ಆಗ ನನಗಿನ್ನೂ 12 ವರ್ಷ. ಬೇಸಿಗೆ ರಜೆಗೆ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ಚಿಕ್ಕಮ್ಮನ ಮನೆಗೆ ವರ್ತನೆಗೆ ಹಾಲು ಹಾಕುತ್ತಿದ್ದ ಬೈರಪ್ಪ ತನ್ನ ಬುಲೆಟ್ ಗಾಡಿಯ ಹಿಂದಿನ ಸೀಟಿನ ಎರಡು ಪಕ್ಕಕ್ಕೂ ಜೋಡಿಸಿದ್ದ ಕೊಂಡಿಗೆ ದೊಡ್ಡ ಹಾಲಿನ ಕ್ಯಾನ್ ತೂಗಿಹಾಕಿಕೊಂಡುಬರುತ್ತಿದ್ದ. ಆಗಲೇ ನನಗೆ ಜೀವನದ ಎರಡು ಮಹದಾಸೆಗಳು ಹುಟ್ಟಿಕೊಂಡಿದ್ದು. ನಾನೂ ಹಾಲು ವಿತರಕನಾಗಬೇಕು ಮತ್ತು ಬುಲೆಟ್ ಓಡಿಸಬೇಕು ಎಂದು. ಕ್ರಮೇಣ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾ ಕೇವಲ ಬುಲೆಟ್ ಓಡಿಸುವ ಆಸೆ ಮಾತ್ರ ಉಳಿಯಿತು.
ನನಗೆ ನಲವತ್ತು ವರ್ಷ ವಯಸ್ಸಾದಾಗ ಚಿಕ್ಕ ವಯಸ್ಸಿನ ಎಲ್ಲಾ ಆಸೆಗಳನ್ನೂ ಪೂರೈಸಿದ್ದೆ ಆದರೆ ಈ ಬುಲೆಟ್ ಓಡಿಸುವ ಆಸೆಯೊಂದು ಬಿಟ್ಟು. ನನ್ನಲ್ಲಿದ್ದ ಟಿವಿಎಸ್ ಬೈಕ್ ಮಾರಿ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಬುಲೆಟ್ ಕೊಂಡುಕೊಂಡೇಬಿಟ್ಟೆ. ಅಲ್ಲಿಗೆ ಚಿಕ್ಕ ವಯಸ್ಸಿನ ಕಡೆಯ ಆಸೆಯೂ ಪೂರೈಸಿದಂತಾಯಿತು.
ಇನ್ನೂರು ಕೆಜಿ ತೂಕದ ಗಾಡಿ, ಆದಕ್ಕೆ ಹೊಂದುವಂತೆ ಇಪ್ಪತ್ತು ವರ್ಷ ಜಿಮ್ ಮಾಡಿ ಗಟ್ಟಿಮುಟ್ಟಾಗಿದ್ದ ನನ್ನ ದೇಹ. ಅರ್ಧದಲ್ಲಿ ಅರ್ಧ ತೋಳಿನ ಟೈಟಾದ ಟಿಶರ್ಟ್ ಧರಿಸಿ ಬುಲೆಟ್ ಓಡಿಸಿಕೊಂಡು ಹೋಗುತ್ತಿದ್ದರೆ ಎಲ್ಲರ ಕಣ್ಣು ನನ್ನ ಗಾಡಿ ಮತ್ತು ಬಾಡಿ ಮೇಲೆ. ಗುಡು ಗುಡು ಗುಡು ಗುಡು ಎಂದು ರಸ್ತೆ ಮೇಲೆ ನಿಧಾನವಾಗಿ ಹೋದರಂತೂ ಮರ್ಸಿಡೆಸ್ ಹಾಗೂ ಬಿ ಎಮ್ ಡಬಲ್ಯೂ ಕಾರಿನಲ್ಲಿ ಕುಳಿತಿದ್ದ ಹೆಣ್ಣುಮಕ್ಕಳು ಗಾಡಿಯ ಕಡೆ ಒಮ್ಮೆ ಕಣ್ಣು ಹಾಯಿಸುತ್ತಿದ್ದದ್ದರಲ್ಲಿ ಆಶ್ಚರ್ಯವಿಲ್ಲ. ಕಾರಿನ ಮಾಲೀಕ ಅಂದರೆ ಆ ಯುವತಿಯ ಗಂಡ ಅಥವಾ ಬಾಯ್‌ಫ್ರೆಂಡಿನ ಮುಖದಲ್ಲಿ ಅಸೂಯೆಯ ಛಾಯೆ.
