ್ಟೇ ಅಲ್ಲ, ನೀವಿಬ್ಬರೂ ಹೊಂದಿಕೊಂಡು ಇರುವುದಲ್ಲದೇ ನಮ್ಮೆರಡೂ ಸಂಸಾರಗಳೂ ಒಂದಾಗುವುದು ಮದುವೆಯ ಉದ್ದೇಶ ಎಂದು ತಿಳಿದುಕೊಂಡಿದ್ದೇನೆ.
ಆದ್ದರಿಂದ ನೀವಿಬ್ಬರೂ ಮದುವೆಯ ನಂತರ ಹೇಗಿರಬೇಕು, ಎಲ್ಲಿರಬೇಕು ಎಂಬುದನ್ನು ಈಗಲೇ ನಿಶ್ಚಯಿಸಿ. ಊಹೆಗಳು ಮತ್ತು ಅನಿಸಿಕೆಗಳು ನಿಜವಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ನಿಮ್ಮ ಮನಸ್ಸಿನಲ್ಲಿರುವುದನ್ನು ಇಲ್ಲಿಯವರೆವಿಗೂ ನೀವು ವೈಶಾಲಿಯೊಂದಿಗೆ ಹಂಚಿಕೊಂಡಿಲ್ಲ, ಹಾಗೆಯೇ ವೈಶಾಲಿಯೂ ತನ್ನ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿಲ್ಲ. ಪುಟ್ಟಿ ವೈಶಾಲಿ, ಇಲ್ಲೇ ಹತ್ತಿರ ಇರುವ ಕಾಫಿಡೇಗೆ ಹೋಗಿ ಕಾಫಿ ಕುಡಿಯುತ್ತಾ ಇವೆಲ್ಲಾ ವಿಷಯಗಳನ್ನು ನೀವಿಬ್ಬರೂ ಮಾತನಾಡಿ ಒಂದು ನಿರ್ಧಾರಕ್ಕೆ ಬಂದ ಮೇಲೆ ನನಗೆ ಬಂದು ತಿಳಿಸಿ, ನಾನು ಮನೆಯಲ್ಲೇ ಕಾಯುತ್ತಿರುತ್ತೇನೆ” ಎಂದರು ಭೀಮರಾವ್.
“ನೀವಿಬ್ಬರೂ ಬಂದಮೇಲೆ , ಅಂದುಕೊಂಡಿದ್ದೇನೆ, ಊಹಿಸಿಕೊಂಡಿದ್ದೇನೆ, ಅನಿಸಿಕೆ ಪದಗಳು ಬರಬಾರದು. ನಿಮ್ಮಿಬ್ಬರ ಬಾಯಲ್ಲಿ ನಿಶ್ಚಯಿಸಿದ್ದೇವೆ ಎಂಬುವ ಪದ ಬರಬೇಕು ಅಷ್ಟೇ. ತಂದೆಯಾಗಿ ನಾನು ನಿನ್ನಿಂದ ಅಪೇಕ್ಷೆ ಪಡುವುದು ಇದೊಂದೆ ಪುಟ್ಟಿ” ಎಂದು ಹೇಳಿದರು ಭೀಮರಾವ್.
ಸುಮಾರು ಎರಡು ಗಂಟೆಗಳ ನಂತರ ವೈಶಾಲಿ ಒಬ್ಬಳೇ ಮನೆಗೆ ವಾಪಸ್ಸಾದಳು. ಹೆಚ್ಚು ವಿಷಯಗಳನ್ನು ಏನೂ ಕೇಳದೆ ತಂದೆ ಭೀಮರಾವ್ “ಏನು ಪುಟ್ಟಿ ಒಬ್ಬಳೇ ಬಂದೆ” ಎಂದರು.
ತಕ್ಷಣ ವೈಶಾಲಿ “ಅಪ್ಪ ನಾನು ದೊಡ್ಡಬಳ್ಳಾಪುರ ಶಾಖೆಯಿಂದ ವರ್ಗಾವಣೆಗೆ ಕೋರಿ ಅರ್ಜಿ ಹಾಕುತ್ತಿದ್ದೇನೆ. ಸದ್ಯಕ್ಕೆ ನನ್ನ ಮದುವೆಯ ವಿಷಯ ಮರೆತುಬಿಡಿ” ಎಂದಳು.
ಅಲ್ಲಿಯವರೆಗೂ ಗಂಡನ ಮೇಲೆ ಕೋಪದಿಂದ ಕೆಂಗಣ್ಣಿನಲ್ಲಿ ನೋಡುತ್ತಿದ್ದ ವೈಶಾಲಿಯ ಅಮ್ಮ, ಅಡುಗೆ ಮನೆಗೆ ಹೋಗಿ ಭೀಮರಾವ್‌ಗೆ ಇಷ್ಟವಾದ ಗಸಗಸೆ ಪಾಯಸ ಮಾಡಿ ಗಂಡನಿಗೆ ತಂದುಕೊಟ್ಟಳು.