ಈ ಬುಲೆಟ್ ಗಾಡಿಯ ವಿಶೇಷವೆಂದರೆ ಕುಡಿದು ಗಾಡಿ ಓಡಿಸುವವರನ್ನು ತಪಾಸಣೆ ಮಾಡುವ ಪೋಲೀಸರು ಕೂಡ ಎಂದಿಗೂ ಬುಲೆಟ್ ಗಾಡಿಗಳನ್ನು ನಿಲ್ಲಿಸುವುದಿಲ್ಲ. ಅವರ ಪ್ರಕಾರ ಕುಡಿದಾಗ ಬುಲೆಟ್ ಓಡಿಸಲು ಸಾಧ್ಯವೇ ಇಲ್ಲ. ಫಿಲ್ಟರ್ ನೀರಿಗೇ ತೂರಾಡುವ ನಾನು ಇದರಿಂದೇನು ಹೆಚ್ಚು ಲಾಭ ಪಡೆಯಲಾಗಲಿಲ್ಲ.
ಕಳೆದ ಹತ್ತು ವರ್ಷದಲ್ಲಿ ಒಂದೇ ಒಂದು ದಿನ ನಾನು ಈ ಬುಲೆಟ್ ಓಡಿಸಿಕೊಂಡು ರಾಮನಗರಕ್ಕೆ ಹೋಗಿಬಂದಿದ್ದೆ. ಒಟ್ಟು ಹೋಗಿಬರಲು ಎಂಭತ್ತು ಕಿಲೋಮೀಟರ್. ಮತ್ತೆಂದೂ ಬೆಂಗಳೂರಿನಿಂದ ಆಚೆಗೆ ಈ ಬುಲೆಟ್ ಹೋಗೇ ಇಲ್ಲ. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಬೆಳಗಿನ ಉಪಹಾರಕ್ಕಾಗಿ ತಮ್ಮ ಬೈಕುಗಳಲ್ಲಿ ಊರಿಂದಾಚೆಗೆ ಹೋಗುವ ವರ್ಷಕ್ಕೆ ಒಂದೆರೆಡು ಬಾರಿ ಸುಮಾರು ನಾನೂರರಿಂದ ಐನೂರು ಕಿಲೋಮೀಟರ್ ಪಬೈಕ್ ಪ್ರವಾಸ ಕೈಗೊಳ್ಳುವ ನನ್ನ ಗೆಳೆಯರಂತೂ, ಕುದುರೆ ಖರೀದಿಸಿ ಅದನ್ನು ನೀನು ಕುರಿಮರಿ ಮಾಡಿಬಿಟ್ಟಿದ್ದೀಯಾ ಎನ್ನುತ್ತಿದ್ದರು. ನಾನಂತೂ ನನ್ನ ಮನೆಯಿಂದ ಯೋಗ ಶಾಲೆಗೆ ಆಥವಾ ರಾಮಕೃಷ್ಣ ಆಶ್ರಮ ಮತ್ತೆ ಕೆಲವೊಮ್ಮೆ ಎನ್ ಆರ್ ಕಾಲೋನಿಯಲ್ಲಿ ನನ್ನ ಹಳಗನ್ನಡ ತರಗತಿಗೆ ಹೋಗಲು ಅಷ್ಟೇ ಬುಲೆಟ್ ಓಡಿಸುತ್ತಿದ್ದದ್ದು ಮತ್ತು ನನಗೆ ಅದರಲ್ಲೇ ಪರಮಾನಂದ.
ಐದು ವರ್ಷಕ್ಕೆ ಮುಂಚೆ ಜಿಮ್ ಬಿಟ್ಟು ಯೋಗ ಸೇರಿದೆ. ದೇಹದ ಬಿಗಿತ ಕಮ್ಮಿಯಾಯಿತು ಮನಸ್ಸಿನ ಮೇಲೆ ಹಿಡಿತ ಜಾಸ್ತಿಯಾಯಿತು . ಅದೇಕೋ ಇನ್ನೂರು ಕೆಜಿಯ ಬೈಕ್ ಭಾರವೇನೋ ಅನಿಸಿತೊಡಗಿತು. ನಾನು ಬುಲೆಟ್ ಓಡಿಸುವಾಗ ಊರಿನ ಹೆಣ್ಣುಮಕ್ಕಳೆಲ್ಲಾ ನನ್ನೆಡೆಗೇ ನೋಡಬೇಕೆಂಬ ಬಯಕೆಯೂ ಇಲ್ಲ. ಆ ರೀತಿಯ ಬಯಕೆ ಹಿಂದೆಯೂ ಇರಲಿಲ್ಲ , ಆದರೆ ಹಾಗಾದಾಗ ಮಾತ್ರ ಅದೇನೋ ಸಂತೋಷವಂತು ಖಂಡಿತ ಆಗುತ್ತಿತ್ತು. ನಾನು ಬೈಕ್ ಸ್ಟಾಂಡ್ ಹಾಕಿ ತೆಗೆಯುವಾಗ, ಪಾರ್ಕಿಂಗಿನಿಂದ ಬೈಕನ್ನು ಹಿಂದಕ್ಕೆ ಎಳೆಯುವಾಗ ನನ್ನ ಗೆಳೆಯರು "ಯಾಕೋ ಇಷ್ಟೋಂದು ಕಷ್ಟಪಡ್ತೀಯಾ, ಬೈಕ್ ಮಾರಿ ಒಂದು ಚಿಕ್ಕದಾದ ಬೇರೆ ಗಾಡಿ ತೆಗೆದುಕೊಳ್ಳಬಾರದೇ" ಎಂದು ಬುದ್ದಿವಾದ ಹೇಳಲು ಆರಂಭಿಸಿದ್ದರು.
ಗೆಳೆಯರ ಸಲಹೆಯಂತೆ ಬೈಕ್ ಮಾರಲು ಸುಮಾರು ಹತ್ತು ಸಲ ವಿವಿಪುರಂನಲ್ಲಿರುವ ಅಂಗಡಿಗಳಿಗೆ ಹೋಗಿದ್ದೇನೆ. ಅಂಗಡಿ ಮಾಲೀಕರೊಂದಿಗೆ ಮಾತನಾಡಿ "ನಾಳೆ ಬರುತ್ತೇನೆ" ಎಂದು ಹೇಳಿ ಬರುತ್ತಿದ್ದೆ. ನಾನು ಆ ಅಂಗಡಿಗಳಿಗೆ ಮರಳಿಹೋಗುವ ನಾಳೆಯೂ ಬರಲೇ ಇಲ್ಲ. ಯಾವುದರಲ್ಲೂ ಬಂಧನವಿರಬಾರದೆಂದೂ ಹತ್ತಾರು ಜನಕ್ಕೆ ನಾನು ಪ್ರವಚನ ಕೊಟ್ಟರೂ ನನ್ನ ಮತ್ತು ಬೈಕ್ ಬಂಧನ ದಿನದಿನಕ್ಕೆ ಬಲವಾಗುತ್ತಾಹೋಯಿತು. ಪ್ರತಿ ಸರ್ವೀಸ್‌ನಲ್ಲಿ ಕನಿಷ್ಟವೆಂದರೂ ಮೂರುಸಾವಿರ ರೂಪಾಯಿ ಖರ್ಚು ಆಗೇಆಗುತ್ತದೆ. ಅದಲ್ಲದೇ ಪೆಟ್ರೋಲ್ ಮಾತ್ರ ಸಂಕೋಚವಿಲ್ಲದ ಕುಡಿಯುತ್ತದೆ ಬುಲೆಟ್ ಗಾಡಿ. ಈಗ ನಾನು ಪಿಂಚಣಿದಾರ. ಬೈಕ್‌ಸಾಕುವುದು ಕಷ್ಟವಿಲ್ಲದಿದ್ದರೂ ಮೋಜಿನ ಈ ಖರ್ಚು ಅನವಶ್ಯಕವಲ್ಲವೇ ಎಂಬ ವಿವೇಕ ಚಿಂತನೆ ಮನದಲ್ಲಿ.
ಕಳೆದವಾರ ಮಂಡಿನೋವಿನಿಂದ ಬಳಲುತ್ತಿದ್ದ ಗೆಳೆಯರೊಬ್ಬರನ್ನು ಎಮ್ ಆರ್ ಐ ಸ್ಕ್ಯಾನಿಂಗಿಗೆ ಕರೆದುಕೊಂಡುಹೋಗಿದ್ದೆ. ಅವರಿಗೆ ವೈದ್ಯರು "ಮಂಡಿನೋವು ಪ್ರತಿಯೊಬ್ಬರಿಗೂ ಬರುವುದು ಸಹಜ, ಆದರೆ ನೀವು ಅಗತ್ಯಕ್ಕಿಂತ ಹೆಚ್ಚು ದೇಹದಂಡಿಸಿದ್ದೀರಿ ಹಾಗಾಗಿ ಮಂಡಿಯ ಕೆಳಗಿನ ಮೂಳೆ ಸ್ವಲ್ಪ ಜಾಸ್ತಿಯೇ ಸವಿದಿದೆ" ಎಂದರಂತೆ. ಇದನ್ನು ಕೇಳಿದಾಗ ನನಗೆ ನೆನಪಿಗೆ ಬಂದಿದ್ದು ನನ್ನ ಬುಲೆಟ್ ಗಾಡಿಯ ಇನ್ನೂರು ಕೆಜಿ ತೂಕ. ಅದೇಕೋ ಈ ಸಲ ಮಾರಲೇಬೇಕೆಂದು ನಿಶ್ಚಯಿಸಿದೆ.
ಈಗ ಒಂದೆರೆಡು ದಿನ ಮುಂಚೆ ಬೆಳ್ಳಂಬೆಳಿಗ್ಗೆಯೇ ಗೆಳೆಯನ ಫೋನ್. "ನನ್ನ ಚಿಕ್ಕಮ್ಮನ ಮಗನಿಗೆ ಬುಲೆಟ್ ಬೇಕಂತೆ ಕೊಡುತ್ತೀಯಾ" ಎಂದ. ಬೇರೇನೂ ಯೋಚಿಸದೇ "ಸರಿ" ಎಂದೆ. ಸಂಜೆಗೇ ಹೊಸ ಖರೀದಿದಾರ ಬಂದು ಬುಲೆಟ್ ಓಡಿಸಿ "ನನಗಿಷ್ಟವಾಗಿದೆ" ಎಂದ. ಇದು ಅವನ ಚಿಕ್ಕ ವಯಸ್ಸಿನ ಕಡೆಯಾಸೆ ಇರಬೇಕು. "ಇಂದು ಮಂಗಳವಾರವಾದ್ದರಿಂದ ನಾಳೆ ಬೆಳಿಗ್ಗೆ ಬೈಕ್ ತೆಗೆದುಕೊಳ್ಳುತ್ತೇನೆ" ಎಂದ ಹೊಸ ಮಾಲೀಕ. ಬುಲೆಟ್ಟನ್ನು ಮುನ್ನೂರು ರೂಪಾಯಿ ಕೊಟ್ಟು ಚೆನ್ನಾಗಿ ತೊಳಿಸಿ, ಇನ್ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ. ಮದುವೆಯ ಹಿಂದಿನ ದಿನ ಹೆಣ್ಣಿನ ತಂದೆಯ ಮನಸ್ಸಿನಲ್ಲಿ ಆಗುವ ಚಿಂತನೆಗಳು ಬ್ರಹ್ಮಚಾರಿಯಾದ ನನ್ನ ಅನುಭವಕ್ಕೂ ಬಂತು. ಬಂಧನ ವಿಮುಕ್ತನಾಗುವೆಡಗೆ ನಡೆಯುತ್ತಿರುವ ಸಂತೋಷ ಮತ್ತೊಂದುಕಡೆ.
ಅಂದು ಬುಧವಾರ. ಬೆಳಿಗ್ಗೆ ಹತ್ತು ಗಂಟೆಗೆ ಬುಲೆಟ್ ಹೊಸ ಮಾಲೀಕನ ಕೈಸೇರಿತು ಮತ್ತು ಅವನು ಕೊಟ್ಟ ಮೂವತ್ತೆಂಟು ಸಾವಿರ ರೂಪಾಯಿ ನನ್ನ ಬ್ಯಾಂಕ್ ಖಾತೆಗೆ ಸೇರಿತು. ನನ್ನ ಗೆಳೆಯನೊಂದಿಗೆ ಆ ತಕ್ಷಣವೇ ಕೆಲವು ಶೋರೂಂಗಳಿಗೆ ಹೋಗಿ ಹೊಸ ಗಾಡಿಯ ಬಗ್ಗೆ ವಿಚಾರಿಸಿದೆ. ಟಿವಿಎಸ್ ಎಲೆಕ್ಟ್ರಿಕ್ ಗಾಡಿ ಐಕ್ಯೂಬ್ ಇಷ್ಟವಾಯಿತು. ಒಂದು ಲಕ್ಷ ಮೂವತ್ತೆಂಟು ಸಾವಿರ ದುಡ್ಡು ಪಾವತಿ ಮಾಡಿದೆ. ಸಂಜೆಗೆ ಹೊಸ ಗಾಡಿ ಮನೆಗೆ ತಂದೆ. ನೂರಹದಿನೈದು ಕೆಜಿ ತೂಕದ ಸದ್ದೇ ಮಾಡದ ಈ ಗಾಡಿಗೆ ರೆಸ್ತೆಯಲ್ಲಿ ನಾಯಿ ಕೂಡಾ ಪಕ್ಕಕ್ಕೆ ಹೋಗುವುದಿಲ್ಲ. ಎತ್ತಿನ ಗಾಡಿಗೆ ಕಟ್ಟುವ ಗಂಟೆಯಂತೆ ಇದಕ್ಕೂ ಒಂದು ಗಂಟೆಯನ್ನು ಕಟ್ಟಲು ಯೋಚಿಸುತ್ತಿದ್ದೇನೆ.
ಐಕ್ಯೂಬ್ ಓಡಿಸುತ್ತಿದ್ದಾಗ ಪಕ್ಕದಲ್ಲಿ ಯಾವುದಾದರೂ ಬುಲೆಟ್ ಗಾಡಿ ಹೋದರೆ, ಮದುವೆಯಾಗಿ ಹೆಂಡತಿಯೊಂದಿಗೆ ನಡೆದುಹೋಗುತ್ತಿರುವ ಗೃಹಸ್ಥ ಪಕ್ಕದಲ್ಲಿ ಸುಂದರವಾದ ಹುಡುಗಿ ಹೋದರೆ ತನ್ನ ಹಳೆಯ ಗೆಳತಿಯನ್ನು ನೆನಪಿಸಿಕೊಳ್ಳುವಂತೆ ಬ್ರಹ್ಮಚಾರಿಯಾದ ನನಗೂ ಆಗುತ್ತಿದೆ ಎಂದು ಹೇಳುವಲ್ಲಿಗೆ ಈ ಬುಲೆಟ್ ಪುರಾಣ ಮುಗಿಸುತ್ತಿದ್ದೇನೆ.